ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Saturday, October 10, 2009

ಡೈರೆಕ್ಟ್ ಟು ಹೋಮ್(DTH) ಸೇವೆ ಬರುವ ಮುನ್ನ ಹಳ್ಳಿಗಳಲ್ಲಿ ಟೀವಿ ವೀಕ್ಷಣೆ ಹೇಗೆ ಸಾಧ್ಯವಿತ್ತು

ಡೈರೆಕ್ಟ್ ಟು ಹೋಮ್




 (ಉಪಗ್ರಹದಿಂದ ನೇರ ಮನೆಗೆ) ಸೇವೆಯನ್ನು ವಿಸ್ತರಿಸಿ ಹೇಳುವುದಾದರೆ ಉಪಗ್ರಹದಿಂದ ನೇರವಾಗಿ ನಿಮ್ಮ ಮನೆಗೆ ಡಿಶ್ ಮತ್ತು ರಿಸೀವರ್ ನ ಮೂಲಕ ನಿಮ್ಮ ಆಯ್ಕೆಯ ಎಲ್ಲಾ ಚಾನಲ್ಲುಗಳನ್ನು! (ಸೇವಾದಾರರು ನೀಡಿದ ಪ್ಯಾಕೇಜ್ ಆಯ್ಕೆ ಮಾಡಿಕೊಂಡು) ದುಡ್ಡು ಕಟ್ಟಿ ನೋಡಬಹುದು, ಡಿಟಿಹೆಚ್ ಬಗ್ಗೆ ಯಾರಿಗೆ ಗೊತ್ತಿಲ್ಲ ಮತ್ತೆ ಯಾಕೆ ಹೇಳ್ತಾ ಇರಬಹುದು ಯೋಚಿಸುತ್ತಿರುವಿರಾ?

     ಹೌದು ನಾನು ಹೇಳಲಿಕ್ಕೆ ಹೊರಟಿರೋದು ಉಪಗ್ರಹದಿಂದ ನೇರ ಮನೆಗೆ ಉಚಿತವಾಗಿ ಲಭ್ಯವಿದ್ದ ಸೇವೆಯ ಬಗ್ಗೆ! ಡಿಟಿಹೆಚ್ ಸೇವೆ ಭಾರತದಲ್ಲಿ ಆರಂಭವಾಗಿ ಅಬ್ಬಬ್ಬಾ ಎಂದರೂ ಎರಡರಿಂದ ಮೂರು ವರ್ಷ ಆಗಿರಬಹುದು,ಆದರೆ ನಮ್ಮ ದೇಶದ ಹಳ್ಳಿಗಳಲ್ಲಿ ಡಿಟಿಹೆಚ್ ಸೇವೆ ಆರಂಭವಾಗುವ ಮೊದಲು ಮತ್ತು ಕೇಬಲ್ ಸೇವೆ ಲಭ್ಯವಾಗದಂತಹ ಪ್ರದೇಶಗಳಲ್ಲಿ ಟಿವಿ ಚಾನಲ್ಲುಗಳನ್ನು ಹೇಗೆ ನೋಡುತ್ತಿದ್ದರು ಎಂದು ನಿಮ್ಮಲ್ಲಿ ಅನೇಕ ಜನರಿಗೆ ಕುತೂಹಲ ಇರಬಹುದು, ಹಳ್ಳಿಗಳಲ್ಲಿ ಅತಿ ಹೆಚ್ಚಿನ ಮನೆಗಳಲ್ಲಿ ಉಪಗ್ರಹದಿಂದ ನೇರ ಮನೆಗೆ ಸಂಪೂರ್ಣ ಉಚಿತ ಸೇವೆ ಬಳಸುತ್ತಾ ಹತ್ತು ವರ್ಷಗಳಿಗಿಂತಲೂ ಹೆಚ್ಚಿನ ವರ್ಷಗಳು ಕಳೆದಿವೆ, ಇದನ್ನು ಕೇಳಿ ನಿಮಗೆ ಆಶ್ಚರ್ಯ ಆಗಬಹುದು. ಆದರೆ ಇದು ನಿಜ. ನನಗೆ ಗೊತ್ತಿರುವ ಪುಟ್ಟ ಮಾಹಿತಿ ನಿಮ್ಮ ಮುಂದಿಡಲು ಪ್ರಯತ್ನಿಸುತ್ತೇನೆ. ಮೊದಲು ಹಳ್ಳಿಗಳಲ್ಲಿ ಮನೋರಂಜನೆಗಾಗಿ ಟಿವಿ ಮಾಧ್ಯಮದ ವೀಕ್ಷಣೆಗಾಗಿ ಅತಿ ಹೆಚ್ಚು ಖರ್ಚು ಮಾಡಬೇಕಾಗಿದ್ದು ಅನಿವಾರ್ಯವಾಗಿತ್ತು...


     ಹಳ್ಳಿಗಳಲ್ಲಿ ಮೊದಲು ಬಂದಿದ್ದು ದೂರದರ್ಶನ್ ( ಇದು ಡಿಡಿ) ಚಾನಲ್ಲುಗಳು, ಆರು ಅಡಿಯ ಡಿಶ್ ಹಾಗೂ ಎಸ್ ಬ್ಯಾಂಡಿನ  ಎಲ್ ಎನ್ ಬಿ (LNB)  ಮತ್ತು   ಅನಲಾಗ್ ರಿಸೀವರ್ ಮೂಲಕ ಡಿಡಿ ನ್ಯಾಶನಲ್ ಹಾಗೂ ಇನ್ನೊಂದು ಪ್ರಾದೇಶಿಕ ಚಾನಲ್ಲು ಒಟ್ಟು ಎರಡು ಟಿವಿ ಚಾನಲ್ ನೋಡಬಹುದಾದ ಉಚಿತ ಉಪಗ್ರಹ ಸೇವೆ ಲಭ್ಯವಿತ್ತು, ಅದಕ್ಕೆ ತಗಲುತ್ತಿದ್ದ ವೆಚ್ಚ ಸುಮಾರು ಆರರಿಂದ ಎಂಟು ಸಾವಿರ ರೂಪಾಯಿಗಳಿರಬೇಕು ಅಷ್ಟು ಸರಿಯಾಗಿ ನೆನಪಿಗೆ ಬರುತ್ತಿಲ್ಲ, ಅದು ಅಷ್ಟು ಜನಪ್ರಿಯವಾಗಲೂ ಇಲ್ಲ, ನಂತರ ಬಂದಿದ್ದು ಸಿ-ಬ್ಯಾಂಡ್ ಎಲ್ ಎನ್ ಬಿ ಮತ್ತು ಅನಲಾಗ್ ರಿಸೀವರ್, ಇದು ಅನೇಕ ವರ್ಷಗಳವರೆಗೆ ಚಾಲ್ತಿಯಲ್ಲಿ ಇತ್ತು, ಇದರಲ್ಲಿ ಡಿಶ್ ಹನ್ನೆರಡು ಅಡಿ ಅಥವಾ ಎಂಟು ಅಡಿಯದ್ದಾಗಿದ್ದು ಅದನ್ನು ಬೇರೆ ಬೇರೆ ಸ್ಯಾಟಲೈಟ್ ಗಳ ದಿಕ್ಕಿಗೆ ಹೊಂದಿಸಿ ಬೇರೆ ಬೇರೆ ಚಾನಲ್ಲುಗಳ ತರಂಗಾಂತರಗಳನ್ನು ಪಡೆಯಲು ಶಕ್ತವಾಗಿದ್ದವು ಆದರೆ ಈಗಿನ KU-BAND DTH ಸೇವೆ ಪಡೆಯಲು ಕೇವಲ ಎರಡು ಅಡಿಯ ಡಿಶ್ ಇದ್ದರೆ ಸಾಕು, ಆದರೆ ಸಿ ಬ್ಯಾಂಡಿನ ಸಿಗ್ನಲ್ ಪಡೆಯಲು ದೊಡ್ಡದಾದ ಡಿಶ್ ಅವಶ್ಯವಾಗಿ ಬೇಕಾಗಿತ್ತು,

