ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Saturday, December 29, 2012

ಹಳೆಯ ವರ್ಷ ಕಳೆಯುತ್ತಿದೆ, ಪ್ರಳಯ ಮುಂದೆ ಹೋಗಿದೆ, ಹೊಸ ವರ್ಷ ಬರುತ್ತಿದೆ

     ನನ್ನದೊಂದು ಬ್ಲಾಗ್ ಇದೆ ಅನ್ನೋದೆ ಮರೆತುಹೋಗುವಷ್ಟು ದಿನಗಳಾಗಿವೆ ಏನೂ ಬರೆಯದೆ.. ಪದೇ ಪದೇ ಅದೇ ರಾಗ ಅದೇ ತಾಳ ಅಂದ್ರಾ? ಹೂಂ ಒಂತರಾ ಹಾಗೇ ಅನ್ನಬಹುದೇನೊ... ಬರಹ ಪ್ಯಾಡಿನಲ್ಲಿ ಗೀಚಲೂ ಮನಸ್ಸಿಲ್ಲದ ಸಿಕ್ಕಾಪಟ್ಟೆ ಸೋಮಾರಿತನ...ವರುಷದ ಅಂತ್ಯಕ್ಕೆ ನಾವು ತಲುಪಿಯಾಗಿದೆ, ಇತ್ತೀಚಿನ ದಿನಗಳಲ್ಲಿ ದಿನಪತ್ರಿಗಳಲ್ಲೆಲ್ಲಾ ಬ್ಲಾಗ್ ಬರಹಗಳು ಮೂಡಿಬರುತ್ತಿವೆ..ಬ್ಲಾಗ್ ಗಳು ಎಂದರೆ ನಾಯಿಕೊಡೆಗಳು ಅನ್ನುವಷ್ಟರ ಮಟ್ಟಿಗೆ ತಾತ್ಸಾರ ಮಾಡುತ್ತಿದ್ದವರು ಬ್ಲಾಗ್ ಬರಹಗಳನ್ನು ಸಹ ಓದಿ(ಓದದೇ ಹೋದರೂ CTRL+C  CTRL+V ಒತ್ತುವಾಗಲಾದರೂ ಮೊದಲನೇ ಹಾಗೂ ಕೊನೆಯ ಸಾಲುಗಳನ್ನು ಓದಿರುತ್ತಾರಲ್ಲ) ಪತ್ರಿಕೆಗಳಲ್ಲಿ ಪ್ರಕಟಣೆ ಮಾಡುತ್ತಿದ್ದಾರಲ್ಲಾ ಅದು ತುಂಭಾ ಖುಷಿ ಕೊಟ್ಟ ಸಂಗತಿ...

