ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Thursday, October 17, 2013

ಕಥೆಯೊಳಗಿನ ಕಥೆ

     ಇವತ್ತೇನಾದರೂ ಆಗಲಿ ಕಥೆ ಬರೆಯಲೇ ಬೇಕೆಂಬ  ನಿರ್ಧಾರಕ್ಕೆ ಬಂದವನು ಪೆನ್ನು ಪೇಪರನ್ನು ಕೈಗೆ ತೆಗೆದುಕೊಂಡು ಬರೆಯಬೇಕೆಂದು ಒಂದೆರಡಕ್ಷರ  ಬರೆದಾಗಿದೆ ಅಷ್ಟೆ, ಅದ್ಯಾಕೋ ಅಕ್ಷರಗಳು ಮಬ್ಬು ಮಬ್ಬಾಗಿ ಕಾಣತೊಡಗಿತು,  ಪಕ್ಕದಲ್ಲಿದ್ದ ಅವನ ಕನ್ನಡಕ ಅವನನ್ನು ನೋಡಿ ನಕ್ಕಂತೆ ಭಾಸವಾಯಿತು, ತಥ್ ಇದರ ಎಂದು ಬೈಯಬೇಕೆಂದುಕೊಂಡವನಿಗೆ ತನ್ನ ಎರಡನೇ ಕಣ್ಣಿನ ಜೋಡಿಗಳನ್ನು ಬೈಯ್ಯಲು ಮನಸ್ಸಾಗಲೇ ಇಲ್ಲ... ಕನ್ನಡಕ ಹಾಕಿಕೊಂಡು ನೋಡುತ್ತಾನೆ ಮೊದಲು ಮುದ್ದಾಗಿ ಕಾಣಿಸುತ್ತಿದ್ದ ಅವನ ಬರವಣಿಗೆ ಈಗ ವಕ್ರ ವಕ್ರವಾಗಿದೆ ಅನಿಸಲಿಕ್ಕೆ ಶುರುವಾಗಿದೆ, ಕೈ ನಡುಗುತ್ತಿದೆ, ದೇಹಕ್ಕೆ ವಯಸ್ಸಾಗಿದ್ದರೂ ಮನಸ್ಸು ಇನ್ನೂ ಇಪ್ಪತ್ತರ ಹತ್ತಿರವೇ ಗಿರಕಿ ಹೊಡೆಯುತ್ತಿದೆ.. ಕಥೆ ಬರೆಯಲೋ ಅಥವಾ ಹಳೆಯ ನೆನಪುಗಳನ್ನೆ ಮೆಲಕುಹಾಕುತ್ತಾ  ಬರೆಯಲೋ. ಈ ತರಹದ ದ್ವಂದ್ವ ಇತ್ತೀಚಿಗೆ ಹೆಚ್ಚಾಗಿ ಹೋಗಿದೆ. ಮರೆವು ಸಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಅನುಭವಕ್ಕೆ ಹೆಂಡತಿಯ ಗೊಣಗಾಟದಿಂದಲೇ ತಿಳಿದದ್ದು.. ಆದರೆ ಯೌವನದ ನೆನಪುಗಳು ಹಾಗೇ ಹಚ್ಚ ಹಸಿರಾಗೆ ಇವೆ.. ಅದರಲ್ಲಂತೂ ತಾನು ಪ್ರೀತಿಸಿದವಳ ನೆನಪನ್ನು ಮರೆಯಲು ಸಾಧ್ಯವೇ.. ಆಗಾಗ್ಗೆ ಹೆಂಡತಿಯ ಹೆಸರು ಕರೆಯಲು ಹೋಗಿ ಸುಧಾ ಎಂದು ಜೋರಾಗಿ ಕೂಗಿದಾಗ ಹೆಂಡತಿ ಇದ್ಯಾಕೋ ಅತಿ ಆಯ್ತು ನಿಮ್ದು ಅಂದಾಗಲೇ ಗೊತ್ತಾಗುತ್ತಿದ್ದದ್ದು ತಾನು ಕರೆದದ್ದು ಹೆಂಡತಿಯ ಹೆಸರಲ್ಲವೆಂದು.  

     ಅವಳ ಹೆಸರು ಅದೆಷ್ಟು ಹಿತವಾಗಿದೆ ಸುಧಾ...  ಕೂಗೋಕು ಸುಲಭವಾದ ಹೆಸರೇ ಅದು..  ಅವಳ ನೆನಪಿಗಾಗೇ ಅಲ್ವ ಸುಧಾ ವಾರಪತ್ರಿಕೆಯನ್ನ ಪ್ರತಿವಾರ ತಾನೇ ನೆನಪು ಮಾಡಿಕೊಂಡು ಅಂಗಡಿಗೆ ಹೋಗಿ ಒಂದು ಕಿಂಗ್ ಹಾಗೆ ಸುಧಾ ಕೊಡಿ ಅನ್ನೋದು... ಇತ್ತೀಚಿಗೆ ಸುಧಾ ವಾರಪತ್ರಿಕೆ ಮೊದಲಿನಷ್ಟು ದಪ್ಪವಾಗಿಲ್ಲ.. ಈಗ ಬಳಕುವ ಬಳ್ಳಿಯ ಸೊಂಟದ ತರಹ ಚಿಕ್ಕದಾಗುತ್ತಿದೆ.. ಪುಟಗಳೂ ತುಂಬಾ ಸ್ಲಿಮ್ ಆಗಿ ಹೋಗಿದೆ.. ಅಂದಹಾಗೆ ಸುಧಾಳನ್ನು ಮೊದಲ ಬಾರಿ ಕಾಲೇಜಿನ ಕ್ಯಾಂಪಸ್ಸಿನಲ್ಲಿ  ಮೊದಲ ಕಣ್ಣೋಟದಲ್ಲೇ ಕಣ್ಣು ಕಣ್ಣುಗಳು ಒಬ್ಬರೊಬ್ಬರನ್ನು ಮೆಚ್ಚಿಕೊಂಡುಬಿಟ್ಟಿದ್ದವು... ಅವಳ ಉದ್ದದ ಜಡೆ ತನಗೆ ತುಂಬಾ ಇಷ್ಟಾವಾಗಿಬಿಟ್ಟಿತ್ತು.. ಅವಳ ಮುಖದ ಮೇಲೆ ತಿಳಿಯಾದ ಮಂದಹಾಸ ಅಲಂಕರಿಸಿತ್ತು.. ಅವಳ ಮನೆಯಲ್ಲಿ ಅಷ್ಟೆಲ್ಲಾ ಕಷ್ಟಗಳಿವೆ ಅಂತ ಗೊತ್ತಾಗಿದ್ದೆ ಒಂದು ವರ್ಷದ ಬಳಿಕ.. ಒಂದು ದಿನವೂ ತನ್ನ ಮನೆಯ ಕಷ್ಟಗಳನ್ನ ಹೇಳಿಕೊಂಡೇ ಇರಲಿಲ್ಲ.. ಅದ್ಯಾಕೋ ಆವತ್ತು ಅವಳ ಮುಖದಲ್ಲಿ ಆ ಮಂದಹಾಸ ಇರಲೇ ಇಲ್ಲ ಕಣ್ಣುಗಳು ಅತ್ತು ಅತ್ತು ಬತ್ತಿಹೋದಂತಿದ್ದವು. ಏನಾಯ್ತು ಅಂದಾಗಲೇ ಗೊತ್ತಾಗಿದ್ದು ಅವಳ ಮನೆಯಲ್ಲಿನ ಕಿತ್ತು ತಿನ್ನುವ ಬಡತನ, ಕುಡುಕ ತಂದೆಯು ತನ್ನ ತಾಯಿಗೆ ನೀಡುವ  ಹಿಂಸೆಗಳು.. ಅವಳು ಹೇಳಿದ್ದನ್ನು ಈಗ ನೆನಸಿಕೊಂಡರೂ ಹೃದಯ ಹಿಂಡಿದಂತಾಗುತ್ತೆ. 

