ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Monday, March 25, 2013

ಆಲೆಮನೆಯ ಕಬ್ಬಿನ ಹಾಲೂ ನೊರೆಬೆಲ್ಲವೂ ಆಹಾ...

ಆಲೆಮನೆಯೆಂಬ ಶಬ್ದ ಕೇಳಿದಾಕ್ಷಣ ಕಬ್ಬಿನ ಹಾಲಿನ ರುಚಿಯನ್ನು, ನೊರೆಬೆಲ್ಲದ ಸವಿಯ ನೆನೆಸಿಕೊಂಡರೆ ನಾಲಿಗೆಯಲ್ಲಿ ನೀರೂರದೆ ಇರಲಾರದು...

                                                      ಚಿತ್ರ ಕೃಪೆ: ಅಂತರ್ಜಾಲ


                                                         ಚಿತ್ರ ಕೃಪೆ: ಅಂತರ್ಜಾಲ

ಕೆಲವು ವರ್ಷಗಳ ಹಿಂದೆ ಕೋಣವನ್ನು ಕಟ್ಟಿ ಆಲೆಕಣೆಯನ್ನು(ಶುಗರ್ ಕೇನ್ ಕ್ರಷರ್) ತಿರುಗಿಸಿ ಕಬ್ಬಿನ ಹಾಲು ತೆಗೆಯುತ್ತಿದ್ದರು, ಆಗ ತಿಂಗಳಾನುಗಟ್ಟಲೆ ಆಲೆಮನೆ ನೆಡೆಯುತ್ತಿತ್ತು.. ಕ್ರಷರ್ ನಿಂದ ಕೋಣಕ್ಕೆ ಕಟ್ಟಿದ ಮರದ ತೊಲೆಯು ಕೋಣ ತಿರುಗಿದಂತೆ ಕಬ್ಬಿನಹಾಲು ಭಾನಿಗೆ ಬಂದು ಬೇಳುತ್ತದೆ, ತಿರುಗುತ್ತಿರುವಾಗ ಅದು ನಮ್ಮ ತಲೆಗೆ ಬಡಿಯದಂತೆ ಬಗ್ಗಿ ಆಲೆ ಕಣೆಯ ಹತ್ತಿರ ಹೋಗಿ ನಾವೇ ಆಯ್ದು ಕೊಂಡ ಕಬ್ಬಿನ ಹಾಲನ್ನು ಪಾತ್ರೆ ಕ್ಯಾನುಗಳಲ್ಲಿ ತುಂಬಿಸಿಕೊಂಡು ಬರುತ್ತಿದ್ದ ಅನುಭವ ಈಗ ಸಿಗಲಾರದು...  ಈಗ ಯಂತ್ರಚಾಲಿತ ಕ್ರಷರ್(ಆಲೆಕಣೆ) ಬಂದಿರುವುದರಿಂದ ಒಂದು ವಾರದಲ್ಲೆ ಆಲೆಮನೆಯ ಮಜ ಮುಗಿದೇ ಹೋಗುತ್ತದೆ. ಬೆಂಗಳೂರಿನಲ್ಲೂ ಕೆನೋಲಾ ಇದೆ ಅಂತೀರಾ.. ಊಹೂಂ ಅದು ಗಂಟಲನ್ನು ತಂಪಾಗಿಸುತ್ತದೆ ನಿಜ, ಆದರೆ ಆಲೆಮನೆಯನ್ನು ಸ್ವತಃ ನೋಡಿ ಆನಂದಿಸಿದಾಗಲೆ ಅದರ ನೆನಪು ಮತ್ತೆ ಮತ್ತೆ ಕಾಡೋದು...


