ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Monday, July 19, 2010

ಏನಿದು ಎಡೆ ಶೃಂಗಾರ?

     ನಾನು ಬ್ಲಾಗ್ ಮನೆಯ ಬಾಗಿಲು ತೆರೆಯದೇ ಅನೇಕ ತಿಂಗಳುಗಳೇ ಕಳೆದು ಹೋಗಿವೆ, ಮನೆಯ/ಮನದ ಅಂಗಳದೊಳಗೆ ಧೂಳು ಕಾಲಿಗೆ ಮೆತ್ತಿಕೊಂಡ ಅನುಭವ, ಸುತ್ತಲೂ ಜೇಡ ಬಲೆ ಹೆಣೆದ ಹಾಗೆ ಭ್ರಮೆಯೋ ವಾಸ್ತವವೋ ಗೊತ್ತಾಗುತ್ತಿಲ್ಲ!, ಈಗ ನಾನು ಮನೆ/ಮನದಂಗಳವನ್ನು ಚೊಕ್ಕವಾಗಿಸಿ, ದೂಳು ಜೇಡರ ಬಲೆಯನ್ನು ತೊಲಗಿಸಿ, ಹೊಸ ಹುಮ್ಮಸ್ಸಿನಿಂದ ನನ್ನ ಬ್ಲಾಗ್ ಮನೆಯ ಅಂಗಳಕ್ಕೆ ನಿಮ್ಮನ್ನು ಆಮಂತ್ರಿಸುತ್ತಿದ್ದೇನೆ, ಎಡೆ ಶೃಂಗಾರ ಎನ್ನುವುದರ ಬಗ್ಗೆ ಬರೆದಿದ್ದೇನೆ ಇಷ್ಟವಾಗಬಹುದು ಅನಿಸುತ್ತಿದೆ, ಓದಿ ನೋಡಿ

     ಎಡೆ ಶೃಂಗಾರ ಎನ್ನುವ ಪದ ಹಳ್ಳಿಗಳಲ್ಲಿ ಬಳಕೆಯಲ್ಲಿರುವುದು ಅದೂ ಅಲ್ಲದೆ ವಿಶೇಷವಾಗಿ ಕಾರ್ಯದ ಮನೆಯಲ್ಲಿ ಹೆಚ್ಚಿಗೆ ಬಳಕೆಯಲ್ಲಿರುವುದು ಅತ್ಯಂತ ಸಂತೋಷ ಕೊಡುವ ವಿಚಾರವಾಗಿದೆ. ಎಡೆ ಎಂದರೆ ಬಾಳೆ ಎನ್ನುವ ಅರ್ಥಕೊಡುತ್ತದೆ, ಶೃಂಗಾರ ಎಂದರೆ ಸಿಂಗರಿಸುವುದು, ಬಾಳೆ ಎಲೆಯನ್ನು ಸಿಹಿ ತಿನಿಸು ಹಾಗೂ ಪದಾರ್ಥಗಳಿಂದ ಶೃಂಗರಿಸುವುದನ್ನೇ ಎಡೆ ಶೃಂಗಾರ ಎನ್ನಬಹುದಾ? ,ಊಹೂಂ ಇಷ್ಟೇ ಹೇಳಿದರೆ ಇದೇನಿದು ಇಷ್ಟೇನಾ ಇದರಲ್ಲೇನು ವಿಶೇಷ ಅನ್ನಿಸಿಬಿಡುತ್ತದೆ, ಬಾಳೆ ಎಲೆಯಲ್ಲಿ ಉಪ್ಪು, ಉಪ್ಪಿನಕಾಯಿ ಹೀಗೆ ಒಂದೊಂದು ಪದಾರ್ಥಕ್ಕೂ ಒಂದೊಂದು ಜಾಗ ಮೀಸಲಾಗಿದೆ, (ಪದಾರ್ಥ ಎಂದರೆ ಅರ್ಥವಾಗದವರಿಗೆ ಅದೇ ಸೈಡ್ಸ್ ಕಣ್ರಿ ;)) ಅದು ಅಲ್ಲಲ್ಲಿ ಇದ್ದರೆ ಮಾತ್ರ ಎಡೆ ಶೃಂಗಾರ ಪೂರ್ಣಗೊಳ್ಳುತ್ತದೆ, ನೀವು ಬಾಳೆ ಎಲೆಯ ಮುಂದೆ ಕುಳಿತರೆ(ನಿಮ್ಮ ಮುಂದೆ ಬಾಳೆ ಎಲೆ ಇರುತ್ತದೆ!) ಬಾಳೆ ಎಲೆಯ ಮೇಲ್ತುದಿಯ ಎಡಭಾಗದಲ್ಲಿ ಮೊದಲು ಉಪ್ಪು, ಅದರ ಪಕ್ಕದಲ್ಲಿ ಉಪ್ಪಿನಕಾಯಿ, ಕೋಸಂಬರಿ, ಸಾಸಿವೆ(ಹಶಿ), ಪಲ್ಯ ಹೀಗೆ ಅಲಂಕಾರ ಮಾಡಲಾಗುತ್ತದೆ. ಚಿತ್ರಾನ್ನ ಬಾಳೆ ಎಲೆಯ ಕೆಳಗೆ ಎಡಭಾಗದಲ್ಲೇ ಹಾಕಬೇಕು ಅದರ ಮೇಲೆ ಇರುವ ಸ್ವಲ್ಪ ಖಾಲಿ ಜಾಗ ಕೇಸರಿ, ಜಿಲೀಬಿ ಮುಂತಾದ ಯಾವುದೇ ಸಿಹಿ ಪದಾರ್ಥ ಮಾಡಿದರೂ ಇದೇ ಜಾಗ ಖಾಯಂ, ಹಪ್ಪಳವನ್ನು ಚಿತ್ರಾನ್ನದ ಮೇಲೆ ಹಾಕುವುದು ವಾಡಿಕೆ, ಇನ್ನು ಪಾಯಸವನ್ನು ಮಾಡಿದ್ದರೆ ಅದಕ್ಕೆ ಈ ಜಾಗದಲ್ಲಿ ಸ್ಥಾನವಿಲ್ಲ, ಅದಕ್ಕೆ ಬಾಳೆ ಎಲೆಯ ಕೆಳ ಬಲಭಾಗದಲ್ಲಿ ತನ್ನ ಸ್ಥಾನವನ್ನು ಪಡೆದಿದೆ ಅದರ ಮೇಲ್ಭಾಗದಲ್ಲಿ ಪಂಚಕಜ್ಜಾಯ ತನ್ನ ಸ್ಥಾನವನ್ನು ಅಲಂಕರಿಸಿದೆ.


