ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Friday, December 31, 2010

ಗುಝಾರಿಶ್(Guzaarish) -ಇದು ಬಿಡುಗಡೆಯ ಬೇಡಿಕೆ, ಒಮ್ಮೆ ಚಿತ್ರ ನೋಡಿ ಎಂಬ ನನ್ನ ಗುಝಾರಿಶ್

ಗುಝಾರಿಶ್, ಸಂಜಯ್ ಲೀಲಾ ಬನ್ಸಾಲಿಯವರ ಮತ್ತೊಂದು ಕಲಾತ್ಮಕ ಚಿತ್ರ, ಗುಝಾರಿಶ್ ಎಂದರೆ ಬೇಡಿಕೆ ಅಥವಾ ಕೋರಿಕೆ ಎನ್ನುವ ಅರ್ಥ ಕೊಡುತ್ತದೆ ಅದು ಹೃತಿಕ್ ರೋಷನ್ ನ ಕಣ್ಣುಗಳಲ್ಲಿಯೇ ವ್ಯಕ್ತಾವಾಗಿ ಹೋಗುತ್ತೆ.

ಇದೊಂದು ಸಂಜಯ್ ಲೀಲಾ ಬನ್ಸಾಲಿಯವರ ದೃಶ್ಯಕಾವ್ಯ ಎಂದರೆ ತಪ್ಪಾಗಲಾರದು, ಇಲ್ಲಿ ಪಾತ್ರದ ಭಾವನೆಗಳಿಗೆ ಹೆಚ್ಚಿನ ಮಹತ್ವವಿದೆ, ಅದ್ಯಾಕೋ ಗೊತ್ತಿಲ್ಲ ಇಂದ್ರಜಾಲ ಅಥವಾ ಮ್ಯಾಜಿಕ್ ಶೋ ಗಳು ನನಗೆ ತುಂಬಾ ಇಷ್ಟವಾಗಿಬಿಡುತ್ತದೆ, ಕಣ್ಣು ಇಷ್ಟೆಲ್ಲಾ ಮೋಸ ಹೋಗುತ್ತಲ್ಲಾ ಅಂತಲೂ ಇರಬಹುದೇನೋ? ಅದೇನೋ ಒಂತರಾ ಖುಷಿ.

ಕಥಾನಾಯಕ ಈಥನ್ ಮಾಸ್ಕರೇನಸ್ (ಹೃತಿಕ್ ರೋಷನ್), ಒಂದು ಕಾಲದಲ್ಲಿ ಅದ್ಬುತ ಇಂದ್ರಜಾಲಿಗನಾಗಿ ಹೆಸರುಗಳಿಸುತ್ತಾನೆ, ಅದನ್ನು ಸಹಿಸದ ಆತನ ಗೆಳೆಯೆನೊಬ್ಬ ಈಥನ್ ನ ಅತಿ ಜನಪ್ರಿಯ ಕಾಂಡಲ್ ಲೈಟ್ ಟ್ರಿಕ್ ನಲ್ಲಿ ಗಾಳಿಯಲ್ಲಿ ತೇಲುತ್ತಿರುವಾಗ ಕ್ರೇನ್ ನ ತಂತಿಯನ್ನು ಕತ್ತರಿಸುವಂತೆ ಮಾಡಿ ಈಥನ್ ನ ಬೆನ್ನು ಮೂಳೆಗೆ ಪೆಟ್ಟು ಬಿದ್ದು ಪ್ಯಾರಲೈಸ್(ಪಾರ್ಶ್ವವಾಯು) ಆಗುವಂತಹ ಕ್ರೂರ ಕೃತ್ಯವನ್ನೆಸಗುತ್ತಾನೆ.ಈಥನ್ ಬೀಳುವ ದೃಶ್ಯ ಕಣ್ಣು ಮಂಜಾಗಿಸುತ್ತದೆ, ಕುತ್ತಿಗೆಯ ಮೇಲ್ಬಾಗ ಮಾತ್ರವೇ ಸ್ಪರ್ಶ ಜ್ಞಾನ ಮತ್ತು ಚಲಿಸಲು ಸಾಧ್ಯವಾಗುತ್ತದೆ, ಹೃತಿಕ್ ನ ಆಕರ್ಷಕ ಬಿಳಿ ಕಣ್ಣು ದೃಶ್ಯಕ್ಕೆ ಇನ್ನೊಂದಿಷ್ಟು ಭಾವನೆಗಳನ್ನು ತುಂಬಿದೆ ಅನ್ನಿಸುತ್ತೆ ಇಡೀ ಚಿತ್ರದ ಛಾಯಾಗ್ರಹಣ ಅದ್ಬುತ.