ಅದರಲ್ಲಿ ಮೊದಲು ಬಂದ ಮಾದರಿಯಲ್ಲಿ ಡಿಶ್ ಅನ್ನು ಎಡಕ್ಕೆ ಮತ್ತು ಬಲಕ್ಕೆ ತಿರುಗಿಸಲು ಮತ್ತು ಮೇಲೆ ಕೆಳಗೆ ಅಡ್ಜಸ್ಟ್ ಮಾಡಲು ಬೇರೆ ಬೇರೆ ಎರಡು ಹ್ಯಾಂಡಲ್ ಗಳಿದ್ದವು ಇದು ಸ್ವಲ್ಪ ಕಷ್ಟಕರವಾಗಿತ್ತು,


 ನಂತರದ ದಿನಗಳಲ್ಲಿ ಆ ಮಾದರಿಯಲ್ಲಿ ಸುಧಾರಣೆಯಾಗಿ ಸಿಂಗಲ್ ಪೋಲ್ ಡಿಶ್ ಗಳು ಚಾಲ್ತಿಗೆ ಬಂದವು, ಸಿಂಗಲ್ ಪೋಲ್ ಎಂದರೆ ಡಿಶ್ ನ ಒಂದು ಹ್ಯಾಂಡಲನ್ನು ತಿರುಗಿಸುವ ಮೂಲಕ ಡಿಶ್ ನ ದಿಕ್ಕು ಮತ್ತು ಎತ್ತರವನ್ನು ಹೊಂದಿಸಿ ಬೇರೆ ಬೇರೆ ಉಪಗ್ರಹಗಳಿಂದ ಟೀವಿ ಚಾನಲ್ ಗಳನ್ನು ನೋಡಬಹುದಾಗಿತ್ತು,


