ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Wednesday, December 3, 2008

ಹವ್ಯಕರ ಭಾಷೆಯ ಸೊಗಡೂ.. ಸ್ವಲ್ಪ ಪೋಲಿತನ, ರಸಿಕತೆಯೂ....

ಹವ್ಯಕ ಭಾಷೆ ಹವ್ಯಕ ಬ್ರಾಹ್ಮಣರ ಆಡು ಭಾಷೆ,ಇದು ಕನ್ನಡವೇ ಆದರೂ ಈ ಭಾಷೆಗೊಂದು ವಿಶೇಷ ಸೊಗಡಿದೆ, ನಮ್ಮ ಭಾಷೆಯಲ್ಲಿ ಬಹುವಚನ ಬಳಕೆ ಅತೀ ವಿರಳ, ನಮ್ಮ ಮನೆಯಲ್ಲಿ ಎಷ್ಟೇ ಹಿರಿಯರಿದ್ದರೂ ಅವರೊಂದಿದೆ ನಾವು ಏಕವಚನದಲ್ಲೇ ಮಾತನಾಡುತ್ತೇವೆ.. ಅಂದ ಮಾತ್ರಕ್ಕೆ ನಮ್ಮಲ್ಲಿ ಹಿರಿಯರಿಗೆ ಗೌರವವಿಲ್ಲವೆಂದಲ್ಲ ನಮ್ಮ ಭಾಷೆಯ ವಿಶೇಷತೆಯೇ ಹಾಗೆ, ಏಕವಚನದಲ್ಲಿ ಮಾತನಾಡುವುದರಿಂದ ನಮ್ಮ ಬಾಂಧವ್ಯ ಗಟ್ಟಿಯಾಗಿರುತ್ತವೆಯೇನೋ ಎಂದು ನನಗೆ ಅನಿಸುತ್ತದೆ(ಗೆಳೆಯರೊಂದಿಗೆ ನಾವು ಯಾವಾಗಲೂ ಏಕವಚನದಲ್ಲಿಯೇ ಅಲ್ಲವಾ ನಾವು ಮಾತನಾಡೋದು?) ಪರಿಚಯವಿಲ್ಲದ ಅಥವಾ ಮೊದಲ ಬಾರಿ ಮಾತನಾಡಿಸುವಾಗ ಕೆಲವರನ್ನು "ನಿಮಗೆ" ಯಾವೂರಾತು ಎಂದು ಕೇಳುತ್ತೇವೇನೋ.. ಅಥವಾ ಕೆಲವರು ಹಿರಿಯರಿಗೆ ನೀವು ಎಂದು ಬಹುವಚನ ಬಳಸಿ ಮಾತನಾಡುತ್ತಾರೇನೋ, ಆದರೆ ಮೇಲೆ ತಿಳಿಸಿದಂತೆ ಏಕವಚನ ಬಳಕೆ ಅತೀ ಹೆಚ್ಚು.
ಮಲೆನಾಡಿನ ಸೀಮೆಗಳಾದ (ಅನೇಕ ಊರುಗಳನ್ನು ಸೇರಿಸಿ ಒಂದು ಸೀಮೆ ಎಂದು ಕರೆಯುತ್ತಾರೆ) ಸಾಗರ ಸೀಮೆಗೂ, ಕ್ಯಾಸನೂರು ಸೀಮೆ, ಸಿರಸಿ, ಸಿದ್ದಾಪುರ ಹಾಗೂ ಇನ್ನೂ ಹಲವು ಸೀಮೆಯಲ್ಲಿ ಮಾತನಾಡುವ ಹವ್ಯಕ ಭಾಷೆಯಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಿದೆಯಷ್ಟೆ,ಆದರೆ ಪುತ್ತೂರಿನ ಹವ್ಯಕ ಭಾಷೆ ಮಲೆನಾಡಿಗರಾದ ನಮಗೆ ಅರ್ಥವಾಗುವುದು ಸ್ವಲ್ಪ ಕಷ್ಟಕರವಾಗಿದೆ ಅಲ್ಲಿ ತುಳು ಭಾಷೆಯ ಪ್ರಬಾವವಿರುವುದರಿಂದಲೋ ಎನೋ ಮಲೆನಾಡ ಹವ್ಯಕರಿಗೆ ಅಲ್ಲಿಯ ಭಾಷೆ ಅರ್ಥವಾಗುವುದಿಲ್ಲ. ಸಾಗರದವರು "ಹೋಗಬೇಕು" ಅನ್ನುವುದನ್ನು ಹವ್ಯಕ ಬಾಷೆಯಲ್ಲಿ "ಹೋಗಕ್ಕು" ಎಂದು ಹೇಳಿದರೆ ಕ್ಯಾಸನೂರು ಹಾಗು ಕೆಲವು ಕಡೆ "ಹೋಗವು" ಎಂದು ಹೇಳುತ್ತಾರೆ... ಹಾಗೆಯೇ ಬರಕ್ಕು, ಬರವು ಹೀಗೆ ಅಲ್ಪ ಸ್ವಲ್ಪ ವ್ಯತ್ಯಾಸಗಳಿರುತ್ತವೆ,ಇನ್ನೊಂದು ಹಾಸ್ಯಾಸ್ಪದ ವಿಷಯವೆಂದರೆ ಕ್ಯಾಸನೂರು ಸೀಮೆಯ(ಸೊರಬ ತಾಲ್ಲೂಕಿನ ಕೆಲವು ಗ್ರಾಮದ)ಲ್ಲಿ ಹೆಂಡತಿಗೆ "ಅದು" ಎಂದು ಕರೆಯುತ್ತಾರೆ, ಎಮ್ಮನೆದು ಬೈಂದನೆ ನಿಮ್ಮನಿಗೆ,ಎತ್ಲಾಗ್ ಹೋತೇನ ಅದು ಎನ್ನುವ ಮಾತುಗಳು ಕೇಳಲು ಸಿಗುತ್ತವೆ, "ಅದು" ಎಂದು ತನ್ನ ಗಂಡ ಕರೆಯುವುದಕ್ಕೆ ಹೆಂಡತಿಯಿಂದಲೂ ಯಾವುದೆ ತಕರಾರು ಇರುವುದಿಲ್ಲ, ಹೆಂಡತಿಯಾದವಳು ಮಾತ್ರ ಗಂಡನಿಗೆ "ಅವರು" ಎಂದು ಸಂಭೋದಿಸುತ್ತಾರೆ, ಇದೊಂದೆ ಇರಬೇಕು ಬಹುವಚನ ಬಳಕೆ ಹವ್ಯಕದಲ್ಲಿ!, ಈಗಿನ ಆಧುನಿಕ ಯುಗದಲ್ಲಿ ನಮ್ಮಲ್ಲೂ ಹೆಸರು ಹಿಡಿದು ಕರೆಯುವ ಮಹಿಳಾ ಮಣಿಗಳು ಇದ್ದಾರೆ ಬಿಡಿ, ಆದರೆ ಅವರು ಹಳ್ಳಿಯ ಮನೆಯಲ್ಲಿನ ಅಜ್ಜಿಯರ ಮುಂದೆ ಅಥವಾ ಅಮ್ಮನಿಗೆ ಕೇಳಿಸುವಂತೆ ಗಂಡನ ಹೆಸರಿಡಿದು ಕರೆದರೆ ಬೈಯ್ಯಿಸಿಕೊಳ್ಳುವುದು ಖಂಡಿತ, "ಎಂತದೆ ಕೂಸೆ ಗಂಡನ್ನ ಹೆಸ್ರಿಡಿದು ಕರ್ಯದು,ಎಂಗ ಎಲ್ಲಾ ಹಿಂಗೆ ಗಂಡನ ಹೆಸ್ರಿಡ್ದು ಕರಿತಿದಿದ್ವಿಲ್ಲೆ"ಎನ್ನುವ ಆಕ್ಷೇಪ ವ್ಯಕ್ತವಾಗುತ್ತದೆ.ಹವ್ಯಕರ ಮನೆಗಳಲ್ಲಿ ಮಕ್ಕಳನ್ನು ಹೆಚ್ಚಾಗಿ ಅಪ್ಪಿ ಮತ್ತು ಕೆಲವು ಸಲ ಮಾಣಿ ಎಂತಲೂ,ಅಮ್ಮಿ ಮತ್ತು ಕೂಸೆ ಎಂದು ಹುಡುಗ ಹುಡುಗಿಯರನ್ನು ಕರೆಯುವುದು ಸರ್ವೇಸಾಮನ್ಯವಾಗಿದೆ.. ಓರಗೆಯ ಹುಡುಗರು ಹುಡುಗಿಯರನ್ನು ಕೂಸೆ ಎಂದು ಸಂಭೋದಿಸಿ ಮಾತನಾಡುವುದು ಕೂಡಾ ಅಷ್ಟೇ ಸಾಮಾನ್ಯ, ಆದರೆ ಈಗಿನ ಆಧುನಿಕ ಯುಗದ, ಪಟ್ಟಣ ಸೇರಿದ ಹುಡುಗಿಯರನ್ನು ಕೂಸೆ ಎಂದು ಕರೆದರೆ ಅವರಿಗೆ ಸಿಟ್ಟು ಬಂದು ಬಿಡುತ್ತದೆಯಂತೆ, ಕೆಲವರಿಗೆ ಕೂಸೆ ಎಂದು ಕರೆದರೆ ಇಷ್ಟವಾಗುವುದು ಇದೆ, ಕಾಲದ ಮಹಿಮೆ ಸಾರ್ವಜನಿಕ ಸ್ಥಳಗಳಲ್ಲಿ ಇಬ್ಬರು ಹವ್ಯಕರಿದ್ದರು ಹವ್ಯಕ ಭಾಷೆಯಲ್ಲಿ ಮಾತನಾಡಲು ಇಷ್ಟಪಡದ, ಮಾತನಾಡಿದರೆ ಎಲ್ಲಿ ಬೇರೆಯವರು ನಗುತ್ತಾರೋ ಅಥವಾ ಬೇರೆಯ ಯಾವುದೋ ಕಾರಣಕ್ಕೋ ಹವ್ಯಕ ಮಾತನಾಡಲು ಹಿಂಜರಿಯುವ ಅನೇಕರಿದ್ದಾರೆ.. ಇನ್ನು ಕೆಲವರು ಯಾರ ಮುಲಾಜಿಲ್ಲದೆ ನಮ್ಮ ಭಾಷೆಯಲ್ಲಿಯೇ ಮಾತನಾಡುವವರಿದ್ದಾರೆ ಅಂಥವರನ್ನು ಕಂಡರೆ ನಿಜವಾಗಲೂ ಹೆಮ್ಮೆಯೆನಿಸುತ್ತದೆ,
ಹವ್ಯಕರು ಪೇಟೆ ಭಾಷೆಯಲ್ಲಿ (ನಿಮ್ಮ ಬೆಂಗಳೂರು ಕನ್ನಡ ಭಾಷೆಯಲ್ಲ ಬಿಡಿ, ಅಲ್ಲಿ ಕನ್ನಡ ಬಂದರೂ ಸ್ವಾಭಿಮಾನವೋ ಅಥವಾ ತಮ್ಮ ಪ್ರತಿಷ್ಠೆಗೆ ದಕ್ಕೆಯಾಗುತ್ತದೆ ಅಂತಲೋ ಏನೋ ಕನ್ನಡಕ್ಕಿಂತಲೂ ಇಂಗ್ಲೀಷ್, ಕಂಗ್ಲೀಷ್, ತಮಿಳು, ಮಲಯಾಳಿ ಭಾಷೆಯಲ್ಲಿ ಮಾತನಾಡುವವರೇ ಹೆಚ್ಚಿದ್ದಾರೆ ..) ಅಂದರೆ ಸಾಮಾನ್ಯವಾಗಿ ಕನ್ನಡದ ಆಡು ಭಾಷೆಯಲ್ಲಿ ಮಾತನಾಡುವಾಗಲೂ ಏಕವಚನಗಳು ಬಂದು ಬಿಡುತ್ತವೆ, ಅದನ್ನೇ ಅಪಾರ್ಥಮಾಡಿಕೊಂಡು ಆ ಭಟ್ಟ/ಹೆಗಡೆ ನನ್ನನ್ನು ನೀನು ಎಂದು ಏಕವಚನದಲ್ಲಿ ಮಾತನಾಡಿಸಿಬಿಟ್ಟ ಎಂದು ಹಿಂದಿನಿಂದ ಬೈದುಕೊಳ್ಳುವವರಿದ್ದಾರೆ, ಅನೇಕ ಬಾರಿ ನಮಗೆ ಗೊತ್ತಿಲ್ಲದಂತೆ ಏಕವಚನ ಬಂದು ಬಿಡುತ್ತದೆ.
ಹವ್ಯಕರ ವಿಚಾರ ತಿಳಿಸುವಾಗ ಹವ್ಯಕರ ಅದರಲ್ಲೂ ಮಲೆನಾಡಿನ ಹಳ್ಳಿಗಳಲ್ಲಿನ ಅತಿಥಿ ಸತ್ಕಾರದ ಬಗ್ಗೆ ಹೇಳದೆ ಹೋದರೆ ವಿಚಾರಗಳು ಪೂರ್ಣಗೊಳ್ಳುವುದೇ ಇಲ್ಲ, ನಮ್ಮ ಹಳ್ಳಿಯ ಜನ ಈಗಲೂ ಅತಿಥಿ ಸತ್ಕಾರಕ್ಕೆ ಎತ್ತಿದ ಕೈ,ಮನೆಗೆ ಯಾರೇ ಬಂದರೂ, ಅತಿ ಬಡವರ ಮನೆಗೆ ಕೂಡಾ ಯಾರೇ ಬಂದರು ಬಂದವರಿಗೆ ಅತಿಥಿ ದೇವೋ ಭವ ಎಂದು ಊಟ ಉಪಚಾರ ಮಾಡದೆ ಕಳಿಸುವುದೇ ಇಲ್ಲ. (ಈಗ ಎಲ್ಲೆಡೆಯಲ್ಲೂ ಅತಿಥಿಗಳನ್ನು ಸತ್ಕರಿಸದೆ ಕಳಿಸುವುದಿಲ್ಲ ಬಿಡಿ, ಇದು ವಾದಿಸುವ ವಿಚಾರವಲ್ಲ ಅಲ್ವ!), ನೀವು ಯಾರಾದರು ಒಮ್ಮೆ ಹವ್ಯಕರ ಮನೆಯಲ್ಲಿ ಊಟ ಮಾಡಿದ್ದರೆ ಹಲವು ವರ್ಷಗಳವರೆಗೆ ಅದರ ರುಚಿಯನ್ನು ಮರೆಯುವುದಿಲ್ಲ,ಮುಂದಿನ ಬಾರಿ ಸಿಕ್ಕಾಗ ಅಹ್ ನಿಮ್ಮನೆಯಲ್ಲಿ ಮಾಡಿದ ಅದೇನು... ಅಪ್ಪೆ ಹುಳಿನಾ? ಅದು ತುಂಬಾ ರುಚಿಯಾಗಿತ್ತು ಎಂತಲೋ, ಮಾವಿನ ಮಿಡಿ ಉಪ್ಪಿನಕಾಯಿ ತಂದು ಕೊಡಿ ಅಂತಲೋ,ಹವ್ಯಕರ ಮನೆಯಲ್ಲಿ ಮಾಡಿದ ಊಟದ ನೆನಪು ಮಾಡಿಕೊಂಡು ಹೇಳುವ ಅನೇಕ ಜನರಿದ್ದಾರೆ.ಅಂತಹ ಹೊಗಳಿಕೆಯನ್ನು ಕೇಳಿದಾಗ ತುಂಬಾ ಸಂತೋಷವಾಗುತ್ತದೆ.
ಇನ್ನು ನಮ್ಮ ಹವ್ಯಕರ ಹಳ್ಳಿ ಮನೆಗಳಲ್ಲಿ ನೆಡೆಯುವ ಮದುವೆ ಸಂಭ್ರಮಗಳಲ್ಲಿ ಭಾಗವಹಿಸಿದವರಿಗೆ ಅದರ ಗಮ್ಮತ್ತು ತಿಳಿಯುವುದು.. ಮದುವೆ ಮನೆಯಲ್ಲಿ ಮದುವೆಗೆ ಒಂದು ವಾರ ಬಾಕಿಯಿರುವಾಗಲೇ ಅಲ್ಲಿ ಸಂಭ್ರಮ ಮುಗಿಲು ಮುಟ್ಟುತ್ತದೆ, ನೆಂಟರಿಷ್ಟರು ಜಮಾಯಿಸುತ್ತಾರೆ.. (ಈಗ ಬಂದು ಹೋಗುವ ಸಂಸ್ಕೃತಿಯು ಬಂದಿದೆ ಎನ್ನಿ, ಮದುವೆಯ ಸಮಯಕ್ಕೆ ಬಂದು ಊಟವಾದ ತಕ್ಷಣವೆ ಮನೆಗೆ ಹೋಗುವ ಸಂಸ್ಕೃತಿ ಆಗಮನವಾಗುತ್ತಿದೆ ಆದರೆ ಕೆಲ ವರ್ಷಗಳ ಹಿಂದೆ ಹೀಗಿರಲಿಲ್ಲ!) ಹೆಂಗಸರಿಗಂತೂ ಅನೇಕ ದಿನದ ನಂತರ ತಮ್ಮ ಅಕ್ಕ, ತಂಗಿಯರ,ಹತ್ತಿರದವರ ಜೊತೆ ಸಿಕ್ಕಿರುವುದರಿಂದ, ಅನೇಕ ತಿಂಗಳುಗಳ ಮಾತು ಕಥೆಯಾಡಲಿಕ್ಕೆ ಇರುತ್ತದೆ, ಜೊತೆಗೆ ಮದುವೆಗೆ ತಂದಿರುವ ಜವಳಿಯನ್ನು, ಒಡವೆಯನ್ನು ನೋಡುವುದೇ ಅವರಿಗೆಲ್ಲ ತುಂಬಾ ಸಂಭ್ರಮದ ವಿಷಯ, ಇನ್ನು ಭಾವಂದಿರು ಮಾವಂದಿರೆಲ್ಲ.. ಕವಳ ತುಂಬಿಕೊಂಡು ಹರಟೆಗೆ ಕುಳಿತರೆ ಹೊತ್ತು ಹೋಗಿದ್ದೇ ಗೊತ್ತಾಗುವುದಿಲ್ಲ, "ಭಾವಾ ಮತೆಂತ ಸುದ್ದಿನ ಊರ್ ಕಡಿಗೆ, ಈ ಸರಿ ಪಸ್ಲು ಹೆಂಗಿದ್ದ" ಎನ್ನುವುದರಿಂದ ಹಿಡಿದು ಇನ್ನು ಎನೇನೋ ವಿಚಾರ ವಿನಿಮಯವಾಗುತ್ತದೆ,ಇನ್ನು ಅಳಿಯನು ಬೆಂಗಳೂರಿನವನಾಗಿದ್ದರೆ, ಮತೆ ಬೆಂಗ್ಳೂರ್ ಕಡಿಗೆ ಎಂತ ಸಮಾಚಾರ, ಪ್ಲಯ್ ಓವರ್ ಕಟ್ತಾ ಇದಿದ್ವಲ ಆನು ಹೋದ್ಸರಿ ಬಂದಾಗ ಈಗ ಆಯ್ದನೋ ಅದು.. ಎಂದು ಶುರುವಾಗುವ ಮಾತು-ಕಥೆಗೆ ಕೊನೆಯಿರುವುದೇ ಇಲ್ಲ,ಇನ್ನು ಮೆತ್ತಿನ ಮೇಲೆ ಗಂಡಸರೆಲ್ಲಾ ಸೇರಿ ಇಸ್ಪೀಟ್ ಹಚ್ಚಿದರೆ ಮುಗಿದೇ ಹೋಯಿತು.. ಅವರಿಗೆ ಹೊತ್ತು ಗೊತ್ತಿನ ಅರಿವೇ ಆಗುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತಿರುತ್ತದೆ, ಆದರೆ ಅದರ ಜೊತೆ ಜೊತೆಗೆ ಪಾತ್ರೆ ತರುವುದು, ಅಟ್ಟ ಹಾಕಿಸುವುದು, ತೋರಣ ಕಟ್ಟಿಸುವುದು ಎಲ್ಲವೂ ಸಾಂಗವಾಗಿಯೇ ನೆಡೆಯುತ್ತಿರುತ್ತದೆ, ಮದುವೆಯ ಮುಂಚಿನ ದಿನ ಬೆಳಗ್ಗೆ ತಮ್ಮ ಊರಿನ ಪ್ರತಿ ಮನೆಗೆ ಹೋಗಿ ಅಕ್ಷತೆ ಕೊಟ್ಟು ಕರೆಯುವುದು ಮದ್ವಗೆ "ಎಲ್ರೂ ಬರಕ್ಕು ಹಂಗೆ ಇವತ್ತು ಸಂಜೆ ದೊನ್ಬಾಳೆ ಇದ್ದು ಬರಕ್ಕು" ಎಂದು ಕರೆಯವಾಗುತ್ತದೆ, ದೊನ್ಬಾಳೆ ಎಂದರೆ ಊರಿನವರೆಲ್ಲಾ ಸೇರಿಕೊಂಡು ಬಾಳೆ ಎಲೆಯನ್ನು ಶುಚಿಗೊಳಿಸಿ.. ಊಟದ ಬಾಳೆ, ತಿಂಡಿಯ ಬಾಳೆ ಎಲೆ, ಎಲ್ಲವನ್ನು ವಿಂಗಡಿಸಿ ಸರಿಯಾಗಿ ಜೋಡಿಸಿಡುತ್ತಾರೆ, ಇವೆಲ್ಲಾ ಕೆಲಸವಾದ ಮೇಲೆ ದೊನ್ಬಾಳೆಗೆ ಬಂದವರಿಗೆ "ಮರ್ಯಾದೆ" ಮಾಡಲಾಗುತ್ತದೆ, ಮರ್ಯಾದೆ ಎಂದರೆ ಬೇರೇನು ಅಲ್ಲ, ಬಂದು ಕೆಲಸದಲ್ಲಿ ಸಹಕರಿಸಿದ್ದಕ್ಕಾಗಿ ಎಲ್ಲರಿಗೂ ಅಳಕಾಳು ಬೆಲ್ಲವೋ, ಅಥವಾ ಅವಲಕ್ಕಿ ಬೆಲ್ಲವನ್ನೊ ಜೊತೆಗೆ ಕುಡಿಯಲು ಕಷಾಯ ಕೊಡುತ್ತಾರೆ, ಇವೆರೆಡರ ಕಾಂಬಿನೇಷನ್ನೆ ಅಷ್ಟೊಂದು ಚಂದ..ನೆನಪಾದರೆ ಬಾಯಲ್ಲಿ ನೀರೂರುತ್ತದೆ, ಊರಿನ ಜನರು ಮಾಡಿದ ಕೆಲಸದ ಸಹಕಾರಕ್ಕೆ ಧನ್ಯವಾದ ತಿಳಿಸುವ ಪರಿ ಇದು.

