ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Sunday, July 27, 2008

ಮೊಬೈಲ್ ರಗಳೆ ಮತ್ತು ಮಾಹಿತಿ?!

ಇವತ್ತು ಮೊಬೈಲ್ ಇಲ್ಲದೆ ಜೀವನ ಮುಂದೆ ಸಾಗುವುದೇ ಇಲ್ಲ ಅನ್ನುವಷ್ಟರ ಮಟ್ಟಿಗೆ ನಾವು ಮೊಬೈಲ್ ನ ಮೇಲೆ ಅವಲಂಬಿತವಾಗಿದ್ದೇವೆ.. ಸಂಪರ್ಕ ಸಾದಿಸುವ ಬಹು ಮುಖ್ಯ ಅಂಗ ಈ ಸಂಚಾರಿ ದೂರವಾಣಿ ಎಂದರೆ ತಪ್ಪಾಗಲಾರದು, ಇಂದು ಉನ್ನತ ತಂತ್ರಜ್ಞಾನದ ಮೊಬೈಲ್ ಸಾದನಗಳು ಅಗ್ಗದ ದರಗಳಲ್ಲಿ ದೊರೆಯುತ್ತಿವೆ...ಮೊಬೈಲ್ ಕಂಪೆನಿಗಳು ಉತ್ಕೃಷ್ಟ ದ್ವನಿ ಸ್ಪಷ್ಟತೆ, ಬರಿ ಎಸ್.ಎಂ.ಎಸ್ ಅಲ್ಲದೆ ಎಮ್.ಎಮ್.ಎಸ್, ಜಿ ಪಿ ಆರ್ ಎಸ್ ನಂತ ಮೂರನೇ ತಲೆಮಾರಿನ ಸೇವೆಗಳನ್ನು ಒದಗಿಸುತ್ತಿವೆ.. ಅತ್ಯುತ್ತಮ ಸಿಗ್ನಲ್ ಕವರೇಜ್* (*ಸಿಟಿ ಲಿಮಿಟ್ ನಲ್ಲಿ )ನೀಡಲು ಶಕ್ತವಾಗಿವೆ
ಈಗ ಮೊಬೈಲ್ ಒಂದಿದ್ದರೆ ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸದೇ ಇರದು!(ವ್ಯಂಗ್ಯಚಿತ್ರಕಾರರ ಅನುಮತಿಯಿಲ್ಲದೆ ಚಿತ್ರ ಬಳಸಿಕೊಂದಿದ್ದಕ್ಕೆ ಕ್ಷಮೆ ಕೋರುತ್ತೇನೆ)ಇದು ಮೊಬೈಲ್ ಜಗತ್ತಿನ ಮೇಲಿನ ನೋಟ! ಮೊಬೈಲ್ ಕಂಪೆನಿಗಳ ಉಪದ್ರವಕ್ಕೆ ಒಳಗಾದ ಗ್ರಾಹಕರು ಅದೆಷ್ಟಿರಬಹುದು? ನೂರಕ್ಕೆ ತೊಂಬತ್ತೆಂಟು ಜನ ಗ್ರಾಹಕರು ಮೊಬೈಲ್ ಕಂಪೆನಿಗಳಿಂದ ಒಂದಲ್ಲ ಒಂದು ಬಾರಿ ಸಂಕಷ್ಟಕ್ಕೆ ಒಳಗಾಗಿರುತ್ತಾರೆ ಎನ್ನುವುದು ನನ್ನ ಅನಿಸಿಕೆ! ಕಡೆಯ ಪಕ್ಷ ಕೆಲವೊಮ್ಮೆ ಒಂದು ಎಸ್.ಎಂ ಎಸ್ಸು ಕಳಿಸಲಾಗದೆ ಪರೆದಾಡಿರುತ್ತಾರೆ!


