ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Thursday, September 29, 2011

ಮೌನ ಮಾತಾಡಿದಾಗ

ಮಾತೊಂದೆ ಎಲ್ಲವೂ ಅಲ್ಲ

ಮೌನವೇ ಎಲ್ಲ ಅಂದವರೇ ಮೌನವಾಗೊಲ್ಲ

ಮಾತು ಸಾಕಾದಾಗ ಮೌನ ಹಿತ

ಮೌನ ಹೆಚ್ಚಾಗಿ ಕೊರೆದಾಗ ಮಾತೇ ಸುಖ


ಭಾವನೆಗಳ ವ್ಯಕ್ತ ಪಡಿಸುವ ಪರಿ ನೀ ತಿಳಿ

ಮೌನದಲಿ ಅವ್ಯಕ್ತವಾದ ಭಾವನೆಯು ಕಣ್ಣಲ್ಲಿ ವ್ಯಕ್ತವಾಗಲಿ

ಮಾತಾಡಿ ಕೊಲ್ಲಬೇಡ, ಮೌನವಾಗಿ ಕೊರಗಬೇಡಎಲ್ಲದಕು ನಗಬೇಡ, ಇಲ್ಲದಕೆ ಅಳಬೇಡ

ಮಾತೇ ಎಲ್ಲವು ಅಲ್ಲ, ನೀ ಅತಿ ಮೌನಿಯಾಗಬೇಡ

ಮಾತು ಮೌನದ ನಡುವೆ ಅಂತರ ನಿರಂತರ

ಮೌನ ನೀ ಮಾತಾಡು, ಮಾತೇ ಮಾತು ನೀ ಮೌನಿಯಾಗು.

Tuesday, July 5, 2011

ಚಿತ್ರರಂಗದ ಬಗ್ಗೆ ಒಂದಿಷ್ಟು ತಿಳಿದಷ್ಟು ಮತ್ತು ಅಮೃತ ಘಳಿಗೆ ಚಲನ ಚಿತ್ರದಲ್ಲಿ ಬಾಲನಟನಾಗಿ ನನ್ನ ಅಭಿನಯ!

     ನನ್ನೊಳಗಿನ ಬರಹಗಾರ ಅನಾಮತ್ತಾಗಿ ತಲೆಗೆ ಕೈ ಕೊಟ್ಟು ಕುಂಭಕರ್ಣನಂತೆ ದೀರ್ಘ ನಿದ್ರೆಗೆ ಜಾರಿದ್ದನೇನೋ ಎನ್ನುವ ಅನುಭವ,ಅಲ್ಲಾಡಿಸಿದರೂ ಏಳಲು ಒಪ್ಪದ ಜಾಯಮಾನದ ಆತ ನಿನ್ನೆ ಇಂದ ಒಂದೇ ಸಮನೆ ಸುರಿಯುತ್ತಿರುವ ಮಲೆನಾಡಿನ ಜಡಿ ಮಳೆಯ ದೊಡ್ಡ ದೊಡ್ಡ ಹನಿ ಮೈಗೆ ಸಿಡಿದಿರಬೇಕು.. ತಟಪಟ ಸದ್ದು ಕಿವಿಗೆ ಬಿದ್ದಿರಬೇಕು, ಮೈ ಕೈ ಮುರಿಯುತ್ತಾ ಎದ್ದು ಕುಳಿತಂತೆ ಅನ್ನಿಸುತ್ತಿದೆ, ಪೀಠಿಕೆ ಅತಿಯಾಗುತ್ತಿದೆ ಅನ್ನಿಸುವ ಮೊದಲು ಲೇಖನ ಆರಂಭಿಸಿ ಬಿಡುತ್ತೇನೆ
     ಚಿತ್ರ ಜಗತ್ತು ಅನ್ನೋದು ಚಿತ್ರ, ವಿಚಿತ್ರ, ಅದ್ಬುತ, ವಿಸ್ಮಯ, ರೋಮಾಂಚನ, ನೋವು, ನಲಿವು, ದುಃಖ, ಕಷ್ಟ, ಸುಖ, ಹೆಸರು, ಕೀರ್ತಿ, ಹಣ, ಯಶಸ್ಸು, ಎಲ್ಲವನ್ನೂ ಒಟ್ಟೋಟ್ಟಿಗೆ ನೀಡಬಲ್ಲದು, ಆದರೂ ಚಿತ್ರ ಜಗತ್ತಿನ ಆಳ ಅಷ್ಟು ಸುಲಭವಾಗಿ ಅರಿವಾಗೋದಿಲ್ಲ, ಆದರೂ ಗೊತ್ತಿರುವಷ್ಟು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ.