                                            (ಹೆಚ್ಚಿಗೆ ಚಿತ್ರಗಳನ್ನು ಹಾಕಲು ಸಾಧ್ಯವಾಗುತ್ತಿಲ್ಲ)

ನನಗೆ ಎಡೆ ಶೃಂಗಾರದ ಬಗ್ಗೆ ಬರೆಯುವ ವಿಚಾರ ಏಕೆ ಬಂತೆಂದರೆ ಸ್ವಲ್ಪ ದಿನದ ಹಿಂದೆ ಒಂದು ಕಾರ್ಯದ ಮನೆಗೆ ಹೋಗಿದ್ದೆ ಅಲ್ಲಿ ಎಡೆ ಶೃಂಗಾರ ಹಾಗು ಅಡಿಗೆ ಬಡಿಸಿದ ವಿಧಾನ ನೋಡಿ ಊಟ ಮುಗಿಸಿ ಎದ್ದರೆ ಸಾಕಪ್ಪಾ ಎನ್ನುವಷ್ಟರ ಮಟ್ಟಿಗೆ ಬೇಸರ ತರಿಸಿತು, ಬಡಿಸುವವರಿಗೆ ಎಲ್ಲೆಲ್ಲಿ ಯಾವ ಪದಾರ್ಥ ಹಾಕಬೇಕೆಂದು ಗೊತ್ತಿರಲಿಲ್ಲ, ಬರೀ ಅಷ್ಟೇ ಆಗಿದ್ದರೆ ಏನು ಆಗುತ್ತಿರಲ್ಲವೇನೋ.. ತಿನ್ನಲು ಸಮಯವೆಷ್ಟು ಕೊಡಬೇಕೆಂಬ ಅರಿವೆಯೇ ಇರದೇ ಒಂದಾದ ನಂತರ ಒಂದು ಪದಾರ್ಥ ತಂದು ಸುರಿಯುವುದನ್ನೇ ಬಡಿಸುವುದು ಎಂದುಕೊಂಡಿದ್ದರೇನೋ!, ಕಾರ್ಯದ ಮನೆಗಳಲ್ಲಿ ಅಡಿಗೆ ಮನೆ ಮೇಲ್ವಿಚಾರಣೆ ಮಾಡಲು ಮನೆಯ ಒಡೆಯನ ಹತ್ತಿರದ ಸಂಬಂದಿಕರಿಗೆ ವಹಿಸುವ ಪರಿಪಾಠ ಅನೇಕ ಕಡೆಗಳಲ್ಲಿದೆ, ಆ ಮೇಲ್ವಿಚಾರಣೆಗೆ ನೇಮಕವಾದ ವ್ಯಕ್ತಿಗೆ ಅನೇಕ ಜವಾಬ್ದಾರಿಗಳಿರುತ್ತವೆ, ಅನ್ನ ಎಷ್ಟು ಜನರಿಗೆ ತಯಾರಿಸಿದ್ದಾರೆ, ಎಷ್ಟು ಜನ ಬರುವ ನಿರೀಕ್ಷೆಯಿದೆ, ಏನೇನು ಅಡಿಗೆ ಭಟ್ಟರ ಬೇಡಿಕೆಗಳಿವೆಯೋ ಅವನ್ನೆಲ್ಲ(ಅಡಿಗೆ ಭಟ್ಟರು ಕೇಳಿದ್ದಕ್ಕಿಂತ ಸ್ವಲ್ಪ ಕಡಿಮೆ) ತಂದು ಕೊಡುವುದರಿಂದ ಹಿಡಿದು ಊಟ ಆರಂಭವಾದಗ ಯಾವ ಪದಾರ್ಥದ ನಂತರ ಏನು ಏನು ಬಡಿಸಲು ತೆಗೆದುಕೊಂಡು ಹೋಗಬೇಕೆಂದು ಹೇಳಬೇಕಾಗುತ್ತದೆ, ಅಂದರೆ ನಮ್ಮ ಮಲೆನಾಡಿನ ಹವ್ಯಕರ ಮನೆಗಳಲ್ಲಿ ಮೊದಲಿಗೆ ಅನ್ನ, ಸಾರು, ನಂತರ ಮತ್ತೆ ಅನ್ನ ಹುಳಿ (ಸಾಂಬಾರ) ಯನ್ನು ಬಡಿಸಿದ ನಂತರ ಹಪ್ಪಳ, ಸಂಡಿಗೆ, ಚಕ್ಕುಲಿ ಹೀಗೆ ಯಾವುದನ್ನು ಮಾಡಿರುತ್ತಾರೆ ಅದು ಬರಬೇಕು, ನಂತರ ಸಿಹಿ ತಿನಿಸುಗಳನ್ನು ಬಡಿಸುತ್ತಾರೆ, ಸಾಂಬಾರು(ಹುಳಿ) ಮುಗಿದು ಸಾಸಿವೆ ಬಂದ ಮೇಲೆ ಹಪ್ಪಳ ತಂದು ಹಾಕಿದರೆ ಅದು ಅಸಂಬದ್ಧವೆನಿಸುತ್ತದೆ, ಬಾಳೆಯಲ್ಲಿನ ಪದಾರ್ಥಗಳು ಖಾಲಿ ಆಗುತ್ತಾ ಬಂತೋ ಅಥವಾ ಇನ್ನೂ ಊಟ ಮಾಡುತ್ತಾ ಇದ್ದಾರೋ ನೋಡಿಕೊಂಡು ಬಡಿಸಬೇಕಾಗುತ್ತದೆ, ಅಂದರೆ ಸಾರು ಬಡಿಸಿದ ತಕ್ಷಣ, ಅದನ್ನು ತಿನ್ನಲೂ ಸಮಯ ಕೊಡದೆ ಮತ್ತೆ ಅನ್ನ ಸಾಂಬಾರು(ಹುಳಿ) ತಂದು ಸುರಿದರೆ ಊಟಕ್ಕೆ ಕುಳಿತವರ ಪಾಡೇನು?.