 ಇದರಲ್ಲಿ ಲಭ್ಯವಾಗುತ್ತಿದ್ದುದು ಬರೀ ದೇಶೀಯ ಚಾನಲ್ಲುಗಳಲ್ಲದೆ ಅಂತರರಾಷ್ಟ್ರೀಯ ಚಾನಲ್ಲುಗಳು ಲಭ್ಯವಾಗುತ್ತಿತ್ತು, ನೂರಕ್ಕೂ ಹೆಚ್ಚು ದೇಶೀಯ ವಿದೇಶೀಯ ಚಾನಲ್ಲುಗಳು ಉಚಿತವಾಗಿ ಲಭ್ಯವಾಗುತ್ತಿದ್ದವು ಮೊದಲು ಸ್ಟಾರ್ ನವರ ಎಲ್ಲಾ ಚಾನಲ್ಲುಗಳು, ಜೀ ಟೀವಿಯವರ ಅನೇಕ ಚಾನಲ್ಲುಗಳು ಉಚಿತವಾಗಿ ಲಭ್ಯವಾಗುತಿತ್ತು.ಇದೆಲ್ಲವೂ ಅನಲಾಗ್ ತಂತ್ರಜ್ಞಾನದಲ್ಲಿ ಲಭ್ಯವಾಗುತಿತ್ತು. ಅನಲಾಗ್ ತಂತ್ರಜ್ಞಾನದಲ್ಲಿ ಇದ್ದ ಒಂದು ಕೊರತೆಯೆಂದರೆ ಉಪಗ್ರಹದ ಒಂದು ಟ್ರಾನ್ಸ್ಪಾಂಡರಿನಲ್ಲಿ ಒಂದೇ ಚಾನಲ್ಲು ಪ್ರಸಾರವಾಗುತ್ತಿತ್ತು...ಭಾರತದ ಉಪಗ್ರಹದಲ್ಲಿ ಹೆಚ್ಚೆಂದರೆ ೧೨ ಟ್ರಾನ್ಸ್ಪಾಂಡರ್ ಇರುತ್ತಿದ್ದುದರಿಂದ ಕೇವಲ ಹತ್ತು, ಹನ್ನೆರಡು ಚಾನಲ್ ಪ್ರಸಾರ ಸಾಧ್ಯವಾಗುತಿತ್ತು, ಚಾನೆಲ್ಲಿನ ಒಡೆಯರು ತಮ್ಮ ಒಂದೊಂದು ಚಾನಲ್ಲನ್ನು ಪ್ರಸಾರ ಮಾಡಲು ಒಂದು ಟ್ರ್ಯಾನ್ಸ್ಪಾಂಡರನ್ನು ಬಾಡಿಗೆಗೆ ಪಡೆಯುವುದು ಅನಿವಾರ್ಯವಾಗಿತ್ತು.. ಅದಕ್ಕೆ ಅನೇಕ ಚಾನಲ್ ಮಾಲಿಕರುಗಳು ವಿದೇಶಿ ಉಪಗ್ರಹದ ಮೂಲಕ ಚಾನಲ್ಲುಗಳನ್ನು ಪ್ರಸಾರಮಾಡುತ್ತಿದ್ದರು.. ಹೊಸದೊಂದು ಉಪಗ್ರಹ ಉಡಾವಣೆಯಾದ ತಕ್ಷಣ ಅದರಲ್ಲಿ ಬಾಡಿಗೆ ಕಡಿಮೆಯಿದ್ದರೆ ತಮ್ಮ ಚಾನಲ್ ಹೊಸ ಉಪಗ್ರಹಕ್ಕೆ ಬದಲಾಯಿಸುವುದು ಸಾಮಾನ್ಯವಾಗಿತ್ತು... ನನ್ನ ಅನಿಸಿಕೆಯ ಪ್ರಕಾರ ಕೆಲವು ಚಾನಲ್ಲಿನ ಮಾಲಿಕರುಗಳು ಮೊದಲು ಬಾಡಿಗೆ ಕಟ್ಟುತ್ತಿದ್ದ ಉಪಗ್ರಹದವರಲ್ಲಿ ಒಂದು ತಿಂಗಳ ಬಾಡಿಗೆ ಕಟ್ಟದೇ ಬಾಕಿ ಉಳಿಸಿಕೊಂಡು ಮತ್ತೊಂದು ಉಪಗ್ರಹಕ್ಕೆ ಹಾರುತ್ತಿದ್ದರೋ ಏನೋ?... ಟೆಲಿ ಕಮ್ಯುನಿಕೇಶನ್ ನ ಒಳಗಿನ ವಿಚಾರಗಳನ್ನು ಕಲ್ಪಿಸಿಕೊಂಡು ಏನೇನೋ ಬರೆದರೆ ತಪ್ಪಾದೀತು.. ಇರಲಿ ನಮಗೇಕೆ!!
ಅನಲಾಗ್ ರಿಸೀವರಿನಲ್ಲಿ ರೇಡಿಯೋದಲ್ಲಿರುವ ಟ್ಯೂನರಿನಂತೆ ವೀಡಿಯೋ ಮತ್ತು ಆಡಿಯೋ ಟ್ಯೂನಿಂಗ್ ಸ್ಕ್ರೋಲಿಂಗ್ ನಾಬ್ ಇರುತ್ತದೆ ಅದನ್ನು ತಿರುಗಿಸುತ್ತಾ ಹೋದರೆ ಚಾನಲ್ ಟ್ಯೂನ್ ಆಗುತಿತ್ತು.. ಪ್ರತಿ ಚಾನೆಲ್ಲಿಗೂ ವೀಡಿಯೋ ಮತ್ತು ಆಡಿಯೋ ನಾಬ್ ತಿರುಗಿಸ ಬೇಕಾಗಿತ್ತು, ಏಕೆಂದರೆ ದೄಶ್ಯ ಮತ್ತು ದ್ವನಿ ಬೇರೆ ಬೇರೆ ತರಂಗಾಂತರಗಳಲ್ಲಿ ಪ್ರಸಾರವಾಗುತ್ತಿತ್ತು, ಇದರಲ್ಲಿನ ತೊಂದರೆಯೆಂದರೆ ಪದೇ ಪದೇ ಟ್ಯೂನ್ ಮಾಡುವುದರಿಂದ ನಾಬ್ ಸಡಿಲಗೊಂಡು ಟೀವಿಯಲ್ಲಿ ಚುಕ್ಕೆಗಳು ಮತ್ತು ದ್ವನಿ ಸರಿಯಾಗಿ ಕೇಳದೇ ಕರ್ಕಶವಾಗಿ ಕೇಳತೊಡಗುತ್ತದೆ ಮತ್ತು ಇದಕ್ಕೆ ರಿಮೋಟ್ ಸಹ ಇರದೇ ಇದ್ದದ್ದು ಅತಿ ದೊಡ್ಡ ತೊಂದರೆಯಾಗಿತ್ತು, ನಂತರದ ದಿನಗಳಲ್ಲಿ ಅನಲಾಗ್ ರಿಸೀವರಿನ ಯುಗಕ್ಕೆ ಮುಕ್ತಾಯ ಹಾಡಲು ಅವತರಿಸಿದ್ದು ಡಿಜಿಟಲ್ ರಿಸೀವರ್, ಇದರಲ್ಲಿ ಉತ್ಕೃಷ್ಟ ಗುಣಮಟ್ಟದ ವೀಡಿಯೋ ಮತ್ತು ಆಡಿಯೋ ಸೇವೆ ಪಡೆಯಲು ಸಾದ್ಯವಾಯಿತು, ಇದರಲ್ಲಿ ಅತ್ಯುತ್ತಮ ವೀಡಿಯೋ ಆಡಿಯೋ ಸ್ಪಷ್ಟತೆ ಮೊದಲನೆಯದಾದರೆ.. ಉಪಗ್ರಹದ ಒಂದು ಟ್ರಾನ್ಸ್ಪಾಂಡರಿನಲ್ಲಿ ಒಂದಕ್ಕಿಂತ ಹೆಚ್ಚು ಚಾನಲ್ಲುಗಳನ್ನು ಒಂದೇ ತರಂಗಾಂತರದಲ್ಲಿ ಪ್ರಸಾರ ಮಾಡಲು ಶಕ್ತವಾಗಿದ್ದವು.. ಸ್ಯಾಟಲೈಟ್ ಚಾನಲ್ಲಿನ ಒಡೆಯರಿಗೆ ಇದೊಂದು ವರಧಾನವಾಯಿತು.. ಮೊದಲಾದರೆ ಪ್ರತಿ ಚಾನಲ್ಲಿಗೆ ಒಂದೊಂದು ಟ್ರಾನ್ಸ್ಪಾಂಡರಿಗೆ ಉಪಗ್ರಹ ಬಾಡಿಗೆ ಕಟ್ಟಬೇಕಾಗಿತ್ತು.. ಅದೇ ಈಗ ಒಂದು ಟ್ರಾನ್ಸ್ಪಾಂಡರಿಗೆ ಬಾಡಿಗೆ ಕಟ್ಟಿದರೆ ತಮ್ಮೆಲ್ಲಾ ಚಾನಲ್ಲುಗಳನ್ನು ಒಟ್ಟಿಗೆ ಒಂದೇ ಟ್ರಾನ್ಸ್ಪಾಂಡರಿನ ಮೂಲಕ ಪ್ರಸಾರ ಮಾಡಬಹುದು... ಡಿಜಿಟಲ್ ರಿಸೀವರ್ ಗೆ ಡಿಶ್ ಮತ್ತು ಎಲ್ ಎನ್ ಬಿ ಮುಂಚಿನದೆ ಆಗಿದ್ದು ಕೇವಲ ಅನಲಾಗ್ ರಿಸೀವರ್ ಬದಲು ಡಿಜಿಟಲ್ ರಿಸೀವರ್ ಬದಲಾಗಿ ಸ್ಥಾನ ಅಲಂಕರಿಸಿದ್ದು ವಿಶೇಷ.


