ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Monday, April 13, 2009

ಬಂಗಲೆ ಮನೆ ರಹಸ್ಯ ಭಾಗ -2

ಊಟಕ್ಕೆ ಎದ್ದು ಹೋಗಿ ಊಟದ ತಟ್ಟೆಯಲ್ಲಿನ ಅನ್ನವನ್ನು ಕಲಸುತ್ತಿರುವಾಗಲೂ ಮನಸ್ಸು ಬಂಗಲೆಯ ಬಗೆಗೆ ಯೋಚಿಸುತ್ತಿದೆ, ಸೀತಜ್ಜ ಏ ಅಜಿತ ಯಾಕೋ ಏನಾಯ್ತೋ ಊಟ ಮಾಡೋ ಎಂದು ಹೇಳಿದಾಗಲೇ ವಾಸ್ತವ ಪ್ರಪಂಚಕ್ಕೆ ಬರುತ್ತಾನೆ, ಅಜಿತನು ಸಮರ್ಥ ಮತ್ತು ಪುಟ್ಟಿಯ ಜೊತೆ ತಾನು ತನ್ನ ಮೊಬೈಲ್ ನಲ್ಲಿ ನೋಡಿದ್ದೆಲ್ಲವನ್ನೂ ವಿವರಿಸುತ್ತಾನೆ, ಸಮರ್ಥ ಅಣ್ಣನನ್ನು ಉದ್ದೇಶಿಸಿ "ನಿನ್ನ ಮೊಬೈಲ್ ನಲ್ಲಿ ಈ ಹಳ್ಳಿಯ ಮ್ಯಾಪ್ ಕಾಣಿಸಿತಾ?, ನನ್ನ ಫ್ರೆಂಡ್ ಹತ್ತಿರ ಯಾವುದೋ ಜಿ.ಪಿ.ಎಸ್ ಸೆಟ್ ಇದೆ ಅದರಲ್ಲಿ ನಮ್ಮ ನಗರದ ದಾರಿಗಳೆ ಕಾಣೋಲ್ಲವಂತೆ" ಎಂದು ಹೇಳುತ್ತಾನೆ, ಅದಕ್ಕೆ ಅಜಿತ ಇದು ಸೊನಾಕಿಯಾ ವೈನ್ 79 ಇಲ್ನೋಡು ಮೊಬೈಲ್ ಸ್ಕ್ರೀನ್ ಎಷ್ಟು ದೊಡ್ಡದಿದೆ ಅಂತ, ಅದೂ ಅಲ್ದೆ ಇದು ಡ್ಯುಯಲ್ ಲೇಯರ್ ಎಲ್ಸೀಡಿ ಸ್ಕ್ರೀನ್ ಕಣೋ ಎಂದು ಹೇಳಿದಾಗ ಸಮರ್ಥನಿಗೆ ಅರ್ಥವಾಗುತ್ತದೆ ಅವನ ಅಣ್ಣನ ಮೊಬೈಲ್ ಪವರ್!.

ಅಜಿತ ತಾನು ಬಂಗಲೆಯನ್ನು ನೋಡಲು ಹೋಗುವುದಾಗಿ ತಮ್ಮ ಮತ್ತು ತಂಗಿಗೆ ಹೇಳುತ್ತಾನೆ, ಸಮರ್ಥ ತಾನು ಬರುತ್ತೇನೆ ನನಗೂ ನೋಡವ ಹಂಬಲವಿದೆ ಎಂದು ಹೇಳುತ್ತಾನೆ, ಪುಟ್ಟಿಗೂ ಬಂಗಲೆ ಮನೆಯನ್ನು ನೋಡಬೇಕೆನ್ನುವ ಕುತೂಹಲವಿದ್ದರೂ.. ಭೂತ ಪ್ರೇತದಿಂದ ತೊಂದರೆಯಾದರೆ ಎಂದು ಮನಸಿನಲ್ಲೆ ಒಂದು ಕ್ಷಣ ಯೋಚಿಸುತ್ತಾಳೆ, ಆದರೆ ತನ್ನ ಇಬ್ಬರು ಅಣ್ಣಂದಿರು ಜೊತೆಗಿದ್ದಾರೆನ್ನುವ ದೈರ್ಯದಿಂದ ತಾನು ಬರುವುದಾಗಿ ಹೇಳುತ್ತಾಳೆ, ಅಜಿತ ಮೊದಲಿನಿಂದಲೂ ಭೂತ ಪ್ರೇತವೆಂದರೆ ಹೆದರುವವನೇ ಅಲ್ಲ, ಅದೂ ಆದುನಿಕ ಯುಗದ ಹುಡುಗರು ಭೂತಕ್ಕೆಲ್ಲ ಹೆದರುತ್ತಾರಾ? ಊಹೂಂ... ಮೂವರು ಸೇರಿ ಮರುದಿನ ಸರಿಯಾಗಿ ರಾತ್ರಿ ಹನ್ನೊಂದು ಗಂಟೆಗೆ ಬಂಗಲೆ ಮನೆಗೆ ಹೋಗುವುದೆಂದು ತೀರ್ಮಾನಿಸುತ್ತಾರೆ, ಏಕೆಂದರೆ ಅವರ ಅಜ್ಜನ ಮನೆಯಲ್ಲಿ ರಾತ್ರಿ 10:30ಕ್ಕೆಲ್ಲ ಎಲ್ಲರು ಮಲಗಿಬಿಡುತ್ತಾರೆ.