ಮೊಬೈಲ್ ಸಿಂ ಕಾರ್ಡ್ ಆಕ್ಟಿವೇಶನ್ ಆದ ತಕ್ಷಣದಿಂದಲೇ ಮೊಬೈಲ್ ಕಂಪೆನಿಗಳ ಉಪದ್ರಗಳು ಆರಂಭವಾಗಿ ಬಿಡುತ್ತವೆಯೇನೋ?! 2 ದಿನದೊಳಗೆ
ಅಡ್ರೆಸ್ಸ್ ಪ್ರೂಫ್ ಕೊಟ್ಟಿಲ್ಲ ಎನ್ನುವ ತಕರಾರಿನ ಕರೆ ಬರಬಹುದು, ಕಾಲ್ ಸೆಂಟರ್ ನಿಂದ! ಇಲ್ಲ ಸಬ್ಮಿಟ್ ಮಾಡಿದ್ದೇವೆ ಎಂದು ಸಮಜಾಯಿಷಿ ಕೊಟ್ಟರೆ ಮುಗಿಯಿತು ಎಂದು ಕೊಂಡಿರ?...ಊಹು ಮತ್ತೊಂದು ಎರೆಡು ಮೂರು ದಿನ ಬಿಟ್ಟು ಅಡ್ರೆಸ್ಸ್ ಪ್ರೂಫ್ ನ ವೆರಿಫಯ್ ಮಾಡಿ ಎನ್ನುವ ಕರೆ ಬಂದರು ಆಶ್ಚರ್ಯ ಪಡಬೇಕಾಗಿಲ್ಲ, ಇಲ್ಲಿ ಅಕಸ್ಮಾತ್ ಅಡ್ರೆಸ್ಸ್ ಪ್ರೂಫ್ನಲ್ಲಿನಲ್ಲಿ ಇದ್ದ ಹಾಗೆ ಹೇಳದೆ ಹೋದರೆ 2ಗಂಟೆಯೊಳಗೆ ನಿಮ್ಮ Outgoing ಸೇವೆ ಬ್ಲಾಕ್ ಆಗಿರುತ್ತದೆ!


ಇನ್ನು ಕೆಲವು ಕಸ್ಟಮರ್ ಕೇರ್ ನ ಗ್ರಾಹಕ ಸ್ನೇಹಿ ಎಕ್ಸಿಕ್ಯೂಟೀವ್ ಗಳು ನಾವಂದುಕೊಂಡಿದ್ದಕ್ಕಿಂತ ಬೇಗನೆ ನಮ್ಮ ದೂರುಗಳನ್ನು ಪರಿಹರಿಸುತ್ತಾರೆ ಹಾಗು ಅರ್ಥವಾಗುವಂತೆ ಮಾಹಿತಿಯನ್ನು ನೀಡುತ್ತಾರೆ

ಮೊಬೈಲ್ ಕಂಪೆನಿಗಳು ಕಾಲರ್ ಟ್ಯೂನ್ ನಿಂದ ಅತ್ಯದಿಕ ವರಮಾನಗಳನ್ನು ಪಡೆಯುತ್ತಿವೆ, ಸ್ವಯಂಚಾಲಿತ ಕರೆಗಳು ನಿಮಗೆ ಕಂಪನಿಯ ವತಿಯಿಂದ ಮಾಡಲಾಗುತ್ತದೆ ಕಾಲರ್ ಟ್ಯೂನ್ ಗಳನ್ನು ಹಾಕಿಸಿಕೊಳ್ಳುವಂತೆ ಮಾಡಲು " ನಿಮಗೆ ಕರೆ ಮಾಡುವವರಿಗೆ ಅದೇ ಹಳೆಯ ಟ್ರಿಂಗ್ ಟ್ರಿಂಗ್ ರಿಂಗ್ ಕೇಳಿಸಿ ಬೋರ್ ಆಗಿದೆಯೇ.. ನಿಮ್ಮ ಮೆಚ್ಚಿನ ಗೀತೆಯನ್ನು ಕೇಳಿಸಿರಿ " ಎಂದು ಮಧುರವಾದ ದ್ವನಿ ಉಲಿಯುತ್ತದೆ.. ಹಾಗು ಕೆಲವು ಗೀತೆಗಳನ್ನು ನಿಮಗೆ ಉಚಿತವಾಗಿ ಕೇಳಿಸಲಾಗುತ್ತದೆ.. ಆಯ್ಕೆಯು ಅತ್ಯಂತ ಸರಳ.. ಈಗ ಕೇಳಿದ ಹಾಡನ್ನು ನಿಮ್ಮ ಮೆಚ್ಚಿನ ಕಾಲರ ಟ್ಯೂನ್ ಆಗಿ ಆಯ್ಕೆ ಮಾಡಿಕೊಳ್ಳಲು 1ನ್ನು ಒತ್ತಿ, ಇವೆಲ್ಲವೂ ಕೇವಲ ಮಾಸಿಕ ಮೂವತ್ತು ರೂಪಾಯಿಗಳು ಹಾಗು ಡೌನ್ಲೋಡ್ ಗೆ ಬರಿ ಹದಿನೈದು ರೂಪಾಯಿಗಳನ್ನು ವಿದಿಸಲಾಗುವುದು...." ಇನ್ನೇಕೆ ತಡ ಎಂದು ನೀವು ಕರೆ ದ್ವನಿ(Caller tune) ಸಂಗೀತವನ್ನು ಹಾಕಿಸಿಕೊಳ್ಳುತ್ತೀರಿ... ನೆನಪಿರಲಿ ಪ್ರತಿ ತಿಂಗಳು ನಿಮಗೆ ಮೂವತ್ತು ರೂಪಾಯಿಗಳನ್ನು ಚಾರ್ಜ್ ಮಾಡಲಾಗುತ್ತದೆ ಹಾಗು ಪ್ರತಿ ಬಾರಿ ನೀವು ಹೊಸ ಸಂಗೀತದ ಆಯ್ಕೆ ಮಾಡಿಕೊಂಡಾಗಲೂ ಹದಿನೈದು ರೂಪಾಯಿಗಳು ಚಾರ್ಜ್ ಆಗುತ್ತದೆ.. ಪ್ರತಿ ಬಾರಿ ನಿಮ್ಮ ಆಯ್ಕೆ ಬದಲಾಯಿಸಲು ಮೂರು ರೂಪಾಯಿ ಪ್ರತಿ ನಿಮಿಷಕ್ಕೆ ಕರೆದರಗಳನ್ನು ವಿದಿಸುವಂತ ನಂಬರಿಗೆ ಕರೆಮಾಡಬೇಕಾಗುತ್ತದೆ!.., ಇದು ನಿಮ್ಮ ಆಯ್ಕೆ ನಿಮ್ಮಿಷ್ಟ ಯಾವ ಹಾಡನ್ನಾದರೂ ಹಾಕಿಕೊಳ್ಳಿ ನನ್ನದೇನು ಆಕ್ಷೇಪಣೆ ಇಲ್ಲ.. ಆದರೆ.. ನಿಮಗೆ ಕರೆ ದ್ವನಿ ಸಂಗೀತ ಬೇಡ ಎನ್ನಿಸಿದ ಕೂಡಲೇ ಸೇವೆಯನ್ನು ರದ್ದುಗೊಳಿಸವುದು ಸ್ವಲ್ಪ ಕಷ್ಟದ ಮಾತೆ ಸರಿ.... ಮತ್ತೆ ನಿಮಿಷಕ್ಕೆ ಮೂರು ರೂಪಯಿಯೋ ಆರು ರೂಪಯಿಯೋ ತೆತ್ತು ಕರೆ ಮಾಡಿ.. ಆಯ್ಕೆಗಳನ್ನು ಒತ್ತುತ್ತಾ ಕನಿಷ್ಟವೆಂದರೂ ಐದರಿಂದ ಆರು ನಿಮಿಷ ಒದ್ದಾಡಿದ ನಂತರ ನಿಮ್ಮ ಅದೃಷ್ಟ ನೆಟ್ಟಗಿದ್ದರೆ ಕರೆ ದ್ವನಿ ಸೇವೆ ರದ್ದಾಗುತ್ತದೆ..... ಇಲ್ಲವಾದಲ್ಲಿ ನಿಮ್ಮ ಜೇಬಿಗೆ ಕತ್ತರಿ ಬಿತ್ತೆಂದೇ ಲೆಖ್ಖ!