ಇನ್ನು ಕೆಲವು ಮದುವೆ ಮನೆಯ ಅಡುಗೆ ಮನೆಯಲ್ಲಿ ಒಂದೇ ವಯಸ್ಸಿನ ಹುಡುಗರು ಸೇರಿಕೊಂಡರೆ ಅಲ್ಲಿ ಪೋಲಿತನಕ್ಕೆ, ರಸಿಕತನಕ್ಕೆ ಕೊರತೆಯಿರುವುದಿಲ್ಲ, ಎಲ್ಲಾ ಸಮಯದಲ್ಲೂ ಎಲ್ಲೆಡೆಯಲ್ಲೂ ಪೋಲಿತನವಿರುವುದಿಲ್ಲ ಕೆಲವು ಕಡೆಮಾತ್ರ ವಿರಳವಾಗಿ ಇಂತಹವು ನೆಡೆಯುತ್ತದೆ(ಮುಂದಿನದನ್ನು ಓದಿ ಇಶಿಶ್ಯೋ ಅನ್ನದಾರೆ ಓದಡಿ!) {ವಿ.ಸೂಚನೆ: ಮುಂದಿನ ಸಾಲುಗಳು ವಯಸ್ಕರು ಮಾತ್ರ ಓದಬಹುದು..ಅಶ್ಲೀಲತೆಯೆನಿಸುವ ಅಥವಾ ದ್ವಂದ್ವಾರ್ಥ ಸೂಚಿಸುವ ಪದಗಳಿರಬಹುದು. ಇಷ್ಟವಿಲ್ಲದವರು ಸಹ ದಯವಿಟ್ಟು ಓದಲು ಹೋಗಬೇಡಿ!.} ಮದುವೆ ಮನೆಯಲ್ಲಿ ಅನೇಕ ಪೋಲಿ ಜೋಕುಗಳು ಹುಟ್ಟಿಕೊಳ್ಳುತ್ತವೆ..ಅದೂ ಕೂಡಾ ಸೂಚ್ಯವಾಗಿ ಮಾತನಾಡುತ್ತಾರೆ.. ನಿಂಬೆ, ದೊಡ್ಲಿಕಾಯಿ ಎನ್ನುವ ಮಾತುಗಳು ಹರಿದಾಡುತ್ತಿರುತ್ತವೆ,(ಬಿಡಿಸಿ ಹೇಳದು ಬ್ಯಾಡ್ದೇನ ಅಲ್ದ!) ಮದ್ಯೆ ದೊಡ್ಡವರು ಯಾರಾದರು ಬಂದು ಬಿಟ್ಟರೆ ಗೊಳ್ಳೆಂದು ನಗುತ್ತಿದ್ದವರು ಗಂಭೀರವಾಗಿ ಬಿಡುತ್ತಾರೆ,ಕೆಲ್ಸ ಮಾಡ್ರ ಹುಡ್ರಾ ಎಂದು ಅವರವರೆ ಹೇಳಿಕೊಂಡು ಏನು ಗೊತ್ತಿಲ್ಲದವರಂತೆ ಬಡಿಸುವ ಕಾರ್ಯದಲ್ಲಿ ಮಗ್ನರಾಗುವುದು ವಿಶೇಷ, ಇನ್ನು ಊಟಕ್ಕೆ ಕುಳಿತವರು ಕೂಡಾ ರಸಿಕತನವನ್ನು ಪ್ರದರ್ಶಿಸುತ್ತಾರೆ.. ಅದು ಅವರು ಹೇಳುವ ವಿಧಾನದಲ್ಲಿ ಅಡಗಿರುತ್ತದೆ, ಉದಾಹರಣೆಗೆ, ಜಿಲೇಬಿ ಬಡಿಸುವವನ ಹತ್ತಿರ "ಎಲ್ಡ್ ಹಿಡ್ಕಂಡು ಒಂದು ಹಾಕು ಮಾರಾಯ" ಎನ್ನುವವರಿದ್ದಾರೆ, ಖೀರು ಹಕಶ್ಕ್ಯಳೋ.. ಹುಡ್ಗೇರ್-ಬೀಜ(ಹುಡಿ ಗೇರುಬೀಜ)ಹಾಕಿ ಮಂದಕ್ಕೆ ಮಾಡಿದ್ದ ಬೆಳ್ಳಗಿದ್ದು ಎಂದು ಗಂಭೀರವಾದರೆ, ಒಂದು ಕ್ಷಣದ ನಂತರ ಅರ್ಥವಾದವರೆಲ್ಲಾ ಗೊಳ್ಳನೆ ನಗುತ್ತಾರೆ,ಹೀಗೆ ನಾನ ತರದ ಜೋಕಿನ ಸರಮಾಲೆಗಳೆ ಸುರಿಯುತ್ತವೆ, ಮೋಟುಗೋಡೆಯಲ್ಲಿ ಕೂಡಾ ಇಂತಹ ಕೆಲವು ಜೋಕುಗಳಿವೆ.ಇಂತಹ ಜೋಕುಗಳ ನಡುವೆಯೇ ಅರ್ಥಗರ್ಬಿತವಾದ ಶ್ಲೋಕಗಳು ಮೊಳಗುತ್ತವೆ.. ಒಂದೆ ಉಸಿರಿನಲ್ಲಿ ಹೇಳುವ ಸಂಸ್ಕೃತ ಶ್ಲೋಕಗಳನ್ನು ಕೇಳಲು ಅಷ್ಟೇ ಹಿತಕರವಾಗಿರುತ್ತದೆ ಅದೇ ರೀತಿಯಲ್ಲಿ ಊಟಕ್ಕೆ ಕುಳಿತವರಿಗೆ ಶ್ಲೋಕ ಹೇಳಿದವನ ಸವಾಲಿಗೆ ಉತ್ತರವೆಂಬಂತೆ ಒಂದೇ ಉಸಿರಿನಲ್ಲಿ ಜೈಕಾರ ಕೂಗುವುದು ನೆಡೆಯುತ್ತದೆ, ಜೊತೆಗೆ ಒಂದೇ ಊರಿನವರು ಸ್ನೇಹಿತರು ಸೇರಿ ಊಟಕ್ಕೆ ಕುಳಿತರೆ ಅಲ್ಲಿ ಸಿಹಿ ಪದಾರ್ಥವನ್ನು ತಿನ್ನುವ ಕಂಬಳ ಏರ್ಪಡುತ್ತದೆ..ಒಬ್ಬೊಬ್ಬರು ಕಡಿಮೆಯೆಂದರೂ 20ರಿಂದ 25 ಜಿಲೇಬಿ ತಿಂದು ಸೈ ಎನಿಸಿಕೊಳ್ಳುತ್ತಾರೆ.. ಈ ಜಿಲೇಬಿ ಕಂಬಳಕ್ಕೆ ಅನೇಕ ನಿಯಮಾವಳಿಗಳಿರುತ್ತವೆ.. ಕಡಿಮೆಯೆಂದರೂ 5 ಜನರಾದರು ಸ್ಪರ್ಧಿಗಾರರಿರಬೇಕು.. ಬಡಿಸುವರು ಒಂದೊಂದೇ ಜಿಲೇಬಿಯನ್ನು ಎಲ್ಲರಿಗೂ ಹಾಕಬೇಕು.. ಒಟ್ಟಿಗೆ ಒಂದಕ್ಕಿಂತ ಹೆಚ್ಚು ಜಿಲೇಬಿಯನ್ನು ಹಾಕಬಾರದು..ಅದನ್ನು ತಿಂದಾದ ತಕ್ಷಣ ಇನ್ನೊಂದು ಜಿಲೇಬಿಯನ್ನು ಒಬ್ಬೊಬ್ಬರಿಗೆ ಹಾಕುತ್ತಾ ಹೋಗಬೇಕು, ಕಂಬಳದಲ್ಲಿ ಯಾರೊಬ್ಬರು ಜಿಲೇಬಿ ತಿನ್ನಲಾರೆ ಸಾಕು ಎಂದರೂ ಅಲ್ಲಿಗೆ ಸ್ಪರ್ಧೆ ಮುಕ್ತಾಯವಾಗುತ್ತದೆ! ಜೊತೆಗೆ ಮದುವೆಮನೆಯ ಯಜಮಾನ ನಿಟ್ಟುಸಿರುಬಿಡುತ್ತಾನೆ!, ಅಂದರೆ ಇದು ಎಲ್ಲಾ ಮದುವೆಮನೆಗಳಲ್ಲಿ ಈ ತರಹದ ಕಂಬಳಗಳು ನೆಡೆಯುವುದಿಲ್ಲ ಕೆಲವು ಆಪ್ತರ ಮನೆಯಲ್ಲಿ ಮಾತ್ರ ಈ ತರಹ ಸಿಹಿ ಪದಾರ್ಥ ತಿನ್ನುವ ಸ್ಪರ್ಧೆಗಳು ನೆಡೆಯುತ್ತದೆ, ಈ ಸಂದರ್ಭದಲ್ಲಿ ನನ್ನ ನೆನಪಿನ ಬುತ್ತಿ ಬಿಚ್ಚಿಕೊಳ್ಳುತ್ತಿದೆ.. ಜೊತೆಯಲ್ಲೇ ನನ್ನ ಪರಿಚಿತ ಸ್ನೇಹಿತರು(ಹೆಸರು ಬೇಡ)ಮೂರು ಜನರು ಸೇರಿ ಒಂದು ಬಕೇಟ್ ಕೇಸರಿಬಾತನ್ನು ಖಾಲಿಮಾಡಿದ್ದನ್ನು ಕಣ್ಣಾರೆ ಕಂಡಿದ್ದೇನೆ.. ಮುಂಚೆಯ ಅವರ ಪರಿಚಯವಿದ್ದದ್ದರಿಂದ ಇದೇನು ಆಶ್ಚರ್ಯಕರ ವಿಚಾರವಾಗಿರಲಿಲ್ಲ.. ನಾನೇ ತುಪ್ಪವನ್ನು ಸುರಿದು "ನಿದಾನ ತಿನ್ರಪಾ ಮಾತಾಡ್ತಾ" ಎಂದು ಹೇಳಿದ ನೆನಪು ಇನ್ನೂ ಇದೆ. ಮತ್ತೊಂದು ಘಟನೆಯನ್ನು ಮರೆಯಲೇ ಸಾದ್ಯವಿಲ್ಲ.. ಅನೇಕ ವರ್ಷದ ಹಿಂದೆ ಒಬ್ಬರು ಹೇಳಿದ ಮಾತು ಇನ್ನು ನೆನಪಿನಲ್ಲಿ ಉಳಿದು ಹೋಗಿದೆ, ಆತನ ರಸಿಕತೆಗೆ ತಲೆದೂಗಿದ್ದೇನೆ.. ಇಬ್ಬರು ಮಕ್ಕಳು ಅಂಗಳದಲ್ಲಿ ಚೆಂಡಾಟವಾಡುತ್ತಿದ್ದರು, ಚೆಂಡಾಟವೆಂದರೆ ಅರ್ಥವಾಯಿತೆಂದುಕೊಳ್ಳುತ್ತೇನೆ, ಅದೇ ಟಿನಿಸ್ ಬಾಲನ್ನು ಎಸೆದಾಡುವುದು.. ಒಬ್ಬನು ಎಸೆದದ್ದನ್ನು ಇನ್ನೊಬ್ಬ ಹಿಡಿಯುವುದು ಮಾಡುತ್ತಿರುವಾಗ ಅದು ಕೈ ಜಾರಿ ಹುಡುಗನ ತಂದೆಯ ಕೈಸೇರಿತು, ಅದಕ್ಕೆ ಮಗು ಕೇಳಿದ್ದಿಷ್ಟು "ಅಪ್ಪಾ ಬಾಲ್ ಎಂಗಳದ್ದು ಕೊಡಾ.." ಅದಕ್ಕೆ ಅವರಪ್ಪ ಟೆನಿಸ್ ಬಾಲನ್ನು ಹಿಚುಕುತ್ತಾ ಹೇಳಿದ್ದು ಇಷ್ಟೇ, "ನಿಂಗಳ್ಮನೆ ಬಾಲ್ ಎಂಗೆ ಬ್ಯಾಡದ್ರೋ ಮಾರಾಯ, ಎಂಗಕ್ಕೆ ಬಾಲ್ ಆಡಿ ಆಡಿ ಬೇಜಾರ್ ಬಂದೆ ನಿಂಗಕ್ ಬಿಟ್ಟು ಕೊಟಿದ್ಯ" ಅಂದರು!, ಹವ್ಯಕರ ಬಗೆಗೆ ನನಗೆ ಗೊತ್ತಿರುವ ಅಲ್ಪ ಸ್ವಲ್ಪ ಬರೆದಿದ್ದೇನೆ ಇನ್ನೂ ಅದೆಷ್ಟು ಮಹತ್ವದ ವಿಚಾರಗಳನ್ನು ಬಿಟ್ಟಿದ್ದೇನೋ ಏನೋ.. ತುಂಬಾ ದಿನದಿಂದ ನಮ್ಮ ಭಾಷೆಯ ಬಗೆಗೆ ಬರೆಯಬೇಕೆಂಬ ಆಸೆಯಿತ್ತು ಆದ್ದರಿಂದ ನನಗೆ ಗೊತ್ತಿರುವ ಅಲ್ಪ ಸ್ಪಲ್ಪ ಬರೆದಿದ್ದೇನೆ. ಇಷ್ಟ ಆಗ್ತೇನ ನಿಂಗಕ್ಕೆ ಮಾಡಿದ್ದಿ.