     ನಾನು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಅಮೃತ ಘಳಿಗೆ ಚಲನಚಿತ್ರದಲ್ಲಿ ಶ್ರೀಧರ ನ ಮಗನಾಗಿ ಅಭಿನಯಿಸಿದ್ದೇನೆ, ನಮ್ಮ ಊರಿನ ರಾಮಯ್ಯನವರ ಹಳೆಯ ಕಾಲದ ಮನೆಯಲ್ಲಿ ಶ್ರೀಧರ ನ ಮನೆಯ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು... ನಾನು ಅಭಿನಯಿಸಿದ ದೃಶ್ಯ - ಮೂರುಗಾಲಿಯ ಚಿಕ್ಕ ಗಾಡಿಯನ್ನು ದೂಡಿಕೊಂಡು ಹೋಗುವ ಪುಟ್ಟ ಮಗುವಿನ ಪಾತ್ರ! ನನಗಾಗ ಎರಡು ವರ್ಷ ವಾಗಿತ್ತು! ಇನ್ನೊಂದು ಚಾನ್ಸ್ ಕೊಡಿ ಅಂತ ಕೇಳೋಕು ಗೊತ್ತಾಗಲೇ ಇಲ್ಲ! ಪಾಪ ಅಂದ್ರಾ? ಹೂಂ ನಾನು ಪಾಪುನೇ ಆಗಿದ್ದೆ! ಅಂದಹಾಗೆ ಆ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಅಲೋಕ ಎಂದಾಗಿತ್ತು, ಇಂದಿಗೂ ಸಹ ನಮಗೆ ಆಪ್ತರಾದ ಕುಂಟಗೋಡಿನ ಗಣಪತಿಯವರು ನನ್ನನ್ನು ಕಂಡಾಗೆಲ್ಲಾ ಅಲೋಕ್ ಎಂದೇ ಕರೆಯುತ್ತಾರೆ, ಅನೇಕರು ಗೊತ್ತಿಲ್ಲದೇ ಹೋದವರು ಅಲೋಕ್ ಅಲ್ಲ ಆದಿತ್ಯ ಅಂದರೂ ಸಹ "ಗೊತಿದಾ ಅವ ನಮ್ಮ್ ಅಲೋಕ್" ಎಂದೇ ಹೇಳುತ್ತಾರೆ, ಮೊನ್ನೆ ಹೀಗೆ ಆಯಿತು, ನನ್ನ ಹೆಂಡತಿ ಸೋದರ ಮಾವನ ಮನೆಗೆ ಹೋಗಿದ್ದಳು ಅಲ್ಲಿಗೆ ಗಣಪತಣ್ಣ ಬಂದಿದ್ದರಂತೆ ಅಲ್ಲಿ ಓಹ್ ಅಲೋಕ ನ ಹೆಂಡ್ತಿ ಅಲ್ದಾ ಕೇಳಿದರಂತೆ! ಅಲ್ಲಿದ್ದವರಿಗೆಲ್ಲಾ ಏನು ಅರ್ಥವಾಗದೆ ಕಕ್ಕಾಬಿಕ್ಕಿಯಾಗಿ ನೋಡಿದರಂತೆ, ನನ್ನ ಹೆಂಡತಿಗೆ ಮುಂಚೆಯೇ ನಾನು ತಿಳಿಸಿದ್ದರಿಂದ ಅವಳು ಎಲ್ಲರಿಗೂ ಅಮೃತಗಳಿಗೆ ಸುದ್ದಿ, ಅಲೋಕ ಅಂತಲೇ ಕರೆಯೋದು ಗಣಪತಣ್ಣ ಅಂತ ವಿವರಿಸಿದ ಮೇಲೆ ಎಲ್ಲರಿಗೂ ಅರ್ಥವಾಗಿಯಿತಂತೆ.

