ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Friday, May 27, 2011

ಸಾವಯವ ಕೃಷಿಯ ಬಗೆಗೆ ನಮಗೆಷ್ಟು ಗೊತ್ತು?

    ಸಂಪೂರ್ಣ ಸಾವಯವ ಕೃಷಿ ಈಗಿನ ಆಧುನಿಕ ಕೃಷಿಯಲ್ಲಿ ಸಾಧ್ಯವಾ? ರೋಗ ಭಾದೆಯಿಂದ/ ಹುಳ ಹುಪ್ಪಟೆಗಳ ಉಪಟಳದಿಂದ ಪಾರಾಗಲು ಸಾವಯವ ವಿಧಾನದಿಂದ ಸಾಧ್ಯವಿದೆಯಾ?

ರಾಸಾಯನಿಕ ಗೊಬ್ಬರ ಬಳಕೆ ಇಲ್ಲದೆ ಕೃಷಿ ಸಾಧ್ಯವಿಲ್ಲವಾ?? ಅನೇಕ ಪ್ರಶ್ನೆಗಳು ನಮ್ಮನ್ನು ಕಾಡುತ್ತದೆ, ಅದೇ ರೀತಿ ಅಡಿಕೆ ಬೆಳೆಗೆ ಎಂಡೋ ಸಲ್ಫಾನ್ ನಂತ ಅಪಾಯಕಾರಿಯಾದ ಭೂಮಿಯಲ್ಲಿ ಅನೇಕ ತಲೆಮಾರುಗಳು ಕಳೆದರೂ ನಾಶವಾಗದೆ ಮುಂದಿನ ಪೀಳಿಗೆಯನ್ನೇ ಅಂಗವಿಕಲರನ್ನಾಗಿ ಮಾಡುವ ಎಂಡೋ ಸಲ್ಫಾನ್ ಕೀಟನಾಶಕ ಬಳಕೆ ಅಷ್ಟು ಅವಶ್ಯವಾ?

     ಉತ್ತರ ಅಷ್ಟೊಂದು ಸುಲಭವಲ್ಲ. ರಾಸಾಯನಿಕ ಗೊಬ್ಬರಗಳು ಅನಿವಾರ್ಯವೇನಲ್ಲ, ಇನ್ನು ಮಲೆನಾಡಿನ ಹಲವು ಅಡಿಕೆ ಕೃಷಿಕರು ತಮ್ಮ ತೋಟಗಳಿಗೆ ಈವತ್ತಿನವರೆಗೂ ಕೊಟ್ಟಿಗೆ ಗೊಬ್ಬರವನ್ನು ಬಿಟ್ಟು ಯಾವ ರಾಸಾಯನಿಕ ಗೊಬ್ಬರವನ್ನೂ ತಮ್ಮ ತೋಟಗಳಿಗೆ ಒದಗಿಸಿಲ್ಲ, ಪೋಷಕಾಂಶದ ಕೊರತೆಯಿಂದ ಫಸಲಿನಲ್ಲಿ ಹಾನಿಮಾಡಿಕೊಂಡವರು ಕಡಿಮೆಯೇನಿಲ್ಲ. ಮಣ್ಣಿನ ಫಲವತ್ತತೆ ಮತ್ತು ಮಣ್ಣಿನಲ್ಲಿರುವ ಫೋಷಕಾಂಶಗಳ ಪರೀಕ್ಷೆಮಾಡಿ ಬೇಕಾದಷ್ಟೇ ಪ್ರಮಾಣದ ಲಘು ಫೋಷಕಾಂಶಗಳನ್ನು ಭೂಮಿಗೆ ಒದಗಿಸುವುದು ಹೆಚ್ಚೇನು ಹಾನಿಕಾರಕವಲ್ಲವೇನೋ ಅನ್ನಿಸುತ್ತದೆ.

     ಇಂದಿನ ಕೃಷಿಕರ ಪರಿಸ್ಥಿತಿಯಲ್ಲಿ ಎಲ್ಲವೂ ಸವಾಯವ ವಿಧಾನ ಅಥವಾ ಶೂನ್ಯ ಕೃಷಿ ಎಂದು ತೋಟದಲ್ಲಿ ಹುಟ್ಟಿರುವ ಕಳೆಯನ್ನೂ ತೆಗೆಸದೆ ಓಡಾಡಲೂ ಬಾರದಂತಹ ಪರಿಸ್ಥಿತಿಯ ನಿರ್ಮಾಣ ಎಷ್ಟು ಸರಿ? ಮೇಲೆ ತಿಳಿಸಿದಂತ ತೋಟಗಳನ್ನು ನೋಡಿದಾಗ ಬೇಸರವಾಗದೆ ಇರಲಾರದು, ಕೆಲಸಗಾರರ ಕೊರತೆ ಇದೆ ನಿಜ, ಆದರೆ ತೋಟ ಗದ್ದೆಗಳ ಕೆಲಸ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಖಂಡಿತಾ ಬಂದಿಲ್ಲ, ಬರುವುದೂ ಇಲ್ಲವೆನೋ.



     ಸಾವಯವ ಕೃಷಿ ಮಾಡಲು ಹೋಗಿ ಬೆಳೆಗೆ ಹಾನಿಯಾದರೆ ಸ್ವಲ್ಪ ಪ್ರಮಾಣದ ರಾಸಾಯನಿಕ ಔಷದಿ ಬಳಸಿದ್ದರೆ ಬೆಳೆಯನ್ನು ಉಳಿಸಿಕೊಳ್ಳಬಹುದಿತ್ತೇನೋ ಅನಿಸಿಬಿಡುತ್ತಲ್ಲಾ.ಕೃಷಿ ತಜ್ಞರ ಸಲಹೆ ಪಡೆದು ಸರಿಯಾದ ಪ್ರಮಾಣದ ರಾಸಾಯನಿಕ ಔಷದಗಳ ಬಳಕೆ ಸೂಕ್ತವೇನೋ ಅನ್ನಿಸುತ್ತದೆ.



