ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Friday, January 30, 2009

ಕೇರಳ ನಾ ಕಂಡಂತೆ..

ಇದು ಒಂದು ಸಂಪೂರ್ಣವಾದ ಮಾಹಿತಿ ಹೊತ್ತ ಪ್ರವಾಸ ಕಥನವಾಗಲಾರದು ಏಕೆಂದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಇರುವ ದೂರ ನೆನಪಿನಲ್ಲಿಟ್ಟುಕೊಳ್ಳುವುದು, ಒಂದೂರಿನಿಂದ ಇನ್ನೊಂದು ಊರಿನ ರಸ್ತೆಯ ಮಾರ್ಗವನ್ನು ತಿಳಿಸುವುದು ನನ್ನ ಜಾಯಮಾನಕ್ಕೆ ಹೊಂದುವಂತದ್ದಲ್ಲ.

ನಾನು ಡಿಸೆಂಬರ್ ೨೬ರಂದು ನನ್ನ ನೆಂಟರಿಷ್ಟರ ಜೊತೆ ಕೇರಳಕ್ಕೆ ಹೋಗಿ ೫ದಿನಗಳ ಪ್ರವಾಸ ಮಾಡಿಬಂದಿದ್ದೇನೆ, ನಾವು ಒಟ್ಟು ಹದಿನೈದು ಜನರು ಮಿನಿ ಬಸ್ಸು ಮಾಡಿಸಿಕೊಂಡು ಬೆಂಗಳೂರಿನಿಂದ ೨೬ರ ರಾತ್ರಿ ಹೊರಟೆವು.. ಶ್ರೀರಂಗ ಪಟ್ಟಣ, ಮೈಸೂರು ಮಾರ್ಗವಾಗಿ ಹೊರಟೆವು.. ರಾತ್ರಿ ೨ಗಂಟೆಯ ಸುಮಾರಿಗಿರಬಹು... ನಮಗೆಲ್ಲಾ ಗಾಢ ನಿದ್ದೆ ಹತ್ತಿದ್ದ ಸಮಯ, ನಮ್ಮ ಬಸ್ಸು ವಿಚಿತ್ರವಾಗಿ ಓಡುತ್ತಿರುವಂತೆ ಮುಂದೆ ಕುಳಿತಿದ್ದ ನನ್ನ ಮಾವನಿಗೆ ಭಾಸವಾಯಿತಂತೆ, ತಕ್ಷಣ ಪಕ್ಕದಲ್ಲಿ ಕುಳಿತಿದ್ದ ಅಣ್ಣನನ್ನು ಎಬ್ಬಿಸಿದರು, ಮುಂದೆ ಕುಳಿತಿದ್ದ ಅವರಿಬ್ಬರಿಗೆ ಏನಾಗುತ್ತಿರಬಹುದು ಎನ್ನುವುದು ಅರಿವಿಗೆ ಬಂದಾಗಿತ್ತು ಅದೇನೆಂದರೆ ಬಸ್ಸಿನ ಡ್ರೈವರನಿಗೆ ನಿದ್ದೆಯ ಜೊಂಪು ಹತ್ತಲು ಆರಂಭವಾಗಿತ್ತು ಆದ್ದರಿಂದ ಬಸ್ಸು ರಸ್ತೆಯ ಬಲಭಾಗಕ್ಕೆ ಬರುವುದು.. ವೇಗ ಕಳೆದುಕೊಳ್ಳುವುದು ಮತ್ತೆ ಎಡಭಾಗಕ್ಕೆ ಬಂದು ವೇಗವಾಗಿ ಓಡುವುದು ಆಗುತ್ತಿತ್ತು.. ತಕ್ಷಣವೇ ಅವರು ಎದ್ದು ಹೋಗಿ ಡೈವರನನ್ನು ಮಾತನಾಡಿಸಿ ರಸ್ತೆಯ ಪಕ್ಕದಲ್ಲಿ ಬಸ್ಸನ್ನು ನಿಲ್ಲಿಸಿ ನಿದ್ರಿಸಲು ಸೂಚಿಸಿದರು.. ಆದರೆ ಡ್ರೈವರನಿಗೆ ಆಯಾಸವಾಗಿ ನಿದ್ರೆ ಬರುತ್ತಿದ್ದರೂ ಅಲ್ಲಿ ಆತನಿಗೆ ಮತ್ತೊಂದು ಸಮಸ್ಯೆಯು ತಲೆದೋರಿತ್ತು ಅದೇನೆಂದರೆ ನಾವು ದಟ್ಟ ಅರಣ್ಯದ ನಡುವೆ ಇದ್ದೇವೆ ಆದ್ದರಿಂದ ಇಲ್ಲೆಲ್ಲೂ ನಿಲ್ಲಿಸಲು ಬರುವುದಿಲ್ಲ.. ನಿಲ್ಲಿಸಿದರೆ ಕಳ್ಳರು, ನಕ್ಸಲರು ಇರುವ ಸಾಧ್ಯತೆಯಿದ್ದು ಇನ್ನು ೨ಕಿಲೋ ಮೀಟರ್ ಹೋದರೆ ಕರ್ನಾಟಕದ ಗಡಿ ಮುಗಿಯುತ್ತದೆ ಅಲ್ಲಿರುವ ಚೆಕ್ ಪೋಸ್ಟನ ಹತ್ತಿರ ನಿಲ್ಲಿಸುತ್ತೇನೆ ಎಂದು ಹೇಳಿ ಚೆಕ್ ಪೋಸ್ಟನ ಬಳಿ ಬಸ್ಸನ್ನು ಕೊಂಡೊಯ್ದು ನಿಲ್ಲಿಸಿ ಘಂಟೆ ನಿದ್ರೆ ಮಾಡಿದ ಆತ ಸುರಕ್ಷಿತವಾಗಿ ನಮ್ಮನ್ನು ಕೇರಳ ತಲುಪಿಸಿದ.
ಇಲ್ಲಿ ನಾನು ಟ್ರಾವೆಲ್ ಏಜನ್ಸಿಗಳ ಬಗ್ಗೆ ಬರೆಯಲೇ ಬೇಕು.. ಡ್ರೈವರುಗಳು ಎಷ್ಟೇ ದೀರ್ಘವಾದ ಪ್ರಯಾಣಕ್ಕೆ ಹೋಗಿಬಂದಿದ್ದರೂ ಅವರಿಗೆ ಸ್ವಲ್ಪವೂ ಸುಧಾರಿಸಿಕೊಳ್ಳಲು ಬಿಡದೆ ಮತ್ತೊಂದು ಟ್ರಿಪ್ ಗೆ ಕಳಿಸುತ್ತಾರಂತೆ, ನಮ್ಮ ಮಿನಿ ಬಸ್ಸನ್ನು ಓಡಿಸಲು ಬಂದ ಚಾಲಕನು ಹಿಂದಿನ ದಿನವಷ್ಟೇ ಶಬರಿಮಲೆಯಿಂದ ಬೆಂಗಳೂರಿಗೆ ಬಂದಿದ್ದನಂತೆ.. ತಕ್ಷಣವೇ ನಮ್ಮ ಟ್ರಿಪ್ಗೆ ಕಳಿಸಿದ್ದರು.. ಇವಿಷ್ಟೇ ಅಲ್ಲದೆ ಕುಂಭಕರ್ಣನಂತೆ ನಿದ್ದೆ ಹೊಡೆಯುವ ಕ್ಲೀನರನ್ನು ಸಹ ಕಳಿಸಿದ್ದರು, ಆತನಿಗೆ ಸ್ಪಲ್ಪವಾದರು ಮೆದುಳು ಚುರುಕಾಗಿದ್ದರೆ ಆಗುತಿತ್ತು, ಕಿರಿದಾದ ಜಾಗಗಳಲ್ಲಿ, ಮತ್ತು ಬಸ್ಸನ್ನು ರಿವರ್ಸ್ ತೆಗೆದುಕೊಳ್ಳುವಾಗ ಡ್ರೈವರನಿಗೆ ಮಾರ್ಗದರ್ಶನ ನೀಡಿ ಸಹಾಯ ಮಾಡಬೇಕೆನ್ನುವ ಸಾಮಾನ್ಯ ಜ್ಞಾನವಾದರೂ ಇತ್ತಾ ಅದೂ ಇರಲಿಲ್ಲ, ನಾವು ಅವನಿಗೆ ಬೈಯ್ಯಲು ಆರಂಭಿಸಿದ ನಂತರ ಸ್ವಲ್ಪ ಸುಧಾರಿಸಿದಂತೆ ನಮಗೆ ಅನಿಸಿತು,ಕೇರಳದ ಊರುಗಳ ಹೆಸರು ನೆನಪಿನಲ್ಲಿ ಇಟ್ಟುಕೊಳ್ಳುವುದು ತುಂಬಾ ಕಷ್ಟಕರವಾದ ವಿಷಯ.. ಉಚ್ಚಾರ ಕಷ್ಟಕರ, ಅದೂ ಅಲ್ಲದೆ ಮ್ಯಾಪಿನಲ್ಲಿ ಇರುವ ಹೆಸರಿಗೂ ಅಲ್ಲಿನ ಊರಿನ ಹೆಸರಿಗೂ ವ್ಯತ್ಯಾಸಗಳಿರುತ್ತವೆ ಅಲಪ್ಪಿ ಅನ್ನಬೇಕೋ ಅಲಪ್ಪುಝಾ ಅನ್ನಬೇಕೋ ಗೊತ್ತಾಗುವುದೇ ಇಲ್ಲ.