ಆದರೆ ಬ್ಲಾಗ್ ಬರಹಗಳನ್ನು ಪ್ರಕಟಿಸಲು ಬ್ಲಾಗ್ ನ ಒಡೆಯರಿಗೆ ತಿಳಿಸಿ ಅವರ ಬರಹಗಳನ್ನ ಪ್ರಕಟಿಸುತ್ತಿದ್ದಾರ ಅಥವಾ ಬ್ಲಾಗ್ ಒಡೆಯರಿಗೆ ತಮ್ಮ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುವ ಬಗ್ಗೆ ಮಾಹಿತಿ ಇರುತ್ತದೆಯಾ, ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ, ಬ್ಲಾಗ್ ನಲ್ಲಿ ಬರೆಯುವವರಿಗೆ ಏನೂ ಗೊತ್ತಿಲ್ಲ ಸುಮ್ಮನೆ ಕಾಟಾಚಾರಕ್ಕೆ ಬರ್ಕೊತಾರೆ(ಬರೆಯುತ್ತಾರೆ ಅಲ್ಲ ಬರ್ಕೊತಾರೆ) ಅನ್ನುವ ಮನೋಭಾವ ದೂರವಾಗಿದೆ ಅನಿಸುತ್ತೆ... ಬ್ಲಾಗ್ ನಲ್ಲಿ ಬರೆಯುವವರು ಬೇರೆಯವರು ಓದಲಿ ಅಂತಲೇ ಪ್ರಕಟಿಸಿರುತ್ತಾರೆ, ಅನಿಸಿದ್ದೆಲ್ಲವನ್ನೂ ಹಂಚಿಕೊಂಡರೆ ಅದೊಂತರಾ ಆತ್ಮ ತೃಪ್ತಿ.. , ಸಂಪೂರ್ಣ ಹಕ್ಕು ನಮ್ಮದೇ... ಎಡಿಟರ್, ಸಬ್ ಎಡಿಟರ್, ಪ್ರೂಫ್ ರೀಡರ್ರು ಎಲ್ಲರೂ ನಮಗೆ ನಾವೇ( ನನ್ನದು ಫ್ರೂಫ್ ರೀಡಿಂಗ್ ಅಲ್ಲ ಬಿಡಿ, ತಪ್ಪುಗಳನ್ನು ಸರಿ ಮಾಡ್ಕೊಳಕ್ಕೆ ಆಗದಷ್ಟು ನನಗೆ ಗೊತ್ತಾಗದ ಕಣ್ತಪ್ಪುಗಳಿರುತ್ತೆ ನನ್ನ ಬರವಣಿಗೆಯಲ್ಲಿ.. ) ಇವೆಲ್ಲದರ ಮಿತಿ ಇದ್ದರೂ ಸಹ ಇಷ್ಟವಾದವರು ಅನಿಸಿಕೆ ತಿಳಿಸುತ್ತಾರಲ್ಲ ಅದು ಮತ್ತೊಂದು ಮಗದೊಂದು ಲೇಖನಗಳ ಬರೆಯಲು ಪ್ರೇರೇಪಿಸುತ್ತೆ,


     ಈ ಬಾರಿ ಮನೆಯಿಂದ ಹೊರಗೆ ಹೋಗಲಾಗದೇ ಇರುವಷ್ಟು ಜಿಟಿ ಜಿಟಿ ಮಳೆ ದೋ ಗುಡುವ ಮಳೆಯ ಆರ್ಭಟಗಳು ಇರಲೇ ಇಲ್ಲ, ಇಪ್ಪತ್ನಾಲಕ್ಕು ಘಂಟೆಗಳು ಕಿಟಿ ಕಿಟಿ ಮಳೆ ಹೊಯ್ದು ಕಾಡುತ್ತಿದ್ದ ವರುಣ ಈ ಭಾರಿ ಬರೀ ಕೆಲವು ಘಂಟೆಗಳ ಮಳೆ ಬರಿಸಲಷ್ಟೇ ಶಕ್ತನಾಗಿದ್ದಾನೆ, ಇದೆಲ್ಲಾ ಪ್ರಳಯದ ಮುನ್ಸೂಚನೆಯಾ ಅನಿಸಿತ್ತು?? ಟೀವಿಯಲ್ಲಿ ಪ್ರಳಯದ ಡೇಟ್ ಯಾವುದು ಅಂತ ಎಲ್ಲಾ ಟೀವಿ ಚಾನಲ್ ಗಳ ಆಸ್ಥಾನ( ಟೀವಿ ಚಾನಲ್ ನವರಿಗೊಬ್ಬೊಬ್ಬ ಖಾಯಂ ಜೋತಿಷಿಗಳಿದ್ದಾರೆ) ಜೋತಿಷಿಗಳು ಪ್ರಳಯದ ಎಕ್ಸ್ಯಾಕ್ಟ್ ಡೇಟ್! ಪ್ರಿಡಿಕ್ಟ್ ಮಾಡಿಯಾಗಿತ್ತು, ವರುಷದ ಅಂತ್ಯವಾಗುತ್ತಿದೆ ಆದರೆ ಪ್ರಳಯವಾಗಿ ಮಾನವ ಕುಲದ ಅಂತ್ಯ ಆಗಲೇ ಇಲ್ಲ, ಆಗಿದ್ದರೆ ಪ್ರಳಯದ ಬಗೆಗೆ ಬರೆಯಲು ಅದನ್ನು ಓದಲು ಯಾರೂ ಇರುತ್ತಲೇ ಇರಲಿಲ್ಲ.


