ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Friday, May 22, 2009

ಛಾಯಾಚಿತ್ರಗಳಿರುವ ಒಂದು ಬ್ಲಾಗ್ ಪರಿಚಯ

ಛಾಯಚಿತ್ರಗಳನ್ನು ನೋಡುವ ಆಸಕ್ತಿಯಿರುವವರಿಗೆ ಒಂದು ಬ್ಲಾಗ್ ಪರಿಚಯ..ನಾಗರಾಜ್ ಫೋಟೋ ಗ್ಯಾಲರಿ ಯನ್ನು ನೋಡಿ, ಇಲ್ಲಿ ನೀವು ಸಂಪೂರ್ಣವಾದ ಪ್ರಾಕೃತಿಕ ಛಾಯಚಿತ್ರಗಳು, ಪ್ರಾಣಿ, ಪಕ್ಷಿಗಳ ಫೋಟೋಗಳು ನೋಡಬಹುದು.. ಚನ್ನಾಗಿದೆ ಎನಿಸಿದರೆ ಅಲ್ಲಿಯೇ ಕಮೆಂಟಲು ಮರೆಯಬೇಡಿ.

ಕೊನೆಯಮಾತು:

ಬ್ಲಾಗ್ ವಿಳಾಸ ನೀಡಿದ್ದು ಅನುಕೂಲವಾಯಿತು ಎಂದೆನಿಸಿದವರು ಇಲ್ಲಿ ಕಮೆಂಟಬಹುದು...

Wednesday, May 13, 2009

ಕನ್ನಡ ಪದಗಳನ್ನು ತಪ್ಪು ತಪ್ಪಾಗಿ ಬರೆಯೋದನ್ನು ನಾನು ನಿಲ್ಲಿಸೋದು ಯಾವಾಗ?!

ನಾನು ಬ್ಲಾಗಿನಲ್ಲಿ ಬರೆಯುವಾಗ ಅನೇಕ ತಪ್ಪು ತಪ್ಪು ಪದಗಳನ್ನು ಬರೆದುಬಿಡುತ್ತೇನೆ.. ನಾನು ಬರೆಯುವಾಗ ಗೊಂದಲಕ್ಕೆ ಬೀಳುವುದುಂಟು.. ಸರಿಯಾಗಿ ಬರೆದವನು ಮತ್ತೆ ಅದು ಸರಿಯಲ್ಲವೆಂದು ಬೇಡದಲ್ಲೆಲ್ಲಾ ದೀರ್ಘಾಕ್ಷರಗಳನ್ನು ಬರೆದುಬಿಡುತ್ತೇನೆ, ಸಣ್ಣ ಅಕ್ಷರಗಳು ಇರುವಲ್ಲಿ ದೊಡ್ಡ ಅಕ್ಷರಗಳನ್ನು ಬರೆದು ಪ್ರಮಾದವಾಗುವುದೂ ಉಂಟು, ಹೀಗೆ ಯಾಕೆ ಎಂದು ನನಗೂ ಅರ್ಥವಾಗುತ್ತಿಲ್ಲ, ಆದರೆ ನಾನು ಬರೆದ ಪದ ತಪ್ಪು ಎಂದು ಬೇರೆಯವರು ಹೇಳಿದಾಗ(ಬೈದಾಗ!), ನಿನ್ನ ಸರಿಮಾಡಲು ಸಾಧ್ಯವೇ ಇಲ್ಲ ಎಂದು, ತಪ್ಪು ತಪ್ಪಾಗಿ ಬರೆಯುತ್ತೀಯ ಎಂದು ಹೇಳುವುದನ್ನು ಬಿಟ್ಟ ಗೆಳೆಯರು ಇಲ್ಲವೆಂದಿಲ್ಲ.. ನಾನು ಮತ್ತೆ ನನ್ನ ಬ್ಲಾಗಿನಲ್ಲಿ ಬರೆದದ್ದನ್ನು ಅಪ್ಪಿ ತಪ್ಪಿ ಮತ್ತೆ ಓದಿದರೆ ನಾನು ಬರೆದ ತಪ್ಪು ಅಕ್ಷರಗಳು ನನ್ನನ್ನು ನೋಡಿ ನಗುತ್ತವೆ... ಆಗ ನನ್ನ ಮನಸ್ಸಿನೊಳಗೆ ಬರುವುದಿಷ್ಟೆ... ಇಂಗ್ಲಿಷ್ ಭಾಷೆಯಲ್ಲಿ ಮೈಕ್ರೋ ಸಾಫ್ಟ್ ವರ್ಡ್ ನಲ್ಲಿ ಬರೆಯುವಾಗ ತಪ್ಪು ಪದಗಳನ್ನು ಬರೆದರೆ ಅಕ್ಷರಗಳ ಕೆಳಗೆ ಕೆಂಪು ಗೆರೆ ಬಂದು ಅದರ ಮೇಲೆ ಇಲಿಯ ಬಲಭಾಗದ(ರೈಟ್ ಕ್ಲಿಕ್!) ಗುಂಡಿಯನ್ನು ಅದುಮಿದಾಗ ಸರಿಯಾದ ಪದ ಯಾವುದೆಂದು ತೋರಿಸುವಂತೆ ಕನ್ನಡದ ಪದಗಳನ್ನು ತಪ್ಪಾಗಿ ಬರೆದರೆ ಅದನ್ನು ಗುರುತಿಸುವ ತಂತ್ರಾಂಶವಿದ್ದಿದ್ದರೆ ನನ್ನಂತೆ ಇನ್ನೂ ತುಂಬಾ ಜನರಿಗೆ ಸಹಾಯವಾಗುತಿತ್ತು ಅಂತಹ ಯಾವುದಾದರೂ ತಂತ್ರಾಂಶವಿದೆಯೇ?... ನಾನು ಇತ್ತೀಚೆಗೆ ಬರಹ ಡಾಟ್ ಕಾಮ್ ನ ಪ್ರೊ.ಜಿ, ವೆಂಕಟಸುಬ್ಬಯ್ಯನವರ ಆನ್ ಲೈನ್ ಕನ್ನಡ ನಿಘಂಟಿನ ಸಹಾಯ ಪಡೆಯುತ್ತಿದ್ದೇನೆ,, ನಿಮಗೂ ಸಹಾಯಕ್ಕೆ ಬರಬಹುದು.. ಬರಹ ಡಾಟ್ ಕಾಂ ನಿಘಂಟು ಪುಟಕ್ಕೆ ಹೋಗಲು ಇಲ್ಲಿ ಕ್ಲಿಕ್ಕಿಸಿ.. ನೀವು ಬರೆದ ಪದ ಸರಿಯಿದ್ದರೆ ಅದಕ್ಕೆ ಸಮಾನಾರ್ಥಕ ಪದವನ್ನು ತೋರಿಸುತ್ತದೆ.. ನೀವು ಬರೆದ ಪದ ತಪ್ಪಿದ್ದಲ್ಲಿ ಯಾವುದೇ ಫಲಿತಾಂಶಗಳಿಲ್ಲ ಎಂದು ತೋರಿಸುತ್ತದೆ. ಪ್ರಯತ್ನಿಸಿ.. ನಾನು ಬರೆದದ್ದರಲ್ಲಿ ತಪ್ಪುಗಳು ಇದ್ದಲ್ಲಿ ಕ್ಷಮೆ ಇರಲಿ... ನಿಮ್ಮ ಪ್ರೀತಿ ಸದಾ ಹೀಗೆ ಇರಲಿ .

Monday, April 13, 2009

ಬಂಗಲೆ ಮನೆ ರಹಸ್ಯ ಭಾಗ -2

ಊಟಕ್ಕೆ ಎದ್ದು ಹೋಗಿ ಊಟದ ತಟ್ಟೆಯಲ್ಲಿನ ಅನ್ನವನ್ನು ಕಲಸುತ್ತಿರುವಾಗಲೂ ಮನಸ್ಸು ಬಂಗಲೆಯ ಬಗೆಗೆ ಯೋಚಿಸುತ್ತಿದೆ, ಸೀತಜ್ಜ ಏ ಅಜಿತ ಯಾಕೋ ಏನಾಯ್ತೋ ಊಟ ಮಾಡೋ ಎಂದು ಹೇಳಿದಾಗಲೇ ವಾಸ್ತವ ಪ್ರಪಂಚಕ್ಕೆ ಬರುತ್ತಾನೆ, ಅಜಿತನು ಸಮರ್ಥ ಮತ್ತು ಪುಟ್ಟಿಯ ಜೊತೆ ತಾನು ತನ್ನ ಮೊಬೈಲ್ ನಲ್ಲಿ ನೋಡಿದ್ದೆಲ್ಲವನ್ನೂ ವಿವರಿಸುತ್ತಾನೆ, ಸಮರ್ಥ ಅಣ್ಣನನ್ನು ಉದ್ದೇಶಿಸಿ "ನಿನ್ನ ಮೊಬೈಲ್ ನಲ್ಲಿ ಈ ಹಳ್ಳಿಯ ಮ್ಯಾಪ್ ಕಾಣಿಸಿತಾ?, ನನ್ನ ಫ್ರೆಂಡ್ ಹತ್ತಿರ ಯಾವುದೋ ಜಿ.ಪಿ.ಎಸ್ ಸೆಟ್ ಇದೆ ಅದರಲ್ಲಿ ನಮ್ಮ ನಗರದ ದಾರಿಗಳೆ ಕಾಣೋಲ್ಲವಂತೆ" ಎಂದು ಹೇಳುತ್ತಾನೆ, ಅದಕ್ಕೆ ಅಜಿತ ಇದು ಸೊನಾಕಿಯಾ ವೈನ್ 79 ಇಲ್ನೋಡು ಮೊಬೈಲ್ ಸ್ಕ್ರೀನ್ ಎಷ್ಟು ದೊಡ್ಡದಿದೆ ಅಂತ, ಅದೂ ಅಲ್ದೆ ಇದು ಡ್ಯುಯಲ್ ಲೇಯರ್ ಎಲ್ಸೀಡಿ ಸ್ಕ್ರೀನ್ ಕಣೋ ಎಂದು ಹೇಳಿದಾಗ ಸಮರ್ಥನಿಗೆ ಅರ್ಥವಾಗುತ್ತದೆ ಅವನ ಅಣ್ಣನ ಮೊಬೈಲ್ ಪವರ್!.

ಅಜಿತ ತಾನು ಬಂಗಲೆಯನ್ನು ನೋಡಲು ಹೋಗುವುದಾಗಿ ತಮ್ಮ ಮತ್ತು ತಂಗಿಗೆ ಹೇಳುತ್ತಾನೆ, ಸಮರ್ಥ ತಾನು ಬರುತ್ತೇನೆ ನನಗೂ ನೋಡವ ಹಂಬಲವಿದೆ ಎಂದು ಹೇಳುತ್ತಾನೆ, ಪುಟ್ಟಿಗೂ ಬಂಗಲೆ ಮನೆಯನ್ನು ನೋಡಬೇಕೆನ್ನುವ ಕುತೂಹಲವಿದ್ದರೂ.. ಭೂತ ಪ್ರೇತದಿಂದ ತೊಂದರೆಯಾದರೆ ಎಂದು ಮನಸಿನಲ್ಲೆ ಒಂದು ಕ್ಷಣ ಯೋಚಿಸುತ್ತಾಳೆ, ಆದರೆ ತನ್ನ ಇಬ್ಬರು ಅಣ್ಣಂದಿರು ಜೊತೆಗಿದ್ದಾರೆನ್ನುವ ದೈರ್ಯದಿಂದ ತಾನು ಬರುವುದಾಗಿ ಹೇಳುತ್ತಾಳೆ, ಅಜಿತ ಮೊದಲಿನಿಂದಲೂ ಭೂತ ಪ್ರೇತವೆಂದರೆ ಹೆದರುವವನೇ ಅಲ್ಲ, ಅದೂ ಆದುನಿಕ ಯುಗದ ಹುಡುಗರು ಭೂತಕ್ಕೆಲ್ಲ ಹೆದರುತ್ತಾರಾ? ಊಹೂಂ... ಮೂವರು ಸೇರಿ ಮರುದಿನ ಸರಿಯಾಗಿ ರಾತ್ರಿ ಹನ್ನೊಂದು ಗಂಟೆಗೆ ಬಂಗಲೆ ಮನೆಗೆ ಹೋಗುವುದೆಂದು ತೀರ್ಮಾನಿಸುತ್ತಾರೆ, ಏಕೆಂದರೆ ಅವರ ಅಜ್ಜನ ಮನೆಯಲ್ಲಿ ರಾತ್ರಿ 10:30ಕ್ಕೆಲ್ಲ ಎಲ್ಲರು ಮಲಗಿಬಿಡುತ್ತಾರೆ.
---------------------------------*****-----------------------------------------------------
ಅಂದು ಶನಿವಾರ ಅಮಾವಾಸ್ಯೆಯ ರಾತ್ರಿ ದೂರದಲ್ಲಿ ನಾಯಿಗಳು ಊಳಿಡುವ ಶಬ್ದ ಕೇಳಿಸುತ್ತಿದೆ... ಸೀತಜ್ಜನ ಮನೆಯಲ್ಲೆಲ್ಲರೂ ಮಲಗಿದ್ದಾರೆ.. ಅಜಿತ, ಸಮರ್ಥ ಮತ್ತು ಸುನಯನ ಮಾತ್ರ ನಿದ್ರೆ ಬಂದವರಂತೆ ಮಲಗಿದ್ದಾರೆ... ಎಲ್ಲರಿಗೂ ನಿದ್ರೆ ಬಂದಿದೆಯಾ ಎಂದು ನಿಧಾನವಾಗಿ ಪರೀಕ್ಷಿಸುತ್ತಾ ಸದ್ದಾಗದಂತೆ ಮೂವರು ಮನೆಯಿಂದ ಹೊರಗೆ ಬಂದಿದ್ದಾರೆ... ಕೈಯಲ್ಲಿ ಅತ್ಯುತ್ತಮ ಗುಣಮಟ್ಟದ ಅತಿ ದುಬಾರಿಯಾದ 500 ಅಡಿ ದೂರ ಬೆಳಕು ಚೆಲ್ಲುವ ಬ್ಯಾಟರಿಯಿದೆ, ಚಿಕ್ಕ ಮಕ್ಕಳ ಹತ್ತಿರ ಅಷ್ಟೊಂದು ಬೆಲೆಬಾಳುವ ಮೊಬೈಲ್ ಮತ್ತು ಈ ತರಹದ ಬ್ಯಾಟರಿ ಇರಲು ಸಾದ್ಯವಾ ಎಂದು ಊಹಿಸಲು ಕಷ್ಟ ಆದರೆ ಇದು ನಿಜ ಕಾರಣ ಇವರ ಅಪ್ಪ ದೊಡ್ಡ ವ್ಯಾಪಾರಸ್ಥ.. ಕೋಟಿ ಕೋಟಿ ರೂಪಾಯಿಗಳ ವ್ಯವಹಾರ ಮಾಡುವವರಿಗೆ ಸಾವಿರ, ಲಕ್ಷವೆಲ್ಲ ಅಲಕ್ಷ್ಯ.

