ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Wednesday, December 19, 2018

ಬಸ್ಸಿನ ಪ್ರಯಾಣ! ಹಿಂದಿನ ಸೀಟಿನವನ ಫೋನ್ ಮಾತು. ಕನ್ವರ್ ಲಾಲ್ ನ ನೆನಪು!!!

     ಶಿವಮೊಗ್ಗದಲ್ಲಿ ಒಂದು ಮದುವೆಯಿತ್ತು ಹೊರಟಿದ್ದೆ.. ಐದು ನಿಮಿಷಕ್ಕೊಂದು ಬಸ್ಸಿರೊದಕ್ಕೆ ಬಸ್ಸಿನ ಪ್ರಯಾಣನೇ ಸುಖ ಅನ್ನಿಸಿ ಬಸ್ಸು ಹತ್ತಿದೆ.. ಬಸ್ಸು ನಿಧಾನಕ್ಕೆ ಹೊರಟಿತ್ತು.. ಡ್ರೈವರ್ ಇನ್ನೆರೆಡು ಜನ ಬಂದರೆ ಬರಲಿ ಅಂತ ಆಮೆ ವೇಗದಲ್ಲಿ ಹೊರಟಿದ್ದ!.. ಬಸ್ಸು ಹಾಗೆ ಮುಂದೆ ಸಾಗುತ್ತಿತ್ತು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಯಾರಿಗೋ ಫೋನ್ ಮಾಡಿ ಮಾತಾಡಲು ಶುರು ಮಾಡಿದ್ದ.. ಆತನದು ಅಚ್ಚ ಕನ್ನಡ ವ್ಯಾಕರಣ ಶುದ್ಧವಾದ ಮಾತದು.. ನನ್ನ ಗಮನವನ್ನು ಕಿಟಿಕೆಯಾಚೆಗಿನ ಪ್ರಕೃತಿ ಗದ್ದೆಯ ಕಡೆ ಹರಿಸಿದೆ.. ಆದರೆ ಕಿವಿ  ಹಿಂದೆ ಕುಳಿತವನ ಮಾತನ್ನು ಆಲಿಸುತ್ತಲ್ಲೇ ಇತ್ತು.. ಕೆಳಲ್ಲ ಜೋರು ಮಾತಾಡಕ್ಕಾ ಅಂತ ದೊಡ್ಡ ದನಿಯಲ್ಲಿ ಮಾತಿಗಿಳಿದಿದ್ದ.. ನಿಮಿಷಕ್ಕೊಮ್ಮೆ ಅಕ್ಕಾ ಅಕ್ಕಾ ಎನ್ನುತ್ತಿದ್ದ.. ಭಗವಂತನಿಗೆ ಕರುಣೆ ಇಲ್ಲಕ್ಕ.. ಅವಳು ಒಳ್ಳೆಯವಳಲ್ಲಕ್ಕಾ ಅಂದ.. ನನಗೆ ಪೋನಿನಾಚೆಗಿನ ವ್ಯಕ್ತಿಯ ಪ್ರತಿಕ್ರಿಯೆ ಏನಿರಬಹುದು ಎನ್ನುವ ಕುತೂಹಲ ಶುರುವಿಟ್ಟುಕೊಂಡಿತ್ತು.. ಧ್ವನಿ ಹೇಗಿರಬಹುದು ಇಂಪಾಗಿದೆಯಾ. ಘಟವಾಣಿ ದ್ವನಿಯಾ?

 ಅವಳು ಹೇಗಿರಬಹುದು ಅವಳ ಧ್ವನಿ ಹೇಗಿರಬಹುದು ಅನ್ನಿಸಿದ್ದು ಸುಳ್ಳಲ್ಲ! ಆತ ತನ್ನೆಲ್ಲಾ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟಿದ್ದ.. ಎಷ್ಟು ದೊಡ್ಡ ಧ್ವನಿಯಲ್ಲಿ ಮಾತಾಡುತ್ತಿದ್ದ ಎಂದರೆ ಒಂದೇ ಒಂದು ಪದ ಮಿಸ್ಸಾಗೋ ಚಾನ್ಸ್ ಇರಲಿಲ್ಲ.. ಅಕ್ಕ ಅವಳು ನಿಂಗೂ ಭಾವಂಗೂ  ಬೇಜಾರು ಮಾಡಿ ಬಿಟ್ಟಲಕ್ಕ ಭಾವನ ಮನಸ್ಸು ಮಗುವಿನ ಮನಸ್ಸಿನ ತರ.. ಬೇಸರ ಮಾಡ್ಕೊಂಡ್ರೆನಕ್ಕಾ ಎನ್ನುತ್ತಿದ್ದ.. ಇದೊಂಥರಾ ಒನ್ ವೇ ಆಗಿದ್ದಕ್ಕೆ ಅಕ್ಕಯ್ಯನ ಮಾತನ್ನು ನಾನೇ ಕಲ್ಪಿಸಿಕೊಳ್ಳಬೇಕಿತ್ತು ಅವಳು ತಮ್ಮನನ್ನು ಸಮಾಧಾನ ಮಾಡುವ ಹರಸಾಹಸದಲ್ಲಿದ್ದಿರಬಹುದು ಅನ್ನಿಸಿತು.. ಬೇರೆಯವರ ವಿಚಾರ ನಮಗೇಕೆ ಅಂತ ಮೊಬೈಲ್ ನಲ್ಲಿ ಬೆರೆಳಾಡಿಸತೊಡಗಿದೆ.. ಅಷ್ಟರಲ್ಲಿ ಅಕ್ಕಾ ಅಂಬರೀಶ್ ನೋಡಕ್ಕಾ ಎಷ್ಟು ಜನ ಸಂಪಾದನೆ ಮಾಡಿದ್ದ ಆತರ ಜನ ಸಂಪಾದಿಸಬೇಕಕ್ಕ ಅಂದ..