ಹೊಸ ವರ್ಷಕ್ಕೆ ಇನ್ನು ಎರಡೇ ದಿನಗಳು ಬಾಕಿ ಉಳಿದಿದೆ, ಮುಂಚಿತವಾಗಿ ಎಲ್ಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.

Saturday, March 10, 2012

ಅನಿಸಿದ್ದು, ತೋಚಿದ್ದು ಗೀಚಿದ್ದು ಹಾಗೇ ಸುಮ್ಮನೆ.....

ನಾನು ಬ್ಲಾಗ್ ನಲ್ಲಿ ಬರೆಯೋದನ್ನು ಬಿಟ್ಟು ಬಿಟ್ಟೆನಾ, ಮರೆತು ಹೋಗಿದೆಯಾ.. ಬರೆಯಬೇಕು, ಬರವಣಿಗೆ ಪುನಃ ಆರಂಭವಾಗಬೇಕು, ಅದೇ ಲಯ ಇದೆಯಾ, ಅಥವಾ ಅಕ್ಷರ, ಪ್ರಾಸಗಳು, ಪದ ಪುಂಜಗಳು ಹೊಳೆಯದೇ ತಡವರಿಸುತ್ತದೆಯಾ ಮನಸ್ಸು, ಹೀಗೆಲ್ಲಾ ಪ್ರಶ್ನೆಗಳು ನನ್ನ ಕಾಡ ತೊಡಗಿತು...ಚಿತ್ರಕ್ಕ ಹೇಳಿದಂತೆ ಬರವಣಿಗೆಯ ಇಳಿಕೆಯ ಕಾಲವಾ ಎಂದು ಯೋಚಿಸಿದರೆ ನಾನು ಬರವಣಿಗೆಯ ಉತ್ತುಂಗಕ್ಕೆ ಏರಲೇ ಇಲ್ಲ, ಟೈಮ್ಲೀ ಅಪ್ಡೇಟುಗಳು ಅಂತ ಆಗಲಿ, ವಾರಕ್ಕೊಂದು ಲೇಖನ ಅಂತಲೋ, ಈ ತಿಂಗಳು ಬರೆಯಲೇ ಬೇಕು ಅಂತಲೋ ಒಂದು ಕಟ್ಟುನಿಟ್ಟಾದ ಅಲಿಖಿತ ಶರತ್ತನ್ನು ಸಹ ವಿಧಿಸಿಕೊಂಡವನಲ್ಲ, ಅದು ನನ್ನಿಂದ ಸಾಧ್ಯವಿಲ್ಲವೆಂದು ನನಗೇ ಗೊತ್ತು.

     ಮುಂಚೆಯಾದರೆ ಸ್ನೇಹಿತರು ಬ್ಲಾಗಲ್ಲಿ ಏನಾದರೂ ಬರೆದಿದ್ದೀಯ ಕೇಳುತ್ತಿದ್ದರು, ಈಗ ಅವರೆಲ್ಲರಿಗೂ ಮನದಟ್ಟಾಗಿ ಹೋಗಿದೆ, ಇವನು ಹೇಳಿದ ತಕ್ಷಣ ಬರೆಯುವವನಲ್ಲ ಎಂದು. ನನ್ನ ಬ್ಲಾಗ್ ಇದೇ ಅನ್ನೋದೆ ಮರೆತು ಹೋಗುವಷ್ಟು ದಿನಗಳಾಗಿ ಹೋಗಿದೆ, ಬ್ಲಾಗ್ ಖಾಲಿ ಬಿಟ್ಟು... ಅದೇ ಹಳತಾದ ಪೋಸ್ಟನ್ನೇ ನೋಡಿ ನೋಡಿ ಅನೇಕರಿಗೆ ಬೇಸರ ಬಂದಿರಬಹುದು, ಇದೊಂದು ಅಪ್ಡೇಟಾಗದ ಬ್ಲಾಗ್ ಇರಬೇಕು ಎಂದು ಅನ್ನಿಸಿರಲು ಸಾಕು,

