ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Thursday, July 9, 2009

ಅಪರೂಪದ ಕೆಲವು ಆಣಿಮುತ್ತುಗಳು!!

ಕೆಲವು ಆಣಿಮುತ್ತುಗಳು ಹೀಗಿವೆ
ನಾನು: ಏ ಸುರೇಶಾ... ಸತೀಶ ಎಲ್ಲಿಗೆ ಕೆಲ್ಸಕ್ಕೆ ಹೋಗ್ತಾ ಇದಾನೆ?
ಸುರೇಸ: ಸತೀಸ ಮುಚ್ಚೇಂದ್ರ ರಾಯ್ರ ಮನೆಗೆ ಕೆಲಸಕ್ಕೆ ಹೋಗ್ತಾ ಐದಾನೆ.
( ಸುರೇಶ ಅನ್ನೋದನ್ನು ಸುರೇಸ ಮತ್ತು ಸತೀಶ ಎನ್ನುವುದನ್ನು ಸತೀಸ ಅಂದದ್ದರಲ್ಲಿ ಏನೂ ವಿಚಿತ್ರವಿಲ್ಲ.. ಅದು ಕೆಲವರಿಗೆ ಶ ಉಚ್ಚಾರ ಕಷ್ಟವಾದಾಗ "ಸ" ಕಾರ ಬರುತ್ತದೆ.. ಇಲ್ಲಿ ನಾನು ಅದನ್ನು ಹೇಳುತ್ತಿಲ್ಲ.. ಮುಚ್ಚೇಂದ್ರ ಎನ್ನುವ ಹೆಸರಿನ ಬಗ್ಗೆ ಹೇಳುತ್ತಿದ್ದೇನೆ.... ಮೃತ್ಯುಂಜಯ ಎನ್ನುವ ಹೆಸರನ್ನು ಕರೆಯಲು ಬಾರದೇ ಇದ್ದವರು ನಾಮಕರಣ ಮಾಡಿದ ಹೊಸಾ ಹೆಸರು ಮುಚ್ಚೇಂದ್ರ!)
ಅಂತಹದೇ ಮತ್ತೊಂದು ಹೆಸರು ಯೇದಾವತಿ =ವೇದಾವತಿ
ನಮ್ಮ ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ಬರುತ್ತಿದ್ದ ಗೋಪಾಲ ತಾನು ಕಾಯಂ ಕೆಲಸ ಮಾಡುವ ಮನೆಯ ಯಜಮಾನರನ್ನು ಭೂಚು ಹೆಗ್ಡೇರು ಎಂದು ಕರೆಯುತ್ತಾನೆ,
ಆದದ್ದು ಹೀಗೆ, ನಾಗಭೂಷಣ ಎನ್ನುವವರಿಗೆ ಮನೆಯಲ್ಲಿ ಪ್ರೀತಿಯಿಂದ ಕರೆದ ಹೆಸರು ಭೂಚು, ಅದೀಗ ಭೂಚು ಹೆಗಡೆಯಾಗಿದೆ.
ನಮ್ಮ ಮನೆಗೆ ಬರುವ ಒಬ್ಬ ಶೇರೇಗಾರ ಹೇಳಿದ ಮಾತು... ಭಟ್ರೇ ಸ್ಟಾರ್ ಮೇಲೆ ಸ್ಟಾರ್ ಮಾಡಿದ್ರೆ ಸಾಕಿತ್ರಿ.. ಅಷ್ಟೂ ಕಿತ್ತಾಹ್ಕ್ಯಾರೆ( ಕಿತ್ತು ಹಾಕಿದ್ದಾರೆ)
(ನಮ್ಮೂರಿನ ರಸ್ತೆಯನ್ನು ಎರಡು ವರ್ಷಗಳ ಕಾಲ ರಿಪೇರಿ ಮಾಡುತ್ತಿದ್ದಾಗ ಟಾರ್ ರೋಡಿನ ಮೇಲೆ ಮತ್ತೆ ಟಾರ್ ಹಾಕಿದ್ದರೆ ಸಾಕಾಗಿತ್ತು ಎಂದು ಹೇಳಿದ್ದು ನೆನೆಸಿಕೊಂಡು ನಗುತ್ತಿರುತ್ತೇನೆ.. ಅವನು ಟಾರ್ ಎಂದು ಹೇಳಲು ಸ್ಟಾರ್ ಎನ್ನುತ್ತಾನೆ.)