ಮೂವರು ನಕ್ಷೆಯನ್ನು ಆದರಿಸಿಕೊಂಡು ನೆಡೆದುಕೊಂಡು ಬಂದು ಬಂಗಲೆ ಮನೆಯ ಆವರಣ ತಲುಪಿದ್ದಾರೆ...ಬಂಗಲೆ ಮನೆ ನೋಡಲು ತುಂಭಾ ವಿಶಾಲವಾಗಿದ್ದು ಎರಡು ಅಂತಸ್ತಿನ ಮನೆಯಾಗಿದೆ, ಆಗ ಅಲ್ಲಿ ಗುಡುಗು ಸಿಡಿಲು ಜೊತೆಗೆ ಬಿರುಗಾಳಿ ಆರಂಭವಾಗುತ್ತಿದೆ, ಜಡಿ ಮಳೆ ಸುರಿವ ಲಕ್ಷಣ ಕಾಣಿಸುತ್ತಿದೆ, ಪುಟ್ಟಿಗೆ ಹೆದರಿಕೆಯಾಗಿ ಅಣ್ಣಂದಿರ ಕೈ ಹಿಡಿದುಕೊಂಡು ಹೆದರಿಕೆಯಾಗುತ್ತಿದೆ ಎಂದು ಹೇಳುತ್ತಾಳೆ, ಅದಕ್ಕೆ ಸಮರ್ಥ ಅವಳನ್ನು ಸಮಾಧಾನ ಪಡಿಸುತ್ತಾನೆ "ಇಲ್ಲಾ ಪುಟ್ಟಿ ನಾವು ಬಂಗಲೆಯ ಒಳಗೆ ಹೋಗಿಬಿಟ್ಟರೆ ಅಲ್ಲೇನು ತೊಂದರೆಯಿಲ್ಲ" ಎಂದು, ಆದರೆ ಅಲ್ಲಿ ಅವರಿಗೆ ಕಾದಿದೆ ದೊಡ್ಡದೊಂದು ಅಪಾಯ!.

ಅಜಿತ ಸಮರ್ಥ, ಸುನಯನ ಮೂವರೂ ಆ ಬಂಗಲೆಯ ಬಾಗಿಲ ಹತ್ತಿರ ಬಂದು ನಿಂತಿದ್ದಾರೆ, ಅದು ವಿಶಾಲವಾದ ಪ್ರವೇಶದ್ವಾರ ಅದಕ್ಕೆ ಎರಡು ಎತ್ತರದ ಭಾಗಿಲುಗಳು.. ಅದನ್ನು ನರಮಾನವರಿಂದ ಅಲುಗಾಡಿಸಲು ಸಾಧ್ಯವೇ ಇಲ್ಲ ಅಂತಹ ಬಾಗಿಲು..ಅದನ್ನು ತಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ.. ಊಹೂಂ ಸ್ವಲ್ಪವೂ ಮಿಸುಕಾಡುತ್ತಿಲ್ಲ.. ಅಷ್ಟರಲ್ಲಿ ಪುಟ್ಟಿಗೆ ಆಯಾಸವಾಗಿ ತಳ್ಳುವುದನ್ನು ಬಿಟ್ಟು ಕಣ್ಣುಗಳು ಬಾಗಿಲಿನ ಬಲಭಾಗದಲ್ಲಿ ವಿಚಿತ್ರವಾದ ರಾಕ್ಷಸನ ತರಹದ ಕೆತ್ತನೆಯನ್ನು ಗಮನಿಸುತ್ತದೆ, ಬೇರೆಲ್ಲಾ ಚಿತ್ರಗಳು ಸುಂದರವಾಗಿದ್ದು ಈ ಚಿತ್ರ ಮಾತ್ರ ತುಂಭಾ ವಿಚಿತ್ರವಾಗಿದೆ ಎಂದುಕೊಂಡು ಅದನ್ನು ಹೆದರುತ್ತಲೇ ಮುಟ್ಟುತ್ತಾಳೆ.. ಆಗ ಬಾಗಿಲುಗಳು ಕಟ ಕಟ ಸದ್ದು ಮಾಡುತ್ತಾ ತೆರೆದುಕೊಳ್ಳುತ್ತದೆ, ಮನೆಯ ಓಳ ಆವರಣ ತುಂಭಾ ವಿಶಾಲವಾಗಿದ್ದು ಯಾರೂ ವಾಸವಾಗಿರದ ಮನೆಯಂತೆ ದೂಳು ಮತ್ತು ಜೇಡರ ಬಲೆಯಿಂದ ಕೂಡಿಲ್ಲ.. ಅಲ್ಲಿ ಯಾರೋ ವಾಸವಾಗಿರುವ ಲಕ್ಷಣದಂತೆ ಅತ್ಯಂತ ಶುಭ್ರವಾಗಿದೆ... ಜಗಮಗಿಸುವ ದೀಪಗಳು ಉರಿಯುತ್ತಿದೆ ಅಲ್ಲಿ ಗೋಡೆಯ ಮೇಲೆ ಅನೇಕ ಚಿತ್ರವಿಚಿತ್ರವಾದ ಕಲಾಕೃತಿಗಳನ್ನು ನೇತು ಹಾಕಲಾಗಿದೆ, ಕ್ರೂರ ಮೃಗಗಳ ತಲೆ ಬುರುಡೆಯ ಆಕೃತಿಗಳು ಭಯಾನಕವಾಗಿದೆ, ಅಲ್ಲಿ ಕಾಡು ಕೋಣದ ಆಕೃತಿಯ ಕಣ್ಣುಗಳು ಕೆಂಡದಂತೆ ಉರಿಯುತ್ತಿದೆ ಅದು ಈ ಮೂವರ ಚಲನವಲನಗಳನ್ನು ಗಮನಿಸುತ್ತಿದೆ... ಬಂಗಲೆಯ ಪ್ರವೇಶ ದ್ವಾರ ಮತ್ತೆ ಕಟ ಕಟನೆ ಶಬ್ದ ಮಾಡುತ್ತಾ ಮುಚ್ಚಿಕೊಳ್ಳುತ್ತದೆ, ಈಗ ಒಳಗೆ ಇದುವರೆಗೂ ಉರಿಯುತ್ತಿದ್ದ ದೀಪಗಳು ನಿಧಾನವಾಗಿ ಆರಿಹೋಗುತ್ತಿವೆ ಇಡಿ ಆವರಣ ಕತ್ತಲೆಯ ಗೂಡಾಗಿ ಪರಿವರ್ತನೆಯಾಗುತ್ತಿದೆ, ಆಗ ಗೋಡೆಯ ಮೇಲಿನ ಆಕೃತಿಗಳ ಮೇಲೆ ಕೆಂಪು ಬೆಳಕು ಎಲ್ಲಿಂದಲೋ ಬೀಳುತ್ತಿದೆ, ಆ ಆಕೃತಿಗಳು ಜೀವಬಂದತೆ ಘೋರವಾದ ಗರ್ಜನೆ ಮಾಡುತ್ತಿವೆ... ಮೂವರು ಹೆದರಿಕೆಯಿಂದ ಕೂಗಿಕೊಳ್ಳುತ್ತಾರೆ. ನಿಂತ ನೆಲ ಬಿರುಕು ಬಿಟ್ಟು ಈ ಮೂವರನ್ನು ಒಳಕ್ಕೆಳೆದುಕೊಂಡಿದೆ.

-------------------------------*******-------------------------

ಬೆಳಗಿನ ಜಾವ ಸೀತಜ್ಜ ಏಳುತ್ತಿದ್ದಂತೆ ತಲೆ ಭಾರವಾದಂತೆ ಅನಿಸುತ್ತದೆ, ಸೀತಜ್ಜನಿಗೆ ಬೆಳಗಿನ ಜಾವ ಎದ್ದಾಕ್ಷಣ ತಲೆ ಭಾರವಾಯಿತೆಂದರೆ ಆವತ್ತು ಏನೋ ಅವಗಡ ಸಂಭವಿಸುತ್ತದೆಯೆಂತಲೇ ಅವನ ಲೆಖ್ಖ, ತಕ್ಷಣ ಅವನಿಗೆ ತನ್ನ ಮೊಮ್ಮಕ್ಕಳು ಕ್ಷೇಮವಾಗಿದ್ದರೆ ಸಾಕೆಂದು ಅವರನ್ನು ನೋಡಲು ಕೋಣೆಗೆ ಹೋಗಿ ನೋಡುತ್ತಾನೆ, ಅಲ್ಲಿ ಮೂವರೂ ಇಲ್ಲದ್ದು ನೋಡಿ ಸೀತಜ್ಜನಿಗೆ ಭಯವಾಗಿ ಹೆಂಡತಿ ಮತ್ತು ಮಗಳನ್ನು ಕೂಗುತ್ತಾನೆ... ಅವರಿಬ್ಬರೂ ಗಾಬರಿಯಿಂದ ಏನಾಯಿತೆಂದು ಓಡಿ ಬರುತ್ತಾರೆ.. ಅವರಿಗೂ ಮಕ್ಕಳು ಇಲ್ಲದ್ದು ನೋಡಿ ತುಂಬಾ ಭಯವಾಗುತ್ತದೆ,ಮನೆಯ ಬಾಗಿಲು ತೆರೆದಿರುವುದನ್ನು ನೋಡಿ ಮಕ್ಕಳು ಬಂಗಲೆ ಮನೆಗೆ ಹೋಗಿ ಅಪಾಯ ತಂದುಕೊಂಡಿದ್ದಾರ ಅಥವಾ ಯಾರಾದರೂ ಮಕ್ಕಳನ್ನು ಅಪಹರಿಸಿದ್ದಾರಾ ಅಜ್ಜ ಅಜ್ಜಿ ಮತ್ತು ತಾಯಿಯ ಮನಸ್ಸು ಹಪಹಪಿಸುತ್ತದೆ.ಸುದಾರಿಸಿಕೊಂಡು ಸೀತಜ್ಜ ಮಗಳ ಹತ್ತಿರ ಅಳಿಯಂದರಿಗೆ ಪೋನ್ ಮಾಡಿ ಮಂತ್ರವಾದಿಯನ್ನು ಹಾಗೂ ಪೋಲೀಸರನ್ನು ಕರೆದುಕೊಂಡು ಬರುವಂತೆ ಹೇಳಲು ಹೇಳುತ್ತಾನೆ, ಏಕೆಂದರೆ ಸ್ಥಳೀಯ ಆರಕ್ಷರಿಗೆ ಪ್ರಾಣ ಭಯದಿಂದ ಇತ್ತ ಸುಳಿಯಲು ಹೆದರುತ್ತಾರೆ ಜೊತೆಗೆ ವೀರಭದ್ರ ಗೌಡರು ಕಟ್ಟಪ್ಪಣೆ ಮಾಡಿದ್ದಾರೆ ಯಾವುದೇ ಕಾರಣಕ್ಕೂ ಪೋಲೀಸರು ಊರಿನೊಳಗೆ ಪ್ರವೇಶ ಮಾಡಬಾರದೆಂದು.! ಎಷ್ಟಾದರೂ ಭೂತ ಪ್ರೇತವಿಲ್ಲವೆಂದರೂ ಮನಸ್ಸಿನಲ್ಲಿ ಊರಿನ ಘಟನೆಗಳನ್ನು ಕಣ್ಣಾರೆ ಕಂಡಿರುವುದರಿಂದ ಮಂತ್ರವಾದಿಯನ್ನು ಕರೆಸಬೇಕೆಂದು ಸೀತಜ್ಜನ ಮನಸ್ಸು ಬಯಸುತ್ತಿದೆ.ಊರವರು ಜೀವ ಭಯದಿಂದ ಯಾರೂ ಸಹಾಯಕ್ಕೆ ಬರುವುದಿಲ್ಲವೆಂದು ಯಾರಿಗೂ ತಿಳಿಸದೇ ಇರುವುದೇ ಒಳಿತು ಎನಿಸುತ್ತದೆ.
-------------------------------------------------*****------------------
ಬಂಗಲೆ ಮನೆಯ ನೆಲ ಮಾಳಿಗೆಯಲ್ಲಿ ಮೂವರೂ ಮಕ್ಕಳು ಬಂದಿತರಾಗಿದ್ದಾರೆ, ಅದು ವಿಶೇಷವಾದ ಎಲೆಕ್ಟ್ರಾನಿಕ್ ನಂಬರ್ ಲಾಕ್ ಹೊಂದಿದ ಕೊಠಡಿಯ ಕಂಬಿಗಳ ಒಳಗೆ ಬಂದಿಗಳಾಗಿದ್ದಾರೆ, ಅಲ್ಲಿ ಕಾಣುತ್ತಿರುವುದೇನು ದೃಶ್ಯ, ಅಲ್ಲಿ ಜನರು ಮದ್ದು ಗುಂಡುಗಳನ್ನು ತಯಾರಿಸುತ್ತಿದ್ದಾರೆ, ಅತ್ಯಾಧುನಿಕ ಮಾದರಿಯ ಬಂದೂಕುಗಳನ್ನು ತಯಾರಿಸಲಾಗುತ್ತಿದೆ, ವ್ಯವಸ್ಥಿತವಾದ ದೇಶ ದ್ರೋಹಿಗಳಿಗೆ ಬಂದೂಕು, ಮದ್ದು ಗುಂಡು ತಯಾರಿಸಿ ಮಾರುವ ವ್ಯವಸ್ಥಿತ ಜಾಲ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ಸಿಸಿಟಿವಿ ಕ್ಯಾಮರಾಗಳು ಹೊರಭಾಗದ ಜನರ ಚಲನವಲನಗಳನ್ನು ಗಮನಿಸಿ ಕಂಪ್ಯೂಟರಿನಲ್ಲಿ ದಾಖಲಿಸುತ್ತಿವೆ, ಅತ್ಯಾಧುನಿಕವಾದ ಸ್ಯಾಟಲೈಟ್ ಪೋನುಗಳನ್ನು ಬಳಸಲಾಗುತ್ತಿದೆ ಅನೇಕ ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕ ಸಾದಿಸಿ ಅವರಿಗೆ ಬೇಕಾದ ಮದ್ದು ಗುಂಡು, ಗ್ರಾನೇಡ್ ಗಳನ್ನು ಪೂರೈಕೆ ಮಾಡುವ ಕೆಲಸ ನಿರಂತರವಾಗಿ ನೆಡೆಯುತ್ತಿದೆ, ಕೆಲ ಶತಮಾನಗಳ ಕೆಳಗೆ ಈ ಊರು ನಾಡ ಬಂದೂಕು, ತೋಟಾ ಗುಂಡುಗಳನ್ನು ತಯಾರಿಸುತ್ತಿದ್ದುದರಿಂದ ಈ ಊರಿಗೆ ತೋಟಾಪುರ ಎನ್ನುವ ಹೆಸರು ಬಂದಿದೆ ಎನ್ನುವ ರಹಸ್ಯ ಈಗ ಬಯಲಾಗುತ್ತಿದೆ.