ಎಷ್ಟು ಸುಲಭವಾಗಿ ಕರೆದ್ವನಿ(Caller Tune) ಸೇವೆ ಲಭ್ಯವಗುತ್ತದೆಯೋ ಅದರಷ್ಟೆ ಕಷ್ಟ ಸೇವೆಯನ್ನು ರದ್ದು ಪಡಿಸುವುದು.. ನಿಮಗೆ ಕರೆದ್ವನಿ ಸೇವೆ ಪಡೆದುಕೊಳ್ಳುವುದು ಹೇಗೆ ಎನ್ನುವ ಮಾಹಿತಿಯನ್ನು ತಿಳಿಸುವ ಬೂಪರು ರದ್ದು ಪಡಿಸುವ ವಿಧಾನವನ್ನು ಎಲ್ಲೂ ಸಹ ತಿಳಿಸುವುದಿಲ್ಲ.. ನೀವೇ ಕಂಪನಿಯ ಸೇವಾ ಕೇಂದ್ರಕ್ಕೆ ಕರೆ ಮಾಡಿ.. ಮಾಹಿತಿ ನೀಡುವವರು ನಿಮ್ಮ ಕರೆಗೆ ಉತ್ತರಿಸುವ ತನಕ ಮೊಬೈಲ್ ದೂರವಾಣಿಯ ಸಂಗೀತ ಆಲಿಸುತ್ತ ಮದ್ಯ ಬರುವ "ನಿಮ್ಮ ಕರೆ ನಮಗೆ ಅಮೂಲ್ಯ ದಯವಿಟ್ಟು ನಿರೀಕ್ಷಿಸಿ" ಎನ್ನುವ ತಾಳ್ಮೆ ಪರೀಕ್ಷೆಯನ್ನು ಮಾಡಿಸಿಕೊಂಡು.. ಕಾಲರ್ ಟ್ಯೂನ್ ಕಾನ್ಸೆಲ್ಲಶನ್ ಹೇಗೆ ಎಂದರೆ ಇಷ್ಟುದ್ದ ವಿಧಾನವನ್ನು ತಿಳಿಸುತ್ತಾರೆ.. ಸಾಮನ್ಯವಾಗಿ ಅರ್ಥವಗದಂತೆಯೇ ಯತಾವತ್ ಪುಸ್ತಕದ ಬಾಷೆಯಲ್ಲಿ ಮಾಹಿತಿಯನ್ನು ನೀಡುತ್ತಾರೆ. ನೀವು ಏರ್ಟೆಲ್ ನ ಗ್ರಾಹಕರಗಿದ್ದರೆ "ಅದೇನೋ Balence ನೋಡುವ *123# ಕೋಡ್ ನಂತೆ ಕಾಲರ್ ಟ್ಯೂನ್ ಕಾನ್ಸೆಲ್ಲಶನ್ ಕೋಡ್ ಇದೆಯಲ್ಲ ಅದನ್ನು ಕೊಡಿ ಎಂದು ಕೇಳಿ "ಅದಾ ಎಂದು ರಾಗ ಎಳೆಯುತ್ತ" *106# ಕೋಡು ಕೊಡುತ್ತಾರೆ..ಅದನ್ನು ಡಯಲ್ ಮಾಡಿದರೆ ಯಾವುದೇ ಕರ್ಚಿಲ್ಲದೆ ಮರುಕ್ಷಣವೇ ನಿಮಗೆ ಕರೆ ಮಾಡುವವರಿಗೆ ನಿಮ್ಮ ನೆಚ್ಚಿನ ಟ್ರಿಂಗ್ ಟ್ರಿಂಗ್ ಕೇಳಿಸುತ್ತದೆ!