ಅವನದೇ ಮತ್ತೊಂದು ನುಡಿಮುತ್ತಿದೆ, ಅದು ಅವನೊಬ್ಬನ ಬಾಯಲ್ಲಿ ಮಾತ್ರ ಕೇಳಲು ಸಾಧ್ಯ.. ಒಂದು ದಿನ ಬಂದವನು ನಮ್ಮನೆ ಮಿಸ್ ಸರಿ ಇಲ್ಲ, ಮಿಸ್ ಎಲ್ಲಿ ರಿಪೇರಿ ಮಾಡಿಸಲಿ ಎಂದು ವಿಚಾರಿಸಿದ, ನಾವೆಲ್ಲ ತಲೆ ಕೆರೆದುಕೊಂಡು ಮಿಸ್ ಎಂದರೇನು ಎಂದು ವಿಚಾರಿಸಿದಾಗ ಅವನು ಹೇಳಿದ್ದು ಅದೇ ಅರ್ಯದು!(ಅರೆಯುವುದು).. ಮಿಸ್ ಮಾಡದು ಮಿಸ್ಸು ಅಂದ... ಸುಮಾರು ಹೊತ್ತಾದ ಮೇಲೆ ಗೊತ್ತಾಗಿದ್ದು ಅವನು ಹೇಳುತ್ತಿರುವುದು ಮಿಕ್ಸರ್ ಬಗ್ಗೆ ಎಂದು.
ಕಳೆದ ಒಂದು ವರ್ಷದ ಹಿಂದೆ ನಮ್ಮ ಊರಿನಲ್ಲೇ ಒಂದು ದೇವರ ಕಾರ್ಯ ಒಬ್ಬರ ಮನೆಯಲ್ಲಿತ್ತು.. ಊರಿನವರೇ ಹೋಗಿ ಊಟಕ್ಕೆ ಬಡಿಸುವುದು ವಾಡಿಕೆ.. ನಾನು ಹೋಗಿದ್ದೆ ಎಲ್ಲಾ ಸೇರಿ ಬಾಳೆ ಎಲೆ ಹಾಕಿಯಾಗಿತ್ತು.. ಉಪ್ಪು ಹಾಕಲು ಉಪ್ಪಿನ ಪಾತ್ರೆಯನ್ನು ಕೈಗೆ ತೆಗೆದುಕೊಂಡೆ, ಅಷ್ಟರಲ್ಲಿ ಮನೆಯ ಯಜಮಾನರು ಉಪ್ಪಿನ ಪಾತ್ರೆಯನ್ನು ನೋಡಿ ಹೇಳಿದ್ದು ಅಪೀ.. ಅದಲ್ದ ಸಾಲ್ಟ್ ಉಪ್ಪಿದ್ದು ಅದನ್ನ ಹಾಕಲಕ್ಕು ತಡಿ" ಎಂದರು!, ನನಗೆ ಒಂದು ಕ್ಷಣ ಏನೂ ಅರ್ಥವಾಗಲಿಲ್ಲ ಆಮೇಲೆ ಸಾಲ್ಟ್ ಉಪ್ಪು ತಗ ಎಂದು ಅವರು ತಂದು ಕೊಟ್ಟಾಗ ಎಲ್ಲಾ ಅರ್ಥವಾಯಿತು.. ಮುಂಚೆ ನನ್ನ ಕೈಯಲ್ಲಿದ್ದದ್ದು ಹರಳುಪ್ಪಿನ ಪಾತ್ರೆ ಅವರು ತಂದು ಕೊಟ್ಟಿದ್ದು ರಿಪೈನ್ಡ್ ಟೇಬಲ್ ಸಾಲ್ಟ್! ಅದಕ್ಕೆ ಅವರು ಹೇಳಿದ್ದು ಸಾಲ್ಟ್ ಉಪ್ಪು.
ಇದರಂತೆಯೇ ಡೋರ್ ಬಾಗಿಲು ಹಾಕು, ಸ್ಟ್ರೀಟ್ ಲೈಟ್ ದೀಪ ಹಾಕಿದ್ದ ನೋಡು, ಹುಡುಕುತ್ತಾ ಹೋದರೆ ಅದೆಷ್ಟಿದೆಯೋ ಇದೇ ತರಹದ್ದು.