ಪ್ರವಾಸಕ್ಕೆ ಅತಿ ಮುಖ್ಯವಾದದ್ದು ಆಹಾರ, ಆಹಾರ ಸರಿಯಿದ್ದರೆ ಪ್ರಯಾಣ ಸುಖಕರವಾಗಿರುತ್ತದೆ,ನಿಮಗೆ ಬೆಂಗಳೂರಿನ ರುಚಿ ರುಚಿಯಾದ ಸಸ್ಯಾಹಾರಿ ಹೋಟೆಲ್ ರುಚಿ ನಿಮ್ಮ ನಾಲಿಗೆ ಸವಿದಿದ್ದರೆ.. ಖಂಡಿತ ಕೇರಳದ ಹೋಟೆಲುಗಳ ಸಸ್ಯಾಹಾರಿ ಪದಾರ್ಥಗಳನ್ನು ಇಷ್ಟಪಡಲಾರಿರಿ.ನಾವು ಕೇರಳ ತಲಿಪಿದ ಮೊದಲನೇ ದಿನ ಬೆಳಗ್ಗಿನ ತಿಂಡಿ ತಿನ್ನಲು ಕೊಚ್ಚಿನ್ ನಲ್ಲಿನ ಹೋಟೆಲೊಂದಕ್ಕೆ ಹೋಗಿದ್ದೆವು, ಹೋಟೆಲ್ ಒಳಗೆ ಹೋಗುತ್ತಿದ್ದಂತೆ ನನ್ನ ಗಮನ ಸೆಳೆದದ್ದು ಕೇರಳದ ಜನರ ಉಡುಪು, ಅತೀ ಹೆಚ್ಚಿನ ಕೇರಳದ ಜನರು ಶುಭ್ರವಾದ ಬಿಳಿಯ ಪಂಚೆ ಮತ್ತು ಅಂಗಿಯನ್ನು ಧರಿಸಿ ಓಡಾಡುತ್ತಾರೆ.. ಅದು ಅಲ್ಲಿಯ ಒಂದು ಸಾಮಾನ್ಯ ವಿಷಯ, ಮೊದಲ ಸಲ ಕೇರಳ ನೋಡುತ್ತಿರುವುದರಿಂದ ಇದು ಒಂದು ನೆನಪಿನಲ್ಲಿ ಉಳಿದ ಸಂಗತಿಯಾಗಿದೆ, ನಾವು ಹೋಟೆಲ್ ಮಾಣಿಯನ್ನು(ಸಪ್ಲಯರಿಗೆ ಮಲಯಾಳಂ ನಲ್ಲಿ ಏನು ಹೇಳ್ತಾರೋ ಗೊತ್ತಿಲ್ಲ!) ಕರೆದರೆ ನಮ್ಮ ಹದಿನೈದು ಜನರ ಗುಂಪನ್ನು ನೋಡಿದ ಹೋಟೇಲ್ ಮ್ಯಾನೇಜರೇ ಖುದ್ದು ನಮ್ಮನ್ನು ವಿಚಾರಿಸಿಕೊಳ್ಳಲು ಹಾಜರಾದ.. ನಾವು ಏನೇನು ತಿಂಡಿಯಿದೆ ೧೫ ಜನರಿಗೆ ಎಂದು ಕೇಳಿದಾಗ ಆತ ಅಪ್ಪಮ್ಮ್.. ಇದೆ (ಅಪ್ಪಮ್ ಉಂಡು) ಎಂದು ಮಲಯಾಳಂ ನಲ್ಲಿ ಹೇಳಿದ, ನಮಗೋ ಇದು ಮೊದಲ ಸಾರಿ ಕೇಳುತ್ತಿರುವ ಹೆಸರು ಬೇರೆ, ಅಪ್ಪ ಅಮ್ಮ ಅನ್ನುತ್ತಿದ್ದಾನೋ ತಿಂಡಿಯ ಹೆಸರು ಹೇಳುತ್ತಿದ್ದಾನೊ ಎಂದು ಅರಿವಾಗಲು ಸ್ಪಲ್ಪ ಸಮಯ ತೆಗೆದುಕೊಂಡು ಏನಾದರು ಆಗಲಿ ನೋಡಿಯೇ ಬಿಡೋಣ ಅಪ್ಪ ಅಮ್ಮನನ್ನ ಅಲ್ಲಲ್ಲ ಅಪ್ಪಮ್ಮನ್ನು ಕೊಡಿ ಎಂದು ನಕ್ಕು ಆರ್ಡರ್ ನೀಡಿಯೇ ಬಿಟ್ಟೆವು.. ಸುಮಾರು ಸಮಯದ ನಂತರ ನೀರು ದೋಸೆಯಂತಾ ಅಪ್ಪಮ್ ನಮ್ಮ ಮುಂದೆ ತಂದಿಟ್ಟರು,ತುಂಬಾ ಹಸಿವಾಗಿದ್ದರಿಂದ ಅದರ ರುಚಿಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ತಿಂದು ಮುಗಿಸಿದೆವು... ಮುಂದೆ ಹಗಲಿಡೀ ಪ್ರಯಾಣ ಮಾಡಿದೆವು..ಸಂಜೆ ನಾವು ಆಲ್ವಿ ಎನ್ನುವ ಊರನ್ನು ತಲುಪಿದೆವು, ನಮಗೆ ಪರಿಚಯವಿದ್ದ ಒಬ್ಬರ ಮನೆ ಊರಿನಲ್ಲಿತ್ತು ಅವರ ವಿಲ್ಲಾದಲ್ಲಿ(ವಿಲ್ಲಾ ಎಂದರೆ ಮನೆಯೆಂಬ ಅರ್ಥ ಕೊಡುತ್ತದೆ) ಎರಡು ದಿನ ಉಳಿದುಕೊಂಡಿದ್ದೆವು,