ಡಿಜಿಟಲ್ ರಿಸೀವರ್ ನಲ್ಲಿ ಚಾನಲ್ ವೀಕ್ಷಿಸಲು ಚಾನೆಲ್ಲಿನ ತರಂಗಾಂತರ(ಫ್ರೀಕ್ವೆನ್ಸಿ) ಮತ್ತು ಸಿಂಬಲ್ ರೇಟ್ ಒಮ್ಮೆ ಫೀಡ್ ಮಾಡಿದರಾಯಿತು. ಪ್ರತಿಯೊಂದು ಗ್ರೂಪ್ ನ ಚಾನೆಲ್ ಗೆ ಬೇರೆ ಬೇರೆ ಫ್ರೀಕ್ವೆನ್ಸಿ ಮತ್ತು ಸಿಂಬಲ್ ರೇಟ್ ಇರುತ್ತದೆ ಅದು ಅಂತರ್ಜಾಲದಲ್ಲಿ ಸಿಗುತ್ತದೆ ಅಥವಾ ಸೆಟಲೈಟ್ ಎಂಡ್ ಕೇಬಲ್ ಟೀವಿಯಂತಹ ಅನೇಕ ಮ್ಯಾಗಜೀನ್ ಗಳಲ್ಲಿ ಅವುಗಳ ಪಟ್ಟಿಯೇ ದೊರೆಯುತ್ತದೆ, ಡಿಜಿಟಲ್ ರಿಸೀವರಿನ ಬಗ್ಗೆ ಹೆಚ್ಚು ಹೇಳಲು ಹೋದರೆ ಸುಮ್ಮನೆ ಬೋರ್ ಹೊಡೆಸಿದಂತಾಗುತ್ತದೆ,ಉಚಿತವಾಗಿ ದೊರೆಯುವ ಚಾನಲ್ಲುಗಳನ್ನು ಫ್ರೀ ಟು ಏರ್ ಚಾನೆಲ್ ಮತ್ತು ದುಡ್ಡು ಕಟ್ಟಿದರೆ ಮಾತ್ರ ನೋಡಬಹುದಾದ ಚಾನಲ್ಲುಗಳನ್ನು ಸ್ಕ್ರ್ಯಾಂಬಲ್ಡ್ ಚಾನೆಲ್ ಅಥವಾ ಪೇ ಚಾನೆಲ್ ಎಂದು ಕರೆಯುತ್ತಾರೆ. ಡಿಟಿಹೆಚ್ ಭಾರತದಲ್ಲಿ ಕಣ್ತೆರೆಯುವ ಮುನ್ನ ದುಡ್ಡು ಕಟ್ಟಿ ನೋಡುವ, (ಸ್ಕ್ರಾಂಬಲ್ಡ್ ) ಪೇ ಚಾನಲ್ ಗಳನ್ನು ಒಬ್ಬ ಗ್ರಾಹಕ ಸ್ವಂತವಾಗಿ ಪಡೆಯುವುದು ಅಸಾಧ್ಯದ ಮಾತಾಗಿತ್ತು, ಪೇ ಚಾನಲ್ ಗಳು ಕೇಬಲ್ ಸೇವೆ ಒದಗಿಸುವವರಿಗೆ ಮಾತ್ರ ಲಭ್ಯವಿತ್ತು ಅದರಲ್ಲಿಯೂ ಕನಿಷ್ಟ ೫೦೦ ಜನ ಗ್ರಾಹಕರನ್ನು ಹೊಂದಿರಬೇಕೆಂಬ ಶರತ್ತು ಅನ್ವಯವಾಗುತಿತ್ತು, ಏಕೆಂದರೆ ಇಂದು ಡಿ.ಟಿ.ಹೆಚ್ ಸೇವೆ ಉಪಯೋಗಿಸುತ್ತಿರುವ ಮನೆಗಳಲ್ಲಿ ಟೀವಿಯ ಜೊತೆ ಬಂದು ಕುಳಿತಿರುವ ಪುಟ್ಟ ಬಾಕ್ಸ್ ಗೆ ಸೆಟ್ ಟಾಪ್ ಬಾಕ್ಸ್ ಎಂದು ಕರೆಯಲಾಗುತ್ತಿದೆ ಅದು ಡಿಜಿಟಿಲ್ ರಿಸೀವರಿಗೆ ದೊರೆತಿರುವ ಮತ್ತೊಂದು ಹೆಸರಾಗಿದೆ.

  ಯಾವುದೇ ಒಂದು ಚಾನಲ್ ಬೇರೆ ಉಪಗ್ರಹದಿಂದ ಪ್ರಸಾರ ಆರಂಭಿಸಿದಾಗ ಹೊಸ ತರಂಗಾಂತರ(ಫ್ರೀಕ್ವೆನ್ಸಿ)ಯಲ್ಲಿ ಟೀವಿ ಚಾನಲ್ ಗಳು ಲಭ್ಯವಾಗುತ್ತವೆ, ಅವುಗಳು ಕೇಬಲ್ ಟೀವಿ ಉದ್ಯಮಕ್ಕೆ ಸಂಬಂದಪಟ್ಟ ಅನೇಕ ಮ್ಯಾಗ್ ಜೀನ್ ಗಳಲ್ಲಿ ಎಲ್ಲಾ ಉಪಗ್ರಹದ ಡೌನ್ ಲೋಡ್ ಪ್ರೀಕ್ವೆನ್ಸಿ ಮತ್ತು ಸಿಂಬಲ್ ರೇಟ್ ಸಿಗುತ್ತವೆ, ಬೇರೆ ಬೇರೆ ಉಪಗ್ರಹಗಳನ್ನು ಹುಡುಕಿ ಚಾನಲ್ ನೋಡುವ ಹವ್ಯಾಸ ಉಳ್ಳವರು ತಮ್ಮನ್ನು ಸ್ಯಾಟ್ ಟ್ರ್ಯಾಕರ್ ಎಂದು ಕರೆದುಕೊಳ್ಳುತ್ತಾರೆ, ಉದಾಹರಣೆಗೆ ಎಲ್ಲಾ ಉಪಗ್ರಹಗಳಿಂದ ಎಲ್ಲಾ ಕಡೆ ಚಾನಲ್ಲುಗಳು ಸಿಗುವುದಿಲ್ಲ, ಅವುಗಳ ಪ್ರಸಾರ ಯಾವ ಯಾವ ಖಂಡಗಳಲ್ಲಿ ಲಭ್ಯವಾಗುತ್ತವೆ ಎನ್ನುವುದನ್ನು ಫೂಟ್ ಪ್ರಿಂಟ್ ಎಂದು ಕರೆಯಲಾಗುತ್ತದೆ, ಇನ್ನು ಪ್ರಸಾರ ಯಾವ ತರಹದ್ದು ಎನ್ನುವುದರ ಮೂಲಕ ಅವುಗಳು ಎಲ್ಲೆಲ್ಲಿ ಲಭ್ಯವಾಗುತ್ತವೆ ಎಂದು ತಿಳಿದುಕೊಳ್ಳಬಹುದು, ವೈಡ್ ಬೀಮ್ ನಲ್ಲಿ ಚಾನಲ್ಲ್ ಪ್ರಸಾರವಾಗುತ್ತಿದ್ದರೆ ಹಲವು ದೇಶಗಳಿಗೆ ಖಂಡಗಳಿಗೆ ಆ ಚಾನಲ್ ಲಭ್ಯವಾಗುತ್ತವೆ, ಇನ್ನು ಝೋನ್ ಬೀಮ್ ಅಥವಾ ಏಶಿಯಾ ಬೀಮ್ ಹೀಗೆ ಎಲ್ಲೆಲ್ಲಿಗೆ ತಮ್ಮ ಚಾನಲ್ಲುಗಳು ಲಭ್ಯವಾಗುತ್ತವೆ ಎನ್ನುವುದನ್ನು ಫೂಟ್ ಪ್ರಿಂಟ್ ಮ್ಯಾಪ್ ಮೂಲಕ ತಿಳಿದುಕೊಳ್ಳಬಹುದಾಗಿದೆ.


