ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Wednesday, December 3, 2008

ಹವ್ಯಕರ ಭಾಷೆಯ ಸೊಗಡೂ.. ಸ್ವಲ್ಪ ಪೋಲಿತನ, ರಸಿಕತೆಯೂ....

ಹವ್ಯಕ ಭಾಷೆ ಹವ್ಯಕ ಬ್ರಾಹ್ಮಣರ ಆಡು ಭಾಷೆ,ಇದು ಕನ್ನಡವೇ ಆದರೂ ಈ ಭಾಷೆಗೊಂದು ವಿಶೇಷ ಸೊಗಡಿದೆ, ನಮ್ಮ ಭಾಷೆಯಲ್ಲಿ ಬಹುವಚನ ಬಳಕೆ ಅತೀ ವಿರಳ, ನಮ್ಮ ಮನೆಯಲ್ಲಿ ಎಷ್ಟೇ ಹಿರಿಯರಿದ್ದರೂ ಅವರೊಂದಿದೆ ನಾವು ಏಕವಚನದಲ್ಲೇ ಮಾತನಾಡುತ್ತೇವೆ.. ಅಂದ ಮಾತ್ರಕ್ಕೆ ನಮ್ಮಲ್ಲಿ ಹಿರಿಯರಿಗೆ ಗೌರವವಿಲ್ಲವೆಂದಲ್ಲ ನಮ್ಮ ಭಾಷೆಯ ವಿಶೇಷತೆಯೇ ಹಾಗೆ, ಏಕವಚನದಲ್ಲಿ ಮಾತನಾಡುವುದರಿಂದ ನಮ್ಮ ಬಾಂಧವ್ಯ ಗಟ್ಟಿಯಾಗಿರುತ್ತವೆಯೇನೋ ಎಂದು ನನಗೆ ಅನಿಸುತ್ತದೆ(ಗೆಳೆಯರೊಂದಿಗೆ ನಾವು ಯಾವಾಗಲೂ ಏಕವಚನದಲ್ಲಿಯೇ ಅಲ್ಲವಾ ನಾವು ಮಾತನಾಡೋದು?) ಪರಿಚಯವಿಲ್ಲದ ಅಥವಾ ಮೊದಲ ಬಾರಿ ಮಾತನಾಡಿಸುವಾಗ ಕೆಲವರನ್ನು "ನಿಮಗೆ" ಯಾವೂರಾತು ಎಂದು ಕೇಳುತ್ತೇವೇನೋ.. ಅಥವಾ ಕೆಲವರು ಹಿರಿಯರಿಗೆ ನೀವು ಎಂದು ಬಹುವಚನ ಬಳಸಿ ಮಾತನಾಡುತ್ತಾರೇನೋ, ಆದರೆ ಮೇಲೆ ತಿಳಿಸಿದಂತೆ ಏಕವಚನ ಬಳಕೆ ಅತೀ ಹೆಚ್ಚು.
ಮಲೆನಾಡಿನ ಸೀಮೆಗಳಾದ (ಅನೇಕ ಊರುಗಳನ್ನು ಸೇರಿಸಿ ಒಂದು ಸೀಮೆ ಎಂದು ಕರೆಯುತ್ತಾರೆ) ಸಾಗರ ಸೀಮೆಗೂ, ಕ್ಯಾಸನೂರು ಸೀಮೆ, ಸಿರಸಿ, ಸಿದ್ದಾಪುರ ಹಾಗೂ ಇನ್ನೂ ಹಲವು ಸೀಮೆಯಲ್ಲಿ ಮಾತನಾಡುವ ಹವ್ಯಕ ಭಾಷೆಯಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಿದೆಯಷ್ಟೆ,ಆದರೆ ಪುತ್ತೂರಿನ ಹವ್ಯಕ ಭಾಷೆ ಮಲೆನಾಡಿಗರಾದ ನಮಗೆ ಅರ್ಥವಾಗುವುದು ಸ್ವಲ್ಪ ಕಷ್ಟಕರವಾಗಿದೆ ಅಲ್ಲಿ ತುಳು ಭಾಷೆಯ ಪ್ರಬಾವವಿರುವುದರಿಂದಲೋ ಎನೋ ಮಲೆನಾಡ ಹವ್ಯಕರಿಗೆ ಅಲ್ಲಿಯ ಭಾಷೆ ಅರ್ಥವಾಗುವುದಿಲ್ಲ. ಸಾಗರದವರು "ಹೋಗಬೇಕು" ಅನ್ನುವುದನ್ನು ಹವ್ಯಕ ಬಾಷೆಯಲ್ಲಿ "ಹೋಗಕ್ಕು" ಎಂದು ಹೇಳಿದರೆ ಕ್ಯಾಸನೂರು ಹಾಗು ಕೆಲವು ಕಡೆ "ಹೋಗವು" ಎಂದು ಹೇಳುತ್ತಾರೆ... ಹಾಗೆಯೇ ಬರಕ್ಕು, ಬರವು