ನಾನು ಯಾವಾಗಲು ಸಸ್ಯಾ(ಮಾಂಸ)ಹಾರಿ ಎರಡು ಒಟ್ಟಿಗೆ ಇರುವ ಹೋಟೆಲ್ ಗಳ ಬಗ್ಗೆ ಹೇಳಿಕೊಂಡು ನಗುತ್ತಿದ್ದೆ "ಸಸ್ಯಹಾರಿ ಮತ್ತು ಮಾಂಸಹಾರಿ ಹೋಟೆಲ್ ಗಳಲ್ಲಿ ಎರಡು ಬೇರೆ ಬೇರೆ ಪಾತ್ರೆಗಳಲ್ಲಿ ಬೇಯಿಸುತ್ತಾರೆ ಆದರೆ ಸೌಟು ಮಾತ್ರ ಒಂದೇ" ಎಂದು,ಆದರೆ ನನಗೆ ಗತಿ ಬರುತ್ತದೆಯೆಂದು ಗೊತ್ತಿರಲಿಲ್ಲ... ಕೇರಳದಲ್ಲಿ ನಾನು ನೋಡಿದ ಪ್ರಕಾರವಾಗಿ ಬರೀ ಸಸ್ಯಾಹಾರಿ ಹೋಟೆಲ್ ಸಿಗುವುದು ಅತಿ ವಿರಳ,ಆದರೆ ಒಂದು ಕಡೆ ನಮಗೆ ಶಿವಂ "ವೆಜಿಟೆಬಲ್" ರೆಸ್ಟೋರೆಂಟ್ ಕಾಣಿಸಿತು, ಆಗಲೆ ಊಟವಾಗಿದ್ದರಿಂದ ವೆಜಿಟೆಬಲ್ ರೆಸ್ಟೋರೆಂಟ್ನಲ್ಲಿ ವೆಜಿಟೆಬಲ್ ತಿನ್ನಲಾಗಲೇ ಇಲ್ಲ
ಇನ್ನು ಸಸ್ಯಹಾರಿ ಮತ್ತು ಮಾಂಸಾಹಾರಿ ಹೋಟೆಲ್ಗಳಲ್ಲಿ, ಸಸ್ಯಾಹಾರಿ ಪದಾರ್ಥಗಳಂತೂ ಅತ್ಯಂತ ದರಿದ್ರವಾಗಿರುತ್ತವೆ(ನಾನು ಸೊಪ್ಪು ತಿನ್ನುವ ಜಾತಿಗೆ ಸೇರಿದ್ದರಿಂದ ಮಾಂಸಹಾರ ಹೇಗಿರುತ್ತದೆಯೋ ಗೊತ್ತಿಲ್ಲ, ಸೊಪ್ಪು ತಿನ್ನುವ ಜಾತಿ ಎಂದು ಏಕೆ ಹೇಳಿದೆನೆಂದರೆ ಸಸ್ಯಾಹಾರಿಗಳನ್ನು ಚುಡಾಯಿಸುವುದು ಹೀಗೆಯೇ ಅಲ್ವಾ! ) ರೈಸ್ ಭಾತ್ ಮಾಡಿರುತ್ತಾರೆ,ಅದು ಹೇಗಿರುತ್ತದೆಯೆಂದರೆ ರೊಟ್ಟಿಯ ಜೊತೆ ಕೊಡುತ್ತಾರಲ್ಲ ಸಾಗು.., ನೆನ್ನೆ ಉಳಿದ ಅದನ್ನು ಅನ್ನಕ್ಕೆ ಕಲಸಿ ತಂದಿಟ್ಟಂತೆ ಇರುತ್ತದೆ. ಒಂದು ದಿನ ಮಧ್ಯಾಹ್ನ ನಾವು ಬರಿ ಬ್ರೆಡ್ ಮತ್ತು ಜಾಮ್ ತಿಂದು ಹೊಟ್ಟೆ ತುಂಬಿಸಿಕೊಂಡೆವು, ಬ್ರೆಡ್ ಜಾಮ್ ಇಷ್ಟೆಲ್ಲಾ ರುಚಿ ರುಚಿಯಾಗಿರುತ್ತ ಅನಿಸಿದ್ದಂತು ನಿಜ,ಇನ್ನು ಹೋಟೆಲುಗಳಲ್ಲಿ ಇಡ್ಲಿ ವಡೆ ಹೇಳಿದರೆ ಮೂರು ಇಡ್ಲಿ ಮತ್ತು ಒಂದು ವಡೆ ತಂದುಕೊಡುತ್ತಾರೆ,(ಕರ್ನಾಟಕದಲ್ಲಾದರೆ ಎರಡೇ ಇಡ್ಲಿ ಕೊಡ್ತಾರೆ ಅಲ್ವಾ) ದೋಸೆಯ ಜೊತೆಗೂ ಒಂದು ಉದ್ದಿನ ವಡೆ ಕೊಡೋದು ನಮಗೆ ವಿಶೇಷ ಅನಿಸಿತು,ತಿಂಡಿಯಲ್ಲಿ ಇಡ್ಲಿ ಮತ್ತು ದೋಸೆ ರುಚಿ ಪರವಾಗಿಲ್ಲ ಎನ್ನುವಂತಿದ್ದರೂ ಬೇರೆಲ್ಲಾ ಪಧಾರ್ಥಗಳ ರುಚಿ ಮಾತ್ರ ದೇವರಿಗೇ ಪ್ರೀತಿ, ಅಂದಹಾಗೆ ದೇವರಿಗೆ ನಾಲಿಗೆ ರುಚಿ ಇಲ್ಲವೆ, ಹೆಚ್ಚಿನವರು ರುಚಿಯಿಲ್ಲ, ಉಪ್ಪಿಲ್ಲ ಖಾರವಿಲ್ಲ ಎಂದಾದರೆ ದೇವರಿಗೇ ಪ್ರೀತಿ ಅಂತ ಯಾಕೆ ಹೇಳ್ತಾರೋ ಏನೋ.. ಇದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ!