ಬೀರ ಕ್ಯಾಂಟೀನಿನಲ್ಲಿ ಚಹಾ ಹೀರುತ್ತಾ ದಿನ ಪರ್ತಿಕೆ ತೆಗೆದುಕೊಂಡು ಓದ ತೊಡಗುತ್ತಾನೆ, ಕಾಕತಾಳೀಯವೆಂಬಂತೆ ವಿಜಯವಾಣಿ ಎನ್ನುವ ದೈನಿಕ ಪತ್ರಿಕೆಯಲ್ಲಿ ವದಾಮುಂಬಯಿ ನಗರದಲ್ಲಿ ಬಾರ್ ನರ್ತಕಿಯ ಬರ್ಬರ ಕೊಲೆಯ ಸಚಿತ್ರ ಮಾಹಿತಿ ಪ್ರಕಟವಾಗಿದೆ.. ಬೀರನಿಗೆ ಕೊಲೆಯಾದವಳ ಮುಖವನ್ನು ಎಲ್ಲೋ ಹತ್ತಿರದಿಂದ ನೋಡಿದಂತೆ ಅನಿಸುತ್ತದೆ, ನಿಧಾನವಾಗಿ ಯೋಚಿಸಿದಾಗ ತಾನು ನೋಡಿದ ಮೋಹಿನಿಯ ಮುಖ ಮತ್ತು ಕೊಲೆಯಾದ ಬಾರ್ ನರ್ತಕಿಯ ಮುಖದಂತೆ ಇದೆ ಎನ್ನುವುದು ಸ್ಪಷ್ಟವಾಗುತ್ತದೆ.ಮುಂದಿನ ವರದಿಯನ್ನು ಓದುತ್ತಾ ಹೋಗುತ್ತಾನೆ, ಪೋಲೀಸರು ಅತಿಯಾಗಿ ಕುಡಿದು ಬರ್ಬರವಾಗಿ ಹತ್ಯೆ ಮಾಡಿದ ವ್ಯಕ್ತಿಯನ್ನು ಬಂದಿಸಿದ್ದಾರೆ ಆ ವ್ಯಕ್ತಿಯ ಹೆಸರು ಕಾಳ ತೋಟಾಪುರ ಎನ್ನುವುದು ತಿಳಿದು ಬಂದಿದೆ, ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನುವುದನ್ನು ಓದಿ ಬೀರನಿಗೆ ಕಣ್ಣ ಮುಂದೆ ವೀರಭದ್ರ ಗೌಡರ ಬಲಗೈ ಬಂಟ ಕಾಳನ ಚಿತ್ರ ಹಾದು ಹೋದಂತಾಗುತ್ತದೆ.
------------------------------------**********--------------------------------
ಇಷ್ಟೆಲ್ಲಾ ನೆಡೆಯುತ್ತಿರುವಾಗ ಸೀತಜ್ಜನ ಅಳಿಯ ರಾಜೇಶ್ ತನಗೆ ಪರಿಚಯದ ಪೋಲೀಸ್ ವರಿಷ್ಠ ಅದಿಕಾರಿಗೆ ದೂರವಾಣಿಯ ಮುಖಾಂತರ ಮಾತನಾಡಿ ತನ್ನ ಮಕ್ಕಳು ಕಾಣೆಯಾಗಿದ್ದಾರೆ, ಇದಕ್ಕೆ ಕಾರಣ ಊರಿನ ಗೌಡ ವೀರಭದ್ರನೇ ಎಂದು ಆವೇಶದಲ್ಲಿ ಕೂಗುತ್ತಾನೆ, ಆತನು ಮಾಡಿದ ಅವ್ಯವಹಾರಗಳನ್ನು ಮುಚ್ಚಿಡಲು ಇನ್ನುಮುಂದೆ ಸಹಾಯ ಮಾಡವುದಿಲ್ಲ ಎಂದಿದ್ದಕ್ಕೆ ನನ್ನ ಮಕ್ಕಳನ್ನು ಅಪಹರಿಸಿದ್ದಾನೆ, ಎಂದು ಬಾಯಿ ತಪ್ಪಿ ಹೇಳಿ ಬಿಡುತ್ತಾನೆ.

ಬಂಗಲೆ ಮನೆಯ ನೆಲಮಾಳಿಗೆಯಲ್ಲಿ ಒಬ್ಬ ರೌಡಿ ಈ ಮೂವರು ಮುಗ್ದ ಮಕ್ಕಳನ್ನು ಉದ್ದೇಶಿಸಿ ಹೇಳುತ್ತಾನೆ ಇವತ್ತು ನೀವು ನೋಡುವ ಸೂರ್ಯಾಸ್ಥ ನಿಮ್ಮ ಕೊನೆಯ ಸೂರ್ಯಾಸ್ಥವಾಗುತ್ತೆ, ರಾತ್ರಿ ಬಂದು ಇದೇ ಹರಿತವಾದ ಚಾಕುವಿನಿಂದ ಇರಿದು ಕೊಲ್ಲುತ್ತೇನೆ ಎಂದು ಹೇಳುತ್ತಾನೆ. ಬೆಳಗಿನ ಜಾವವಾದ್ದರಿಂದ ಈ ಮೂವರನ್ನು ಮಾತ್ರ ಹಾಗೆಯೇ ಬಿಟ್ಟು ಎಲ್ಲರೂ ಹೊರಟುಹೋಗುತ್ತಾರೆ, ಪುಟ್ಟಿ ಹೆದರಿಕೊಂಡು ಅಳುತ್ತಾಳೆ, ಸಮರ್ಥನಿಗೂ ಆ ರೌಡಿಯ ಮಾತು ಮತ್ತು ವಿಕಾರ ಮುಖ ಜೀವ ಭಯ ಹುಟ್ಟಿಸುತ್ತದೆ ಆದರೆ ಅಜಿತನಿಗೆ ಮಾತ್ರ ಹೆದರಿಕೆಯಾಗುತ್ತಿಲ್ಲ, ಅವನು ತಾವು ಪಾರಾಗಲು ಇರುವ ಸಮಯದ ಬಗ್ಗೆ ಯೋಚಿಸುತ್ತಾನೆ, ತಕ್ಷಣ ತನ್ನ ಮೊಬೈಲ್ ತೆಗೆಯುತ್ತಾನೆ, ಊಹೂಂ ಅಲ್ಲಿ ಮೊಬೈಲ್ ಜಾಮರುಗಳನ್ನು ಅಳವಡಿಸಿದ್ದಾರೆ ಯಾರಿಗೂ ಕರೆ ಮಾಡಲು ಅಸಾಧ್ಯ, ಆದರೆ ಮೊಬೈಲ್ ಸಾಧನ ಜೀವರಕ್ಷಕ ಸಲಕರಣೆಯಾಗಿ ಉಪಯೋಗಕ್ಕೆ ಬರುತ್ತಿದೆ, ಮೊಬೈಲ್ನಲ್ಲಿರುವ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಎನ್ನುವ ಅಪ್ಲಿಕೇಶನ್ ಆನ್ ಮಾಡುತ್ತಾನೆ ಅದು ಯಾವುದೇ ವಸ್ತುವಿನ ಮೇಲಿರುವ ಬೆರಳಗುರುತುಗಳನ್ನು ಓದಬಲ್ಲದು ಕ್ಯಾಮರಾದ ಸಹಾಯದಿಂದ ತಮ್ಮ ಕೊಠಡಿಯ ಹೊರಬಾಗದಲ್ಲಿರುವ ಎಲೆಕ್ಟ್ರಾನಿಕ್ ನಂಬರ್ ಪ್ಯಾಡಿನ ಚಿತ್ರವನ್ನು ಸೆರಿಹಿಡಿಯುತ್ತಾನೆ, ಅದು ಯಾವ ಯಾವ ನಂಬರಿನ ಮೇಲೆ ಬೆರೆಳ ಗುರುತುಗಳು ಮೂಡಿವೆಯೆಂದು ತೋರಿಸುತ್ತಿದೆ ಅದು 7394251 ನಂಬರುಗಳ ಮೇಲೆ ಬೆರಳಚ್ಚು ಮೂಡಿದೆ, ಊಹೂಂ ಎಷ್ಟೇ ಕಾಂಬಿನೇಶನ್ ಗಳನ್ನು ಮಾಡಿದರೂ ಡೋರ್ ಓಪನ್ ಆಗುತ್ತಿಲ್ಲ, ಈಗ ಅಜಿತ ಹತಾಶನಾಗಿ ಕುಳಿತು ಬಿಡುತ್ತಾನೆ. ತಂತ್ರಜ್ಞಾನವೊಂದನ್ನೆ ನಂಬಿಕೊಂಡರೆ ಆಗುವುದಿಲ್ಲವೆಂದು.
--------------------------------------------*****--------------------------------------ಪೋಲೀಸರು ಕಾಳನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಪೋಲೀಸರ ತರ್ಡ್ ಡಿಗ್ರಿ ಟ್ರೀಟ್ಮೆಂಟ್ ಆರಂಭವಾಗಿದೆ, ಬೂಟು ಕಾಲಿನಿಂದ ಒದೆಯುತ್ತಿದ್ದಾರೆ, ಯಾಕೆ ಕೊಲೆ ಮಾಡಿದೆ, ಯಾರೂ ಹೇಳಿದರು ಬೊಗಳು, ಇಲ್ದೆ ಹೋದ್ರೆ ಇಲ್ಲೇ ನಿನ್ನ ಹುಟ್ಲಿಲ್ಲ ಅನ್ನಿಸಿ ಬಿಡ್ತೀನಿ ಏ ಪಿ.ಸಿ 109 ಏರೋಪ್ಲೇನ್ ಹತ್ತಿಸೋ ಈ ಬೋ... ಮಗನನ್ನು ಎಂದು ಪೋಲೀಸರ ದರಿದ್ರವಾದ ಭಾಷೆಯಲ್ಲಿ ಹೇಳುತ್ತಿದ್ದನೆ... ನೋವು ತಾಳಲಾರದೆ ಕಾಳ ಬಾಯಿಬಿಡುತ್ತಾನೆ, ತೋಟಾಪುರದ ವೀರಭದ್ರ ಗೌಡರ ಅಪ್ಪಣೆಯಂತೆ ನಾನು ಅವಳನ್ನು ಮತ್ತೆ ತೋಟಾಪುರದಲ್ಲಿ ಮೋಹಿನಿಯಂತೆ ರಾತ್ರಿ ಹೊತ್ತು ಜನರನ್ನು ಹೆದರಿಸಬೇಕೆಂದು ಕರೆದುಕೊಂಡು ಹೋಗಲು ಬಂದಿದ್ದೆ ಅವಳು ಹತ್ತು ಲಕ್ಷ ಹಣ ಕೇಳಿದಳು, ಕೊಡದಿದ್ದಲ್ಲಿ ಪೋಲೀಸರಿಗೆ ಕಂಪ್ಲೆಂಟ್ ಕೊಡುತ್ತೇನೆಂದು ಹೆದರಿಸಲು ಬಂದಳು, ನಾನು ಕುಡಿದದ್ದು ಅತಿಯಾಗಿತ್ತು ನಶೆಯಲ್ಲಿ ಕೊಲೆ ಮಾಡಿದೆ ಎಂದು ಒಪ್ಪಿಕೊಳ್ಳುತ್ತಾನೆ, ಹಾಗು ತೋಟಾಪುರದಲ್ಲಿ ಬಂಗಲೆ ಮನೆಯಲ್ಲಿ ನೆಡೆಯುತ್ತಿರುವ ಕಳ್ಳ ದಂದೆಯ ವಿಚಾರವನ್ನು ಬಾಯಿ ಬಿಡುತ್ತಾನೆ.ಅವನನ್ನು ಹೆಚ್ಚಿನ ತನಿಖೆಗಾಗಿ ನಿಜ್ಮಂಗಳೂರು ಪೋಲೀಸರ ಸುಪರ್ದಿಗೆ ಕಳಿಸುತ್ತಾರೆ.