     ಬದುಕಿ ತೋರಿಸಬೇಕೆಂಬ ಛಲದಿಂದ ಹನ್ನೆರೆಡು ವರ್ಷಗಳನ್ನು ಕಳೆಯುವ ಈಥನ್ ಗೆ ನರ್ಸ್ ಆಗಿ ತೆರೆಯ ಮೇಲೆ ಆವರಿಸಿಕೊಳ್ಳುವುದು ಸೋಫಿಯಾ ಎನ್ನುವ ಚಲುವೆ, ಬರೀ ಚಲುವೆಯಲ್ಲ ಹಿಂದಿಚಿತ್ರರಂಗದ ಮೇರುತಾರೆ ಬಚ್ಚನ್ ಕುಟುಂಬದ ಸೊಸೆ ಐಶ್ ಬೇಬಿ, ಐಶ್ವರ್ಯ ರೈ, ನರ್ಸಗಳೆಲ್ಲಾ ಇಷ್ಟು ಸುಂದರವಾಗಿದ್ದರೆ ಅವರನ್ನು ಸಿಸ್ಟರ್ ಅಂತ ಕರೆಯೋದು ತುಂಬಾ ಕಷ್ಟಾವಾಗಿಬಿಡುತ್ತಿತ್ತೇನೋ ಅನ್ನುವಷ್ಟು ಸುಂದರವಾಗಿ ಕಾಣಿಸುತ್ತಾಳೆ. ಚಿತ್ರದ ಒಂದು ದೃಶ್ಯದಲ್ಲಿ ಹೃತಿಕ್ ಸಹ ಹೇಳುತ್ತಾನೆ ನಾನು ಈಕೆಯನ್ನು ಸಿಸ್ಟರ್ ಎಂದು ಕರೆಯಲು ಸಾದ್ಯವಾಗದಷ್ಟು ಅಂದಗಾತಿ ಎಂದು!.