     ಏನಾದರೂ ಬರೆಯೋಕು ಸಹ ಮೂಡ್ ಅನ್ನೋದು ಬೇಕು.. ಮೂಡ್ ಇಲ್ಲದೇ ಯಾವ ಕೆಲಸ ಮಾಡಿದರೂ ಅದು ತೃಪ್ತಿದಾಯಕವಾಗಲು ಸಾಧ್ಯವೇ ಇಲ್ಲ, ನನಗೇ ಅನ್ನಿಸಬೇಕು ಬರೆಯಬೇಕು ಎಂದು ಅಲ್ಲಿಯ ತನಕ ಒತ್ತಾಯಕ್ಕೋ ಬರೆಯಬೇಕಲ್ಲಾ ಎಂದು ಬರೆದ ಬರವಣಿಗೆಯಲ್ಲಿ ಸತ್ವದ ಕೊರತೆ ಇದ್ದೇ ಇರುತ್ತದೆ,...

     ಹಾಗೇ ಸುಮ್ಮನೆ ಅಂತ ನನ್ನ ಬ್ಲಾಗ್ ಆಗಿರೋದರಿಂದ ಹಾಗೇ ಸುಮ್ಮನೆ ಅನ್ನಿಸಿದ್ದೆಲ್ಲವನ್ನೂ ಹಾಗೇ ಬರೆದುಬಿಡಬೇಕು ಅಂತ ಕುರ್ಚಿಗೆ ಒರಗಿಕೊಂಡು ಬೆರಳುಗಳಿಗೆ ಕೆಲಸ ಕೊಡಲು ಆರಂಬಿಸಿದ್ದೇನೆ

     ಅಂತರ್ಜಾಲ ವ್ಯವಸ್ಥೆಯಿಂದ ಎಲ್ಲವೂ ಕುಳಿತಲ್ಲಿಯೇ ಮಾಡಬಹುದು... ಆದರೆ ಕೆಲವು ಸಾರಿ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಅದರಲ್ಲಿಯೂ ಸಹ ಅನೇಕ ಕುಂದು ಕೊರತೆಗಳಿವೆ ಅನಿಸಿದ್ದಕ್ಕೂ ಸಕಾರಣವಿದೆ, ಫೋನ್ ಬಿಲ್ಲುಗಳನ್ನು ಮನೆಯಲ್ಲಿ ಕುಳಿತೇ ಕಟ್ಟಿಬಿಡಬಹುದು, ಅದ್ಬುತ! ಕುಳಿತಲ್ಲಿಯೇ ಕಷ್ಟಪಡದೇ ಎಲ್ಲಾ ಕೆಲಸ ಮಾಡಿಬಿಡಬಹುದು ಎಂದು ನಾನು ಹಲವು ಬಾರಿ ನೆಟ್ ಬ್ಯಾಂಕಿಂಗ್ ಮುಖಾಂತರ ಕಟ್ಟಿದ್ದೆ. ಮುಂದಿನ ಬಿಲ್ಲಿನಲ್ಲಿ ಶೇಕಡಾ ೧ರಷ್ಟು ರಿಯಾಯಿತಿ ಬೇರೆ, ಯಾರಿಗುಂಟು ಯಾರಿಗಿಲ್ಲ ಎಂದು ಖುಷಿ ಪಟ್ಟಿದ್ದಿದೆ, ಸರಿಯಾಗಿದ್ದರೆ ಎಲ್ಲಾ ಸೌಲಭ್ಯ ಬಳಸಿಕೊಳ್ಳಬಹುದು.. ಆದರೆ ಕಟ್ಟಿದ ಬಿಲ್ಲು ಸಹ ಕಟ್ಟಿಲ್ಲವೆಂದು ಮುಂದಿನ ಬಿಲ್ಲಿನಲ್ಲಿ ಬಂದಾಗ ಅದನ್ನು ಸರಿ ಮಾಡಿಸಲು ಮತ್ತೆ ಅಲೆಯಬೇಕಲ್ಲಾ ಅದಕ್ಕಿಂತ ಕ್ಯೂನಲ್ಲಿ ನಿಂತು ಬಿಲ್ಲು ಕಟ್ಟಿ ಅಧಿಕೃತ ರಶೀದಿ ಪಡೆಯುವುದೇ ಪರಮ ಸುಖ ಅನ್ನಿಸಿಬಿಡುತ್ತೆ.