15 comments:

shivu.k said...

ನಿಮ್ಮ ಕೆಲಸಗಾರರ ಸ್ಟಾರ್, ಉಪ್ಪು, ಮಿಸ್ ಕತೆಗಳೆಲ್ಲಾ ಬಲು ಮಜವಾಗಿವೆ...

Unknown said...

ಪಾಪ ಮುಗ್ದರು ಹಾಗನ್ನಲಿಬಿಡಿ.

ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಂ "ಗ್ನಾನ" ಅಂತಾರೆ ಕೇಳಿ ಅದು ಜ್ಞಾನ ಅನ್ನೋದಕ್ಕೆ ಅಂತ ಬಿಡಿಸಿಹೇಳಬೇಕಾಗಿಲ್ಲ ತಾನೆ.
ತೇಜಸ್ವಿನಿ ಗೌಡಳ "ಅಲ್ಲು ನೋಯ್ತಿದೆ" ಕತೆ ಕೇಳಿರಬಹುದು.
"ನಾವು ಹೋಮೋಪತಿಗೆ...! ಹೆಚ್ಚು ಪ್ರಾತಿನಿದ್ಯ..! ಕೊಡುತ್ತೇವೆ" ಅನ್ನೋರು ನಮ್ಮ ಆರೋಗ್ಯ ಸಚಿವರು.
ವಿಧ್ಯಾರ್ಥಿ, ಶಬ್ಧ ಅಂತೆಲ್ಲಾ ನಾನೂ ಬರೆದುಬಿಡ್ತೀನಿ.ಹೀಗೆ ಪಟ್ಟಿಮಾಡುತ್ತಾ ಹೋದರೆ ಇನ್ನೂ "ಅಣಿಮುತ್ತುಗಳ ರಾಶಿ ಮಾರಿಮುತ್ತುವಿನಂತೆ ಬೆಳೆಯುತ್ತಲೇ ಹೋಗುತ್ತವೆ.

Ittigecement said...

ಆದಿತ್ಯ....

ಬಹಳ ದಿನಗಳ ನಂತರ ಬಂದು ನಮ್ಮನ್ನು ನಗಿಸಿದ್ದೀರಿ...
ಒಳ್ಳೆಯ ಮೂಡಿನಲ್ಲಿರಬೇಕು... ಅಲ್ಲವಾ...?

ತಪ್ಪು ಉಚ್ಛಾರ ಮತ್ತು ಮುಗ್ಧತೆ ಸೇರಿದರೆ....
ಸೋಗಸಾದ ಜೋಕು.....

ಈ ಸಾರಿ ಊರಿಗೆ ಹೋದಾಗ ಒಂದು ಮದುವೆಯಲ್ಲಿ ಹಿರಿಯರೊಬ್ಬರು ಊಟ ಬಡಿಸುವವರಿಗೆ ಹೇಳುತ್ತಿದ್ದರು....
:೧)" ಅನ್ನಕ್ಕೆ ಅಪ್ಪೆಹುಳಿ ಹಾಕ್ಕೊಂಡು ತುತ್ತು ತುತ್ತು ಉಣ್ಣಿ"
೨) ಎಲ್ಲರಿಗೂ "ಹಿಂದುಗಡೆ ಬಂದಿದ್ದರಲ್ಲಿ ಏನು ತರಲಿ..?" ಅಂತ ಕೇಳಿ ಬಡಿಸಿ...

ಮೊದಲನೆಯದು ಅರ್ಥ ಆಗಲಿಲ್ಲವ್ರಾ..?

ಸ್ವಲ್ಪ ಜೋರಾಗಿ ಹೇಳಿ ..

ಆದಿತ್ಯ ಧನ್ಯವಾದಗಳು...

Unknown said...

very interesting. keep it up. I fallow your site

PARAANJAPE K.N. said...

ಆದಿತ್ಯ,
ನಿಮ್ಮ ಬರಹ ಓದಿ ಖುಷಿಯಾಯ್ತು, ಜೊತೆಗೆ ನನಗೂ ಕೆಲವು ನುಡಿಗಟ್ಟುಗಳು ನೆನಪಾದವು. ನನ್ನ ಬ್ಲಾಗಲ್ಲಿನ ಒ೦ದು ಲೇಖನದಲ್ಲಿ ಬರುವ ಮಮ್ಮದೆ ಎ೦ಬ ವ್ಯಕ್ತಿ "ಭಾಸ್ಕರ" ಅನ್ನುವುದನ್ನು ಉಚ್ಚರಿಸಲಾಗದೆ "ಬಾಕ್ಸರ" ಅನ್ನುತ್ತ್ತಿದ್ದ. ನನಗೊಬ್ಬ ಅಮೀರ್ ಎ೦ಬ ಸಹಾಯಕನಿದ್ದ, ಆಟ ಮಿಕ್ಸಿ ಅನ್ನೋದಕ್ಕೆ ಮಿಸ್ಕಿ ಅಂತಿದ್ದ. ಮೊನ್ನೆ ಯಾರೋ ಒಬ್ಬರು ಚೆನ್ನಾಗಿರುವ ಓದಿರುವ ವ್ಯಕ್ತಿ ಭಾಷಣ ಮಾಡುತ್ತಾ "Recession" ಅನ್ನುವುದನ್ನು ಅಕ್ಷರಶಃ "Reception" ಎ೦ದು ಹೇಳುವುದನ್ನು ಕೇಳಿದಾಗ ಪಿಚ್ಚೆನಿಸಿತು.

