ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Friday, February 26, 2010

ಹೋಳಿ ಬಂತು ಹೋಳಿ

    ಭಾರತವು ಹಬ್ಬಗಳ ತವರೂರಾಗಿದೆ, ಪ್ರತಿ ವರ್ಷವೂ ಆಚರಿಸುವ ದೀಪಾವಳಿ, ಗಣೇಶ ಚತುರ್ಥಿಯಂತಹ ಭಕ್ತಿ ಹಬ್ಬದ ಜೊತೆಗೆ ಈ ಬಣ್ಣದ ಹಬ್ಬವಾದ ಹೋಳಿ ಹಬ್ಬವೂ ಒಂದು, ಇದು ಜನರಿಗೆ ಮನರಂಜನೆಯನ್ನೂ, ಪುನರುತ್ಸಾಹವನ್ನೂ ತುಂಬುವಲ್ಲಿ ಯಶಸ್ವಿಯಾಗಿದೆ.


ಹೋಳಿ ಬಂತೆಂದರೆ ಅದೇನೋ ಸಂಭ್ರಮ, ಸ್ನೇಹಿತರು, ಬಂಧು ವರ್ಗದವರೊಂದಿಗೆ ಸೇರಿಕೊಂಡು ಸಂತಸದಿಂದ ಕುಣಿದು ಒಬ್ಬರಿಂದೊಬ್ಬರಿಗೆ ಬಣ್ಣ ಹಚ್ಚಿಕೊಳ್ಳುವುದರ ಮೂಲಕ ಖುಷಿಯನ್ನು ಹಂಚಿಕೊಳ್ಳುವ ಹೋಳಿ ಯಾರಿಗೆ ತಾನೇ ಇಷ್ಟವಿಲ್ಲ? ಈ ರೀತಿಯ ವರ್ಣಮಯವಾದ ಹೋಳಿ ಹಬ್ಬಕ್ಕೆ ಪುರಾಣ ಕಥೆಯಿದೆ.

ಶಿವನ ಮೊದಲ ಪತ್ನಿಯಾದ ದಾಕ್ಷಾಯಿಣಿಯ ಸಾವಿನ ನಂತರ ಶಿವ ಸುದೀರ್ಘವಾದ ತಪಸ್ಸಿಗೆ ಕುಳಿತುಕೊಂಡಾಗ ಇತ್ತ ದಾಕ್ಷಾಯಿಣಿಯು ಪಾರ್ವತಿಯಾಗಿ ಹುಟ್ಟಿ ಶಿವನನ್ನು ವರಿಸಬೇಕೆಂದು ಆಶಿಸುತ್ತಾಳೆ, ಆದರೆ ಶಿವನಿಗೆ ಇದರ ಪರಿವೆಯೇ ಇರುವುದಿಲ್ಲ, ಆಗ ದೇವತೆಗಳು ಶಿವನ ತಪೋಭಂಗ ಮಾಡಬೇಕೆಂದು ಮನ್ಮಥನಿಗೆ ಹೇಳಿದಾಗ ಮನ್ಮಥನು ಮೋಹಕ ನೃತ್ಯ ಮಾಡಿ ಹೂ ಬಾಣವನ್ನು ಶಿವನ ಮೇಲೆ ಪ್ರಯೋಗಿಸಿದಾಗ ಶಿವನು ಕೋಪೋದ್ರಿಕ್ತನಾಗಿ ಮನ್ಮಥನನ್ನು ತನ್ನ ಮೂರನೆ ಕಣ್ಣನ್ನು ತೆರೆದು ಸುಟ್ಟು ಬಿಡುತ್ತಾನೆ. ನಂತರ ರತಿಯು ಶಿವನ ಬಳಿ "ತನ್ನ ಗಂಡನನ್ನು ಬದುಕಿಸು" ಎಂದು ಬೇಡಿಕೊಂಡಾಗ ಶಿವನು ಹೇಳುತ್ತಾನೆ " ನಿನಗೆ ನಿನ್ನ ಗಂಡನು ವರ್ಷದ ಒಂದು ದಿನ ನಿನಗೆ ಶರೀರವಾಗಿ ಸಿಗುತ್ತಾನೆ ಎಂದು ವರವನ್ನು ಕೊಡುತ್ತಾನೆ, ಆ ದಿನವನ್ನೆ ಹೋಳಿ ಹಬ್ಬದ ದಿನವಾಗಿ ಆಚರಿಸಲಾಗುತ್ತಿದೆ, ಹೋಳಿ ಹಬ್ಬದ ಹಿಂದಿನ ದಿನ ರಾತ್ರಿ ಕಾಮನ ಪ್ರತಿಕೃತಿಯನ್ನು ಮಾಡಿ ತಾವು ಮಾಡಿದ ತಪ್ಪೆಲ್ಲವೂ ಅದರ ಜೊತೆಯಲ್ಲಿ ಸುಟ್ಟು ಬೂದಿಯಾಗಲೆಂದು ದಹನ ಮಾಡುತ್ತಾರೆ.