ಕೊನೆಯ ಮಾತು ಪೋಲಿತನ ರಸಿಕತೆ ಎರಡೂ ಪ್ರತಿಯೊಬ್ಬರ ಜೀವನದಲ್ಲಿ ಇದ್ದೇ ಇರುತ್ತದೆಯಲ್ಲವೇ.. ಸಾರ್ವಜನಿಕವಾಗಿ ಹೇಳಿಕೊಳ್ಳುವ ಧೈರ್ಯ ನಮ್ಮಲ್ಲಿ ಅನೇಕರಿಗಿಲ್ಲ.. ನಮ್ಮಂತ ಮಡಿವಂತ ದೇಶದಲ್ಲಿ ಪೋಲಿತನದ ಅಥವಾ ರಸಿಕತೆಯ ಮಾತುಗಳನ್ನು ಸಾರ್ವಜನಿಕವಾಗಿ ಮಾತನಾಡುವ ಸ್ವಾತಂತ್ರವಿನ್ನು ದೊರಕಿಲ್ಲ...ಆದರೂ ಇದೆಲ್ಲವನ್ನು ಬರೆದು ಬಿಟ್ಟಿದ್ದೇನೆ, ತಪ್ಪು ತಿಳಿದುಕೊಳ್ಳೊದಿಲ್ಲ ಎನ್ನುವ ವಿಶ್ವಾಸದಿಂದ, ಅನೇಕರು ನೀನು ಇಷ್ಟೊಂದು ಕೆಟ್ಟು ಹೋಗಿದ್ದೀಯ ಎಂದರೆ ನನ್ನದು ನಗುವೊಂದೆ ಉತ್ತರವಾದೀತು..ತಪ್ಪು ತಿಳ್ಕೊಳಲ್ಲ ಎಂದು ಕೊಳ್ಳಲಾ? ಅಂತೆಯೇ ಮೂಗಿರುವ ತನಕ ನೆಗಡಿ ತಪ್ಪಿದ್ದಲ್ಲ ಎನ್ನುವ ರೀತಿಯಲ್ಲೇ ಯಾವಾಗ ಅರ್ಜಿ ಫಾರಂ(application form)ಗಳಲ್ಲಿ ಜಾತಿ ಎನ್ನುವ ಕಾಲಂ ಇರುತ್ತದೆಯೋ ಅಲ್ಲಿಯವರೆ ಜಾತೀಯತೆ ಇದ್ದೇ ಇರುತ್ತದೆ. ಬರಲಾ.. ಪ್ರೀತಿ ಇರಲಿ.. ಸದಾ........... ಹೀಗೆ...