Ranjana Shreedhar said...

ಬರಹ ತುಂಬಾ ಚೆನ್ನಾಗಿದೆ..
ಓದಿ ಖುಷಿ ಆಯಿತು....
ಧನ್ಯವಾದಗಳು...

ಮೃತ್ಯುಂಜಯ ಹೊಸಮನೆ said...

ನನ್ನ ಹೆಸರು ತಪ್ಪಾಗಿ ಉಚ್ಚರಿಸಿದರೂ ಇಂದ್ರಪದವಿ ಕೊಟ್ರಲ್ಲ..ಸಾಕು ಬಿಡು.ಇಲ್ಲೀವರೆಗೂ ಮುರ್ತುಂಜ, ಮುರ್ತುಂಜ್ಯ..ಇತ್ಯಾದಿ ಕೇಳಿ ನನಗೇ ನನ್ನ ನಿಜ ನಾಮಧೇಯ ಮರೆವಂತಾಗಿತ್ತು.ಮತ್ತೆ ಭಾಷೆ,ಅದರ ಬಳಕೆಯಿಂದ ತಮಾಷೆಯೆ ಸನ್ನಿವೇಶಗಳಂತೆಯೇ ಬಿಕ್ಕಟ್ಟಿನ ಸನ್ನಿವೇಶಗಳೂ ಉಂಟಾಗುತ್ತವೆ.

ಮನಸ್ವಿ said...

ಶಿವು
ಧನ್ಯವಾದಗಳು...

ನನ್ನದೇನು ಅಭ್ಯಂತರವಿಲ್ಲ, ನಾನೆಲ್ಲಿ ಹಾಗೇ ಅನ್ನಲಿ, ನಾನೆಲ್ಲಿ ಹೇಳೋದೇ ಬೇಡ ಅಂದೆ!
ಹೌದು ಹೈ ಕೋರ್ಟು ಹೋಮೋಪತಿಗೆ ಪ್ರಾತಿನಿದ್ಯ ಕೊಟ್ಟಿರೋದ್ರಿಂದ ಆರೋಗ್ಯ ಸಚಿವರದ್ದು ಏನು ತಪ್ಪಿಲ್ಲ ಬಿಡಿ, ಅವರದ್ದು ಹೋಮೋ ಕಾಳಜಿ!
ತೇಜಮ್ಮೆ ಏಳೋದೆ ಆಗೆ ಕಣ್ರಿ, ಹೇನು ಮಾಡೋಕೆ ಹಾಗಲ್ಲ!
ಹೌದು... ಹೊಸಮನೆಯವ್ರು ಹೇಳಿದ ಮೇಲೆ ಗೊತ್ತಾಯ್ತ ನಿಮ್ಗೂ!
ಧನ್ಯವಾದಗಳು

ಸಿಮೆಂಟು ಮಳಲು(ಮರಳು)
ಹ್ಮ್ ಪ್ರಕಾಶ್, ಬರೀಬೇಕು ಅಂತ ಅನ್ಕೋತಾ ಇದ್ದೆ ಆದ್ರೂ ಆಗಿರಲೇ ಇಲ್ಲ,
ಅರ್ಥವಾಗಿದ್ದೇ ಮೊದಲನೇಯದು!

Dr. B.R. Satynarayana
Thank you...


PARAANJAPE K.N.
ಹೌದು ಈಗ Reception ಗೂ Recession ಟೈಮ್!

Ranjana Shreedhar
ಧನ್ಯವಾದಗಳು

@ಮುಚ್ಚೇನ್(ಮುಚ್ಚೇಂದ್ರ) ರಾಯ್ರು!..
ಹೆಹ್ಹೇ.. ನಿನ್ನ ಹೆಸರು ಹೇಳಕ್ಕೆ ನಾಲಿಗೆಗೆ ಬರ್ತಿ ಕೆಲಸ ಆಗ್ತು, ಅದಕ್ಕೆ ಸುಲಭವಾಗಿ ಹೇಳಕ್ಕೆ ನೋಡ್ತ.. ಹ್ಮ್ ನೀನು ಹೇಳದೂ ನಿಜ ಅನ್ನು.. ಧನ್ಯವಾದಗಳು

Ittigecement said...