ಮೊದಲು ನಾವು ನೋಡಿದ್ದು ಕಾಲಾಡಿಯಲ್ಲಿ ಇರುವ ಶಂಕರಾಚಾರ್ಯರ ಜನ್ಮ ಸ್ಥಳದಲ್ಲಿರುವ ದೇವಸ್ಥಾನ.. ಅಲ್ಲಿ ನಮಗೆ ಕನ್ನಡದಲ್ಲೇ ಮಾತನಾಡಲು ಬರುತ್ತಿದ್ದ ಅರ್ಚಕರು ದೇವಸ್ಥಾನದ ಬಗ್ಗೆ ತಿಳಿಸಿದರು, ನಾನು ಮೇಲೆ ತಿಳಿಸಿದಂತೆ ಹೊಟ್ಟೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ಪ್ರವಾಸದ ಸವಿಯನ್ನು ಸವಿಯಲು ಆರಂಬಿಸಿದ್ದು ನಾವು ಮುನಾರ್ ಪರ್ವತ ಶ್ರೇಣಿಗಳತ್ತ ತಲುಪಿದಾಗ.. ಎಲ್ಲಿ ನೋಡಿದರೂ ಕಣ್ಮನ ಸೆಳೆಯುವ ಹಚ್ಚ ಹಸಿರಿನ ಬೆಟ್ಟ ಗುಡ್ಡಗಳು, ಮಂಜು ಮುಸುಕಿದ ಪರ್ವತ ಶೇಣಿ,
ಎರವಿಕುಲಮ್ ನ್ಯಾಷನಲ್ ಪಾರ್ಕ್ ಎತ್ತರ ಪ್ರದೇಶ ತಲುಪಿದ ನಂತರ ಕಾಣುವ ಸುಂದರ ದೃಶ್ಯ

ಅತ್ಯಂತ ಎತ್ತರದ ಪ್ರದೇಶದಲ್ಲಿ ಮುನಾರ್(ಮನ್ನಾರ್, ಮುನ್ನಾರ್ ಹಿಲ್ಸ್) ಬೆಲ್ ಮೋಂಟ್ ಎನ್ನುವ ಲಾಡ್ಜಿನಲ್ಲಿ ನಾವು ಉಳಿದುಕೊಳ್ಳುವ ವ್ಯವಸ್ಥೆಯಾಗಿತ್ತು.ಹೊಟೆಲಿನಲ್ಲಿ ನಮ್ಮ ಸಾಮಾನು ಸರಂಜಾಮುಗಳನ್ನು ಇಳಿಸಿ ಸನ್ ಸೆಟ್ ನೋಡಲು ಹೊರೆಟೆವು, ಅಲ್ಲಿಂದ ಸ್ವಲ್ಪ ದೂರ ವಾಹನದಲ್ಲಿ ಹೋದರೆ ಅಲ್ಲೊಂದು ಸೇತುವೆ ಸಿಗುತ್ತದೆ, ಅಲ್ಲಿ ಕಾರು ಜೀಪಿನಂತ ವಾಹನ ಮಾತ್ರಾ ದಾಟುವಷ್ಟು ಕಿರಿದಾಗಿದ್ದು ನಮ್ಮ ಬಸ್ಸನ್ನು ಅಲ್ಲಿಯೇ ನಿಲ್ಲಿಸಿ ಒಂದರ್ದ ಕಿಲೋಮೀಟರ್ ಪರ್ವತ ಚಾರಣ ಮಾಡಿದರೆ ಸಿಗುವುದೇ ಸನ್ ಸೆಟ್ ಪಾಯಿಂಟ್, ಅಚ್ಚ ಕನ್ನಡದಲ್ಲಿ ಹೇಳುವುದಾದರೆ ಸಂಪೂರ್ಣ ಸೂರ್ಯಾಸ್ಥಮಾನವನ್ನು ನೋಡಲು ಸಿಗುವ ಸ್ಥಳ.. ಹಾಗು ಇದು ಅಲ್ಲಿನ ಒಂದು ವಿಚಿತ್ರಗಳಲ್ಲಿ ಇದೂ ಕೂಡಾ ಸೇರುತ್ತದೆ, ನಾವು ಅಲ್ಲಿ ಹೋಗಿ ನೋಡಿದ ಮೇಲೆ ಅತ್ಯಂತ ಬೇಸರಗೊಂಡ ಸ್ಥಳ ಅದಾಗಿತ್ತು ಕಾರಣ.. ಸಂಪೂರ್ಣವಾದ ಸುಂದರವಾದ ಸೂರ್ಯಾಸ್ತಮಾನ ದೃಶ್ಯ ನೋಡಲು ಸಿಗುವುದಿಲ್ಲ, ಕೆಲವೇ ಸೆಕೆಂಡುಗಳಲ್ಲಿ ಸೂರ್ಯ ಹಟಾತ್ತನೆ ಮುಳುಗಿಹೋಗುತ್ತಾನೆ,ಆದರೂ ಚಾರಣ ಮಾಡಿದ ಸಂತೋಷ ಹಾಗು ಪ್ರಕೃತಿ ಸೌಂದರ್ಯ ಖುಷಿ ಕೊಡುತ್ತದೆ,
ಮುನಾರ್ ಟೀ ಎಸ್ಟೇಟ್