ಅಂಬರೀಶ್ ಬಗ್ಗೆ ಆತ ಹೇಳಿದ್ದು ಅಕ್ಷರಶಃ ಸತ್ಯ ಅನ್ನಿಸಿತು.. ಅದೆಷ್ಟು ಜನ ಸಾಗರ ಮೌನವಾಗಿ ಕಂಬನಿ ಮಿಡಿದಿತ್ತು.. ಬೆಂಗಳೂರಿನಿಂದ ಪಾರ್ಥಿವ ಶರೀರದ ದರ್ಶನಕ್ಕೆ ಪಟ್ಟು ಬಿಡದೆ ಮಂಡ್ಯಕ್ಕೆ ತರಿಸಿದ ಜನ ಒಂದೇ ಒಂದು ಕಡೆಯೂ ಗೌಜು ಗದ್ದಲವಿಲ್ಲದೆ ಬಂದು ಹೋಗುತ್ತಿದ್ದರು. ರಾಜಕುಮಾರ್ ಮತ್ತು ವಿಷ್ಣು ತೀರಿಕೊಂಡಾಗ ನೆಡೆದ ಗಲಾಟೆಗಳು ಗೌಜು ಗದ್ದಲ ಎಲ್ಲೂ ಇರಲಿಲ್ಲ.. ಅಂಬರೀಶ್ ಯಾವನೋ ಅವನು ಗಲಾಟೆ ಮಾಡೋನು ಅಂದು ಬಿಟ್ರೆ ಅನ್ನೋ ತರ ಶಾಕಲ್ಲಿ ಇತ್ತು ಜನತೆ.. ಮಂಡ್ಯದ ಪ್ರತಿ ಮನೆಯ ದೇವರ ಕೋಣೆಯಲ್ಲಿ ಅಂಬರೀಶ್ ಫೋಟೋ ಇದೆಯಂತೆ. ಅಂಬರೀಶ್ ಅವರ ವಿಶಿಷ್ಟ ಮ್ಯಾನರಿಸಮ್ ಡೈಲಾಗ್ ಡೆಲಿವರಿ.. ಕನ್ವರ್ ಲಾಲಾ ನ " ಕುತ್ತೆ ಕನ್ವರ್ ನಹೀ ಕನ್ವರ್ ಲಾಲ್ ಬೋಲೋ" ಅನ್ನೋ ವರೆಗಿನ  ಡೈಲಾಗ್.. ಅಂಬಿಕಾ ಜೊತೆಗಿನ ಛಳಿ ಛಳಿ ತಾಳೇನು ಈ ಛಳಿಯಾ ಹಾಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ ದಿನಗಳು ಹೀಗೆ ಮನಸ್ಸು ಅಂಬಿ  ಇಲ್ಲ ಅನ್ನೋ ಸತ್ಯಕ್ಕೆ ಒಗ್ಗಿಕೊಳ್ಳಲು ಕಷ್ಟ ಪಡುತ್ತಲಿತ್ತು. ಮನಸ್ಸಿನ ತುಂಬಾ ಕನ್ವರ್ ಲಾಲ್ ತುಂಬಿಹೋಗಿದ್ದ.

ಇಷ್ಟಾದರೂ ಆನ್ ಲಿಮಿಟೆಡ್ ಕಾಲ್ ಮಹಿಮೆ ಆತ ಮಾತು ಮುಂದುವರೆಸಿದ್ದ.. ಅಕ್ಕಾ ನಿನ್ನ ಮಗ ನನ್ನ ಮಗ ಇದ್ದಂಗೆ ಚಾನಾಗಿ ನೋಡ್ಕೋಬೇಕಕ್ಕ ಅಂದ.. ದೇವರು ಇದ್ರೆ ಮನೆ ಕಟ್ಟಿ ಊಟ ಹಾಕ್ತಿನಕ್ಕ.. ಮಂಜಣ್ಣ ನ ಹಾಗೆ ಮನೆ ಕಟ್ಟಿ ಅವನ ತರ ಜನಾನ ದೂರ ಮಾಡ್ಕೊಳಲ್ಲ ಎಲ್ಲರೂ ಜೊತೆಗಿರಬೇಕಕ್ಕ ಅಲ್ವೇನಕ್ಕ ಅನ್ನುತ್ತಿತ್ತು.. ಮಂಜಣ್ಣ ಯಾರು ಗೊತ್ತಿಲ್ಲ.. ಆ ಅಕ್ಕ ಅವನ ಸ್ವಂತ ಅಕ್ಕನೋ ಜೊತೆಗೆ ಆಡಿ ಬೆಳೆದವಳಾ.. ಅಥವಾ ಪಕ್ಕದ ಮನೆಯವಳಾ.. ನಾನು ಬಸ್ಸು ಇಳಿಯುವ  ಜಾಗ ಬಂದಿತ್ತು.. ಇಳಿಯುವಾಗ  ಹಿಂದೆ ತಿರುಗಿ ಅವನ ಮುಖ ನೋಡಿ ಬಿಡಲ ಅನ್ನೋ ಕುತೂಹಲ ಕಾಡತೊಡಗಿತ್ತು.. ಆದರೆ ಅವನ ದ್ವನಿಯೊಂದೇ ನೆನಪಿನಲ್ಲಿರಲಿ ಎಂದು ಅವನನ್ನು ನೋಡದೆ ಕೆಳಗಿಳಿದುಬಿಟ್ಟೆ...

ಆತ ಹೇಗಿರಬಹುದು.. ಅವಳ ದ್ವನಿ ಹೇಗಿರಬಹುದು.. ಅವಳ ಮಗ ಹೇಗಿರಬಹುದು.. ನಿಮ್ಮ ಕಲ್ಪನೆಗೆ ಬಿಟ್ಟಿದ್ದು.

Saturday, November 24, 2018

ಸುಪ್ರೀಂ ಪವರ್ರು ಸಲಿಂಗಕಾಮ #meetoo

ಸುಪ್ರೀಂ ಕೋರ್ಟ್ ಬಗ್ಗೆ ಅಪಾರ ಗೌರವ ಇದೆ ಹಾಗಂತ ಮಾಡಿದ ಅನ್ಯಾಯಗಳನ್ನು ಮರೆಯೋದು ಹೇಗೆ? ಕಾವೇರಿ ವಿಚಾರದಲ್ಲಿ ನೀರಿಲ್ಲದ್ದು ಕಣ್ಣಿಗೆ ಕಾಣಿಸಿದರೂ ತಮಿಳುನಾಡಿಗೆ  ಇಂತಿಷ್ಟು ಕ್ಯೂಸೆಕ್ಸ್ ನೀರು ಬಿಡಲು ಸೂಚಿಸೋದು.