ಹೀಗೆ ಅಲ್ಪ ಸ್ವಲ್ಪ ವ್ಯತ್ಯಾಸಗಳಿರುತ್ತವೆ,ಇನ್ನೊಂದು ಹಾಸ್ಯಾಸ್ಪದ ವಿಷಯವೆಂದರೆ ಕ್ಯಾಸನೂರು ಸೀಮೆಯ(ಸೊರಬ ತಾಲ್ಲೂಕಿನ ಕೆಲವು ಗ್ರಾಮದ)ಲ್ಲಿ ಹೆಂಡತಿಗೆ "ಅದು" ಎಂದು ಕರೆಯುತ್ತಾರೆ, ಎಮ್ಮನೆದು ಬೈಂದನೆ ನಿಮ್ಮನಿಗೆ,ಎತ್ಲಾಗ್ ಹೋತೇನ ಅದು ಎನ್ನುವ ಮಾತುಗಳು ಕೇಳಲು ಸಿಗುತ್ತವೆ, "ಅದು" ಎಂದು ತನ್ನ ಗಂಡ ಕರೆಯುವುದಕ್ಕೆ ಹೆಂಡತಿಯಿಂದಲೂ ಯಾವುದೆ ತಕರಾರು ಇರುವುದಿಲ್ಲ, ಹೆಂಡತಿಯಾದವಳು ಮಾತ್ರ ಗಂಡನಿಗೆ "ಅವರು" ಎಂದು ಸಂಭೋದಿಸುತ್ತಾರೆ, ಇದೊಂದೆ ಇರಬೇಕು ಬಹುವಚನ ಬಳಕೆ ಹವ್ಯಕದಲ್ಲಿ!, ಈಗಿನ ಆಧುನಿಕ ಯುಗದಲ್ಲಿ ನಮ್ಮಲ್ಲೂ ಹೆಸರು ಹಿಡಿದು ಕರೆಯುವ ಮಹಿಳಾ ಮಣಿಗಳು ಇದ್ದಾರೆ ಬಿಡಿ, ಆದರೆ ಅವರು ಹಳ್ಳಿಯ ಮನೆಯಲ್ಲಿನ ಅಜ್ಜಿಯರ ಮುಂದೆ ಅಥವಾ ಅಮ್ಮನಿಗೆ ಕೇಳಿಸುವಂತೆ ಗಂಡನ ಹೆಸರಿಡಿದು ಕರೆದರೆ ಬೈಯ್ಯಿಸಿಕೊಳ್ಳುವುದು ಖಂಡಿತ, "ಎಂತದೆ ಕೂಸೆ ಗಂಡನ್ನ ಹೆಸ್ರಿಡಿದು ಕರ್ಯದು,ಎಂಗ ಎಲ್ಲಾ ಹಿಂಗೆ ಗಂಡನ ಹೆಸ್ರಿಡ್ದು ಕರಿತಿದಿದ್ವಿಲ್ಲೆ"ಎನ್ನುವ ಆಕ್ಷೇಪ ವ್ಯಕ್ತವಾಗುತ್ತದೆ.ಹವ್ಯಕರ ಮನೆಗಳಲ್ಲಿ ಮಕ್ಕಳನ್ನು ಹೆಚ್ಚಾಗಿ ಅಪ್ಪಿ ಮತ್ತು ಕೆಲವು ಸಲ ಮಾಣಿ ಎಂತಲೂ,ಅಮ್ಮಿ ಮತ್ತು ಕೂಸೆ ಎಂದು ಹುಡುಗ ಹುಡುಗಿಯರನ್ನು ಕರೆಯುವುದು ಸರ್ವೇಸಾಮನ್ಯವಾಗಿದೆ.. ಓರಗೆಯ ಹುಡುಗರು ಹುಡುಗಿಯರನ್ನು ಕೂಸೆ ಎಂದು ಸಂಭೋದಿಸಿ ಮಾತನಾಡುವುದು ಕೂಡಾ ಅಷ್ಟೇ ಸಾಮಾನ್ಯ, ಆದರೆ ಈಗಿನ ಆಧುನಿಕ ಯುಗದ, ಪಟ್ಟಣ ಸೇರಿದ ಹುಡುಗಿಯರನ್ನು ಕೂಸೆ ಎಂದು ಕರೆದರೆ ಅವರಿಗೆ ಸಿಟ್ಟು ಬಂದು ಬಿಡುತ್ತದೆಯಂತೆ, ಕೆಲವರಿಗೆ ಕೂಸೆ ಎಂದು ಕರೆದರೆ ಇಷ್ಟವಾಗುವುದು ಇದೆ, ಕಾಲದ ಮಹಿಮೆ ಸಾರ್ವಜನಿಕ ಸ್ಥಳಗಳಲ್ಲಿ ಇಬ್ಬರು ಹವ್ಯಕರಿದ್ದರು ಹವ್ಯಕ ಭಾಷೆಯಲ್ಲಿ ಮಾತನಾಡಲು ಇಷ್ಟಪಡದ, ಮಾತನಾಡಿದರೆ ಎಲ್ಲಿ ಬೇರೆಯವರು ನಗುತ್ತಾರೋ ಅಥವಾ ಬೇರೆಯ ಯಾವುದೋ ಕಾರಣಕ್ಕೋ ಹವ್ಯಕ ಮಾತನಾಡಲು ಹಿಂಜರಿಯುವ ಅನೇಕರಿದ್ದಾರೆ.. ಇನ್ನು ಕೆಲವರು ಯಾರ ಮುಲಾಜಿಲ್ಲದೆ ನಮ್ಮ ಭಾಷೆಯಲ್ಲಿಯೇ ಮಾತನಾಡುವವರಿದ್ದಾರೆ ಅಂಥವರನ್ನು ಕಂಡರೆ ನಿಜವಾಗಲೂ ಹೆಮ್ಮೆಯೆನಿಸುತ್ತದೆ,
