ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Monday, August 26, 2013

ನೀರ ಕೊರತೆ, ನೀರ ವರತೆ

     ನೀರಿಗೆ ಜೀವಜಲ ಎನ್ನುವ ಹೆಸರೂ ಇದೆ, ಆದರೆ ಅಮೃತವೂ ಅತಿಯಾದರೆ ವಿಷವಾಗುತ್ತದೆ ಎನ್ನುವ ಮಾತು ಸತ್ಯ.. , ಅಡಿಕೆಗೆ ಕೊಳೆರೋಗ ಬಂದಿದೆ ಜಿಟಿಜಿಟಿ ತಿಂಗಳಾನುಗಟ್ಟಲೆ ಹೊಯ್ದ ಜಡಿಮಳೆ ರೈತರಿಗೆ ಅಪಾರ ಬೆಳೆ ಹಾನಿ ಮಾಡಿವೆ, ಅಡಿಕೆ ಬೆಲೆ ಗಗನಕ್ಕೇರಿದ್ದರೂ ಅದರಿಂದ ಬೆಳೆಗಾರರಿಗೆ ಯಾವುದೇ ಲಾಭಾಂಶ ದೊರೆಯುತ್ತಿಲ್ಲ... ಈ ಸಾರಿಯ ಮಳೆಗಾಲವನ್ನು ನೋಡಿದರೆ ಮೊದಲು ಮಳೆಯಿಲ್ಲದೆ ಅನಾವೃಷ್ಟಿ ಅನಿಸಿದ್ದೂ ಅತಿವೃಷ್ಟಿಯಾಗಿ ಮಾಡಿದ ಹಾನಿ ಅಶ್ಟಿಷ್ಟಲ್ಲ... ಅಂದಹಾಗೆ ಬೆಂಗಳೂರಿನಲ್ಲಿರುವ  ಬಹುತೇಕ ಜನರಿಗೆ  ನೀರು ಅಮೂಲ್ಯ ಅಂತ ಅನಿಸಿಕೊಂಡಿದ್ದು ಬಹುಶಃ ದುಡ್ಡುಕೊಟ್ಟು ಟ್ಯಾಂಕರಿನಲ್ಲಿ ತರಿಸಿಕೊಳ್ಳಬೇಕಾದವರಿಗೆ ಖಂಡಿತ ಅನಿಸಿರುತ್ತೆ.. ನೀರು ವ್ಯರ್ಥವಾಗುತ್ತಿದ್ದರೆ ನೋಡಿ ಅಯ್ಯೋ ಅನ್ನಿಸಿರಲಿಕ್ಕೂ ಸಾಕು, ಮೊನ್ನೆಯೊಂದು ದಿನಪತ್ರಿಕೆಯ ಜಾಹೀರಾತು ನೋಡಿದೆ  ಅದರಲ್ಲಿ ನೀರಿನ ಪೈಪಿನಿಂದ ಕಾರು ತೊಳೆಯುತ್ತಿರುವ ಚಿತ್ರ ಅದರ ಕೆಳಗೆ ನೀವು ಹೀಗೆ ಕಾರು ತೊಳೆದರೆ ಹನ್ನೆರೆಡು ಜನರಿಗೆ ನೀರಿಲ್ಲದಂತೆ ಮಾಡುತ್ತಿದ್ದೀರಿ ಎಂದರ್ಥ ಎಂದು.. ನಮ್ಮೂರು ಸಾಗರದ ನಗರವೂ ನೀರಿಲ್ಲದೆ ಟ್ಯಾಂಕರ್ ನೀರಿಗಾಗಿ ಪರಿತಪಿಸಿತು. ಈಗ ಮಳೆಗಾಲ ಮುಗಿದರೆ ಸಾಕು ಅನ್ನಿಸುತ್ತಿದೆ. ಮಳೆಯಾಗಲಿ ಎಂದು ಹರಕೆ ಹೊತ್ತವರೆಲ್ಲಾ ಮತ್ತೆ ಮಳೆ ನಿಲ್ಲಲಿ ಎಂದು ಹರಕೆ ಮಾಡಿಕೊಳ್ಳಬೇಕು ಆ ಪರಿಸ್ಥಿತಿ ಬಂದೊದಗಿದೆ.

