ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Saturday, September 19, 2020

ಪ್ರೀತಿಯಿಲ್ಲದ ಮೇಲೆ

 ಪ್ರೀತಿಯ ಮೊಳಕೆಯೊಡೆದು

ಸಲುಗೆಯ ಸಸಿಯೊಡೆದು

ಹಚ್ಚ ಹಸಿರು ತೆನೆಯೊಡೆದು

ಹೆಮ್ಮರವಾಗಿ ಟಿಸಿಲೊಡೆದು

ಆಕಾಶದೆತ್ತರಕೆ ತಲೆಯೆತ್ತಿ ಹೊರಟಿರಲು

ಬಿಳಲುಗಳು ಭೂಮಿಯತ್ತ ಚಾಚುತಲಿರಲು


ಕೊಡಲಿಯಿಂದ ಭಾಹುಗಳ ಕಡಿದು

ಬೇರುಗಳ ಕಿತ್ತು ಹಾಕಿದವಳು ನೀನು  

ಹಸಿರೇ ಉಸಿರೆಂದವಳು ನೀನು

ನನ್ನುಸಿರು ನೀನೆ ಅಂದವನು ನಾನು

ಭಾನೆಗಳ ಬಣ್ಣದಾಟದಲಿ ಬಡವಾಯ್ತು ಬದುಕು!

ಬೆತ್ತಲಾಗಿದೆ ಭಾವನೆಗಳು

 ನಿನ್ನೆದೆಯ ಕಣಿವೆಯಲಿ

ಸೌಂದರ್ಯದ ಗಣಿಯಲಿ

ಬಿಸಿಯುಸಿರ ಬೆಂಕಿಯಲಿ

ತಾಳತಪ್ಪಿದ ಎದೆ ಬಡಿತದಲಿ

ಹುಡುಕುತಿರುವೆ ಒಲವಿನಾ ಕಿಡಿಯ

ಕೆಂದುಟಿಯ ಜೇನು

ಹೀರುವ ದುಂಬಿ ನಾನು

ಕಣ್ಣ ನೋಟದಲಿ

ಮೈ ಮಾಟದಲಿ

ಹೊಕ್ಕಳ ಆಳದಲಿ

ಬೆತ್ತಲಾಗಿದೆ ಭಾವನೆಗಳು


ನೀ ತೊಟ್ಟ ಸೀರೆಯಲಿ

ಸೊಂಟದ ಡಾಬಿನಲಿ

ಕಣ್ಣಂಚಿನ ಮಿಂಚಿನಲಿ

ಕಾಲ್ಗೆಜ್ಜೆ    ಸದ್ದಿನಲಿ

ಹುಡುಕುತಿರುವೆ ಒಲವ ಕಿಡಿಯ ಮತ್ತೆ 

ಬೆತ್ತಲಾಗಿ ನಿಂತಿವೆ ಭಾವನೆಗಳು ಮತ್ತೆ ಮತ್ತೆ

Friday, June 19, 2020

ಹಳೆಯ ನೆನಪು!

ಇವತ್ತು ನನ್ನ ದೊಂದು ಬ್ಲಾಗ್ ಇದೆ ಅದರಲ್ಲಿ ಒಂದಕ್ಷರವೂ ಬರೆಯದೇ ಯಾವ ಕಾಲವಾಯಿತು ಏನಾದರೂ ಬರೆಯಲೇ ಬೇಕು ಅಂತ ಮನಸ್ಸು ಬಹಳವಾಗಿ ಕಾಡತೊಡಗಿತು ಮತ್ತೆ!

 ಅಂದಹಾಗೆ ಈಗ ಬ್ಲಾಗ್ ಓದುವವರು ಕಡಿಮೆಯಾಗಿದ್ದಾರ??..  ಬ್ಲಾಗ್ ಇದೆ ಅನ್ನೋದು ನನಗೇ ಮರೆಯುವಷ್ಟು ದಿನ ಆಗೋಯ್ತು.. ಸಲೀಸಾಗಿ ಓದಿಸಿಕೊಂಡು ಹೋಗುವಂತೆ ಬರೆಯುವುದು ನನ್ನಿಂದ ಮತ್ತೆ ಸಾಧ್ಯವಾ?