ಹವ್ಯಕರು ಪೇಟೆ ಭಾಷೆಯಲ್ಲಿ (ನಿಮ್ಮ ಬೆಂಗಳೂರು ಕನ್ನಡ ಭಾಷೆಯಲ್ಲ ಬಿಡಿ, ಅಲ್ಲಿ ಕನ್ನಡ ಬಂದರೂ ಸ್ವಾಭಿಮಾನವೋ ಅಥವಾ ತಮ್ಮ ಪ್ರತಿಷ್ಠೆಗೆ ದಕ್ಕೆಯಾಗುತ್ತದೆ ಅಂತಲೋ ಏನೋ ಕನ್ನಡಕ್ಕಿಂತಲೂ ಇಂಗ್ಲೀಷ್, ಕಂಗ್ಲೀಷ್, ತಮಿಳು, ಮಲಯಾಳಿ ಭಾಷೆಯಲ್ಲಿ ಮಾತನಾಡುವವರೇ ಹೆಚ್ಚಿದ್ದಾರೆ ..) ಅಂದರೆ ಸಾಮಾನ್ಯವಾಗಿ ಕನ್ನಡದ ಆಡು ಭಾಷೆಯಲ್ಲಿ ಮಾತನಾಡುವಾಗಲೂ ಏಕವಚನಗಳು ಬಂದು ಬಿಡುತ್ತವೆ, ಅದನ್ನೇ ಅಪಾರ್ಥಮಾಡಿಕೊಂಡು ಆ ಭಟ್ಟ/ಹೆಗಡೆ ನನ್ನನ್ನು ನೀನು ಎಂದು ಏಕವಚನದಲ್ಲಿ ಮಾತನಾಡಿಸಿಬಿಟ್ಟ ಎಂದು ಹಿಂದಿನಿಂದ ಬೈದುಕೊಳ್ಳುವವರಿದ್ದಾರೆ, ಅನೇಕ ಬಾರಿ ನಮಗೆ ಗೊತ್ತಿಲ್ಲದಂತೆ ಏಕವಚನ ಬಂದು ಬಿಡುತ್ತದೆ.
ಹವ್ಯಕರ ವಿಚಾರ ತಿಳಿಸುವಾಗ ಹವ್ಯಕರ ಅದರಲ್ಲೂ ಮಲೆನಾಡಿನ ಹಳ್ಳಿಗಳಲ್ಲಿನ ಅತಿಥಿ ಸತ್ಕಾರದ ಬಗ್ಗೆ ಹೇಳದೆ ಹೋದರೆ ವಿಚಾರಗಳು ಪೂರ್ಣಗೊಳ್ಳುವುದೇ ಇಲ್ಲ, ನಮ್ಮ ಹಳ್ಳಿಯ ಜನ ಈಗಲೂ ಅತಿಥಿ ಸತ್ಕಾರಕ್ಕೆ ಎತ್ತಿದ ಕೈ,ಮನೆಗೆ ಯಾರೇ ಬಂದರೂ, ಅತಿ ಬಡವರ ಮನೆಗೆ ಕೂಡಾ ಯಾರೇ ಬಂದರು ಬಂದವರಿಗೆ ಅತಿಥಿ ದೇವೋ ಭವ ಎಂದು ಊಟ ಉಪಚಾರ ಮಾಡದೆ ಕಳಿಸುವುದೇ ಇಲ್ಲ. (ಈಗ ಎಲ್ಲೆಡೆಯಲ್ಲೂ ಅತಿಥಿಗಳನ್ನು ಸತ್ಕರಿಸದೆ ಕಳಿಸುವುದಿಲ್ಲ ಬಿಡಿ, ಇದು ವಾದಿಸುವ ವಿಚಾರವಲ್ಲ ಅಲ್ವ!), ನೀವು ಯಾರಾದರು ಒಮ್ಮೆ ಹವ್ಯಕರ ಮನೆಯಲ್ಲಿ ಊಟ ಮಾಡಿದ್ದರೆ ಹಲವು ವರ್ಷಗಳವರೆಗೆ ಅದರ ರುಚಿಯನ್ನು ಮರೆಯುವುದಿಲ್ಲ,ಮುಂದಿನ ಬಾರಿ ಸಿಕ್ಕಾಗ ಅಹ್ ನಿಮ್ಮನೆಯಲ್ಲಿ ಮಾಡಿದ ಅದೇನು... ಅಪ್ಪೆ ಹುಳಿನಾ? ಅದು ತುಂಬಾ ರುಚಿಯಾಗಿತ್ತು ಎಂತಲೋ, ಮಾವಿನ ಮಿಡಿ ಉಪ್ಪಿನಕಾಯಿ ತಂದು ಕೊಡಿ ಅಂತಲೋ,ಹವ್ಯಕರ ಮನೆಯಲ್ಲಿ ಮಾಡಿದ ಊಟದ ನೆನಪು ಮಾಡಿಕೊಂಡು ಹೇಳುವ ಅನೇಕ ಜನರಿದ್ದಾರೆ.ಅಂತಹ ಹೊಗಳಿಕೆಯನ್ನು ಕೇಳಿದಾಗ ತುಂಬಾ ಸಂತೋಷವಾಗುತ್ತದೆ.