ಸಲಿಂಗ ಕಾಮ ಅಪರಾಧ ಅಲ್ಲ ಅನ್ನೋದು ಸಹ ಚರ್ಚೆಗೆ ಗ್ರಾಸವಾಗೋ ವಿಚಾರ ಆದರೆ ನಮ್ಮ ದೇಶ ಇನ್ನು ಸುಸಂಸ್ಕೃತ ಆಚಾರ ವಿಚಾರ ಹೊಂದಿರುವ ದೇಶ.. ನಾಲ್ಕು ಗೋಡೆಗಳ ನಡುವೆ ನಡೆಯೊದನ್ನ ಸಾರ್ವಜನಿಕವಾಗಿ ಮಾತಾಡಲು ಇನ್ನು ಮುಜುಗರ ಪಡುತ್ತಾರೆ.. ದೇಶದ ಶೇಕಡಾ 60 ಕ್ಕಿಂತ ಹೆಚ್ಚಿನ ಜನ ಸ್ನಾನ ಮಾಡುವಾಗ    ಸಹ ಅಂಡರ್ವೇರ್ ಧರಿಸಿ ಸ್ನಾನ ಮಾಡುತ್ತಾರಂತೆ!

     ಸಲಿಂಗ ಕಾಮ ಅನ್ನೋದು ಸಮಾನತೆ ತರುವುದರ ಜೊತೆ ಅಸ್ವಾಭಾವಿಕ ಮಾನವನ ವಿಕೃತ ಮನಸ್ಥಿತಿಯ ಸೂಚಕ... ಒಬ್ಬ ಗಂಡಸಿಗೆ ಒಂದು ಹೆಣ್ಣಿನ ಮೇಲೆ ಪ್ರೇಮ ಪ್ರೀತಿ ಕಾಮ ಭಾವನೆ ಮೂಡುವುದು ಸ್ವಾಭಾವಿಕ ಪ್ರಾಕೃತಿಕ ಸಹಜ ಪ್ರಕ್ರಿಯೆ.. ಹಾಗೆಯೇ ಹೆಣ್ಣಿಗೂ ಸಹ ಕಟ್ಟುಮಸ್ತಾದ ಗಂಡಿನ ಮೇಲೆ ಭಾವನೆಗಳ ಹೊಯ್ದಾಟವೂ ಸಹ.. ಅದೇ ತರಹ, ಹಾಗಂತ ಆಕೆ ತನ್ನಲ್ಲಿನ ಭಾವನೆಗಳ ಮೇಲೆ ಇರೋ ಹಿಡಿತ ಗಂಡಸಿಗೆ ಇರೋದು ಕಷ್ಟಕರ..ಹಾಗಂತ ಗಂಡಸರು ಮಾತ್ರ ಕಚ್ಛೆ ಹರುಕರು ಅಂತಲ್ಲ.. ಈಗಿನ ಮಾಡರ್ನ್ ಹುಡುಗಿಯರು ತಾವು ಯಾವುದರಲ್ಲೂ ಕಡಿಮೆಯಿಲ್ಲ ಎಂದು ಗಂಡಸರಿಗೆ ಸವಾಲು ಹಾಕುವ ಕಾಂಡಮ್ ಪ್ಯಾಕೇಟುಗಳನ್ನು ಜೊತೆಗೆ ಇರಲಿ ತಕ್ಷಣಕ್ಕೆ ಸಿಗದೆ ಹೋದರೆ ಅಂತ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟುಕೊಳ್ಳುವ ಕಾಲವು ಬಂದಿದೆ.ಗಂಡು ಗಂಡಿನ ಜೊತೆ,  ಹೆಣ್ಣು ಹೆಣ್ಣಿನ ಜೊತೆ ಕಾಮಕ್ರಿಯೆಯಲ್ಲಿ ತೊಡಗುವುದು ಮಾನವರಲ್ಲಿ ಮಾತ್ರ ಮತ್ಯಾವ ಪ್ರಾಣಿಗಳಲ್ಲೂ ಇಲ್ಲ.. ಅದೇ ರೀತಿ  ಹೆಣ್ಣು ಹೆಣ್ಣಿನ ಕಾಮದಿಂದ ಮಕ್ಕಳನ್ನು ಪಡೆಯೋದು ಅಸಾಧ್ಯ!

ಸುಪ್ರೀಂ ಪವರ್ ಇದೇ ಅಂತ ಏನೇನೋ ತೀರ್ಪು ಕೊಡೋದು ಎಷ್ಟು ಸಮಂಜಸ... ಅನೈತಿಕ ಸಂಬಂಧ ಅಪರಾಧವಲ್ಲ ಅಂದರೆ ಮೊದಲು ಮನಸ್ಸಿನ ಒಳಗೆ ಹುಟ್ಟೋ ಗೊಂದಲ ಅರೇ ಹೀಗೂ ಸಾಧ್ಯನಾ ಅಂತ
ಅರೆ ಯಾರದೋ ಹೆಂಡತಿ ಜೊತೆಗೆ ಸಂಬಂಧ ಇಟ್ಟುಕೊಂಡರು ತಪ್ಪು ಅಲ್ಲವಾ.
       ಮದುವೆಯಾಗಿ ಸುಖವಾಗಿ ಸಂಸಾರ ಮಾಡಿಕೊಂಡಿದ್ದವರಲ್ಲೂ ಒಂದು ಕ್ಷಣಕ್ಕೆ  ಮನಸ್ಸಿನ ಒಂದು ಮೂಲೆಯಲ್ಲಿ ವ್ಯಭಿಚಾರ ಅಪರಾಧ ಅಲ್ಲವಾ ಎನ್ನುವ ಪ್ರಶ್ನೆ ಹಾದುಹೋದರೆ??

