ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Thursday, April 2, 2009

ಬಂಗಲೆ ಮನೆ ರಹಸ್ಯ ಭಾಗ -1

ಅದೊಂದು ಮಲೆನಾಡಿನ ಪುಟ್ಟ ಹಳ್ಳಿ.. ಹೆಸರು ತೋಟಾಪುರ, ಈ ಊರು ಕಾಡು, ಬೆಟ್ಟ, ಹೊಳೆ,ಕೆರೆ ಹಾಗೂ ಎಲ್ಲಿ ನೋಡಿದರೂ ಹಚ್ಚ ಹಸಿರಿನ ತೋಟ ಗದ್ದೆಗಳ ಸಾಲುಗಳು ಕಣ್ಮನ ಸೆಳೆಯುತ್ತವೆ, ಆದರೂ ಆ ಊರಿನಲ್ಲೇನೋ ತೊಂದರೆ ಇದೆ. ತೋಟಾಪುರದ ಊರಿನ ಕೊನೆಯಲ್ಲಿರುವ ಪುರಾತನ ಕಾಲದ ಭವ್ಯ ಬಂಗಲೆ ಎರಡು ಅಂತಸ್ಥಿನ ಮನೆ ಅತ್ಯಂತ ದೊಡ್ಡದಾಗಿದ್ದು ಬರೀ ಮನೆಯೆಂದು ಕರೆಯುವಂತಿಲ್ಲ ಅದು ಅರಮನೆಗಿಂತಲೂ ಭವ್ಯ ಬಂಗಲೆ, ಆದರೂ ಇದಕ್ಕೆ ಬಂಗಲೆ ಮನೆಯಂತಲೇ ಹೆಸರು ಬಂದಿದೆ, ಅಲ್ಲಿ ಒಳಗೆ ಏನಿದೆ, ಅಲ್ಲಿ ಮನುಷ್ಯರು ವಾಸವಿದ್ದಾರ?, ಎಲ್ಲವೂ ನಿಗೂಡ, ರಾತ್ರಿಯ ಹೊತ್ತಿನಲ್ಲಿ ಚಿಕ್ಕವರಿರಲಿ ದೊಡ್ಡವರು ಈ ಬಂಗಲೆಯ ಹತ್ತಿರ ಬರಲು ಹೆದರುತ್ತಾರೆ.. ಅದಕ್ಕೂ ಅನೇಕ ಕಾರಣಗಳಿವೆ,ಬಂಗಲೆ ಮನೆಯ ಬಗ್ಗೆ ಹಳ್ಳಿಯವರು ಒಬ್ಬೊಬ್ಬರು ಒಂದೊಂದು ತರಹ ಮಾತನಾಡಿಕೊಳ್ಳುವುದು ಕೇಳಸಿಗುತ್ತದೆ, ಜನರಲ್ಲಿ ಅದೇನೋ ಭಯವಿದೆ.. ಆ ಮನೆಯಲ್ಲಿ ಭೂತವಿದೆ, ನಿಧಿ ಕಾಯುವ ಸರ್ಪವಿದೆ ಎನ್ನುವ ಮಾತು ಕೇಳಿಬರುತ್ತಿವೆ,ಆ ಮನೆಯ ಒಳಗೆ ಪ್ರವೇಶ ಮಾಡಿದವರಿಗೆ ಹಲವು ಸಂಕಷ್ಟಗಳು ಎದುರಾಗುತ್ತವೆ.. ಬಂಗಲೆಯೊಳಗೆ ಏನಿದೆ ಎಂದು ಪರೀಕ್ಷೆ ಮಾಡಲು ಹೋದವರು ಜೀವಂತವಾಗಿ ಹೊರಗೆ ಬಂದಿಲ್ಲವಂತೆ... ಹೀಗೆ ಏನೇನೋ ವದಂತಿಗಳು, ಗಾಳಿ ಸುದ್ದಿ ಹಬ್ಬಿಕೊಂಡಿದೆ. ಇವೆಲ್ಲಕ್ಕೂ ಸಾಕ್ಷಿಯೆಂಬಂತೆ ಅನೇಕ ಘಟನೆಗಳು ಆಗಲೇ ನೆಡೆದು ಹೋಗಿದೆ.

