ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Tuesday, July 8, 2008

ಕೋಪವೇ ನಿನ್ನ ಅರಿತವರಾರು ? (ಕೋಪವ ನೀ ಬಿಟ್ಟರೂ.. ಅದು ನಿನ್ನ ಬಿಡದು!)

ಸಿಟ್ಟು, ಕೋಪ ತಾಪಕೆಂದು ಕೊನೆ?!

ಅರೆಕ್ಷಣದಿ ನೆತ್ತಿಯೇರಿ ಸ್ತಿಮಿತ ಕಳೆದು

ಪರಿಸ್ಥಿತಿಯ ಕೈ ಮೀರಿಸಿಬಿಡುವ ಜಾಣ್ಮೆ ಇನ್ಯಾರಲ್ಲಿ ಇರಲು ಸಾದ್ಯ!

ಮೈ ಬಿಸಿ ಏರಿಸಿ

ಕಿವಿ ಕೆಂಪಾಗಿಸಿ

ಮೊಗದಂದವ ಕೆಡಿಸಿ

ತಮಾಷೆ ನೋಡುವ ಪಾಪಿ ಈ ಕೋಪ !ಅತಿ ಕೋಪ ಸ್ನೇಹ ಸಂಬಂದಗಳ ಮುರಿಯುವುದಂತೆ (ಅಂತೆ?!)

ಹಾಗೆಂದ ಮಾತ್ರಕೆ ಕೋಪವೆ ಬಾರದವರು ಇರಲು ಸಾದ್ಯವೇ?

ಏನಾದರು ಆಗಲೀ ಕೋಪ ತಾಪದ ನಡುವೆ ಕೊಂಚ ಇರಲಿ ತಾಳ್ಮೆ!

Monday, July 7, 2008

ಮೌನಿ ಸದಾಶಿವರಿಗೆ ನುಡಿ ನಮನ

೧೯೩೯ರಲ್ಲಿ ಗುಂಡುಮನೆ ಶ್ರೀಪಾದರಾಯರ ಮತ್ತು ಲಲಿತಮ್ಮನ ಮೊದಲ ಮಗನಾಗಿ ಹುಟ್ಟಿದ ಇವರು
ಎಂ.ಎ (ರಾಜ್ಯಶಾಸ್ತ್ರ ) ಪದವಿ ಪಡೆದು ವೃತ್ತಿಯಾಗಿ ಪತ್ರಿಕೋದ್ಯಮದ ಆಯ್ಕೆ ಮಾಡಿಕೊಂಡು ಪ್ರಜಾವಾಣಿಯಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿ ನಂತರ ಕನ್ನಡ ಪ್ರಭದಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಪತ್ರಿಕಾ ಪ್ರಪಂಚದಲ್ಲಿ ಅಜಾತಶತ್ರು ಎನಿಸಿಕೊಂಡ ಇವರು ಹಿತ ಮಿತವಾಗಿ ಮಾತನಾಡುತ್ತ ಮೌನಿ ಎಂದೆ ಗುರುತಿಸಲ್ಪಟ್ಟಿದ್ದರು, ಕನ್ನಡ ಪ್ರಭದಲ್ಲಿ ಅನೇಕ ಸುದಾರಣೆಗಳನ್ನು ಮಾಡಿದ್ದಾರೆ.. ಆರೋಗ್ಯ ಪ್ರಭ ಸಾಪ್ತಾಹಿಕದ ಪ್ರಾರಂಭ ಮಾಡಿದವರು ಜಿ.ಎಸ್.ಸದಾಶಿವ. ಆಫೀಸಿನಲ್ಲಿ ಬಿಡುವಿದ್ದಾಗ ಸುಡುಕು ಬಿಡಿಸುವುದು ಇವರ ನೆಚ್ಚಿನ ಹವ್ಯಾಸವಾಗಿತ್ತು.
ಪತ್ರಿಕಾ ರಂಗದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಪತ್ರಿಕಾ ಲೋಕದಲ್ಲಿ ಇವರು ಪಡೆದ ಖ್ಯಾತಿಗಿಂತಲೂ ಕನ್ನಡ ಸಾಹಿತ್ಯಲೋಕಕ್ಕೆ ನೀಡಿದ ಕೊಡುಗೆ ಅಪಾರ..