---------------------------------*****-----------------------------------------------------
ಅಂದು ಶನಿವಾರ ಅಮಾವಾಸ್ಯೆಯ ರಾತ್ರಿ ದೂರದಲ್ಲಿ ನಾಯಿಗಳು ಊಳಿಡುವ ಶಬ್ದ ಕೇಳಿಸುತ್ತಿದೆ... ಸೀತಜ್ಜನ ಮನೆಯಲ್ಲೆಲ್ಲರೂ ಮಲಗಿದ್ದಾರೆ.. ಅಜಿತ, ಸಮರ್ಥ ಮತ್ತು ಸುನಯನ ಮಾತ್ರ ನಿದ್ರೆ ಬಂದವರಂತೆ ಮಲಗಿದ್ದಾರೆ... ಎಲ್ಲರಿಗೂ ನಿದ್ರೆ ಬಂದಿದೆಯಾ ಎಂದು ನಿಧಾನವಾಗಿ ಪರೀಕ್ಷಿಸುತ್ತಾ ಸದ್ದಾಗದಂತೆ ಮೂವರು ಮನೆಯಿಂದ ಹೊರಗೆ ಬಂದಿದ್ದಾರೆ... ಕೈಯಲ್ಲಿ ಅತ್ಯುತ್ತಮ ಗುಣಮಟ್ಟದ ಅತಿ ದುಬಾರಿಯಾದ 500 ಅಡಿ ದೂರ ಬೆಳಕು ಚೆಲ್ಲುವ ಬ್ಯಾಟರಿಯಿದೆ, ಚಿಕ್ಕ ಮಕ್ಕಳ ಹತ್ತಿರ ಅಷ್ಟೊಂದು ಬೆಲೆಬಾಳುವ ಮೊಬೈಲ್ ಮತ್ತು ಈ ತರಹದ ಬ್ಯಾಟರಿ ಇರಲು ಸಾದ್ಯವಾ ಎಂದು ಊಹಿಸಲು ಕಷ್ಟ ಆದರೆ ಇದು ನಿಜ ಕಾರಣ ಇವರ ಅಪ್ಪ ದೊಡ್ಡ ವ್ಯಾಪಾರಸ್ಥ.. ಕೋಟಿ ಕೋಟಿ ರೂಪಾಯಿಗಳ ವ್ಯವಹಾರ ಮಾಡುವವರಿಗೆ ಸಾವಿರ, ಲಕ್ಷವೆಲ್ಲ ಅಲಕ್ಷ್ಯ.

ಮೂವರು ನಕ್ಷೆಯನ್ನು ಆದರಿಸಿಕೊಂಡು ನೆಡೆದುಕೊಂಡು ಬಂದು ಬಂಗಲೆ ಮನೆಯ ಆವರಣ ತಲುಪಿದ್ದಾರೆ...ಬಂಗಲೆ ಮನೆ ನೋಡಲು ತುಂಭಾ ವಿಶಾಲವಾಗಿದ್ದು ಎರಡು ಅಂತಸ್ತಿನ ಮನೆಯಾಗಿದೆ, ಆಗ ಅಲ್ಲಿ ಗುಡುಗು ಸಿಡಿಲು ಜೊತೆಗೆ ಬಿರುಗಾಳಿ ಆರಂಭವಾಗುತ್ತಿದೆ, ಜಡಿ ಮಳೆ ಸುರಿವ ಲಕ್ಷಣ ಕಾಣಿಸುತ್ತಿದೆ, ಪುಟ್ಟಿಗೆ ಹೆದರಿಕೆಯಾಗಿ ಅಣ್ಣಂದಿರ ಕೈ ಹಿಡಿದುಕೊಂಡು ಹೆದರಿಕೆಯಾಗುತ್ತಿದೆ ಎಂದು ಹೇಳುತ್ತಾಳೆ, ಅದಕ್ಕೆ ಸಮರ್ಥ ಅವಳನ್ನು ಸಮಾಧಾನ ಪಡಿಸುತ್ತಾನೆ "ಇಲ್ಲಾ ಪುಟ್ಟಿ ನಾವು ಬಂಗಲೆಯ ಒಳಗೆ ಹೋಗಿಬಿಟ್ಟರೆ ಅಲ್ಲೇನು ತೊಂದರೆಯಿಲ್ಲ" ಎಂದು, ಆದರೆ ಅಲ್ಲಿ ಅವರಿಗೆ ಕಾದಿದೆ ದೊಡ್ಡದೊಂದು ಅಪಾಯ!.