     ಅಂದಹಾಗೆ ನಾವು ಅಡಿಕೆ ತೋಟಕ್ಕೆ ಕೋಲ್ಮನ್ ಹೇಳಿ ಹೋದ ಅದೇ ಅಪ್ಪ ಹಾಕಿದ ಆಲದಮರ ಎನ್ನುವ ಬೋರ್ಡೋ ಮಿಶ್ರಣ ಸಿಂಪರಣೆ ಮಾಡಿದರೂ ಅದು ಸಾವಯವ ಅನ್ನಿಸಿಕೊಳ್ಳಲಾರದು, ನಿಜ ಒಂದು ಪ್ರತಿಷತ ಪ್ರಮಾಣದಲ್ಲಿ ಬೋರ್ಡೋ ಮಿಶ್ರಣ ಸಿಂಪರಣೆ ಮಾಡಿದಲ್ಲಿ ಸಾವಯವ ಕೃಷಿಯಂತೆ ಪರಿಗಣಿಸುವ ರಿಯಾಯತಿ ಇದೆ, ಆದರೆ ಅದು ಕೂಡ ಸಂಪೂರ್ಣ ಸಾವಯವ ಅನ್ನಿಸಿಕೊಳ್ಳಲಾರದು, ನೆನಪಿರಲಿ, ಬಯೋ ಎಂದು ಬರೆದದ್ದೆಲ್ಲವೂ ಸಾವಯವ ಎಂದು ಪರಿಗಣಿಸಿದರೆ ನಮ್ಮಂತಹ ಮೂರ್ಖರು ಮತ್ತಾರು ಇರಲಾರರು. ಒಂದು ಪರ್ಸೆಂಟ್ ಪ್ರಮಾಣದಲ್ಲಿ ಬೋರ್ಡೋ ಬಳಸಿದರೆ ಕೊಳೆರೋಗ ನಿಯಂತ್ರಣ ಎಷ್ಟು ಮಟ್ಟಿಗೆ ಸಾಧ್ಯ?

    ನಾವು ಎಷ್ಟು ಜನ ಕೃಷಿಕರು ಸರಿಯಾದ ಪ್ರಮಾಣದಲ್ಲಿ ಬೋರ್ಡೋ ಮಿಶ್ರಣ ತಯಾರಿಸಿದ್ದೇವೆ? ಒಬ್ಬೊಬ್ಬರದ್ದು ಒಂದೊಂದು ರೀತಿ, ಒಬ್ಬರು ಒಂದು ಕೇಜಿ ಸುಣ್ಣ, ಎರೆಡು ಕೇಜಿ ಮೈಲು ತುತ್ತ, ಇನ್ನೊಬ್ಬರದು ಮೂರುಕೇಜಿ ಸುಣ್ಣ ಒಂದು ಕೇಜಿ ಮೈಲುತುತ್ತ, ಮಿಶ್ರಣ ಸರಿಯಾಗಿದೆಯಾ, ಪಿ ಹೆಚ್ ಎಷ್ಟು ಎಂದು ಲಿಟ್ಮಸ್ ಟೆಸ್ಟ್ ಮಾಡುವುದು ಹೇಗೆ ಎನ್ನುವುದು ನಮ್ಮಲ್ಲಿ ಅನೇಕರಿಗೆ ಗೊತ್ತಿದೆಯೊ ಇಲ್ಲವೊ ಒಂದು ವೇಳೆ ಗೊತ್ತಿದ್ದರೂ ಲಿಟ್ಮಸ್ ಪೇಪರುಗಳು ಸಿಕ್ಕೋದಿಲ್ಲ. ಮೂರು ನಾಲ್ಕು ಬಾರಿ ಬೊರ್ಡೊ ಮಿಶ್ರಣ ಸಿಂಪರಣೆ ಮಾಡಿದರೂ ಕೊಳೆರೋಗ ನಿಯಂತ್ರಣ ಸಾಧ್ಯವಾಗಿಲ್ಲ.

     ಇನ್ನು ಮಳೆ ಬರುತ್ತಿರುವಾಗ ಕೊಳೆ ಔಷದಿ ಸಿಂಪಡಿಸಿದರೆ ಅದರ ಪ್ರಯೋಜನವಾಗುತ್ತಾ? ಮಳೆ ನೀರಿನಲ್ಲಿ ಔಷದಿ ಪ್ರಮಾಣ ಕಡಿಮೆಯಾಗದೆ ಉಳಿಯಲು ಸಾಧ್ಯವೇ?

      ಅಜ್ಜ ಮುತ್ತಾತನ ಕಾಲದಿಂದಲೂ ಬೋರ್ಡೋ ಮಿಶ್ರಣವನ್ನು ಮಳೆ ಸುರಿಯುತ್ತಿದ್ದಾಗ, ಕೊಳೆಯ ಲಕ್ಷಣಗಳು ಕಂಡಾಗ ಹೊಡೆಯುವ ಪರಿಪಾಠ ಅಷ್ಟು ಸುಲಭವಾಗಿ ಬಿಡಲು ಆಗುತ್ತಿಲ್ಲ, ಯಾರು ಏನೇ ಹೇಳಿದರೂ ಅಜ್ಜ ಮುತ್ತಾತನ ಕಾಲದಿಂದಲೂ ಮಾಡಿದ್ದನ್ನು ಬದಲಾಯಿಸಿಕೊಳ್ಳುವುದು ಕಷ್ಟವೇ ಅಲ್ಲವೇ?