ಈಗಿನ ಚಲನಚಿತ್ರಗಳಲ್ಲೂ ಸಹ  ಸೆಕ್ಸ್ ದೃಶ್ಯಗಳು ಸಾಮಾನ್ಯವಾಗಿ ಹೋಗಿದೆ.. ಅದರಲ್ಲೂ ಸಹ ಲಿವಿಂಗ್ ಟುಗೆದರ್.. ಮದುವೆಯಾಚೆಗಿನ ಕಾಮ ಸಂಬಂಧಗಳನ್ನೇ ತೋರಿಸೋದು ಹೆಚ್ಚು.. ಹದಿ ಹರೆಯದವರಲ್ಲಿ ಅದೇ ಭಾವನೆಗಳು ಹುಟ್ಟಬಹುದಲ್ಲವಾ???

ದೊಡ್ಡ ಗೌಡರ ಮನೆಯ ಕೆಂಪಿ.. ಸುಬ್ಬಾಹೆಗ್ಡೆರ ಮನೆ ಭಾಗಿ.. ಸಣ್ಣಭಟ್ಟರ ಮನೆ ಸುಬ್ಬಿ ತೋಟದ ಮನೆಗೆ ಹೋಗೋದು  ಗುಟ್ಟಾಗಿ ಉಳಿದಿರಲೇ ಇಲ್ಲ.. ಆಗ ಅದು ಈಗಿನ ಒಪ್ಪಿಗೆ ಕಾನೂನು ಏನು ಮಾಡಿದ್ದಾರೋ ಅದೇ ತರಹ ಒಪ್ಪಿತ ಸಂಬಂಧವಾಗಿದ್ದಿರಬಹುದು.. ಆಗ #meetoo ಇರಲಿಲ್ಲ ಈಗಿನ ಹಾಗೆ ಮೀಟಿಸಿಕೊಂಡು ಹತ್ತಾರು ವರ್ಷ ಕಳೆದ ಮೇಲೆ ಆತ ನನ್ನೊಂದಿಗೆ ಅದು ಮಾಡಿದ್ದ ಇದು ಮಾಡಿದ್ದ ಅನ್ನೋದಿಕ್ಕೆ!

ಗಂಟಲಾಳದಲ್ಲಿ  ಹೇಳೋದಕ್ಕೆ ಇನ್ನೂ ಸಾಕಷ್ಟಿದೆ.. ಈಗ ಸಾದ್ಯಕ್ಕಿಷ್ಟು ಸಾಕು.. ಮುಂದುವರೆಯುತ್ತದೆ*
(2022ರ ಓಳಗೆ)☺️

Saturday, June 30, 2018

ಅಧರ ಸದರ

ಅವಳ ನೆನಪು
ಮತ್ತೆ ಮತ್ತೆ ಕಾಡುತಿದೆ

ಆ ಮೊದಲ ನೋಟ
ನೆನಪುಗಳ ಓಟ

ಕಿರುನಗೆಯ ಆಟ
ಪ್ರೀತಿಯ ಪಾಠ

ಸೀರೆಯ ಸೆರಗಿನ ಹಾರಾಟ
ಮನಸಿನೊಳಗಿನ ವರಾತ

ಕದ್ದು ಬಿಟ್ಟೆ ನೀ ಹೃದಯದ ಕವಾಟ
        ಕಟ್ಟು ಕಲ್ಪನೆಯ ಕಪಾಟ

ಮಳೆಯಬ್ಬರಕ್ಕೆ ನಲುಗುತ್ತಿದೆ ಅಧರ
ಬೆಚ್ಚಗಿಡುವೆ ಸ್ವಲ್ಪ ಕೊಟ್ಟರೆ ಸದರ

ಬೆತ್ತಲಾಗಿ ನಿಂತಿದೆ ಭಾವನೆಗಳು
ಮುಚ್ಚಿಟ್ಟಿರುವ ಕಾಮನೆಗಳು ಬಯಲಾಗಿದೆ

ಕಾರ್ಮೊಡ ಕವಿಯುವ ಮುನ್ನ ಸೆರಗಂಚಿನಲ್ಲಿ ಗಾಳಿ ಬೀಸಿಬಿಡು

ಬಿತ್ತಿಬಿಡುವೆ ಪ್ರೀತಿಯ ಬೀಜ!

ಹೊತ್ತಿ ಉರಿಯಲಿ
ಕಾಳ್ಗಿಚ್ಚು ಹೊಟ್ಟೆಯೊಳಗೆ!

Monday, October 30, 2017

ಮನಸಿನ ಪುಟಗಳ ಮೇಲಿನ ಸಾಲುಗಳು!

ಮನಸಿನ ಪುಟಗಳ ಮೇಲಿನ ಸಾಲುಗಳು ಮಳೆಯಬ್ಬರಕ್ಕೆ
ಕಲಕಿ ಹೋಗಿದೆ,

ಮಳೆ ನಿಲ್ಲುವವರೆಗೆ ಕಾಯಲೇ ಬೇಕಿದೆ, ಮಳೆಯ೦ಗಳದೊಳಗೆ ನೀ ಬಿಟ್ಟು ಹೋದ ಹೆಜ್ಜೆಗುರುತುಗಳ ಹಾಗೇ ನೋಡುತ್ತ ನಿ೦ತಿರುವೆ. ದೂರದಲ್ಲೆಲ್ಲಾದರೂ ನಿನ್ನ ಗೆಜ್ಜೆ ಸದ್ದು ಮಳೆಯಬ್ಬರದ ಮಧ್ಯ ಕೇಳ ಬಹುದೇನೋ ಎ೦ದು,

ನೀ ನೀಡಿದ ಬಿಸಿಯುಸಿರ ಮುತ್ತಿನ ಹಸಿಹಸಿ ನೆನಪೊ೦ದು ಕಾಡುತಿ್ತದೆ,
  ನಿನ್ನೆದೆಯಾಳದೊಳಗೆ  ಬೆಚ್ಚಗೆ ಹುದುಗುವಾಸೆ ಹೆಚ್ಚಾಗುತ್ತಿರಲು

ಖಾಲಿ ಕಾಪಿ ಕಪ್ಪೊಳಗಿನ ಉಳಿದ ಹೆಪ್ಪುಗಟ್ಟುತಿರುವ ಹನಿಯೊ೦ದು ನಗುತ್ತಾ ಹೇಳಿತು ನಿನ್ನ ಮನಸಿನ ಪುಸ್ತಕವೇ ಕದಡಿ ಕೆಸರು ತು೦ಬಿದೆ ಎ೦ದು.

