ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Thursday, July 9, 2009

ಅಪರೂಪದ ಕೆಲವು ಆಣಿಮುತ್ತುಗಳು!!

ಕೆಲವು ಆಣಿಮುತ್ತುಗಳು ಹೀಗಿವೆ
ನಾನು: ಏ ಸುರೇಶಾ... ಸತೀಶ ಎಲ್ಲಿಗೆ ಕೆಲ್ಸಕ್ಕೆ ಹೋಗ್ತಾ ಇದಾನೆ?
ಸುರೇಸ: ಸತೀಸ ಮುಚ್ಚೇಂದ್ರ ರಾಯ್ರ ಮನೆಗೆ ಕೆಲಸಕ್ಕೆ ಹೋಗ್ತಾ ಐದಾನೆ.
( ಸುರೇಶ ಅನ್ನೋದನ್ನು ಸುರೇಸ ಮತ್ತು ಸತೀಶ ಎನ್ನುವುದನ್ನು ಸತೀಸ ಅಂದದ್ದರಲ್ಲಿ ಏನೂ ವಿಚಿತ್ರವಿಲ್ಲ.. ಅದು ಕೆಲವರಿಗೆ ಶ ಉಚ್ಚಾರ ಕಷ್ಟವಾದಾಗ "ಸ" ಕಾರ ಬರುತ್ತದೆ.. ಇಲ್ಲಿ ನಾನು ಅದನ್ನು ಹೇಳುತ್ತಿಲ್ಲ.. ಮುಚ್ಚೇಂದ್ರ ಎನ್ನುವ ಹೆಸರಿನ ಬಗ್ಗೆ ಹೇಳುತ್ತಿದ್ದೇನೆ.... ಮೃತ್ಯುಂಜಯ ಎನ್ನುವ ಹೆಸರನ್ನು ಕರೆಯಲು ಬಾರದೇ ಇದ್ದವರು ನಾಮಕರಣ ಮಾಡಿದ ಹೊಸಾ ಹೆಸರು ಮುಚ್ಚೇಂದ್ರ!)
ಅಂತಹದೇ ಮತ್ತೊಂದು ಹೆಸರು ಯೇದಾವತಿ =ವೇದಾವತಿ
ನಮ್ಮ ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ಬರುತ್ತಿದ್ದ ಗೋಪಾಲ ತಾನು ಕಾಯಂ ಕೆಲಸ ಮಾಡುವ ಮನೆಯ ಯಜಮಾನರನ್ನು ಭೂಚು ಹೆಗ್ಡೇರು ಎಂದು ಕರೆಯುತ್ತಾನೆ,
ಆದದ್ದು ಹೀಗೆ, ನಾಗಭೂಷಣ ಎನ್ನುವವರಿಗೆ ಮನೆಯಲ್ಲಿ ಪ್ರೀತಿಯಿಂದ ಕರೆದ ಹೆಸರು ಭೂಚು, ಅದೀಗ ಭೂಚು ಹೆಗಡೆಯಾಗಿದೆ.
ನಮ್ಮ ಮನೆಗೆ ಬರುವ ಒಬ್ಬ ಶೇರೇಗಾರ ಹೇಳಿದ ಮಾತು... ಭಟ್ರೇ ಸ್ಟಾರ್ ಮೇಲೆ ಸ್ಟಾರ್ ಮಾಡಿದ್ರೆ ಸಾಕಿತ್ರಿ.. ಅಷ್ಟೂ ಕಿತ್ತಾಹ್ಕ್ಯಾರೆ( ಕಿತ್ತು ಹಾಕಿದ್ದಾರೆ)
(ನಮ್ಮೂರಿನ ರಸ್ತೆಯನ್ನು ಎರಡು ವರ್ಷಗಳ ಕಾಲ ರಿಪೇರಿ ಮಾಡುತ್ತಿದ್ದಾಗ ಟಾರ್ ರೋಡಿನ ಮೇಲೆ ಮತ್ತೆ ಟಾರ್ ಹಾಕಿದ್ದರೆ ಸಾಕಾಗಿತ್ತು ಎಂದು ಹೇಳಿದ್ದು ನೆನೆಸಿಕೊಂಡು ನಗುತ್ತಿರುತ್ತೇನೆ.. ಅವನು ಟಾರ್ ಎಂದು ಹೇಳಲು ಸ್ಟಾರ್ ಎನ್ನುತ್ತಾನೆ.)