     ತಂತ್ರಜ್ಞಾನ ಎಷ್ಟೇ ಮೈಲುಗಲ್ಲುಗಳನ್ನು ದಾಟಿ ಬೆಳೆದರೂ ಜನರ ಯೋಚನಾ ಲಹರಿಯೇನು ಬದಲಾವಣೆಯಾಗಿಲ್ಲ ಅನಿಸಿಬಿಟ್ಟಿದೆ, ಉದಾಹರಣೆಗೆ ಯಾರನ್ನಾದರೂ ಮೊಬೈಲ್ ನಲ್ಲಿ ಎಸ್ ಎಂ ಎಸ್ ಮಾಡಿ ಯಾವುದಾದರೂ ಮದುವೆ ಅಥವಾ ಇನ್ಯಾವುದೋ ಶುಭ ಸಮಾರಂಭಕ್ಕೆ ಬನ್ನಿ ಎಂದು ಕಳುಹಿಸಿ ನೋಡಿ, ನೂರಕ್ಕೆ ತೊಂಬತ್ತು ಜನ ಬರುವುದಿಲ್ಲ.. ಉಚಿತ ಮೆಸೇಜ್ ಇದೆ ಎಂದು ಕಳುಹಿಸಿದ್ದಾರೆ ಎಂದು ಯೋಚಿಸುವವರೇ ಹೆಚ್ಚು, ಇನ್ನು ಇಮೇಲ್(ಮಿಂಚಂಚೆ) ನಲ್ಲಿ ಮಂಗಳ ಪತ್ರಿಕೆಯ ಸ್ಕ್ಯಾನ್ ಪ್ರತಿಯೊಂದಿಗೆ ಶುಭ ಕಾರ್ಯಕ್ಕೆ ಆಮಂತ್ರಣ ಕಳುಹಿಸಿದರೆ, ಏನು ಯೋಚನೆ ಮಾಡಬಹುದು?.. ಅದು ಸ್ಪ್ಯಾಮ್ ಲೆಖ್ಖಕ್ಕೆ ಬರುತ್ತದೆಯಂತೆ! ಎಲ್ಲರಿಗೂ ಕಳುಹಿಸಿದ್ದಾರೆ ಇದೊಂದು ಕರೆಯವಾ? ಇಡೀ ಲೀಸ್ಟಿಗೆ ಕಳುಹಿಸಿದ್ದಾರೆ ಉಹೂಂ ಇದಕ್ಕೆ ಬೆಲೆಯಿಲ್ಲವಂತೆ? ಒಬ್ಬರಿಗೆ ಕಳುಹಿಸಿದ್ದು ಮತ್ತೊಬ್ಬರಿಗೆ ಹೋಗಿದೆ ಎಂದು ಗೊತ್ತಾಗಬಾರದಂತೆ! ಅದಕ್ಕೆ To CC BCC ಅಂತಿರೋದು ಅಂತಾರೇನೋ.. ಲೀಸ್ಟ್ ತಯಾರಿಸುವುದು ನನ್ನಂತವನಿಗೆ ಕಷ್ಟದ ಕೆಲಸವೇ ಹೌದು, ಏಕೆಂದರೆ ಸೋಶಿಯಲ್ ನೆಟ್ ವರ್ಕಗಳಿಗೆ ಬೇರೆಯ ಮಿಂಚಂಚೆ ಮಾಡಿಕೊಂಡ ನನಗೆ ಅಲ್ಲಿಂದ ನನ್ನ ಸ್ವಂತ ಮಿಂಚಂಚೆ ವಿಳಾಸಕ್ಕೆ ಒಬ್ಬೊಬ್ಬರ ಮಿಂಚಂಚೆ ವಿಳಾಸ ಹುಡುಕಿ ಅವನ್ನೆಲ್ಲಾ ಒಂದುಕಡೆ ಬರೆದಿಟ್ಟುಕೊಂಡು ಮತ್ಯಾರದ್ದಾದರೂ ಬಿಟ್ಟುಹೋಗಿದೆಯಾ ನೋಡಿಕೊಳ್ಳಬೇಕು, ಅದೂ ಅಲ್ಲದೆ ಇಂಟರ್ನೆಟ್ ಸಹ ಆಮೆ ವೇಗದ್ದೇ ಆಗಿರೋದ್ರಿಂದ ಈ ಮೇಲು ಹೋಯ್ತೋ ಇಲ್ಲವೋ ಅಂತ ನೋಡಿಕೊಳ್ಳಬೇಕು, ಲೀಸ್ಟಿಗೆ ಕಳುಹಿಸಿದ್ದಾಯ್ತಲ್ಲಾ ಅಂತ ಸುಮ್ಮನಿರಲು ಸಾಧ್ಯವಾ ಅದೂ ಇಲ್ಲ, ಮಿಂಚಂಚೆ ಕಿಂಚಿತ್ ಬೆರಳ್ತಪ್ಪಿನಿಂದ ಮುದ್ರಿತವಾಗಿದ್ದರೆ ಸೀದಾ ವಾಪಸ್ಸು ಬಂದು ಬಿದ್ದಿರುತ್ತದೆ ಡೆಲಿವರಿ ಪೇಲ್ಡ್ ಅಂತ ಅದು ಯಾವ ವಿಳಾಸ ನೋಡಿಕೊಳ್ಳಬೇಕು, ಒಬ್ಬೊಬ್ಬರಿಗೆ ಬೇರೆ ಬೇರೆಯಾಗಿ ಮಿಂಚಂಚೆ ಮಾಡುತ್ತಾ ಕುಳಿತಿದ್ದರೆ ಮುದುವೆ ಮಂಟಪಕ್ಕೆ ಹೋಗುವ ತನಕವೂ ಕಂಪ್ಯೂಟರಿನ ಮುಂದೆ ಕುಳಿತು ಬಿಡಬೇಕಿತ್ತೇನೋ.... ಮದುವೆಯಂತ ಕಾರ್ಯಕ್ರಮಗಳಲ್ಲಿ ಅತಿ ಮುಖ್ಯವಾದವರನ್ನೇ ಕರೆಯಲು ಮರೆತುಹೋಗುವಂತಹದ್ದೂ ಸಹ ಇಲ್ಲೆವೆಂದಿಲ್ಲ. ಇನ್ನು ಕೆಲವು ಕಡೆ ಫೋನ್ ನಲ್ಲಿ ಕರೆದರೂ ಬಾರದವರಿದ್ದಾರೆ, ಫೋನಲ್ಲಿ ಕರದಿದ್ದಾರೆ, ನಮಗೇನು ಬೆಲೆಯೇ ಇಲ್ಲವಾ , ಫೋನ್ ನಲ್ಲಿ ಕರೆಯೋದೊಂದು ಅಕ್ಷಮ್ಯ ಅಪರಾಧ, ಮನೆಗೇ ಬಂದು ಕರೆಯಬೇಕಾಗಿತ್ತು ಎನ್ನುವುದು ಅವರ ಆಕ್ಷೇಪಣೆ.