     ಹಾಸಿಗೆ ಹಿಡಿದ ಹನ್ನೆರೆಡು ವರ್ಷಗಳಲ್ಲಿ ಈಥನ್ ರೇಡಿಯೋ ಜಾಕಿಯಾಗಿ "ರೇಡಿಯೋ ಜಿಂದಗಿ" ಎನ್ನುವ ಕಾರ್ಯಕ್ರಮದ ಮೂಲಕ ಲಕ್ಷಾಂತರ ಕೇಳುಗರ ಬದುಕಿನ ಆಶಾಕಿರಣವಾಗಿ ಬದುಕುವ ನಾಯಕನಿಗೆ ಬದುಕಿದ್ದು ಸಾಕು ಎನಿಸಲು ಆರಂಭವಾಗಿಬಿಡುತ್ತದೆ, ತನ್ನ ಅಸಹಾಯಕತೆಯನ್ನು ಸೋಫಿಯಾಳೊಂದಿಕೆ ತೋಡಿಕೊಳ್ಳುತ್ತಾನೆ, ಸಿಟ್ಟುಬಂದಾಗ ತನ್ನಿಂದ ಸಿಟ್ಟನ್ನು ವ್ಯಕ್ತಪಡಿಸಲು ಅಸಾಧ್ಯವೆನಿಸುತ್ತದೆ, ಮೂಗಿನ ಮೇಲೆ ಕುಳಿತ ನೊಣವನ್ನು ಸಹ ಬೆರೆಸುವುದು ಸಾಧ್ಯವಾಗದೇ ಹೋದಾಗ ಕಣ್ಣುಗಳಲ್ಲಿ ನೋವು ಮುಖದಲ್ಲಿ ನಗು ಬರುವ ದೃಶ್ಯ ಅದ್ಬುತವಾಗಿ ಮೂಡಿಬಂದಿದೆ. ದೋ ಎಂದು ಸುರಿಯುವ ಮಳೆ ಆರಂಭವಾದಾಗ ಮಾಳಿಗೆ( ಸೂರು)ಯಿಂದ ತೊಟ್ಟಿಕ್ಕುವ ಮಳೆ ಹನಿ ಈಥನ್ ನ ಮುಖದ ಮೇಲೆ ಬೀಳಲಾರಂಬಿಸುತ್ತದೆ ಮೊದಲ ನಾಲ್ಕು ಹನಿಗಳು ಆತನಿಗೆ ಖುಷಿ ನೀಡುತ್ತದೆ, ನನ್ನೊಂದಿಗೆ ಯುದ್ದಕ್ಕೆ ಬರುತ್ತೀಯಾ ಬಾ ಎಂದು ಹೇಳುತ್ತಾನೆ ಆ ನಂತರ ಅದು ಕಿರಿಕಿರಿ ನೀಡಲು ಆರಂಭವಾಗುತ್ತದೆ, ರಾತ್ರಿ ಸಮಯವಾದ್ದರಿಂದ ಸೂಫಿಯಾ ತನ್ನ ಮನೆಗೆ ತೆರಳಿರುತ್ತಾಳೆ, ಯಾರೂ ಸಹಾಯಕ್ಕೆ ಬರದೇ ಬೆಳಗ್ಗೆ ಸೋಫಿಯಾ ಬರುವ ತನಕವೂ ಅದೇ ಕಿರಿಕಿರಿ ಅನುಭವಿಸುವ ದೃಶ್ಯಗಳು ಮನ ಕಲಕುವಂತಿದೆ, ಹದಿನಾಲ್ಕು ವರ್ಷಗಳ ಕಾಲ ಯಾವುದೇ ಬೇಸರವಿಲ್ಲದೆ ತನ್ನ ಸೇವೆಮಾಡಿದ ಚಲುವೆಗೆ ಹೂಗುಚ್ಚದ ಗಡಿಗೆಯ(Flower Pot)ನ್ನು ಗೋಡೆಗೆ ಎಸೆಯುವಂತೆ ಹೇಳುತ್ತಾನೆ, ತನಗೆ ಸಿಟ್ಟನ್ನು ವ್ಯಕ್ತ ಪಡಿಸೋಕು ಆಗದ ಪರಿಸ್ಥಿತಿ ಎಂದು ನೋವನ್ನು ಮಾತಿನ ಮೂಲಕ ವ್ಯಕ್ತಪಡಿಸುತ್ತಾನೆ.

     ರೇಡಿಯೋ ಪ್ರೊಡ್ಯೂಸರ್ ಎಂದು ಸುಳ್ಳು ಹೇಳಿ ಮ್ಯಾಜಿಕ್ ಕಲಿಯಲು ಬಂದ ಓಮರ್ ಸಿದ್ದಗಿ(ಆದಿತ್ಯ ರಾಯ್ ಕಪೂರ್) ಸಿಕ್ಕಿ ಬೀಳುತ್ತಾನೆ, ತಾನು ಚಿಕ್ಕಂದಿನಲ್ಲಿ ನಿಮ್ಮಿಂದ ಪಡೆದ ಆಟೋಗ್ರಾಫ್ ಇಟ್ಟುಕೊಂಡಿದ್ದೇನೆ, ಮೆಜಿಷಿಯನ್ ಆಗೋದು ತನ್ನ ಮಹದಾಸೆ ಎಂದಾಗ, ನಾಯಕ ತಾನು ಕಲಿತ ಇಂದ್ರಜಾಲ(ಮ್ಯಾಜಿಕ್) ತನ್ನೊಂದಿಗೆ ಮಣ್ಣಾಗಬಾರದೆನ್ನುವ ಉದ್ದೇಶದಿಂದ ತನಗೆ ಈ ಪರಿಸ್ಥಿತಿಗೆ ತಂದ ಗೆಳೆಯನ ಮಗನೆಂದು ಗೊತ್ತಿದ್ದೂ ಸಂಪೂರ್ಣವಾದ ವಿದ್ಯೆ ಧಾರೆ ಎರೆಯುತ್ತಾನೆ.