     ಚಿತ್ರರಂಗ ಹೀಗಿದೆ ಅಂತ ಹೇಳೋದು ಕಷ್ಟ, ಅಲ್ಲಿ ಎಲ್ಲರೂ ಒಂದಾಗಿ ದುಡಿದರೆ ಮಾತ್ರ ಗೆಲುವು, ಅಲ್ಲಿ ಹೀರೋ, ಹೀರೋಯಿನ್ ಗೆ ಆಕ್ಟಿಂಗ್ ಒಂದು ಬಂದರೆ ಆಗೋದಿಲ್ಲ, ನಿರ್ದೇಶಕ, ನಿರ್ಮಾಪಕ, ಛಾಯಾಗ್ರಾಹಕ, ಲೈಟ್ ಬಾಯ್ ನಿಂದ ಹಿಡಿದು ಎಲ್ಲರೂ ಎಲ್ಲರೂ ನುರಿತ ಕೆಲಸಗಾರರಾಗಿರಬೇಕು, ಯಾರೇ ಒಬ್ಬರು ಶ್ರದ್ದೆಯಿಂದ ಕೆಲಸ ಮಾಡದೇ ಹೋದರೆ ಚಿತ್ರದಲ್ಲಿ ಎಡವಟ್ಟಾಗೋದು ಗ್ಯಾರಂಟಿ. ಉದಾಹರಣೆಗೆ, ಹೀರೋ ಮತ್ತು ಹೀರೋಯಿನ್ ಹೊಟೆಲ್ ನಲ್ಲಿ ಕುಳಿತು ಶರಬತ್ತು, ಅದೇ ಜೂಸ್ ಹೀರುತ್ತಾ ಮಾತನಾಡುವ ದೃಶ್ಯ,ದೃಶ್ಯ ಒಂದೇ ಟೇಕ್ ನಲ್ಲಿ ಸಾಧ್ಯವಿಲ್ಲವಾದರೆ ಪ್ರತಿಯೊಂದನ್ನು ಬರೆದುಕೊಳ್ಳಬೇಕಾಗುತ್ತದೆ, ಟೇಬಲ್ ಮೇಲೆ ಏನೇನು ಇತ್ತು, ನಾಯಕಿ ಹೀರುತ್ತಿದ್ದ ಜ್ಯೂಸ್ ನ ಬಣ್ಣ ಯಾವುದು, ಎಷ್ಟು ಇತ್ತು, ಸ್ಟ್ರಾ ಬಣ್ಣ ಯಾವುದು, ಅವಳು ದರಿಸಿದ್ದ ಬಟ್ಟೆಯ ಬಣ್ಣ ಯಾವುದು ಎಲ್ಲವನ್ನು ಯಥಾವತ್ ಬರೆದಿಟ್ಟುಕೊಳ್ಳಬೇಕು, ಇಲ್ಲವಾದರೆ ಅರ್ಧ ಚಿತ್ರೀಕರಣವಾಗಿ ಮತ್ತೊಂದು ದಿನ ಮುಂದಿನ ಭಾಗ ಚಿತ್ರೀಕರಣ ಮಾಡುವಾಗ ಆರೇಂಜ್ ಜ್ಯೂಸ್ ನ ಬದಲಾಗಿ ಮರೆತು ಕೋಕ್ ಬಾಟಲಿಯನ್ನು ಇಟ್ಟರೆ, ಮೊದಲು ಆರೇಂಜ್ ಜ್ಯೂಸ್ ಕುಡಿಯುತ್ತಿದ್ದ ನಟಿ, ಹೀರೋ ಮಾತನಾಡಿ ಮುಗಿಸಿ ಮತ್ತೆ ಮಾತಾಡುವಾಗ ಆಕೆಯ ಕೈನಲ್ಲಿ ಕೋಕ್ ಬಾಟಲಿ ಬಂದಿರುತ್ತದೆ!     ಅನೇಕ ಚಿತ್ರಗಳು ಪೋಷಕ ನಟರ, ಹಾಸ್ಯ ನಟರ ಕೊರತೆಯಿಂದ ಚಿತ್ರ ಯಶಸ್ವಿಯಾಗೋದಿಲ್ಲ, ಚಿತ್ರ ಚನ್ನಾಗಿಲ್ಲ ಎಂದು ಮೊದಲ ಶೋ ನೋಡಿ ಹೊರಬಂದವರು ಹೇಳಿದರೆ ಮುಗಿಯಿತು, ಚಿತ್ರ ಮಕಾಡೆ ಮಲಗುತ್ತೆ ಅನ್ನೋದು ಮತ್ತೆ ಹೇಳಬೇಕಾಗಿಲ್ಲ, ಪತ್ರಿಕೆಗಳಲ್ಲಿ ಬರುವ ಚಿತ್ರ ವಿಮರ್ಶೆಗಳಲ್ಲಿ ಚಿತ್ರ ವಿಮರ್ಶಕ ತನ್ನ ಮೂಗಿನ ನೇರಕ್ಕೆ ಚಿತ್ರದಲ್ಲಿ ಹುರುಳಿಲ್ಲ, ನಾಯಕ ನಟನಿಗೆ ತಲೆಯಲ್ಲಿ ಹುಲುಸಾಗಿ ಕೂದಲೊಂದು ಬೆಳೆದಿದೆ, ಚಿತ್ರ ತರಬೇತಿಯ ಜೊತೆ ಕಟಿಂಗ್ ಶಾಫಿಗೂ ಹೋಗಿಬರಬೇಕು, ದುಡ್ಡು ಕೊಟ್ಟು ನೋಡುವ ಚಿತ್ರವಲ್ಲ ಎಂದು ಬರೆದರೆ ಹೇಗಾಗಬೇಡ, ಅತಿ ಹೆಚ್ಚಿನ ಜನರು ಚಿತ್ರ ವಿಮರ್ಶೆಗಳನ್ನು ಓದುತ್ತಾರೆ ಮತ್ತು ನಂಬುವವರೇ ಹೆಚ್ಚು. ಇನ್ನು ಗಾಂಧೀನಗರ ಕನ್ನಡ ಚಿತ್ರರಂಗದ ಅವಿಭಾಜ್ಯ ಅಂಗ, ಅಲ್ಲಿಯೇ ಗಾಸಿಪ್ಪುಗಳು ಹುಟ್ಟೋದು, ಗಾಂಧೀನಗರ ಏನು ಮಾತಾಡಿಕೊಳ್ಳುತ್ತೆ ಎನ್ನೋದು ಮುಖ್ಯವಾಗಿ ಬಿಡುತ್ತದೆ.ಇನ್ನು ಸ್ಟಾರ್ ನಂ ೧ ಪಟ್ಟ ನಾಯಕ ನಾಯಕಿಯರಿಗೆ ಸದಾ ಇರುತ್ತೆ ಅಂತ ಹೇಳೋಕ್ಕೆ ಆಗೋದಿಲ್ಲ, ಅನೇಕ ಕಾರಣಗಳಿಂದ, ಉದಾಹರಣೆಗೆ ಹೊಸ ಮುಖ, ಹೊಸ ಪ್ರತಿಭೆ, ಹೆಚ್ಚು ಜನಪ್ರಿಯತೆ ಪಡೆದರೆ ಸ್ಟಾರ್ ಪಟ್ಟ ಅವರದ್ದಾಗುತ್ತೆ, ಇನ್ನು ನಟಿಯರು ಸ್ವಲ್ಪ ಡುಮ್ಮಿಯರಾದರೂ, ಫಿಟ್ ನೆಸ್ ಕೊರತೆಯಿದ್ದರೆ ನಂ ೧ ಪಟ್ಟ ಕೈಬಿಟ್ಟು ಹೋದಂತೆ. ಬ್ಯೂಟಿ ವಿದ್ ಬ್ರೈನ್ ಅಂತಾರಲ್ಲ ಅದು ಇರಬೇಕು, ಎಲ್ಲಕ್ಕಿಂತ ಮುಖ್ಯವಾಗಿ ನಾಯಕ/ನಾಯಕಿಗೆ ಅಭಿನಯ ಚಾತುರ್ಯತೆ ಇರಬೇಕಾಗುತ್ತದೆ!