Friday, January 8, 2016

ಭಟ್ಟರ ಪತ್ರಿಕೆ ವಿಶ್ವ ವಾಣಿ ಬರ್ತಿದೆ ದಾರಿ ಬಿಡಿ!


ಹೊಸ ವರ್ಷದ ಹಾರ್ದಿಕ ಶುಭಾಶಯಗಳು...ಯುಗಾದಿಗೆ ನಮಗೆ ಹೊಸವರುಷ ಅಂತೀರಾ?   ನನ್ನ ಸ್ನೇಹಿತೆಯೊಬ್ಬಳು ಹೊಸ ವರ್ಷಕ್ಕೆ ಫೇಸ್ ಬುಕ್ ನಲ್ಲಿ ಹಾಕಿದ್ದೇನಪ್ಪಾ ಅಂದ್ರೆ ವರ್ಷವಿಡೀ ಕ್ಯಾಲೆಂಡರನ್ನೆ ನೋಡಿ ಇವತ್ತಿಂತಾ ದಿನ ಅಂತ ತಿಳ್ಕೊಳೋ ನೀವು ಹೊಸವರ್ಷ ಬಂದಾಗ ಮಾತ್ರ ಯಾಕೆ ಹೀಗೆ ಅಂತ ಅವಳ ಪ್ರಶ್ನೆ, ಹೊಸವರ್ಷ ಆಚರಿಸಿ ಆತ್ಮೀಯರಿಗೆ ಶುಭ ಹಾರೈಸಿ, ಯುಗಾದಿ ಹಬ್ಬವನ್ನು ಇನ್ನೂ ಹೆಚ್ಚಿನ ಸಂತಸದಿಂದ ಆಚರಿಸಿ ಅಂತ ಬರೆದಿದ್ದಳು.. ನನಗೂ ಅವಳು ಹೇಳಿದ್ದು ಸರಿ ಅನಿಸಿದ್ದು ನಿಜ.


    ಒಂದು ಕಾಲವಿತ್ತು ಆಗಿನ್ನೂ ಬ್ಲಾಗುಗಳು ಹುಟ್ಟಿಕೊಂಡಿದ್ದವು ಆವಾಗ ಪತ್ರಕರ್ತ ಮಿತ್ರರು ಅಥವಾ ಪ್ರಿಂಟ್ ಮೀಡಿಯಾದ ಗೆಳೆಯರ ಮನಸ್ಸಿನಲ್ಲಿದ್ದಿದ್ದು ಈ ಬ್ಲಾಗುಗಳು ಅಂದರೆ ನಾಯಿಕೊಡೆಗಳಿದ್ದಂತೆ, ಮನಸ್ಸಿಗೆ ಬಂದಿದ್ದು ಬರ್ಕೊತಾರೆ, ಇವರನ್ನು ಯಾರು ಕೇಳ್ತಾರೆ ಅನ್ನೋ ಅಂತ ಮನೋಭಾವ ಇದ್ದಿದ್ದು ಅಕ್ಷರಹ ಸತ್ಯ. ಈಗ ಪರಿಸ್ಥಿತಿ ಹಾಗಿಲ್ಲ ಬ್ಲಾಗುಗಳ ಬಗ್ಗೆ  ಆ ಬ್ಲಾಗಿನೊಳಗಿನ ಅಂತರಂಗದಲ್ಲಿರುವ  ವಿಚಾರದಾರೆಗಳ ಬಗೆಗೆ ಪತ್ರಿಕೆಗಳಲ್ಲಿ ಮುಕ್ತ ಕಂಠದಿಂದ ಶ್ಲಾಘಿಸಿ ತಮ್ಮ ಪತ್ರಿಕಗಳಲ್ಲಿ ಪ್ರಕಟಿಸುತ್ತಿರುವುದು ನಿಮಗೆ ಗೊತ್ತಿರುವ ಸಂಗತಿ. ಬ್ಲಾಗರ್ ಗಳು ತಮಗೆ ಬ್ಲಾಗ್ ನಾಮದೇಯವನ್ನು ಇಟ್ಟುಕೊಳ್ಳೋದು ಒಂದು ತರಹ ಟ್ರೆಂಡ್ ಆಗಿತ್ತು ಅವಾಗ. ಅದೇ ನಾಮದೇಯ ಇವತ್ತಿಗೂ ಹಾಗೆ ಇದೆ.ಅದೇ ಹೆಸರಿನಿಂದಾಗಿ ಅನೇಕ ಬ್ಲಾಗರ್ ಗಳು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ

     ದಿನ ಪತ್ರಿಕೆಗಳ ಸಂಖ್ಯೆ ಹೆಚ್ಚಾಗುತ್ತಾ ಇದೆ. ಓದುಗರು ಸಹ  ತಮಗೆ ಬೇಕಾಗಿದ್ದನ್ನು ಆರಿಸಿಕೊಳ್ಳುವಷ್ಟು ಪತ್ರಿಕೆಗಳು ಬಂದಿರುವುದು ಸಂತಸದಾಯಕ. ನಮ್ಮ ಹೃದಯಕ್ಕೆ ಹತ್ತಿರವಾಗೋ ಕಾಲಂ ಗಳು, ಸಂಪಾದಕೀಯ, ಅಕ್ಷರ ವಿನ್ಯಾಸ, ಪುಟ ಸಂಖ್ಯೆ, ಸಪ್ಲಿಮೆಂಟ್ ಗಳು ಎಲ್ಲವೂ ಒಂದು ಪತ್ರಿಕೆಯನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯುತ್ತದೆ,
ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಅಂದ್ರೆ ವಿಶ್ವೇಶ್ವರ ಭಟ್ಟರ ವಿಶ್ವ ವಾಣಿ ಇದೇ ಜನವರಿ ಹದಿನೈದನೆ ತಾರೀಖು ಜನರನ್ನು ತಲುಪುತ್ತಿದೆ.