     ಕಾನೂನಿನ ಸಲಹೆಗಾರ್ತಿಯಾಗಿ, ಮನೆಯ ಒಬ್ಬ ಸದಸ್ಯೆಯಂತೆ ಇರುವ ದೇವಯಾನಿ(ಶೆಹೆನಾಝ್)ಯ ಮೂಲಕ ಇಚ್ಛಾಮರಣಕ್ಕೆ ಕೋರ್ಟಗೆ ಅರ್ಜಿ ಹಾಕಿ ವಾದಿಸಿವುಂತೆ ಕೇಳಿಕೊಳ್ಳುತ್ತಾನೆ, ಅದಕ್ಕೆ ಒಪ್ಪದೆ ನಿನಗೆ ಸಾಯುವಂತಹದ್ದೇನಾಗಿದೆ ಎಂದಾಗ ಬದುಕಿದ್ದು ಏನು ಮಾಡಲು ಸಾಧ್ಯ, ನಿನ್ನ ಸಂಬಳ ನಿನ್ನ ಕೈ ಸೇರುತ್ತೆ ವಾದ ಮಾಡು ನೀನು ನನ್ನ ಲಾಯರ್ ಮಾತ್ರ ಎಂದು ಸಿಡುಕುವ ನಾಯಕನಿಂದ ಸಿಟ್ಟೆದ್ದು ದೇವಯಾನಿ ಇನ್ನೇನಾದರೂ ಬೇಕಾ ಎಂದಾಗ ಆತ ಹೇಳುವ ಮಾತು ತನಗೆ ಸುಂದರವಾದ ಹೆಣ್ಣು ಬೇಕು ಎನ್ನುವ ಮಾತುಗಳು ಆತನ ಅಸಾಹಾಯಕತೆಯ ಬಗ್ಗೆ ಸೂಚ್ಯವಾಗಿ ಹೇಳಿಕೊಳ್ಳುವ ಅದ್ಬುತ ವಾಕ್ಚಾತುರ್ಯದ ಸೀನುಗಳು,

     ಓಮರ್ ಹಾಸಿಗೆ ಸರಿಮಾಡಲೆಂದು ಈಥನ್ ನನ್ನು ಎತ್ತಿ ಕೂರಿಸಿ ಗೊತ್ತಾಗದೆ ಕೈ ಬಿಟ್ಟಾಗ ನೆಲಕ್ಕೆ ಬಿದ್ದಾಗ ಆತನನ್ನು ಎತ್ತಲಾಗದೆ ಸೋಫಿಯಾಳನ್ನು ಕೂಗಿ ಕರೆದಾಗ ಓಡಿ ಬಂದು ಎತ್ತಿ ಮಲಗಿಸುತ್ತಾಳೆ, ಆಗ ನಾಯಕ ಅವಳಿಗೆ ಹೇಳುತ್ತಾನೆ ಎಂತಾ ದುರಂತವಾಗಿ ಹೋಯಿತು, ಎಷ್ಟೇ ಪ್ರಯತ್ನ ಪಟ್ಟರೂ ನಿನ್ನ ಕಾಲುಗಳು ಕಾಣಲೇ ಇಲ್ಲ ಎಂದು, ಐಶ್ ಬೇಬಿ ಚಿತ್ರದುದ್ದಕ್ಕೂ ಉದ್ದ ಗೌನ್ ತೊಟ್ಟೇ ಓಡಾಡುತಾಳೆ, ನೀನು ಮಿನಿ ಸ್ಕರ್ಟ್ ಹಾಕಿಕೊಂಡು ಓಡಾಡಿದಾಗ ನಿನ್ನ ಸುಂದರ ಕಾಲುಗಳನ್ನು ನಾನು ನೋಡಿದಂದು ನಾನು ಮತ್ತೆ ನೆಡೆಯಲಾರಂಭಿಸಿಬಿಡುತ್ತೇನೆ ಎಂದು ಹಾಸ್ಯದ ಚಟಾಕಿ ಹಾರಿಸುವ, ತುಸು ಹೆಚ್ಚೆನಿಸುವ ಇಂಗ್ಲೀಷ್ ಭಾಷೆ ಬಳಸಲಾಗಿದೆ ಎಂದುಕೊಳ್ಳುವಾಗಲೇ ಹೃತಿಕ್ ಮಾತಿನ ಶೈಲಿ ಇಷ್ಟಾಗಿಬಿಡುತ್ತೆ!