     ಹಿಂದಿನ ಕಾಲದಲ್ಲಿ ಡಬಲ್ ರೋಲ್ಗಳನ್ನು ಚಿತ್ರೀಕರಣ ಮಾಡುವುದು ಸುಲಭವಾಗಿರಲಿಲ್ಲ, ಡಬಲ್ ರೋಲ್ ಚಿತ್ರೀಕರಣ ಛಾಯಾಗ್ರಾಹಕನಿಗೊಂದು ಸವಾಲೇ ಆಗಿತ್ತು, ಒಂದು ದ್ವಿಪಾತ್ರದ ಚಿತ್ರೀಕರಣ ಮಾಡಬೇಕಿದ್ದಲ್ಲಿ ಕ್ಯಾಮರಾ ಲೆನ್ಸ್ ನ ಒಂದು ಭಾಗವನ್ನು ಎಕ್ಸ್ಪೋಸ್ ಆಗದಂತೆ ಮುಚ್ಚಿ ಚಿತ್ರೀಕರಿಸಬೇಕಿತ್ತು, ನಂತರ ಚಿತ್ರೀಕರಣವಾದ ಸೈಡನ್ನು ಮುಚ್ಚಿಕೊಂಡು ರಿವೈಂಡ್ ಮಾಡಿ ಮತ್ತೊಂದು ಪಾತ್ರದ ಚಿತ್ರೀಕರಣ ಮಾಡುತ್ತಿದ್ದರು, ಅದಕ್ಕೆ ಹಳೆಯ ಚಿತ್ರಿಗಳನ್ನು ನೋಡಿ ದ್ವಿಪಾತ್ರಭಿನಯದಲ್ಲಿ ಆ ಇಬ್ಬರು ಏಕವ್ಯಕ್ತಿಗಳ ನಡುವೆ ಗೆರೆಯೊಂದು ಮೂಡಿರುತಿತ್ತು! ಎರಡೂ ಪಾತ್ರಗಳನ್ನು ಒಟ್ಟೊಟ್ಟಿಗೆ ತೋರಿಸುತ್ತಿರಲಿಲ್ಲ, , ಅವರಿಬ್ಬರು ಅಣ್ಣ ತಮ್ಮಂದಿರೆಂದು ಗೊತ್ತಾಗಿ ಅಪ್ಪಿಕೊಳ್ಳುವ ದೃಶ್ಯವಿದ್ದಾಗ ಏನು ಮಾಡುವುದು? ಒಬ್ಬರನ್ನೊಬ್ಬರು ತಬ್ಬಿಕೊಂದು ಅಳುವಾಗ ಹೀರೊನನ್ನೆ ಹೋಲುವ ಮತ್ತೊಬ್ಬ ವ್ಯಕ್ತಿಯ ಬೆನ್ನು ತೋರಿಸುತ್ತಿದ್ದರು.ಹಿಂದೆ ಈಗಿರುವಂತೆ ಮಿಕ್ಸಿಂಗ್ ತಂತ್ರಜ್ಞಾನಗಳು ಬಂದಿರಲಿಲ್ಲ,ಈಗಿನ ಗ್ರಾಫಿಕ್ಸ್ ಅನಿಮೇಷನ್ ಯುಗದಲ್ಲಿ ಏನು ಬೇಕಾದರು ಸುಲಭವಾಗಿ ಮಾಡಬಹುದು.ಇಬ್ಬರಲ್ಲ ಎಷ್ಟು ದ್ವಿಪಾತ್ರ, ತ್ರಿಪಾತ್ರಗಳನ್ನಾದರು ನೈಜ ಅನ್ನಿಸುವಷ್ಟರ ಮಟ್ಟಿಗೆ ಒಟ್ಟೊಟ್ಟಿಗೆ ತೆರೆಯ ಮೇಲೆ ಮೂಡಿಸಬಹುದು.ಹಳೆಯ ಚಲನಚಿತ್ರಗಳ ಹಾಡುಗಳು ಸುಮಧುರವಾಗಿರುತ್ತಿದ್ದವು, ಹಾಡಿಗೊಂದು ಸಾಹಿತ್ಯವಿರುತ್ತಿತ್ತು, ಅರ್ಥವಿರುತ್ತಿತ್ತು, ಕ್ಯಾಬರೇ ಹಾಡುಗಳು ಸಹ ಮಧುರವಾಗಿರುತ್ತಿದ್ದವು, ನಾನು ಬಳ್ಳಿಯ ಮಿಂಚು, ಕಣ್ಣು ಕತ್ತಿಯ ಅಂಚು..., ನಂತಹ ಹಾಡುಗಳು ಹಿತವಾಗಿದ್ದವು,..     ಈಗಿನ ಕಾಲದ ಹಾಡುಗಳು ಕೆಲವು ಅರ್ಥವಾಗುವುದಿರಲಿ, ಯಾವ ಭಾಷೆಯಲ್ಲಿ ಹಾಡುತ್ತಿದ್ದಾರೆ ಎಂದು ತಿಳಿಯಲು ಎರಡು ನಿಮಿಷಗಳು ಬೇಕು. ಇನ್ನು ಕ್ಯಾಬರೇ ನರ್ತಕಿಯರೇ ಬೇರೆ ಇರುತ್ತಿದ್ದರು, ಈಗಿನಂತೆ ಹಿರೋಯಿನ್ ಗಳೇ ತಾವೆ ಐಟಂ ಸಾಂಗ್ ಗೆ ಕುಣಿಯಲು ತಯಾರಿರುತ್ತಿರಲಿಲ್ಲ, ಈಗ ಊರಿಗೊಬ್ಬಳೆ ಪದ್ಮಾವತಿ ಮುಂತಾದ ಹಾಡಿಗೆ ಹಿರೋಯಿನ್ ಗಳೆ ಕುಣಿಯಲು ಸಿದ್ದರಾಗಿದ್ದಾರೆ. ಹಳೆಯ ಹಾಡುಗಳನ್ನು ನೆನೆಸಿಕೊಳ್ಳುತ್ತಿರುವುದರ ನಡುವೆ ಇಲ್ಲಿ ನನಗೆ ತಕ್ಷಣಕ್ಕೆ ನೆನಪಿಗೆ ಬಂದಿದ್ದು ಮೈಸೂರು ಆನಂದ್ ರವರ ದಶಕಗಳ ಹಿಂದಿನ ಹಳೆಯ ಕಾಲದ ಹಾಡುಗಳು ಹೇಗಿದ್ದವು ಈಗ ಹೇಗಿದೆ ಎನ್ನುವುದರ ಏಕಪಾತ್ರಾಭಿನಯ, ಆಗಿನ ಕಾಲದಲ್ಲಿ ಕ್ಯಾಮರಾಗಳು ಈಗಿನಂತೆ ಇರಲಿಲ್ಲವಂತೆ ನಿರ್ದೇಶಕರು ಹೇಳುತ್ತಿದ್ದರಂತೆ ನೋಡಮ್ಮ ಒಂದೇ ಕ್ಯಾಮರ ಇರೋದು ಅದರ ಎದುರು ನೀನು ಕಾಲುಗಳನ್ನು ಕುಣಿಸುತ್ತಾ(ಮೈ ಕುಲಕಿಸಬೇಕು ಎಂದು ಮತ್ತೆ ಆಕೆಗೆ ಹೇಳಬೇಕಾಗಿರಲಿಲ್ಲವೇನೋ!) ಬಲಗಡೆಯಿಂದ ಎಡಕ್ಕೆ ಹಾಗು ಬಲಕ್ಕೆ ಸ್ವಲ್ಪ ನೆಡೆದು ಮತ್ತೆ ಎಡಕ್ಕೆ ಬರಬೇಕು ಎಂದು! ಅಂತೆಯೆ ರಜಕುಮಾರ್ ಗೆ ಬೇಡರ ಕಣ್ಣಪ್ಪ ದ ಹಾಡಿನ ಚಿತ್ರೀಕರಣದಲ್ಲಿ ಹೇಳಿದ್ದರಂತೆ ಕ್ಯಾಮರ ನಿಮ್ಮ ಎದುರು ಮಾತ್ರವಿರುತ್ತದೆ ಬರಿ ಕೈ ಮೇಲೆ ಕೆಳಗೆ ಮಾಡುತ್ತಾ ಹಾಡಿದರೆ ಸಾಕು ಎಂದು! ಆಗ ಶಿವಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿದೇವ ಹಾಡುತ್ತ ಬಲಗೈ ಮೇಲೆ ಕೆಳಗೆ ಆಡಿಸಿದ್ದು ಸಹ ಅದ್ಬುತವಾಗಿ ಮೂಡಿಬಂದಿತ್ತು ಅಣ್ಣಾರವರ ಅಭಿನಯ. ಇನ್ನು ಈಗಿನವರು ಜನಸಾಮಾನ್ಯರ ಹೆಸರಿನ ಮೇಲೆ ಆಹ ಅವನ ಕಣ್ಣು ನನ್ನ ಮೇಲೆ, ಅಂತ ಹಾಡಿಬಿಡುತ್ತಾರಂತೆ, ಇದನ್ನು ನಾನು ಹೇಳುವುದಕ್ಕಿಂತ ಎಲ್ಲಾದರೂ ಟಿವಿಯಲ್ಲಿ ಮೈಸೂರು ಆನಂದ್ ಅವರ ಕಾರ್ಯಕ್ರಮ ಪ್ರಸಾರವಾದಗ ನಾನು ಬರೆದದ್ದನ್ನು ನೆನಸಿಕೊಳ್ಳಿ.