35 comments:

Sandeepa said...

ಒಳ್ಳೇ ಬರಹನೇ ಬರದ್ದೆ. ಮತ್ತೆ, ಎಲ್ಲೂ ಒಂದು ಅಕ್ಷರನೂ ಬರೀಬಾರದ್ದಂತು ಬರ್ಯಲ್ಲೆ!

ಹಿಂಗೆ ಬರೀತಾ ಇರು:)

ಮಾವೆಂಸ said...

kannada kannada, blog ge chenna. but i article thusu trim aagakkiththu. jothege pyra galu sanna sannadagiddare oodalu ruchi.....

Harisha - ಹರೀಶ said...

ಮಗನೇ.. ಹವ್ಯಕರೆಲ್ಲ ಹಿಂಗೆ ಅಂತ ಜನ ತಿಳ್ಕಳ ಹಂಗೆ ಬರದ್ಯಲೋ...

ಆದ್ರೆ ಒಂದ್ ಮಾತ್ರ ಒಪ್ತಿ.. ದೊನ್ಬಾಳೆ ಆದ್ಮೇಲೆ ಕೊಡ ಅವಲಕ್ಕಿ-ಬೆಲ್ಲ-ಉಪ್ಪಿನ್ಕಾಯಿ ತಿಂಬ್ಲೇ ಅಂತ್ಲೆ ನಾ ಅಲ್ಲಿಗ್ ಹೋಯ್ದಿ.. :D

ಚಿತ್ರಾ said...

ಮನಸ್ವಿ ,
ಚೆನಾಗಿ ಬರದ್ದೆ .( ಈಗಿನ್ನೂ ನಮ್ಮ ಭಾಷೆ ಬಗ್ಗೆ ಓದಿದ ಹುರುಪು. ಏಕವಚನಕ್ಕೆ ಕ್ಷಮೆಯಿರಲಿ). ನಮ್ಮ ಆಫೀಸಿನಲ್ಲಿರುವ ಮರಾಠಿಗರಿಗೆ ಹಾಗೂ ಉತ್ತರ ಕರ್ನಾಟಕದ ಜನಕ್ಕೆ, ನಾವು ದೊಡ್ಡವರಿಗೂ ಏಕವಚನದಲ್ಲಿ ಕರೆಯುವುದು ನಂಬಲಾಗದ ವಿಷಯ.ಆದರೆ ,ಅದರಲ್ಲಿನ ಆತ್ಮೀಯತೆಯ ಸೊಗಸೇ ಬೇರೆ ಅಲ್ದಾ?
ಇನ್ನು , ರಸಿಕತೆ ,ಪೋಲಿತನ ,ಎಲ್ಲ ಕಡೆನೂ ಇದ್ದು ಬಿಡು. ಚೆನಾಗಿತ್ತು. ನೆಗ್ಯಾಡಿ ನೆಗ್ಯಾಡಿ ಸಾಕಾತು.

Unknown said...

ಮಸ್ತ್ ಬರದ್ದೆ.. ಜಿಲೇಬಿ ತಿಂದಿದ್ದು, ದೊಂಬಾಳೆ, 'ಅತಿಥಿ ದೇವೋಬವ' ಯೆಲ್ಲವು ನೊಡಿ ಬರ್ತಿ ಖುಷಿ ಆತು.

ಹಂಗೆ ಮತ್ತೊಂದು ಪೊಲಿ ಜೊಕು.. ಪಕ್ಕದ್ ಮನೆ ರಾಮಣ್ಣ ಹೇಳ್ತಿದ್ನಪ.. ಮಾವಿನಹಣ್ಣು ರಸಾಯನ ಬಡಿಸಿದ್ದಾಗ. 'ಆನು ಮೊದ್ಲು ತೊಟ್ಟಿಗೇ ಬಾಯಿ ಹಾಕ್ತಿ, ನಿಂಗ ಹುಡ್ಗ್ರಿಗೆ ಹೆಂಗೆ ತಿನ್ನಕ್ಕು ಹೇಳೂ ಗೊತ್ತಿಲ್ಲೆ' ಅಂತ :p

ಸಂದೀಪ್ ಕಾಮತ್ said...

"ವಿ.ಸೂಚನೆ: ಮುಂದಿನ ಸಾಲುಗಳು ವಯಸ್ಕರು ಮಾತ್ರ ಓದಬಹುದು..ಅಶ್ಲೀಲತೆಯೆನಿಸುವ ಅಥವಾ ದ್ವಂದ್ವಾರ್ಥ ಸೂಚಿಸುವ ಪದಗಳಿರಬಹುದು. ಇಷ್ಟವಿಲ್ಲದವರು ಸಹ ದಯವಿಟ್ಟು ಓದಲು ಹೋಗಬೇಡಿ!."


ಈ ವಾರ್ನಿಂಗ್ ಹಾಕಿದ್ದು ಒಳ್ಳೆದಾಯ್ತು ಇಲ್ಲಂದ್ರೆ ಅರ್ಧ ಓದಿ ಹೋಗ್ತಾ ಇದ್ದೆ ,ವಾರ್ನಿಂಗ್ ನೋಡಿದ್ ಮೇಲೇನೆ ಕುತೂಹಲ ಜಾಸ್ತಿ ಆಗಿ ಎಲ್ಲಾ ಓದಿದೆ:)

Ittigecement said...

ಮನಸ್ವಿ...
ರಾಶಿ ಚೊಲೊ ಬರದ್ಯಲೊ..ಅದರೆ ನಮ್ಮ ಬಗ್ಗೆ ಹೇಳದು ಇನ್ನೂ ಜಾಸ್ತಿ ಇದ್ದು.ಧಾರವಾಹಿ ಥರ ಬರದ್ರೆ ಚೊಲೊ ಆಗ್ತಿತ್ತು.ಅಲ್ದ?
ನಮಗೆ ನಮ್ಮದೆ ಆದ ಹವ್ಯಕ ಭಾಷೆ, ಸಂಸ್ಕ್ರತಿ, ಸಂಸ್ಕಾರ, ಸಂಪ್ರದಾಯ, ಹಬ್ಬಗಳು, ಊಟ, ತಿಂಡಿ,ಹೀಗೆ ಹೇಳ್ತಾ ಹೋದರೆ ಕೊನೆನೆ ಇಲ್ಲೆ. ಸೀಮಾ ಹೇಳ ತಂಗಿ ನಮ್ಮ ಕಡೆ ಗಾದೆ ಸಂಗ್ರಹ ಒಟ್ಟು ಮಾಡ್ತ ಇದ್ದು ಅದರ ಬ್ಲೊಗನಲ್ಲಿ.ಇದೆಲ್ಲ ನೊಡಿದ್ರೆ ರಾಶಿ ಖುಷಿ ಆಗ್ತು..
ನಮ್ಮನೆಗೆ ಬಂದ ಅಥಿಗಳಿಗೆ ಕೊಡುವ ಕಷಾಯ ಬಹಳ ಫೇಮಸ್ಸು. ಲೆಖನ ಓದಿ ಖುಷಿ ಆತು..ಮುಂದುವರೆಸಿ...

mg bhat said...

supper agi baradde......namma bhashe supper ........ninu irokintha kadimene politanadalli baradde......
andage thama lekhana bariyadu swlpa kadime madidde
...rkut jasti aydu kanthu....health ge olldedu allapa adu.........
next article yavaga........!!!!

ಮನಸ್ವಿ said...

@ಸಂದೀಪ
ಬರೀಬಾರದ್ದು ಬರಿಯಲ್ಲೆ ಅನ್ನದು ಸರಿ, ಬರಿಯಾಂತದ್ದು ಬರದ್ನ ಇಲ್ಯ!? ಧನ್ಯವಾದನಪಾ...

@ಮಾವೆಂಸ
ಗುರುವೇ ಲೇಖನ ಹೆಂಗಿದ್ದು ಅಂತ ಬರಿಯಲ್ಲೆ, ಕನ್ನಡ ಕನ್ನಡ ಅಂದ್ರೆ ಎಂತದು, ಬುದ್ದಿ ಜೀವಿ ತರಹ ಮಾತಾಡಿರೆ ಅರ್ಥ ಮಾಡ್ಕ್ಯಳದು ಹೆಂಗಪಾ?? ಪ್ಯಾರಾ ದೊಡ್ಡಕ್ಕಿದ್ದಲ... ರುಚಿ ಇಲ್ಲೆ ಅಂತ ತಿಳ್ಕಳದಾ? anyways ತ್ಯಾಂಕ್ಸ್

@ಹರೀಶ
ಮತ್ತೆ ಹವ್ಯಕರೆಲ್ಲಾ ಇನ್ನು ಹೆಂಗೆ ಅಂಬೆ ನೀನು ;P ಜನರಿಗೆ ಗೊತಿದು ತಗ ಹವ್ಯಕರು ಹೆಂಗೆ ಅಂತ :)
ಮರ್ಯಾದೆ ಮಾಡ್ಸ್ಕಳದು ಬಿಡ್ತ್ವಲ್ಲೆ ಯಾರು ಅಲ್ದ, ನನ್ನಿ...