ಆದಿತ್ಯ....

ಎರಡನೆಯದು ಅರ್ಥ ಆಗಲಿಲ್ಲವಾ...?

ಛೇ....
ನಿಮ್ಮ ಮದುವೆಗೂ ಕರೆದಿಲ್ಲ...
ಬಡಿಸಲಿಕ್ಕೆ ನಾನೇ ಬರ್ತಿದ್ದೆ....

ಛೇ... ಚೇ....

ಪ್ರಕಾಶಣ್ಣ..

ಮನಸ್ವಿ said...

@ಮಳಲು ಪ್ರಕಾಶ...
ಹೋಯ್ ಮೊದಲನೇದು ಅರ್ಥ ಆಗಿಲಿಲ್ಲವಾ ಕೇಳಿದ್ದಕ್ಕೆ ಪಸ್ಟಿಂದೇ! ಪಸ್ಟಿಗೆ ಅರ್ಥ ಆತು ಅಂದಿ...
ಎಂಗೇಜ್ಮೆಂಟ್ ಆಯ್ದು, ಆದ್ರೆ ಮದ್ವೆ ಡೇಟು ಇನ್ನು ಫಿಕ್ಸ ಮಾಡ್ಕ್ಯಳ್ಲೆ, ಮದ್ವೆಗೆ ಈಗಲೇ ಹೆಂಗೆ ಕರಿಲೀ?? ಮದ್ವೆ ಡಿಸೆಂಬರ್ ಹೊತ್ತಿಗೆ ಆಗ್ತು, ಡೇಟು ಫಿಕ್ಸ್ ಆದ ತಕ್ಷಣ ಮದ್ವೆಗೆ ಕರಿತಿ.

ShruBhanu said...

ಹ ಹ ಹ ಚನಾಗಿದ್ದು.. ನಂಗ್ಳ ಮನೆಗೆ ಬರ ಕೊನೆ ಕೊಯ್ಯ ಆಳು ಯಾವಾಗ್ಲೂ ಹೇಳ್ತಿದ್ನ.. ಯಜಮಾನರು ಕುಉತ್ರು ಎಂತಕೆ ಹೊಡಿಯದಿಲ್ಲ ಅಂತ . . ನಂಗ ಮೊದಲಿಗೆ ಆದ್ಯವುದೋ ಹೊಸ ಕೊಲೆ ಔಷಧ ಅನ್ಕಂಡಿದ್ದಿದ್ಯ ಕೊನಿಗೆ ಗೊತಾತು ಸ್ಕೂಟರ್ ಅಂತ. . .!!!

ಗೋಪಾಲ್ ಮಾ ಕುಲಕರ್ಣಿ said...

chennagide :)

ಬಾಲು said...

ಮುಗ್ದರು ಹಾಗಂದರೆ ಒಪ್ಪಬಹುದು ಬಿಡಿ. ಆದರೆ ಕನ್ನಡ ಉಟ್ಟು ಓರಾಟ ಗಾರರೆ ಸಿಕ್ಕಾ ಪಟ್ಟೆ ತಪ್ಪು ಮಾಡುವಾಗ ತುಂಬಾನೆ ಬೇಜಾರ ಆಗುತ್ತೆ.

ಒಳ್ಳೆಯ ಲೇಖನ.

Gowtham said...

tumba dina aitalla tamminda 'update' ilde!

ಸೀತಾರಾಮ. ಕೆ. / SITARAM.K said...

ಊಟಕ್ಕೆ ಕೂತಾಗ ಒತ್ತಾಯ ಮಾಡಿ ಬಡಿಸುತ್ತಿದ್ದ ಜನಕ್ಕೆ ಒಬ್ಬ ಊಟಿಗ ಹೇಳಿದ್ದು " ದಯವಿಟ್ಟು ಬಲಾತ್ಕಾರ ಮಾಡಿ, ಹಾಕಿ, ಕೆಡಿಸಬೇಡಿ " ಅ೦ಥಾ. ಅವನು ಕಿಡಿಗೇಡಿ -ಮುಗ್ಧ ಅಲ್ಲ ನೀವು ಹೇಳಿದ ಜನದ೦ತೆ.
ಚೆನ್ನಾಗಿವೆ ತಮ್ಮ ಹಾಸ್ಯ ಪ್ರಸ೦ಗ ಸಂಗ್ರಹಗಳು.