     ಇನ್ನು ಚಿತ್ರೀಕರಣಕ್ಕೆ ಅತೀ ಹೆಚ್ಚಿನ ದುಡ್ಡು ಸುರಿಯುವವರ ಸಾಲಿನಲ್ಲಿ ಬರುವ ಮೊದಲ ಹೆಸರು ರವಿಚಂದ್ರನ್. ಪ್ರೇಮಲೋಕದಂತ ಅದ್ಬುತ ಚಿತ್ರವನ್ನು ಬೆಳ್ಳಿ ತೆರೆಯ ಮೇಲೆ ಮೂಡಿಸಿದಾತ, . ಕಾರು ಸುಡುವ ದೃಶ್ಯವಿದ್ದರೆ ಹೊಸ ಕಾರನ್ನು ಕೊಂಡು ತಂದು ಸುಟ್ಟರೂ ಅದೇನು ವಿಶೇಷವಲ್ಲ! ಅದೇ ಕ್ರೇಜಿ ಸ್ಟಾರ್ ರವಿಚಂದ್ರನ್ ಸ್ಪೆಷಾಲಿಟಿ, ಹಾಳು ಮಾಡುವುದಕ್ಕಂತಲೆ ಕೋಟಿ ಕೋಟಿ ಸುರಿಯಲು ಹಿಂಜರಿಯದ ಜಾಯಮಾನ ರವಿಚಂದ್ರನ್ ನದು. ಹೊಸ ಹೊಸ ಹೀರೋಯಿನ್ ಗಳನ್ನು ಅಮದು ಮಾಡಿಕೊಂಡು ಜೊತೆ ಮರಸುತ್ತುವ ದೃಶ್ಯಗಳಲ್ಲಿ ಅಭಿನಯಿಸುವ ರಸಿಕ,ರವಿಚಂದ್ರನ್ ಅಪ್ಪ ನಿರ್ದೇಶಕ ಎನ್ ವೀರಾಸ್ವಾಮಿ ಇದ್ದಿದ್ದರೆ ಎಷ್ಟು ಬಾರಿ ಹೃದಯಾಘಾತವಾಗುತ್ತಿತ್ತೋ ಏನೋ ಮಗ ಮಾಡುವ ಖರ್ಚು ವೆಚ್ಚಗಳನ್ನು ನೋಡಿ! ಆದರೂ ಏನೇ ಪ್ರಯೋಗಗಳಿರಲಿ ಏನಿದ್ದರೂ ಕನ್ನಡಕ್ಕೆ ಮಾತ್ರ ಸೀಮಿತ ಎನ್ನುವುದು ರವಿಚಂದ್ರನ್ ನೋಡಿ ಅನೇಕರು ಕಲಿಯಬೇಕಾಗಿ ಬಂದಿರುವುದು ವಿಪರ್ಯಾಸವೇ ಸರಿ.