ಇನ್ನು ನಮ್ಮ ಹವ್ಯಕರ ಹಳ್ಳಿ ಮನೆಗಳಲ್ಲಿ ನೆಡೆಯುವ ಮದುವೆ ಸಂಭ್ರಮಗಳಲ್ಲಿ ಭಾಗವಹಿಸಿದವರಿಗೆ ಅದರ ಗಮ್ಮತ್ತು ತಿಳಿಯುವುದು.. ಮದುವೆ ಮನೆಯಲ್ಲಿ ಮದುವೆಗೆ ಒಂದು ವಾರ ಬಾಕಿಯಿರುವಾಗಲೇ ಅಲ್ಲಿ ಸಂಭ್ರಮ ಮುಗಿಲು ಮುಟ್ಟುತ್ತದೆ, ನೆಂಟರಿಷ್ಟರು ಜಮಾಯಿಸುತ್ತಾರೆ.. (ಈಗ ಬಂದು ಹೋಗುವ ಸಂಸ್ಕೃತಿಯು ಬಂದಿದೆ ಎನ್ನಿ, ಮದುವೆಯ ಸಮಯಕ್ಕೆ ಬಂದು ಊಟವಾದ ತಕ್ಷಣವೆ ಮನೆಗೆ ಹೋಗುವ ಸಂಸ್ಕೃತಿ ಆಗಮನವಾಗುತ್ತಿದೆ ಆದರೆ ಕೆಲ ವರ್ಷಗಳ ಹಿಂದೆ ಹೀಗಿರಲಿಲ್ಲ!) ಹೆಂಗಸರಿಗಂತೂ ಅನೇಕ ದಿನದ ನಂತರ ತಮ್ಮ ಅಕ್ಕ, ತಂಗಿಯರ,ಹತ್ತಿರದವರ ಜೊತೆ ಸಿಕ್ಕಿರುವುದರಿಂದ, ಅನೇಕ ತಿಂಗಳುಗಳ ಮಾತು ಕಥೆಯಾಡಲಿಕ್ಕೆ ಇರುತ್ತದೆ, ಜೊತೆಗೆ ಮದುವೆಗೆ ತಂದಿರುವ ಜವಳಿಯನ್ನು, ಒಡವೆಯನ್ನು ನೋಡುವುದೇ ಅವರಿಗೆಲ್ಲ ತುಂಬಾ ಸಂಭ್ರಮದ ವಿಷಯ, ಇನ್ನು ಭಾವಂದಿರು ಮಾವಂದಿರೆಲ್ಲ.. ಕವಳ ತುಂಬಿಕೊಂಡು ಹರಟೆಗೆ ಕುಳಿತರೆ ಹೊತ್ತು ಹೋಗಿದ್ದೇ ಗೊತ್ತಾಗುವುದಿಲ್ಲ, "ಭಾವಾ ಮತೆಂತ ಸುದ್ದಿನ ಊರ್ ಕಡಿಗೆ, ಈ ಸರಿ ಪಸ್ಲು ಹೆಂಗಿದ್ದ" ಎನ್ನುವುದರಿಂದ ಹಿಡಿದು ಇನ್ನು ಎನೇನೋ ವಿಚಾರ ವಿನಿಮಯವಾಗುತ್ತದೆ,ಇನ್ನು ಅಳಿಯನು ಬೆಂಗಳೂರಿನವನಾಗಿದ್ದರೆ, ಮತೆ ಬೆಂಗ್ಳೂರ್ ಕಡಿಗೆ ಎಂತ ಸಮಾಚಾರ, ಪ್ಲಯ್ ಓವರ್ ಕಟ್ತಾ ಇದಿದ್ವಲ ಆನು ಹೋದ್ಸರಿ ಬಂದಾಗ ಈಗ ಆಯ್ದನೋ ಅದು.. ಎಂದು ಶುರುವಾಗುವ ಮಾತು-ಕಥೆಗೆ ಕೊನೆಯಿರುವುದೇ ಇಲ್ಲ,ಇನ್ನು ಮೆತ್ತಿನ ಮೇಲೆ ಗಂಡಸರೆಲ್ಲಾ ಸೇರಿ ಇಸ್ಪೀಟ್ ಹಚ್ಚಿದರೆ ಮುಗಿದೇ ಹೋಯಿತು.. ಅವರಿಗೆ ಹೊತ್ತು ಗೊತ್ತಿನ ಅರಿವೇ ಆಗುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತಿರುತ್ತದೆ, ಆದರೆ ಅದರ ಜೊತೆ ಜೊತೆಗೆ ಪಾತ್ರೆ ತರುವುದು, ಅಟ್ಟ ಹಾಕಿಸುವುದು, ತೋರಣ ಕಟ್ಟಿಸುವುದು ಎಲ್ಲವೂ ಸಾಂಗವಾಗಿಯೇ ನೆಡೆಯುತ್ತಿರುತ್ತದೆ, ಮದುವೆಯ ಮುಂಚಿನ ದಿನ ಬೆಳಗ್ಗೆ ತಮ್ಮ ಊರಿನ ಪ್ರತಿ ಮನೆಗೆ ಹೋಗಿ ಅಕ್ಷತೆ ಕೊಟ್ಟು ಕರೆಯುವುದು ಮದ್ವಗೆ "ಎಲ್ರೂ ಬರಕ್ಕು ಹಂಗೆ ಇವತ್ತು ಸಂಜೆ ದೊನ್ಬಾಳೆ ಇದ್ದು ಬರಕ್ಕು" ಎಂದು ಕರೆಯವಾಗುತ್ತದೆ, ದೊನ್ಬಾಳೆ ಎಂದರೆ ಊರಿನವರೆಲ್ಲಾ ಸೇರಿಕೊಂಡು ಬಾಳೆ ಎಲೆಯನ್ನು ಶುಚಿಗೊಳಿಸಿ.. ಊಟದ ಬಾಳೆ, ತಿಂಡಿಯ ಬಾಳೆ ಎಲೆ, ಎಲ್ಲವನ್ನು ವಿಂಗಡಿಸಿ ಸರಿಯಾಗಿ ಜೋಡಿಸಿಡುತ್ತಾರೆ, ಇವೆಲ್ಲಾ ಕೆಲಸವಾದ ಮೇಲೆ ದೊನ್ಬಾಳೆಗೆ ಬಂದವರಿಗೆ "ಮರ್ಯಾದೆ" ಮಾಡಲಾಗುತ್ತದೆ, ಮರ್ಯಾದೆ ಎಂದರೆ ಬೇರೇನು ಅಲ್ಲ, ಬಂದು ಕೆಲಸದಲ್ಲಿ ಸಹಕರಿಸಿದ್ದಕ್ಕಾಗಿ ಎಲ್ಲರಿಗೂ ಅಳಕಾಳು ಬೆಲ್ಲವೋ, ಅಥವಾ ಅವಲಕ್ಕಿ ಬೆಲ್ಲವನ್ನೊ ಜೊತೆಗೆ ಕುಡಿಯಲು ಕಷಾಯ ಕೊಡುತ್ತಾರೆ, ಇವೆರೆಡರ ಕಾಂಬಿನೇಷನ್ನೆ ಅಷ್ಟೊಂದು ಚಂದ..ನೆನಪಾದರೆ ಬಾಯಲ್ಲಿ ನೀರೂರುತ್ತದೆ, ಊರಿನ ಜನರು ಮಾಡಿದ ಕೆಲಸದ ಸಹಕಾರಕ್ಕೆ ಧನ್ಯವಾದ ತಿಳಿಸುವ ಪರಿ ಇದು.