ಹಳ್ಳಿಗಳಿಗಿಂತಲೂ ನಗರ ಪ್ರದೇಶಗಳಲ್ಲಿ ಹೋಳಿಯ ಆರ್ಭಟ ಹೆಚ್ಚುತ್ತಿದೆ, ಎಲ್ಲರೂ ಸೇರಿ ಖುಷಿಯಿಂದ ಬಣ್ಣ ಎರಚಿಕೊಳ್ಳುವ ಹಬ್ಬಕ್ಕೆ ಜಾತಕ ಪಕ್ಷಿಯಂತೆ ಕಾಯುವವರೂ ಇದ್ದಾರೆಂದರೆ ಆಶ್ಚರ್ಯವೇನಿಲ್ಲ.

ಹೋಳಿ ಬಂತೆಂದರೆ ಖುಷಿಯ ಜೊತೆಗೆ ಸ್ವಲ್ಪ ಬೇಸರ ತರಿಸುವ ಸಂಗತಿಗಳನ್ನು ಇಲ್ಲಿ ಬರೆಯದೇ ಇರಲು ಸಾಧ್ಯವಿಲ್ಲ ಗಲ್ಲಿ ಗಲ್ಲಿ, ಪ್ರತಿ ಕೇರಿಯವರು ಬೇರೆ ಬೇರೆ ಕಾಮನ ಪ್ರತಿಕೃತಿಯನ್ನು ಇಟ್ಟುಕೊಂಡು ವಾಹನ ಸವಾರರನ್ನು ಅಡ್ಡ ಗಟ್ಟಿ ಹಣ ಕೀಳುವ ದೃಶ್ಯ ಚಿಕ್ಕ ಪಟ್ಟಣ/ನಗರ ಗಳಲ್ಲಿ ನೋಡಲು ಸಿಗುತ್ತದೆ. ಕೆಲವು ಕಿಡಿಗೇಡಿಗಳು ಮಾಡುವ ಇಂತಹವುದರಿಂದ ಹೋಳಿಯ ಬಗ್ಗೆ ಕೆಲವರಿಗೆ ಬೇಸರವನ್ನು ತಂದಿದೆ.

ಹಿಂದಿನ ಕಾಲದಲ್ಲಾದರೆ ಮನೆಯಲ್ಲಿಯೇ ಬಣ್ಣಗಳನ್ನು ನೈಸರ್ಗಿಕವಾಗಿ ತಯಾರಿಸುತ್ತಿದ್ದರು, ಇದರಿಂದ ತ್ವಚೆಗೆ ಹಾನಿಯಾಗುತ್ತಿರಲಿಲ್ಲ, ಆದರೆ ಕಾಲ ಬದಲಾದಂತೆ ಬ್ರೋಮೈಡ್ ಮುಂತಾದ ರಾಸಾಯನಿಕಗಳಿಂದ ಬಣ್ಣ ತಯಾರಿಸುತ್ತಿರುವುದರಿಂದ ಅಲರ್ಜಿ, ಕಣ್ಣು ಶ್ವಾಸಕೋಶ ಮುಂತಾದವುಗಳಿಗೆ ಹಾನಿಯಾಗುತ್ತದೆ.ಆದ್ದರಿಂದ ಬಣ್ಣಗಳ ಹಬ್ಬ ಆಚರಿಸುವವರು ನಮ್ಮ ತ್ವಚೆಗೆ ಹಾನಿಯಾಗದಂತಹ ನೈಸರ್ಗಿಕ ಬಣ್ಣಗಳನ್ನೇ ಬಳಸಿ ಸುರಕ್ಷಿತ ಹಾಗೂ ಮೋಜಿನ ಹೋಳಿ ಆಚರಿಸಿ.

ನಿಮಗೆಲ್ಲರಿಗೂ ಹೋಳಿ ಹಬ್ಬದ ಹಾರ್ಧಿಕ ಶುಭಾಶಯಗಳು ಮುಂಚಿತವಾಗಿ - ಚೈತ್ರಿಕಾ ಆದಿತ್ಯ

Posted by: Chaitrika Aditya