     ಇನ್ನು ಊಟ ಮಾಡುವಾಗ ಅನ್ನವನ್ನು ಎರೆಡು ಪಾಲುಗಳಾಗಿ ಮಾಡಿಕೊಂಡು ಬಲಭಾಗದ ಅನ್ನಕ್ಕೆ ಪದಾರ್ಥಗಳನ್ನು ಹಾಕಿಸಿಕೊಂಡು ಊಟ ಮಾಡುವ ಅಭ್ಯಾಸವೇ ಹವ್ಯಕರಲ್ಲಿ ಒಂದು ವಿಶೇಷವೇ ಸರಿ, ಒಂದು ಮದುವೆ ಮನೆಯಲ್ಲಿ ಬಡಿಸುವವರೊಬ್ಬರು ನಾನು ಪಾಲು ಮಾಡಿದ ಅನ್ನದ ಎಡಗಡೆಯ ಪಾಲಿಗೆ ಸಾಂಬಾರು ಸುರಿದಿದ್ದ, ನಾನು ಅವನನ್ನು ನೋಡಿ ನಕ್ಕಿದ್ದೆ, ಅವನಿಗೇನು ಅರ್ಥವಾಗಲಿಲ್ಲವೇನೋ! ನಾವು ಯಾವಾಗಲೂ ಬಲಗಡೆಯ ಅನ್ನದ ಪಾಲಿಗೆ ಪದಾರ್ಥಗಳನ್ನು ಹಾಕಿಸಿಕೊಂಡು ಊಟಮಾಡುತ್ತೇವೆ. ಕಾರಣ ಬಲಭಾಗದಲ್ಲಿರುವುದನ್ನು ಬಾಯಿಗೆ ಹಾಕಿಕೊಳ್ಳುವುದು ಬಲಗೈಗೆ ಸುಲಭ ಎನ್ನುವ ಕಾರಣವಾಗಿರಬಹುದು. ಹೀಗೆ ಹೇಳುತ್ತಾ ಹೋದರೆ ದೊಡ್ಡ ಪುರಾಣವಾದೀತು.ಹೇಳುವುದು ತುಂಬಾ ಉಳಿದು ಹೋ.........ಗಿದೆ, ಬರೆದಿದ್ದು ಅತಿಯಾಗಿ ಹೋಯಿತಾ ಏನೂ... ತಿಳಿಯದಾಗಿದೆ, ನಿಮ್ಮ ಮನದ ದನಿಯು ಕೇಳದಾಗಿದೆ ನಿಮಗನ್ನಿಸಿದ್ದು  ಬರೆಯಬಾರದೇ? ತಿಳಿಸುತ್ತೀರಿ ಅಲ್ವಾ.. ಕಾಯುತ್ತಿದ್ದೇನೆ ನಿಮ್ಮ ಅನಿಸಿಕೆಗಾಗಿ.ಕೊನೆಯ ಮಾತು: ಊಟದ ಸವಿಯನ್ನು ತಿಳಿಯಲು ಮಲೆನಾಡಿನ ಹಳ್ಳಿಗಳಿಗೆ ಬನ್ನಿ, ಪ್ರಕೃತಿಯ ಸೊಬಗನ್ನು ಕಣ್ದುಂಬಿಕೊಳ್ಳಿ, ಜೊತೆಗೆ ಅನೇಕ ಪ್ರವಾಸಿ ತಾಣಗಳನ್ನೂ ಸಹ ನೋಡಬಹುದಾಗಿದೆ. ಇದು ಕರ್ನಾಟಕ ಪ್ರವಾಸೋದ್ಯಮದ ಪರವಾಗಿ ನಿಮಗೆ ಕರೆಯೋಲೆ. ನಮ್ಮ ಪ್ರವಾಸೋದ್ಯಮ ಇಲಾಖೆ ಸರಿಯಾಗಿ ಕೆಲಸಮಾಡುತ್ತಿಲ್ಲ, ಪ್ರಚಾರ ಮಾಡುತ್ತಿಲ್ಲ ಎನ್ನುವ ದೂರುಗಳಿವೆ ಅದನ್ನು ಸುಳ್ಳಾಗಿಸೋಣ.