ಮುನಾರಿನಲ್ಲೆ ಒಂದು ಪ್ರವಾಸೋದ್ಯಮ ಇಲಾಖೆಯು ಇದ್ದು ಅಲ್ಲಿ ಪ್ಲವರ್ ಗಾರ್ಡನ್ ಮತ್ತು ಚಿಕ್ಕದೊಂದು ಬೋಟಿಂಗ್ ವ್ಯವಸ್ಥೆಯೂ ಇದೆ, ಆದರೆ ಪ್ಲವರ್ ಗಾರ್ಡನ್ ನಲ್ಲೇನು ವಿಶೇಷ ಹೂಗಿಡಗಳು ಇರಲಿಲ್ಲ, ಕೆಲವು ಹೂ ಗಿಡಗಳನ್ನು ಹೊಂದಿರುವ ಸಾಮಾನ್ಯ ಹೂವಿನ ಗಾರ್ಡನ್ ಎಂದು ಹೇಳಬಹುದು,ಬೋಟಿಂಗ್ ಕೂಡಾ ಸಾಧಾರಣವೆನ್ನಬಹುದು ಒಂದರ್ಧ ಗಂಟೆ ಸುತ್ತಿಸುತ್ತಾರೆ ನಿಧಾನವಾಗಿ, ಮುನಾರಿನಲ್ಲಿ ಮೈ ಕೊರೆಯುವ, ಉಸಿರಾಡಿದರೆ ಆವಿ ಬರುವಷ್ಟು, ಕೈ ಕಾಲುಗಳು ಮರಗಟ್ಟಿ ಥರಗುಟ್ಟುವಂತಾ ಚಳಿಯಿತ್ತು, ನಲ್ಲಿ ತಿರುಗಿಸಿದರೆ ಪ್ರಿಜ್ ನಲ್ಲಿನ ನೀರು ಕೊಳಾಯಿಯ ಮೂಲಕ ಹರಿದುಬಂದಷ್ಟು ತಣ್ಣಗಿರುತ್ತದೆ, ಇದನ್ನು ಹಲ್ಲು ಕಡಿಯುವಷ್ಟು ಚಳಿ ಎಂದು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ ಅದನ್ನೇ ಸ್ವಲ್ಫ ಬೇರೆ ತರಹ ವರ್ಣಿಸುವುದಾದರೆ.. ಯಾರಾದರೂ ತಮ್ಮ ಹಲ್ಲು ಸೆಟ್ಟನ್ನು ತೆಗೆದು ನೀರಿನಲ್ಲಿ ಮುಳುಗಿಸಿದರೆ ಅದೂ ಕೂಡಾ ಕಟ ಕಟ ಹಲ್ಲು ಕಡಿದುಕೊಳ್ಳುತ್ತಿತ್ತೇನೋ. ಅಷ್ಟು ಚಳಿಯಿದೆ ಮುನ್ನಾರಿನಲ್ಲಿ.

ಅತರಿಮಪಲ್ಲಿಯಲ್ಲಿ ವಝಾಚಲ್ ಎನ್ನುವ ಜಲಪಾತ ಮನಮೋಹಕವಾಗಿದ್ದು ನೋಡಲು ಖುಷಿಕೊಡುತ್ತದೆ,ಕೇರಳದಲ್ಲಿ ಇನ್ನೂ ಅನೇಕ ಪುಟ್ಟ ಪುಟ್ಟ ಗುಡ್ಡಗಾಡಿನಿಂದ ನೀರು ಹರಿಯುವುದು ನೋಡಲು ಸಿಗುತ್ತವೆ ಆದರೆ ಅವೆಲ್ಲವನ್ನು ಜಲಪಾತಗಳು ಎಂದು ಪ್ರೊಜೆಕ್ಟ್ ಮಾಡುವುದರಲ್ಲಿ ಪ್ರವಾಸೋದ್ಯಮ ಇಲಾಖೆ ತನ್ನ ಚಾಣಾಕ್ಯತೆಯನ್ನು ತೋರಿವೆ ಇದಕ್ಕಾಗಿ ಅಲ್ಲಿನ ಪ್ರವಾಸೋದ್ಯಮ ಇಲಾಖೆಯನ್ನು ಮೆಚ್ಚಲೇ ಬೇಕು, ಏನೂ ಇಲ್ಲದ ಸುಮ್ಮನೆ ಹರಿಯುವ ಜಲಪಾತವಿದ್ದರೂ ಅದನ್ನೇ ಪ್ರವಾಸಿ ತಾಣ ಮಾಡುವ ಅದಕ್ಕೆ ಬಾರೀ ಪ್ರಚಾರ ಕೊಡುವ ಕಲೆ ಕೇರಳಿಗರಿಂದ ನಮ್ಮ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಕಲಿಯಬೇಕಾಗಿದೆ, ನಮ್ಮ ಕರ್ನಾಟಕದಲ್ಲಿ ಇರುವಷ್ಟು ಜಲಪಾತಗಳು ಬೇರೆಲ್ಲೂ ಇರಲಿಕ್ಕಿಲ್ಲ, ಉಂಚಳ್ಳಿಯಂತ ಸುಂದರ ಜಲಪಾತ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದಿಂದಲೋ ಅಥವಾ ಸ್ಥಳೀಯರ ವಿರೋಧದಿಂದಲೋ ಸೊರಗುತ್ತಿರುವುದು ವಿಪರ್ಯಾಸವೇ ಸರಿ. ಇನ್ನು ಅದೆಷ್ಟು ಪ್ರವಾಸಿ ತಾಣಗಳಿವೆಯೋ ಏನೋ.

