ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Monday, July 19, 2010

ಏನಿದು ಎಡೆ ಶೃಂಗಾರ?

     ನಾನು ಬ್ಲಾಗ್ ಮನೆಯ ಬಾಗಿಲು ತೆರೆಯದೇ ಅನೇಕ ತಿಂಗಳುಗಳೇ ಕಳೆದು ಹೋಗಿವೆ, ಮನೆಯ/ಮನದ ಅಂಗಳದೊಳಗೆ ಧೂಳು ಕಾಲಿಗೆ ಮೆತ್ತಿಕೊಂಡ ಅನುಭವ, ಸುತ್ತಲೂ ಜೇಡ ಬಲೆ ಹೆಣೆದ ಹಾಗೆ ಭ್ರಮೆಯೋ ವಾಸ್ತವವೋ ಗೊತ್ತಾಗುತ್ತಿಲ್ಲ!, ಈಗ ನಾನು ಮನೆ/ಮನದಂಗಳವನ್ನು ಚೊಕ್ಕವಾಗಿಸಿ, ದೂಳು ಜೇಡರ ಬಲೆಯನ್ನು ತೊಲಗಿಸಿ, ಹೊಸ ಹುಮ್ಮಸ್ಸಿನಿಂದ ನನ್ನ ಬ್ಲಾಗ್ ಮನೆಯ ಅಂಗಳಕ್ಕೆ ನಿಮ್ಮನ್ನು ಆಮಂತ್ರಿಸುತ್ತಿದ್ದೇನೆ, ಎಡೆ ಶೃಂಗಾರ ಎನ್ನುವುದರ ಬಗ್ಗೆ ಬರೆದಿದ್ದೇನೆ ಇಷ್ಟವಾಗಬಹುದು ಅನಿಸುತ್ತಿದೆ, ಓದಿ ನೋಡಿ

     ಎಡೆ ಶೃಂಗಾರ ಎನ್ನುವ ಪದ ಹಳ್ಳಿಗಳಲ್ಲಿ ಬಳಕೆಯಲ್ಲಿರುವುದು ಅದೂ ಅಲ್ಲದೆ ವಿಶೇಷವಾಗಿ ಕಾರ್ಯದ ಮನೆಯಲ್ಲಿ ಹೆಚ್ಚಿಗೆ ಬಳಕೆಯಲ್ಲಿರುವುದು ಅತ್ಯಂತ ಸಂತೋಷ ಕೊಡುವ ವಿಚಾರವಾಗಿದೆ. ಎಡೆ ಎಂದರೆ ಬಾಳೆ ಎನ್ನುವ ಅರ್ಥಕೊಡುತ್ತದೆ, ಶೃಂಗಾರ ಎಂದರೆ ಸಿಂಗರಿಸುವುದು, ಬಾಳೆ ಎಲೆಯನ್ನು ಸಿಹಿ ತಿನಿಸು ಹಾಗೂ ಪದಾರ್ಥಗಳಿಂದ ಶೃಂಗರಿಸುವುದನ್ನೇ ಎಡೆ ಶೃಂಗಾರ ಎನ್ನಬಹುದಾ? ,ಊಹೂಂ ಇಷ್ಟೇ ಹೇಳಿದರೆ ಇದೇನಿದು ಇಷ್ಟೇನಾ ಇದರಲ್ಲೇನು ವಿಶೇಷ ಅನ್ನಿಸಿಬಿಡುತ್ತದೆ, ಬಾಳೆ ಎಲೆಯಲ್ಲಿ ಉಪ್ಪು, ಉಪ್ಪಿನಕಾಯಿ ಹೀಗೆ ಒಂದೊಂದು ಪದಾರ್ಥಕ್ಕೂ ಒಂದೊಂದು ಜಾಗ ಮೀಸಲಾಗಿದೆ, (ಪದಾರ್ಥ ಎಂದರೆ ಅರ್ಥವಾಗದವರಿಗೆ ಅದೇ ಸೈಡ್ಸ್ ಕಣ್ರಿ ;)) ಅದು ಅಲ್ಲಲ್ಲಿ ಇದ್ದರೆ ಮಾತ್ರ ಎಡೆ ಶೃಂಗಾರ ಪೂರ್ಣಗೊಳ್ಳುತ್ತದೆ, ನೀವು ಬಾಳೆ ಎಲೆಯ ಮುಂದೆ ಕುಳಿತರೆ(ನಿಮ್ಮ ಮುಂದೆ ಬಾಳೆ ಎಲೆ ಇರುತ್ತದೆ!) ಬಾಳೆ ಎಲೆಯ ಮೇಲ್ತುದಿಯ ಎಡಭಾಗದಲ್ಲಿ ಮೊದಲು ಉಪ್ಪು, ಅದರ ಪಕ್ಕದಲ್ಲಿ ಉಪ್ಪಿನಕಾಯಿ, ಕೋಸಂಬರಿ, ಸಾಸಿವೆ(ಹಶಿ), ಪಲ್ಯ ಹೀಗೆ ಅಲಂಕಾರ ಮಾಡಲಾಗುತ್ತದೆ. ಚಿತ್ರಾನ್ನ ಬಾಳೆ ಎಲೆಯ ಕೆಳಗೆ ಎಡಭಾಗದಲ್ಲೇ ಹಾಕಬೇಕು ಅದರ ಮೇಲೆ ಇರುವ ಸ್ವಲ್ಪ ಖಾಲಿ ಜಾಗ ಕೇಸರಿ, ಜಿಲೀಬಿ ಮುಂತಾದ ಯಾವುದೇ ಸಿಹಿ ಪದಾರ್ಥ ಮಾಡಿದರೂ ಇದೇ ಜಾಗ ಖಾಯಂ, ಹಪ್ಪಳವನ್ನು ಚಿತ್ರಾನ್ನದ ಮೇಲೆ ಹಾಕುವುದು ವಾಡಿಕೆ, ಇನ್ನು ಪಾಯಸವನ್ನು ಮಾಡಿದ್ದರೆ ಅದಕ್ಕೆ ಈ ಜಾಗದಲ್ಲಿ ಸ್ಥಾನವಿಲ್ಲ, ಅದಕ್ಕೆ ಬಾಳೆ ಎಲೆಯ ಕೆಳ ಬಲಭಾಗದಲ್ಲಿ ತನ್ನ ಸ್ಥಾನವನ್ನು ಪಡೆದಿದೆ ಅದರ ಮೇಲ್ಭಾಗದಲ್ಲಿ ಪಂಚಕಜ್ಜಾಯ ತನ್ನ ಸ್ಥಾನವನ್ನು ಅಲಂಕರಿಸಿದೆ.


                                            (ಹೆಚ್ಚಿಗೆ ಚಿತ್ರಗಳನ್ನು ಹಾಕಲು ಸಾಧ್ಯವಾಗುತ್ತಿಲ್ಲ)

ನನಗೆ ಎಡೆ ಶೃಂಗಾರದ ಬಗ್ಗೆ ಬರೆಯುವ ವಿಚಾರ ಏಕೆ ಬಂತೆಂದರೆ ಸ್ವಲ್ಪ ದಿನದ ಹಿಂದೆ ಒಂದು ಕಾರ್ಯದ ಮನೆಗೆ ಹೋಗಿದ್ದೆ ಅಲ್ಲಿ ಎಡೆ ಶೃಂಗಾರ ಹಾಗು ಅಡಿಗೆ ಬಡಿಸಿದ ವಿಧಾನ ನೋಡಿ ಊಟ ಮುಗಿಸಿ ಎದ್ದರೆ ಸಾಕಪ್ಪಾ ಎನ್ನುವಷ್ಟರ ಮಟ್ಟಿಗೆ ಬೇಸರ ತರಿಸಿತು, ಬಡಿಸುವವರಿಗೆ ಎಲ್ಲೆಲ್ಲಿ ಯಾವ ಪದಾರ್ಥ ಹಾಕಬೇಕೆಂದು ಗೊತ್ತಿರಲಿಲ್ಲ, ಬರೀ ಅಷ್ಟೇ ಆಗಿದ್ದರೆ ಏನು ಆಗುತ್ತಿರಲ್ಲವೇನೋ.. ತಿನ್ನಲು ಸಮಯವೆಷ್ಟು ಕೊಡಬೇಕೆಂಬ ಅರಿವೆಯೇ ಇರದೇ ಒಂದಾದ ನಂತರ ಒಂದು ಪದಾರ್ಥ ತಂದು ಸುರಿಯುವುದನ್ನೇ ಬಡಿಸುವುದು ಎಂದುಕೊಂಡಿದ್ದರೇನೋ!, ಕಾರ್ಯದ ಮನೆಗಳಲ್ಲಿ ಅಡಿಗೆ ಮನೆ ಮೇಲ್ವಿಚಾರಣೆ ಮಾಡಲು ಮನೆಯ ಒಡೆಯನ ಹತ್ತಿರದ ಸಂಬಂದಿಕರಿಗೆ ವಹಿಸುವ ಪರಿಪಾಠ ಅನೇಕ ಕಡೆಗಳಲ್ಲಿದೆ, ಆ ಮೇಲ್ವಿಚಾರಣೆಗೆ ನೇಮಕವಾದ ವ್ಯಕ್ತಿಗೆ ಅನೇಕ ಜವಾಬ್ದಾರಿಗಳಿರುತ್ತವೆ, ಅನ್ನ ಎಷ್ಟು ಜನರಿಗೆ ತಯಾರಿಸಿದ್ದಾರೆ, ಎಷ್ಟು ಜನ ಬರುವ ನಿರೀಕ್ಷೆಯಿದೆ, ಏನೇನು ಅಡಿಗೆ ಭಟ್ಟರ ಬೇಡಿಕೆಗಳಿವೆಯೋ ಅವನ್ನೆಲ್ಲ(ಅಡಿಗೆ ಭಟ್ಟರು ಕೇಳಿದ್ದಕ್ಕಿಂತ ಸ್ವಲ್ಪ ಕಡಿಮೆ) ತಂದು ಕೊಡುವುದರಿಂದ ಹಿಡಿದು ಊಟ ಆರಂಭವಾದಗ ಯಾವ ಪದಾರ್ಥದ ನಂತರ ಏನು ಏನು ಬಡಿಸಲು ತೆಗೆದುಕೊಂಡು ಹೋಗಬೇಕೆಂದು ಹೇಳಬೇಕಾಗುತ್ತದೆ, ಅಂದರೆ ನಮ್ಮ ಮಲೆನಾಡಿನ ಹವ್ಯಕರ ಮನೆಗಳಲ್ಲಿ ಮೊದಲಿಗೆ ಅನ್ನ, ಸಾರು, ನಂತರ ಮತ್ತೆ ಅನ್ನ ಹುಳಿ (ಸಾಂಬಾರ) ಯನ್ನು ಬಡಿಸಿದ ನಂತರ ಹಪ್ಪಳ, ಸಂಡಿಗೆ, ಚಕ್ಕುಲಿ ಹೀಗೆ ಯಾವುದನ್ನು ಮಾಡಿರುತ್ತಾರೆ ಅದು ಬರಬೇಕು, ನಂತರ ಸಿಹಿ ತಿನಿಸುಗಳನ್ನು ಬಡಿಸುತ್ತಾರೆ, ಸಾಂಬಾರು(ಹುಳಿ) ಮುಗಿದು ಸಾಸಿವೆ ಬಂದ ಮೇಲೆ ಹಪ್ಪಳ ತಂದು ಹಾಕಿದರೆ ಅದು ಅಸಂಬದ್ಧವೆನಿಸುತ್ತದೆ, ಬಾಳೆಯಲ್ಲಿನ ಪದಾರ್ಥಗಳು ಖಾಲಿ ಆಗುತ್ತಾ ಬಂತೋ ಅಥವಾ ಇನ್ನೂ ಊಟ ಮಾಡುತ್ತಾ ಇದ್ದಾರೋ ನೋಡಿಕೊಂಡು ಬಡಿಸಬೇಕಾಗುತ್ತದೆ, ಅಂದರೆ ಸಾರು ಬಡಿಸಿದ ತಕ್ಷಣ, ಅದನ್ನು ತಿನ್ನಲೂ ಸಮಯ ಕೊಡದೆ ಮತ್ತೆ ಅನ್ನ ಸಾಂಬಾರು(ಹುಳಿ) ತಂದು ಸುರಿದರೆ ಊಟಕ್ಕೆ ಕುಳಿತವರ ಪಾಡೇನು?.