ಇನ್ನು ಕೆಲವು ಮದುವೆ ಮನೆಯ ಅಡುಗೆ ಮನೆಯಲ್ಲಿ ಒಂದೇ ವಯಸ್ಸಿನ ಹುಡುಗರು ಸೇರಿಕೊಂಡರೆ ಅಲ್ಲಿ ಪೋಲಿತನಕ್ಕೆ, ರಸಿಕತನಕ್ಕೆ ಕೊರತೆಯಿರುವುದಿಲ್ಲ, ಎಲ್ಲಾ ಸಮಯದಲ್ಲೂ ಎಲ್ಲೆಡೆಯಲ್ಲೂ ಪೋಲಿತನವಿರುವುದಿಲ್ಲ ಕೆಲವು ಕಡೆಮಾತ್ರ ವಿರಳವಾಗಿ ಇಂತಹವು ನೆಡೆಯುತ್ತದೆ(ಮುಂದಿನದನ್ನು ಓದಿ ಇಶಿಶ್ಯೋ ಅನ್ನದಾರೆ ಓದಡಿ!) {ವಿ.ಸೂಚನೆ: ಮುಂದಿನ ಸಾಲುಗಳು ವಯಸ್ಕರು ಮಾತ್ರ ಓದಬಹುದು..ಅಶ್ಲೀಲತೆಯೆನಿಸುವ ಅಥವಾ ದ್ವಂದ್ವಾರ್ಥ ಸೂಚಿಸುವ ಪದಗಳಿರಬಹುದು. ಇಷ್ಟವಿಲ್ಲದವರು ಸಹ ದಯವಿಟ್ಟು ಓದಲು ಹೋಗಬೇಡಿ!.} ಮದುವೆ ಮನೆಯಲ್ಲಿ ಅನೇಕ ಪೋಲಿ ಜೋಕುಗಳು ಹುಟ್ಟಿಕೊಳ್ಳುತ್ತವೆ..ಅದೂ ಕೂಡಾ ಸೂಚ್ಯವಾಗಿ ಮಾತನಾಡುತ್ತಾರೆ.. ನಿಂಬೆ, ದೊಡ್ಲಿಕಾಯಿ ಎನ್ನುವ ಮಾತುಗಳು ಹರಿದಾಡುತ್ತಿರುತ್ತವೆ,(ಬಿಡಿಸಿ ಹೇಳದು ಬ್ಯಾಡ್ದೇನ ಅಲ್ದ!) ಮದ್ಯೆ ದೊಡ್ಡವರು ಯಾರಾದರು ಬಂದು ಬಿಟ್ಟರೆ ಗೊಳ್ಳೆಂದು ನಗುತ್ತಿದ್ದವರು ಗಂಭೀರವಾಗಿ ಬಿಡುತ್ತಾರೆ,ಕೆಲ್ಸ ಮಾಡ್ರ ಹುಡ್ರಾ ಎಂದು ಅವರವರೆ ಹೇಳಿಕೊಂಡು ಏನು ಗೊತ್ತಿಲ್ಲದವರಂತೆ ಬಡಿಸುವ ಕಾರ್ಯದಲ್ಲಿ ಮಗ್ನರಾಗುವುದು ವಿಶೇಷ, ಇನ್ನು ಊಟಕ್ಕೆ ಕುಳಿತವರು ಕೂಡಾ ರಸಿಕತನವನ್ನು ಪ್ರದರ್ಶಿಸುತ್ತಾರೆ.. ಅದು ಅವರು ಹೇಳುವ ವಿಧಾನದಲ್ಲಿ ಅಡಗಿರುತ್ತದೆ, ಉದಾಹರಣೆಗೆ, ಜಿಲೇಬಿ ಬಡಿಸುವವನ ಹತ್ತಿರ "ಎಲ್ಡ್ ಹಿಡ್ಕಂಡು ಒಂದು ಹಾಕು ಮಾರಾಯ" ಎನ್ನುವವರಿದ್ದಾರೆ, ಖೀರು ಹಕಶ್ಕ್ಯಳೋ.. ಹುಡ್ಗೇರ್-ಬೀಜ(ಹುಡಿ ಗೇರುಬೀಜ)ಹಾಕಿ ಮಂದಕ್ಕೆ ಮಾಡಿದ್ದ ಬೆಳ್ಳಗಿದ್ದು ಎಂದು ಗಂಭೀರವಾದರೆ, ಒಂದು ಕ್ಷಣದ ನಂತರ ಅರ್ಥವಾದವರೆಲ್ಲಾ ಗೊಳ್ಳನೆ ನಗುತ್ತಾರೆ,ಹೀಗೆ ನಾನ ತರದ ಜೋಕಿನ ಸರಮಾಲೆಗಳೆ ಸುರಿಯುತ್ತವೆ, ಮೋಟುಗೋಡೆಯಲ್ಲಿ ಕೂಡಾ ಇಂತಹ ಕೆಲವು ಜೋಕುಗಳಿವೆ.