--------------------------------------********-------------------------------------------- ತೋಟಾಪುರ ಎಂದಾಕ್ಷಣ ಮೊದಲಿಗೆ ಬರುವ ಹೆಸರು ವೀರಭದ್ರ ಗೌಡರದು.... ವೀರಭದ್ರ ಗೌಡರೆಂದರೆ.. ಇಡೀ ಊರಿನ ಜನರ ಹಿತ ಕಾಯುವ ಯಜಮಾನರಂತೆ.. ಇವರ ಮನೆಯಲ್ಲಿ ದಿನವೂ ಏನಿಲ್ಲವೆಂದರೂ ೨೫ ಜನರಿಗೆ ಅನ್ನ ಸಂತರ್ಪಣೆ ಇರುತ್ತದೆ, ಯಾರಿಗೇ ಏನಾದರು ತೊಂದರೆಯಾದರೆ ಹಣಕಾಸಿನ ಮುಗ್ಗಟ್ಟಿದ್ದರೆ ಗೌಡರ ಹತ್ತಿರ ಹೇಳಿಕೊಂಡರೆ ಅವರಿಗೆ ಇಲ್ಲಾ ಎನ್ನುವ ಜಾಯಮಾನದವರೇ ಅಲ್ಲ.. ವೀರಭದ್ರ ಗೌಡರ ಅಪ್ಪಣೆಯಿಲ್ಲದೆ ಯಾವುದೇ ಕೆಲಸ ಕಾರ್ಯಗಳು ಆರಂಭಗೊಳ್ಳುವುದಿಲ್ಲ... ವೀರಭದ್ರ ಗೌಡರ ಭಾವಚಿತ್ರ ಅನೇಕರ ಮನೆಯ ದೇವರ ಮನೆಯ ದೇವರ ಕೆಳಗಿನ ಸ್ಥಾನವನ್ನು ಪಡೆದುಕೊಂಡಿದೆಯೆಂದರೆ ತಪ್ಪಾಗಲಾರದು,ನಂತರದ ಸ್ಥಾನ ಊರಿನ ಹಿರಿಯ ಶಿವರಾಮನದು, ಶಿವರಾಮ ಎನ್ನುವ ಹೆಸರು ಮೊದಲು ಸಿವರಾಮ ಎಂದಾಯಿತು, ಸಿವರಾಮಯ್ಯ ಎಂದು ಕರೆಯುವುದು ಸಹ ಜನರಿಗೆ ಕಷ್ಟವಾದುದರಿಂದ ಸೀತಜ್ಜ ಎಂದು ಕರೆಯುವುದನ್ನು ರೂಡಿಸಿಕೊಂಡರು, ಸೀತಜ್ಜನನ್ನು ಕಂಡರೆ ಊರಿನವರಿಗೆಲ್ಲ ಅಚ್ಚು ಮೆಚ್ಚು, ಏಕೆಂದರೆ ಸೀತಜ್ಜ 35 ವರ್ಷದಿಂದ ನಾಟಿ ವೈದ್ಯನಾಗಿ ಅನೇಕ ಜನರ, ಬಸರಿ, ಬಾಣಂತಿಯರನ್ನು ಕಾಯಿಲೆ ಕಸಾಲೆಗಳಿಂದ ಕಾಪಾಡುತ್ತಾ ಬಂದಿದ್ದಾನೆ.