ಚಿತ್ರರಂಗದ ಬಗ್ಗೆ ನನಗೆ ಗೊತ್ತಿಲ್ಲದ ವಿಚಾರಗಳು ಇನ್ನೂ ಅನೇಕವಿದೆ, ಗೊತ್ತಿಲ್ಲದ ವಿಚಾರಗಳನ್ನು ಕಲ್ಪಿಸಿಕೊಂಡು ಬರೆಯುವುದು ಸರಿಯಲ್ಲ, ಸೆಟ್ ಗಳ ಬಗ್ಗೆ ಫಿಲಂ ಸಿಟಿಗಳ ಬಗ್ಗೆ ಹೇಳುತ್ತಾ ಹೋದರೆ ಇನ್ನೂ ಎಷ್ಟೋ ಪುಟಗಳು ತುಂಬಿಹೋಗುತ್ತವೆಯೋ.. ಇಷ್ಟವಾಗಿದೆ ಬರವಣಿಗೆ ಅಂದು ಕೊಳ್ಳುತ್ತೇನೆ.


ಅಂದಹಾಗೆ, ಕೊನೆಯ ಮಾತು ನಿಮ್ಮ ಅನಿಸಿಕೆ ತಿಳಿಸಿ ಲೇಖನ ಹೇಗಿದೆ ಎಂದು.Friday, May 27, 2011

ಸಾವಯವ ಕೃಷಿಯ ಬಗೆಗೆ ನಮಗೆಷ್ಟು ಗೊತ್ತು?

    ಸಂಪೂರ್ಣ ಸಾವಯವ ಕೃಷಿ ಈಗಿನ ಆಧುನಿಕ ಕೃಷಿಯಲ್ಲಿ ಸಾಧ್ಯವಾ? ರೋಗ ಭಾದೆಯಿಂದ/ ಹುಳ ಹುಪ್ಪಟೆಗಳ ಉಪಟಳದಿಂದ ಪಾರಾಗಲು ಸಾವಯವ ವಿಧಾನದಿಂದ ಸಾಧ್ಯವಿದೆಯಾ?