21 comments:

ಪ್ರಗತಿ ಹೆಗಡೆ said...

ಮತ್ತೊಂದ್ ವಿಷಯ ಗೊತ್ತಾ,
ನನಗೆ ತಿಳಿದ ಹಾಗೆ ಅಬ್ಗೆರೆ ( ಎಲ್ಲ ಬಡಿಸೋಕೆ ಮುಂಚೆ ತುಪ್ಪ ಅಥವಾ ಹಾಲು ಬಡಿಸೋದು) ಹವ್ಯಕರಲ್ಲಿ ಒಂದು ವಿಶೇಷ... ಏನಂತೀರಿ...

shridhar said...

ಮನಸ್ವಿ ,
ಚೆನ್ನಾಗಿದೆ ನಿಮ್ಮ ಬರಹ. ಇತ್ತೀಚೆಗೆ ಬಾಳೆ ಎಲೆ ಊಟ ಕೂಡ ಕಡಿಮೆ ಆಗುತ್ತಿದೆ.
ಎಲ್ಲಿ ನೋಡಿದರು .. ಈ ಕಾರಣದಿಂದಾಗಿಯೆ ಹಲವರಿಗೆ ಎಲೆಯೂಟದ ಸಮಯದಲ್ಲಿ ಎಲ್ಲಿ
ಏನು ಹಾಕಬೇಕೆಂಬುದು ತಿಳಿತದಂತಾಗಿದೆ ಎನ್ನುವುದು ನನ್ನ ಅಭಿಪ್ರಾಯ.
ಏನಾದರೇನು ತಿನ್ನಲು ಸರಿಯಾಗಿ ಇದ್ದರೆ ಆಯಿತು ಎನ್ನುವವರೇ ಹೆಚ್ಚಿ ಈಗ....

ಆಲೋಚನಾಯುಕ್ತ ಬರಹ.

ನಮ್ಮ ಬ್ಲೊಗಗೂ ಒಮ್ಮೆ ಬನ್ನಿ.

ಶ್ರೀಧರ ಭಟ್ಟ

Dileep Hegde said...

ಮನಸ್ವಿ..ಎಡೆಯ ಶೃಂಗಾರಕ್ಕೆ ಮತ್ತು ಬಡಿಸುವ ಕ್ರಮಕ್ಕೆ ನಮ್ಮ ಹವ್ಯಕರಲ್ಲಿ ಅತೀ ಹೆಚ್ಚಿನ ಮಹತ್ವ ಕೊಡುತ್ತಾರೆ.. ಚಿಕ್ಕಂದಿನಿಂದ ಇದೇ ಅಭ್ಯಸವಾಗಿರೋ ನಮಗೆ ಕೆಲವೊಮ್ಮೆ ನಮ್ಮವರೇ ಪದ್ದತಿ ತಪ್ಪುವದನ್ನ ನೋಡಿ ಕೋಪ ಬರೋದು ಸಹಜ.. ನೀವು ಅಸಮಾಧಾನ ಗೊಂಡಿದ್ದರಲ್ಲಿ, ತಪ್ಪು ಮಾಡ್ತಿರೋರನ್ನ ನೋಡಿ ನಕ್ಕಿದ್ರಲ್ಲಿ ತಪ್ಪೇನೂ ಇಲ್ಲ ಬಿಡಿ...

sjmutt said...