     ಆದರೆ ಡಿಟಿಹೆಚ್ ಸೇವೆ ಸಂಪೂರ್ಣವಾಗಿ ಗ್ರಾಹಕನ ಇಚ್ಚೆಗೆ ತಕ್ಕಂತೆ ಸೇವೆ ಪಡೆಯಲು ಸಾದ್ಯವಾಗಿಲ್ಲ, ಸದ್ಯಕ್ಕೆ ಲಭ್ಯವಿರುವಂತ ಬೇರೆ ಬೇರೆ ಡಿಟಿಹೆಚ್ ಸೇವೆ ಒದಗಿಸುತ್ತಿರುವವರು ಪ್ರೀಪೇಯ್ಡ್ ಮೊಬೈಲ್ ಸೇವೆಯಂತೆಯೇ ಡಿ.ಟಿ ಹೆಚ್ ಸೆಟ್ ಟಾಪ್ ಬಾಕ್ಸ್ ನ ಜೊತೆಗೊಂದು ಸ್ಮಾರ್ಟ್ ಕಾರ್ಡ್ ಅನ್ನು ಒದಗಿಸುತ್ತಾರೆ ಅದು ಪ್ರೀಪೇಯ್ಡ್ ಸಿಮ್ ಕಾರ್ಡನಂತೆ ದುಡ್ದಿದ್ದರೆ ಮಾತ್ರ ಚಾನಲ್ ಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ, ಇದರಲ್ಲಿ ಬೇಸರದ ವಿಚಾರವೆಂದರೆ ಪ್ರತಿ ಸೇವಾದಾತರು ಬೇರ‍ೆ ಬೇರೆ ಸ್ಕ್ರ್ಯಾಂಬ್ಲಿಂಗ್ ಟೆಕ್ನಾಲಜಿ ( ಪೇ ಚಾನಲ್ ಎನ್ ಕೋಡಿಂಗ್) ಬಳಸುತ್ತಿರುವುದರಿಂದ ಒಮ್ಮೆ ಒಂದು ಡಿ.ಟಿ ಹೆಚ್ ಸೇವೆ ಪಡೆದ ಮೇಲೆ ಮತ್ತೊಂದು ಡಿಟಿಹೆಚ್ ಸೇವೆ ಪಡೆಯಲು ಅಸಾದ್ಯ, ಬೇಕೇ ಬೇಕೆಂದರೆ ಹೊಸದಾಗಿ ಸೆಟ್ ಟಾಪ್ ಬಾಕ್ಸ್ ಮತ್ತು ಡಿಶ್ ಅನ್ನು ಹೊಸದಾಗಿ ಖರೀದಿ ಮಾಡಬೇಕಾಗುತ್ತದೆ, ಇನ್ನು ಅಂಗಡಿಯಾತ ತುಂಬಾ ಪರಿಚಯದವನಿದ್ದರೆ ೫೦೦ರೂಪಾಯಿ ಕಡಿಮೆ ಮಾಡಿ ಹೊಸ ಡಿಶ್ ಇಟ್ಟು ಕೊಂಡು ಬರೀ ರಿಸೀವರ್ ಒಂದನ್ನು ಕೊಡಬಹುದು, ಆದರೂ ದುಭಾರಿ ಎನಿಸದೇ ಇರಲಾರದು, ಉದಾಹರಣೆಗೆ ಒಂದು ಕಂಪೆನಿಯ ಡಿವಿಡಿ, ಅಥವಾ ಸೀಡಿ ಪ್ಲೇ ಮಾಡಲು ಅದೇ ಕಂಪನಿಯ ಪ್ಲೇಯರ್ ಅಥವಾ ಒಂದು ಕಂಪೆನಿಯ ಸಿಮ್ ಕಾರ್ಡ್ ನ ಸೇವೆ ಪಡೆಯಲು ಅದೇ ಕಂಪನಿಯ ಮೊಬೈಲ್ ಫೋನ್ ಬಳಸುವುದು ಅನಿವಾರ್ಯವಾಗಿದ್ದರೆ? (ರಿಲಾಯನ್ಸ್ ಮತ್ತು ಟಾಟಾ ಇಂಡಿಕಾಮ್ ಸಿ.ಡಿ ಎಮ್.ಎ ಸೇವೆ ಇದೇ ತರಹದ್ದಾಗಿತ್ತು ಈಗ ಅವೆರೆಡೂ ಕಂಪೆನಿಗಳು ಜಿ.ಎಸ್ ಎಮ್ ಸೇವೆ ಓದಗಿಸುತ್ತಿವೆ) ಸೀಡಿ ಕಂಪೆನಿಗಳು ಮತ್ತು ಮೊಬೈಲ್ ಸೇವೆ ಒದಗಿಸುತ್ತಿರುವ ಕಂಪೆನಿಗಳು ಖಂಡಿತಾ ಉದ್ದಾರವಾಗುತ್ತಿರಲಿಲ್ಲವೇನೋ! ಆದರೆ ಡಿ.ಟಿ ಹೆಚ್ ಕಂಪೆನಿಗಳು ಡಿಶ್ ಮತ್ತು ಸೆಟ್ ಟಾಪ್ ಭಾಕ್ಸನ್ನು ಗ್ರಾಹಕನಿಗೆ ಬಾಡಿಗೆ ಆಧಾರದ ಮೇಲೆ ಒದಗಿಸುತ್ತಿವೆ ಜಾಹೀರಾತಿನಲ್ಲಿ ಮಾತ್ರ ಸೆಟ್ ಟಾಪ್ ಬಾಕ್ಸ್ ಮತ್ತು ಡಿಶ್ ಉಚಿತ ಎಂದು ಬರೆದಿರುತ್ತದೆ ಅದರ ಜೊತೆಗೆ * ಚಿಹ್ನೆ ಇದ್ದು ಶರತ್ತುಗಳು ಅನ್ವಯಿಸುತ್ತವೆ ಎಂದು ಬರೆದಿರುತ್ತಾರೆ!, ಸೆಟ್ ಟಾಪ್ ಭಾಕ್ಸ್ ಮೇಲೆ ಸಂಪೂರ್ಣವಾದ ಹಕ್ಕು ಡಿ.ಟಿ ಹೆಚ್ ಸೇವಾದಾರರದ್ದೆ ಆಗಿರುತ್ತದೆ.ಪೇ ಚಾನಲ್ ಗಳನ್ನು ನಿರ್ದಿಷ್ಟವಾದ ಸ್ಕ್ಯಾಂಬ್ಲಿಗ್ ಟೆಕ್ನಾಲಜಿಯಲ್ಲಿ ಮಾತ್ರ ಸೇವೆ ಓದಗಿಸುವಂತೆ ಮತ್ತು ಗ್ರಾಹಕನಿಗೆ ತನಗಿಷ್ಟವಾದ ಕಂಪೆನಿಯ ಸೇವೆ ಪಡೆಯಲು ಬರಿ ಸ್ಮಾರ್ಟ್ ಕಾರ್ಡನ್ನು ಮಾತ್ರ ಪಡೆದು ಕೊಂಡು(ಮೊಬೈಲ್ ಸಿಮ್ ಖರೀದಿಸಿದಂತೆ) ಸೇವೆ ಪಡೆದುಕೊಳ್ಳುವಂತೆ ಮಾಡಲು ಟ್ರಾಯ್ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲವೇ ಎನ್ನುವುದು ಆಶ್ಚರ್ಯಕರ ವಿಚಾರ. ಬೇಕಾದರೆ ಸೆಟ್ ಟಾಪ್ ಭಾಕ್ಸ್ ಗೆ ಇನ್ನು ಸ್ವಲ್ಪ ಹೆಚ್ಚಿನ ಹಣ ಪಡೆಯಲಿ, ಆದರೆ ಯಾವ ಶರತ್ತನ್ನು ವಿಧಿಸುವಂತಿಲ್ಲ ಹಾಗು ಯಾವ ಸೇವೆಯನ್ನು ಪಡೆದುಕೊಳ್ಳುವ ಹಕ್ಕು ಸಂಪೂರ್ಣ ಹಕ್ಕು ಗ್ರಾಹಕನದ್ದಾಗಿರುತ್ತದೆ ಎಂದು ಬರೆದುಕೊಡಲಿ, ಎಲ್ಲಾ ಕಂಪೆನಿಯವರ ಸ್ಮಾರ್ಟ್ ಕಾರ್ಡ್ ಗಳು ಒಂದೇ ಗ್ಲೋಬಲ್ ಸ್ಟ್ಯಾಂಡರ್ಡ್ ಗೆ ತರಬೇಕು ಇಲ್ಲವಾದಲ್ಲಿ ಸೇವೆ ಚನ್ನಾಗಿಲ್ಲದಿದ್ದರೂ ಅದನ್ನೆ ನೋಡುತ್ತಾ ಕೂರುವುದು ಅನಿವಾರ್ಯವಾಗುತ್ತದೆ.ಅಥವಾ ಇನ್ಯಾವುದೇ ಅತಿ ಕಡಿಮೆ ದರದಲ್ಲಿ ಅತ್ಯಂತ ಒಳ್ಳೆಯ ಪ್ಯಾಕೇಜ್ ಬೇರೆಯ ಕಂಪನಿಯವರು ನೀಡಿದರೆ ಅದರ ಪ್ರಯೋಜನ ಪಡೆಯಲು ಮತ್ತೆ ಹೊಸದಾಗಿ ರಿಸೀವರ್ ಎಲ್ಲವನ್ನು ಖರೀದಿಸುವುದು ದುಬಾರಿಯಾಗುತ್ತದೆ.