ಬ್ಲಾಗ್ ಆರಂಭಿಸಿದ ದಿನಗಳ ಹಳೆಯ ನೆನಪಿನ ಸುರುಳಿ ಮತ್ತೆ ಬಿಚ್ಚಿಕೊಳ್ಳುತ್ತಿರುವ ಅನುಭವವಾಗುತ್ತಿದೆ.
ಆಗ ಇದ್ದಿದ್ದು 2g  ಕಾಲ ಜೊತೆಗೆ ನಮ್ಮ ಮನೆಯಲ್ಲಿ ಇದ್ದಿದ್ದು kbps ವೇಗದ ಬಿಎಸ್ಎನ್ಎಲ್ ನ ವಿಲ್ ಫೋನು! ಅದರಲ್ಲಿ ಇಂಟರ್ನೆಟ್ ಕನೆಕ್ಟಾದರೆ ಕಾಲ್ ಮಾಡೋಕೆ ಬರುತ್ತಿರಲಿಲ್ಲ ಜೊತೆಗೆ ಒಳಬರುವ ಕರೆಗಳು ಬರುತ್ತಿರಲಿಲ್ಲ.. ಬಿಎಸ್ಎನ್ಎಲ್ ಇದಕ್ಕಾಗಿ ತರಿಸಿಕೊಂಡ ಫೋನ್ ಹೆಸರು ಹುವಾವೆ!(Huawei)ನಂತರ ಅದನ್ನು ಕಪ್ಪು ಪಟ್ಟಿಗೆ ಸೇರಿಸಿದ್ದರೂ ಬಳಕೆಯಲ್ಲಿದ್ದದ್ದು ಮಾತ್ರ ಅದೇ!(ಚೈನಾ ಚೈನಾ!)
ಮೊಬೈಲುಗಳಲ್ಲಿ ತಿಂಗಳಿಗೆ ಕೊಡುತ್ತಿದ್ದ ಡಾಟಾ ಬರೋಬ್ಬರಿ ಒಂದು ಅಥವಾ ಎರೆಡು ಗಿಗಾಬೈಟುಗಳು!
ಗೂಗಲ್ ಟಾಕ್ ಆರ್ಕುಟ್ ಅದೆಷ್ಟು ಜನರಿಗೆ ನೆನಪಿದೆಯೋ ಏನೋ.
ಆದರೆ ಇವೆಲ್ಲದರಿಂದ ಸಿಕ್ಕಿದ್ದು ಮಾತ್ರ ಅಪರಿಮಿತವಾದ ಗೆಳೆಯರು ಗೆಳತಿಯರು... 
ಬ್ಲಾಗ್ ಗಳು ಅತೀ ಹೆಚ್ಚೆಚ್ಚು ಹುಟ್ಟಿಕೊಳ್ಳುತ್ತಿದ್ದ ಕಾಲವದು ಹೆಚ್ಚಿನವರ ಬ್ಲಾಗ್ ಗಳಲ್ಲಿ ಅವರದೊಂದು ಬ್ಲಾಗ್ ಗಾಗಿ ಯೇ ಮಾಡಿಕೊಂಡ ಹೆಸರುಗಳಿರುತ್ತಿದ್ದವು..


ಮನಸ್ವಿ ಅನ್ನೋದು ನಾನಿಟ್ಟುಕೊಂಡ ಬ್ಲಾಗ್ ನಾಮಧೇಯ.. ಇವತ್ತಿಗೂ ಅದೇ ಹೆಸರಲ್ಲಿ ಬರೆಯೊದೇ ನನಗೆ ಖುಷಿ ಕೊಡುತ್ತೆ.. 