     ಮುಂದೆ ಈಥನ್ ನ ಡಾಕ್ಟರ್ ನಾಯಕ್(ಸುಹೇಲ್ ಸೇಟ್)ಗೆ ದೇವಯಾನಿ ಈಥನ್ ಇಚ್ಛಾಮರಣದ ಇಂಗಿತ ವ್ಯಕ್ತ ಪಡಿಸಿದ್ದಾನೆಂದು ಹೇಳುತ್ತಾಳೆ, ನಂತರ ಡಾಕ್ಟರ್ ಕೂಡಾ ಮನ ಪರಿವರ್ತನೆಗೆ ಪ್ರಯತ್ನಿಸಿದಾಗ ಈಥನ್ ಕೇಳುವ ಪ್ರಶ್ನೆಗಳಿಗೆಲ್ಲಾ ಡಾಕ್ಟರ್ ಇಲ್ಲಾ ಎನ್ನುವ ಉತ್ತರವನ್ನಷ್ಟೇ ನೀಡಬೇಕಾಗುತ್ತದೆ.

ದೇವಯಾನಿಗೆ ಈಥನ್ ನೋವಿನ ಅರಿವಾಗಿ ಯುಥನೇಶಿಯಾ( ಇಚ್ಛಾ ಮರಣ)ದ ಅರ್ಜಿಯನ್ನು ಕೋರ್ಟ್ ನಲ್ಲಿ ಹಾಕುತ್ತಾಳೆ,ರೇಡಿಯೋ ಮೂಲಕ ನಿನ್ನೆಲ್ಲಾ ಕೇಳುಗರ ಒಗ್ಗಟ್ಟು ಸಂಪಾದಿಸುವ ಮೂಲಕ ನಿನ್ನ ಕೋರಿಕೆಯನ್ನು ಜಡ್ಜ್ ನಿರಾಕರಿಸಲಾಗದಷ್ಟು ಮಾಡು ಎಂದು ಸಲಹೆ ನೀಡುತ್ತಾಳೆ, ಪ್ರೊಜೆಕ್ಟ್ ಇಥನೇಶಿಯಾ(ಯುಥನೇಶಿಯಾ) ಕಾರ್ಯಕ್ರಮದಲ್ಲಿ ಮಾತಾಡುವ ದೃಶ್ಯಗಳನ್ನು ನೋಡಿದರೇ ಚೆನ್ನ. ವಾದ ಆರಂಭವಾದಾಗ ಪ್ರತಿವಾದಿ ಲಾಯರ್ ವಿರೋಧ ವ್ಯಕ್ತಪಡಿಸುವ ದೃಶ್ಯಗಳು, ಜಡ್ಜ್ ಈಥನ್ ನ ಮನೆಗೇ ಬಂದು ವಾದ ವಿವಾದಗಳನ್ನು ಆಲಿಸುವ, ನೀವೇನು ಹೇಳಲು ಇಚ್ಚಿಸುತ್ತೀರಿ ಎಂದು ನಾಯಕನನ್ನು ಕೇಳಿದಾಗ ನಾನೊಂದು ಮ್ಯಾಜಿಕ್ ತೋರಿಸುತ್ತೇನೆ ಯುವರ್ ಆನರ್ ಎಂದು, ಪೆಟ್ಟಿಗೆಯೊಳಕ್ಕೆ ಅರವತ್ತು ಸೆಕೆಂಡು ಇರುವಂತೆ ಪ್ರತಿವಾದಿ ಲಾಯರ್ ಗೆ ಹೇಳಿದಾಗ ಅದರೊಳಗಿದ್ದ ಲಾಯರ್ ಅಲ್ಲಿರಲಾರದೆ ಪೆಟ್ಟಿಗೆಯೊಳಗಿಂದಲೇ ಬಾಗಿಲು ಬಡಿಯುವ, ನಂತರ ಇಂತ ಕಿರುದಾದ ಪೆಟ್ಟಿಗೆಯಲ್ಲಿ ಉಸಿರುಗಟ್ಟುತ್ತೆ, ಅಲುಗಾಡಲೂ ಸಾಧ್ಯವಿಲ್ಲ ಎಂದಾಗ ನೀವು ನನ್ನ ಜೀವನದ ಅರವತ್ತು ಸೆಕೆಂಡ್ ಗಳನ್ನು ಕೆಳೆಯಲು ಸಾಧ್ಯವಿಲ್ಲ ಎಂದಾಯಿತು, ಇದೇ ನನ್ನ ಪರಿಸ್ಥಿತಿ ಎಂದು ಹೇಳುವ ಸೀನುಗಳು ಇಷ್ಟವಾಗುತ್ತೆ.