     ನೀರು ಇಲ್ಲದೆ ಹೋದರೆ ಜೀವಿಗಳು ಬದುಕೋದು ಅಸಾಧ್ಯ, ಬರೀ ನೀರೊಂದೇ ಎಲ್ಲೆಡೆ  ತುಂಬಿಹೋದರೂ ಬದುಕು ಕಷ್ಟವಾಗಿ ಬಿಡುತ್ತದೆ.. ಅಂದಹಾಗೆ ಹೇಳೋಕೆ ಮರೆತಿದ್ದೆ... ಹೂಂ ಕೇಳೋದು ಇದೆ ಅನ್ನಿ.. ನೀವು ದಿನಕ್ಕೆಷ್ಟು ಲೀಟರ್ ನೀರು ಕುಡಿಯುತ್ತೀರಿ? ಉತ್ತರ ಒಬ್ಬಬ್ಬರದ್ದು ಒಂದೊಂದು ಲೀಟರ್ ಒಬ್ಬರು ದಿನಕ್ಕೆ ಕನಿಷ್ಟ ನಾಲ್ಕರಿಂದ ಐದು ಲೀಟರ್ ವರೆಗೂ ಕುಡಿಯುತ್ತೇವೆ ಅನ್ನುವ ಉತ್ತರ ನಿರೀಕ್ಷಿಸಬಹುದಲ್ಲಾ? ನಾನು ಇದುವರೆಗೂ ದಿನಕ್ಕೆಷ್ಟು ನೀರು ಕುಡಿದೆ ಎನ್ನುವ ಲೆಕ್ಕವನ್ನೇ ಇಟ್ಟಿಲ್ಲ, ಲೀಟರ್ ಗಟ್ಟಲೆ ನೀರು ನೆನಪು ಮಾಡಿಕೊಂಡು ಕುಡಿದವನೂ ಅಲ್ಲ... ಬಾಯರಿಕೆಯಾದರೆ ದೇಹಕ್ಕೆ ನೀರು ಬೇಕೆಂದಾಗಲಲ್ಲ ಅದು ಮೆದುಳಿಗೆ ನೀರು ನೀರು ಎನ್ನುವ ಸೂಚನೆ ರಕ್ತದಲ್ಲಿರುವ ಜೀವಕಣಗಳು ಸೂಚನೆ ನೀಡುತ್ತದೆ. ನೀರು ಇಂತಿಷ್ಟೇ ಕುಡಿ ಎಂದು ನಮ್ಮ ದೇಹದ ಮೇಲೆ ನಾವೇ ಅತ್ಯಾಚಾರ ಮಾಡಿಕೊಳ್ಳೋದು ಯಾಕೆ!

     ನೀರಿನ ಬಗ್ಗೆ ಎಷ್ಟು ಹೇಳಿದರೂ ಹೇಳುವುದು ಇನ್ನಷ್ಟಿರುತ್ತದೆ.. ನೀರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವ್ಯತ್ಯಾಸವಾಗುತ್ತಾ ಹೋಗುತ್ತದೆ, ವಿಚಿತ್ರವಾದರೂ ಸತ್ಯ ನಿಮ್ಮ ಮನೆಯ ಭಾವಿಗೂ ಪಕ್ಕದ ಮನೆ ಭಾವಿಗೂ ನೀರಿನ ಅಂತರ್ಜಲದ ಮೂಲದಲ್ಲಿ ವ್ಯತ್ಯಾಸವಾದರೆ ಅದರ ಗುಣವೂ ವ್ಯತ್ಯಸವಾಗಿಬಿಡುತ್ತದೆಯಲ್ಲಾ.. ಏನು ವಿಸ್ಮಯ ಅಲ್ಲವಾ... ನೀರು ಬದಲಾವಣೆಯಾದ ತಕ್ಷಣವೇ ದೇಹ ಅದನ್ನು ಗುರುತಿಸಿ ಹೋರಾಟಕ್ಕೆ ಇಳಿದೇ ಬಿಡುತ್ತಲ್ಲ ಅದೇ ತಂಡಿ ಶೀತ, ಇನ್ನೂ ಒಂಚೂರು ನೀರಿಗೆ ಶಕ್ತಿ ಹೆಚ್ಚಿದ್ದರೆ ಗಂಟಲಿನಲ್ಲಿ ಅಲರ್ಚಿ ನೋವು ಬಂದೇ ಬಿಡುತ್ತೆ.. ಓಹ್ ನೀರು ಬದಲಾಗಿದ್ದಕ್ಕೆ ಇಷ್ಟೆಲ್ಲಾ ಅಂತ ಗೊಣಗಿಕೊಳ್ಳುತ್ತೇವೆ.. ಮಿನರಲ್ ವಾಟರ್ ಕುಡಿಯಬೇಕಿತ್ತು ಎಂದುಕೊಳ್ಳುತ್ತೇವೆ.. ಅದೂ ಬೇರೆಯ ನೀರಲ್ಲವಾ...  ನಿಜವಾಗಲೂ ಶುದ್ದೀಕರಣವಾಗಿದೆಯಾ, ಖನಿಜಾಂಶ ಇದೆಯಾ ನೋಡೋದೆ ಇಲ್ಲ.. ಮಿನರಲ್ ವಾಟರ್ ಹೆಸರಿನಲ್ಲಿ ನೇರವಾಗಿ ನಲ್ಲಿ ನೀರನ್ನು ತುಂಬಿ ಮಾರುವ ದಂದೆಯೂ ಎಗ್ಗಿಲ್ಲದೆ ನೆಡೆಯುತ್ತಲೇ ಇದೆ... ನೀರೊಂದೆ ನೋಡಿ ಅದಕ್ಕೆ ಬಣ್ಣ ವಾಸನೆಯಿಲ್ಲ... ಜೀವಾಮೃತವೇ ಸರಿ..

    ನೀರಿನ ಬಗೆಗೆ ಹೇಳೋಕೆ ಸಾಕಷ್ಟು ಇದೆ ಹೇಳಿದಷ್ಟೂ ಹೇಳುತ್ತಲೆ ಹೋಗಬಹುದು... ಮನಸ್ಸಿನ ತುಂಬಾ ಪ್ರಶ್ನೆಗಳ ಸಾಲು ಸಾಲು ಉದ್ಬವವಾಗುತ್ತಿದೆ, ನೀರಿನದೇ  ನಿಮ್ಮ ಅನಿಸಿಕೆಗಳಲ್ಲಿ ನೀರಿನ ಬಗ್ಗೆ ತಿಳಿಸುತ್ತೀರಲ್ವಾ...