ಎಡೆಯ ಶೃಂಗಾರ, ಅತ್ಯಂತ ಚಿಕ್ಕ ವಿಚಾರ ಅನಿಸಿದರೂ, ಒಂದು ಸಮಾರಂಭದ ಅತಿ ಮುಖ್ಯ ಬಾಗ ಊಟೋಪಚಾರ. ಮದುವೆಗೆ ಹೋಗಿ ಬಂದವರ ಮೊದಲ ಮಾತು. ಅಬ್ಬಾ, ಅವರ ಮದುವೆಯಲಿ ಏನು ಬೋಜನ, ಊಟದ ವ್ಯವಸ್ತೆ ಹೇಗಿತ್ತು ಅಂತ. ಇವೆಲ್ಲ ವಿಚಾರದ ಬಳಿಕ ಮದುವೆಯಲಿ ಜೋಡಿ ಹೇಗಿತ್ತು ಅನ್ನುವ ಮಾತುಗಳು ಶುರುವಾಗುತ್ತವೆ. ಯಾವುದೇ ಪದ್ದತಿಗೆ ಅದರದೇ ಸಿಸ್ತು, ರೀತಿ ಮತ್ತು ರಿವಾಜುಗಳು ಇರುತ್ತವೆ. ಅದಕ್ಕೆ ತಕ್ಕಂತೆ ನಡೆದರೆ ಅದಕ್ಕೆ ಅದರದೇ ಮಾನ್ಯತೆ ಸಿಗುತ್ತದೆ.
ಎಡೆಯ ಶೃಂಗಾರ ನಿಮ್ಮ ಬರವಣಿಗೆಯು ಉತ್ತಮವಾಗಿ ಮೂಡಿಬಂದಿದೆ.
ಅಭಿನಂದನೆಗಳು.

jithendra hindumane said...

ಆದಿತ್ಯಾ, ಇನ್ನೂ ಸ್ವಲ್ಪ ಕಲರ್‌ಫುಲ್ ಫೋಟೋ ಬೇಕಾಗಿತ್ತು..

ಆಮೇಲೆ ಊಟ ಮನೇಲಿ ಆದ್ರೆ ಇದೆಲ್ಲಾ ಗಮನಿಸಿ ಊಟ ಮಾಡಬಹುದು. ಆದ್ರೆ ಛತ್ರಗಲಲ್ಲಿ ಎಲೆ ಹಿಡಿದು ಕುರೋದೆ ಕಷ್ಟ..! ಆಮೇಲೆ ಬಡಿಸೋಕ್ಕಿಂತ ಮೊದಲೇ ತನ್ನಲು ಶುರು ಮಾಡಿಬಿಡ್ತಾರೆ...
ಆದ್ರು ಹವ್ಯಕರ ಸಂಪ್ರದಾಯ ಬಿಂಬಿಸುವ ಉತ್ತಮ ಪ್ರಯತ್ನ.

CHAITANYA HEGDE said...

ಚೆನ್ನಾಗಿ ಬರದ್ಯೋ!!!!

ಮನಸ್ವಿ said...

@Pragathi Hegde
ಹೌದು.. ನಿಜ ಅಬ್ಗೆರೆ ಬಗ್ಗೆ ಬರೆಯಲು ನೆನಪಾಗಲೇ ಇಲ್ಲ, ತುಪ್ಪ ಬಡಿಸೋದು ಗೊತ್ತು, ಹಾಲು ಬಡಿಸೋದು ಕೇಳಿಲ್ಲ, ಹೊಸ ವಿಚಾರ... ಧನ್ಯವಾದಗಳು

@Shridhar
ಸರಿಯಾಗಿ ತಿನ್ನಲು ಇರುವುದು ಹೋಗಲಿ ಸರಿಯಾಗಿ ತಿನ್ನಲು ಬಾರದೇ ಇರುವವರೇ ಹೆಚ್ಚು, ಎಲ್ಲಾ ಡಯಟ್ ಮಹಿಮೆ, ಧನ್ಯವಾದಗಳು.. ನಿಮ್ಮ ಬ್ಲಾಗ್ ಗೆ ಬೇಟಿ ನೀಡಿದೆ ಚನ್ನಾಗಿದೆ.

@Dileep Hegde
ಹ್ಮ್...ದಿಲೀಪ್ ಏನು ಮಾಡೋದು ಹೇಳಿ... ಧನ್ಯವಾದಗಳು ಪ್ರತಿಕ್ರಿಯೆಗೆ.