@ಚಿತ್ರಾ
ನಮ್ಮ ಭಾಷೆಲಿ ಮಾತಡಕಿದ್ರೆ ನೀನು ಏಕವಚನ ಬಳಕೆಗೆ ಆಕ್ಷೇಪಣೆನೆ ಇಲ್ಯಲ ಇನ್ನು ಕ್ಷಮೆ ಎಂತಕ್ಕೆ?
ಹ್ಮ್.. ಹೌದು ಬರ್ತಿ ಜನರಿಗೆ ನೀವು ಅಪ್ಪಂಗೂ ಅಪ್ಪಾಜಿ ಹೆಳಲ್ವಾ ಏಕವಚನದಲ್ಲಿ ಕರೀತೀರಾ ಅಂತ ಆಶ್ಚರ್ಯ ಪಡ್ತ
ಹೌದು ಆತ್ಮೀಯತೆ ಬರ್ತಿ ಇರ್ತು... ಆನು ಈ ಲೇಖನ ಬರಿಯಕ್ಕಾರೆ ನೆಗ್ಯಾಡ್ಕೋತನೆ ಬರದ್ದಿ, ನಗು ತಡ್ಕಳಕ್ಕೆ ಆಗ್ದೆ, ನಿಂಗೆ ನಗು ಬಂದಿದ್ರಲ್ಲಿ ಏನೂ ಆಶ್ಚರ್ಯ ಇಲ್ಲೆ ತಗ :), ಹಿಂಗೆ ಬರ್ತಾ ಇರು..

@ಪಾಪಣ್ಣ(ಅಮರ)
ಧನ್ಯವಾದ... ನಿನು ಕಲ್ತಿದ್ಯ ಈಗ ತೊಟ್ಟಿಗೇ ಬಾಯಿ ಹಾಕಲೇ?.. ಚನಾಗಿದ್ದು ಈ ಜೋಕು..

@ಸಂದೀಪ್ ಕಾಮತ್
ಅದು ಓದಲಿ ಅಂತನೇ ಹಾಕಿದ್ದು... ಇಲ್ಲ ಅಂದ್ರೆ ನಿಮ್ಮಂತೆ ಅನೇಕ ಜನ ಅರ್ದ ಓದಿ ಹೋಗಿ ಬಿಡುತ್ತಾರೆಂದು ಗೊತ್ತಿತ್ತು! ಧನ್ಯವಾದಗಳು ಪೂರ್ತಿಯಾಗಿ ಓದಿದ್ದಕ್ಕೆ.

@ಸಿಮೆಂಟು ಮರಳಿನ ಮಧ್ಯೆ
ತ್ಯಾಂಕು.. ರಾಶಿ ಚೊಲೋ ಬರದ್ಯಲೋ ಹೇಳದನ್ನ ಕೇಳಿ ತುಂಬಾ ಖುಷಿ ಆತು.. ಹೌದು ಮೆಗಾ ಸೀರಿಯಲ್ ತರ ಬರಿಯಕ್ಕಾಗ್ತು.. ಸೀಮಾಳ ಬ್ಲಾಗ್ ವಿಳಾಸ ಕೊಟ್ಟಿದ್ದರೆ ಅನುಕೂಲ ಅಗ್ತಿತ್ತು.. ಹೌದಲ್ದ ಕಷಾಯದ ವಿಷಯ ಬಿಟ್ಟೇ ಹೋಯ್ದು.. ನೆನಪಿಸಿದ್ದಕ್ಕೆ ಧನ್ಯವಾದ..

ಮನಸ್ವಿ said...

@ MG Bhat

Magne.... Thyanksu... innu jasti apa politanadalli bardidre elru seri nan baitiddi.. en Jana aha!..
houdapa houdu.. ninnastu rkuting ille namdu.. bejar bandu hoydale entidda alli swalpa kadme madiddi taga.. andange Health ge apa antaddu yavdiddu anta bekala! yavdaru idre helapa....

NExt ArtiCle NeXt Year.. andre next month mele saiyyi...

Thanks.. magne nan blog adress barditka bari link kodu anta kelta irte, en janvena.. sigu sagara bandaga...

Unknown said...

ಅಡ್ಡಿಲ್ಲೆ ಲಾಯ್ಕ್ ಬರದ್ಯೋ.. ಮುಂದೆ ಓದಡಿ ಹೇಳಿ ಕುತೂಹಲ ಬಪ್ಪ ಹಂಗೆ ಮಾಡ ಕಲಿಗೂ ಕೈ ಹಚ್ಚಿದ್ದೆ. ಇರ್ಲಿ ಹಿಂಗೇ ನಡೀತಾ ಇರ್ಲಿ. ಬ್ಲಾಗ್ ಬರ್ಯ ಹೊಡ್ತ ಜೋರಾಗ್ತ ಇದ್ದಪ ಎಲ್ಲ ಕಡಿಗೂ.

prajavani said...

೧)ಮದುವೆ ಮನೆಯಲ್ಲಿ "ಒಂದು ಜಿಲೇಬಿ ಹಾಕ್ಲಾ, ಯಾರೂ ಹಾಕ್ಕೆಳ್ಲೇ ಇಲ್ಲೆ. ಒಂದು ಹಾಕ್ಯಳಿ.. ಹಾಕ್ಲಾ ಹಾಕ್ಲಾ" ಎನ್ನುತ್ತಾ ನಡು ವಯಸ್ಕ ಜಿಲೇಬಿ ಹರಿವಾಣ ಹಿಡಿದು ಬರ್ತಾ ಇದ್ದ.
ಪಕ್ಕದಾಕೆಯ ಬಳಿ ಅವಳು ಹೇಳಿದ್ದು" ಅಂವ ಹಾಕ್ಲಾ ಹಾಕ್ಲಾ ಹೇಳಿ ಕೇಳದನೋಡಿರೆ ಹಾಕ್ಸ್ಯಬಿಡ ಕಾಣಿಸ್ತು.
೨) ಮಾವಿನಹಣ್ಣು ಸಾಸ್ವೆ- ಮಾವಿನ ಹಣ್ಣು ಸಾಸ್ವೆ--
ಸ್ವಲ್ಪ ಅಂಡಿಂದು ತೊಳ್ಸಿ ಹಾಕ ಮಾರಾಯ
೩) ಮದವಣ್ತಿ ಹಿಡ್ಕಳಕು ಮದುಮಗ ಹಾಕಕಪ. ಅದೆಂತಾ ಉಲ್ಟಾ ಅಗೋಯ್ದು. ನೀ ಹಿಡ್ಕೈಂದೆ ಅವ ಹಾಕ್ತಾ ಇದ್ದ.
೪)

Harisha - ಹರೀಶ said...

ಪ್ರಕಾಶಣ್ಣನ ತಂಗಿ, ನನ್ನ ಅಕ್ಕ, ಸೀಮಕ್ಕನ ಬ್ಲಾಗ್: I am thinking aloud

ಮನಸ್ವಿ said...
This comment has been removed by the author.
ಮನಸ್ವಿ said...

@Shreeshum
ನೀನು ಅಡ್ಡಿಲ್ಲೆ ಅಂದ್ಮೇಲೆ ಸುಮಾರಿಗೆ ಓದ ಹಂಗೆ ಬರದ್ದಿ ಅಡ್ಡಿಲ್ಲೆ ಅಂತ್ಲೆ ಆತು, ಇದಕ್ಕಾದ್ರೂ ಕೈ ಹಚ್ಚನ ಅಂತ ;) ಬ್ಲಾಗ್ ಬರ್ಯ ಹೊಡ್ತ ನಿಂದು ಜಾಸ್ತಿ ಆದಂಗಿದ್ದು ದಿನ ದಿನ ಹೊಸ ಹೊಸ ಲೇಖನ ಪೋಸ್ಟ್ ಮಾಡ್ತಿದ್ದೆ.. ಧನ್ಯವಾದ ರಾಘಣ್ಣ, ಹೋಯ್ ಕಟ್ಟೆ ದೀಪಾವಳಿ ಸಂಚಿಕೆ ಸಿಕ್ಕಿದ್ದಪ, ಮುತ್ತಣ್ಣನ ಹತ್ರ ಎರಡು ಕಾಪಿ ಇತ್ತು ಒಂದು ತಗಂಡ್ ಹೋಯ್ದಿ, ಬರ್ತಿ ಚನಾಗಿದ್ದು ಎಲ್ಲಾ ಲೇಖನಗಳು.. ಅಲ್ದೆ ನಾನು ನಿಮ್ಮ ಕಟ್ಟೆ ಇಂಟರ್ನೆಟ್ ಆವೃತ್ತಿಯ ಕಾಯಂ ಓದುಗ..

@prajavani
ಎಲ್ಲಾ ಚನ್ನಾಗಿದ್ದು ಆದ್ರೆ
೪ನೇದು ಖಾಲಿ ಬಿಟ್ಟಿದ್ದು ನಾನು ಬರಿಲಿ ಅಂತನಾ!ಬರಿತಿ ತಡಿ
೪)ಒಬ್ಬವ ಇನ್ನೊಬ್ಬವನ ಹತ್ರ ಕೇಳಿದ.. ಎಂತೋ ಮರಾಯಾ ಕಾಣಕ್ಕೆ ಇಲ್ಯಲ ಮನೆಕಡೆ ಬರ್ದೆ ಬರ್ತಿ ದಿನ ಆತಲೋ ಬಾ ಅಂದ ಅದಕ್ಕೆ ಇನ್ನೊಬ್ಬವ ಹೇಳಿದ ಮೊನ್ನೆ ನಿಮ್ಮನೆಗೆ ಬಂದಿದ್ದಿ ನೀನು ಇರ್ಲೆ ನಿಮ್ಮನೆವ್ಳು ಇದಿದ್ದ ಜಡದ್ (೨ಸೆಕೆಂಡ್ ಮೌನದ ನಂತರ) ಕವಳ ಹಾಕ್ಯಂಡ್ ಬಂದಿ ಮನೆವರಿಗೂ ಜಕ್ಕೋತ ಬಂದಿ.. ಇನ್ನೊಂದು ದಿನ ಬಂದಾಗಾರು ನೀನಿರ್ತೆ ಅಲ್ದ ಕೇಳಿದ.

@ಹರೀಶ
ಓಹ್ ಹೌದಾ.. ನೋಡ್ತಿ ಬ್ಲಾಗ್ ನ.. ಕೊಂಡಿ ಕೊಟ್ಟಿದ್ದಕ್ಕೆ ನನ್ನಿ, ಅಂದಗೆ ನೀನು ನನ್ನ ಲಿಂಕಿಗ ಗೆಳೆಯ ಮರಾಯ.. ಎಷ್ಟೊಂದು ಒಳ್ಳೊಳ್ಳೆ ಲಿಂಕ್ ಕೊಡ್ತಾ ಇರ್ತೆ ಗೂಗಲ್ ಟಾಕ್ ಲಿ, ಅದ್ರೂ ಕೆಲವು ಸಲ ಹುಡ್ಕು ಹೇಳ್ತ್ಯ ನೀನು ;P

ಸಿರಿರಮಣ said...