ಇತ್ತ ಸಮರ್ಥ ಕಂಬಿಗಳ ಹೊರಗಡೆ ನೋಡುತ್ತಾನೆ, ಅಲ್ಲಿ ಬೆಂಕಿ ಹತ್ತಿಕೊಂಡರೆ ಅಗ್ನಿ ಅವಗಡಗಳಿಂದ ತಪ್ಪಿಸಿಕೊಳ್ಳಲು ಪೈರ್ ಅಲರಾಮ್ ಸಿಸ್ಟಂ ಹಾಗು ಪೈರ್ ಎಕ್ಸಿಟ್ ಇರುವುದು ಕಣ್ಣಿಗೆ ಬೀಳುತ್ತದೆ, ಏನೋ ವಿಚಾರ ತಲೆಯಲ್ಲಿ ಹೊಳೆದಂತಾಗಿ ಮುಖದಲ್ಲಿ ಮಂದಹಾಸ ಮೂಡುತ್ತದೆ, ತನ್ನ ಬ್ಯಾಗಿನಲ್ಲಿದ್ದ ಲೈಟರನ್ನು ತೆಗೆಯುತ್ತಾನೆ, ಅಣ್ಣ ಮತ್ತು ತಂಗಿಯನ್ನು ಉದ್ದೇಶಿಸಿ ಹೇಳುತ್ತಾನೆ.. ನಾವು ಬದುಕಿಕೊಳ್ಳಲು ಕೊನೆಯ ಅವಕಾಶವಿದೆ, ನಮ್ಮ ರೂಂ ನ ಮೇಲೆ ಪೈರ್ ಸೆನ್ಸರ್ ಇದೆ ಅದಕ್ಕೆ ಬೆಂಕಿ ಅಥವಾ ಹೊಗೆ ಮುಟ್ಟಿದರೆ ಎಲ್ಲಾ ಡೋರ್ ಲಾಕ್ ಮತ್ತು ಪೈರ್ ಎಕ್ಸಿಟ್ ಗಳು ತೆರೆದುಕೊಳ್ಳಬಹುದು ಎಂದು ಹೇಳುತ್ತಾನೆ. ಈಗ ತನ್ನ ಬ್ಯಾಗಿನಲ್ಲಿದ್ದ ವಸ್ತುಗಳನ್ನು ಹೊರಗೆ ತೆಗೆದು ಬ್ಯಾಗಿಗೆ ಬೆಂಕಿ ಹೊತ್ತಿಸಿ ಸೆನ್ಸರ್ ಕಡೆಗೆ ಹಿಡಿಯುತ್ತಾನೆ... ಸೆನ್ಸರ್ ಪ್ರಾಮಾಣಿಕವಾಗಿ ತನ್ನ ಕೆಲಸ ಆರಂಬಿಸುತ್ತಿದೆ ಮೊದಲು ಕಂಪ್ಯೂಟರಿಗೆ ಕೊಠಡಿಯ ತಾಪಮಾನ ಏರುತ್ತಿರುವ ಬಗ್ಗೆ ಮುನ್ಸೂಚನೆ ನೀಡುತ್ತಿದೆ, ಈಗ ಕೊಠಡಿಯಲ್ಲಿ ಬೆಂಕಿ ಹೊತ್ತಿರುವುದನ್ನು ಖಚಿತ ಗೊಳಿಸಿಕೊಂಡು ಮಾಹಿತಿಯನ್ನು ಕಂಪ್ಯೂಟರಿಗೆ ಕಳುಹಿಸಿದೆ, ಕಂಪ್ಯೂಟರ್ ಪರದೆಯ ಮೇಲೆ ತೋರಿಸುತ್ತಿದೆ ಪೈರ್ ಅಲರಾಂ ಮತ್ತು ಎಮರ್ಜನ್ಸಿ ಎಕ್ಸಿಟ್ ಡೋರ್ ಲಾಕ್ಗಳನ್ನು ಅನ್ ಲಾಕ್ ಮಾಡಲಾಗುತ್ತಿದೆ ಇನ್ನು ೧೦ ಸೆಕೆಂಡುಗಳಲ್ಲಿ ಎಂದು ಕೌಂಟ್ ಡೌನ್ ಆರಂಭಿಸಿದೆ, ನಂತರ ದೊಡ್ಡದಾದ ಸೈರನ್ ನೊಂದಿಗೆ ಎಲ್ಲಾ ಕೊಠಡಿಯ ಭಾಗಿಲು ತೆರೆದುಕೊಳ್ಳುತ್ತಿದೆ... ಪೈರ್ ಎಕ್ಸಿಟ್ ಗಳು ತೆರೆದುಕೊಂಡಿವೆ. ಅಜಿತ ತಕ್ಷಣ ಕಂಪ್ಯೂಟರಗಳಲ್ಲಿ ಶೇಖರಿಸಲಾದ ಗುಪ್ತ ಮಾಹಿತಿಗಳನ್ನು ಸೈಬರ್ ಕ್ರೈಮ್ ವಿಭಾಗಕ್ಕೆ ಕಳಿಸುತ್ತಾನೆ.ಮೂವರು ಸುರಕ್ಷಿತವಾಗಿ ಬಂಗಲೆ ಮನೆಯಿಂದ ಹೊರಗೆ ಬಂದಿದ್ದಾರೆ.
------------------------------------------******-----------------------------------------

ಇವೆಲ್ಲಾ ಬೆಳವಣಿಗೆಗಳು ಕೆಲವೇ ಗಂಟೆಗಳಲ್ಲಿ ನೆಡೆದು ಹೋಗಿವೆ,ಪೋಲೀಸ್ ಇಲಾಖೆ ರಾಜೇಶನನ್ನು ಬಂದಿಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದೆ, ಸೈಬರ್ ಕ್ರೈಮ್ ವಿಭಾಗಕ್ಕೆ ಅಜಿತ ಕಳುಹಿಸಿದ ಮಾಹಿತಿ ತಲುಪಿದೆ, ನಿಜ್ಮಂಗಳೂರಿನ ಪೋಲೀಸ್ ತಂಡ ಬಂಗಲೆ ಮನೆಯನ್ನು ಸುತ್ತುವರೆದು ಮನೆಯನ್ನು ವಶಕ್ಕೆ ತೆಗೆದುಕೊಂಡಿದೆ ವೀರಭದ್ರ ಗೌಡನನ್ನು ಬಂದಿಸಿದ್ದಾರೆ, ಊರಿನಲ್ಲಿನ ಸಂಶಯಾಸ್ವದ ವ್ಯಕ್ತಿಗಳನ್ನು ಬಂದಿಸಿದ್ದಾರೆ, ಪೋಲೀಸ್ ಅದಿಕಾರಿ ಊರವರೆಲ್ಲರನ್ನು ಕರೆಯಿಸಿ ಅಜಿತ, ಸಮರ್ಥ ಹಾಗೂ ಸುನಯನ ಮೂರು ಜನ ಮಕ್ಕಳ ಸಾಹಸ ಮತ್ತು ಒದಗಿಸಿದ ಪುರಾವೆಯನ್ನು ಶ್ಲಾಘಿಸಿ, ವೀರಭದ್ರ ಗೌಡರ ಕಡೆಯವರ ಕೈವಾಡ ಇಂತದಕ್ಕೆಲ್ಲ ಹೆದರಬೇಡಿ, ಊರಿನಲ್ಲಿ ಯಾವುದೇ ಭೂತ ಪ್ರೇತವಿಲ್ಲ ಎಲ್ಲಾ ಎಂದು ಹೇಳುತ್ತಿರುವಾಗ ದೂರದಲ್ಲಿ ಬಿಳಿ ಸೀರೆಯುಟ್ಟ ಸುಂದರವಾದ ಯುವತಿ ನೆಡೆದು ಹೋದಂತೆ, ಕಾಲ್ಗೆಜ್ಜೆಯ ಸದ್ದು ಹತ್ತಿರದಲ್ಲೇ ಯಾರೋ ನೆಡುದುಹೋಗುತ್ತಿರುವಂತೆ ಭಾಸವಾಗುತ್ತದೆ, ತನ್ನದು ಭ್ರಮೆ ಎಂದು ಕೊಳ್ಳುತ್ತಿರುವಾಗಲೇ ನಾಯಿಗಳು ಊಳಿಡಲು ಆರಂಭಿಸುತ್ತದೆ, ಭೂತ ಪ್ರೇತಗಳು ಮೊದಲು ಕಾಣಿಸಿಕೊಳ್ಳುವುದು ನಾಯಿಗಳಿಗೆ ಎಂದು ಓದಿದ ನೆನಪಾಗುತ್ತದೆ, ಇದ್ದಕ್ಕಿದ್ದಂತೆ ದೂರದಲ್ಲಿರುವ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡು ಉರಿಯಲು ಆರಂಭಿಸುತ್ತದೆ.
ಇದು ಮುಕ್ತಾಯವಲ್ಲ ಆರಂಭ, ಇದು ಆರಂಭವಲ್ಲ ಮುಕ್ತಾಯ~! ಮುಗಿಯಿತು...

Thursday, April 2, 2009

ಬಂಗಲೆ ಮನೆ ರಹಸ್ಯ ಭಾಗ -1

ಅದೊಂದು ಮಲೆನಾಡಿನ ಪುಟ್ಟ ಹಳ್ಳಿ.. ಹೆಸರು ತೋಟಾಪುರ, ಈ ಊರು ಕಾಡು, ಬೆಟ್ಟ, ಹೊಳೆ,ಕೆರೆ ಹಾಗೂ ಎಲ್ಲಿ ನೋಡಿದರೂ ಹಚ್ಚ ಹಸಿರಿನ ತೋಟ ಗದ್ದೆಗಳ ಸಾಲುಗಳು ಕಣ್ಮನ ಸೆಳೆಯುತ್ತವೆ, ಆದರೂ ಆ ಊರಿನಲ್ಲೇನೋ ತೊಂದರೆ ಇದೆ. ತೋಟಾಪುರದ ಊರಿನ ಕೊನೆಯಲ್ಲಿರುವ ಪುರಾತನ ಕಾಲದ ಭವ್ಯ ಬಂಗಲೆ ಎರಡು ಅಂತಸ್ಥಿನ ಮನೆ ಅತ್ಯಂತ ದೊಡ್ಡದಾಗಿದ್ದು ಬರೀ ಮನೆಯೆಂದು ಕರೆಯುವಂತಿಲ್ಲ ಅದು ಅರಮನೆಗಿಂತಲೂ ಭವ್ಯ ಬಂಗಲೆ, ಆದರೂ ಇದಕ್ಕೆ ಬಂಗಲೆ ಮನೆಯಂತಲೇ ಹೆಸರು ಬಂದಿದೆ, ಅಲ್ಲಿ ಒಳಗೆ ಏನಿದೆ, ಅಲ್ಲಿ ಮನುಷ್ಯರು ವಾಸವಿದ್ದಾರ?, ಎಲ್ಲವೂ ನಿಗೂಡ, ರಾತ್ರಿಯ ಹೊತ್ತಿನಲ್ಲಿ ಚಿಕ್ಕವರಿರಲಿ ದೊಡ್ಡವರು ಈ ಬಂಗಲೆಯ ಹತ್ತಿರ ಬರಲು ಹೆದರುತ್ತಾರೆ.. ಅದಕ್ಕೂ ಅನೇಕ ಕಾರಣಗಳಿವೆ,ಬಂಗಲೆ ಮನೆಯ ಬಗ್ಗೆ ಹಳ್ಳಿಯವರು ಒಬ್ಬೊಬ್ಬರು ಒಂದೊಂದು ತರಹ ಮಾತನಾಡಿಕೊಳ್ಳುವುದು ಕೇಳಸಿಗುತ್ತದೆ, ಜನರಲ್ಲಿ ಅದೇನೋ ಭಯವಿದೆ.. ಆ ಮನೆಯಲ್ಲಿ ಭೂತವಿದೆ, ನಿಧಿ ಕಾಯುವ ಸರ್ಪವಿದೆ ಎನ್ನುವ ಮಾತು ಕೇಳಿಬರುತ್ತಿವೆ,ಆ ಮನೆಯ ಒಳಗೆ ಪ್ರವೇಶ ಮಾಡಿದವರಿಗೆ ಹಲವು ಸಂಕಷ್ಟಗಳು ಎದುರಾಗುತ್ತವೆ.. ಬಂಗಲೆಯೊಳಗೆ ಏನಿದೆ ಎಂದು ಪರೀಕ್ಷೆ ಮಾಡಲು ಹೋದವರು ಜೀವಂತವಾಗಿ ಹೊರಗೆ ಬಂದಿಲ್ಲವಂತೆ... ಹೀಗೆ ಏನೇನೋ ವದಂತಿಗಳು, ಗಾಳಿ ಸುದ್ದಿ ಹಬ್ಬಿಕೊಂಡಿದೆ. ಇವೆಲ್ಲಕ್ಕೂ ಸಾಕ್ಷಿಯೆಂಬಂತೆ ಅನೇಕ ಘಟನೆಗಳು ಆಗಲೇ ನೆಡೆದು ಹೋಗಿದೆ.