     ರೀ ದಿನಾ ಇದೇ ಗೋಳಾಗಿ ಹೋಯ್ತು ಬನ್ನಿ ಊಟಕ್ಕೆ ಎಂದಾಗಲೇ ತಾನು ವಾಸ್ತವ ಲೋಕಕ್ಕೆ ಬಂದಿದ್ದು... ಓಹ್ ಎಡಗಾಲು ಮರಗಟ್ಟಿ ಹೋಗಿದೆ ಅಲ್ಲಾಡಿಸದೇ ಒಂದೇ ಸಮನೆ ಯೋಚನೆಯೊಳಗೆ ಮುಳುಗಿಹೋಗಿದ್ದರ ಪ್ರಭಾವ.. ಹೆಂಡತಿಯೊಂದು ಕಡೆ ಬೈಯುತ್ತಿದ್ದಾಳೆ,  ಬಂದೇ ಕಣೇ ಸತ್ತ ಕಾಲು ಹಿಡಕೊಂಡಿದೆ ಅಂದ ಮೇಲೆ ಅವಳು ಶಾಂತವಾಗಿದ್ದು... ಹೆಸರು ಶಾಂತ ಅಂತಲೇ ಆದರೂ ಅಶಾಂತಿಯೇ ಜಾಸ್ತಿ ಅಂತ ಹಲವಾರು ಸಲ ತನಗನ್ನಿಸಿದ್ದು ಸರಿಯೇ...ಹೆಂಡತಿಯ ಹತ್ತಿರ ದಿನಕ್ಕೊಮ್ಮೆ ಕಡಿಮೆ ಅಂದರೂ ಮೂರ್ನಾಲ್ಕು ಸಾರಿಯಾದರೂ ಬೈಸಿಕೊಂಡರೆ ಮಾತ್ರ ತಿಂದದ್ದೆಲ್ಲಾ ಜೀರ್ಣವಾಗೋದು.. ಹೆಂಡತಿ ಬೈಯಲೇ ಇಲ್ಲವೆಂದರೇನೆ ಭಯ ಕಾಡೋಕೆ ಶುರುವಾಗುತ್ತೆ, ಎಲ್ಲೋ ವಿಪರೀತ ಕೋಪಕ್ಕಿಟ್ಟುಕೊಂಡಿದೆಯಾ ಶಾಂತೂ ಏನಾಯ್ತೆ ಅಂತ ಕೇಳಿಯಾದರೂ ಬೈಯಿಸಿಕೊಂಡರೇನೆ ಸಮಾದಾನವಾಗೋದು...

     ಕರಿ ಬಾಳೆಹಣ್ಣೆಂದರೆ ತುಂಬಾ ಇಷ್ಟ ಅಂತ ಎರಡು ಬಾಳೆ ಹಣ್ಣು ತಿಂದದ್ದು ಒಮ್ಮೆಲೆ ದೇಹದಲ್ಲಿ ಸಕ್ಕರೆ ಜಾಸ್ತಿ ಆಗಿರೋದು ಖಚಿತವಾಗಿ ಹೋಯ್ತು.. ಮಾತ್ರೆ ತಗೋಳೋಣ ಅಂದರೆ ಹೆಸರು ನೆನಪಾಗುತ್ತಿಲ್ಲ, ಹೆಂಡತಿಯ ಹತ್ತಿರ ಕೇಳಿದರೆ ಬೈಗುಳ ಗ್ಯಾರಂಟಿ.. ಅದೇನೋ ಜಿ ಇಂದ ಆರಂಭವಾಗುತ್ತಲ್ಲಾ ಎಂದು ಯೋಚಿಸ ತೊಡಗಿದ.. ಅದೇ ಉದ್ದ ಮಾತ್ರೆ ಏನದೂ.. ಹಾಂ ಫೋರ್ಟ್.. ನೆನಪಾಯ್ತು ಗ್ಲೂಕೋರೆಡ್ ಫೋರ್ಟ್..  ಡಯಾಬಿಟೀಸ್ ಬಂದಾಗಲಿಂದಲೂ ಅದೇ ಮಾತ್ರೆ ಆದರೂ ಹೆಸರೇ ಮರೆತು ಹೋಯ್ತಲ್ಲಾ ಅಂತ ಪರಿತಪಿಸಿದ.