ಸೀತಜ್ಜ ೩ ಜನ ಮೊಮ್ಮಕ್ಕಳು ನಿಜ್ಮಂಗಳೂರು ಎನ್ನುವ ದೊಡ್ಡ ಪಟ್ಟಣವೊಂದರಲ್ಲಿ ತಮ್ಮ ತಂದೆ ತಾಯಿಯ ಜೊತೆಗೆ ವಾಸವಾಗಿದ್ದಾರೆ,ಮೊದಲನೇಯವನು ಅಜಿತ ಹತ್ತನೆ ತರಗತಿಯಲ್ಲಿ ಓದುತ್ತಿದ್ದಾನೆ , ೨ನೇಯವನು ಸಮರ್ಥ ೯ನೇ ತರಗತಿಯಲ್ಲಿ ಓದುತ್ತಿದ್ದಾನೆ, ೩ನೇಯವಳು ಮತ್ತು ಚಿಕ್ಕವಳು ಸುನಯನ(ಅವಳ ಕಣ್ಣುಗಳು ಅತ್ಯಂತ ಸುಂದರವಾಗಿದೆ ಅವಳ ಕಣ್ಣುಗಳನ್ನು ನೋಡಿಯೇ ಈ ಹೆಸಿರಿಟ್ಟರೇನೋ ಅನ್ನಿಸದೇ ಇರದು. )೭ನೇ ತರಗತಿಯಲ್ಲಿ ಓದುತ್ತಿದ್ದಾಳೆ, ಮನೆಯಲ್ಲಿ ಅವಳನ್ನು ಪ್ರೀತಿಯಿಂದ ಪುಟ್ಟಿ ಎಂದೇ ಕರೆಯುತ್ತಾರೆ, ಇವರೆಲ್ಲರಿಗೂ ಬೇಸಿಗೆಯ ರಜೆ ಆರಂಭವಾಗಿದೆ, ಅಜ್ಜನ ಮನೆಗೆ ಹೋಗಲು ಅತ್ಯಂತ ಉತ್ಸಹಿತರಾಗಿದ್ದಾರೆ. ಈ ಮೂವರು ಕಿಲಾಡಿಗಳ ಅಪ್ಪ ತನ್ನ ಹೆಂಡತಿ ಮತ್ತು ಮಕ್ಕಳ ಜೊತೆ ಬರುತ್ತಿಲ್ಲವಾದ್ದರಿಂದ ಮಕ್ಕಳಿಗೆ ಹಿತವಚನ ನೀಡುತ್ತಿದ್ದಾರೆ, "ಅಜ್ಜ ಅಜ್ಜಿಗೆ ತೊಂದರೆ ಕೊಡಬಾರದು.. ಮತ್ತು ಬಂಗಲೆ ಮನೆಯ ಕಡೆಗೆ ಹೋಗಬಾರದು" ಎಂದು. ಮಕ್ಕಳು ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಿದ್ದಾರೆ.. ಏನಿರಬಹುದು ಆ ಮನೆಯಲ್ಲಿ ಎನ್ನುವ ಕೂತುಹಲ ಮೂವರಲ್ಲಿ ಹುಟ್ಟಿಕೊಳ್ಳುತ್ತಿದೆ, ಅಪ್ಪ ಬೈಯ್ಯುತ್ತಾರೆನ್ನುವ ಹೆದರಿಕೆಗೆ ಆಯ್ತಪ್ಪ ಎಂದು ಮೂರು ಜನರು ತಲೆ ಅಲ್ಲಾಡಿಸುತ್ತಾರೆ. ಯಾವಾಗ ಅಜ್ಜನ ಮನೆ ತಲುಪುತ್ತೀವೋ, ಬಂಗಲೆ ಮನೆ ಹೇಗಿರಬಹುದು ಎನ್ನುವ ಆಲೋಚನೆ ಆರಂಭವಾಗಿದೆ. ಹೊರಡಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ, ಬಟ್ಟೆ ಬರೆಗಳನ್ನು ಜೋಡಿಸಿಕೊಳ್ಳುತ್ತಿದ್ದಾರೆ. ಬರುವ ಗುರುವಾರಕ್ಕೆ ಬಸ್ಸಿನ ಟಿಕೆಟ್ಟು ತೆಗೆಸಿಟ್ಟಿದ್ದಾರೆ.