     ಡಿಟಿಹೆಚ್ ಸೇವಾದಾರರು ಗ್ರಾಹಕರಿಂದ ಭಾರಿ ಪ್ರಮಾಣದ ಹಣವನ್ನು ದೋಚುತ್ತಿದ್ದಾರೆ, ತಿಂಗಳಿಗೆ ಕನಿಷ್ಟವೆಂದರೂ ೧೦೦ ರಿಂದ ೩೦೦ ರೂಪಾಯಿಯ ತನಕ ಗ್ರಾಹಕ ಖರ್ಚು ಮಾಡಲೇ ಬೇಕಾಗಿದೆ, ಜೊತೆಗೆ ತೆರಿಗೆ ೧೨.೫ ಕಟ್ಟುವುದು ಅನಿವಾರ್ಯವಾಗಿದೆ.ಇದು ಸಾಮಾನ್ಯ ವರ್ಗದ ಗ್ರಾಹಕರಿಗೆ ಹೊರೆಯಾಗಿದೆ, ನೋಡಿದ್ದಕ್ಕಷ್ಟೆ ದುಡ್ಡು ಕಟ್ಟುವ(Pay per view) ಸೇವೆ ಆರಂಭವಾಗಬೇಕು ಅಥವಾ ಪ್ಯಾಕೇಜ್ ಬದಲು ಬೇಕಾದ ಚಾನಲ್ಲುಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇನ್ನೂ ಲಭ್ಯವಾಗಿಲ್ಲ, ಉದಾಹರಣೆಗೆ ಯಾವುದೋ ಒಂದು ಚಾನೆಲ್ ಬೇಕಾದಲ್ಲಿ ಆ ಚಾನೆಲ್ ಒಂದನ್ನು ನೋಡಲು ಇಡೀ ಪ್ಯಾಕೇಜ್ ಗೆ ಹಣ ವ್ಯಯಿಸಬೇಕು ಇಡೀ ಪ್ಯಾಕೇಜ್ ನಲ್ಲಿ ಉಳಿದ ಚಾನಲ್ ಗಳನ್ನು ನೀವು ನೋಡುವ ಆಸಕ್ತಿಯಿಲ್ಲದಿದ್ದರೂ ದುಡ್ಡು ಕಟ್ಟಲೇ ಬೇಕು, ಕೆಲವು ಒಂದೇ ಚಾನಲ್ ಆಯ್ಕೆ ಲಭ್ಯವಿದೆ ಆದರೆ ಕನಿಷ್ಟವೆಂದರೂ ೨೫ ರಿಂದ ೩೦ರೂಪಾಯಿ ಒಂದು ತಿಂಗಳಿಗೆ ವ್ಯಯಿಸಬೇಕು, ಇದು ದುಬಾರಿ ಲೆಕ್ಕಾಚಾರವೇ ಆಯಿತು, ಇನ್ನು ಕೆಲವು ಪ್ಯಾಕೇಜ್ ಆಯ್ಕೆ ಮಾಡಿಕೊಂಡರೆ ಅದನ್ನು ಮತ್ತೆ ಅಷ್ಟು ಸುಲಭದಲ್ಲಿ ನಿಶ್ಕ್ರೀಯ ಗೊಳಿಸಲು ಸಾಧ್ಯವಿಲ್ಲ ನಿಮ್ಮ ಖಾತೆಯಲ್ಲಿ ಹಣ ಖಾಲಿಯಾದಾಗ ಮಾತ್ರ ಆ ಪ್ಯಾಕೇಜ್ ಕೊನೆಗೊಳ್ಳುತಿತ್ತು.. ಸನ್ ಡೈರೆಕ್ಟ್ ನಲ್ಲಿ ಈಗ ಸ್ವಲ್ಪ ಬದಲಾವಣೆಯಾಗಿವೆ, ಒಂದು ತಿಂಗಳಿಗೆ ಚಂದಾದಾರರಾಗುತ್ತೀರೋ ಅಥವಾ ಯಾವಾಗಲೂ ಚಂದಾ ಹಣ ಕಟ್ಟುತ್ತಲೇ ಇರುತ್ತೀರೋ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಡಲಾಗಿದೆ! ಒಮ್ಮೆ ನೀವು ನಿಮ್ಮ ಚಂದಾ ಹಣ ಕಟ್ಟುವುದು ಒಂದು ದಿನ ತಡವಾದರೂ ಮುಂದಿನ ೨೪ ಘಂಟೆಗಳ ವರೆಗೆ ನಿಮಗೆ ಯಾವುದೇ ಚಾನಲ್ ಲಭ್ಯವಾಗುವುದಿಲ್ಲ.. ಉಚಿತವಾಗಿ ಪ್ರಸಾರವಾಗುತ್ತಿರುವ ಡಿಡಿ ಡೈರೆಕ್ಟ್ ಪ್ಲಸ್ ನ ಚಾನಲ್ಲುಗಳನ್ನು ಸಹ ಬ್ಲಾಕ್ ಮಾಡುತ್ತಾರೆ, ಇವಕ್ಕೆಲ್ಲ ಕಡಿವಾಣ ಹಾಕಲು ಸೂಕ್ತ ಕ್ರಮ ಟ್ರಾಯ್ ಕೈಗೊಳ್ಳಬೇಕಿದೆ.