ಅಜಿತ ಸಮರ್ಥ, ಸುನಯನ ಮೂವರೂ ಆ ಬಂಗಲೆಯ ಬಾಗಿಲ ಹತ್ತಿರ ಬಂದು ನಿಂತಿದ್ದಾರೆ, ಅದು ವಿಶಾಲವಾದ ಪ್ರವೇಶದ್ವಾರ ಅದಕ್ಕೆ ಎರಡು ಎತ್ತರದ ಭಾಗಿಲುಗಳು.. ಅದನ್ನು ನರಮಾನವರಿಂದ ಅಲುಗಾಡಿಸಲು ಸಾಧ್ಯವೇ ಇಲ್ಲ ಅಂತಹ ಬಾಗಿಲು..ಅದನ್ನು ತಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ.. ಊಹೂಂ ಸ್ವಲ್ಪವೂ ಮಿಸುಕಾಡುತ್ತಿಲ್ಲ.. ಅಷ್ಟರಲ್ಲಿ ಪುಟ್ಟಿಗೆ ಆಯಾಸವಾಗಿ ತಳ್ಳುವುದನ್ನು ಬಿಟ್ಟು ಕಣ್ಣುಗಳು ಬಾಗಿಲಿನ ಬಲಭಾಗದಲ್ಲಿ ವಿಚಿತ್ರವಾದ ರಾಕ್ಷಸನ ತರಹದ ಕೆತ್ತನೆಯನ್ನು ಗಮನಿಸುತ್ತದೆ, ಬೇರೆಲ್ಲಾ ಚಿತ್ರಗಳು ಸುಂದರವಾಗಿದ್ದು ಈ ಚಿತ್ರ ಮಾತ್ರ ತುಂಭಾ ವಿಚಿತ್ರವಾಗಿದೆ ಎಂದುಕೊಂಡು ಅದನ್ನು ಹೆದರುತ್ತಲೇ ಮುಟ್ಟುತ್ತಾಳೆ.. ಆಗ ಬಾಗಿಲುಗಳು ಕಟ ಕಟ ಸದ್ದು ಮಾಡುತ್ತಾ ತೆರೆದುಕೊಳ್ಳುತ್ತದೆ, ಮನೆಯ ಓಳ ಆವರಣ ತುಂಭಾ ವಿಶಾಲವಾಗಿದ್ದು ಯಾರೂ ವಾಸವಾಗಿರದ ಮನೆಯಂತೆ ದೂಳು ಮತ್ತು ಜೇಡರ ಬಲೆಯಿಂದ ಕೂಡಿಲ್ಲ.. ಅಲ್ಲಿ ಯಾರೋ ವಾಸವಾಗಿರುವ ಲಕ್ಷಣದಂತೆ ಅತ್ಯಂತ ಶುಭ್ರವಾಗಿದೆ... ಜಗಮಗಿಸುವ ದೀಪಗಳು ಉರಿಯುತ್ತಿದೆ ಅಲ್ಲಿ ಗೋಡೆಯ ಮೇಲೆ ಅನೇಕ ಚಿತ್ರವಿಚಿತ್ರವಾದ ಕಲಾಕೃತಿಗಳನ್ನು ನೇತು ಹಾಕಲಾಗಿದೆ, ಕ್ರೂರ ಮೃಗಗಳ ತಲೆ ಬುರುಡೆಯ ಆಕೃತಿಗಳು ಭಯಾನಕವಾಗಿದೆ, ಅಲ್ಲಿ ಕಾಡು ಕೋಣದ ಆಕೃತಿಯ ಕಣ್ಣುಗಳು ಕೆಂಡದಂತೆ ಉರಿಯುತ್ತಿದೆ ಅದು ಈ ಮೂವರ ಚಲನವಲನಗಳನ್ನು ಗಮನಿಸುತ್ತಿದೆ... ಬಂಗಲೆಯ ಪ್ರವೇಶ ದ್ವಾರ ಮತ್ತೆ ಕಟ ಕಟನೆ ಶಬ್ದ ಮಾಡುತ್ತಾ ಮುಚ್ಚಿಕೊಳ್ಳುತ್ತದೆ, ಈಗ ಒಳಗೆ ಇದುವರೆಗೂ ಉರಿಯುತ್ತಿದ್ದ ದೀಪಗಳು ನಿಧಾನವಾಗಿ ಆರಿಹೋಗುತ್ತಿವೆ ಇಡಿ ಆವರಣ ಕತ್ತಲೆಯ ಗೂಡಾಗಿ ಪರಿವರ್ತನೆಯಾಗುತ್ತಿದೆ, ಆಗ ಗೋಡೆಯ ಮೇಲಿನ ಆಕೃತಿಗಳ ಮೇಲೆ ಕೆಂಪು ಬೆಳಕು ಎಲ್ಲಿಂದಲೋ ಬೀಳುತ್ತಿದೆ, ಆ ಆಕೃತಿಗಳು ಜೀವಬಂದತೆ ಘೋರವಾದ ಗರ್ಜನೆ ಮಾಡುತ್ತಿವೆ... ಮೂವರು ಹೆದರಿಕೆಯಿಂದ ಕೂಗಿಕೊಳ್ಳುತ್ತಾರೆ. ನಿಂತ ನೆಲ ಬಿರುಕು ಬಿಟ್ಟು ಈ ಮೂವರನ್ನು ಒಳಕ್ಕೆಳೆದುಕೊಂಡಿದೆ.