--------------------------------------********-------------------------------------------- ತೋಟಾಪುರ ಎಂದಾಕ್ಷಣ ಮೊದಲಿಗೆ ಬರುವ ಹೆಸರು ವೀರಭದ್ರ ಗೌಡರದು.... ವೀರಭದ್ರ ಗೌಡರೆಂದರೆ.. ಇಡೀ ಊರಿನ ಜನರ ಹಿತ ಕಾಯುವ ಯಜಮಾನರಂತೆ.. ಇವರ ಮನೆಯಲ್ಲಿ ದಿನವೂ ಏನಿಲ್ಲವೆಂದರೂ ೨೫ ಜನರಿಗೆ ಅನ್ನ ಸಂತರ್ಪಣೆ ಇರುತ್ತದೆ, ಯಾರಿಗೇ ಏನಾದರು ತೊಂದರೆಯಾದರೆ ಹಣಕಾಸಿನ ಮುಗ್ಗಟ್ಟಿದ್ದರೆ ಗೌಡರ ಹತ್ತಿರ ಹೇಳಿಕೊಂಡರೆ ಅವರಿಗೆ ಇಲ್ಲಾ ಎನ್ನುವ ಜಾಯಮಾನದವರೇ ಅಲ್ಲ.. ವೀರಭದ್ರ ಗೌಡರ ಅಪ್ಪಣೆಯಿಲ್ಲದೆ ಯಾವುದೇ ಕೆಲಸ ಕಾರ್ಯಗಳು ಆರಂಭಗೊಳ್ಳುವುದಿಲ್ಲ... ವೀರಭದ್ರ ಗೌಡರ ಭಾವಚಿತ್ರ ಅನೇಕರ ಮನೆಯ ದೇವರ ಮನೆಯ ದೇವರ ಕೆಳಗಿನ ಸ್ಥಾನವನ್ನು ಪಡೆದುಕೊಂಡಿದೆಯೆಂದರೆ ತಪ್ಪಾಗಲಾರದು,ನಂತರದ ಸ್ಥಾನ ಊರಿನ ಹಿರಿಯ ಶಿವರಾಮನದು, ಶಿವರಾಮ ಎನ್ನುವ ಹೆಸರು ಮೊದಲು ಸಿವರಾಮ ಎಂದಾಯಿತು, ಸಿವರಾಮಯ್ಯ ಎಂದು ಕರೆಯುವುದು ಸಹ ಜನರಿಗೆ ಕಷ್ಟವಾದುದರಿಂದ ಸೀತಜ್ಜ ಎಂದು ಕರೆಯುವುದನ್ನು ರೂಡಿಸಿಕೊಂಡರು, ಸೀತಜ್ಜನನ್ನು ಕಂಡರೆ ಊರಿನವರಿಗೆಲ್ಲ ಅಚ್ಚು ಮೆಚ್ಚು, ಏಕೆಂದರೆ ಸೀತಜ್ಜ 35 ವರ್ಷದಿಂದ ನಾಟಿ ವೈದ್ಯನಾಗಿ ಅನೇಕ ಜನರ, ಬಸರಿ, ಬಾಣಂತಿಯರನ್ನು ಕಾಯಿಲೆ ಕಸಾಲೆಗಳಿಂದ ಕಾಪಾಡುತ್ತಾ ಬಂದಿದ್ದಾನೆ.

ಸೀತಜ್ಜ ೩ ಜನ ಮೊಮ್ಮಕ್ಕಳು ನಿಜ್ಮಂಗಳೂರು ಎನ್ನುವ ದೊಡ್ಡ ಪಟ್ಟಣವೊಂದರಲ್ಲಿ ತಮ್ಮ ತಂದೆ ತಾಯಿಯ ಜೊತೆಗೆ ವಾಸವಾಗಿದ್ದಾರೆ,ಮೊದಲನೇಯವನು ಅಜಿತ ಹತ್ತನೆ ತರಗತಿಯಲ್ಲಿ ಓದುತ್ತಿದ್ದಾನೆ , ೨ನೇಯವನು ಸಮರ್ಥ ೯ನೇ ತರಗತಿಯಲ್ಲಿ ಓದುತ್ತಿದ್ದಾನೆ, ೩ನೇಯವಳು ಮತ್ತು ಚಿಕ್ಕವಳು ಸುನಯನ(ಅವಳ ಕಣ್ಣುಗಳು ಅತ್ಯಂತ ಸುಂದರವಾಗಿದೆ ಅವಳ ಕಣ್ಣುಗಳನ್ನು ನೋಡಿಯೇ ಈ ಹೆಸಿರಿಟ್ಟರೇನೋ ಅನ್ನಿಸದೇ ಇರದು. )೭ನೇ ತರಗತಿಯಲ್ಲಿ ಓದುತ್ತಿದ್ದಾಳೆ, ಮನೆಯಲ್ಲಿ ಅವಳನ್ನು ಪ್ರೀತಿಯಿಂದ ಪುಟ್ಟಿ ಎಂದೇ ಕರೆಯುತ್ತಾರೆ, ಇವರೆಲ್ಲರಿಗೂ ಬೇಸಿಗೆಯ ರಜೆ ಆರಂಭವಾಗಿದೆ, ಅಜ್ಜನ ಮನೆಗೆ ಹೋಗಲು ಅತ್ಯಂತ ಉತ್ಸಹಿತರಾಗಿದ್ದಾರೆ. ಈ ಮೂವರು ಕಿಲಾಡಿಗಳ ಅಪ್ಪ ತನ್ನ ಹೆಂಡತಿ ಮತ್ತು ಮಕ್ಕಳ ಜೊತೆ ಬರುತ್ತಿಲ್ಲವಾದ್ದರಿಂದ ಮಕ್ಕಳಿಗೆ ಹಿತವಚನ ನೀಡುತ್ತಿದ್ದಾರೆ, "ಅಜ್ಜ ಅಜ್ಜಿಗೆ ತೊಂದರೆ ಕೊಡಬಾರದು.. ಮತ್ತು ಬಂಗಲೆ ಮನೆಯ ಕಡೆಗೆ ಹೋಗಬಾರದು" ಎಂದು. ಮಕ್ಕಳು ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಿದ್ದಾರೆ.. ಏನಿರಬಹುದು ಆ ಮನೆಯಲ್ಲಿ ಎನ್ನುವ ಕೂತುಹಲ ಮೂವರಲ್ಲಿ ಹುಟ್ಟಿಕೊಳ್ಳುತ್ತಿದೆ, ಅಪ್ಪ ಬೈಯ್ಯುತ್ತಾರೆನ್ನುವ ಹೆದರಿಕೆಗೆ ಆಯ್ತಪ್ಪ ಎಂದು ಮೂರು ಜನರು ತಲೆ ಅಲ್ಲಾಡಿಸುತ್ತಾರೆ. ಯಾವಾಗ ಅಜ್ಜನ ಮನೆ ತಲುಪುತ್ತೀವೋ, ಬಂಗಲೆ ಮನೆ ಹೇಗಿರಬಹುದು ಎನ್ನುವ ಆಲೋಚನೆ ಆರಂಭವಾಗಿದೆ. ಹೊರಡಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ, ಬಟ್ಟೆ ಬರೆಗಳನ್ನು ಜೋಡಿಸಿಕೊಳ್ಳುತ್ತಿದ್ದಾರೆ. ಬರುವ ಗುರುವಾರಕ್ಕೆ ಬಸ್ಸಿನ ಟಿಕೆಟ್ಟು ತೆಗೆಸಿಟ್ಟಿದ್ದಾರೆ.

-----------------------------------*********-------------------------------------------------
ಇತ್ತ ಬಂಗಲೆ ಮನೆಯ ಹತ್ತಿರ ಒಂದು ಅವಘಡ ಸಂಭವಿಸಿ ಹೋಗಿದೆ, ಅಪರಿಚಿತ ವ್ಯಕ್ತಿಯೊಬ್ಬ ರಕ್ತ ಖಾರಿಕೊಂಡು ಸತ್ತುಹೊಗಿದ್ದಾನೆ,ಮೈ ಮೇಲೆ ಯಾವುದೋ ಹರಿತವಾದ ಆಯುಧದಿಂದ ತಿವಿದ ಆಳವಾದ ಗುರುತು ಹಾಗೇ ರಕ್ತದಿಂದ ಹೆಪ್ಪುಗಟ್ಟಿ ಹೋಗಿದೆ, ಜನರ ಬಾಯಲ್ಲಿ ಆಗಲೇ ಹಲವು ಕತೆ ಪ್ರಾರಂಭವಾಗಿಬಿಟ್ಟಿವೆ.."ಬಂಗಲೆ ಮನೆಯ ನಿಧಿ ಕದಿಯಲು ಬಂದ ಕಳ್ಳನಿರಬೇಕು ಅಥವಾ ಬಂಗಲೆ ಮನೆಯ ಪರೀಕ್ಷೆ ಮಾಡಲು ಹೋಗಿರಬೇಕು ಅದಕ್ಕೇ ಈ ಶಿಕ್ಷೆ ಆಗಿದೆ ಎಂದು ಮಾತನಾಡಿಕೊಳ್ಳುತ್ತಾರೆ.. ಪೊಲೀಸರೂ ಈ ವಿಚಾರದಲ್ಲಿ ತಲೆ ಹಾಕಲು ಹೆದರುತ್ತಾರೆ, ಏಕೆಂದರೆ, ಎರಡು ವರ್ಷದ ಹಿಂದೆ ಹೊಸದಾಗಿ ಬಂದ ಎಸ್.ಐ ಕೂತೂಹಲ ತಾಳಲಾರದೆ ಬಂಗಲೆಗೆ ರಾತ್ರಿ ಯಾರಿಗೂ ಹೇಳದೆ ಒಬ್ಬನೇ ಬಂದಿದ್ದ, ಒಂದು ವಾರದ ನಂತರ ಅವನ ಹೆಣ ಪಕ್ಕದ ಕೆರೆಯಲ್ಲಿ ಕೊಳೆತು ನಾರುತ್ತಿತ್ತಂತೆ. ಅದು ಊರಿನವರೆಲ್ಲರಿಗೂ ತಿಳಿದ ವಿಷಯವಾಗಿದೆ.. ಅದಕ್ಕಾಗಿಯೇ ಪೋಲಿಸರಿಗೆ ಇತ್ತ ಸುಳಿಯಲು ಹೆದರುತ್ತಾರೆ.. ತಮ್ಮ ಹೆಂಡತಿಯ ತಾಳಿ ಗಟ್ಟಿಯಾಗಿರಲಿ ಎಂದು ಬೇಡಿಕೊಳ್ಳುತ್ತಿರುತ್ತಾರೆ.