ಬರೋಬ್ಬರಿ ಹನ್ನೆರೆಡು ವರ್ಷಗಳಾಗಿ ಹೋಯ್ತು ಈ ಬ್ಲಾಗ್ ಆರಂಭಿಸಿ.. ವರ್ಷಕ್ಕೊಮ್ಮೆ ಬ್ಲಾಗಿಗೆ ಅದರ ಅನಿವರ್ಸರಿ ಹುಟ್ಟಿದಬ್ಬ ಯಾವುದನ್ನು ಮಾಡಲೇ ಇಲ್ಲ ಆದರೂ ಒಂದೇ ಒಂದು ದಿನವೂ ನನ್ನ ಮೇಲೆ ಕೋಪಮಾಡಿಕೊಳ್ಳಲಿಲ್ಲ.. ಅದೆಷ್ಟೊ ದಿನಗಳು ವಾರ ತಿಂಗಳು ನನ್ನ ಬ್ಲಾಗಿನ ಕದವನ್ನೇ ತೆರೆಯದಿದ್ದರು ಗೂಗಲ್ ಕೃಪೆಯಿಂದ ಎಲ್ಲವೂ ಹಾಗೆಯೇ  ಯಥಾವತ್ತಾಗಿವೆ. ನಮ್ಮ ಹೆಚ್ಚಿನವರ ಬ್ಲಾಗುಗಳಲ್ಲಿ ಇನ್ನೊಬ್ಬರ ಬ್ಲಾಗಿಗೆ ಹೋಗಲು ಲಿಂಕ್ ಗಳಿದ್ದಾವೆ ಇನ್ನೂ ಸಹ.. ನಮ್ಮ ಬರಹ ಒದಿ ಅಥವಾ ಇಷ್ಟವಾಗದವರು ಮತ್ತೊಬ್ಬರ ಅದ್ಬುತ ಅನ್ನುವಷ್ಟರ ಮಟ್ಟಿಗೆ ಬರೆಯುವವರ ಬ್ಲಾಗಿಗೆ ದಾಟುವ ಹಾದಿಯಿದೆ!

ಈಗ ಬ್ಲಾಗ್ ಗಳಲ್ಲಿ ಬರೆಯೋದಕ್ಕಿಂತ ಸುಲಭವಾಗಿ.. ಫೇಸ್ಬುಕ್ ವಾಟ್ಸಪ್ ಗಳಲ್ಲಿ ಅನ್ನಿಸಿದ್ದೆನ್ನೆಲ್ಲಾ ಹೇಳಿಬಿಡಬಹುದು ಕ್ಷಣಮಾತ್ರದಲ್ಲಿ ಎಲ್ಲರೂ ಓದಿ ನೋಡಿ ಸುಮ್ಮನಿದ್ದುಬಿಡಬಹುದು.. ನೋಡುಗರ ಸಂಖ್ಯೆ ನೂರರ ಗಡಿದಾಟಿದ್ದರು ಒಬ್ಬರಿಬ್ಬರಿಗಾದರು ಅರ್ಥವಾಯಿತೋ ಗೊತ್ತಾಗೋದೇ ಇಲ್ಲ ಲೈಕು ಸಿಂಬಲ್ಲುಗಳಲ್ಲೇ ಮುಗಿದು ಹೋಗುತ್ತೆ!

ನಾವು ಸುಮಾರಷ್ಟು ವಿಷಯಗಳಿಗೆ ಪ್ರತಿಕ್ರಿಯಿಸೋ ಗೋಜಿಗೆ ಹೋಗೋದಿಲ್ಲ..ನಾವ್ಯಾಕೆ ಹೀಗೆ?
ಪ್ರತಿಕ್ರಿಯೆ ನೀಡಲು ಸಮಯವಿಲ್ಲವಾ? 
ಅನಿಸಿದ್ದಷ್ಟು  ಹಂಚಿಕೊಳ್ಳ ಬೇಕೆನಿಸಿತು.. 

ನಿಮ್ಮ ಅನಿಸಿಕೆಗಳ ಬರುವಿಕೆಯ ನಿರೀಕ್ಷೆಯಲ್ಲಿ... ಕಾಯ್ತಾ
ಇದೀನಿ!