@Shivaprakash
ಹೌದು ಊಟೋಪಚಾರ ಸರಿಯಾಗಿ ಆದ್ರೆ ಮಾತ್ರ ಸಮಾರಂಭ ಯಶಸ್ವಿಯಾಗಿ ಆಗಿದೆ ಅನ್ನಿಸಿಕೊಳ್ಳೋದು. ಧನ್ಯವಾದ
@ Jithendra Hindumane
ಹೌದಾ.. ಪೋಟೋ ಚನಾದು ಹಾಕಕ್ಕೆ ಆಗಲ್ಲೆ, ಫೋಟೋಗೆ ಕಾದು ಕಾದೇ ಬ್ಲಾಗ್ ಅಪ್ಡೇಟ್ ಮಾಡದು ಲೇಟಾತು.. ಇನ್ನು ಯಾವಾಗದರೂ ಒಳ್ಳೇ ಪೋಟೋ ತೆಗೆದು ಹಾಕ್ತಿ

ಎಲೆ ಹಿಡಿದು ಕೂರೋದಾ.. ಅಬ್ಬಾ ಮೊದಲ ಪಂಕ್ತಿಯವರು ಊಟ ಮುಗಿಸುವುದಕ್ಕಿಂತ ಮುಂಚೆಯೇ ಅವರ ಹಿಂದೆ ಹೋಗಿ ನಿಲ್ಲೋದು.. ಊಟ ಮುಗಿಸಿ ಎದ್ದು ಹೋದ ಮೇಲೆ ಅದೇ ಎಂಜಲು ಎಲೆಯ ಮುಂದೆ ಕುಳಿತುಕೊಳ್ಳೋದು.... ಅಬ್ಬಾ ಒಂದಾ ಎರೆಡಾ.....
ಧನ್ಯವಾದ.

@Chaitanya
ತ್ಯಾಂಕ್ಸೋ!!!!

g.mruthyunjaya said...

ಲೇಖನ ಚೆನ್ನಾಗಿದೆ. ಹೀಗೇ ಬರೆಯುತ್ತಿರಿ. ನನ್ನ ಅನಿಸಿಕೆಗಳು. ೧. ನೀವು ಸಾಂಬಾರ್ ಎಂಬ ಪದವನ್ನು ನಾಲ್ಕು ಸಾರಿ ಉಪಯೋಗಿಸಿದ್ದೀರಿ. ನಮ್ಮ ಪರಿಸರಕ್ಕೆ ಒಗ್ಗದ ಈ ಆಮದು ಶಬ್ದದ ಬದಲು ನಮ್ಮದೇ ಆದ ಹುಳಿ ಶಬ್ದ ಬಳಕೆಯಲ್ಲಿರಲಿ. ಹಾಗೆಯೇ ರಸಂ ಬೇಡ. ಸಾರು ಇರಲಿ. ಲೇಖನದಲ್ಲೂ, ಮನೆಯಲ್ಲೂ,ಕಾರ್ಯದ ಮನೆಯಲ್ಲೂ. ೨. ಇನ್ನೊಂದು ವಿಚಾರವನ್ನೂ ಇಲ್ಲಿ ಹೇಳಬಹುದು. ಪಂಕ್ತಿಯ ಮೇಲೆ ಬಡಿಸುವಾಗ ಬಡಿಸುವವರು ತಮ್ಮ ಎಡಭಾಗದಿಂದ ಬಲಕ್ಕೆ ಬಡಿಸುತ್ತ ಹೋಗಬೇಕು. ಅಂದರೆ ಪ್ರದಕ್ಷಿನಾಕಾರ (ಸರಿಯಾದ ಶಬ್ದವನ್ನು ಗೂಗಲ್ ನಿಂದ ಹೊರಡಿಸಲಾಗಲಿಲ್ಲ. ಕ್ಷಮಿಸಿ.) ವಾಗಿಯೇ ಬಡಿಸಬೇಕು.

ಸಾಗರದಾಚೆಯ ಇಂಚರ said...

ಎಡೆ ಶೃಂಗಾರ ಓದಿ ಮನೆಯ ಊಟ ನೆನಪಾಯಿತು
ಹವ್ಯಕರ ಊಟದ ರುಚಿಯೇ ಬೇರೆ

ಪ್ರಗತಿ ಹೆಗಡೆ said...

ಹೌದು ಆದಿತ್ಯ...
ರಾತ್ರಿ ಅಬ್ಗೆರೆಗೆ ತುಪ್ಪ ಬಡಿಸಲ್ಲ... ಸಂಪ್ರದಾಯ ಕುಟುಂಬಗಳಲ್ಲಿ ಹಾಲು ಬಡಿಸೋ ಪದ್ಧತಿ ಇದೆ....

ಚಂದ್ರು said...