ಕೆಳಗಿನ ಮನೆಯ ಬೀರ ಮಾದೇಶನನ್ನು ಉದ್ದೇಶಿಸಿ ಹೇಳುತ್ತಾನೆ "ನಾನು ನಿನ್ನೆ ರಾತ್ರಿ ತೋಟದ ಕಡೆ ಹೊಂಟಿದ್ನ ಬಂಗ್ಲೆ ಮನೆ ಎದ್ರಿಗೆ ನೋಡ್ತಿವ್ನಿ ಮನೆ ಹತ್ರ ಹೊಗೆ ಬರಕೆ ಸುರು ಆತು.. ನಿದಾನಕ್ ಗೆಜ್ಜೆ ಶಬ್ದ ನನ್ನ ಕಿವಿಗೆ ಬಿಳಕ್ ಹತ್ತು ಅಂತ್ನಿ... ನಾನು ಮರದ ಮರೆನಾಗೆ ನಿಂತ್ಕಂಡು ನೋಡ್ತಿವಿನಿ.. ನಿದಾನಕ್ಕೆ ಬಂಗ್ಲೆ ಮನೀದು ಬಾಗ್ಲು ಕಿಟಾ....ರ್ ಅಂತ ತೆಗಿತಲೆ... ಒಬ್ಳು ಬೆಳ್ಳಗಿರ ಐನಾತಿ ಹುಡ್ಗಿ ೧೮ ವರ್ಷ ಆಗಿರ್ಬೈಯ್ದು..ಹೊರಗೆ ಬಂದು ನಿಂತ್ಕಂಡ್ಲು,ಬಿಳೇ ಸೀರೆನ ಆಳವಾದ ಹೊಕ್ಕಳ ಕೆಳಗೆ ಉಟ್ಗಂಡಿದ್ಲು ಕಣ್ಲಾ.. ಆಹಾ ಎಂತ ಮೈಕಟ್ಟು ಅನ್ತಿಯಾ ನೋಡಿರೆ ನೋಡ್ತಾನೆ ಇರನಾ ಅಂತ ಅನ್ಸಂಗೆ ಐದಾಳಪಾ.. ನಂಗೆ ಮೈಯಲ್ಲ ಜುಂ ಗುಟ್ಟೋತು ಅಂತೀನಿ..ಎಂದು ಎಲೆ ಅಡಿಕೆಯ ಕವಳದಿಂದ ಇಡೀ ಬಾಯಿ ಕೆಂಪಗಾಗಿದೆ.. ತುಟಿಯಂಚಿನಲ್ಲಿ ನಗುತ್ತಾ ಕವಳ ತುಪ್ಪಿ ಕೇಳ್ಲಾ ಮುಂದೆ ಇಲ್ಲಿ.. ಅವ್ಳು ನನ್ನ ಕಡಿಗೆ ತಿರುಗಿ ನೆಡ್ಯಕ ಹತ್ತಿದ್ಲು,ಗೆಜ್ಜೆ ಗಲ್ ಗಲ್ ಅಂತ ಶಬ್ದ ಹತ್ರಾ ಆಗ್ತಾ ಆಗ್ತಾ ಒಂತರಾ ಎದೆ ಮೇಲೆ ಆಕಿ ನೆಡ್ಯಾಕ್ ಹತ್ತಾಳೇನೊ ಅನ್ನಂತಾ ಅನುಭವ ಸುರು ಆತು, ಆಕಿ ಹತ್ರಾ ಬಂದು ವಯ್ಯಾರದಿಂದ ಬಾಯಾಗೆ ನನ್ನ ನೋಡ್ತಾ ಉಗುರು ಕಡ್ಯಾಕೆ ಹತ್ತಿದ್ಲು.. ಕಡೀಕೆ ಎನಾತ್ಲಾ ಬೀರಾ...... ತಡಿಲಾ ಅದನ್ನೆ ಹೇಳಾಕ್ ಹೊಂಟೇನಿ.. ನಾನು ಗೆಜ್ಜೆ ನೋಡವ ಅಂತ ಕಾಲು ನೋಡ್ತ್ನಿ ........... ಪಾದ ಹಿಂದೆ ಮುಂದೆ ಐತೆ, ನಂಗೆ ಹೆದ್ರಿಕೆ ಸುರು ಆತು ಓಡಿ ಬಂದ್ಬಿಟ್ಟೆ.." ಮದೇಶ ಕಣ್ಣು ಕಣ್ಣು ಬಿಡುತ್ತಾನೆ. ಏನಾಗುತ್ತಿದೆಯೆಂದು ಆತನಿಗೆ ಅರ್ಥವಾಗುತ್ತಿಲ್ಲ
--------------------------------------------******---------------------------------------------

ಮಗಳು ಮೊಮ್ಮಕ್ಕಳ ಆಗಮನದಿಂದ ಸೀತಜ್ಜನ ಮನೆಯಲ್ಲಿ ಹಬ್ಬದ ವಾತವರಣ ಏರ್ಪಟ್ಟಿದೆ.. ಸೀತಜ್ಜನ ಹೆಂಡತಿ ರಮಾಮಣಿ ಸಂಭ್ರಮದಿಂದ ಅಡುಗೆ ಮನೆಯಲ್ಲಿ ಓಡಾಡುತ್ತಿದ್ದಾಳೆ, ಒಬ್ಬಟ್ಟು ಹೋಳಿಗೆಯ ಊಟ ಸಿದ್ಧವಾಗುತ್ತಿದೆ "ಅಳಿಯಂದರು ಬರಬಹುದಿತ್ತು" ಎಂದು ಮಗಳನ್ನು ಸೀತಜ್ಜ ವಿಚಾರಿಸುತ್ತಾರೆ ಅದಕ್ಕೆ ಮಗಳು ಸರಸ್ವತಿ ಹೇಳುತ್ತಾಳೆ "ಅವರಿಗೆ ತುಂಬಾ ಕೆಲಸ ಅಪ್ಪಯ್ಯ ಅದಕ್ಕೆ ಅವರು ನಮ್ಮ ಜೊತೆ ಬರಲಿಲ್ಲ" ಎಂದು. ಅಜಿತ ಅಪ್ಪ ಕೊಡಿಸಿದ(ಹಠ ಮಾಡಿ ತೆಗಿಸಿಕೊಂಡ) ಹೊಸ ಸೊನಾಕಿಯ ವೈನ್ 79 ಮೊಬೈಲ್ನಿಂದ ಅಪ್ಪನಿಗೆ ಫೋನ್ ಮಾಡಿ ಕ್ಷೇಮವಾಗಿ ತಲುಪಿದ್ದೆವೆಂದು ಹೇಳುತ್ತಾನೆ.. ಆ ಮೊಬೈಲಿನಲ್ಲಿ ಜಿ.ಪಿ.ಎಸ್(Global positioning system ಸೌಲಭ್ಯವನ್ನು ಹೊಂದಿದ್ದು ಯಾವುದೇ ಸ್ಥಳದ ನಕ್ಷೆಯನ್ನು ಉಪಗ್ರಹದ ಸಹಾಯದಿಂದ ತೋರಿಸುತ್ತದೆ..ಅಜಿತನಿಗೆ ಏನೋ ನೆನಪಾದಂತಾಗಿ ಮೊಬೈಲ್ ನಲ್ಲಿ ಮೆನು ಗೆ ಹೋಗಿ ಜಿ,ಪಿ.ಎಸ್ ಸಾಧನವನ್ನು ಉಪಗ್ರಹಕ್ಕೆ ಸಂಪರ್ಕಿಸಿ.. ಭಾರತದ ನಕ್ಷೆ ಗೆ ಹೋಗಿ ಅಲ್ಲಿಂದ ಕರ್ನಾಟಕದ ಇರುವ ಅಜ್ಜನ ಮನೆಯಾದ ತೋಟಾಪುರವನ್ನು ಹುಡುಕುತ್ತಿದ್ದಾನೆ... ಹೃದಯ ಬಡಿತ ಹೆಚ್ಚಾಗುತ್ತಿದೆ ನಿಧಾನವಾಗಿ ಭಾರತ-> ಕರ್ನಾಟಕ ಎಂದು ತೋರಿಸುತ್ತಿದೆ.. ಈಗ zoom ಮಾಡಿ ಹುಡುಕುತ್ತಿದ್ದಾನೆ ಕರ್ನಾಟಕದ ಕಿಡ್ನಿ! ಭಾಗದಲ್ಲಿರುವ ಊರು ತೋಟಾಪುರದ ಬಂಗಲೆ ಮನೆ ಎಲ್ಲಿದೆ ಎಂದು..ಊರಿನ ಕೆಲವು ಸ್ಥಳಗಳ ಗುರುತು ಸಿಗುತ್ತಿದೆ.. ರಸ್ತೆಯ ಪಕ್ಕದಲ್ಲಿರುವ ತೋಟಾಪುರದ ಬಸ್ಸ್ಟ್ಯಾಂಡ್ ಕಾಣಿಸುತ್ತಿದೆ ಜೊತೆಗೆ ಮಣ್ಣಿನ ರಸ್ತೆ ಕೇಸರಿ ಬಣ್ಣದಲ್ಲಿ ಎದ್ದು ಕಾಣುತ್ತಿದೆ ಹಾಗೆ ಮುಂದೆ ಬಲಭಾಗದಲ್ಲಿ ಕಾಣುತ್ತಿರುವ ಮಣ್ಣಿನ ದಾರಿ ಪಕ್ಕದಲ್ಲೊಂದು ಕಾಲುದಾರಿ ಶ್ರೀರಂಗ ಸ್ವಾಮಿ ದೇವಸ್ತಾನಕ್ಕೆ ಹೋಗುತ್ತದೆ..ಅದನ್ನು ದಾಟಿಕೊಂಡು ಹೋದರೆ ತೋಟಾಪುರದ ದಾರಿ.. ಮುಂದೆ ಬಂದರೆ ಒಟ್ಟಿಗೆ ೪ ಮನೆ ಕಾಣುತ್ತಿದೆ.. ಅದರ ಪರಿಚಯವೂ ಗೊತ್ತಾಗುತ್ತಿದೆ ಎರಡನೇ ಮನೆಯೇ ತನ್ನ ಅಜ್ಜನ ಮನೆ ಎಂದು. ಹಾಗೆ ಮುಂದೆ ಹೋದರೆ ಒಂದೇ ರಸ್ತೆ ಊರ ಕೊನೆಯ ಪ್ರದೇಶದಲ್ಲಿ ಒಂದು ಕೆರೆ ಕಾಣಿಸುತ್ತಿದೆ.. ಅದರ ಪಕ್ಕದಲ್ಲಿ ಒಂದು ದೊಡ್ಡದಾದ ಮನೆ ಹಳೆಯಮನೆಯೆಂದು ಗೊತ್ತಾಗುತ್ತಿದೆ.. ಇದೆ ಬಂಗಲೆ ಮನೆ ಆಗಿರಬಹುದೆಂದು ಅವನ ಮನಸ್ಸು ಹೇಳುತ್ತದೆ.. ಅಷ್ಟರಲ್ಲಿ ತಾಯಿ ಊಟಕ್ಕೆ ಕರೆಯುತ್ತಾಳೆ.. ಉಫ್ ಎಂದು ಹೊಸದೊಂದು ಲೋಕದಿಂದ ಹೊರಬಂದಂತ ಅನುಭವ ಅಜಿತನಿಗೆ ಆಗುತ್ತದೆ... ಮೊಬೈಲನ್ನು ಮಡಚಿಟ್ಟು ಊಟಕ್ಕೆ ಏಳುತ್ತಾನೆ.. ಮನಸ್ಸು ಬಂಗಲೆ ಮನೆಯನ್ನು ನೋಡಲೆ ಬೇಕು.. ಅಲ್ಲೇನಿರಬಹುದು ಎಂಬ ಕುತೂಹಲ ತಲೆಯೊಳಗೆ ಕೊರೆಯುತ್ತಿದೆ... ಇನ್ನೆಷ್ಟು ದಿನ ಕಾಯಬೇಕು.. ಆದರೂ ಕಾಯಲೇ ಬೇಕು....

ಮುಂದುವರೆಯುತ್ತದೆ................

Sunday, February 22, 2009

ಅದು ಇದು!!

ಅರೆ, ನನ್ನ ಬ್ಲಾಗ್ ಇದಾಗದೆ ತುಂಬಾ ದಿನ ಆಯ್ತು, ಏನಾದರೂ ಇದಾಗಿ ಬರಿಬೇಕು ಅಂತ ಅನಿಸುತ್ತಾ ಇದೆ, ನನ್ನ ತಲೆ ತುಂಬಾ ಅದೇ ವಿಚಾರ ತುಂಬಿಕೊಂಡಿದೆ, ಅದರ ಬಗ್ಗೆ ಬರೆಯಲೋ ಅಥವಾ ಇದರ ಬಗ್ಗೆ ಬರೆಯಲೋ ಅನ್ನೋದರಲ್ಲೆ ನನ್ನ ಬ್ಲಾಗ್ ಇದಾಗೋದೆ ಇಲ್ಲ... ಏನಾದರೂ ಆಗಲಿ ನಿಮಗೆ ತುಂಬಾ ಇದು ಮಾಡಬಾರದು, ಏನಾದರು ಬರೆಯಲೇ ಬೇಕು ಅಂತ ಬರಿತಾ ಇದೀನಿ, ಹ್ಮ್ ಗೊತ್ತಾಯ್ತು ನಿಮ್ಗೆ ಮೂಗಿನ ಮೇಲೆ ಅದು ಬರ್ತಾ ಇದೆ, ಕಿವಿ ಕೆಂಪಾಗ್ತ ಇದೆ.. ಅದು ಒಳ್ಳೇದಲ್ಲ.. ಬೀಪಿ ಇದಾಗುತ್ತೆ.. ಆಯಾಸ ಆಗುತ್ತೆ, ಅದಕ್ಕಿಂತ ಇದನ್ನ ಅದಾಗಿ ತಗೋಳೋದಕ್ಕಿಂತ ಸ್ವಲ್ಪ ಇದಾಗಿ ತಗೊಂಡು ನಕ್ಕು ಬಿಡಿ, ಹೌದು ನನ್ನ ಮೇಲೆ ಇದಿಲ್ಲ ಅಲ್ವ.. ಇದಾಗಿದ್ರೆ ಕ್ಷಮಿಸಿ... ನಿಮಗೆ ಅದು ಮಾಡ್ಬೇಕು ಅಂತ ಖಂಡಿತ ನನಗೆ ಇರಲಿಲ್ಲ..
ಓದೋಕೆ ಕಷ್ಟ ಆಗ್ತಿದೆಯಾ ಕ್ಷಮಿಸಿ... ನಾವು ದಿನ ನಿತ್ಯ ಕೆಲವು ಕಡೆ ಶಬ್ದಗಳು ನೆನಪಾಗದೆ ಹೋದಾಗ ಅದು ಇದು ಎನ್ನುವ ಪದ ಬಳಕೆ ಮಾಡುತ್ತೇವಲ್ಲವೆ ಅದು ಇದುವಿನ ಬದಲು ಅಲ್ಲಿ ಸೂಕ್ತವೆನಿಸಿದ ಪದ ಬಳಸಿ ಓದಲು ಪ್ರಯತ್ನಿಸಿ.
ಕೊನೆಯಮಾತು... ಏನಾದ್ರು ಓದೋ ಅಂತದ್ದು ಬರೆದಿರಬಹುದು ಎಂದು ಬಂದು ಬೇಸರ ಮಾಡಿಕೊಂಡಿದ್ದರೆ ಮತ್ತೊಮ್ಮೆ ನಿಮ್ಮ ಸ್ನೇಹಿತನ/ಸಹ ಬ್ಲಾಗಿಗನನ್ನು ಮನ್ನಿಸಿ.. ದಯವಿಟ್ಟು ತಮಾಷೆಯಾಗಿ ತೆಗೆದುಕೊಳ್ಳಿ ಎನ್ನುವ ಕೋರಿಕೆಯನ್ನು ತಮ್ಮ ಮುಂದಿಡುತ್ತ.. ಆದಷ್ಟು ಬೇಗ ಒಳ್ಳೆಯ ಲೇಖನ ಬರಿಯೋಕೆ ಪ್ರಯತ್ನ ಮಾಡ್ತೀನಿ. ಪ್ರೀತಿ ಸದಾ ಇರಲಿ.. ಹ್ಮ್.. ಅನಿಸಿಕೆ ಬರೆಯೋಕೆ ಮರೆಯಬೇಡಿ...