ಇನ್ನು ನಾವು ನೋಡಿದ ಸ್ಥಳಗಳು ಮುನಾರಿನ ಎಕೋ ಪಾಯಿಂಟ್, ಹಾಗೂ ಸ್ಫೀಡ್ ಬೋಟಿಂಗ್, ಹೈಡಲ್ ಟೂರಿಸಂ ಎನ್ನುವ ಹೆಸರಿನದೊಂದು ಪ್ರವಾಸಿ ತಾಣವಿದ್ದು ಇಲ್ಲಿ ಪೆಡಲ್ ಬೋಟಿಂಗ್ ಮಾಡಬಹುದಾಗಿದೆ, ಇವೆಲ್ಲಕ್ಕಿಂತಲೂ ಕುಮಾರಕುಮ್ ಹೌಸ್ ಬೋಟ್ ನಲ್ಲಿ ಮಾಡಿದ ೫ಗಂಟೆಗಳ ಪ್ರಯಾಣ ನೆನಪಿನ ಪುಟಗಳಲ್ಲಿ ಸದಾ ಉಳಿಯುತ್ತದೆ, ಅದೊಂದು ತೇಲುವ ಮನೆ,ಅಲ್ಲಿ ಎಲ್ಲವೂ ಇದೆ, ಡೈನಿಂಗ್ ಹಾಲ್ ಇದೆ, ಬೆಡ್ ರೂಂ ಇದೆ, ಅಡುಗೆ ಮನೆಯಿದೆ, ಬಾತ್ ರೂಂ ಇದೆ, ಇನ್ನೇನು ಬೇಕು ಅಲ್ವಾ.. ಬೋಟ್ ಸಾಗುತ್ತಾ ಇರುವಂತೆಯೇ ಅಲ್ಲಿನ ಅಡುಗೆ ಮನೆಯಲ್ಲಿ ನಮಗೆಲ್ಲರಿಗೂ ಅಡಿಗೆ ತಯಾರುಮಾಡಿ ತಂದು ಇಡುತ್ತಾರೆ, ನಾವು ಬಡಿಸಿಕೊಂಡು ತಿನ್ನಬೇಕು, ಆದರೆ ಬೋಟ್ ಹೌಸಿನಲ್ಲಿ ಕಳೆದ ೫ಘಂಟೆಗಳಿಗೆ ನಮಗೆ ತಗುಲಿದ್ದು ಬರೋಬ್ಬರಿ ಇಪ್ಪತ್ತೊಂದು ಸಾವಿರ ರೂಪಾಯಿಗಳು.. ಏಜೆಂಟರುಗಳ ಮೂಲಕ ಬೋಟನ್ನು ಕಾಯ್ದಿರಿಸಿದ್ದರಿಂದ ನಮಗೆ ಒಂದೈದು ಸಾವಿರ ಹೆಚ್ಚು ವೆಚ್ಚ ತಗುಲಿದೆಯೆನಿಸುತ್ತದೆ, ಖರ್ಚು ವೆಚ್ಚಗಳನ್ನು ಅಷ್ಟಾಗಿ ತಲೆಗೆ ಹಚ್ಚಿಕೊಳ್ಳದೆ ಪ್ರವಾಸದ ಆನಂದ ಸವಿಯುವುದಾದರೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ... ಬೋಟ್ ಹೌಸಿನಲ್ಲಿ ಒಂದು ರಾತ್ರಿ ಕಳೆಯಲು ದುಪ್ಪಟ್ಟು ಖರ್ಚು ಬರುತ್ತದೆ, ನಲವತ್ತು ಸಾವಿರ ರುಪಾಯಿಗಳಾಗುತ್ತದೆಯಂತೆ ಒಂದು ದಿನ ಉಳಿಯುವುದಾದರೆ. ಹೌಸ್ ಬೋಟ್ ಗಳ ನಿರ್ಮಾಣ ಮಾಡುವಾಗ ಹೊರಮೈಗೆ ಬೆತ್ತದ ನೈಗೆಯನ್ನು ಬಳಸುತ್ತಾರೆ ಇದರಿಂದ ಬೋಟ್ ಸುಂದರವಾಗಿ ಕಾಣಿಸುತ್ತದೆ ಒಳಗೆಲ್ಲ ಹೆಚ್ಚಿಗೆ ಮರಮುಟ್ಟುಗಳನ್ನು ಹೆಚ್ಚಾಗಿ ಬಳಸುತ್ತಾರೆ, ಬೋಟನ್ನು ಶುದ್ಧವಾಗಿಟ್ಟಿರುತ್ತಾರೆ, ನಾವು ಪ್ರಯಾಣಿಸಿದ್ದ ಬೋಟನ್ನು ತಯಾರಿಸಲು ಅವರಿಗೆ ತಗುಲಿದ್ದ ಖರ್ಚು ಇಪ್ಪತ್ತೈದು ಲಕ್ಷ ರೂಪಾಯಿಗಳಂತೆ. ಕುಮಾರಕುಂ ಎನ್ನುವಲ್ಲಿ ೨೦ ಬೋಟುಗಳಿವೆಯಂತೆ, ಅದೇ ಅಲಪ್ಪಿಯಲ್ಲಿ ೯೦೦ ಇಂತವೇ ಬೋಟುಗಳಿವೆಯಂತೆ.ಕೊನೆಯ ದಿವಸ ಅಂದರೆ ೩೧ನೇ ತಾರೀಖು ನಾವು ಅಲಪ್ಪಿಯ ಬೀಚ್ ನೋಡಿಕೊಂಡು ನಮ್ಮ ಕರ್ನಾಟಕದ ಕಡೆ ಪ್ರಯಾಣ ಬೆಳೆಸಿದೆವು, ನಮ್ಮ ಬಸ್ಸಿನಲ್ಲಿಯೇ ಹನ್ನೆರೆಡು ಘಂಟೆಗೆ ಕೇಕ್ ಕತ್ತರಿಸಿ ತಿಂದು ಹೊಸವರ್ಷವನ್ನು ಬರಮಾಡಿಕೊಂಡೆವು.. ಅಂದಹಾಗೆ ಹೇಳೋಕೆ ಮರೆತುಹೋಗಿತ್ತು, ನೀವು ಕೇರಳ ಪ್ರವಾಸಕ್ಕೆ ಹೋಗುವುದಾದರೆ ಅದೂ ನೀವು ಸಸ್ಯಾಹಾರಿಗಳಾಗಿದ್ದರೆ ನಮ್ಮಂತೆಯೇ ಪೌಂಡ್ ಗಟ್ಟಲೆ ಬ್ರೆಡ್, ಮತ್ತು ಒಂದೆರೆಡು ಜಾಮ್ ಬಾಟಲಿ(ಪ್ರವಾಸಕ್ಕೆ ಹೋದ ಜನರ ತಿನ್ನುವ ಅಗತ್ಯತೆಗನುಸಾರವಾಗಿ, ರುಚಿಗೆ ತಕ್ಕಷ್ಟು ಉಪ್ಪು ಅನ್ನೋ ತರ) ತೆಗೆದುಕೊಂಡುಹೋಗುವುದು ಉತ್ತಮ :-)

ಕೊನೆಯ ಮಾತು: ಇಟ್ಟಿಗೆ ಸಿಮೆಂಟ್ ಬ್ಲಾಗಿನ ಪ್ರಕಾಶ್ ರವರ ಈ ಲೇಖನ ಓದಿ, ಜೊತೆಗೆ ನಾನು ಬರೆದ ವಡೆ ಮತ್ತು ಮಸಾಲೆ
ದೋಸೆಯ ಕಮೆಂಟ್ ಕಥೆ ಓದಿ! ಪ್ರಕಾಶ್ ರವರು ಇದನ್ನು ನಿಮ್ಮ ಬ್ಲಾಗಿನಲ್ಲೇ ಬರೆಯಬಹುದಿತ್ತು ಎಂದಿದ್ದರು ಆದ್ದರಿಂದ ಕೊಂಡಿಯನ್ನು ಲಿಂಕಿಸಿದ್ದೇನೆ .

15 comments:

Unknown said...

ಆದಿ
ಸೂಪರ್ ಪ್ರವಾಸ ಕಥನ. ಅತ್ಯುತ್ತಮ ಫೋಟೋ. ಈ ವಾರದ ಎರಡು ಬ್ಲಾಗ್ ಗಳಲ್ಲಿ ನಿಂದೂ ಒಂದು.

mg bhat said...

hoi chennagi bandide pravasa kathana..adakke correct agi photos hakiddu supper agide...."ಹಲ್ಲು ಸೆಟ್ಟನ್ನು ತೆಗೆದು ನೀರಿನಲ್ಲಿ ಮುಳುಗಿಸಿದರೆ ಅದೂ ಕೂಡಾ ಕಟ ಕಟ ಹಲ್ಲು ಕಡಿದುಕೊಳ್ಳುತ್ತಿತ್ತೇನೋ" idu supper agide chaliya varnane(atta ekkada itta ennada maddya kannada ninga ella gada gada!!!).......ಬೋಟ್ ಹೌಸಿನಲ್ಲಿ ಕಳೆದ ೫ಘಂಟೆಗಳಿಗೆ ನಮಗೆ ತಗುಲಿದ್ದು ಬರೋಬ್ಬರಿ ಇಪ್ಪತ್ತೊಂದು ಸಾವಿರ ರೂಪಾಯಿಗಳು........!!!!???hagadre samannya jana(nammantavaru) hogakke agadillya allige...swlpa mahiti kodi(information act li)....

Ittigecement said...

ಮನಸ್ವಿ...

ಸರಳವಾದ ಭಾಷೆಯಲ್ಲಿ ಅಲ್ಲಿನ ಚಿತ್ರಣ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದೀರಿ...