     ಸೌಲಭ್ಯಗಳಿರುವುದೇ ಬಳಸಿಕೊಳ್ಳುವುದಕ್ಕಾಗಿ, ಈಮೇಲ್ ಚಾಟ್ ಗಳು ಇನ್ನೂ ಹರಟೆಗಷ್ಟೇ ಸೀಮಿತವಾಗಿರುವುದೇ ವಿಪರ್ಯಾಸ, ಶುಭ ಕಾರ್ಯಗಳ ಮಂಗಳ ಪತ್ರ(ಇನ್ವಿಟೇಶನ್) ಲಗತ್ತಿಸಿ ಕಳುಹಿಸಿದರೇ ಅದೂ ಸಹ ನೇರವಾಗಿ ಕರೆಯೋಲೆ ಕೊಟ್ಟಂತೆ ಅಲ್ಲವಾ? ಮೊಬೈಲ್ ಮೆಸೇಜಿಗೂ ಸಹ ಕಾಲ್ ನಷ್ಟೇ ಮಹತ್ವವಿಲ್ಲವಾ? ಮೆಸೇಜು ಸಹ ಅದೇ ವ್ಯಕ್ತಿಯ ಮೊಬೈಲಿನಿಂದ ಬಂದಿದ್ದು ಅಂದ ಮೇಲೆ ಅದು ಸಹ ಅದಿಕೃತವೇ ಅಲ್ಲವೇ? ಪ್ರತಿಯೊಬ್ಬರನ್ನೂ ಮನೆಗೇ ಹೋಗಿ ಕರೆದಾಗಲೂ ಅವರಿಲ್ಲವೆಂದು ಮತ್ತೆ ಮತ್ತೆ ಮೂರ್ನಾಲ್ಕು ಭಾರಿ ಕರೆಯುವುದು ಸಾಧ್ಯವಾ? ಮನೆಗೆ ಪತ್ರಿಕೆ ಕೊಟ್ಟಿದ್ದಾರೆ ತಾನು ಬರುವ ತನಕ ಕಾಯಬೇಕಿತ್ತು ಅನ್ನುವುದು ಎಷ್ಟು ಸರಿ.ಎಲ್ಲವೂ ಕಲ್ಪಿಸಿಕೊಂಡೂ ಬರೆದದ್ದಲ್ಲ, ಅನುಭವಕ್ಕೆ ಬಂದವುಗಳೇ ಆಗಿವೆ. ಆಗಿದ್ದೆಲ್ಲವೂ ಒಳ್ಳೆಯದಕ್ಕೆ ಎಂದು ಸುಮ್ಮನಾಗೋದೆ ಒಳ್ಳೇದೇನೋ ಅನಿಸಿಬಿಡುತ್ತೆ.