Sunday, February 8, 2009

ನನಗೆ ಇಷ್ಟವಾದ ನನ್ನ ಎರಡು ಕಮೆಂಟುಗಳು ನಿಮಗಾಗಿ!

ನಾನು ಮೊದಲು ಬ್ಲಾಗ್ ಗಳಲ್ಲಿ ನನ್ನ ಅನಿಸಿಕೆಗಳನ್ನು ಅತಿ ಚಿಕ್ಕದಾಗಿ ಬರೆಯುತ್ತಿದ್ದೆ ಚನ್ನಾಗಿದೆ ಅಂತಲೋ.. ಇಷ್ಟವಾಯಿತು ಅಂತಲೋ ಬರೆಯುತ್ತಿದ್ದೆ, ಆಗ ನಾನು ಯಾರದ್ದಾದರೂ ಬ್ಲಾಗಿನಲ್ಲಿ ದೀರ್ಘವಾದ ಅನಿಸಿಕೆ ಬರೆದಿರುವುದನ್ನು ನೋಡಿ ಅವರ ಬ್ಲಾಗಿನಲ್ಲೆ ಬರೆದಿದ್ದರೆ ಒಳ್ಳೆಯ ಲೇಖನವೇ ಆಗುತ್ತಿತ್ತು ಎಂದು ಮನಸಿನಲ್ಲಿ ಯೋಚಿಸುತ್ತಿದ್ದೆ, ಆದರೆ ಇತ್ತೀಚೆಗೆ ನಾನಗೂ ಅದೇ ಚಾಳಿ ಹತ್ತಿಕೊಂಡಿದೆ, ಬ್ಲಾಗುಗಳಿಗೆ ಅನಿಸಿಕೆ ಬರೆಯುತ್ತಾ ಬರೆಯುತ್ತಾ ನನ್ನ ಬ್ಲಾಗ್ ಅಪ್ಡೇಟ್ ಮಾಡೋದೆ ಮರೆತು ಬಿಡ್ತೀನಿ! ಅರೆ ತುಂಬಾ ಬರೆದಂತಿತ್ತು ನನ್ನ ಬ್ಲಾಗಲ್ಲಿ ಅಲ್ವಾ ಅಂತ ಯೋಚನೆ ಕಾಡೋಕೆ ಶುರುವಾಗುತ್ತೆ. ಮೊನ್ನೆಯೂ ಹಾಗೇ ನಗೆ ನಗಾರಿ ಬ್ಲಾಗಿನಲ್ಲಿದ್ದ ಸಚಿನ್ ಗೆ ಪ್ಯಾಡು ದೋಷ ಅಂತ ಒಂದು ಪೋಸ್ಟ್ ಗೆ ದೀರ್ಘವಾದದ್ದೊಂದು ಕಮೆಂಟನ್ನು ಕುಟ್ಟಿದ್ದೆ.. ಅದನ್ನು ನಗೆ ಸಾಮ್ರಾಟರು ಹೀಗೊಂದು ಪೂರಕ ಮಾಹಿತಿ ಒದಗಿಸಿದ್ದೇನೆಂದು ಕಮೆಂಟನ್ನು ಅಲ್ಲಿ ಪಬ್ಲಿಷ್ ಮಾಡಿದ್ದರು.. ಅದನ್ನು ಓದಿದ ನನಗೂ ಓಹ್ ಪರವಾಗಿಲ್ಲ ಕಮೆಂಟನ್ನು ಸ್ವಲ್ಪ ಮಟ್ಟಿಗೆ ಚನ್ನಾಗಿ ಬರೆದಿದ್ದೇನೆ ಎನಿಸಿತು.. ನನಗೆ ಇಷ್ಟವಾದ ನನ್ನ ಎರಡು ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ, ನಿಮಗೂ ಇಷ್ಟ ಆಗಬಹುದೇನೋ.....
ನಗೆ ನಗಾರಿ ಬ್ಲಾಗ್ ನ ಸಚಿನ್ ಗೆ ಪ್ಯಾಡು ದೋಷ ಎನ್ನುವ ಪೋಸ್ಟಿಗೆ ನಾನು ಕಮೆಂಟಿನಲ್ಲಿ ಕುಟ್ಟಿದ್ದು... ಯತಾವತ್ ಕತ್ತರಿಸಿ ಅಂಟಿಸಿದ್ದೇನೆ
ಹೌದು ಕೆಲವು ಅಂಪೈರುಗಳಿಗೆ ತೋರು ಬೆರಳಲ್ಲಿ ಕಂಟಕ ಇದೆ,ಒಟ್ಟು ಮೂರು ಬಾರಿ ಮಹಾನ್ ಆಟಗಾರನಿಗೆ ತೊಂದರೆ ಮಾಡಲು ಹೋಗಿ ತಮ್ಮ ಘನತೆ ಗೌರವ ಮಣ್ಣು ಪಾಲು ಮಾಡಿಕೊಂಡು ಆ ಮಹಾನ್ ಆಟಗಾರನ ಅಭಿಮಾನಿಗಳಿಂದ ಹಾಗೂ ಜನಸಾಮಾನ್ಯರಿಂದ ಛೀಮಾರಿ ಎಂದು ನಕಲಿಬಂಗಾರದ ಮಲೆಯಾಳಿಗಳ ಒಡೆತನದ ಕನ್ನಡ ಚಾನಲಿನಲ್ಲಿ ಮಹಾನ್ ಜೋತಿಷಿಯವರು ಅನೇಕ ತಿಂಗಳುಗಳ ಹಿಂದೆಯೇ ತಮ್ಮ ಕಾರ್ಯಕ್ರಮದಲ್ಲಿ ತಿಳಿಸಿದ್ದರು…!!
ಹೌದು ನವಗ್ರಹದ ಕನ್ನಡ ಚಾನಲ್ ನವರು ಸೆಹವಾಗ್ ಬೋಲ್ಡ್ ಆಗಿ ಔಟ್ ಆಗಿದ್ದರ ಬಗ್ಗೆ ಕೆಲವು ತಿಂಗಳ ಹಿಂದೆ ಬೌಂಡರಿ ಲೈನ್ ಎನ್ನುವ ಕಾರ್ಯಕ್ರಮದಲ್ಲಿ ವರದಿಗಾರರಿಂದ ಆಟದ ಮೈದಾನದಿಂದ ನೇರವಾದ ಆಂಕೋ ದೇಖಾ ಹಾಲ್!(ಇದು ಆಕಾಶವಾಣಿಯವರ ಕಣ್ಣಲ್ಲಿ ನೋಡಿದ್ದನ್ನು ಕೇಳುಗರಿಗೆ ಯತಾವತ್ ವಿವರಣೆ ನೀಡುವುದು) ನಂತೆ ಹೇಳಿದ
ಸ್ಟುಡಿಯೋ: ಬನ್ನಿ ಈಗ ನೇರವಾಗಿ ನಮ್ಮ ವರದಿಗಾರ ಮಣ್ಣಪ್ಪನವರಿಂದ ಸ್ಟೇಡಿಯಂ ನಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳೋಣಮಣ್ಣಪ್ಪನವರೇ…….. ಅಲ್ಲಿ ಏನು ನೆಡಿತಾ ಇದೆ ಮಣ್ಣಪ್ಪನವರೇ ನನ್ನ ಧ್ವನಿ ಕೇಳ್ತಾ ಇದೆಯಾ(ಮತ್ತೆ ಅದೇ ಮೇಲೆ ಕೇಳಿದ ಪ್ರಶ್ನೆ ರಿಪೀಟ್!)
ವರದಿಗಾರ (ನೇರ.. ಮೈದಾನದಿಂದ) ಹಾ.. ಕೇಳ್ತಾ ಇದೆ..ಸಣ್ಣಪ್ಪನವರೇ ಏನಾಗ್ತ ಇದೆ ಎಂದರೆ… ಆಟ ತುಂಬಾ ರೋಚಕ ಘಟ್ಟ ಕ್ಕೆ ಬಂದಿದೆ ನೋಡಿ ಸ್ಟೇಡಿಯಂ ನ ತುಂಬಾ ಕ್ರಿಕೆಟ್ ಅಭಿಮಾನಿಗಳು ತುಂಬಿ ತುಳುಕುತ್ತಿದ್ದಾರೆ.. ಬಾರೀ ಸಂಖ್ಯೆಯಲ್ಲಿ ಕ್ರಿಕೆಟ್ ವೀಕ್ಷಕರು ಬಂದಿದ್ದಾರೆ
ಸ್ಟುಡಿಯೋ ವರದಿಗಾರ: ಕ್ರಿಕೆಟ್ ವೀಕ್ಷಕರು ಬರದೇ ಇನ್ನು ಹಾಕಿ ವೀಕ್ಷಕರು ಬರುತ್ತಾರ ಎಂದು ಕೇಳುವಷ್ಟು ಸಿಟ್ಟು ಬರುತ್ತಿದೆ, ಅರ್ಧದಲ್ಲಿಯೇ ವರದಿಗಾರನ ಮಾತಿಗೆ ತಡೆಯೊಡ್ಡಲು ಮತ್ತೊಂದು ಪ್ರಶ್ನೆಯನ್ನು ಕೇಳಿಯೇ ಬಿಟ್ಟ ) ಸೆಹವಾಗ್ ಔಟ್ ಆಗಲು ಏನು ಕಾರಣ ಅವರು ಉತ್ತಮ ಫಾರಂ ನಲ್ಲಿ ಇದ್ರು??!! ಯಾಕೆ, ಯಾಕೆ ಹೀಗಾಯ್ತು ಅಂತೀರಿ?? ಚಂಡು ನೇರವಾಗಿ ಅವರ ವಿಕೇಟಿಗೆ ಬಡಿತಾ ಅಂತಾ? ಪ್ಯಾಡ್ ಅಡ್ಡಾ ಕೊಟ್ಟಿದ್ರೆ ಆಗ್ತಿರ್ಲಿಲ್ವಾ ಅಂತಾ?!!
ವರದಿಗಾರ (ನೇ.. ಮೈ, ಏರಿದ ಧ್ವನಿಯಲ್ಲಿ) ನೋಡಿ ಸಣ್ಣಪ್ಪನವರೆ ಅದೇನಾಯ್ತು ಅಂದ್ರೆ ಸೆಹವಾಗ್ ಉತ್ತಮ ಫಾರಂ ನಲ್ಲೇ ಇದ್ರೂ ಆದ್ರೆ ಅವರ ಬ್ಯಾಟು ಮತ್ತೆ ಪ್ಯಾಡಿನ ನಡುವೆ ಗ್ಯಾಪ್ ಜಾಸ್ತಿ ಇದ್ದಿದ್ರಿಂದ ಬೌಲ್ಡ್ ಆದ್ರೂ.. ಬೇಲ್ಸ್ ಗೆ ನೇರವಾಗಿ ಚಂಡು ಬಡೀತು…
ತಾಂತ್ರಿಕ ವರ್ಗ ಇವರ ಕರ್ಮಕಾಂಡ ನೋಡಲಾಗದೆ ಸಂಪರ್ಕ ಕಡಿತಗೊಳಿಸಿದರು…ಸ್ಟುಡಿಯೋದವ: (ಉಸ್ಸಪ್ಪಾ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ…) ಸಂಪರ್ಕ ಕಡಿತಗೊಂಡಿದೆ ಸಂಪರ್ಕ ಸಾಧ್ಯವಾಗುತ್ತಿಲ್ಲ, ಇನ್ನು ಕೆಲ ನಿಮಿಷಗಳ ನಂತರ ಮತ್ತೆ ನಮ್ಮ ಮಣ್ಣಪ್ಪನವರಿಂದ ನೇರವಾದ ಮಾಹಿತಿ ಪಡೆಯೋಣ,ಈಗ ಸಣ್ಣದೊಂದು ಬ್ರೇಕ್…..