ಇಂತಹ ಜೋಕುಗಳ ನಡುವೆಯೇ ಅರ್ಥಗರ್ಬಿತವಾದ ಶ್ಲೋಕಗಳು ಮೊಳಗುತ್ತವೆ.. ಒಂದೆ ಉಸಿರಿನಲ್ಲಿ ಹೇಳುವ ಸಂಸ್ಕೃತ ಶ್ಲೋಕಗಳನ್ನು ಕೇಳಲು ಅಷ್ಟೇ ಹಿತಕರವಾಗಿರುತ್ತದೆ ಅದೇ ರೀತಿಯಲ್ಲಿ ಊಟಕ್ಕೆ ಕುಳಿತವರಿಗೆ ಶ್ಲೋಕ ಹೇಳಿದವನ ಸವಾಲಿಗೆ ಉತ್ತರವೆಂಬಂತೆ ಒಂದೇ ಉಸಿರಿನಲ್ಲಿ ಜೈಕಾರ ಕೂಗುವುದು ನೆಡೆಯುತ್ತದೆ, ಜೊತೆಗೆ ಒಂದೇ ಊರಿನವರು ಸ್ನೇಹಿತರು ಸೇರಿ ಊಟಕ್ಕೆ ಕುಳಿತರೆ ಅಲ್ಲಿ ಸಿಹಿ ಪದಾರ್ಥವನ್ನು ತಿನ್ನುವ ಕಂಬಳ ಏರ್ಪಡುತ್ತದೆ..ಒಬ್ಬೊಬ್ಬರು ಕಡಿಮೆಯೆಂದರೂ 20ರಿಂದ 25 ಜಿಲೇಬಿ ತಿಂದು ಸೈ ಎನಿಸಿಕೊಳ್ಳುತ್ತಾರೆ.. ಈ ಜಿಲೇಬಿ ಕಂಬಳಕ್ಕೆ ಅನೇಕ ನಿಯಮಾವಳಿಗಳಿರುತ್ತವೆ.. ಕಡಿಮೆಯೆಂದರೂ 5 ಜನರಾದರು ಸ್ಪರ್ಧಿಗಾರರಿರಬೇಕು.. ಬಡಿಸುವರು ಒಂದೊಂದೇ ಜಿಲೇಬಿಯನ್ನು ಎಲ್ಲರಿಗೂ ಹಾಕಬೇಕು.. ಒಟ್ಟಿಗೆ ಒಂದಕ್ಕಿಂತ ಹೆಚ್ಚು ಜಿಲೇಬಿಯನ್ನು ಹಾಕಬಾರದು..ಅದನ್ನು ತಿಂದಾದ ತಕ್ಷಣ ಇನ್ನೊಂದು ಜಿಲೇಬಿಯನ್ನು ಒಬ್ಬೊಬ್ಬರಿಗೆ ಹಾಕುತ್ತಾ ಹೋಗಬೇಕು, ಕಂಬಳದಲ್ಲಿ ಯಾರೊಬ್ಬರು ಜಿಲೇಬಿ ತಿನ್ನಲಾರೆ ಸಾಕು ಎಂದರೂ ಅಲ್ಲಿಗೆ ಸ್ಪರ್ಧೆ ಮುಕ್ತಾಯವಾಗುತ್ತದೆ! ಜೊತೆಗೆ ಮದುವೆಮನೆಯ ಯಜಮಾನ ನಿಟ್ಟುಸಿರುಬಿಡುತ್ತಾನೆ!, ಅಂದರೆ ಇದು ಎಲ್ಲಾ ಮದುವೆಮನೆಗಳಲ್ಲಿ ಈ ತರಹದ ಕಂಬಳಗಳು ನೆಡೆಯುವುದಿಲ್ಲ ಕೆಲವು ಆಪ್ತರ ಮನೆಯಲ್ಲಿ ಮಾತ್ರ ಈ ತರಹ ಸಿಹಿ ಪದಾರ್ಥ ತಿನ್ನುವ ಸ್ಪರ್ಧೆಗಳು ನೆಡೆಯುತ್ತದೆ, ಈ ಸಂದರ್ಭದಲ್ಲಿ ನನ್ನ ನೆನಪಿನ ಬುತ್ತಿ ಬಿಚ್ಚಿಕೊಳ್ಳುತ್ತಿದೆ.. ಜೊತೆಯಲ್ಲೇ ನನ್ನ ಪರಿಚಿತ ಸ್ನೇಹಿತರು(ಹೆಸರು ಬೇಡ)ಮೂರು ಜನರು ಸೇರಿ ಒಂದು ಬಕೇಟ್ ಕೇಸರಿಬಾತನ್ನು ಖಾಲಿಮಾಡಿದ್ದನ್ನು ಕಣ್ಣಾರೆ ಕಂಡಿದ್ದೇನೆ.. ಮುಂಚೆಯ ಅವರ ಪರಿಚಯವಿದ್ದದ್ದರಿಂದ ಇದೇನು ಆಶ್ಚರ್ಯಕರ ವಿಚಾರವಾಗಿರಲಿಲ್ಲ.. ನಾನೇ ತುಪ್ಪವನ್ನು ಸುರಿದು "ನಿದಾನ ತಿನ್ರಪಾ ಮಾತಾಡ್ತಾ" ಎಂದು ಹೇಳಿದ ನೆನಪು ಇನ್ನೂ ಇದೆ. ಮತ್ತೊಂದು ಘಟನೆಯನ್ನು ಮರೆಯಲೇ ಸಾದ್ಯವಿಲ್ಲ.. ಅನೇಕ ವರ್ಷದ ಹಿಂದೆ ಒಬ್ಬರು ಹೇಳಿದ ಮಾತು ಇನ್ನು ನೆನಪಿನಲ್ಲಿ ಉಳಿದು ಹೋಗಿದೆ, ಆತನ ರಸಿಕತೆಗೆ ತಲೆದೂಗಿದ್ದೇನೆ.. ಇಬ್ಬರು ಮಕ್ಕಳು