-------------------------------*******-------------------------

ಬೆಳಗಿನ ಜಾವ ಸೀತಜ್ಜ ಏಳುತ್ತಿದ್ದಂತೆ ತಲೆ ಭಾರವಾದಂತೆ ಅನಿಸುತ್ತದೆ, ಸೀತಜ್ಜನಿಗೆ ಬೆಳಗಿನ ಜಾವ ಎದ್ದಾಕ್ಷಣ ತಲೆ ಭಾರವಾಯಿತೆಂದರೆ ಆವತ್ತು ಏನೋ ಅವಗಡ ಸಂಭವಿಸುತ್ತದೆಯೆಂತಲೇ ಅವನ ಲೆಖ್ಖ, ತಕ್ಷಣ ಅವನಿಗೆ ತನ್ನ ಮೊಮ್ಮಕ್ಕಳು ಕ್ಷೇಮವಾಗಿದ್ದರೆ ಸಾಕೆಂದು ಅವರನ್ನು ನೋಡಲು ಕೋಣೆಗೆ ಹೋಗಿ ನೋಡುತ್ತಾನೆ, ಅಲ್ಲಿ ಮೂವರೂ ಇಲ್ಲದ್ದು ನೋಡಿ ಸೀತಜ್ಜನಿಗೆ ಭಯವಾಗಿ ಹೆಂಡತಿ ಮತ್ತು ಮಗಳನ್ನು ಕೂಗುತ್ತಾನೆ... ಅವರಿಬ್ಬರೂ ಗಾಬರಿಯಿಂದ ಏನಾಯಿತೆಂದು ಓಡಿ ಬರುತ್ತಾರೆ.. ಅವರಿಗೂ ಮಕ್ಕಳು ಇಲ್ಲದ್ದು ನೋಡಿ ತುಂಬಾ ಭಯವಾಗುತ್ತದೆ,ಮನೆಯ ಬಾಗಿಲು ತೆರೆದಿರುವುದನ್ನು ನೋಡಿ ಮಕ್ಕಳು ಬಂಗಲೆ ಮನೆಗೆ ಹೋಗಿ ಅಪಾಯ ತಂದುಕೊಂಡಿದ್ದಾರ ಅಥವಾ ಯಾರಾದರೂ ಮಕ್ಕಳನ್ನು ಅಪಹರಿಸಿದ್ದಾರಾ ಅಜ್ಜ ಅಜ್ಜಿ ಮತ್ತು ತಾಯಿಯ ಮನಸ್ಸು ಹಪಹಪಿಸುತ್ತದೆ.ಸುದಾರಿಸಿಕೊಂಡು ಸೀತಜ್ಜ ಮಗಳ ಹತ್ತಿರ ಅಳಿಯಂದರಿಗೆ ಪೋನ್ ಮಾಡಿ ಮಂತ್ರವಾದಿಯನ್ನು ಹಾಗೂ ಪೋಲೀಸರನ್ನು ಕರೆದುಕೊಂಡು ಬರುವಂತೆ ಹೇಳಲು ಹೇಳುತ್ತಾನೆ, ಏಕೆಂದರೆ ಸ್ಥಳೀಯ ಆರಕ್ಷರಿಗೆ ಪ್ರಾಣ ಭಯದಿಂದ ಇತ್ತ ಸುಳಿಯಲು ಹೆದರುತ್ತಾರೆ ಜೊತೆಗೆ ವೀರಭದ್ರ ಗೌಡರು ಕಟ್ಟಪ್ಪಣೆ ಮಾಡಿದ್ದಾರೆ ಯಾವುದೇ ಕಾರಣಕ್ಕೂ ಪೋಲೀಸರು ಊರಿನೊಳಗೆ ಪ್ರವೇಶ ಮಾಡಬಾರದೆಂದು.! ಎಷ್ಟಾದರೂ ಭೂತ ಪ್ರೇತವಿಲ್ಲವೆಂದರೂ ಮನಸ್ಸಿನಲ್ಲಿ ಊರಿನ ಘಟನೆಗಳನ್ನು ಕಣ್ಣಾರೆ ಕಂಡಿರುವುದರಿಂದ ಮಂತ್ರವಾದಿಯನ್ನು ಕರೆಸಬೇಕೆಂದು ಸೀತಜ್ಜನ ಮನಸ್ಸು ಬಯಸುತ್ತಿದೆ.ಊರವರು ಜೀವ ಭಯದಿಂದ ಯಾರೂ ಸಹಾಯಕ್ಕೆ ಬರುವುದಿಲ್ಲವೆಂದು ಯಾರಿಗೂ ತಿಳಿಸದೇ ಇರುವುದೇ ಒಳಿತು ಎನಿಸುತ್ತದೆ.
-------------------------------------------------*****------------------
ಬಂಗಲೆ ಮನೆಯ ನೆಲ ಮಾಳಿಗೆಯಲ್ಲಿ ಮೂವರೂ ಮಕ್ಕಳು ಬಂದಿತರಾಗಿದ್ದಾರೆ, ಅದು ವಿಶೇಷವಾದ ಎಲೆಕ್ಟ್ರಾನಿಕ್ ನಂಬರ್ ಲಾಕ್ ಹೊಂದಿದ ಕೊಠಡಿಯ ಕಂಬಿಗಳ ಒಳಗೆ ಬಂದಿಗಳಾಗಿದ್ದಾರೆ, ಅಲ್ಲಿ ಕಾಣುತ್ತಿರುವುದೇನು ದೃಶ್ಯ, ಅಲ್ಲಿ ಜನರು ಮದ್ದು ಗುಂಡುಗಳನ್ನು ತಯಾರಿಸುತ್ತಿದ್ದಾರೆ, ಅತ್ಯಾಧುನಿಕ ಮಾದರಿಯ ಬಂದೂಕುಗಳನ್ನು ತಯಾರಿಸಲಾಗುತ್ತಿದೆ, ವ್ಯವಸ್ಥಿತವಾದ ದೇಶ ದ್ರೋಹಿಗಳಿಗೆ ಬಂದೂಕು, ಮದ್ದು ಗುಂಡು ತಯಾರಿಸಿ ಮಾರುವ ವ್ಯವಸ್ಥಿತ ಜಾಲ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ಸಿಸಿಟಿವಿ ಕ್ಯಾಮರಾಗಳು ಹೊರಭಾಗದ ಜನರ ಚಲನವಲನಗಳನ್ನು ಗಮನಿಸಿ ಕಂಪ್ಯೂಟರಿನಲ್ಲಿ ದಾಖಲಿಸುತ್ತಿವೆ, ಅತ್ಯಾಧುನಿಕವಾದ ಸ್ಯಾಟಲೈಟ್ ಪೋನುಗಳನ್ನು ಬಳಸಲಾಗುತ್ತಿದೆ ಅನೇಕ ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕ ಸಾದಿಸಿ ಅವರಿಗೆ ಬೇಕಾದ ಮದ್ದು ಗುಂಡು, ಗ್ರಾನೇಡ್ ಗಳನ್ನು ಪೂರೈಕೆ ಮಾಡುವ ಕೆಲಸ ನಿರಂತರವಾಗಿ ನೆಡೆಯುತ್ತಿದೆ, ಕೆಲ ಶತಮಾನಗಳ ಕೆಳಗೆ ಈ ಊರು ನಾಡ ಬಂದೂಕು, ತೋಟಾ ಗುಂಡುಗಳನ್ನು ತಯಾರಿಸುತ್ತಿದ್ದುದರಿಂದ ಈ ಊರಿಗೆ ತೋಟಾಪುರ ಎನ್ನುವ ಹೆಸರು ಬಂದಿದೆ ಎನ್ನುವ ರಹಸ್ಯ ಈಗ ಬಯಲಾಗುತ್ತಿದೆ.