ತಮ್ಮಾ, ಜಕಾಯ್ಸ ಆಯ್ದು ತೆಕಳ, ಅಲ್ಲೆಂತ ಅಶ್ಲೀಲ ಇಲ್ಲೆ ಕೆಲವು ಜನ ಮಾತಾಡ್ತಿವಿಲ್ಲೆ ಆದ್ರೆ ಮಾಡಿಬುಡ್ತ. ಗುಡುಗು ಮೋಡ ಮಳೆ ಸುರಿಸ್ತ್ವಿಲ್ಲೆ ಹೇಳ್ತ್ವಲ ಹಾಂಗೆಯ. ಅಂಥ ಜನ ತುಂಬಾ ಇದ್ದ. ಅವಕ್ಕೆ ಹೇಳಲೆ ಬರ್ಯಲೆ ಮಡಿವಂತಿಕೆ. ಯಾರಿಗೂ ತೆಳಿಯದ್ದೆ ಮುಗ್ಶುಲೆ ಮುಂದೆ.
ಈ ಶಿಶಸಿ ಕಡೆಗೆ ಊಟ ಬಡ್ಸುವಾಗ ಹಿರಿ ಜನ ಒಂದ್ ಜೋಕ್ ಮಾಡ್ತ ಬಾಳ ಲೈಕಿದ್ದು.
ಈ ಹೊಸ ಹೊಸ ಕೂಸ್ಗಳೆಲ್ಲ ಬಡ್ಸುಲೆ ತಯ್ಯಾರಾಗಿ ನಿತ್ಗಂಡಿರಕರೆ .. ತಂಗಿ ನಿಂಗ್ ಹುಟ್ಟಿದ್ದನೆ (ಬಡಸುವ ಸೌಟು) ನಿಂಗ್ ಹುಟ್ಟಿದ್ದನೆ ಅಂತ. ಆಗನೆರು ಅವು ಹೌದ ಮಾವ, ಅಂದ್ರ ಸಾಕು" ಗಂಡ ? ಹೆಣ್ಣ ? ಶಿಶು ಕೇಳ್ತ !!!

CHAITANYA HEGDE said...

ಮನಸ್ವಿಯವರೇ !!!!
ತಮ್ಮ ಮೌದ್ಯಥೆಯೋ ಏನೋ ಒಂದು ಕಡೆ ಏಕವಚನದಲ್ಲಿ ಹಿರಿಯರನ್ನು ಕರೆಯುವುದು ನಮ್ಮ ಭಾಷೆಯ ವಿಶೇಷತೆ ಎನ್ನುತ್ಹಿರ ಇನ್ನೊಂದುಕಡೆ ಹವ್ಯಕರೇ ಆಡು ಭಾಷೆ ಯಲ್ಲ್ಲಿ "ಎಮ್ಮನೆದು ಬೈಂದನೆ ನಿಮ್ಮನಿಗೆ,ಎತ್ಲಾಗ್ ಹೋತೇನ" ಎಂದು ಮಾತನಾದುವುದನ್ನು ಹಾಸ್ಯಾಸ್ಪದ ಎನ್ನುತಿರ. ಒಂದು ಶಬ್ದಕ್ಕೆ 28 ಅರ್ಥಗಳಿವೆ ಎಂದು ಎಲ್ಲೋ ಓದಿದ ನೆನಪು. ಒಂದೇ ಅರ್ಥದಲ್ಲಿ ವಿಮರ್ಶಿಸುವುದು ಸರಿಯಲ್ಲ ಹಾಗೂ (ಇನ್ನೊಂದು ಹಾಸ್ಯಾಸ್ಪದ ತಮ್ಮ ಅರ್ಥದಲ್ಲಿ)ಸಿರಸಿ, ಸಿದ್ದಾಪುರ ಸೀಮೆಯಲ್ಲಿ ತಾಯಿಗೆ "ಆಯಿ" ಎಂದು ಸಂಬೋದಿಸುತ್ತಾರೆ. "ಆಯಿ" ಎಂದರೆ ಇನ್ನೊಂದು ಅರ್ಥ "ಕೆಲಸದವಳು" ಅಥವಾ "ಸಹಾಯಕಿ" ಎಂದು. ಇದನ್ನೂ ಸಹ ತಾವು ಹಾಸ್ಯಾಸ್ಪದ ಎನ್ನುತಿರೆನೋ?? ಹಾಗು ನನಗೆ ಎಲ್ಲೋ ಮನಸಿನಲ್ಲಿ ಒಂದು ವಿಚಾರ ಕೊರೆಯುತ್ತಿದೆ. ಮನಸ್ವಿ ಯರವ ಬರಹಗಳು ಒಂದು ಸೀಮಿತ ವರ್ಗಕ್ಕೆ ಸೀಮಿತವಗುತಾ ಇದೆಯೇನೋ ಎಂದು ಏಕೆಂದರೆ ತಮ್ಮ ಬರಹದಲ್ಲಿ ಅಶ್ಲೀಲತೆಯೆನಿಸುವ ಅಥವಾ ದ್ವಂದ್ವಾರ್ಥ ಸೂಚಿಸುವ ಪದಗಳನ್ನು ಬರೆದಿದ್ದೀರ before that ಸೂಚನೆ ಗಳನ್ನೂ ಕೊಟ್ಟಿದ್ದೀರ. ನಮ್ಮ ದೇಶ ಒಳ್ಳೆಯ ಸಂಸ್ಕೃತಿಗೆ ಹೆಸರಾದ ರಾಷ್ಟ್ರ ಅದನ್ನು ತಾವು "ಮಡಿವಂತ ದೇಶ" ಎನ್ನುವ ಬಿರುದನ್ನು ಕೊಟ್ಟಿದ್ದಿರಿ .ತಮಗೆ ಪೋಲಿತನ, ರಸಿಕತೆಯ ಬಗ್ಗೆ ಬರೆಯುವ "ಹುಮ್ಮಸ್ಸು" ಇದ್ದರೆ ಅದಕ್ಕೆ ಒಂದು ಬ್ಲಾಗ್ ಓಪನ್ ಮಾಡಿ ಅದರಲ್ಲಿ ಬರೆಯಿರಿ, ಒಂದು ಕಡೆ ಹವ್ಯಕರನ್ನು ಹೊಗಳುತ innnodu ಕಡೆ ಹವ್ಯಕರನ್ನೇ ಹಾಸ್ಯಾಸ್ಪದ ರೀತಿ ಯಲ್ಲಿ ಕಾಣುವ ರೀತಿ ಬರೆದಿದ್ದೀರ.., ಯಾವಾಗಲೂ ಒಬ್ಬ ಮನುಷ್ಯ ಬಾವಿಯೊಳಗಿನ ಕಪ್ಪೆ ಯಾಗಬಾರದು ......... ಬ್ಲಾಗ್ ನಲ್ಲಿ ಪಬ್ಲಿಶ್ ಮಾಡುತ್ತೀರ ಎನ್ನುವ ನಂಬಿಕೆಯಲ್ಲಿ ....................ಮುಗಿಸುತ್ತಿದ್ದೇನೆ.

Harisha - ಹರೀಶ said...

ಆದಿತ್ಯ,

>> ಹೆಂಡತಿಗೆ "ಅದು" ಎಂದು "ಕೆರೆ"ಯುತ್ತಾರೆ

ಗೊತ್ತಿತ್ತಿಲ್ಲೆ!! :D


ಚೈತನ್ಯ,
ಮತ್ತೊಂದ್ಸಲ ಓದ ಹಂಗೆ ಮಾಡಿದ್ದಕ್ಕೆ ಥ್ಯಾಂಕ್ಸ್! :-)

ಕೇವಲ ಹೊಗಳಿದ್ದರೆ ಅಥವಾತ ತೆಗಳಿದ್ದರೆ ಇದು ಒಂದು ವರ್ಗಕ್ಕೆ ಸೀಮಿತವಾಗುತ್ತಿತ್ತು. ಆದರೆ ನೀವೇ ಹೇಳಿದಂತೆ,

>> ಹವ್ಯಕರನ್ನು ಹೊಗಳುತ ಇನ್ನೊಂದು ಕಡೆ ಹವ್ಯಕರನ್ನೇ ಹಾಸ್ಯಾಸ್ಪದ ರೀತಿ ಯಲ್ಲಿ ಕಾಣುವ ರೀತಿ ಬರೆದಿದ್ದೀರ

ನೀವು ಹೇಳಿದ್ದು ವಿರೋಧಾಭಾಸವಲ್ಲವೆ? ;-)

ಮನಸ್ವಿ said...

@CHAITANYA HEGDE
ಚೈತನ್ಯ ಹೆಗಡೆ ಅವರೆ... ಎಮ್ಮನೆದು ಬೈಂದನೆ ಅಂತ ಕರದ್ರೆ ನನಗೆ ನಗು ಬರುತ್ತದೆ ಕಾರಣವೇನೆಂದರೆ ಸಾಗರದ ಕಡೆ ಹೆಂಡತಿಯನ್ನು ಅದು ಇದು ಎಂದು ಕರೆಯುವುದಿಲ್ಲ .. ಅದು ಏನಿದ್ದರೂ ನಿಮ್ಮ ಕ್ಯಾಸನೂರು ಹಾಗು ಇನ್ನು ಕೆಲವೆಡೆಗಳಲ್ಲಿ ಆ ರೀತಿ ಕರೆಯುವುದು.. ಏಕವಚನದಲ್ಲಿ ಕರೆದದ್ದಕ್ಕೆ ನನಗೆ ನಗು ತರಿಸಲಿಲ್ಲ..ಹಾಗೆಯೇ ನಾನೇನು ಅದು ಇದು ಎಂದು ಪ್ರಾಣಿಗಳನ್ನು ಕರೆದಂತೆ ಕರೆಯುತ್ತಾರೆ ಎಂದು ಎಲ್ಲೂ ಹೇಳಿಲ್ಲವಲ್ಲ, ಮಾತನಾಡುವ ರೀತಿ ಸಹಜವಾಗಿ ನಗು ತರಿಸಿತು ಹಾಗೆ ಮತ್ತೊಂದು ವಿಚಾರ ತಮ್ಮ ಗಮನಕ್ಕೆ ತರಲು ಬಯಸುತ್ತೇನೆ, ನಾನಿಲ್ಲಿ ಯಾವುದೇ ಅರ್ಥ ವಿಮರ್ಶಿಸುತ್ತಿಲ್ಲ.. ಹಾಸ್ಯಾಸ್ಪದ ಅಂದರೆ ಹಾಸ್ಯಕ್ಕೆ ಆಸ್ಪದ ನೀಡುವ ಎನ್ನುವ ಅರ್ಥ ಬರುತ್ತದೆಯೇ ಹೊರತು ಅವಹೇಳನಕಾರಿಯಲ್ಲವೆಂದು ತಮ್ಮ ಗಮನದಲ್ಲಿರಲಿ..
ಹೌದು ನನಗೆ ಮೊದಲು ಆಯಿ ಎಂದರೆ ಏನಪ್ಪಾ ಇದು ಎಂದು ಅರ್ಥವಾಗುತ್ತಿರಲಿಲ್ಲ, ತಬ್ಬಿಬ್ಬಾಗುತಿದ್ದೆ, ಅಂದಹಾಗೆ ಹವ್ಯಕ ಭಾಷೆಯನ್ನು ಕನ್ನಡ ನಿಘಂಟಿನಲ್ಲಿ ನೋಡಿ ಸಹಾಯಕಿ ಎನ್ನುವ ಅರ್ಥವಿದೆ ಎಂದರೆ ಅದು ನಿಮ್ಮ ತಪ್ಪಾಗುತ್ತದೆ, ಹವ್ಯಕ ಭಾಷೆಯಲ್ಲಿ ಆಯಿ ಅಂದರೆ ಅಮ್ಮ ಅಥವಾ ತಾಯಿ, ಹೆತ್ತವಳು ಎನ್ನುವ ಅರ್ಥವೇ ಬರುತ್ತದೆ, ನಾನು ಎಲ್ಲಿಯೂ ಶಬ್ದಾರ್ಥ ಮಾಡಿ ಹಸ್ಯಾಸ್ಪದ ಎನ್ನಲಿಲ್ಲವೆಂಬುದು ಇದರಿಂದ ತಮಗೆ ಅರ್ಥವಾಗುತ್ತದೆ ಎಂದು ಕೊಂಡಿದ್ದೇನೆ, ಹಾಗೆಯೇ ಸಿರಸಿ ಸಿದ್ದಾಪುರ ಸೀಮೆಗಳಲ್ಲಿ ಚಿಕ್ಕಮ್ಮನಿಗೆ ಕೌವ್ವ ಎಂದು ಕರೆಯುತ್ತಾರೆ ಅದನ್ನು ಕೇಳಿದಾಗ ಸಹಜವಾಗಿ ನನಗೆ ನಗು ಬರುತ್ತದೆ.. ನಾನು ಅದರ ಅರ್ಥವೇನು ಎಂದು ತಿಳಿದು ಕೊಳ್ಳುವುದರೊಳಗೆ ನಕ್ಕಿದ್ದೆ