ಮನಸ್ವಿ ,

ಚೆನ್ನಾಗಿದೆ ನಿಮ್ಮ ಲೇಖನ .ನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿ. ನಾನು ಕೂಡ ಕೆಲವು ಸಾರಿ ಹಾಗೆ ಬಡಿಸುವುದನ್ನು ನೋಡಿದ್ದೇನೆ, ಅಂತ ಕಾರ್ಯದಲ್ಲಿ ಊಟ ಮಾಡಿದರೂ ಮನಸ್ಸಿಗೆ ಸಮಾದಾನ ಇರುವುದಿಲ್ಲ. ಆದರೆ ಕೆಲವೊಮ್ಮೆ ಕಾರ್ಯಗಳಲ್ಲಿ ಇದು ಸಾಮಾನ್ಯ ಏನೂ ಮಾಡಲು ಬರುವುದಿಲ್ಲ. ನಿಮ್ಮ ಬಾಳೆಎಲೆ ಮತ್ತು ಅದರ ಶೃಂಗಾರದ ಚಿತ್ರ ನೋಡಿ ಬಾಯಲ್ಲಿ ನೀರು ಬಂತು :)

shivu.k said...

ಮನಸ್ವಿ,

ನನಗೂ ಮಲೆನಾಡು ಊಟ ಇಷ್ಟ. ನನ್ನ ಹವ್ಯಕ ಗೆಳೆಯರು ಅನೇಕರು ಕರೆಯುತ್ತಿದ್ದರೂ ಹೋಗಲಾಗುತ್ತಿಲ್ಲ. ಬಾಳೆ ಎಲೆ ಊಟ ಅದರಲ್ಲೂ ಮಲೆನಾಡಿನ ಊಟ ತುಂಬಾ ಇಷ್ಟ. ಸುಂದರ ಬರಹ.

ಮೃತ್ಯುಂಜಯ ಹೊಸಮನೆ said...

ನಿನ್ನ ಲೇಖನ ಓದಿದೆ. ಹಿಂದೆ ಕಾರ್ಯದ ಮನೆಗಳಲ್ಲಿ ಎಡೆ ಶೃಂಗಾರಕ್ಕೆ ರಂಗೋಲಿ ಹಾಕುವ ಪದ್ಧತಿಯಿತ್ತು. ನೆಂಟರಿಗಾಗಿ ಈ ವಿಶೇಷ. ಹಾಗೇ ಆ ದಿನ ಊಟಕ್ಕಾಗಿ ಮಾಡಿದ ಎಲ್ಲವನ್ನೂ ಸ್ವಲ್ಪ ಸ್ವಲ್ಪ ಬಡಿಸಿಡಬೇಕಿತ್ತು. ಬಹುಷಃ ಏನೇನು ಇದೆ ಎಂದು ತಿಳಿಸಲಿರಬಹುದು.(ಮೆನು?) ಈಗ ಸರಿಯಾಗಿ ಊಟ ಮಾಡುವುದನ್ನೂ ಮರೆಯುತ್ತಿರುವ ನಾವು ಬಡಿಸುವುದರ ಬಗ್ಗೆ ಯಾಕೆ ಮಂಡೆ ಬಿಸಿ ಮಾಡಿಕೊಳ್ಳೋದು. ಅಲ್ವಾ?

Unknown said...

ಮನಸ್ವೀ ನಿಮ್ಮ ಎಡೆ ಶೃಂಗಾರ ಉತ್ತಮ ಮಾಹಿತಿಯುಳ್ಳ ಲೇಖನ
ನಮ್ಮ ಕಡೆಯೂ ಇದೆಲ್ಲಾ ಪ್ರಚಲಿತ.
ಕೊಡಿ ಎಲೆಯ ಚಿತ್ರವಿದ್ದರೆ ಚೆನ್ನಾಗಿತ್ತು ನೋಡಿ
ಧನ್ಯವಾದಗಳು

ಸೀತಾರಾಮ. ಕೆ. / SITARAM.K said...

nice article -would have further elaborated.

ಮನಸ್ವಿ said...

@gemjaya
ಧನ್ಯವಾದ ಲೇಖನ ಮೆಚ್ಚಿಕೊಂಡಿದ್ದಕ್ಕೆ, ನೀವು ಹೇಳಿದ್ದು ನಿಜ, ಹುಳಿ ಎನ್ನುವ ಪದವನ್ನು ಮಾತ್ರ ಬಳಸಿದರೆ ಅನೇಕರಿಗೆ ಗೊತ್ತಾಗುತ್ತದೆಯೋ ಇಲ್ಲವೋ?... ಹುಳಿ ಪದವನ್ನು ಸೇರಿಸಿದ್ದೇನೆ, ಬರುತ್ತಿರಿ, ಹೀಗೆ ಸಲಹೆ ಸಹಕಾರ ಕೊಡುತ್ತಿರಿ.

@Pragati Hegde
ಹೌದಾ ಗೊತ್ತೇ ಇರಲಿಲ್ಲ, ಹಾಲು ಬಡಿಸುವ ಸಂಪ್ರದಾಯವೊಂದಿದೆ ಎಂದು ತಿಳಿಸಿದ್ದಕ್ಕೆ ಧನ್ಯ. ಹೊಸವಿಚಾರ ತಿಳಿದುಕೊಂಡಂತಾಯಿತು.