ಮುಂದೆ ಏನಾಯಿತು? ಜಡ್ಜ್ ನಾಯಕನ ಪರವಾಗಿ ತೀರ್ಪು ಕೊಡುತ್ತಾರಾ? ಸೋಫಿಯಾ ಗಂಡನಿಂದ ಡೈವೋರ್ಸ್ ಪಡೆಯುತ್ತಾಳ! ಸೋಫಿಯಾಳ ಗಂಡನ ಬಗೆಗಿನ ನಾನು ಹೇಳಲೇ ಇಲ್ಲ ಬೇಕಂತಲೇ!,ನಾಯಕ ನಾಯಕಿಯ ಮಧ್ಯೆ ಅದೊಂತರಾ ಸರಿ ಬರೋಲ್ಲ ;) ಎಷ್ಟೇ ಕಥೆ ಹೇಳಿದರೂ ಕೆಲವೊಂದು ವಿಚಾರಗಳು ಬಿಟ್ಟು ಹೋಗಿರುತ್ತದೆ, ಪೂರ್ತಿ ಕಥೆಯನ್ನು ನಾನೇ ಹೇಳಿದರೆ ಚಿತ್ರ ಇಷ್ಟೇನಾ ಅನ್ನಿಸಿಬಿಡಬಹುದು. ಇಲ್ಲಿ ಬರೆದದ್ದೆಲ್ಲಾ ಸಂಕಲನಕಾರ ನೋಡಿದರೆ ಬೈಯ್ಯುವ ಸಾಧ್ಯತೆ ಇಲ್ಲದಿಲ್ಲ, ನನಗೆ ನೆನಪಾದಂತೆಲ್ಲಾ ಬರೆದಿದ್ದೇನೆ, ಒಂದು ಆರ್ಡರ್ ಅಂತ ಇರುತ್ತಲ್ಲಾ ಅದು ಇಲ್ಲಿ ಮಿಸ್ಸಾಗಿ ಹೋಗಿದೆ!

ಕೆಲವು ಚಿತ್ರಗಳನ್ನು ನೋಡಿದಾಗ ಚಿತ್ರ ಎಷ್ಟು ಚನ್ನಾಗಿದೆ ಅನ್ನಿಸಿಬಿಡುತ್ತೆ, ಆದರೆ ಮನೋರಂಜನೆಗಾಗಿ ಥಿಯೇಟರಿಗೆ ಬರುವ ಪ್ರೆಕ್ಷಕನಿಗೆ ಅದೇ ನೋವು ಕಣ್ಣಿರು ಕರುಳಿನ ಕಥೆಗಳೆಲ್ಲಾ ದಿನನಿತ್ಯ ನೋಡಿ ಇಷ್ಟಾ ಅಗೋದೆ ಕಷ್ಟ, ಇಂತಹುದೇ ಕಾರಣಕ್ಕೆ ಸಿನಿಮಾ ಗೆದ್ದಿದ್ದೆ ಸೋತಿದೆ ಎಂದು ಪಟ್ಟಿಮಾಡೋದು ಅಸಾಧ್ಯದ ಕೆಲಸವೇ ಸರಿ.ಸಂಜಯ್ ಲೀಲಾ ಬನ್ಸಾಲಿ ಚಿತ್ರ ಅಂತಲೇ ಚಿತ್ರ ನೋಡೋಕೆ ಹೋದವರಿಗೆ ಚಿತ್ರ ಅದ್ಬುತವಾಗಿದೆ ಅನ್ನಿಸದೇ ಇರಲಾರದು. ಹಾಡುಗಳು ಕೇಳಲು ನೋಡಲು ಚನ್ನಾಗಿದೆ.
ನೋಡಿ ಅನಿಸಿಕೆ ಹೇಳ್ತೀರಾ ಅಲ್ವಾ?.

ಇನ್ನೇನು ಕೆಲವೇ ಘಂಟೆಗಳಲ್ಲಿ ಹೊಸ ವರ್ಷ ಆರಂಭವಾಗಿಬಿಡುತ್ತೆ.. ಹೊಸ ವರುಷ ಹೊಸ ಹರುಷ ತರಲಿ ಎಂದು ಹಾರೈಸುತ್ತೇನೆ,ಹೊಸ ವರುಷದ ಹಾರ್ದಿಕ ಶುಭಾಶಯಗಳು.