ಒಂದು ಸೀಮಿತ ವರ್ಗಕ್ಕೆ ಅಂದರೆ ಯಾವ ರೀತಿಯ ಜನರು ನನ್ನ ಬ್ಲಾಗ್ ಓದುತ್ತಾರೆ ಎನ್ನುವುದು ನಿಮ್ಮ ಅಭಿಪ್ರಾಯ? ತಿಳಿಸಿದ್ದರೆ ಅನುಕೂಲವಾಗುತಿತ್ತು

ಅದನ್ನೆ ಹೇಳುತ್ತಿರುವುದು.. ಸೂಚನೆ ಕೊಡದೆ ಬರೆಯುವ ಸ್ವಾತಂತ್ರ್ಯ ನಮಗೆ ದೊರಕಿಲ್ಲ... ಸಂಸ್ಕೃತಿಗೆ ಹೆಸರಾದ ದೇಶ ಅನ್ನುವುದನ್ನು ನಾನು ಒಪ್ಪುತ್ತೇನೆ.. ಆದರೆ ಮಡಿವಂತಿಕೆಯ ದೇಶ ಎನ್ನುವುದಕ್ಕೆ ನಿಮ್ಮ ಮಾತೇ ಸಾಕಲ್ಲ, "ತಮಗೆ ಪೋಲಿತನ, ರಸಿಕತೆಯ ಬಗ್ಗೆ ಬರೆಯುವ "ಹುಮ್ಮಸ್ಸು" ಇದ್ದರೆ ಅದಕ್ಕೆ ಒಂದು ಬ್ಲಾಗ್ ಓಪನ್ ಮಾಡಿ ಅದರಲ್ಲಿ ಬರೆಯಿರಿ" ಎನ್ನುವ ಮಾತೇ ಸಾಕಲ್ಲವೇ.. ಈಗಾಗಲೇ ಅನೇಕ ಪೋಲಿ ಜೋಕುಗಳನ್ನು ತುಂಬಿಕೊಂಡಿರುವ ಅನೇಕ ಬ್ಲಾಗ್ ಗಳಿವೆ, ನಾನೇ ಅಂತವನ್ನು ಬರೆಯಬೇಕೆಂಬ ಚಟ ನನಗಿಲ್ಲ.. ಅದನ್ನು ಬರೆದರೂ ಸೀಮಿತ ವರ್ಗ ಮಾತ್ರ ಓದುತ್ತದೆ, ಕಾರಣ ಬೇರೆಯವರು ಏನಂದು ಕೊಳ್ಳುತ್ತಾರೋ, ತಪ್ಪು ತಿಳಿದುಕೊಳ್ಳುತ್ತಾರೇನೋ.. ಪೋಲಿ, ಪೋಕರಿ ಅಂದುಕೊಂಡರೆ? ಸಂಸ್ಕೃತಿ ಸಂಸ್ಕೃತಿ ಎಂದು ಬಡಿದುಕೊಂಡೆ ನಮ್ಮ ದೇಶದಲ್ಲಿ ಪೋಲಿತನ ಹೆಚ್ಚಾಗಿದೆ, ಮಡಿವಂತಿಕೆ ಮಾಡಿದಷ್ಟು ಜನ ಹಾಳಾಗಿ ಹೋಗುತ್ತಿದ್ದಾರೆ, ಜನರಿಂದ ಯಾವುದೆ ವಿಷಯವನ್ನು ಮುಚ್ಚಿಟ್ಟಷ್ಟು ಕುತೂಹಲ ಹೆಚ್ಚಾಗುತ್ತದೆ ಎನ್ನುವುದು ನಿಮಗೆ ಗೊತ್ತಿರಬಹುದು. ಮುಚ್ಚಿಟ್ಟ ಕೆಂಡ ಹೊಗೆಯಾಡದೇ ಇರುತ್ತದೆಯೇ ಎನ್ನುವ ಗಾದೆಯಿದೆ..

ಹಾಸ್ಯಾಸ್ಪದ ಎನ್ನುವುದನ್ನು ನೀವು ಅಪಾರ್ಥಮಾಡಿಕೊಂಡಂತೆ ನನಗೆ ಅನ್ನಿಸುತ್ತಿದೆ... ಪದೇ ಪದೇ ಹಾಸ್ಯಾಸ್ಪದ ಹಾಸ್ಯಾಸ್ಪದ ಎನ್ನುವುದನ್ನೇ ಗಂಭೀರ ವಿಷವನ್ನಾಗಿ ಮಾಡುತ್ತಿದ್ದೀರಿ,

ಕೊನೆಯ ಮಾತು.. ಬಾವಿಯೊಳಗಿನ ಕಪ್ಪೆಗಾದರು ತನ್ನ ಪ್ರಪಂಚದ ಬಗ್ಗೆ ಅರಿವಿರುತ್ತದೆ, ನನಗೆ ನಮ್ಮ ಹವ್ಯರ ಬಗ್ಗೆ ಸ್ಪಲ್ಪವಾದರು ತಿಳಿದಿದೆ ಎಂದುಕೊಂಡಿದ್ದೇನೆ, ಹವ್ಯಕರನ್ನು (ನೀವು ಹೇಳುವ ಅರ್ಥದ) ಹಾಸ್ಯಾಸ್ಪದವಾಗಿ ಕಂಡಿದ್ದೇನೆ ಎಂಬ ಮಾತನ್ನು ಖಂಡಿತವಾಗಿ ನಾನು ಒಪ್ಪುವುದಿಲ್ಲ, ಅಂದಹಾಗೆ ಎಲ್ಲ ಸೀಮೆಗಳಲ್ಲು ಬೇರೆ ಸೀಮೆಯವರ ಮಾತನ್ನು ಹೇಳಿಕೊಂಡು ಅವ್ವು ಹಿಂಗೆ ಹೇಳ್ತ, ಮನೆಗೆ ಬಂದ ತಕ್ಷಣ ಬಾರ ಅಂದ್ಬಿಡ್ತ ಸಾಗರ ಕಡೇವು.. ಎಂತದು ನೀರಸವಾಗಿರ್ತು.. ಅಂತ ಹೇಳಿರೆ ನಮ್ಮ ಸಾಗರದವರು ಸಿರ್ಸಿ ಕಡಿಗೆ ಹೋದ ತಕ್ಷಣ ಬಂದ್ಯಾ ಅಂದಿ ಅಂದ್ಬಿಡ್ತ ಎಂಗೆ ಎಂತ ಹೇಳವು ಹೇಳೆ ಗೊತಾಗಲ್ಲೆ ಹೇಳ್ತ.. ಇಂತವು ನೆಡೆಯುತ್ತವೆ ಎಂಬುದು ತಮಗೆ ಗೊತ್ತಿರಲಿಕ್ಕಿಲ್ಲ, ನಾನು ಹವ್ಯಕರ ಬಗ್ಗೆ ಪ್ರೀತಿಯಿಂದ ಬರೆದದ್ದೇ ಹೊರತು ನೆಗೆಪಾಟಲಿಗೀಡು ಮಾಡಲು ಖಂಡಿತ ಬರೆದಿಲ್ಲ, ಅರ್ಥವಾಗಿದೆ ಅಂದು ಕೊಳ್ಳುತ್ತೇನೆ.. ನಮಸ್ಕಾರ..

ಮನಸ್ವಿ said...

ಹರೀಶ
ಹೆಹ್ಹೆ.. ಸರಿ ಮಾಡಿದ್ದಿ "ಕೆರೆ" ನ ಕರೆ ;) ನೀನು ಹೆಂಡ್ತಿನ ಹೆಂಗೆ ಕೆರಿತಾ ಅಂತ ಯೋಚ್ನೆ ಮಾಡ್ತಿದ್ಯಾ?

shivu.k said...

ಮನಸ್ವಿ.

ನಿಮ್ಮ ಹವ್ಯಕರ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ನಾನು ಎರಡು ಮೂರು ಬಾರಿ ಕಾನ್ಸೂರಿನ ಮಥ್ಮರ್ಡುವಿಗೆ ಅಲ್ಲಿ ಗೆಳೆಯ ನಾಗೆಂದ್ರನ ಮನೆಗೆ ಹೋಗಿದ್ದೆ. ಅಲ್ಲಿ ಮೊದಲು ಮಾತಾಡಿಸಿದ್ದೆ ಆವರ ಮಗ ೭ ವರ್ಷದ ವಿಕಾಶ. ಅವನು ಏಕವಚನದಲ್ಲಿ ಮಾತಾಡಿಸಿದಾಗ ಮೊದಲಿಗೆ ಇರಿಸುಮುರಿಸುಂಟಾದರೂ ಅಲ್ಲಿರುವ ಎಲ್ಲರೂ ಹೀಗೆ ಅಂತ ಗೊತ್ತಾದಾಗ ನಾವು ಅವರೊಳಗೆ ಒಂದಾದೆವು ನಾವು ಅಲ್ಲಿ ನಾಲ್ಕು ದಿನ ಇದ್ದು ಅಲ್ಲಿ ಕಾವಳದ ಮುಂದೆ ಅವರ ತಂದೆ ಜೊತೆ ಎಲೆಅಡಿಕೆ ಜಗಿದಿದ್ದೇನು. ಒಂದೇ ಎರಡೇ ಚೆನ್ನಾಗಿತ್ತು.

ಮೃತ್ಯುಂಜಯ ಹೊಸಮನೆ said...

ನಿಂಗೆಂತಕೆ ನೀ ಬರ್ದಿದ್ದ್ರ ಬಗ್ಗೆ ನಿಂಗೇ ಹೆದ್ರ್ಕೆ? ಯಾರೆಂತ ಹೇಳಿದ್ರೆ ನಿಂಗೆಂತದು ಅಂತ? ನೀ ಹೇಳ್ತಾ ಇಪ್ದು ಸರಿ ಇದ್ದು ಅಂತ ನಿಂಗನಿಸ್ತಿದ್ರೆ ಬರಿ.(ಕನ್ನಡದ ಬರಿ. ಸರಿ ಇಲ್ಲೆ ಅನ್ಸಿದ್ರೆ ಇಂಗ್ಲಿಷ್ನ್ ಬರಿ!)

ಮನಸ್ವಿ said...

ಶಿವು ಅವರೇ..
ಧನ್ಯವಾದಗಳು.. ನಿಮ್ಮ ಅನುಭವ ತಿಳಿಸಿದ್ದಕ್ಕಾಗಿ, ಆ ಚಿಕ್ಕ ಹುಡುಗ ಏಕವಚನದಲ್ಲಿ ಕರೆದದ್ದಕ್ಕೆ ಬೇಸರವಿಲ್ಲ ತಾನೇ.. ಬರುತ್ತಾ ಇರಿ,

@Mruthyunjaya
ಮುತ್ತಣ್ಣ.. ಎಂತ ಹೇಳಿದೆ ಅಂತ ಅರ್ಥ ಆಗಲ್ಲೆ... ಬಿಡಿಸಿ ಹೇಳಿರೆ ಅನುಕೂಲ ಆಗ್ತು...

karthik said...

oye bahtta chenagi iddo nindu(blog)...

ಮನಸ್ವಿ said...