-----------------------------------*********-------------------------------------------------
ಇತ್ತ ಬಂಗಲೆ ಮನೆಯ ಹತ್ತಿರ ಒಂದು ಅವಘಡ ಸಂಭವಿಸಿ ಹೋಗಿದೆ, ಅಪರಿಚಿತ ವ್ಯಕ್ತಿಯೊಬ್ಬ ರಕ್ತ ಖಾರಿಕೊಂಡು ಸತ್ತುಹೊಗಿದ್ದಾನೆ,ಮೈ ಮೇಲೆ ಯಾವುದೋ ಹರಿತವಾದ ಆಯುಧದಿಂದ ತಿವಿದ ಆಳವಾದ ಗುರುತು ಹಾಗೇ ರಕ್ತದಿಂದ ಹೆಪ್ಪುಗಟ್ಟಿ ಹೋಗಿದೆ, ಜನರ ಬಾಯಲ್ಲಿ ಆಗಲೇ ಹಲವು ಕತೆ ಪ್ರಾರಂಭವಾಗಿಬಿಟ್ಟಿವೆ.."ಬಂಗಲೆ ಮನೆಯ ನಿಧಿ ಕದಿಯಲು ಬಂದ ಕಳ್ಳನಿರಬೇಕು ಅಥವಾ ಬಂಗಲೆ ಮನೆಯ ಪರೀಕ್ಷೆ ಮಾಡಲು ಹೋಗಿರಬೇಕು ಅದಕ್ಕೇ ಈ ಶಿಕ್ಷೆ ಆಗಿದೆ ಎಂದು ಮಾತನಾಡಿಕೊಳ್ಳುತ್ತಾರೆ.. ಪೊಲೀಸರೂ ಈ ವಿಚಾರದಲ್ಲಿ ತಲೆ ಹಾಕಲು ಹೆದರುತ್ತಾರೆ, ಏಕೆಂದರೆ, ಎರಡು ವರ್ಷದ ಹಿಂದೆ ಹೊಸದಾಗಿ ಬಂದ ಎಸ್.ಐ ಕೂತೂಹಲ ತಾಳಲಾರದೆ ಬಂಗಲೆಗೆ ರಾತ್ರಿ ಯಾರಿಗೂ ಹೇಳದೆ ಒಬ್ಬನೇ ಬಂದಿದ್ದ, ಒಂದು ವಾರದ ನಂತರ ಅವನ ಹೆಣ ಪಕ್ಕದ ಕೆರೆಯಲ್ಲಿ ಕೊಳೆತು ನಾರುತ್ತಿತ್ತಂತೆ. ಅದು ಊರಿನವರೆಲ್ಲರಿಗೂ ತಿಳಿದ ವಿಷಯವಾಗಿದೆ.. ಅದಕ್ಕಾಗಿಯೇ ಪೋಲಿಸರಿಗೆ ಇತ್ತ ಸುಳಿಯಲು ಹೆದರುತ್ತಾರೆ.. ತಮ್ಮ ಹೆಂಡತಿಯ ತಾಳಿ ಗಟ್ಟಿಯಾಗಿರಲಿ ಎಂದು ಬೇಡಿಕೊಳ್ಳುತ್ತಿರುತ್ತಾರೆ.