     ಇನ್ನು ನಾನು ಅತಿ ಆಸಕ್ತಿಯಿಂದ ಕಾಯುತ್ತಿರುವುದು ಡಿಟಿ ಹೆಚ್ ನ ಮೂಲಕ ಬ್ರಾಡ್ ಬ್ಯಾಂಡ್ ಸೇವೆಗೆ, ನನ್ನಂತೆ ಬಿಎಸ್ ಎನ್ಎಲ್ ನ ಕೇಬಲ್ ಸೇವೆಯಿಂದ ಬ್ರಾಡ್ ಬ್ಯಾಂಡ್ ಸೇವೆ ಪಡೆಯುವ ಹಕ್ಕಿನಿಂದ ವಂಚಿತರಾದ ಮತ್ತು ವೈರ್ ಲೆಸ್ ಲ್ಯಾಂಡ್ ಲೈನ್ ನ ಮೂಲಕ ಫಾಸ್ಟ್ ಇಂಟರ್ನೆಟ್ ಎನ್ನುವ ಹೆಸರಿನ ಅನಿಯಮಿತ ಅತಿ ನಿಧಾನಗತಿಯ ಡಯಲ್ ಅಪ್ ಸೇವೆಯಿಂದ ಬೇಸತ್ತಿರುವ ಗ್ರಾಹಕರಿಗೆ ಬ್ರಾಡ್ ಬ್ಯಾಂಡ್ ಅನುಭವ ಸಿಗಲಿ ಎನ್ನುವ ಆಶಯ. ( ಇದ್ದಿದ್ದರಲ್ಲಿ ಫೊನ್ ಬಿಲ್ ಜೊತೆ ೨೫೦ರುಪಾಯಿ ಮಾಸಿಕ ಬಾಡಿಗೆ ಮಾತ್ರ ಹೆಚ್ಚುವರಿಯಾಗಿ ಕಟ್ಟಬೇಕು) Anyways Thanks to BSNL WLL fast internet serviece! ಕೊನೆಯ ಮಾತು ಡೈರೆಕ್ಟ್ ಟು ಹೋಮ್ ಸರ್ವೀಸ್ ನಲ್ಲಿ ಕೈಗೆಟಕುವ ಬೆಲೆಗೆ ಇಂಟರ್ನೆಟ್ ಸೇವೆ ಬಂದರೆ ಮಾತ್ರ ಚಂದಾದಾರರಾಗಿ, ಲೆಕ್ಕಾಚಾರ ಇರಬೇಕಲ್ವಾ ಎಲ್ಲದಕ್ಕೂ.ನಾನು ಬರೆದದ್ದರಲ್ಲಿ ಸಾಕಷ್ಟು ಮಾಹಿತಿ ದೊರೆತಿರಬಹುದು ಎಂದುಕೊಳ್ಳುತ್ತೇನೆ.