ಹಾಂ ನಾಳೆ ಅಂದರೆ ಮಾರ್ಚ 11ಕ್ಕೆ ನನ್ನ ಮಗಳು "ನಿಧಿ"ಯನ್ನು ಮೊದಲಬಾರಿಗೆ ಮನೆಗೆ ಕರೆದುಕೊಂಡು ಬರುತ್ತಿದ್ದೇನೆ ಅವಳ ಅಜ್ಜನ ಮನೆಯಿಂದ, ನಿಮ್ಮೆಲ್ಲರ ಹಾರೈಕೆ ಬೇಕು ಅವಳ ಮೇಲೆ, ಮಕ್ಕಳಂದ ತಕ್ಷಣ ಎಷ್ಟು ಖುಷಿ ಇರುತ್ತೆ... ಈಗಂತೂ ಚಂದ ಚಂದದ ಬಟ್ಟೆಗಳನ್ನು ತೊಡಿಸಿ ಸಂತೋಷ ಪಡಬಹುದು... ಸಮಯ ಹೋದದ್ದೆ ಗೊತ್ತಾಗೋದಿಲ್ಲ... ಮಕ್ಕಳ ಜೊತೆಯಲ್ಲಿ ನಾವು ಸಹ ಚಿಕ್ಕವರಾಗಬಹುದೇನೋ.. ಸಿರಸಿಯಲ್ಲಿ ಜಾತ್ರೆ ಆರಂಭವಾಗಿದೆ, ಮಗಳಿಗೆ ಆಟಿಕೆ ತರುವ ನೆಪದಲ್ಲಿ ಸುತ್ತಿ ಬರಬಹುದೇನೋ ಅನ್ನಿಸುತ್ತಿದೆ, ಅಂತೆಯೇ ಅಂಗಡಿಗಳಲ್ಲಿರುವ ಕಾರು ಬೈಕು ಇಮಾನ, ಹೂಂ ವಿಮಾನ ಅಲ್ಲ ಇಮಾನನೇ ಅದು, ಎಲ್ಲವನ್ನೂ ತರಬೇಕು.... ಬನ್ನಿ ಸಿರಸಿ ಜಾತ್ರೆ ಒಂದು ಸುತ್ತು ಸುತ್ತಾಡಿ ಬರೋಣ ಏನಂತೀರಾ........