ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Wednesday, December 19, 2018

ಬಸ್ಸಿನ ಪ್ರಯಾಣ! ಹಿಂದಿನ ಸೀಟಿನವನ ಫೋನ್ ಮಾತು. ಕನ್ವರ್ ಲಾಲ್ ನ ನೆನಪು!!!

     ಶಿವಮೊಗ್ಗದಲ್ಲಿ ಒಂದು ಮದುವೆಯಿತ್ತು ಹೊರಟಿದ್ದೆ.. ಐದು ನಿಮಿಷಕ್ಕೊಂದು ಬಸ್ಸಿರೊದಕ್ಕೆ ಬಸ್ಸಿನ ಪ್ರಯಾಣನೇ ಸುಖ ಅನ್ನಿಸಿ ಬಸ್ಸು ಹತ್ತಿದೆ.. ಬಸ್ಸು ನಿಧಾನಕ್ಕೆ ಹೊರಟಿತ್ತು.. ಡ್ರೈವರ್ ಇನ್ನೆರೆಡು ಜನ ಬಂದರೆ ಬರಲಿ ಅಂತ ಆಮೆ ವೇಗದಲ್ಲಿ ಹೊರಟಿದ್ದ!.. ಬಸ್ಸು ಹಾಗೆ ಮುಂದೆ ಸಾಗುತ್ತಿತ್ತು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಯಾರಿಗೋ ಫೋನ್ ಮಾಡಿ ಮಾತಾಡಲು ಶುರು ಮಾಡಿದ್ದ.. ಆತನದು ಅಚ್ಚ ಕನ್ನಡ ವ್ಯಾಕರಣ ಶುದ್ಧವಾದ ಮಾತದು.. ನನ್ನ ಗಮನವನ್ನು ಕಿಟಿಕೆಯಾಚೆಗಿನ ಪ್ರಕೃತಿ ಗದ್ದೆಯ ಕಡೆ ಹರಿಸಿದೆ.. ಆದರೆ ಕಿವಿ  ಹಿಂದೆ ಕುಳಿತವನ ಮಾತನ್ನು ಆಲಿಸುತ್ತಲ್ಲೇ ಇತ್ತು.. ಕೆಳಲ್ಲ ಜೋರು ಮಾತಾಡಕ್ಕಾ ಅಂತ ದೊಡ್ಡ ದನಿಯಲ್ಲಿ ಮಾತಿಗಿಳಿದಿದ್ದ.. ನಿಮಿಷಕ್ಕೊಮ್ಮೆ ಅಕ್ಕಾ ಅಕ್ಕಾ ಎನ್ನುತ್ತಿದ್ದ.. ಭಗವಂತನಿಗೆ ಕರುಣೆ ಇಲ್ಲಕ್ಕ.. ಅವಳು ಒಳ್ಳೆಯವಳಲ್ಲಕ್ಕಾ ಅಂದ.. ನನಗೆ ಪೋನಿನಾಚೆಗಿನ ವ್ಯಕ್ತಿಯ ಪ್ರತಿಕ್ರಿಯೆ ಏನಿರಬಹುದು ಎನ್ನುವ ಕುತೂಹಲ ಶುರುವಿಟ್ಟುಕೊಂಡಿತ್ತು.. ಧ್ವನಿ ಹೇಗಿರಬಹುದು ಇಂಪಾಗಿದೆಯಾ. ಘಟವಾಣಿ ದ್ವನಿಯಾ?