ರಾಸಾಯನಿಕ ಗೊಬ್ಬರ ಬಳಕೆ ಇಲ್ಲದೆ ಕೃಷಿ ಸಾಧ್ಯವಿಲ್ಲವಾ?? ಅನೇಕ ಪ್ರಶ್ನೆಗಳು ನಮ್ಮನ್ನು ಕಾಡುತ್ತದೆ, ಅದೇ ರೀತಿ ಅಡಿಕೆ ಬೆಳೆಗೆ ಎಂಡೋ ಸಲ್ಫಾನ್ ನಂತ ಅಪಾಯಕಾರಿಯಾದ ಭೂಮಿಯಲ್ಲಿ ಅನೇಕ ತಲೆಮಾರುಗಳು ಕಳೆದರೂ ನಾಶವಾಗದೆ ಮುಂದಿನ ಪೀಳಿಗೆಯನ್ನೇ ಅಂಗವಿಕಲರನ್ನಾಗಿ ಮಾಡುವ ಎಂಡೋ ಸಲ್ಫಾನ್ ಕೀಟನಾಶಕ ಬಳಕೆ ಅಷ್ಟು ಅವಶ್ಯವಾ?

     ಉತ್ತರ ಅಷ್ಟೊಂದು ಸುಲಭವಲ್ಲ. ರಾಸಾಯನಿಕ ಗೊಬ್ಬರಗಳು ಅನಿವಾರ್ಯವೇನಲ್ಲ, ಇನ್ನು ಮಲೆನಾಡಿನ ಹಲವು ಅಡಿಕೆ ಕೃಷಿಕರು ತಮ್ಮ ತೋಟಗಳಿಗೆ ಈವತ್ತಿನವರೆಗೂ ಕೊಟ್ಟಿಗೆ ಗೊಬ್ಬರವನ್ನು ಬಿಟ್ಟು ಯಾವ ರಾಸಾಯನಿಕ ಗೊಬ್ಬರವನ್ನೂ ತಮ್ಮ ತೋಟಗಳಿಗೆ ಒದಗಿಸಿಲ್ಲ, ಪೋಷಕಾಂಶದ ಕೊರತೆಯಿಂದ ಫಸಲಿನಲ್ಲಿ ಹಾನಿಮಾಡಿಕೊಂಡವರು ಕಡಿಮೆಯೇನಿಲ್ಲ. ಮಣ್ಣಿನ ಫಲವತ್ತತೆ ಮತ್ತು ಮಣ್ಣಿನಲ್ಲಿರುವ ಫೋಷಕಾಂಶಗಳ ಪರೀಕ್ಷೆಮಾಡಿ ಬೇಕಾದಷ್ಟೇ ಪ್ರಮಾಣದ ಲಘು ಫೋಷಕಾಂಶಗಳನ್ನು ಭೂಮಿಗೆ ಒದಗಿಸುವುದು ಹೆಚ್ಚೇನು ಹಾನಿಕಾರಕವಲ್ಲವೇನೋ ಅನ್ನಿಸುತ್ತದೆ.

     ಇಂದಿನ ಕೃಷಿಕರ ಪರಿಸ್ಥಿತಿಯಲ್ಲಿ ಎಲ್ಲವೂ ಸವಾಯವ ವಿಧಾನ ಅಥವಾ ಶೂನ್ಯ ಕೃಷಿ ಎಂದು ತೋಟದಲ್ಲಿ ಹುಟ್ಟಿರುವ ಕಳೆಯನ್ನೂ ತೆಗೆಸದೆ ಓಡಾಡಲೂ ಬಾರದಂತಹ ಪರಿಸ್ಥಿತಿಯ ನಿರ್ಮಾಣ ಎಷ್ಟು ಸರಿ? ಮೇಲೆ ತಿಳಿಸಿದಂತ ತೋಟಗಳನ್ನು ನೋಡಿದಾಗ ಬೇಸರವಾಗದೆ ಇರಲಾರದು, ಕೆಲಸಗಾರರ ಕೊರತೆ ಇದೆ ನಿಜ, ಆದರೆ ತೋಟ ಗದ್ದೆಗಳ ಕೆಲಸ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಖಂಡಿತಾ ಬಂದಿಲ್ಲ, ಬರುವುದೂ ಇಲ್ಲವೆನೋ.     ಸಾವಯವ ಕೃಷಿ ಮಾಡಲು ಹೋಗಿ ಬೆಳೆಗೆ ಹಾನಿಯಾದರೆ ಸ್ವಲ್ಪ ಪ್ರಮಾಣದ ರಾಸಾಯನಿಕ ಔಷದಿ ಬಳಸಿದ್ದರೆ ಬೆಳೆಯನ್ನು ಉಳಿಸಿಕೊಳ್ಳಬಹುದಿತ್ತೇನೋ ಅನಿಸಿಬಿಡುತ್ತಲ್ಲಾ.ಕೃಷಿ ತಜ್ಞರ ಸಲಹೆ ಪಡೆದು ಸರಿಯಾದ ಪ್ರಮಾಣದ ರಾಸಾಯನಿಕ ಔಷದಗಳ ಬಳಕೆ ಸೂಕ್ತವೇನೋ ಅನ್ನಿಸುತ್ತದೆ.     ಅಂದಹಾಗೆ ನಾವು ಅಡಿಕೆ ತೋಟಕ್ಕೆ ಕೋಲ್ಮನ್ ಹೇಳಿ ಹೋದ ಅದೇ ಅಪ್ಪ ಹಾಕಿದ ಆಲದಮರ ಎನ್ನುವ ಬೋರ್ಡೋ ಮಿಶ್ರಣ ಸಿಂಪರಣೆ ಮಾಡಿದರೂ ಅದು ಸಾವಯವ ಅನ್ನಿಸಿಕೊಳ್ಳಲಾರದು, ನಿಜ ಒಂದು ಪ್ರತಿಷತ ಪ್ರಮಾಣದಲ್ಲಿ ಬೋರ್ಡೋ ಮಿಶ್ರಣ ಸಿಂಪರಣೆ ಮಾಡಿದಲ್ಲಿ ಸಾವಯವ ಕೃಷಿಯಂತೆ ಪರಿಗಣಿಸುವ ರಿಯಾಯತಿ ಇದೆ, ಆದರೆ ಅದು ಕೂಡ ಸಂಪೂರ್ಣ ಸಾವಯವ ಅನ್ನಿಸಿಕೊಳ್ಳಲಾರದು, ನೆನಪಿರಲಿ, ಬಯೋ ಎಂದು ಬರೆದದ್ದೆಲ್ಲವೂ ಸಾವಯವ ಎಂದು ಪರಿಗಣಿಸಿದರೆ ನಮ್ಮಂತಹ ಮೂರ್ಖರು ಮತ್ತಾರು ಇರಲಾರರು. ಒಂದು ಪರ್ಸೆಂಟ್ ಪ್ರಮಾಣದಲ್ಲಿ ಬೋರ್ಡೋ ಬಳಸಿದರೆ ಕೊಳೆರೋಗ ನಿಯಂತ್ರಣ ಎಷ್ಟು ಮಟ್ಟಿಗೆ ಸಾಧ್ಯ?