     ಭಟ್ಟರ ಪರ್ತಿಕೆ ಅಂದ ಮೇಲೆ ಅದರಲ್ಲಿ ಸಾಗರದ ನೀರ ಪ್ರೀತಿಯ ರಾಧಾಕೃಷ್ಣ ಭಡ್ತಿಯ ನೀರಿನ ಬಗೆಗಿನ ಕಾಳಜಿ, ಅಂತರ್ಜಲ ಕಡಿಮೆಯಾಗುತ್ತಿರುವ ಬಗೆಗಿನ ಭೀತಿ, ನೀರ್ಮಾಹಿತಿ ಅಂದರೂ ತಪ್ಪಾಗಲಾರದು ಅದು ಇರಲೇ ಬೇಕು, ನೀರಿಗೂ ಭಡ್ತಿಯವರಿಗೂ ಅದೇನೋ ಅವಿನಾಭಾವ ಸಂಭಂದವಿದೆಯೋನೋ ಅಂದರು ಅತಿಶಯೋಕ್ತಿಯಾಗಲಾರದು, ಹನಿ ಹನಿ ನೀರ ಮೇಲೆ ಅದೇನೋ ಒಂತರಾ ಅಧಮ್ಯ ಪ್ರೀತಿ ಇರೋದು ಅವರ ಪ್ರತಿ ಅಕ್ಷರಗಳಲ್ಲಿ ವ್ಯಕ್ತವಾಗುತ್ತದೆ, ಭಡ್ತಿಯವರನ್ನು ನೋಡಿ ಅನೇಕ ವರ್ಷಗಳೇ ಕಳೆದು ಹೋದವೇನೋ.. ಸಾಗರದಲ್ಲಿ ಅವರಿದ್ದಾಗ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ನೋಡಿ ಮಾತಾಡಿದ್ದಷ್ಟೆ, ಅವರಿಗೆ ನಾನು ಮಹಾಬಲೇಶ್ವರ ಭಟ್ಟರ ಮೊಮ್ಮಗ ಅನ್ನೋದಷ್ಟೆ ನೆನಪಿರಬಹುದು, ಸಾಗರಕ್ಕೆ ಬಂದಾಗಿ ಬೇಟಿ ಮಾಡೋ ಆಸೆಯಂತು ಇದೆ ಮತ್ತೆ ವಿಶ್ವವಾಣಿಯಲ್ಲಿ ನೀರಿನ ಸೆಲೆ ಮತ್ತೆ ಸಿಗಲಿದೆ ಅನ್ನೋ ಖುಷಿ ಇದೆ, 

ಇನ್ನು ಜಗತ್ತನ್ನ ಬೆತ್ತೆಲೆಯಾಗಿ ತೋರಿಸೋ ಸಿಂಹನ ಅಂಕಣ ಇದ್ದೇ ಇರುತ್ತೆ, ಜಗತ್ತಿನ ಆಗುಹೋಗುಗಳ ಬಗೆಗಿನ ಮಾಹಿತಿಯನ್ನು ಜನರ ಮನಸ್ಸಿನಾಳಕ್ಕೆ ಇಳಿಸುವಲ್ಲಿ ಸಿಂಹ ಯಶಸ್ವಿಯಾಗಿದ್ದಾರೆ. ಬೆತ್ತಲೆ ಜಗತ್ತು ಅನ್ನೋ ಅಂಕಣ ಜನರಿಂದ ಅಪಾರ ಪ್ರೀತಿಗಳಿಸಿ ಪುಸ್ತಕರೂಪದಲ್ಲಿ ಹೊರಬಂದಿರುವುದು ಇತಿಹಾಸ. ಇನ್ನೂ ಹೆಚ್ಚಿಗೆ ಸಿಂಹದ ಬಗ್ಗೆ ಹೇಳುವ ಪ್ರತಾಪವನ್ನು ಮಾಡಲಾರೆ. ಪತ್ರಿಕಾ ರಂಗದಲ್ಲಿ ಹಾಗೂ ವಿಶ್ವ ವಾಣಿ ಪತ್ರಿಕೆ ಯ  ಎಲ್ಲರ ಪರಿಚಯವೂ ನನಗಿಲ್ಲದೆ ಇರೋದು ನನ್ನ ಬರವಣಿಗಿಗೆ ಚಿಕ್ಕದೊಂದು ಚೌಕಟ್ಟು ಹಾಕುತ್ತಿರುವುದು ಸತ್ಯ

ಚಿರುವಿನ ಬಗ್ಗೆ ಬರೆಯೋಕೆ ಹೋದರೂ ಸಾಕಷ್ಟಿದೆ, ಚಿರಂಜೀವಿ ಭಟ್ಟ ಪೇಸ್ಬುಕ್ಕಿನ ಅಪ್ಡೇಟ್ ಗಳನ್ನೆ ಒಂದು ಪುಸ್ತಕ ರೂಪದಲ್ಲಿ ತರಬಹುದು ಅಷ್ಟು ಬರೀತಾನೆ, ಹೊಸ ಪ್ರಯೋಗಗಳನ್ನ ಸದಾ ಮಾಡ್ತಾ ಇರೋದು ಅವನ ಜಾಯಮಾನ, ಸಂಗೀತ, ಡಿಬೇಟು ಕೇಳ್ಬೇಡಿ ಯಾವ್ದು ಅಂತ, ನ್ಯೂಸ್ ರೀಡಿಂಗ್ ಹೇಗಿರುತ್ತೆ ಅದನ್ನೂ ಸಹ ಪ್ರಯತ್ನಿಸೋ ಹಂಬಲ, ಸ್ಕ್ರೀನ್ ಸ್ಕ್ರೋಲಿಂಗು ಕಾಲಲ್ಲಿದ್ದು ಮರಾಯ ಎಂಗೆ ಕಷ್ಟ್ ಆಗೋತು ಅಂದಿದ್ದು ಇನ್ನೂ ನೆನಪಿದೆ. ವಿಚಾರದಾರೆಗಳು ಅವನದು ವಿಶಿಷ್ಟವಾಗಿದೆ, ಹೌದಲ್ವಾ ಇದು ಹಿಂಗಾ ಅನ್ನುವಂತೆ ಮನ ಮುಟ್ಟುವಂತೆ ಬರೀತಾನೆ. ಈ ರೀತಿಯಲ್ಲೂ ನೋಡಬಹುದಲ್ವಾ ಅನ್ನಿಸಿಬಿಡುವಂತೆ ಮಾಡಿಬಿಡ್ತಾನೆ. ಗೆಳೆಯ ಇದೇ ರೀತಿಯ ಹೊಸ ಹೊಸ ಪ್ರಯೋಗ ಮಾಡುತ್ತಲೇ ಇರು.

ಇನ್ನು ವಿಶ್ವ ವಾಣಿ ಅಂದರೆ ವಿಶ್ವೇಶ್ವರ ಭಟ್ಟರ ಬಗ್ಗೆ ಬರೆಯದೇ ಹೋದರೆ ಲೇಖನ ಅಪೂರ್ಣವಾಗಿಬಿಡುತ್ತದೆ, ಜೊತೆಗೆ ಅವರನ್ನು ಬೇಟಿಯಾದ ಕ್ಷಣದ ಹಚ್ಚ ಹಸಿರಾಗಿ ಮನಸಿನೊಳಗೆ ನಿಂತಿದೆ, ಕರ್ಕಿಕೊಪ್ಪದ ಪ್ರಸನ್ನ ನ ನಮ್ಮನೆಗೆ ಬಾ ಎಂದಿದ್ದ, ನಾನು ಅವನ ಜೊತೆ ಅವನ ಮನೆಗೆ ಹೊರಟೆ, ಮಧ್ಯ ವಿಶ್ವೇಶ್ವರ ಭಟ್ಟರ ಬೇಟಿ ಮಾಡಿಕೊಂಡು ಹೋಗೋಣ ಎಂದು ಹೇಳಿದ, ಪ್ರಸನ್ನ ಸಿಕ್ಕಾಪಟ್ಟೆ ನೆಡಸ್ತಾನೆ ಅಂತ ಗೆಳೆಯ ಹೇಳಿದ್ದು ನೆನಪಿಗೆ ಬಂತು, ನೆಡ್ಕಂಡು ಹೋಪನ ಅಲ್ದ ಅನ್ನುವ ನುಡಿಮುತ್ತು ಅವನ ಬಾಯಿಂದ ಬಂದಾಗಿತ್ತು. ಒಂದೆರೆಡು ಕಿಲೋ ಮೀಟರ್ಗಿಂತ ಕಡಿಮೆಯಿಲ್ಲದಂತೆ ನೆಡೆದುಕೊಂಡು ಹೋಗಿ ಮಧ್ಯ ಒಂದು ಪ್ಲೇಟ್ ಮಸಾಲ ಪೂರಿ ತಿಂದು ಕನ್ನಡ ಪ್ರಭ ಆಪೀಸಿನತ್ತ ಮತ್ತೆ ನೆಡೆಯಲಾರಂಬಿಸಿದೆವು.. ಟೈಮ್ಸ್ ಆಫ್ ಇಂಡಿಯಾದ ಎರಡನೇ ಮಹಡಿಯಲ್ಲಿ ಕನ್ನಡ ಪ್ರಭ ಪತ್ರಿಕೆಯ ಒಳಕ್ಕೆ ಪ್ರವೇಶಿಸಿದೆವು, ಒಳಗೆ ಸಾಫ್ಟ್ ವೇರ್ ಕಂಪನಿಗಳಲ್ಲಿರುವಂತೆ ಕ್ಯಾಬಿನ್ನುಗಳು ಎಲ್ಲರೂ ತಮ್ಮ ತಮ್ಮ ಕಾಲಂ ಗಳನ್ನ ಕುಟ್ಟೋದರಲ್ಲಿ ಮಗ್ನರಾಗಿದ್ದರು, ನಂಗೊಂದು ಅನುಮಾನ ಏನಪ್ಪಾ ಅಂದ್ರೆ ಈಗಿನ ಪತ್ರಿಕೆಗಳಲ್ಲಿ ಫ್ರೂಫ್ ರೀಡಿಂಗ್ ಮಾಡ್ತಾರ ಅಥವಾ ನೇರವಾಗಿ ಅವರವರ ಕಾಲಂ ಗಳು ಪ್ರಿಂಟಿಗೆ ಸಿದ್ದವಾಗಿ ಕೂತು ಬಿಡುತ್ತವಾ??