ಬೀರ ಕ್ಯಾಂಟೀನಿನಲ್ಲಿ ಚಹಾ ಹೀರುತ್ತಾ ದಿನ ಪರ್ತಿಕೆ ತೆಗೆದುಕೊಂಡು ಓದ ತೊಡಗುತ್ತಾನೆ, ಕಾಕತಾಳೀಯವೆಂಬಂತೆ ವಿಜಯವಾಣಿ ಎನ್ನುವ ದೈನಿಕ ಪತ್ರಿಕೆಯಲ್ಲಿ ವದಾಮುಂಬಯಿ ನಗರದಲ್ಲಿ ಬಾರ್ ನರ್ತಕಿಯ ಬರ್ಬರ ಕೊಲೆಯ ಸಚಿತ್ರ ಮಾಹಿತಿ ಪ್ರಕಟವಾಗಿದೆ.. ಬೀರನಿಗೆ ಕೊಲೆಯಾದವಳ ಮುಖವನ್ನು ಎಲ್ಲೋ ಹತ್ತಿರದಿಂದ ನೋಡಿದಂತೆ ಅನಿಸುತ್ತದೆ, ನಿಧಾನವಾಗಿ ಯೋಚಿಸಿದಾಗ ತಾನು ನೋಡಿದ ಮೋಹಿನಿಯ ಮುಖ ಮತ್ತು ಕೊಲೆಯಾದ ಬಾರ್ ನರ್ತಕಿಯ ಮುಖದಂತೆ ಇದೆ ಎನ್ನುವುದು ಸ್ಪಷ್ಟವಾಗುತ್ತದೆ.ಮುಂದಿನ ವರದಿಯನ್ನು ಓದುತ್ತಾ ಹೋಗುತ್ತಾನೆ, ಪೋಲೀಸರು ಅತಿಯಾಗಿ ಕುಡಿದು ಬರ್ಬರವಾಗಿ ಹತ್ಯೆ ಮಾಡಿದ ವ್ಯಕ್ತಿಯನ್ನು ಬಂದಿಸಿದ್ದಾರೆ ಆ ವ್ಯಕ್ತಿಯ ಹೆಸರು ಕಾಳ ತೋಟಾಪುರ ಎನ್ನುವುದು ತಿಳಿದು ಬಂದಿದೆ, ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನುವುದನ್ನು ಓದಿ ಬೀರನಿಗೆ ಕಣ್ಣ ಮುಂದೆ ವೀರಭದ್ರ ಗೌಡರ ಬಲಗೈ ಬಂಟ ಕಾಳನ ಚಿತ್ರ ಹಾದು ಹೋದಂತಾಗುತ್ತದೆ.
------------------------------------**********--------------------------------
ಇಷ್ಟೆಲ್ಲಾ ನೆಡೆಯುತ್ತಿರುವಾಗ ಸೀತಜ್ಜನ ಅಳಿಯ ರಾಜೇಶ್ ತನಗೆ ಪರಿಚಯದ ಪೋಲೀಸ್ ವರಿಷ್ಠ ಅದಿಕಾರಿಗೆ ದೂರವಾಣಿಯ ಮುಖಾಂತರ ಮಾತನಾಡಿ ತನ್ನ ಮಕ್ಕಳು ಕಾಣೆಯಾಗಿದ್ದಾರೆ, ಇದಕ್ಕೆ ಕಾರಣ ಊರಿನ ಗೌಡ ವೀರಭದ್ರನೇ ಎಂದು ಆವೇಶದಲ್ಲಿ ಕೂಗುತ್ತಾನೆ, ಆತನು ಮಾಡಿದ ಅವ್ಯವಹಾರಗಳನ್ನು ಮುಚ್ಚಿಡಲು ಇನ್ನುಮುಂದೆ ಸಹಾಯ ಮಾಡವುದಿಲ್ಲ ಎಂದಿದ್ದಕ್ಕೆ ನನ್ನ ಮಕ್ಕಳನ್ನು ಅಪಹರಿಸಿದ್ದಾನೆ, ಎಂದು ಬಾಯಿ ತಪ್ಪಿ ಹೇಳಿ ಬಿಡುತ್ತಾನೆ.