 ಅವಳು ಹೇಗಿರಬಹುದು ಅವಳ ಧ್ವನಿ ಹೇಗಿರಬಹುದು ಅನ್ನಿಸಿದ್ದು ಸುಳ್ಳಲ್ಲ! ಆತ ತನ್ನೆಲ್ಲಾ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟಿದ್ದ.. ಎಷ್ಟು ದೊಡ್ಡ ಧ್ವನಿಯಲ್ಲಿ ಮಾತಾಡುತ್ತಿದ್ದ ಎಂದರೆ ಒಂದೇ ಒಂದು ಪದ ಮಿಸ್ಸಾಗೋ ಚಾನ್ಸ್ ಇರಲಿಲ್ಲ.. ಅಕ್ಕ ಅವಳು ನಿಂಗೂ ಭಾವಂಗೂ  ಬೇಜಾರು ಮಾಡಿ ಬಿಟ್ಟಲಕ್ಕ ಭಾವನ ಮನಸ್ಸು ಮಗುವಿನ ಮನಸ್ಸಿನ ತರ.. ಬೇಸರ ಮಾಡ್ಕೊಂಡ್ರೆನಕ್ಕಾ ಎನ್ನುತ್ತಿದ್ದ.. ಇದೊಂಥರಾ ಒನ್ ವೇ ಆಗಿದ್ದಕ್ಕೆ ಅಕ್ಕಯ್ಯನ ಮಾತನ್ನು ನಾನೇ ಕಲ್ಪಿಸಿಕೊಳ್ಳಬೇಕಿತ್ತು ಅವಳು ತಮ್ಮನನ್ನು ಸಮಾಧಾನ ಮಾಡುವ ಹರಸಾಹಸದಲ್ಲಿದ್ದಿರಬಹುದು ಅನ್ನಿಸಿತು.. ಬೇರೆಯವರ ವಿಚಾರ ನಮಗೇಕೆ ಅಂತ ಮೊಬೈಲ್ ನಲ್ಲಿ ಬೆರೆಳಾಡಿಸತೊಡಗಿದೆ.. ಅಷ್ಟರಲ್ಲಿ ಅಕ್ಕಾ ಅಂಬರೀಶ್ ನೋಡಕ್ಕಾ ಎಷ್ಟು ಜನ ಸಂಪಾದನೆ ಮಾಡಿದ್ದ ಆತರ ಜನ ಸಂಪಾದಿಸಬೇಕಕ್ಕ ಅಂದ..

ಅಂಬರೀಶ್ ಬಗ್ಗೆ ಆತ ಹೇಳಿದ್ದು ಅಕ್ಷರಶಃ ಸತ್ಯ ಅನ್ನಿಸಿತು.. ಅದೆಷ್ಟು ಜನ ಸಾಗರ ಮೌನವಾಗಿ ಕಂಬನಿ ಮಿಡಿದಿತ್ತು.. ಬೆಂಗಳೂರಿನಿಂದ ಪಾರ್ಥಿವ ಶರೀರದ ದರ್ಶನಕ್ಕೆ ಪಟ್ಟು ಬಿಡದೆ ಮಂಡ್ಯಕ್ಕೆ ತರಿಸಿದ ಜನ ಒಂದೇ ಒಂದು ಕಡೆಯೂ ಗೌಜು ಗದ್ದಲವಿಲ್ಲದೆ ಬಂದು ಹೋಗುತ್ತಿದ್ದರು. ರಾಜಕುಮಾರ್ ಮತ್ತು ವಿಷ್ಣು ತೀರಿಕೊಂಡಾಗ ನೆಡೆದ ಗಲಾಟೆಗಳು ಗೌಜು ಗದ್ದಲ ಎಲ್ಲೂ ಇರಲಿಲ್ಲ.. ಅಂಬರೀಶ್ ಯಾವನೋ ಅವನು ಗಲಾಟೆ ಮಾಡೋನು ಅಂದು ಬಿಟ್ರೆ ಅನ್ನೋ ತರ ಶಾಕಲ್ಲಿ ಇತ್ತು ಜನತೆ.. ಮಂಡ್ಯದ ಪ್ರತಿ ಮನೆಯ ದೇವರ ಕೋಣೆಯಲ್ಲಿ ಅಂಬರೀಶ್ ಫೋಟೋ ಇದೆಯಂತೆ. ಅಂಬರೀಶ್ ಅವರ ವಿಶಿಷ್ಟ ಮ್ಯಾನರಿಸಮ್ ಡೈಲಾಗ್ ಡೆಲಿವರಿ.. ಕನ್ವರ್ ಲಾಲಾ ನ " ಕುತ್ತೆ ಕನ್ವರ್ ನಹೀ ಕನ್ವರ್ ಲಾಲ್ ಬೋಲೋ" ಅನ್ನೋ ವರೆಗಿನ  ಡೈಲಾಗ್.. ಅಂಬಿಕಾ ಜೊತೆಗಿನ ಛಳಿ ಛಳಿ ತಾಳೇನು ಈ ಛಳಿಯಾ ಹಾಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ ದಿನಗಳು ಹೀಗೆ ಮನಸ್ಸು ಅಂಬಿ  ಇಲ್ಲ ಅನ್ನೋ ಸತ್ಯಕ್ಕೆ ಒಗ್ಗಿಕೊಳ್ಳಲು ಕಷ್ಟ ಪಡುತ್ತಲಿತ್ತು. ಮನಸ್ಸಿನ ತುಂಬಾ ಕನ್ವರ್ ಲಾಲ್ ತುಂಬಿಹೋಗಿದ್ದ.