ಕಬ್ಬಿನ ಹಾಲನ್ನು ಕೊಪ್ಪರಿಗೆಯಲ್ಲಿ ಹಾಕಿ ಕುದಿಸಿ, ಹಾಲಿನಲ್ಲಿದ್ದ ಕಬ್ಬಿನ ಸಿಪ್ಪೆಯ ಝಂಡುಗಳು(ತ್ಯಾಜ್ಯವಸ್ತುಗಳು ಅನ್ನಬಹುದು) ಮೇಲೆ ತೇಲಲಾರಂಬಿಸಿದಾಗ ಅದನ್ನು ಎರೆಡು ಜನರು ಸೇರಿ ಬಟ್ಟೆಯಿಂದ ಶೋಧಿಸಿ, ಸರಿಯಾದ ಪಾಕ ಬಂದಾಕ್ಷಣ ಕೊಪ್ಪರಿಗೆಯನ್ನು ಒಲೆಯ ಮೇಲಿಂದ ಕೆಳಗಿಳಿಸಿ ಬೆಲ್ಲದ ಸಂಗ್ರಹಕ್ಕೆಂದೆ ಮಣ್ಣಿನೊಳಗೆ ಹುದುಗಿಸಿಟ್ಟ ಡಬ್ಬಕ್ಕೆ ಹಾಕಿದಾಗ ಅದರಲ್ಲಿನ ಮೇಲಿನ ಪದರದಲ್ಲಿ ನೊರೆ ನೊರೆಯಂತ ಬೆಲ್ಲವನ್ನು ಬಾಳೆಯಲ್ಲಿ ಹಾಕಿಕೊಂಡು ಕಬ್ಬಿನ ಅಳ್ಳಟ್ಟೆ(ಕಬ್ಬಿನ ಸಿಪ್ಪೆ)ಯ ತುಂಡು ಮಾಡಿಕೊಂಡು ಬೆಲ್ಲವನ್ನು ಹಾಗೇ ನಾಲಿಗೆಯ ಮೇಲಿಟ್ಟುಕೊಂಡರೆ ಸಾಕು ಅದರ ರುಚಿಯೇ ಬೇರೆ ಆಹಾ ಎನ್ನುವ ಉದ್ಗಾರ ಮನಸಿನೊಳಗೆ ಮೂಡದೆ ಇರಲಾರದು!, ಮತ್ತೆ ಮತ್ತೆ ತಿನ್ನಬೇಕೆನ್ನಿಸುತ್ತಲೇ ಇರುತ್ತದೆ.. ರುಚಿಕರ ಬೆಲ್ಲ ತಯಾರಾಗುತ್ತಿದ್ದಂತೆ ಬಿಸಿ ಬಿಸಿಯಾಗಿ ತಿನ್ನಲು ಸಿಗೋದೆ ಆಲೆಮನೆಯಲ್ಲಿ...




                                                                 ಚಿತ್ರ ಕೃಪೆ: ಅಂತರ್ಜಾಲ


(ಆಲೆಮನೆಯ ಬಗ್ಗೆ ಬರೆಯಬೇಕೆಂದನಿಸಿದ್ದೇ ಆಲೆಮನೆಗಳು ಮುಗಿದಾದ ಮೇಲೆ, ಅದೂ ಅಲ್ಲದೇ ರಾತ್ರಿ ಹೊತ್ತು    ಹೋಗಿದ್ದರಿಂದ ಛಾಯಚಿತ್ರಗಳನ್ನು ತೆಗೆಯಲಾಗಲಿಲ್ಲ ಕ್ಷಮೆ ಇರಲಿ..)     ಬೆಲ್ಲದ ಕೊಪ್ಪರಿಗೆ ಒಲೆಯಿಂದ ಇಳಿಸಿ ಬೆಲ್ಲದ ಮರಿಗೆ ಅಥವಾ ಡಬ್ಬಕ್ಕೆ ಹಾಕಿಯಾದ ಮೇಲೆ ಕೊಪ್ಪರಿಗೆಯನ್ನು ನೀರುಹಾಕಿ ಕತ್ತದ ಸುಗುಡು(ತೆಂಗಿನ ನಾರು) ಹಾಕಿ ತಿಕ್ಕುವವನ ಮುಖದಲ್ಲೊಂದು ಮಂದಹಾಸ ಮೂಡುತ್ತದೆ, ಹೀಗೆ ತೊಳೆದ ನೀರನ್ನು ಕ್ಯಾನುಗಳಲ್ಲಿ ಶೇಖರಿಸಿಡಲಾಗುತ್ತದೆ, ಇದೇ ಕಾಕಂಬಿಯಾಗುತ್ತದೆ.


ಇನ್ನು ಸಾಮಾನ್ಯವಾಗಿ ಶುಂಟಿ, ನಿಂಬೆ ಹಣ್ಣನ್ನು ಸೇರಿಸಿದರೆ ಕಬ್ಬಿನಹಾಲಿಗೆ ಮತ್ತೊಂದು ತರಹದ ರುಚಿ ಬರುತ್ತದೆ, ಅದು ಕೆಲವರಿಗೆ ಇಷ್ಟವಾದರೆ, ಕೆಲವರಿಗೆ ಬರೀ ಕಬ್ಬಿನಹಾಲೇ ರುಚಿಕರ ಅನಿಸುತ್ತದೆ. ಕೆಲವರು ಕಬ್ಬನ್ನು ನೆಡುವುದೇ ಜನರನ್ನು ಕರೆದು ಕಬ್ಬಿನ ಹಾಲನ್ನು ಕೊಟ್ಟು ಖುಷಿ ಪಡಲಿಕ್ಕಾಗಿ.