ಬಂಗಲೆ ಮನೆಯ ನೆಲಮಾಳಿಗೆಯಲ್ಲಿ ಒಬ್ಬ ರೌಡಿ ಈ ಮೂವರು ಮುಗ್ದ ಮಕ್ಕಳನ್ನು ಉದ್ದೇಶಿಸಿ ಹೇಳುತ್ತಾನೆ ಇವತ್ತು ನೀವು ನೋಡುವ ಸೂರ್ಯಾಸ್ಥ ನಿಮ್ಮ ಕೊನೆಯ ಸೂರ್ಯಾಸ್ಥವಾಗುತ್ತೆ, ರಾತ್ರಿ ಬಂದು ಇದೇ ಹರಿತವಾದ ಚಾಕುವಿನಿಂದ ಇರಿದು ಕೊಲ್ಲುತ್ತೇನೆ ಎಂದು ಹೇಳುತ್ತಾನೆ. ಬೆಳಗಿನ ಜಾವವಾದ್ದರಿಂದ ಈ ಮೂವರನ್ನು ಮಾತ್ರ ಹಾಗೆಯೇ ಬಿಟ್ಟು ಎಲ್ಲರೂ ಹೊರಟುಹೋಗುತ್ತಾರೆ, ಪುಟ್ಟಿ ಹೆದರಿಕೊಂಡು ಅಳುತ್ತಾಳೆ, ಸಮರ್ಥನಿಗೂ ಆ ರೌಡಿಯ ಮಾತು ಮತ್ತು ವಿಕಾರ ಮುಖ ಜೀವ ಭಯ ಹುಟ್ಟಿಸುತ್ತದೆ ಆದರೆ ಅಜಿತನಿಗೆ ಮಾತ್ರ ಹೆದರಿಕೆಯಾಗುತ್ತಿಲ್ಲ, ಅವನು ತಾವು ಪಾರಾಗಲು ಇರುವ ಸಮಯದ ಬಗ್ಗೆ ಯೋಚಿಸುತ್ತಾನೆ, ತಕ್ಷಣ ತನ್ನ ಮೊಬೈಲ್ ತೆಗೆಯುತ್ತಾನೆ, ಊಹೂಂ ಅಲ್ಲಿ ಮೊಬೈಲ್ ಜಾಮರುಗಳನ್ನು ಅಳವಡಿಸಿದ್ದಾರೆ ಯಾರಿಗೂ ಕರೆ ಮಾಡಲು ಅಸಾಧ್ಯ, ಆದರೆ ಮೊಬೈಲ್ ಸಾಧನ ಜೀವರಕ್ಷಕ ಸಲಕರಣೆಯಾಗಿ ಉಪಯೋಗಕ್ಕೆ ಬರುತ್ತಿದೆ, ಮೊಬೈಲ್ನಲ್ಲಿರುವ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಎನ್ನುವ ಅಪ್ಲಿಕೇಶನ್ ಆನ್ ಮಾಡುತ್ತಾನೆ ಅದು ಯಾವುದೇ ವಸ್ತುವಿನ ಮೇಲಿರುವ ಬೆರಳಗುರುತುಗಳನ್ನು ಓದಬಲ್ಲದು ಕ್ಯಾಮರಾದ ಸಹಾಯದಿಂದ ತಮ್ಮ ಕೊಠಡಿಯ ಹೊರಬಾಗದಲ್ಲಿರುವ ಎಲೆಕ್ಟ್ರಾನಿಕ್ ನಂಬರ್ ಪ್ಯಾಡಿನ ಚಿತ್ರವನ್ನು ಸೆರಿಹಿಡಿಯುತ್ತಾನೆ, ಅದು ಯಾವ ಯಾವ ನಂಬರಿನ ಮೇಲೆ ಬೆರೆಳ ಗುರುತುಗಳು ಮೂಡಿವೆಯೆಂದು ತೋರಿಸುತ್ತಿದೆ ಅದು 7394251 ನಂಬರುಗಳ ಮೇಲೆ ಬೆರಳಚ್ಚು ಮೂಡಿದೆ, ಊಹೂಂ ಎಷ್ಟೇ ಕಾಂಬಿನೇಶನ್ ಗಳನ್ನು ಮಾಡಿದರೂ ಡೋರ್ ಓಪನ್ ಆಗುತ್ತಿಲ್ಲ, ಈಗ ಅಜಿತ ಹತಾಶನಾಗಿ ಕುಳಿತು ಬಿಡುತ್ತಾನೆ. ತಂತ್ರಜ್ಞಾನವೊಂದನ್ನೆ ನಂಬಿಕೊಂಡರೆ ಆಗುವುದಿಲ್ಲವೆಂದು.