ಕೆಳಗಿನ ಮನೆಯ ಬೀರ ಮಾದೇಶನನ್ನು ಉದ್ದೇಶಿಸಿ ಹೇಳುತ್ತಾನೆ "ನಾನು ನಿನ್ನೆ ರಾತ್ರಿ ತೋಟದ ಕಡೆ ಹೊಂಟಿದ್ನ ಬಂಗ್ಲೆ ಮನೆ ಎದ್ರಿಗೆ ನೋಡ್ತಿವ್ನಿ ಮನೆ ಹತ್ರ ಹೊಗೆ ಬರಕೆ ಸುರು ಆತು.. ನಿದಾನಕ್ ಗೆಜ್ಜೆ ಶಬ್ದ ನನ್ನ ಕಿವಿಗೆ ಬಿಳಕ್ ಹತ್ತು ಅಂತ್ನಿ... ನಾನು ಮರದ ಮರೆನಾಗೆ ನಿಂತ್ಕಂಡು ನೋಡ್ತಿವಿನಿ.. ನಿದಾನಕ್ಕೆ ಬಂಗ್ಲೆ ಮನೀದು ಬಾಗ್ಲು ಕಿಟಾ....ರ್ ಅಂತ ತೆಗಿತಲೆ... ಒಬ್ಳು ಬೆಳ್ಳಗಿರ ಐನಾತಿ ಹುಡ್ಗಿ ೧೮ ವರ್ಷ ಆಗಿರ್ಬೈಯ್ದು..ಹೊರಗೆ ಬಂದು ನಿಂತ್ಕಂಡ್ಲು,ಬಿಳೇ ಸೀರೆನ ಆಳವಾದ ಹೊಕ್ಕಳ ಕೆಳಗೆ ಉಟ್ಗಂಡಿದ್ಲು ಕಣ್ಲಾ.. ಆಹಾ ಎಂತ ಮೈಕಟ್ಟು ಅನ್ತಿಯಾ ನೋಡಿರೆ ನೋಡ್ತಾನೆ ಇರನಾ ಅಂತ ಅನ್ಸಂಗೆ ಐದಾಳಪಾ.. ನಂಗೆ ಮೈಯಲ್ಲ ಜುಂ ಗುಟ್ಟೋತು ಅಂತೀನಿ..ಎಂದು ಎಲೆ ಅಡಿಕೆಯ ಕವಳದಿಂದ ಇಡೀ ಬಾಯಿ ಕೆಂಪಗಾಗಿದೆ.. ತುಟಿಯಂಚಿನಲ್ಲಿ ನಗುತ್ತಾ ಕವಳ ತುಪ್ಪಿ ಕೇಳ್ಲಾ ಮುಂದೆ ಇಲ್ಲಿ.. ಅವ್ಳು ನನ್ನ ಕಡಿಗೆ ತಿರುಗಿ ನೆಡ್ಯಕ ಹತ್ತಿದ್ಲು,ಗೆಜ್ಜೆ ಗಲ್ ಗಲ್ ಅಂತ ಶಬ್ದ ಹತ್ರಾ ಆಗ್ತಾ ಆಗ್ತಾ ಒಂತರಾ ಎದೆ ಮೇಲೆ ಆಕಿ ನೆಡ್ಯಾಕ್ ಹತ್ತಾಳೇನೊ ಅನ್ನಂತಾ ಅನುಭವ ಸುರು ಆತು, ಆಕಿ ಹತ್ರಾ ಬಂದು ವಯ್ಯಾರದಿಂದ ಬಾಯಾಗೆ ನನ್ನ ನೋಡ್ತಾ ಉಗುರು ಕಡ್ಯಾಕೆ ಹತ್ತಿದ್ಲು.. ಕಡೀಕೆ ಎನಾತ್ಲಾ ಬೀರಾ...... ತಡಿಲಾ ಅದನ್ನೆ ಹೇಳಾಕ್ ಹೊಂಟೇನಿ.. ನಾನು ಗೆಜ್ಜೆ ನೋಡವ ಅಂತ ಕಾಲು ನೋಡ್ತ್ನಿ ........... ಪಾದ ಹಿಂದೆ ಮುಂದೆ ಐತೆ, ನಂಗೆ ಹೆದ್ರಿಕೆ ಸುರು ಆತು ಓಡಿ ಬಂದ್ಬಿಟ್ಟೆ.." ಮದೇಶ ಕಣ್ಣು ಕಣ್ಣು ಬಿಡುತ್ತಾನೆ. ಏನಾಗುತ್ತಿದೆಯೆಂದು ಆತನಿಗೆ ಅರ್ಥವಾಗುತ್ತಿಲ್ಲ
--------------------------------------------******---------------------------------------------