ಹಾಗೆಯೇ ಪ್ರಕಾಶ್ ರವರ ಇಟ್ಟಿಗೆ ಸಿಮೆಂಟು ಬ್ಲಾಗ್ ನಲ್ಲಿ ನಾನು ಕರೆಯೋದು ಹೆಚ್ಚೋ..? ನೀನು ಬರುವದು ಹೆಚ್ಚೋ..? ಎನ್ನುವ ಪೋಸ್ಟಿಗೆ ಬರೆದ ದೀರ್ಘವಾದ ಕಮೆಂಟು ಹವ್ಯಕ ಭಾಷೆಯಲ್ಲಿದೆ, ಹವ್ಯಕ ಅರ್ಥವಾಗದವರು ಕ್ಷಮಿಸಿ, ಎನಪ್ಪಾ ಹವ್ಯಕರ ಹಾವಳಿ ಹೆಚ್ಚಯ್ತು ಅಂತ ಕೊರಗೋಕು ಹೋಗಬೇಡಿ
ಹಹ್ಹಹ್ಹ.. ಬಿಸಿ ಬೇಳೆ ಸಿಮ್-ಬ್ಳಬಾತ್...... ಚನಾಗಿ ಬರದ್ದೆ.. ಹಂಗೆ ಪ್ಲೇಟ್ ಕೆಡಗಿದ ತಕ್ಷಣ ಇನ್ನು ದೊಡ್ಡ ಪ್ಲೇಟ್ ತುಂಬಾ ಅದೇ ಲೋಳೆ ಬಾತ್ ತಂದು ಕೈಗೆ ಕೊಟ್ಟಿದ್ರೆ ಎಂತ ಮಾಡ್ತಿದ್ದೆ? ಅಂದಂಗೆ ಯಾವ ಫೋಟೋ ಬಗ್ಗೆ ಇಷ್ಟೆಲ್ಲ ಚರ್ಚೆ ಗೊತಾಗ್ಲೆ,ಬೇಲೂರು ಹಳೆ ಬೀಡು ನೆನ್ಪಿಟ್ಗಳಕ್ಕೆ ಆಗಲ್ಯ ಛೇ!
ಸೂಚನೆ: ಉದ್ದಿನ ವಡೆ ಮತ್ತೆ ಮಸಾಲೆ ದೋಸೆ ಪ್ರಿಯರು ಇದನ್ನ ಓದ್ಕ್ಯಂಡು ನಂಗೆ ಬೈಯ್ಯಡಿ,
ನನ್ನ ಅತ್ತೆ ಮಗಳು ಮಸಾಲೆ ದೋಸೆ ಮಾತ್ರ ತಿನ್ನದಿಲ್ಲೆ ಹೇಳ್ತ ಯಾವಗಲೂ, ಎಂತಕ್ಕೆ ಅಂತ ವಿಚಾರ್ಸಿರೆ, ಅವಳ ಪ್ರೆಂಡ್ ಅಪ್ಪಂದು ಒಂದು ಹೋಟಲ್ ಇದ್ದಡ, ಅವಳ ಮನೆಗೆ ಇವಳು ಒಂದಿನ ಹೋಗಿದ್ಲಡ ಅವ್ರ ಮನೇಲಿ ಆಲೂಗಡ್ಡೆನ ಪಲ್ಯಕ್ಕಾಗಿ ನುರಿತಾ ಇದಿದ್ವಡ ಅದನ್ನ ನೋಡ್ಕ್ಯಂಡು ಬಂದ ಮೇಲಿಂದ ಇವಳು ಮಸಾಲೆ ದೋಸೆ ಅಂದ್ರೆ ದೂರ ಓಡಿ ಹೋಗ್ತ.. ಎಂತಕ್ಕೆ ಅಂತ ಅರ್ಥ ಆಗಲ್ಲೆ ಅಲ್ದ... ಅವರ ಮನೇಲಿ ಪಲ್ಯಕ್ಕಾಗಿ ಆಲೂ ಗಡ್ಡೆನ ನೆಲದಮೇಲೆ ರಾಶಿ ಹಾಕ್ಯಂಡು ತುಳಿತಾ ಇದಿದ್ವಡ ಮೂರು ನಾಲ್ಕು ಜನ ಬರಿಗಾಲಲ್ಲಿ... ! ಇನ್ನು ಕೆಲವು ಕಡೆ ರಾಗಿ ಮುದ್ದೆ ರಾಶಿ ರಾಶಿ ಮಾಡಿ ಇಡ್ತ್ವಡ ಅದನ್ನ ನೋಡಿರೂ ಯಾರು ರಾಗಿ ಮುದ್ದೆ ತಿಂತ್ವಲ್ಲೆ.
ಹಂಗೆ ನನ್ನ ಸೋದರಮಾವ ಯಾವಾಗಲು ಹೇಳ ಹೋಟೆಲ್ ಜೋಕ್ ಬರ್ತಿ ಇಷ್ಟ.. ಅದನ್ನ ಸ್ಪಲ್ಪ ಬಿಡಿಸಿ ದೊಡ್ಡಕ್ಕೆ ಮಾಡಿ ನಿಂಗೂ ಹೇಳವು ಅನುಸ್ತಾ ಇದ್ದು..ಒಂದು ಹೋಟೆಲ್ ಇತ್ತಡ ಅಲ್ಲಿ ವಡೆ ತುಂಬಾ ರುಚಿ ಇರ್ತಿತ್ತಡ, ಅದೂ ಅಲ್ದೆ ವಡೆ ಮಾಡ ಭಟ್ಟಂಗೆ ಎಡಗೈ ಇರ್ಲ್ಯಡ ಆದ್ರೂ ವಡೆನ ರುಚಿ ರುಚಿಯಾಗಿ ಮಾಡ್ತಿದ್ನಡ..ಅಡುಗೆ ಮನೆಗೆ ಯಾರನ್ನು ಬಿಡ್ದೆ ಬಾರಿ ಸೀಕ್ರೇಟ್ ಆಗಿ ಇಟ್ಟಿದ್ವಡ ವಡೆ ಮಾಡ ವಿಧಾನನ, ಒಂದಿನ ಎರಡು ಜನ ಪ್ರೆಂಡ್ಸ್ ಮಾತಡ್ಕ್ಯಂಡ್ವಡ ಹೆಂಗಾರು ಮಾಡಿ ಅಡುಗೆ ಮನೆಗೆ ಹೋಗಿ ನೋಡಕ್ಕು ಅಂತ ಹೋಟೆಲ್ ಹಿಂಬಾಗಕ್ಕೆ ಹೋಗಿ ನೋಡಿದ್ವಡ ಇವರ ಅದೃಷ್ಟಕ್ಕೆ ಒಂದು ಕಿಟಕಿ ಓಪನ್ ಆಗಿತ್ತಡ ಹಣಕಿ ನೋಡಿರೆ ಅಲ್ಲಿ ಮೂರು ಜನ ಅಡುಗೆ ಬಟ್ಟರು ಇದಿದ್ವಡ ಒಬ್ಬವ ಹಿಟ್ಟು ಬೀಸ್ತಾ ಇದಿದ್ನಡ ಬೀಸಿ ಬೀಸಿ ಸುಸ್ತಾಗಿ ಅವನ ಮೈ ಪೂರ್ತಿ ಬೆವರಿ ಹೋಗಿತ್ತಡ ಹಣೆ ಮೇಲೆ ಬೆವರು ನೀರು ಸಾಲು ಗಟ್ಟಿತ್ತಡ. ತಕ್ಷಣ ಉಸ್ ಅಂತ ಆ ಹಣೆ ಮೇಲಿನ ನೀರನ್ನ ಕೈಯಾಗೆ ವರಸ್ಕ್ಯಂಡು ಕೈಲಿದ್ದ ನೀರನ್ನ ಒರಳಿಗೆ ಪ್ರೋಕ್ಷಣ್ಯ ಮಾಡಿಕ್ಯಂಡು ಹಿಟ್ಟು ಬೀಸದರಲ್ಲಿ ಬಿಜಿ ಆಗಿದ್ನಡ.. ಅದನ್ನ ನೋಡಿದವ್ರು ಇಬ್ಬರೂ ಓಡಿ ಹೋಗಿಬಿಟ್ವಡ, ಅವ್ವು ಎಲ್ಲರ ಹತ್ರನೂ ನಾವು ವಡೆ ತಿನ್ನದಾರೆ ಇದೆ ಹೋಟಲ್ಲೆ ಸೈ ಅಂತ ಹೇಳ್ಕ್ಯಂಡ್ ಬಿಟಿದ್ವಡ ಅದಕ್ಕಾಗಿ ಯಾರತ್ರನೂ ವಡೆ ಮಾಡವ ಹಂಗೆ ಮಾಡ್ತ ಅಂತ ಹೇಳಕ್ಕೆ ಸುಮಾರಾತು ಅಷ್ಟರ ಮೇಲೆ ಆ ಹೋಟ್ಲಿಗೆ ಹೋದ್ರು ವಡೆ ಮಾತ್ರ ತಿಂತಿರ್ಲ್ಯಡ, ಸ್ಪಲ್ಪ ದಿನ ಆತಡ ದಿನದಿಂದ ದಿನಕ್ಕೆ ವಡೆ ರುಚಿ ಹೆಚ್ತಾನೆ ಹೋತಡ..
ಅಡುಗೆ ಮನೆ ಬಾಗಿಲಿಗೆ ಮುಂಚೆ ಇದಿದ್ದಕ್ಕಿಂತ ದೊಡ್ಡ ಬೋರ್ಡ್ ಹಾಕಿದ್ವಡ ಅದೂ ಕೆಂಪಿ ಅಕ್ಷರದಲ್ಲಿ.. ಕಡ್ಡಾಯವಾಗಿ ಅಡುಗೆ ಬಟ್ಟರನ್ನು ಬಿಟ್ಟು ಮತ್ಯಾರಿಗು ಪ್ರವೇಶವಿಲ್ಲ ಅಂತ, ಮೇಲೆ ಹೇಳಿದಂಗೆ ಮತೊಬ್ಬವಂಗೂ ಏನಪಾ ಇಷ್ಟು ಗುಟ್ಟು ಮಾಡ್ತ್ವಲಾ ಅಂತ ಹಿಂದಿನ ಕಿಟಕಿಲಿ ಹಣಕಿ ನೋಡಿದ್ನಡಒಬ್ಬವ ಅಲ್ಲಿ ಹಿಂದಿನ ದಿನ ರಾತ್ರಿ ಬೀಸಿಟ್ಟ ಹಿಟ್ಟನ್ನ ಕೈಯಾಗೆ ಒಂದ್ಸರಿ ತೊಳಸ್ತಾ ಇದಿದ್ನಡ, ಅವ ತುಂಬಾ ಹುಷಾರಿದಿದ್ನಡ.. ಹಿಟ್ಟಲ್ಲಿ ಎನಾರು ಬಿದಿದ ಪರಿಶೀಲನೆ ಮಾಡಕ್ಕಾಗಿ ಕೈಹಾಕಿ ತೊಳಸ್ತಿದ್ನಡ, ಹಾ ಸಿಕ್ಕೇ ಬಿಡ್ತು ಅಂತ ಮತೋಬ್ಬವ ಅಡುಗೆ ಭಟ್ಟಂಗೆ ತೋರ್ಸಿದ್ನಡ ಇಲಿ ಬಾಲ ಹಿಡಿದು.. ಅದ್ರ ಮೈಗೆ ಬಡ್ಕಂಡಿರ ಹಿಟ್ಟನ್ನ ಪಾತ್ರಿಗೆ ಸವರಿ ಹಾಕ್ಯಂಡು ಇಲಿ ತಗಂಡು ಹೋಗಿ ಹೊರಗೆ ವಗದಿಕ್ಕಿ ಬಂದ್ನಡ, ಅಲ್ಲೆ ಪಕ್ಕದಲ್ಲಿ ವಡೆನ ಕೈ ಇಲ್ದೇ ಹೋದ ಭಟ್ಟ ಕಟ್ತಾ ಇದಿದ್ನಡ ಅವ ಬಲಗೈಲಿ ಹಿಟ್ಟಿನ ಉಂಡೆ ಕಟ್ಗ್ಯಳದು ಎಡಗಡೆ ಕಂಕಳಲ್ಲಿ ಇಟ್ಗಂಡು ಅದಕ್ಕೆ ವಡೆ ಆಕಾರ ಕೊಡ್ತಿದ್ನಡ ಅದ್ಕೆ ವಡೆ ಅಷ್ಟು ರುಚಿ!
ಮತ್ತೆ ಹೇಳ್ತಿ ಈಗ ಈ ಕಮೆಂಟ್ ಓದಿದವ್ರು ಯಾರು ನಂಗೆ ಬೈಯಲೆ ಇಲ್ಲೆ... ಆನಂತು ಮುಂಚೇನೆ ಹೇಳಿಗಿದಿ, ಎನಗೆ ಬೈಯ್ಯಲಿಲ್ಲೆ ಅಂತ..