--------------------------------------------*****--------------------------------------ಪೋಲೀಸರು ಕಾಳನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಪೋಲೀಸರ ತರ್ಡ್ ಡಿಗ್ರಿ ಟ್ರೀಟ್ಮೆಂಟ್ ಆರಂಭವಾಗಿದೆ, ಬೂಟು ಕಾಲಿನಿಂದ ಒದೆಯುತ್ತಿದ್ದಾರೆ, ಯಾಕೆ ಕೊಲೆ ಮಾಡಿದೆ, ಯಾರೂ ಹೇಳಿದರು ಬೊಗಳು, ಇಲ್ದೆ ಹೋದ್ರೆ ಇಲ್ಲೇ ನಿನ್ನ ಹುಟ್ಲಿಲ್ಲ ಅನ್ನಿಸಿ ಬಿಡ್ತೀನಿ ಏ ಪಿ.ಸಿ 109 ಏರೋಪ್ಲೇನ್ ಹತ್ತಿಸೋ ಈ ಬೋ... ಮಗನನ್ನು ಎಂದು ಪೋಲೀಸರ ದರಿದ್ರವಾದ ಭಾಷೆಯಲ್ಲಿ ಹೇಳುತ್ತಿದ್ದನೆ... ನೋವು ತಾಳಲಾರದೆ ಕಾಳ ಬಾಯಿಬಿಡುತ್ತಾನೆ, ತೋಟಾಪುರದ ವೀರಭದ್ರ ಗೌಡರ ಅಪ್ಪಣೆಯಂತೆ ನಾನು ಅವಳನ್ನು ಮತ್ತೆ ತೋಟಾಪುರದಲ್ಲಿ ಮೋಹಿನಿಯಂತೆ ರಾತ್ರಿ ಹೊತ್ತು ಜನರನ್ನು ಹೆದರಿಸಬೇಕೆಂದು ಕರೆದುಕೊಂಡು ಹೋಗಲು ಬಂದಿದ್ದೆ ಅವಳು ಹತ್ತು ಲಕ್ಷ ಹಣ ಕೇಳಿದಳು, ಕೊಡದಿದ್ದಲ್ಲಿ ಪೋಲೀಸರಿಗೆ ಕಂಪ್ಲೆಂಟ್ ಕೊಡುತ್ತೇನೆಂದು ಹೆದರಿಸಲು ಬಂದಳು, ನಾನು ಕುಡಿದದ್ದು ಅತಿಯಾಗಿತ್ತು ನಶೆಯಲ್ಲಿ ಕೊಲೆ ಮಾಡಿದೆ ಎಂದು ಒಪ್ಪಿಕೊಳ್ಳುತ್ತಾನೆ, ಹಾಗು ತೋಟಾಪುರದಲ್ಲಿ ಬಂಗಲೆ ಮನೆಯಲ್ಲಿ ನೆಡೆಯುತ್ತಿರುವ ಕಳ್ಳ ದಂದೆಯ ವಿಚಾರವನ್ನು ಬಾಯಿ ಬಿಡುತ್ತಾನೆ.ಅವನನ್ನು ಹೆಚ್ಚಿನ ತನಿಖೆಗಾಗಿ ನಿಜ್ಮಂಗಳೂರು ಪೋಲೀಸರ ಸುಪರ್ದಿಗೆ ಕಳಿಸುತ್ತಾರೆ.

ಇತ್ತ ಸಮರ್ಥ ಕಂಬಿಗಳ ಹೊರಗಡೆ ನೋಡುತ್ತಾನೆ, ಅಲ್ಲಿ ಬೆಂಕಿ ಹತ್ತಿಕೊಂಡರೆ ಅಗ್ನಿ ಅವಗಡಗಳಿಂದ ತಪ್ಪಿಸಿಕೊಳ್ಳಲು ಪೈರ್ ಅಲರಾಮ್ ಸಿಸ್ಟಂ ಹಾಗು ಪೈರ್ ಎಕ್ಸಿಟ್ ಇರುವುದು ಕಣ್ಣಿಗೆ ಬೀಳುತ್ತದೆ, ಏನೋ ವಿಚಾರ ತಲೆಯಲ್ಲಿ ಹೊಳೆದಂತಾಗಿ ಮುಖದಲ್ಲಿ ಮಂದಹಾಸ ಮೂಡುತ್ತದೆ, ತನ್ನ ಬ್ಯಾಗಿನಲ್ಲಿದ್ದ ಲೈಟರನ್ನು ತೆಗೆಯುತ್ತಾನೆ, ಅಣ್ಣ ಮತ್ತು ತಂಗಿಯನ್ನು ಉದ್ದೇಶಿಸಿ ಹೇಳುತ್ತಾನೆ.. ನಾವು ಬದುಕಿಕೊಳ್ಳಲು ಕೊನೆಯ ಅವಕಾಶವಿದೆ, ನಮ್ಮ ರೂಂ ನ ಮೇಲೆ ಪೈರ್ ಸೆನ್ಸರ್ ಇದೆ ಅದಕ್ಕೆ ಬೆಂಕಿ ಅಥವಾ ಹೊಗೆ ಮುಟ್ಟಿದರೆ ಎಲ್ಲಾ ಡೋರ್ ಲಾಕ್ ಮತ್ತು ಪೈರ್ ಎಕ್ಸಿಟ್ ಗಳು ತೆರೆದುಕೊಳ್ಳಬಹುದು ಎಂದು ಹೇಳುತ್ತಾನೆ. ಈಗ ತನ್ನ ಬ್ಯಾಗಿನಲ್ಲಿದ್ದ ವಸ್ತುಗಳನ್ನು ಹೊರಗೆ ತೆಗೆದು ಬ್ಯಾಗಿಗೆ ಬೆಂಕಿ ಹೊತ್ತಿಸಿ ಸೆನ್ಸರ್ ಕಡೆಗೆ ಹಿಡಿಯುತ್ತಾನೆ... ಸೆನ್ಸರ್ ಪ್ರಾಮಾಣಿಕವಾಗಿ ತನ್ನ ಕೆಲಸ ಆರಂಬಿಸುತ್ತಿದೆ ಮೊದಲು ಕಂಪ್ಯೂಟರಿಗೆ ಕೊಠಡಿಯ ತಾಪಮಾನ ಏರುತ್ತಿರುವ ಬಗ್ಗೆ ಮುನ್ಸೂಚನೆ ನೀಡುತ್ತಿದೆ, ಈಗ ಕೊಠಡಿಯಲ್ಲಿ ಬೆಂಕಿ ಹೊತ್ತಿರುವುದನ್ನು ಖಚಿತ ಗೊಳಿಸಿಕೊಂಡು ಮಾಹಿತಿಯನ್ನು ಕಂಪ್ಯೂಟರಿಗೆ ಕಳುಹಿಸಿದೆ, ಕಂಪ್ಯೂಟರ್ ಪರದೆಯ ಮೇಲೆ ತೋರಿಸುತ್ತಿದೆ ಪೈರ್ ಅಲರಾಂ ಮತ್ತು ಎಮರ್ಜನ್ಸಿ ಎಕ್ಸಿಟ್ ಡೋರ್ ಲಾಕ್ಗಳನ್ನು ಅನ್ ಲಾಕ್ ಮಾಡಲಾಗುತ್ತಿದೆ ಇನ್ನು ೧೦ ಸೆಕೆಂಡುಗಳಲ್ಲಿ ಎಂದು ಕೌಂಟ್ ಡೌನ್ ಆರಂಭಿಸಿದೆ, ನಂತರ ದೊಡ್ಡದಾದ ಸೈರನ್ ನೊಂದಿಗೆ ಎಲ್ಲಾ ಕೊಠಡಿಯ ಭಾಗಿಲು ತೆರೆದುಕೊಳ್ಳುತ್ತಿದೆ... ಪೈರ್ ಎಕ್ಸಿಟ್ ಗಳು ತೆರೆದುಕೊಂಡಿವೆ. ಅಜಿತ ತಕ್ಷಣ ಕಂಪ್ಯೂಟರಗಳಲ್ಲಿ ಶೇಖರಿಸಲಾದ ಗುಪ್ತ ಮಾಹಿತಿಗಳನ್ನು ಸೈಬರ್ ಕ್ರೈಮ್ ವಿಭಾಗಕ್ಕೆ ಕಳಿಸುತ್ತಾನೆ.ಮೂವರು ಸುರಕ್ಷಿತವಾಗಿ ಬಂಗಲೆ ಮನೆಯಿಂದ ಹೊರಗೆ ಬಂದಿದ್ದಾರೆ.
------------------------------------------******-----------------------------------------

ಇವೆಲ್ಲಾ ಬೆಳವಣಿಗೆಗಳು ಕೆಲವೇ ಗಂಟೆಗಳಲ್ಲಿ ನೆಡೆದು ಹೋಗಿವೆ,ಪೋಲೀಸ್ ಇಲಾಖೆ ರಾಜೇಶನನ್ನು ಬಂದಿಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದೆ, ಸೈಬರ್ ಕ್ರೈಮ್ ವಿಭಾಗಕ್ಕೆ ಅಜಿತ ಕಳುಹಿಸಿದ ಮಾಹಿತಿ ತಲುಪಿದೆ, ನಿಜ್ಮಂಗಳೂರಿನ ಪೋಲೀಸ್ ತಂಡ ಬಂಗಲೆ ಮನೆಯನ್ನು ಸುತ್ತುವರೆದು ಮನೆಯನ್ನು ವಶಕ್ಕೆ ತೆಗೆದುಕೊಂಡಿದೆ ವೀರಭದ್ರ ಗೌಡನನ್ನು ಬಂದಿಸಿದ್ದಾರೆ, ಊರಿನಲ್ಲಿನ ಸಂಶಯಾಸ್ವದ ವ್ಯಕ್ತಿಗಳನ್ನು ಬಂದಿಸಿದ್ದಾರೆ, ಪೋಲೀಸ್ ಅದಿಕಾರಿ ಊರವರೆಲ್ಲರನ್ನು ಕರೆಯಿಸಿ ಅಜಿತ, ಸಮರ್ಥ ಹಾಗೂ ಸುನಯನ ಮೂರು ಜನ ಮಕ್ಕಳ ಸಾಹಸ ಮತ್ತು ಒದಗಿಸಿದ ಪುರಾವೆಯನ್ನು ಶ್ಲಾಘಿಸಿ, ವೀರಭದ್ರ ಗೌಡರ ಕಡೆಯವರ ಕೈವಾಡ ಇಂತದಕ್ಕೆಲ್ಲ ಹೆದರಬೇಡಿ, ಊರಿನಲ್ಲಿ ಯಾವುದೇ ಭೂತ ಪ್ರೇತವಿಲ್ಲ ಎಲ್ಲಾ ಎಂದು ಹೇಳುತ್ತಿರುವಾಗ ದೂರದಲ್ಲಿ ಬಿಳಿ ಸೀರೆಯುಟ್ಟ ಸುಂದರವಾದ ಯುವತಿ ನೆಡೆದು ಹೋದಂತೆ, ಕಾಲ್ಗೆಜ್ಜೆಯ ಸದ್ದು ಹತ್ತಿರದಲ್ಲೇ ಯಾರೋ ನೆಡುದುಹೋಗುತ್ತಿರುವಂತೆ ಭಾಸವಾಗುತ್ತದೆ, ತನ್ನದು ಭ್ರಮೆ ಎಂದು ಕೊಳ್ಳುತ್ತಿರುವಾಗಲೇ ನಾಯಿಗಳು ಊಳಿಡಲು ಆರಂಭಿಸುತ್ತದೆ, ಭೂತ ಪ್ರೇತಗಳು ಮೊದಲು ಕಾಣಿಸಿಕೊಳ್ಳುವುದು ನಾಯಿಗಳಿಗೆ ಎಂದು ಓದಿದ ನೆನಪಾಗುತ್ತದೆ, ಇದ್ದಕ್ಕಿದ್ದಂತೆ ದೂರದಲ್ಲಿರುವ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡು ಉರಿಯಲು ಆರಂಭಿಸುತ್ತದೆ.
ಇದು ಮುಕ್ತಾಯವಲ್ಲ ಆರಂಭ, ಇದು ಆರಂಭವಲ್ಲ ಮುಕ್ತಾಯ~! ಮುಗಿಯಿತು...