ಇನ್ನು ಎಸ್.ಎಂ.ಎಸ್ ಸೇವೆಯ ವಿಚಾರಕ್ಕೆ ಬಂದರೆ.. ರಾಷ್ಟ್ರೀಯ ಹಬ್ಬ ಹರಿದಿನಗಳಲ್ಲಿ ಉಚಿತ ಅಥವಾ ರಿಯಾಯಿತಿ ಎಸ್.ಎಂ.ಎಸ್ ಲಭ್ಯವಿರುವುದಿಲ್ಲ.. ಕಾರಣ ಏನೆಂದರೆ.. ಪ್ರತಿಯೊಬ್ಬ ಗ್ರಾಹಕನು ಎಸ್.ಎಂ.ಎಸ್ ಕಳಿಸುವುದರಿಂದ ಸೇವಾ ಕೇಂದ್ರದಲ್ಲಿ ಒಟ್ಟಿಗೆ ಪ್ರವಾಹದಂತೆ ಹರಿದುಬರುವ ಸಂದೇಶಗಳಿಂದ ಮೊಬೈಲ್ ನೆಟ್ವರ್ಕ್ ಜಾಮ್ ಆಗುತ್ತದೆ! ಮೇಲಿನ ಕಾರಣವನ್ನೇ ತಿಳಿಸಿ ಮೊಬೈಲ್ ಸೇವಾ ಕಂಪೆನಿಗಳ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿರುವ ಟ್ರೈ ನಿಂದ ಕೂಡ ಹಸಿರು ನಿಶಾನೆ ಪಡೆದು ಟ್ರೈ ನ ಕಣ್ಣಿಗೆ ಮಣ್ಣೆರೆಚಿವೆ... ಟ್ರೈ ಕೂಡ ಮೊಬೈಲ್ ಕಂಪನಿಗಳಿಗೆ ಸ್ಪಷ್ಟವಾದ ನಿರ್ದೇಶನಗಳನ್ನು ನೀಡಿವೆ.. ಯಾವ ಯಾವ ದಿನಗಳಲ್ಲಿ ಉಚಿತ ಅಥವಾ ರಿಯಾಯಿತಿ ದರದ ಸಂದೇಶ ಸೇವೆಗಳು ಲಭ್ಯವಿರುವುದಿಲ್ಲ ಎಂದು ಪ್ರತಿ ಗ್ರಾಹಕನಿಗೆ ಪೂರ್ವ ಮಾಹಿತಿಯನ್ನು ಒದಗಿಸಬೇಕು ಎಂದು.. ಆದರೆ ಚಾಲಕಿ ಸೇವಾದಾತರುಗಳು.. ಮೊದಲು ಮೊದಲು ಕೆಲವು ಬಾರಿ ಚಾಚು ತಪ್ಪದೆ ಮಾಹಿತಿ ನೀಡುತ್ತಾರೆ.. ಅನಂತರ ನಿಮ್ಮ ಮೊಬೈಲ್ ನಲ್ಲಿ ಸಂದೇಶ ಕಳುಹಿಸಿ ಅಕೌಂಟ್ ನ ಬ್ಯಾಲೆನ್ಸ್ ಕಟ್ ಆದ ಮೇಲೆ ತಿಳಿಯುತ್ತದೆ! ಎಸ್.ಎಂ. ಎಸ್ ವಿಚಾರದಲ್ಲೂ ಕೂಡ ಏರ್ಟೆಲ್ ಮೊದಲನೆ ಸ್ಥಾನದಲ್ಲಿ ನಿಲ್ಲುತ್ತದೆ ನೀವು 3days ಅಂಥ 222 ಗೆ ಎಸ್.ಎಂ ಎಸ್ ಕಳುಹಿಸಿದರೆ ಮುಂದಿನ ಯಾವ ಮೂರು ದಿನಗಳಲ್ಲಿ ಉಚಿತ ಅಥವಾ ರಿಯಾಯಿತಿ ದರದ ಎಸ್.ಎಂ .ಎಸ್ ಸೇವೆ ಇರುವುದಿಲ್ಲ ಎನ್ನುವ ಮಾಹಿತಿ ಹೊತ್ತ ಸಂದೇಶ ನಿಮ್ಮ ಮೊಬೈಲಿನ ಇನ್ ಬಾಕ್ಸ್ ನ ಒಳಗಿರುತ್ತದೆ!