ಮಗಳು ಮೊಮ್ಮಕ್ಕಳ ಆಗಮನದಿಂದ ಸೀತಜ್ಜನ ಮನೆಯಲ್ಲಿ ಹಬ್ಬದ ವಾತವರಣ ಏರ್ಪಟ್ಟಿದೆ.. ಸೀತಜ್ಜನ ಹೆಂಡತಿ ರಮಾಮಣಿ ಸಂಭ್ರಮದಿಂದ ಅಡುಗೆ ಮನೆಯಲ್ಲಿ ಓಡಾಡುತ್ತಿದ್ದಾಳೆ, ಒಬ್ಬಟ್ಟು ಹೋಳಿಗೆಯ ಊಟ ಸಿದ್ಧವಾಗುತ್ತಿದೆ "ಅಳಿಯಂದರು ಬರಬಹುದಿತ್ತು" ಎಂದು ಮಗಳನ್ನು ಸೀತಜ್ಜ ವಿಚಾರಿಸುತ್ತಾರೆ ಅದಕ್ಕೆ ಮಗಳು ಸರಸ್ವತಿ ಹೇಳುತ್ತಾಳೆ "ಅವರಿಗೆ ತುಂಬಾ ಕೆಲಸ ಅಪ್ಪಯ್ಯ ಅದಕ್ಕೆ ಅವರು ನಮ್ಮ ಜೊತೆ ಬರಲಿಲ್ಲ" ಎಂದು. ಅಜಿತ ಅಪ್ಪ ಕೊಡಿಸಿದ(ಹಠ ಮಾಡಿ ತೆಗಿಸಿಕೊಂಡ) ಹೊಸ ಸೊನಾಕಿಯ ವೈನ್ 79 ಮೊಬೈಲ್ನಿಂದ ಅಪ್ಪನಿಗೆ ಫೋನ್ ಮಾಡಿ ಕ್ಷೇಮವಾಗಿ ತಲುಪಿದ್ದೆವೆಂದು ಹೇಳುತ್ತಾನೆ.. ಆ ಮೊಬೈಲಿನಲ್ಲಿ ಜಿ.ಪಿ.ಎಸ್(Global positioning system ಸೌಲಭ್ಯವನ್ನು ಹೊಂದಿದ್ದು ಯಾವುದೇ ಸ್ಥಳದ ನಕ್ಷೆಯನ್ನು ಉಪಗ್ರಹದ ಸಹಾಯದಿಂದ ತೋರಿಸುತ್ತದೆ..ಅಜಿತನಿಗೆ ಏನೋ ನೆನಪಾದಂತಾಗಿ ಮೊಬೈಲ್ ನಲ್ಲಿ ಮೆನು ಗೆ ಹೋಗಿ ಜಿ,ಪಿ.ಎಸ್ ಸಾಧನವನ್ನು ಉಪಗ್ರಹಕ್ಕೆ ಸಂಪರ್ಕಿಸಿ.. ಭಾರತದ ನಕ್ಷೆ ಗೆ ಹೋಗಿ ಅಲ್ಲಿಂದ ಕರ್ನಾಟಕದ ಇರುವ ಅಜ್ಜನ ಮನೆಯಾದ ತೋಟಾಪುರವನ್ನು ಹುಡುಕುತ್ತಿದ್ದಾನೆ... ಹೃದಯ ಬಡಿತ ಹೆಚ್ಚಾಗುತ್ತಿದೆ ನಿಧಾನವಾಗಿ ಭಾರತ-> ಕರ್ನಾಟಕ ಎಂದು ತೋರಿಸುತ್ತಿದೆ.. ಈಗ zoom ಮಾಡಿ ಹುಡುಕುತ್ತಿದ್ದಾನೆ ಕರ್ನಾಟಕದ ಕಿಡ್ನಿ! ಭಾಗದಲ್ಲಿರುವ ಊರು ತೋಟಾಪುರದ ಬಂಗಲೆ ಮನೆ ಎಲ್ಲಿದೆ ಎಂದು..ಊರಿನ ಕೆಲವು ಸ್ಥಳಗಳ ಗುರುತು ಸಿಗುತ್ತಿದೆ.. ರಸ್ತೆಯ ಪಕ್ಕದಲ್ಲಿರುವ ತೋಟಾಪುರದ ಬಸ್ಸ್ಟ್ಯಾಂಡ್ ಕಾಣಿಸುತ್ತಿದೆ ಜೊತೆಗೆ ಮಣ್ಣಿನ ರಸ್ತೆ ಕೇಸರಿ ಬಣ್ಣದಲ್ಲಿ ಎದ್ದು ಕಾಣುತ್ತಿದೆ ಹಾಗೆ ಮುಂದೆ ಬಲಭಾಗದಲ್ಲಿ ಕಾಣುತ್ತಿರುವ ಮಣ್ಣಿನ ದಾರಿ ಪಕ್ಕದಲ್ಲೊಂದು ಕಾಲುದಾರಿ ಶ್ರೀರಂಗ ಸ್ವಾಮಿ ದೇವಸ್ತಾನಕ್ಕೆ ಹೋಗುತ್ತದೆ..ಅದನ್ನು ದಾಟಿಕೊಂಡು ಹೋದರೆ ತೋಟಾಪುರದ ದಾರಿ.. ಮುಂದೆ ಬಂದರೆ ಒಟ್ಟಿಗೆ ೪ ಮನೆ ಕಾಣುತ್ತಿದೆ.. ಅದರ ಪರಿಚಯವೂ ಗೊತ್ತಾಗುತ್ತಿದೆ ಎರಡನೇ ಮನೆಯೇ ತನ್ನ ಅಜ್ಜನ ಮನೆ ಎಂದು. ಹಾಗೆ ಮುಂದೆ ಹೋದರೆ ಒಂದೇ ರಸ್ತೆ ಊರ ಕೊನೆಯ ಪ್ರದೇಶದಲ್ಲಿ ಒಂದು ಕೆರೆ ಕಾಣಿಸುತ್ತಿದೆ.. ಅದರ ಪಕ್ಕದಲ್ಲಿ ಒಂದು ದೊಡ್ಡದಾದ ಮನೆ ಹಳೆಯಮನೆಯೆಂದು ಗೊತ್ತಾಗುತ್ತಿದೆ.. ಇದೆ ಬಂಗಲೆ ಮನೆ ಆಗಿರಬಹುದೆಂದು ಅವನ ಮನಸ್ಸು ಹೇಳುತ್ತದೆ.. ಅಷ್ಟರಲ್ಲಿ ತಾಯಿ ಊಟಕ್ಕೆ ಕರೆಯುತ್ತಾಳೆ.. ಉಫ್ ಎಂದು ಹೊಸದೊಂದು ಲೋಕದಿಂದ ಹೊರಬಂದಂತ ಅನುಭವ ಅಜಿತನಿಗೆ ಆಗುತ್ತದೆ... ಮೊಬೈಲನ್ನು ಮಡಚಿಟ್ಟು ಊಟಕ್ಕೆ ಏಳುತ್ತಾನೆ.. ಮನಸ್ಸು ಬಂಗಲೆ ಮನೆಯನ್ನು ನೋಡಲೆ ಬೇಕು.. ಅಲ್ಲೇನಿರಬಹುದು ಎಂಬ ಕುತೂಹಲ ತಲೆಯೊಳಗೆ ಕೊರೆಯುತ್ತಿದೆ... ಇನ್ನೆಷ್ಟು ದಿನ ಕಾಯಬೇಕು.. ಆದರೂ ಕಾಯಲೇ ಬೇಕು....