     ಮೇಜಿನ ಮೇಲಿದ್ದ ಬಿಳಿ  ಹಾಳೆ ಪೆನ್ನು ಪೇಪರ್ ಹಾಗೇ ಅನಾಥವಾಗಿ ಮೇಜಿನ ಮೇಲೆ ಬಿದ್ದುಕೊಂಡಿದೆ...  ಗೀಚಿದ್ದು ಬರೀ ಎರಡು ಮೂರು ಸಾಲು ಅಷ್ಟೆ.. ಅದೂ ಸಹ ಮತ್ತೊಮ್ಮೆ ಓದಿದಾಗ ಇನ್ನೂ ಚನ್ನಾಗಿ ಬರೆಯಬಹುದಿತ್ತು ಆರಂಭವೇ ಸರಿಯಿಲ್ಲವಲ್ಲ ಅನ್ನಿಸತೊಡಗಿ  ಆ ಪೇಪರ್ ಕೂಡ ಮೇಜಿನ ಪಕ್ಕದ ಮೂಲೆಯಲ್ಲಿದ್ದ ಕಸದ ಬುಟ್ಟಿಯಲ್ಲಿ ಸುರಳಿ ಸುತ್ತಿದ ಉಂಡೆಯಾಗಿ ಬಿದ್ದುಕೊಂಡಿತು... ಇವತ್ತೇನಾದರಾಗಲಿ ಬರೆದು ಮುಗಿಸಲೇಬೇಕೆಂದು ಪೆನ್ನು ಪೇಪರನ್ನು ತೆಗೆದುಕೊಂಡ.. ಮತ್ತೆ ಯೋಚನೆಗಳ ಸರಮಾಲೆ ಆತನನ್ನು ಸುತ್ತಿಕೊಳ್ಳತೊಡಗಿತು.

ಅವಳು ಎದುರಿಗೆ ಸಿಕ್ಕಾಗ ತನ್ನ ಮೇಲೆ ಅವಳಿಗೆ ಅದೇ ಪ್ರೀತಿ ವಾತ್ಸಲ್ಯ ಗೌರವಗಳು ಹಾಗೇ ಇದೆ, ತನಗೂ ಅಷ್ಟೆ ಅವಳನ್ನು ಮರೆಯಲಾಗುತ್ತಿಲ್ಲ, ನಾವಿಬ್ಬರೂ ಜೊತೆಗಾರರಾಗಲು ಯಾಕೆ ಸಾಧ್ಯವಾಗಲೇ ಇಲ್ಲ? ಪ್ರಶ್ನೆಗಳ ಸುರುಳಿ ಸುರುಳಿಗಳೇ ಕಣ್ಮುಂದೆ ಹಾದು ಹೋದವು ಇವೆಲ್ಲದಕ್ಕೂ ಉತ್ತರಗಳಿಲ್ಲದ ಪ್ರಶ್ನೆಗಳು ಕಥೆಗಾರನ ಮನಸಿನಾಳದಲ್ಲಿ ಬತ್ತದೇ ಹಾಗೇ ಉಳಿದು ಹೋಗಿದೆ. ಮನಸ್ಸು ತಿಳಿಯಾಗುವವರೆಗೂ ಕಿಟಕಿಯಾಚೆ ನೋಡುತ್ತಾ ನಿಲ್ಲುವ ಮನಸ್ಸಾಗಿ ನೀಲಿ ಆಗಸದೆಡೆಗೆ ನೋಡತೊಡಗಿದ. ಮಿಂಚೊಂದು ಮಿಂಚಿ ಮಾಯವಾಯಿತು..