ಆದರೆ.... ಮತ್ತೆ ಏನಪ್ಪಾ ಅಂದ್ರ? ಹೂ ಇಲ್ಲೂ ಇದೆ ರಹಸ್ಯ.. 3 ದಿನಗಳ ಪಟ್ಟಿ ಒಮ್ಮೆ ಪ್ರಕಟವಾದರೆ.. ಮುಂದಿನ ಪಟ್ಟಿ ಬಿಡುಗಡೆ ಆದಾಗ ಈ ಹಿಂದೆ ನೀಡಿದ ದಿನಾಂಕದ ಮುಂದಿನ ಅಥವಾ ಹಿಂದಿನ ದಿನಾಂಕದಲ್ಲಿ ರಿಯಾಯಿತಿ ಸಂದೇಶ ಸೇವೆ ಇಲ್ಲದಿದ್ದರೂ.. ಮೊದಲು ತಿಳಿಸಿದ್ದ ದಿನದಲ್ಲೂ ಸೇವೆ ಇರುವುದಿಲ್ಲ! ಹೊಸ ಪಟ್ಟಿಯಲ್ಲಿ ಆ ದಿನಾಂಕ ಇಲ್ಲದಿದ್ದರೂ ಹಿಂದೆಯೇ ಪ್ರಕಟಸಿದ್ದೇವೆ ಎನ್ನುತ್ತಾರೆ !! 1ರೂಪಾಯಿ ಪ್ರತಿ ಸಂದೇಶಕ್ಕೆ ಪಡೆದು ಹಬ್ಬ ಹರಿದಿನಗಳಲ್ಲಿ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆದೆ ತೀರುತ್ತವೆ ಈ ಮೊಬೈಲ್ ಕಂಪೆನಿಗಳು.....

ಇನ್ನು worldcup Cricket ನ ಸಮಯದಲ್ಲಂತೂ ತರಾವರಿ Cricket(ಕ್ರಿಕೆಟ್ಟ) ಪ್ಯಾಕ್ ಗಳನ್ನು ಕಂಪೆನಿಗಳು ಗ್ರಾಹಕರಿಗಾಗಿ ಪರಿಚಯಿಸುತ್ತವೆ... ಈ ವಿಚಾರವನ್ನು ಹೇಳಲು ಒಂದು ಕಾರಣವಿದೆ..ಹಿಂದಿನ ಬಾರಿಯ World cup cricket ನ ಸಮಯದಲ್ಲಿ ನೆಡೆದ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.. ನನ್ನ ಸ್ನೇಹಿತನ ಏರ್ಟೆಲ್ ನಂಬರಿಗೆ ರಾತ್ರಿ ೧೨ಘಂಟೆಯ ಸುಮಾರಿನಲ್ಲಿ ಒಂದು ಸಂದೇಶ ಬಂದಿತ್ತು.. ( ಆಗ ಅವನಿಗೆ ಪರೀಕ್ಷೆಯ ಸಮಯವಾದ್ದರಿಂದ ಮಲಗದೇ ಓದುತ್ತಿದ್ದನಂತೆ ).. ಆ ಸಂದೇಶದ ಸಾರಾಂಶವಿಷ್ಟೇ .. ನೀವು ಕೋರಿದ್ದ 60ರುಪಾಯಿಯ ಕ್ರಿಕೆಟ್ ಪ್ಯಾಕ್ Activate ಆಗಿದೆ ಎಂದು.. ಇದನ್ನು ಅವನು ನನಗೆ ಮರುದಿನ ಹೇಳುತ್ತಿದ್ದಂತೆ ನಡುವೆ ಬಾಯಿ ಹಾಕಿ ಹೇಳಿದೆ " ನೀನು ಎಲ್ಲೋ ಕ್ರಿಕೆಟ್ ಪ್ಯಾಕ್ ಗೆ ಬೇಕು ಎಂದು ಎಸ್.ಎಂ.