ಅಂಗಳದಲ್ಲಿ ಚೆಂಡಾಟವಾಡುತ್ತಿದ್ದರು, ಚೆಂಡಾಟವೆಂದರೆ ಅರ್ಥವಾಯಿತೆಂದುಕೊಳ್ಳುತ್ತೇನೆ, ಅದೇ ಟಿನಿಸ್ ಬಾಲನ್ನು ಎಸೆದಾಡುವುದು.. ಒಬ್ಬನು ಎಸೆದದ್ದನ್ನು ಇನ್ನೊಬ್ಬ ಹಿಡಿಯುವುದು ಮಾಡುತ್ತಿರುವಾಗ ಅದು ಕೈ ಜಾರಿ ಹುಡುಗನ ತಂದೆಯ ಕೈಸೇರಿತು, ಅದಕ್ಕೆ ಮಗು ಕೇಳಿದ್ದಿಷ್ಟು "ಅಪ್ಪಾ ಬಾಲ್ ಎಂಗಳದ್ದು ಕೊಡಾ.." ಅದಕ್ಕೆ ಅವರಪ್ಪ ಟೆನಿಸ್ ಬಾಲನ್ನು ಹಿಚುಕುತ್ತಾ ಹೇಳಿದ್ದು ಇಷ್ಟೇ, "ನಿಂಗಳ್ಮನೆ ಬಾಲ್ ಎಂಗೆ ಬ್ಯಾಡದ್ರೋ ಮಾರಾಯ, ಎಂಗಕ್ಕೆ ಬಾಲ್ ಆಡಿ ಆಡಿ ಬೇಜಾರ್ ಬಂದೆ ನಿಂಗಕ್ ಬಿಟ್ಟು ಕೊಟಿದ್ಯ" ಅಂದರು!, ಹವ್ಯಕರ ಬಗೆಗೆ ನನಗೆ ಗೊತ್ತಿರುವ ಅಲ್ಪ ಸ್ವಲ್ಪ ಬರೆದಿದ್ದೇನೆ ಇನ್ನೂ ಅದೆಷ್ಟು ಮಹತ್ವದ ವಿಚಾರಗಳನ್ನು ಬಿಟ್ಟಿದ್ದೇನೋ ಏನೋ.. ತುಂಬಾ ದಿನದಿಂದ ನಮ್ಮ ಭಾಷೆಯ ಬಗೆಗೆ ಬರೆಯಬೇಕೆಂಬ ಆಸೆಯಿತ್ತು ಆದ್ದರಿಂದ ನನಗೆ ಗೊತ್ತಿರುವ ಅಲ್ಪ ಸ್ಪಲ್ಪ ಬರೆದಿದ್ದೇನೆ. ಇಷ್ಟ ಆಗ್ತೇನ ನಿಂಗಕ್ಕೆ ಮಾಡಿದ್ದಿ.

ಕೊನೆಯ ಮಾತು ಪೋಲಿತನ ರಸಿಕತೆ ಎರಡೂ ಪ್ರತಿಯೊಬ್ಬರ ಜೀವನದಲ್ಲಿ ಇದ್ದೇ ಇರುತ್ತದೆಯಲ್ಲವೇ.. ಸಾರ್ವಜನಿಕವಾಗಿ ಹೇಳಿಕೊಳ್ಳುವ ಧೈರ್ಯ ನಮ್ಮಲ್ಲಿ ಅನೇಕರಿಗಿಲ್ಲ.. ನಮ್ಮಂತ ಮಡಿವಂತ ದೇಶದಲ್ಲಿ ಪೋಲಿತನದ ಅಥವಾ ರಸಿಕತೆಯ ಮಾತುಗಳನ್ನು ಸಾರ್ವಜನಿಕವಾಗಿ ಮಾತನಾಡುವ ಸ್ವಾತಂತ್ರವಿನ್ನು ದೊರಕಿಲ್ಲ...ಆದರೂ ಇದೆಲ್ಲವನ್ನು ಬರೆದು ಬಿಟ್ಟಿದ್ದೇನೆ, ತಪ್ಪು ತಿಳಿದುಕೊಳ್ಳೊದಿಲ್ಲ ಎನ್ನುವ ವಿಶ್ವಾಸದಿಂದ, ಅನೇಕರು ನೀನು ಇಷ್ಟೊಂದು ಕೆಟ್ಟು ಹೋಗಿದ್ದೀಯ ಎಂದರೆ ನನ್ನದು ನಗುವೊಂದೆ ಉತ್ತರವಾದೀತು..ತಪ್ಪು ತಿಳ್ಕೊಳಲ್ಲ ಎಂದು ಕೊಳ್ಳಲಾ? ಅಂತೆಯೇ ಮೂಗಿರುವ ತನಕ ನೆಗಡಿ ತಪ್ಪಿದ್ದಲ್ಲ ಎನ್ನುವ ರೀತಿಯಲ್ಲೇ ಯಾವಾಗ ಅರ್ಜಿ ಫಾರಂ(application form)ಗಳಲ್ಲಿ ಜಾತಿ ಎನ್ನುವ ಕಾಲಂ ಇರುತ್ತದೆಯೋ ಅಲ್ಲಿಯವರೆ ಜಾತೀಯತೆ ಇದ್ದೇ ಇರುತ್ತದೆ. ಬರಲಾ.. ಪ್ರೀತಿ ಇರಲಿ.. ಸದಾ........... ಹೀಗೆ...