ಕಬ್ಬಿನಹಾಲಿಗೆ ಬಂಗಿಸೊಪ್ಪನ್ನು ಸೇರಿಸಿ ಕುಡಿಯುವವರೂ ಇದ್ದಾರೆ.. ಬಂಗಿಸೊಪ್ಪಿನ ಬಗೆಗೆ ಹೇಳೋದಾದರೆ ಅದೊಂತರಾ ಅತ್ಯಂತ ರುಚಿಕರ ಅನಿಸುವ ತಾಕತ್ತು ಬಂಗಿಸೊಪ್ಪಿಗೆ ಇದೆ, ಬಂಗಿ ಪಾನಕ ತಯಾರಿಕೆಯಲ್ಲಿ ಗೋಡಂಬಿ, ದ್ರಾಕ್ಷಿ, ಗಸಗಸೆ ಮುಂತಾದವುಗಳನ್ನು ಸೇರಿಸಲಾಗುತ್ತದೆ ಇದರ ಜೊತೆ ಸಿಹಿ ಪದಾರ್ಥ ಸೇರಿದರಂತೂ ಮತ್ತು ಬೇಗನೆ ಮತ್ತು ಏರಲಾರಂಬಿಸುತ್ತದೆ.. ಬಂಗಿಸೊಪ್ಪಿನ ಪಾನಕವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಮನುಷ್ಯ ಅತೀ ಪುಕ್ಕಲು ಸ್ವಭಾವದವನಾಗಿಬಿಡುತ್ತಾನೆ, ನಗಲಾರಂಬಿಸಿದರೆ ಬಂಗಿ ಸೊಪ್ಪಿನ ಮತ್ತು ಇಳಿಯುವವರೆಗೂ ನಗುತ್ತಲೇ ಇರುತ್ತಾರೆ..


                                             
 ಚಿತ್ರ ಕೃಪೆ: ಅಂತರ್ಜಾಲ
ಇನ್ನು ಆಲೆಮನೆಯಲ್ಲಿ ಕಬ್ಬಿನಹಾಲು ಬೇಕಾದಷ್ಟು ಕುಡಿಯಬಹುದಾ ಅಥವಾ ಒಂದು ಲೋಟಕ್ಕೆ ಸೀಮಿತವಾ ಅನಿಸುತ್ತಿದೆಯಾದರೆ, ಆಲೆಮನೆಯಲ್ಲಿ ನಿಮಗೆ ತಾಕತ್ತು ಇದ್ದಷ್ಟು ಕುಡಿಯಬಹುದು... ನಾನಂತು ಎಷ್ಟು ಕುಡಿದೆ ಎನ್ನುವ ಲೆಕ್ಕ ಇಡಲೇ ಇಲ್ಲ ಇಲ್ಲಿಯವರೆಗೆ! ಜೊತೆಗೆ ಮಾವಿನ ಮಿಡಿ ಉಪ್ಪಿನಕಾಯಿ, ಮೆಣಸಿನಕಾಯಿ ಬೋಂಡಾ, ಮಸಾಲೆ ಮಂಡಕ್ಕಿ ಎಲ್ಲವೂ ಇರುತ್ತದೆ, ಕಾಲ ಬದಲಾದಂತೆ ಆಲೆಮನೆಗೆ ಕರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಅದಕ್ಕೆ ಕಾರಣ ಇಲ್ಲವೆಂದಲ್ಲ, ಕರೆಯದೇ ಇದ್ದವರು ಗುರುತು ಪರಿಚಯ ಇಲ್ಲದವರು, ಪಟ್ಟಣ ಪ್ರದೇಶದಿಂದ ಗುಂಪು ಕಟ್ಟಿಕೊಂಡು ಬಂದು ಗಲಾಟೆ ಮಾಡುವ ಜನರಿಂದ ಕಬ್ಬು ಬೆಳೆದವರು ಬೇಸರಗೊಂಡಿರುವುದರಿಂದ ಯಾರನ್ನೂ ಕೆರೆಯಬೇಕೆಂದೆ ಅನಿಸುತ್ತಲೇ ಇಲ್ಲವೇನೊ...


ಆಲೆಮನೆಗಳು ಗತಕಾಲದ ವೈಭವಗಳಾಗದೆ ಆಲೆಮನೆಯ ಸವಿ ಎಲ್ಲರೂ ಸದಾ ಸವಿಯುಂತಾಗಬೇಕೆಂಬುದೇ ನನ್ನ ಆಶಯ.