ಇಷ್ಟಾದರೂ ಆನ್ ಲಿಮಿಟೆಡ್ ಕಾಲ್ ಮಹಿಮೆ ಆತ ಮಾತು ಮುಂದುವರೆಸಿದ್ದ.. ಅಕ್ಕಾ ನಿನ್ನ ಮಗ ನನ್ನ ಮಗ ಇದ್ದಂಗೆ ಚಾನಾಗಿ ನೋಡ್ಕೋಬೇಕಕ್ಕ ಅಂದ.. ದೇವರು ಇದ್ರೆ ಮನೆ ಕಟ್ಟಿ ಊಟ ಹಾಕ್ತಿನಕ್ಕ.. ಮಂಜಣ್ಣ ನ ಹಾಗೆ ಮನೆ ಕಟ್ಟಿ ಅವನ ತರ ಜನಾನ ದೂರ ಮಾಡ್ಕೊಳಲ್ಲ ಎಲ್ಲರೂ ಜೊತೆಗಿರಬೇಕಕ್ಕ ಅಲ್ವೇನಕ್ಕ ಅನ್ನುತ್ತಿತ್ತು.. ಮಂಜಣ್ಣ ಯಾರು ಗೊತ್ತಿಲ್ಲ.. ಆ ಅಕ್ಕ ಅವನ ಸ್ವಂತ ಅಕ್ಕನೋ ಜೊತೆಗೆ ಆಡಿ ಬೆಳೆದವಳಾ.. ಅಥವಾ ಪಕ್ಕದ ಮನೆಯವಳಾ.. ನಾನು ಬಸ್ಸು ಇಳಿಯುವ  ಜಾಗ ಬಂದಿತ್ತು.. ಇಳಿಯುವಾಗ  ಹಿಂದೆ ತಿರುಗಿ ಅವನ ಮುಖ ನೋಡಿ ಬಿಡಲ ಅನ್ನೋ ಕುತೂಹಲ ಕಾಡತೊಡಗಿತ್ತು.. ಆದರೆ ಅವನ ದ್ವನಿಯೊಂದೇ ನೆನಪಿನಲ್ಲಿರಲಿ ಎಂದು ಅವನನ್ನು ನೋಡದೆ ಕೆಳಗಿಳಿದುಬಿಟ್ಟೆ...

ಆತ ಹೇಗಿರಬಹುದು.. ಅವಳ ದ್ವನಿ ಹೇಗಿರಬಹುದು.. ಅವಳ ಮಗ ಹೇಗಿರಬಹುದು.. ನಿಮ್ಮ ಕಲ್ಪನೆಗೆ ಬಿಟ್ಟಿದ್ದು.