ಮುಂದುವರೆಯುತ್ತದೆ................

10 comments:

PARAANJAPE K.N. said...

ಮನಸ್ವಿ,
ಬಂಗಲೆ ಮನೆ ರಹಸ್ಯ ಓದಿದೆ. ಚೆನ್ನಾಗಿದೆ. ಧಾರಾವಾಹಿಯ ಮು೦ದಿನ ಭಾಗ ಬೇಗ ಬರಲಿ

ಮೃತ್ಯುಂಜಯ ಹೊಸಮನೆ said...

ಕುತೂಹಲಕಾರಿಯಾಗಿದೆ. ಕತೆ ಬರೆವ ಮೊದಲ ಪ್ರಯತ್ನವಾ?

Radhika Nadahalli said...

ಓಹ್ ಸಸ್ಪೆನ್ಸ್ ಕಥೆ...ಚನಾಗಿದ್ದು...ಬೇಗ ಮುಂದಿನ ಭಾಗ ಬರಲಿ :-)

Harisha - ಹರೀಶ said...

ಇನ್ನೆಷ್ಟು ದಿನ ಕಾಯಬೇಕು.. ಆದರೂ ಕಾಯಲೇ ಬೇಕು.... :-(

ಬೇಗ ಬರಿ...

Dr.Gurumurthy Hegde said...

ಮನಸ್ವೀ,
ರಹಸ್ಯವನ್ನು ಹೆಣೆದ ರೀತಿ ತುಂಬಾ ಚೆನ್ನಾಗಿದೆ, ಒಳ್ಳೆ ಕುತೂಹಲವನ್ನು ಹುತ್ತಿಸುತ್ತಿರಿ, ಬಹಳ ಕಾತುರತೆ ಮೂಡಿದೆ ಮುಂದಿನ ಕಥೆಯ ಬಗ್ಗೆ

mg bhat said...

alli mobile network sikkirodu keli tumba santosha aythu........bega mundevarisi ....all the best.....