    ನಾವು ಎಷ್ಟು ಜನ ಕೃಷಿಕರು ಸರಿಯಾದ ಪ್ರಮಾಣದಲ್ಲಿ ಬೋರ್ಡೋ ಮಿಶ್ರಣ ತಯಾರಿಸಿದ್ದೇವೆ? ಒಬ್ಬೊಬ್ಬರದ್ದು ಒಂದೊಂದು ರೀತಿ, ಒಬ್ಬರು ಒಂದು ಕೇಜಿ ಸುಣ್ಣ, ಎರೆಡು ಕೇಜಿ ಮೈಲು ತುತ್ತ, ಇನ್ನೊಬ್ಬರದು ಮೂರುಕೇಜಿ ಸುಣ್ಣ ಒಂದು ಕೇಜಿ ಮೈಲುತುತ್ತ, ಮಿಶ್ರಣ ಸರಿಯಾಗಿದೆಯಾ, ಪಿ ಹೆಚ್ ಎಷ್ಟು ಎಂದು ಲಿಟ್ಮಸ್ ಟೆಸ್ಟ್ ಮಾಡುವುದು ಹೇಗೆ ಎನ್ನುವುದು ನಮ್ಮಲ್ಲಿ ಅನೇಕರಿಗೆ ಗೊತ್ತಿದೆಯೊ ಇಲ್ಲವೊ ಒಂದು ವೇಳೆ ಗೊತ್ತಿದ್ದರೂ ಲಿಟ್ಮಸ್ ಪೇಪರುಗಳು ಸಿಕ್ಕೋದಿಲ್ಲ. ಮೂರು ನಾಲ್ಕು ಬಾರಿ ಬೊರ್ಡೊ ಮಿಶ್ರಣ ಸಿಂಪರಣೆ ಮಾಡಿದರೂ ಕೊಳೆರೋಗ ನಿಯಂತ್ರಣ ಸಾಧ್ಯವಾಗಿಲ್ಲ.

     ಇನ್ನು ಮಳೆ ಬರುತ್ತಿರುವಾಗ ಕೊಳೆ ಔಷದಿ ಸಿಂಪಡಿಸಿದರೆ ಅದರ ಪ್ರಯೋಜನವಾಗುತ್ತಾ? ಮಳೆ ನೀರಿನಲ್ಲಿ ಔಷದಿ ಪ್ರಮಾಣ ಕಡಿಮೆಯಾಗದೆ ಉಳಿಯಲು ಸಾಧ್ಯವೇ?

      ಅಜ್ಜ ಮುತ್ತಾತನ ಕಾಲದಿಂದಲೂ ಬೋರ್ಡೋ ಮಿಶ್ರಣವನ್ನು ಮಳೆ ಸುರಿಯುತ್ತಿದ್ದಾಗ, ಕೊಳೆಯ ಲಕ್ಷಣಗಳು ಕಂಡಾಗ ಹೊಡೆಯುವ ಪರಿಪಾಠ ಅಷ್ಟು ಸುಲಭವಾಗಿ ಬಿಡಲು ಆಗುತ್ತಿಲ್ಲ, ಯಾರು ಏನೇ ಹೇಳಿದರೂ ಅಜ್ಜ ಮುತ್ತಾತನ ಕಾಲದಿಂದಲೂ ಮಾಡಿದ್ದನ್ನು ಬದಲಾಯಿಸಿಕೊಳ್ಳುವುದು ಕಷ್ಟವೇ ಅಲ್ಲವೇ?