ಬರವಣಿಗೆಯಲ್ಲಿರುವ ಆಪ್ತತೆ,

ನಾವೇ ಹೋಗಿಬಂದಂತಿರುತ್ತದೆ

ಉಪಯುಕ್ತ ಮಾಹಿತಿ ಕೊಟ್ಟೀದ್ದೀರಿ...

ಸಸ್ಯಹಾರಿಗಳಿಗೆ ಎಲ್ಲಿಗೆ ಹೋದರೂ ತೊಂದರೆ..

ನನ್ನ ಬರಹಕ್ಕೆ ನೀವು ಬರೆದ ಪ್ರತಿಕ್ರಿಯೆ..ಬಹಳ ಮಜವಾಗಿತ್ತು...

ಅದನ್ನೇ ಬ್ಲಾಗಿನಲ್ಲಿ ಬರೆದಿದ್ದರೆ ಎಲ್ಲರೂ ನಗಬಹುದಿತ್ತು..

ಅದಕ್ಕೆ ಹಾಗೆ ಹೇಳಿದ್ದೆ...

ಚಂದದ ಬರಹಕ್ಕೆ ಅಭಿನಂದನೆಗಳು...

ಬರೆಯುತ್ತ ಇರಿ.. ಜಾಸ್ತಿ ದಿನ ಕಾಯಿಸ ಬೇಡಿ...!

ಕೆ.ಎನ್. ಪರಾಂಜಪೆ said...

ಚಿತ್ರ-ಲೇಖನ ಚೆನ್ನಾಗಿದೆ. Thanks

ಶಾಂತಲಾ ಭಂಡಿ (ಸನ್ನಿಧಿ) said...

ಮನಸ್ವಿ...
ಚೆಂದದ ಪ್ರವಾಸ ಕಥನ. ಒಳ್ಳೆಯ ಮಾಹಿತಿ. ಥ್ಯಾಂಕ್ಸ್ ನಿನಗೆ.

Harisha - ಹರೀಶ said...

ನೀನು ಅಲ್ಲಿ ಹೋಗಿ ಏನ್ ಮಾಡ್ದೆ ಅಂತ ನಂಗೆ ಈಗ ಗೊತ್ತಾತು!

shivu.k said...

ಮನಸ್ವಿ ಸರ್,

ನಿಮ್ಮ ಕೇರಳ ಪ್ರವಾಸ ತುಂಬಾ ಚೆನ್ನಾಗಿದೆ....ನಾನು ಕೇರಳಕ್ಕೆ ಅದರಲ್ಲೂ ಮುನ್ನಾಗಿಗೆ ನಾಲ್ಕುಬಾರಿ ಹೋಗಿ ಬಂದಿದ್ದೇನೆ....ಫೋಟೊಗ್ರಫಿ ಉದ್ದೇಶಕ್ಕಾಗಿ....ಮುನ್ನಾರಿನಲ್ಲಿ ಶರವಣಭವನ ಅನ್ನುವ ಪಕ್ಕಾ ಸಸ್ಯಹಾರಿ ಹೋಟಲಿದೆ....ತುಂಬಾ ರುಚಿಯಾದ ಊಟವನ್ನು ೨೦ರೂಪಾಯಿಗಳಿಗೆ ಕೊಡುತ್ತಾರೆ....

ಮತ್ತೆ ನೀವು ಕೇರಳ ಪ್ರವಾಸವನ್ನು ಇಂಚಿಂಚು ಬಿಡದೇ ಬರೆದಿದ್ದೀರಿ.....ಮತ್ತೊಮ್ಮೆ ಇಲ್ಲೇ ಕುಳಿತು ಕೇರಳಕ್ಕೆ ಹೋಗಿಬಂದಾಗೆ ಆಯ್ತು....
ಆಹಾಂ! ನೀವಿನ್ನು ನನ್ನ ಹೊಸ ಲೇಖನಕ್ಕೆ ಬೇಟಿಕೊಟ್ಟಿಲ್ಲವೆಂದು ಕಾಣುತ್ತದೆ....ಇದೇ ಪ್ರಕಾಶ್ ಹೆಗಡೆಯವ್ರು ಕೊಟ್ಟ ಐಡಿಯಾ ಮೇಲೆ ಒಂದು ಚಿತ್ರಲೇಖನವಿದೆ..ನೀವು ಮನಃಪೂರ್ವಕವಾಗಿ ನಗಬೇಕೆ...ನೋಡ ಬನ್ನಿ ನಡೆದಾಡುವ ಭೂಪಟಗಳ.... [ಇದೇ ಪ್ರಕಾಶ್ ಹೆಗಡೆಯವ್ರು ಕೊಟ್ಟ ಐಡಿಯಾ ಮೇಲೆ ಬಂದ ಚಿತ್ರಲೇಖನವದು]

ಮನಸ್ವಿ said...

@Shreeshum
ಒಹ್ ರಾಘಣ್ಣ ಧನ್ಯ, ಪ್ರವಾಸ ಕಥನ ಮೆಚ್ಚಿಕೊಂಡಿದ್ದಕ್ಕೆ ಹಾಗು ವಾರದ ಎರಡು ಬ್ಲಾಗ್ ಗಳಲ್ಲಿ ನನ್ನ ಬ್ಲಾಗ್ ನ ಬಗ್ಗೆ ಬರದಿದ್ದಕ್ಕೆ . ನಾನು ನಿಜವಾಗಲು ನನ್ನ ಬ್ಲಾಗ್ ಪರಿಚಯ ಯಾವಾಗ ಬತ್ತು ಅಂತ ಕಾಯ್ತಾ ಇದಿದ್ದಿ :)

@MG Bhatta...
ತ್ಯಾಂಕ್ಸು...hoo napa sikkapatte costly boat house ge, aste rateu..

OH mahiti na information act li beku anta kelidde alda adakke information act du form siktu adanna fill madi 10rs bank li dd tegdu, dd jote enu mahiti beku anta bardu post ge kalsu 30ne dina mahiti kalasti nimmane baagilige!
ALLA NINGE YARA GAALI BEESTYO, INFORMATION ACT BAGGE ELLA KELTIDDE?

@ಪ್ರಕಾಶ್
ಮೆಚ್ಚಿಕೊಂಡಿದ್ದಕ್ಕೆ ನಿಮಗೂ ಧನ್ಯವಾದಗಳು,ಹೂಂ ಕಾಯಿಸಬಾರದು ಅನ್ಕೋತೀನಿ ಆದ್ರೂ ಆಗ್ತಿಲ್ಲ ಏನ್ಮಾಡ್ಲಿ, ಪ್ರಯತ್ನ ಪಡ್ತೀನಿ ಅದಷ್ಟು ಬೇಗ ಅಪ್ಡೇಟ್ ಮಾಡೋಕೆ.

@ ಕೆ.ಎನ್. ಪರಾಂಜಪೆ
ಧನ್ಯವಾದಗಳು..