BMK said...

ಜಿ.ಪಿ.ಎಸ್ ಮೊಬೈಲ್ ನಲ್ಲಿ ಬೆಂಗಳೂರಿನ map ಗಳೆ ಸರಿಯಾಗಿ ಕಣೋಲ್ಲ ಅಂತಹುದರಲ್ಲಿ ನಿಮ್ಮ ಕಥೆಯಲ್ಲಿ ಹಳ್ಳಿಯ ಕಾಲುದಾರಿಯನ್ನೂ ಅದರಲ್ಲಿ ಬರುವ ಹಾಗೆ ತೋರಿಸಿದ್ದೀರಿ..!!!

shivu.k said...

ಮನಸ್ವಿ...

ಬಂಗಲೇ ಕತೆ ಕುತೂಹಲ ಕಾರಿಯಾಗಿದೆ.....ಬೇಗ ಉಳಿದದ್ದು ಬರಲಿ....ಮತ್ತೆ ಸ್ವಲ್ಪ ಚುಟುಕಾಗಿ ಇದ್ದರೆ ಇನ್ನೂ ಚೆನ್ನಾ...ಅನ್ನಿಸುತ್ತೆ....
ಒಟ್ಟಾರೆ ಕಾಯುತ್ತೇನೆ....

ಶರಶ್ಚಂದ್ರ ಕಲ್ಮನೆ said...

ಮನಸ್ವಿ,
ಕುತೂಹಲ ಜಾಸ್ತಿ ಆಗ್ತ ಇದ್ದು.. ಬೇಗ ಮುಂದಿನ ಭಾಗ ಬರ್ಲಿ.. ಜಾಸ್ತಿ ಕಾಯಿಸಡ ;)

ಶರಶ್ಚಂದ್ರ ಕಲ್ಮನೆ

ಮನಸ್ವಿ said...

@PARAANJAPE K.N.& Sinchana &Shivu
ಧನ್ಯವಾದಗಳು

@ಹೊಸಮನೆ
ಹೌದು ಕಥೆ ಬರೆಯುವ ಮೊದಲ ಪ್ರಯತ್ನ, ಎರಡನೇ ಭಾಗ ವನ್ನು ಬರೆದಿದ್ದೇನೆ ಓದಿ ಕ್ರಿಟಿಕ್ಸ್ ಬರೆಯಿರಿ, ಎಲ್ಲಿ ತಪ್ಪು ಮಾಡಿದೆ ಅಥವಾ ಎಲ್ಲಿ ಕಥೆ ಚನ್ನಗಿದೆ ಎಂದು ಬರೆದರೆ ಅನುಕೂಲವಾಗುತ್ತದೆ :)

@ Harish
ಹೆಚ್ಚು ದಿನ ಕಾಯ್ಸಲ್ಲೆ ಈ ಸಾರಿ, ಮುಂದಿನ ಭಾಗ ಓದಿ ಅನಿಸಿಕೆ ತಿಳಿಸು, ಕಾಯ್ತಾ ಇದ್ದಿ...

Dr.Gurumurhty Hegde
ಧನ್ಯವಾದಗಳು ಮುಂದಿನ ಭಾಗ ಬರೆದಿದ್ದೇನೆ ಓದಿ ಅನಿಸಿಕೆ ತಿಳಿಸಿ.

Mgbhat
Halli andre entadu mobile cable ilde iro ooru anta na! halligalu kateyalladru prakaashishali geleya!!

@BMK
ಮುಂದಿನ ಭಾಗದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರವಿದೆ, ಕಥೆ ಓದಿ ಅನಿಸಿಕೆ ತಿಳಿಸಿ.

@ಶರಶ್ಚಂದ್ರ ಕಲ್ಮನೆ
ನಿರಾಶೆ ಮಾಡಿದ್ದಕ್ಕೆ ಕ್ಷಮೆಯಿರಲಿ..