ಅವನದೇ ಮತ್ತೊಂದು ನುಡಿಮುತ್ತಿದೆ, ಅದು ಅವನೊಬ್ಬನ ಬಾಯಲ್ಲಿ ಮಾತ್ರ ಕೇಳಲು ಸಾಧ್ಯ.. ಒಂದು ದಿನ ಬಂದವನು ನಮ್ಮನೆ ಮಿಸ್ ಸರಿ ಇಲ್ಲ, ಮಿಸ್ ಎಲ್ಲಿ ರಿಪೇರಿ ಮಾಡಿಸಲಿ ಎಂದು ವಿಚಾರಿಸಿದ, ನಾವೆಲ್ಲ ತಲೆ ಕೆರೆದುಕೊಂಡು ಮಿಸ್ ಎಂದರೇನು ಎಂದು ವಿಚಾರಿಸಿದಾಗ ಅವನು ಹೇಳಿದ್ದು ಅದೇ ಅರ್ಯದು!(ಅರೆಯುವುದು).. ಮಿಸ್ ಮಾಡದು ಮಿಸ್ಸು ಅಂದ... ಸುಮಾರು ಹೊತ್ತಾದ ಮೇಲೆ ಗೊತ್ತಾಗಿದ್ದು ಅವನು ಹೇಳುತ್ತಿರುವುದು ಮಿಕ್ಸರ್ ಬಗ್ಗೆ ಎಂದು.
ಕಳೆದ ಒಂದು ವರ್ಷದ ಹಿಂದೆ ನಮ್ಮ ಊರಿನಲ್ಲೇ ಒಂದು ದೇವರ ಕಾರ್ಯ ಒಬ್ಬರ ಮನೆಯಲ್ಲಿತ್ತು.. ಊರಿನವರೇ ಹೋಗಿ ಊಟಕ್ಕೆ ಬಡಿಸುವುದು ವಾಡಿಕೆ.. ನಾನು ಹೋಗಿದ್ದೆ ಎಲ್ಲಾ ಸೇರಿ ಬಾಳೆ ಎಲೆ ಹಾಕಿಯಾಗಿತ್ತು.. ಉಪ್ಪು ಹಾಕಲು ಉಪ್ಪಿನ ಪಾತ್ರೆಯನ್ನು ಕೈಗೆ ತೆಗೆದುಕೊಂಡೆ, ಅಷ್ಟರಲ್ಲಿ ಮನೆಯ ಯಜಮಾನರು ಉಪ್ಪಿನ ಪಾತ್ರೆಯನ್ನು ನೋಡಿ ಹೇಳಿದ್ದು ಅಪೀ.. ಅದಲ್ದ ಸಾಲ್ಟ್ ಉಪ್ಪಿದ್ದು ಅದನ್ನ ಹಾಕಲಕ್ಕು ತಡಿ" ಎಂದರು!, ನನಗೆ ಒಂದು ಕ್ಷಣ ಏನೂ ಅರ್ಥವಾಗಲಿಲ್ಲ ಆಮೇಲೆ ಸಾಲ್ಟ್ ಉಪ್ಪು ತಗ ಎಂದು ಅವರು ತಂದು ಕೊಟ್ಟಾಗ ಎಲ್ಲಾ ಅರ್ಥವಾಯಿತು.. ಮುಂಚೆ ನನ್ನ ಕೈಯಲ್ಲಿದ್ದದ್ದು ಹರಳುಪ್ಪಿನ ಪಾತ್ರೆ ಅವರು ತಂದು ಕೊಟ್ಟಿದ್ದು ರಿಪೈನ್ಡ್ ಟೇಬಲ್ ಸಾಲ್ಟ್! ಅದಕ್ಕೆ ಅವರು ಹೇಳಿದ್ದು ಸಾಲ್ಟ್ ಉಪ್ಪು.
ಇದರಂತೆಯೇ ಡೋರ್ ಬಾಗಿಲು ಹಾಕು, ಸ್ಟ್ರೀಟ್ ಲೈಟ್ ದೀಪ ಹಾಕಿದ್ದ ನೋಡು, ಹುಡುಕುತ್ತಾ ಹೋದರೆ ಅದೆಷ್ಟಿದೆಯೋ ಇದೇ ತರಹದ್ದು.