@ಚಂದ್ರು
ಚಂದ್ರು ಅವರೇ ಧನ್ಯವಾದಗಳು.. ಹೀಗೆ ಬರುತ್ತಿರಿ

@Shivu
ಶಿವು ಅವರೇ ಆದಷ್ಟು ಬೇಗ ಬಿಡುವು ಮಾಡಿಕೊಂಡು ಸ್ನೇಹಿತರ ಮನೆಗೆ ಹೋಗಿ ಊಟದ ಸವಿರುಚಿಯನ್ನು ನೀವು ಸವಿಯುವಂತಾಗಲಿ.

@ಹೊಸಮನೆ
ಹೌದು ಎಡೆ ಶೃಂಗಾರ ಅಂದರೆ ಒಂದು ರೀತಿಯ ಮೆನು ಇದ್ದಂತೆಯೇ, ಮಂಡೆ ಬಿಸಿ ಅಲ್ಲ ಆಗಿದ್ದು ಬೇಚಾರು.

@ಬೆಳ್ಳಾಲ ಗೋಪಿನಾಥ ರಾವ್
ಬೆಳ್ಳಾಲ ಗೋಪಿನಾಥ ರವರೇ, ಧನ್ಯವಾದ, ಹ್ಮ್ ನಿಜ ಕುಡಿ ಎಲೆಯ ಚಿತ್ರ ಸಿಕ್ಕಿದ್ದರೆ ಚನ್ನಾಗಿತ್ತು, ಕುಡಿ ಎಲೆ ಚಿತ್ರ ತೆಗಯಲು ಆಗಲಿಲ್ಲ.

@Sitaram
thanks for your valuable comments, ya i wish the same, but i am unable to expand further,thanks again, keep visiting.

ಮನಸಿನಮನೆಯವನು said...

ಸುಂದರವಾದ ಬರಹ..

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಚೆನ್ನಾಗಿದೆ.
ಉತ್ತಮ ಬರೆಹ.
ಖುಷಿಯಾಯಿತು.

ಮನಮುಕ್ತಾ said...

ವಾವ್..! ನಿಮ್ಮ ಬರಹ ಓದಿ ಊರಿನ ಊಟ ನೆನಪಾಗಿ ಬಾಯಲ್ಲಿನೀರೂರಿದ್ದರ ಜೊತೆ ಓರಿಗೆ ಹೋಗಿಬ೦ದ೦ತಾಯ್ತು.
ನನ್ನ ಕಾಲೇಜು ಗೆಳತಿಯರೆಲ್ಲಾ ನಮ್ಮ ಹವ್ಯಕರ ಮನೆ ಊಟ ಉಪಚಾರದ ಬಗ್ಗೆ ಭಾರಿ ಹೊಗಳ್ತಿದ್ದ.
ನಮ್ ಕಡೆ ಊಟದ ಹೊತ್ತಿಗೆ ಯಾರೇ ಬ೦ದ್ರೂ ಅವ್ಕೆ ಊಟಿಲ್ಲೆ ಹೇಳಿ ಆಗ್ತಲ್ಲೆ ಅಲ್ದಾ?ಬರಹ ಓದಿ ಖುಶಿ ಆತು.ಹಿ೦ಗೇ ಬರ್ತಾ ಇರ್ಲಿ ಹೊಸ ಹೊಸ ಬರಹಗಳು.

Ragu Kattinakere said...

ಸರಿ ಹೇಳಿದೆ. ಅಭಿಗಾರ ಅ೦ದ್ರೆ - ಅಪ್ರೋಬೆಶನ್ - ಯಜಮಾನರ ಅನುಮತಿ. ಅನುಮತಿ ಸೂಚಕವಾಗಿ ಬರಿದಾದ ಎಲೆಯ ಮೇಲೆ ಬಡಿಸಲು ಅನುಮತಿಗಾಗಿ ತುಪ್ಪ. ನಂತರ ಅನ್ನದ ಮೇಲೆ "ಅಭಿಗಾರ" ಸೂಚಕವಾಗಿ ತುಪ್ಪ: ಊಟ ಆರಂಭಿಸಲು ಕೋರಿಕೆ. ಇದು ಮನೆಯವರಿಂದಲೇ ಆಗ ಬೇಕಾದ್ದು ಅದಕ್ಕೆ. ಅಭಿಗಾರ ಅ೦ದ್ರೆ endalla.

ಅಮಿತಾ ರವಿಕಿರಣ್ said...

ಬಹಳ್ ಚಂದ ಬರೆದಿದ್ದೀರಿ .ಮತ್ತೂ ಫೋಟೊಗಳನ್ನ ಸೇರಿಸಬಹುದಿತ್ತು.....ಮತ್ತೆ ಮಲೆನಾಡಿಗೆ ಬಂದು ಒಳ್ಳೆ ಊಟ ಉಂಡ ಹಾಗೆ ಅನಿಸ್ತು..