ಇವರ ಪ್ರಕಟಿತ ಕಥಾಸಂಕಲನಗಳು

'ಮಗುವಾಗಿ ಬಂದವನು '(ತರುಣ ಲೇಖಕರ ಸಂಘ ೧೯೬೪)

'ತುಣುಕುಗಳು' (ಅಕ್ಷರ ಪ್ರಕಾಶನ ೧೯೭೩ )

'ನಂ ಕೌಲಿ ಕಂಡ್ರ' (ಅಕ್ಷರ ಪ್ರಕಾಶನ ೧೯೭೪)

೧೯೯೯ ರಲ್ಲಿ ಇವರು ಬರೆದ ಕತೆಗಳನ್ನು ಒಗ್ಗೂಡಿಸಿ ಪ್ರಿಸಂ ಬುಕ್ಸ್ ನವರು 'ಜಿ.ಎಸ್.ಸದಾಶಿವ 'ಇದುವರೆಗಿನ ಕತೆಗಳು' ಎನ್ನುವ ಪುಸ್ತಕವನ್ನು ಮುದ್ರಿಸಿದ್ದಾರೆ.

ಅನುವಾದಿತ ಕತೆಗಳು
ಚೆಲುವು (ಮಂಗೋಲಿಯ, ಚೀನಾ, ಜಪಾನ್, ಕೊರಿಯ ಕತೆಗಳು ೧೯೮೦),

'ತಾಯಿ' (೧೯೮೭)

'ಕ್ಯಾಥರೀನ್ ಬ್ಲಮ್' (೧೯೮೮)'

'ಶಿಬಿರದ ದಾರಿಯಲ್ಲಿ' (೧೯೯೫)

ಹೀಗೆ ಹಲವಾರು ಮಕ್ಕಳ ಕತಾ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ,
'ಹದಿನೈದು ಕಥೆಗಳು',
ಪ್ರಶಸ್ತಿ -೮೩ ಸಂಕಲನಗಳನ್ನು ಇತರ ಲೇಖಕರ ಜೊತೆ ಸೇರಿ ಸಂಪಾದಿಸಿದ್ದಾರೆ

ಇವಿಷ್ಟೇ ಅಲ್ಲದೆ 'ಆಕ್ಸಿಡೆಂಟ್' ಮತ್ತು 'ಮೂರು ದಾರಿಗಳು' ಚಲನಚಿತ್ರಗಳಿಗೆ ಸಂಭಾಷಣೆ, 'ಆಕ್ರಮಣ' ಚಿತ್ರಕ್ಕೆ ಚಿತ್ರಕಥೆ ಹಾಗು ಸಂಭಾಷಣೆ, 'ಎಲ್ಲಿಂದಲೋ ಬಂದವರು' ಚಿತ್ರಕ್ಕೆ ಚಿತ್ರಕಥೆ (ಪಿ.ಲಂಕೇಶರ ಜೊತೆ ಸೇರಿ )ಬರೆದಿದ್ದಾರೆ.

ನಿಮ್ಮ ನೆನಪು ಇಂದೇಕೋ ಬಹಳವಾಗಿ ಕಾಡುತ್ತಿದೆ, "ಮಾವ (ನನ್ನ ಸೋದರತ್ತೆಯ ಗಂಡ) ನೀವು ಅತ್ತೆ ನಿಮ್ಮ ತಂದೆ ತಾಯಿಯ ಪುಣ್ಯ ತಿಥಿಗೆ ಹೂಗೊಪ್ಪಲಿಗೆ ಬಂದಾಗ ಬೇದೂರಿಗೆ ಬರದೆ ಹೋಗುತ್ತಲೇ ಇರಲಿಲ್ಲ, ವರ್ಷಕ್ಕೆ ೨ ಸಾರಿ ನೀವು ಬಂದಾಗಲೆಲ್ಲ ಮನೆಯಲ್ಲಿ ಸಂತೋಷ ಹಬ್ಬದ ವಾತಾವರಣ ಏರ್ಪಡುತಿತ್ತು.


ಹಾಗೆಯೇ ಜೆ.ಪಿ ನಗರದ ನಿಮ್ಮ ಮನೆಯನ್ನು ಮರೆಯಲು ನನಗೆ ಸಾದ್ಯವೇ ಆಗುತ್ತಿಲ್ಲ..ಆ ಮನೆಯಲ್ಲಿ ಏನೋ ಮನಸಿಗೆ ಖುಷಿ ಕೊಡುತ್ತಿತ್ತು, ಮನೆಯ ಹೆಸರು 'ತಳಿರು' ಎಂದಾಗಿತ್ತು. ಆ ಮನೆಯನ್ನು ಮಾರಾಟ ಮಾಡಿ ಮಗಳು ಅಳಿಯನ ಜೊತೆ ಯಲಹಂಕದಲ್ಲಿ ಇದ್ದು ಕೆಲವು ದಿನಗಳು ಆಗಿದ್ದವೇನೋ ಆಗಲೇ ಅವರಿಬ್ಬರ ಆಫೀಸ್ ಕೂಡ ಜೆ.ಪಿ.ನಗರದ ಹತ್ತಿರಕ್ಕೆ ಸ್ಥಳಾಂತರವಾಯಿತು.. ಆಗ ನಿಮ್ಮ ಮನಸಿನೊಳಗೆ ಒಂದು ಕ್ಷಣ "ಯಾವ ಗಳಿಗೆಯಲ್ಲಿ ನಾನು ಆ ಮನೆಯನ್ನು ಮಾರಾಟ ಮಾಡಿದೆನೋ" ಅನಿಸಿತ್ತೇನೋ.. ನಿಮಗೂ ಆ ಮನೆಯ ಮೇಲೆ ಎಷ್ಟೊಂದು ಪ್ರೀತಿಯಿತ್ತೆಂದು ಗೊತ್ತು.

ಅಳಿಯ ಮಗಳೊಂದಿಗೆ ಇರಬೇಕೆನ್ನುವ ಆಸೆಯೆಂದ ಹೊಸ ಮನೆಯನ್ನು ಕಟ್ಟಿಸಿದ್ದಿರಿ.. ಆ ಮನೆಯ ಪ್ರವೇಶದ ಕರೆಯ ಮಾಡಲು ಸಾಗರದಿಂದ ತಲವಾಟ, ಯಲ್ಲಾಪುರದವರೆಗೆ ಹೋಗಿಬಂದ ನೆನಪುಗಳು ಇನ್ನು ಹಸಿರಾಗಿವೆ.. ಹೊಸ ಮನೆಯ ಅದ್ದೂರಿ ಪ್ರವೇಶವಾಗಿ ಆಗಲೇ ೨ವರ್ಷಗಳು ಕಳೆದು ಹೋಗಿವೆ ಆ ಮನೆಗೂ ಇಟ್ಟ ಹೆಸರು "ತಳಿರು". ಹೊಸ ಮನೆಯಲ್ಲೂ ನೀವು ಅಪಾರ ನೆನಪುಗಳನ್ನು ಬಿಟ್ಟು ಹೋಗಿದ್ದೀರಿ.

ನೀವು ನಮ್ಮ ನೆನಪುಗಳಲ್ಲಿ ಶಾಶ್ವತವಾಗಿ ನೆಲೆಯೂರಿಬಿಟ್ಟಿದ್ದೀರಿ, ಅದನ್ನು ಅಳಿಸಲು ಯಾರಿಂದಲೂ ಸಾದ್ಯವಿಲ್ಲ. ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿ ಆಗಲೇ ಒಂದು ವರ್ಷ ಕಳೆದು ಹೋಗಿದೆ. ಪತ್ರಿಕಾ ಪ್ರಪಂಚದಲ್ಲಿ ನೀವು ಅಷ್ಟೊಂದು ಜನ ಅಭಿಮಾನಿಗಳನ್ನು ಸ್ನೇಹಿತರನ್ನು ಹೊಂದಿದ್ದೀರಿ, ಎಂದು ತಿಳಿದದ್ದೇ ನೀವು ನಮ್ಮನ್ನು ಅಗಲಿ ಹೋದ ನಂತರ ಸೇರಿದ ಜನ ಸಾಗರ, ಸುರಿಸಿದ ಅಶ್ರುಧಾರೆ, ಪತ್ರಿಕೆ, ಟಿ.ವಿ, ಮಾಧ್ಯಮಗಳಲ್ಲಿ ನಿಮಗೆ ಸಲ್ಲಿಸಿದ ಶ್ರದ್ದಾಂಜಲಿ ನೋಡಿದ ಮೇಲೆ ಗೊತ್ತಾಗಿದ್ದು. ನಾನಾ ತಾಲೂಕು, ಜಿಲ್ಲೆ, ರಾಜ್ಯಗಳಲ್ಲಿ ನಿಮಗೆ ಶ್ರದ್ದಾಂಜಲಿ ಸಮರ್ಪಿಸಲಾಯಿತು. ತುಂಬಾ ತಡವಾಗಿ ನನ್ನ ಬ್ಲಾಗಿನ ಪುಟದಲ್ಲಿ ನಿಮಗೆ ನುಡಿ ನಮನಗಳನ್ನು ಅರ್ಪಿಸುತ್ತಿದ್ದೇನೆ " .