@ ಶಾಂತಲಾ ಭಂಡಿ
ಶಾಂತಲಕ್ಕ ನಿಂಗೂ ಥ್ಯಾಂಕ್ಸ್.. ಪ್ರವಾಸ ಕಥನ ಮೆಚ್ಚಿಕೊಂಡಿದ್ದಕ್ಕೆ.

@ಹರೀಶ
ಹಹ್ಹ ಹ್ಹ..ಗೊತ್ತಾಗ್ಯೋತ.. :-)

@Shivu
ಶಿವು ಅವರೆ ತುಂಬಾ ಧನ್ಯವಾದಗಳು,
ಹಾಗೆ ಸಸ್ಯಾಹಾರಿ ಹೋಟೆಲುಗಳು ಇರುತ್ತವೆ, ಪಕ್ಕಾ ಸಸ್ಯಾಹಾರಿ ಹೋಟೆಲಿನಲ್ಲೂ ಮೊಟ್ಟೆಯನ್ನಾದರೂ ಹಾಕಿಯೇ ಹಾಕುತ್ತಾರೆ ಎನ್ನುವ ಬಗ್ಗೆ ಅನೇಕರು ಹೇಳಿದ್ದಾರೆ!!, ಶರವಣಭವನದ ಬಗ್ಗೆ ಗೊತ್ತಿಲ್ಲ, ಆದರೂ ಒಳ್ಳೆಯ ಮಾಹಿತಿ ಒದಗಿಸಿದ್ದಕ್ಕೆ ಥ್ಯಾಂಕ್ಯೂ...
ಖಂಡಿತಾ ನಿಮ್ಮ ಬ್ಲಾಗ್ ಗೆ ಬೇಟಿ ಕೊಡುತ್ತೇನೆ...

ಮೃತ್ಯುಂಜಯ ಹೊಸಮನೆ said...

ನೀನು ನಿನ್ನ ಪ್ರವಾಸದ ಬಗ್ಗೆ ಬರೆದ ದೀರ್ಘ ಲೇಖನ ಓದಿ ಖುಷಿಯೇನೋ ಆಯ್ತು. ತುಂಬಾನೇ ವಿವರವಾಗಿ ಬರ್ದಿದೀಯಾ. ಇನ್ನು ಅಲ್ಲಿ ಹೋಗಿ ನೊಡೋದೇನುಳೀತು?

jomon varghese said...

ಚೆಂದದ ಪ್ರವಾಸ ಕಥನ...:)

Santhosh Rao said...

ಚೆನ್ನಾಗಿ ಬರೆದಿದ್ದೀರ ..
ನಿಜ ನಾವು ಯಾವುದೇ ಅಷ್ಟು ಪರಿಚಯವಿಲ್ಲದ ಊರಿಗೆ ಹೋದಾಗ , ಆಹಾರ ಪದ್ದತಿಯಲ್ಲಿ ವ್ಯತ್ಯಾಸವಾಗುವುದು ಸಹಜ ... ಅದರಲ್ಲೂ ಕೇರಳದ ಪಡ್ದು, ಆಪಮ್ಮು ನಮಗೆ ಸ್ವಲ್ಪ ಕಷ್ಟ .. ನೀವು ಮಾಂಸಹಾರಿಯಾಗಿದ್ದರೆ ಮಲೆಯಾಳಿಗಳ ನಳಪಾಕ ಇಷ್ಟ ಆಗ್ತಿತ್ತೇನೋ ..

ನಿಮಗೆ ಯಾವುದೇ ಊಟದ ತೊಂದರೆ ಇಲ್ಲದೆ ನಿಮ್ಮ ಪ್ರವಾಸ ಸಾಗಬೇಕೆಂದರೆ , ನೀವು 5 star ಹೋಟೆಲ್ಲಿನಲ್ಲಿ ಇರಬೇಕಾಗುತ್ತೆ (ಅಲ್ಲೂ ಗ್ಯಾರಂಟಿ ಇಲ್ಲ )..

ಹೌದು ವಿಲ್ಲಾ ಎಂದರೆ ಮನೆಯೆಂಬ ಅರ್ಥ ಕೊಡುತ್ತದೆ..ಜಂಗಲ್ ವಿಲ್ಲಾ , ಶ್ರೀರಾಮ್ ವಿಲ್ಲ ಹಾಗೆ ಸುಂದರವಿಲ್ಲ (ಲ್ಲಾ):)

ಇನ್ನು ಕೇರಳ ಒಂದು ಅದ್ಭುತ ಸ್ಥಳ .. God's Own Country.. ನಿಮ್ಮ ಬರಹವು ಚೆನ್ನಾಗಿತ್ತು ..

Unknown said...

ನೀವು ಹೇಳಿದ ಹಾಗೆ ಪ್ರಚಾರ ಕೊಡುವ ಕಲೆ ಕೇರಳಿಗರಿಂದ ನಮ್ಮ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಕಲಿಯಬೇಕಾಗಿದೆ. ಏಕೆಂದರೆ ನೀವು ಬೇಕಾದರೆ ರಾಜೇಶ್ ಅವರ http://karnataka.fotopic.net ನೋಡಿ ಕರ್ನಾಟಕದಲ್ಲಿ ಎಷ್ಟು ಸ್ಥಳವಿದೆ. ನಾನು ಮುನಾರ ಮತ್ತು ತೆಕದಿಗೆ ಹೋಗಿದ್ದೆ. ಆದರೆ ನನಗೆ ಕೇರಳ ಕರ್ನಾಟಕದಷ್ಟು ಖುಷಿ ಕೊಡಲಿಲ್ಲ. ಹಾಗೆಯೆ ಮುನಾರಿನಲ್ಲಿ ಶರವಣಭವನ ಅನ್ನುವ ಪಕ್ಕಾ ಸಸ್ಯಹಾರಿ ಹೋಟಲಿದೆ.

Greeshma said...

recent aagi naanu kooda kerala (munnar) ge hogi bandiddarinda connect maaDodakke sulbha aaytu.
vegetarians ge iddide e goLU. munnar li sharavana bhavana, mattond jaaga ide (hesru nenpaagtaa illa). haagaagi ashtella tondare aaglilla.

house boat li ond sala hogbeku anta tumba dinada aase. idna odida mele innu jaasti aaytu.

pics tumba chenaagide.

ಈಶ್ವರ said...

ಸೂಪರ್ ಆಗಿದ್ದು ಆದಿತ್ಯಾ :) ಲೈಕ್ಡ್ ಇಟ್.. ನಿನ್ನ ಫೋಟೋಸ್ ಕೂಡ ಚೆನ್ನಾಗಿದ್ದು. ಹೆಸರು ಸೂಪರ್ "ಮನಸ್ವಿ "... ೧೦೦ ಲೈಕ್ಸ್ :)

Unknown said...

Nice article.
I also went to kerala for 20 days. I was stayed in Bhajana Puram Palace near to Padmanabha Swami Temple. Really its nice state. Even peoples are also very nice. You have written good article. Keep it up.