Monday, October 5, 2009

ಬ್ಲಾಗೋತ್ತಮ/ಉತ್ತಮ ಬ್ಲಾಗರ್ ಪ್ರಶಸ್ತಿಗೆ ಅರ್ಜಿ ಆಹ್ವಾನ

ಇತ್ತೀಚಿಗೆ ಅನೇಕ ಬ್ಲಾಗಿಗರು ಬರೆಯುವುದನ್ನು ಕಡಿಮೆ ಮಾಡುತ್ತಿದ್ದಾರೆ ಅಂತವರಿಗಾಗಿ ಉತ್ತಮ ಬ್ಲಾಗಿಗ/ ಬ್ಲಾಗ್ ಓಡತಿ ಎನ್ನುವ ಪ್ರಶಸ್ತಿಯನ್ನು ಆನ್ ಲೈನ್ ಲಾಟರಿ ಮೂಲಕ ಆರಿಸಬೇಕೆಂದಿದ್ದೇನೆ( ಆನ್ ಲೈನ್ ಲಾಟರಿಗೆ ರಾಜ್ಯ ಸರ್ಕಾರ ನಿಷೇದ ಹೇರಿದೆ)

ಮೂರಂಕಿ ಲಾಟರಿಯಲ್ಲಿ ಆರಿಸೋಣ ಬಿಡಿ!

ಪ್ರಶಸ್ತಿ ಅಂದ ಮೇಲೆ ಶರತ್ತು ಹಾಗು ಅರ್ಹತೆಗಳು ಸಾಮಾನ್ಯ ಅಲ್ಲವೆ

ಬ್ಲಾಗೋತ್ತಮ ಅಥವಾ ಉತ್ತಮ ಬ್ಲಾಗರ್ ಪ್ರಶಸ್ತಿ ಪಡೆಯಲು ಈ ಕೆಳಗಿನ ಅರ್ಹತೆ ಮತ್ತು ಶರತ್ತುಗಳು ಅನ್ವಯಿಸುತ್ತದೆ

1) ಬ್ಲಾಗ್ ಆರಂಭಿಸಿ ೮ ತಿಂಗಳು ೨೫ ದಿನಗಳು ಮೀರಿರಬಾರದು (ಪ್ರಸವ ವೇದನೆಯ ಕಾಲ ಶುಭ ಕಾಲವೆಂದು ಪರಿಗಣಿಸಲಾಗಿದೆ)

2) ಬ್ಲಾಗರ್ ವಯಸ್ಸು ಯುವಕನಾಗಿದ್ದರೆ 35 ಮೀರಿರಬಾರದು, ಮಹಿಳೆಯಾದರೆ 42 ಮೀರಿರಬಾರದು

3) ತಿಂಗಳಿಗೆ ವಾರಕ್ಕೊಂದರಂತೆ 4 ಅಥವಾ 5 ಲೇಖನಗಳು ಮೀರಿರಬಾರದು (ಅತಿ ಹೆಚ್ಚಿನ ಪೋಸ್ಟ್ ಮಾಡಿದ್ದರೆ ಅವರು ಉತ್ತಮ ಬ್ಲಾಗರ್ ಪ್ರಶಸ್ತಿಗೆ ಅನರ್ಹರು! ಏಕೆಂದರೆ ಹಿಂದಿನ ಲೇಖನಗಳನ್ನು ಓದಲು ಬಿಡದೆ ಹೊಸ ಹೊಸ ಲೇಖನ ಬರೆದರೆ ಯಾವುದನ್ನು ಓದೋದು ಎನ್ನುವ ದ್ವಂದ್ವಕ್ಕೆ ಓದುಗರು ಬೀಳುತ್ತಾರೆ)

4) ಪ್ರತಿ ಲೇಖನಕ್ಕೆ ಕಡ್ಡಾಯವಾಗಿ ಒಂದಾದರು ಕಮೆಂಟ್ ಬಂದಿರಬೇಕು, ಒಬ್ಬರೇ ಒಂದಕ್ಕಿಂತ ಹೆಚ್ಚು ಬಾರಿ ಒಂದೇ ಲೇಖನಕ್ಕೆ ಕಮೆಂಟಿರಬಾರದು.
5) ನಿಮ್ಮ ಬ್ಲಾಗ್ ನಲ್ಲಿ ಬೇರೆಯವರ ನಿಮಗಿಷ್ಟವಾದ ಒಂದು ಬ್ಲಾಗ್ ನ ಲಿಂಕ್ ಆದರೂ ಕೊಟ್ಟಿರಬೇಕು (ಇಲ್ಲವಾದಲ್ಲಿ ಓದುಗರನ್ನು ಕಟ್ಟಿ ಹಾಕಿದ ಅಥವಾ ಇನ್ನೊಂದು ಉತ್ತಮ ಬ್ಲಾಗ್ ಗೆ ದಾರಿ ಮಾಡಿಕೊಡಲಿಲ್ಲ ಎನ್ನುವುದನ್ನು ಪರಿಗಣಿಸಿ ಅನರ್ಹರು ಎಂದು ತೀರ್ಮಾನಿಸಲಾಗುತ್ತದೆ.

6) ನಿಮ್ಮ ಬ್ಲಾಗ್ ನ ಫಾಲೋವರ್ ಗಳ ಸಂಖ್ಯೆ ೧೨ ದಾಟಿರಬಾರದು (ನೀವು ನನ್ನ ಬ್ಲಾಗ್ ನ್ನು ಫಾಲೋ ಮಾಡುವ ಮೂಲಕ ನನಗೆ ಪ್ರಶಸ್ತಿ ಸಿಗದಂತೆ ಮಾಡಬಹುದು!)

7) ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ ಲೇಖನಗಳು ಬೇರೆ ಯಾವುದೇ ಪತ್ರಿಕೆಗಳಲ್ಲಿ ಈ ಮೊದಲು ಪ್ರಕಟವಾಗಿರಬಾರದು

8) ಅರ್ಜಿ ಸಲ್ಲಿಸುವವರು ನಿಮ್ಮ ಅರ್ಜಿಯ ಜೊತೆ ಉತ್ತಮ ಬ್ಲಾಗರ್ ಎನಿಸಿಕೊಳ್ಳಲು ಬೇಕಾದ ಕನಿಷ್ಟ 5 ಅರ್ಹತೆಯ ಪಟ್ಟಿ ಸೇರಿಸಿ ಅರ್ಜಿ ಸಲ್ಲಿಸಬಹುದು.



ಏನು ಪ್ರಶಸ್ತಿ ಬೇಕೆಂದು ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸಿರಬೇಕು!

ಅರ್ಜಿ ಸಲ್ಲಿಸಲು ಕೆಲವೇ ದಿನಗಳು ಬಾಕಿ ಇವೆ.