ವಿಶ್ವೇಶ್ವರ ಭಟ್ಟರ ಕ್ಯಾಬಿನ್ನಿನ ಪಕ್ಕಕ್ಕೆ ದೊಡ್ಡದೊಂದು ಸೋಫಾ ದ ಮೇಲೆ ನಾನು ಪ್ರಸನ್ನ ಕುಳಿತುಕೊಂಡೆವು ಅಟೆಂಡರ್ ಒಬ್ಬರು ಏನಾಗಬೇಕಿತ್ತು ಅಂತ ವಿಚಾರಿಸಿದಾಗ ಭಟ್ಟರ ಬೇಟಿಯಾಗಬೇಕು ಎಂದು ಹೇಳಿದೆವು, ಒಂದೈದು ನಿಮಿಷ  ಹೇಳ್ತೀನಿ ಎಂದರು. ಒಂದೆರೆಡು  ನಿಮಿಷಗಳಲ್ಲಿ ಭಟ್ಟರು ಒಳಗೆ ಬರುವಂತೆ ತಿಳಿಸಿದರು. ಸಂಪಾದಕರ ಕ್ಯಾಬಿನ್ನು ಅಂದ ಮೇಲೆ ಮೇಜಿನ ತುಂಬಾ ಬರಹಗಾರರ ಪುಸ್ತಕಗಳು ಹರಡಿಕೊಂಡಿರಬಹುದೆಂಬ ನನ್ನ ಊಹೆ ಸುಳ್ಳಾಗಿತ್ತು.. ಭಟ್ಟರು ಗಂಭೀರವಾಗಿ ಕುಳಿತಿದ್ದರು ಅವರ ಕ್ಯಾಬಿನ್ ಸಹ ಅವರಷ್ಟೇ ಶಿಸ್ತಿನಿಂದ ಒಪ್ಪ ಓರಣವಾಗಿ ಸುಂದರವಾಗಿ ಇತ್ತು, ಮೇಜಿನ ಮೇಲಿದ್ದ ಪುಸ್ತಕಗಳು ಸಹ ಒಂದರ ಮೇಲೊಂದು ಸುಮ್ಮನೆ ಕುಳಿತಿದ್ದವು, ಭಟ್ಟರಿಗೆ ಪ್ರಸನ್ನನ ಪರಿಚಯವಿದ್ದಿದ್ದರಿಂದ ಏನು ಬಂದಿದ್ದು ಎಂದು ಮಾತಿಗೆ ತೊಡಗಿದರು, ಪ್ರಸನ್ನ ನನ್ನ ಪರಿಚಯ ಮಾಡಿಸಿದ ಇವನು ಮಹಾಬಲೇಶ್ವರ ಭಟ್ಟರ ಮೊಮ್ಮಗ ಎಂದು, ನಾನು ಸದಾಶಿವ ಮಾವ ಆಗಕ್ಕು ಎಂದೆ, ಅದಕ್ಕವರು ಹವ್ಯಕದಲ್ಲೆ ಮಾತನಾರಂಬಿಸಿದರು, ಗೊತಾತು ಮಹಾಬಲೇಶ್ವರ ಭಟ್ರು ಅಂದ್ರೆ ಸದಾಶಿವ ಚಂದ್ರನಾಥ ಎಲ್ಲ ಬಂತು, ಸದಾಶಿವ ಅವರು ನನಗೆ ಗುರುಗಳು ನಂಗ ತಪ್ಪು ಬರೆದಾಗ ಇದು ತಪ್ಪು ಸರಿ ಬರ್ಕಂಡು ಬಾ ಅಂತ ತಿದ್ದಿದವರೆ ಸದಾಶಿವ ಅಂದರು, ಅವರು ಆ ಮಾತು ಹೇಳಿದಾಗಲೆ ಅನ್ನಿಸಿದ್ದು ಓಹ್ ಭಟ್ಟರು ಇಷ್ಟೊಂದು ಸರಳ ವ್ಯಕ್ತಿ ಎಂದು, ನನ್ನ ಹತ್ತಿರ ಅವರು ಹೇಳಿಕೊಳ್ಳಲೇ ಬೆಕೆಂದೇನು ಇರಲಿಲ್ಲ, ಓಹ್ ಗೊತ್ತು ಸದಾಶಿವ ಕನ್ನಡ ಪ್ರಭದಲ್ಲಿದ್ದರು ಅಂದರೆ ಸಾಕಾಗಿತ್ತು, ಅವರೆ ಗುರುಗಳು ಅಂತ ಹೇಳಿದಾಗ ನನಗೆ ಅವರ ಮೇಲಿದ್ದ ಗೌರವ ಇನ್ನೂ ಹೆಚ್ಚಾಗಿದ್ದು. ಪ್ರಸನ್ನ ಮಠದ ಸಂಸ್ಥಾನದ ಬಗ್ಗೆ ಪುಸ್ತಕವೊಂದಕ್ಕೆ  ಮುನ್ನುಡಿ ಬರೆದುಕೊಡಬೇಕೆಂದು ವಿನಂತಿಸಿಕೊಂಡಾಗ, ಅದಕ್ಕೇನು ಸ್ವಲ್ಪ ಸಮಯ ಬೇಕು ಎಂದು ಒಪ್ಪಿಕೊಂಡಿದ್ದರು. ಭಟ್ಟರ ಕೈಕುಲುಕುವ ಅವಕಾಶ ನನಗೆ ದೊರೆತದ್ದು ಹೀಗೆ.

 ಕನ್ನಡ ಪ್ರಭದಲ್ಲಿದ್ದ ಭಟ್ಟರ ಟೀಮಿನವರ ಎಲ್ಲಾ ಕಾಲಂ ಗಳು ಅದೇ ಹೆಸರಿನಿನಲ್ಲಿ ಬರುತ್ತವಾ ಅಥವಾ ಬದಲಾಗುತ್ತದೆಯಾ, ಯಾವ ಯಾವ ಅಂಕಣ(ಕಾಲಂ)ಗಳು ಬರುತ್ತೆ ಅನ್ನೋ ಕಾತರ, ಅಂದಹಾಗೆ ಕನ್ನಡ ಪ್ರಭದಲ್ಲಿದ್ದ ತಪ್ಪಾಯ್ತು ತಿದ್ಕೋತೀವಿ ಅಂಕಣ ಮತ್ತೆ ಬರುತ್ತದೆಯಾ? ಬಂದ್ರೆ ಅದನ್ನ ತಪ್ಪಾಯ್ತು ಬಿಡಿ ಅಂತ ಮಾಡಿ, ತಿದ್ಕೋತೀವಿ ಅನ್ನೋ ಟ್ಯಾಗ್ ಲೈನ್ ಇರೋದು ಬೇಡ... 

ವಿಶ್ವವಾಣಿ ಪತ್ರಿಕೆಯ ಪ್ರತಿಯೊಬ್ಬರಿಗೂ ಶುಭ ಹಾರೈಕೆಗಳು.

ತುಂಬಾ ದಿನದ ನಂತರ ಬ್ಲಾಗಿನಲ್ಲಿ ಬರೆದಿದ್ದೇನೆ, ಅನಿಸಿಕೆ ತಿಳಿಸ್ತೀರಿ ಅಲ್ವಾ.ಕಾಯ್ತಾ ಇದ್ದೀನಿ ನಿಮ್ಮ ಅನಿಸಿಕೆಗಳಿಗೆ.