Karthik
nandu(blog)node bitya Bhatta thanksu, bharthi kushi atu

ವಿ.ರಾ.ಹೆ. said...

ಚಂದ ಬರದ್ದೆ . ಇನ್ನೊಂದು ಹಾಸ್ಯಾಸ್ಪದ ವಿಷಯವೆಂದರೆ ಕ್ಯಾಸನೂರು ಸೀಮೆಯ(ಸೊರಬ ತಾಲ್ಲೂಕಿನ ಕೆಲವು ಗ್ರಾಮದ)ಲ್ಲಿ ........ ಅನ್ನುವ ವಾಕ್ಯದಲ್ಲಿ 'ಹಾಸ್ಯಾಸ್ಪದ' ಎನ್ನುವ ಪದ ತೆಗೆದುಬಿಟ್ರೆ ಸರಿಯಾಗ್ತು ನೋಡು . :)

ಮನಸ್ವಿ said...

@ವಿಕಾಸ್ ಹೆಗಡೆ
ಧನ್ಯವಾದ, ಹ್ಮ್.. ಈಗ ತೆಗದು ಬಿಟ್ರೆ ಮೇಲೆ ಅತ್ತೆ ಮಗ ಚೈತನ್ಯ ಮತ್ತೆ ನಾನು ಬರೆದ ಕಮೆಂಟ್ ಯಾರಾರೂ ಓದಿರೆ ಅರ್ಥ ಆಗ್ತಲ್ಲೆ! ಆದ್ರೂ ಒಳ್ಳೆಯ ಸಲಹೆ.. ಮತ್ತೊಮ್ಮೆ ಧನ್ಯವಾದ.. ಬರ್ತಾ ಇರು..

kunnimari said...

ಚೆನ್ನಗಿದ್ದಲ ಆದಿತ್ಯ ಗೊತ್ತಾತ ಯಾರು ಅಂತ ಶ್ರೀಪಾದ ಡಾಕ್ರ್ತ್ರ ಸಾಗರ ಹಿಂಗೆ ಬರಿ ಹವ್ಯಕರ ಬಗ್ಗೆ

ಮನಸ್ವಿ said...

@Sreepad
ಹೋಯ್ ಗೊತ್ತಾತು.. ಖುಷಿ ಆತು.. ಸುಮಾರು ದಿನ ಆತು ಭೇಟಿ ಆಗ್ದೆ ... ಪ್ರಸಾದನ ಬ್ಲಾಗ್ ಲಿ ಬರ್ದಿದ್ದು ಲೇಖನ ಓದಿದಿ ಚನಾಗಿದ್ದು.. :)ಬರ್ತಾ ಇರಿ ಸಾರ್.

Puneeth.B.A. said...

nimma baravanige tumba ishta aayithu...

-nimma 'haage summane' puneeth
[www.haagesummane.wordpress.com]

jithendra hindumane said...

ಇವತ್ತು ನೋಡ್ಧಿ ನಿನ್ನ ಈ ಬರಹ. ತುಂಬಾ ಚೆಂದವಾಗಿ ನಮ್ಮ ಭಾಷೆ ಉಪಯೋಗಿಸಿದ್ಯಲ?
ಹೌದು ನಾವು ನಮ್ಮ ಆಡುಮಾತು ಬಳಸಲೆ ನಾಚ್ಕೆ ಎಂತಕ?
ನಿನ್ನ ಬರಹಕ್ಕೆ ನನ್ನ ಹ್ಯಾಟ್ಸ್ ಆಫ್.....!

ಚಿನ್ಮಯ ಭಟ್ said...

ಇದು ನಾನು ಹತ್ತಾರು ಸಲ ಯೋಚಿಸಿ ಮೂರ್ನಾಕು ಸಲ ಹೇಳಲು ಹೋಗಿ ಎಲ್ಲೋ ದಾರಿ ತಪ್ಪಿದ ವಿಷಯ ....
ಆತ್ಮಭಿಮಾನವೋ ಅಥವಾ ಭಾಷಾಪ್ರೇಮವೋ ನನಗಂತೂ ಗೊತ್ತಿಲ್ಲ ,ಆದರೆ ಅದನು ಬಿಡಲಂತೂ ಆಗುತ್ತಿರಲಿಲ್ಲ.

ಇವತ್ತು ನಂಗೆ ಮಳೆಗಾಲದಲ್ ಹಪ್ಪಳ ತಿಂದಸ್ಟ್ ಖುಷಿ !!!!
ಕಾರಣ ಹೇಳಲಾ?
ಮಳೆ ಅಂದ್ರೆ ಇ ಬ್ಲಾಗು,ಈ ಲೇಖನ ,ಆ ಹೊಸ ಪ್ರಯೋಗ ಎಲ್ಲ ಮಳೆ ಹಂಗೆ ಕಾಣಸ್ತ ಇದ್ರೆ ,ನಿಮ್ ಇ ಬರಹ ನಂಗೆ ಹಲಸಿನ ಹಪ್ಪಳ ದಣೇ ಒಲಿಗ್ ಹಾಕಿ ಸುಟ್ ಕೊಟ್ಟಂಗೆ ಆತು ....ನಾವು ಯಾವುದನ್ನ ಮಾಡಕಾಗಲ್ಲ ಅಂತ ಬಿಡಲಾರದೆ ಮಾಡಲಾರದೆ ಬಿಟ್ಟಿರುತ್ತೆವೋ ,ಅದ್ನ ಬೇರೆಯವರು ಮಾಡಿದಾಗ ಸಿಗುವ ಖುಷಿನೇ ಬೇರೆ....



ಕೆಲವೊಂದು ವಿಷಯಗಳು ನಮಗೆ ಎಸ್ಟ್ ಗೊತ್ತಿರತ್ತೆ ಅಂದ್ರೆ ಅದನ ಹೇಳೋಕೆ ಆಗಲ್ಲ,ಒಂದ್ ಹೇಳಿದ್ರೆ ಇನ್ನೊಂದನ್ನ ಬಿಟ್ಟೆ ಎನ್ನೋ ಚಿಂತೆ ... ಏನೂ ಹೇಳಿಲ್ಲ ಅಂದ್ರೆ ನಾನ್ ಅಸ್ಟು ಅಸಮರ್ಥನಾ ? ಎಂಬ ಭ್ರಾಂತೆ....ಹಿಂಗೆ ಏನೋ ಬರಿಯೋಕ್ ಹೋಗಿ ,ಏನೋ ಆಗಿ ಆಮೇಲೆ ಉಳಿದಿದ್ದು ಕೆರೆದ ಒಣ ಗಾಯ ,ತಲೆಕೆರೆದು ಉದುರಿದ ಕೂದಲೊಂದೆ .........
ಇದ್ನಾ ಏನೋ ತಿಳಿದವರ ಹಂಗೆ ಹೇಳ್ತಾ ಅಂತ ತಿಳಕಳದೆ ಏನೂ ತಿಳಿದವ ಹೇಳಿದ್ದ ಹೇಳ್ ತಿಳ್ಕಳಿ .........
ಕಡಿಗೆ ಒಂದೇ ಒಂದ್ ಮಾತು ,



ನಂಗೆ ಸಿಕ್ಕಾತಕ್ಕಾ ಖುಷಿ ಮಾಡಿದ ,ಒಂದು ಒಂದೇ ಹೇಳನ್ತಾದ್ ಬರ್ದ , ಮಹಾ ಮಾಣಿಗೆ ಯರ್ರಾಬಿರ್ರಿ ಧನ್ಯವಾದ .....
ಸಿಗನ...

Suvarnini Konale said...

ಲೇಖನ ಚೆನ್ನಾಗಿದೆ, ಇನ್ನೂ ಹೆಚ್ಚಿನ ಮಾಹಿತಿಗಳೊಂದಿಗೆ ಇನ್ನೊಂದಷ್ಟು ಲೇಖನಗಳು ಬರಲಿ :) ದಕ್ಷಿಣ ಕನ್ನಡದ ಹವ್ಯಕರ ಬಗ್ಗೆ ಮತ್ತು ಭಾಷೆಯ ಬಗ್ಗೆಯೂ.
ದಕ್ಷಿಣ ಕನ್ನಡದಲ್ಲಿನ ಹವ್ಯಕ ಭಾಷೆಯ ಮೇಲೆ ತುಳು ಹಾಗೂ ಮಲಯಾಳ ಭಾಷೆಗಳ ಪ್ರಭಾವ ಇರುವುದು ಸತ್ಯ...ಅಲ್ಲದೆ, ದಕ್ಷಿಣ ಕನ್ನಡದ ಹವ್ಯಕ ಭಾಷೆ ಹಳೆಗನ್ನಡದ ಹಲವಾರು ಪದಗಳನ್ನು ಒಳಗೊಂಡಿದೆ,. ಈ ಕಾರಣದಿಂದ ಉಳಿದವರಿಗೆ ಅರ್ಥವಾಗುವದರಲ್ಲಿ ಸ್ವಲ್ಪ ತೊಡಕಾಗುತ್ತದೆ.
ದಕ್ಷಿಣ ಕನ್ನಡದ ಭಾಷೆಯಲ್ಲಿಯೇ ಕುಂಬ್ಳೆ ಸೀಮೆ, ವಿಟ್ಲ ಸೀಮೆ, ಪಂಜ ಸೀಮೆಯೆ ಭಾಷೆಗಳಲ್ಲಿ ವೈವಿಧ್ಯತೆಗಳಿವೆ !! ಅಲ್ಲದೆ, ದಕ್ಷಿಣ ಕನ್ನಡದಲ್ಲಿ ಏಕವಚನದ ಬಳಕೆ ಇದ್ದರೂ ಹಿರಿಯವರನ್ನು ಬಹುವಚನದಿಂದ ಸಂಬೋಧಿಸುವುದು ಪದ್ಧತಿ. ಆದರೆ ಇದರಿಂದಾಗಿ ಆತ್ಮೀಯತೆ ಎಂದಿಗೂ ಕಡಿಮೆಯಾಗಿಲ್ಲ :)

ಈಶ್ವರ said...

ಹ್ಹಹ್ಹ , ಲಾಯ್ಕಾಯ್ದು :) ಎಂಗ್ಳ ಸೈಡಿಂದೂ ಸುಮಾರಿದ್ದು ಮಾರಾಯ್ನೆ .. ಓದಿದ ಮೇಲೆ ನೆಂಪಾತು. ನೀ ಓದಡಿ ಹೇಳಿದ್ಮೇಲೆ ಓದದೆ ಇರಲಾಗ್ತಾ :)

ಮೇಲಿಡು (keep it up)

Unknown said...

ನಾನು ಉತ್ತರ ಕರ್ನಾಟಕದ ಬಾಗಲಕೋಟೆಯವನಾದರು ನನ್ನ ಸ್ನೇಹಿತ "ಭಾಸ್ಕರ ಹೆಗಡೆ" ಸಿರಸಿಯವನು, ಹಾಗಾಗಿ ನನಗೆ ಹವ್ಯಕ ಭಾಷೆಯ ಮೇಲೆ ಒಲವು ಹೆಚ್ಚಿತು. ಈಗಲೂ ಮಾತನಾಡುವವರನ್ನು ಕಂಡರೆ ಬಹಳ ಸಂತೋಷವಾಗುತ್ತದೆ. ಕನ್ನಡದ ಹಲವಾರು ಭಾಷಾ ಶೈಲಿಗಳು ಇನ್ನಷ್ಟು ಬೆಳಕಿನೆಡೆಗೆ ಬರಬೇಕು ಕನ್ನಡದ ಹಿರಿಮೆ ಇಡೀ ಜಗತ್ತಿಗೆ ತಿಳಿಯಬೇಕು. ಈ ನಿಮ್ಮ ಅದ್ಭುತ ಪ್ರಯತ್ನ ಇನ್ನೂ ಎತ್ತರಕ್ಕೆ ಹೋಗಲಿ ಎಂದು ಆಶಿಸುತ್ತೇನೆ.