     ಇನ್ನು ಊಟ ಮಾಡುವಾಗ ಅನ್ನವನ್ನು ಎರೆಡು ಪಾಲುಗಳಾಗಿ ಮಾಡಿಕೊಂಡು ಬಲಭಾಗದ ಅನ್ನಕ್ಕೆ ಪದಾರ್ಥಗಳನ್ನು ಹಾಕಿಸಿಕೊಂಡು ಊಟ ಮಾಡುವ ಅಭ್ಯಾಸವೇ ಹವ್ಯಕರಲ್ಲಿ ಒಂದು ವಿಶೇಷವೇ ಸರಿ, ಒಂದು ಮದುವೆ ಮನೆಯಲ್ಲಿ ಬಡಿಸುವವರೊಬ್ಬರು ನಾನು ಪಾಲು ಮಾಡಿದ ಅನ್ನದ ಎಡಗಡೆಯ ಪಾಲಿಗೆ ಸಾಂಬಾರು ಸುರಿದಿದ್ದ, ನಾನು ಅವನನ್ನು ನೋಡಿ ನಕ್ಕಿದ್ದೆ, ಅವನಿಗೇನು ಅರ್ಥವಾಗಲಿಲ್ಲವೇನೋ! ನಾವು ಯಾವಾಗಲೂ ಬಲಗಡೆಯ ಅನ್ನದ ಪಾಲಿಗೆ ಪದಾರ್ಥಗಳನ್ನು ಹಾಕಿಸಿಕೊಂಡು ಊಟಮಾಡುತ್ತೇವೆ. ಕಾರಣ ಬಲಭಾಗದಲ್ಲಿರುವುದನ್ನು ಬಾಯಿಗೆ ಹಾಕಿಕೊಳ್ಳುವುದು ಬಲಗೈಗೆ ಸುಲಭ ಎನ್ನುವ ಕಾರಣವಾಗಿರಬಹುದು. ಹೀಗೆ ಹೇಳುತ್ತಾ ಹೋದರೆ ದೊಡ್ಡ ಪುರಾಣವಾದೀತು.ಹೇಳುವುದು ತುಂಬಾ ಉಳಿದು ಹೋ.........ಗಿದೆ, ಬರೆದಿದ್ದು ಅತಿಯಾಗಿ ಹೋಯಿತಾ ಏನೂ... ತಿಳಿಯದಾಗಿದೆ, ನಿಮ್ಮ ಮನದ ದನಿಯು ಕೇಳದಾಗಿದೆ ನಿಮಗನ್ನಿಸಿದ್ದು  ಬರೆಯಬಾರದೇ? ತಿಳಿಸುತ್ತೀರಿ ಅಲ್ವಾ.. ಕಾಯುತ್ತಿದ್ದೇನೆ ನಿಮ್ಮ ಅನಿಸಿಕೆಗಾಗಿ.ಕೊನೆಯ ಮಾತು: ಊಟದ ಸವಿಯನ್ನು ತಿಳಿಯಲು ಮಲೆನಾಡಿನ ಹಳ್ಳಿಗಳಿಗೆ ಬನ್ನಿ, ಪ್ರಕೃತಿಯ ಸೊಬಗನ್ನು ಕಣ್ದುಂಬಿಕೊಳ್ಳಿ, ಜೊತೆಗೆ ಅನೇಕ ಪ್ರವಾಸಿ ತಾಣಗಳನ್ನೂ ಸಹ ನೋಡಬಹುದಾಗಿದೆ. ಇದು ಕರ್ನಾಟಕ ಪ್ರವಾಸೋದ್ಯಮದ ಪರವಾಗಿ ನಿಮಗೆ ಕರೆಯೋಲೆ. ನಮ್ಮ ಪ್ರವಾಸೋದ್ಯಮ ಇಲಾಖೆ ಸರಿಯಾಗಿ ಕೆಲಸಮಾಡುತ್ತಿಲ್ಲ, ಪ್ರಚಾರ ಮಾಡುತ್ತಿಲ್ಲ ಎನ್ನುವ ದೂರುಗಳಿವೆ ಅದನ್ನು ಸುಳ್ಳಾಗಿಸೋಣ.