ಯೇಸ್ಸೋ ಏನೋ ಕಳಿಸಿರುತೀಯ ಎಂದು, " ಅವನು ಹೇಳಿದ್ದು ತಡಿಯಪ್ಪ" ಎಂದು ಇನ್ನೊಂದು ಸಂದೇಶ ತೋರಿಸಿದ ಅದರ ಸಾರಾಂಶ ಏನೆಂದರೆ .. ನೀವು ಬೇಡಿಕೆ ಸಲ್ಲಿಸಿದ್ದ 30ರುಪಾಯಿ ಕ್ರಿಕೆಟ್ ಪ್ಯಾಕ್ Activate ಆಗಿದೆ ಎಂದು.. ಅವನು ನನ್ನನ್ನು ಕೇಳಿದ್ದಿಷ್ಟು.. ನನಗೇನು ತಲೆ ಇಲ್ಲವೊ ಅತವಾ ದುಡ್ಡು ಜಾಸ್ತಿ ಆಗಿದೆಯೋ ಎಂದುಕೊಂಡೆಯೋ ಎರೆಡೆರೆಡು ಪ್ಯಾಕ್ ಗಳನ್ನು ಒಟ್ಟಿಗೆ Activate ಮಾಡಲು" ಎಂದು!... ಮುಂದೆ ನಾವಿಬ್ಬರು ಮಾಡಿದ ಕೆಲಸ, ಏರ್ಟೆಲ್ ನ ಕಸ್ಟಮರ್ ಕೇರ್ ಗೆ ಕರೆ ಮಾಡಿ ವಿಚಾರಿಸದರೆ "ನೀವೇ ಎಸ್.ಎಂ.ಎಸ್. ಕಳ್ಸಿದ್ದೀರ" ಇಲ್ಲಿ ಮಾಹಿತಿ ಇದೆ ಎಂದು...! ನಮ್ಮ ಮುಂದಿನ ಪ್ರಶ್ನೆ 6೦ರುಪಾಯಿ ಪ್ಯಾಕ್ನಲ್ಲಿ ಇರುವ ಸೇವೆಗಿಂತ ಹೆಚ್ಚಿನ ಸೇವೆ 3೦ರುಪಾಯಿ ಪ್ಯಾಕ್ನಲ್ಲಿ ಇದೆಯೇ!.. 6೦ರುಪಾಯಿ ಪ್ಯಾಕ್ ಸಾಲದು ಎಂದು ಮೂವತ್ತರ ಪ್ಯಾಕು ಬೇಕು ಎಂದಿದ್ದೆವೆಯೇ ಎಂದು ಕೇಳಿದರೆ.. ಅದೇ ಅಸಡ್ಡೆಯ ಉತ್ತರ "ಇನ್ನು ಸರಿಯಾದ ಮಾಹಿತಿ ದೊರೆಯುತ್ತಿಲ್ಲ 24ಘಂಟೆಯ ನಂತರ ಕರೆ ಮಾಡಿ".. ಹಾಗಾದರೆ ಇಷ್ಟೊತ್ತು ಮಾಹಿತಿ ಇದೆ ಎಂದಿರಲ್ಲ ಎನ್ನುವ ಮೊದಲೇ ಕಾಲ್ disconnect ಆಗಿತ್ತು! 24ಘಂಟೆಯಲ್ಲ 1 ವಾರವಾದರೂ ಸಮರ್ಪಕ ಉತ್ತರ ನೀಡದಿದ್ದಾಗ ಸ್ಥಳೀಯ ಬಳಕೆದಾರರ ವೇದಿಕೆಯ ಮೊರೆ ಹೊಕ್ಕು ಕಂಪನಿಯ ವಿರುದ್ದ ದೂರು ದಾಖಲಿಸಿದ್ದು ಆಗಿತ್ತು.. ಆದರೆ ಗ್ರಾಹಕರ ಹಣ ಕೊಳ್ಳೆಹೊಡೆಯುತ್ತಿರುವ ಕಂಪನಿ ಅಷ್ಟು ಬೇಗನೆ ಜಗ್ಗುತ್ತದೆಯೇ.. ಬರಿ ಪರಿಶೀಲನೆಯ ಉತ್ತರ ಬಂತೆ ವಿನಃ ಪರಿಶೀಲನೆ ಮಾಡಲಿಲ್ಲ.. ಕೊನೆಗೆ ಏನಾಯಿತೋ ಗೊತ್ತಿಲ್ಲ!


ಇಂದು ಗ್ರಾಹಕರ ಸೇವಾ ಕೇಂದ್ರಗಳು ತುಂಬಾ ಅಸಡ್ಡೆಯ ಬಾಯಿಗೆ ಬಂದ ಹಾಗೆ ಉತ್ತರ ನೀಡಿ ಗ್ರಾಹಕರ ಕಂಗೆಣ್ಣಿಗೆ ಗುರಿಯಾಗಿ ಗ್ರಾಹಕರಿಂದ ಬಯ್ಯಿಸಿಕೊಳ್ಳುತ್ತಿವೆ! ಇನ್ನೊಂದು ಮೊನ್ನೆ ಮೊನ್ನೆ ನೆಡೆದ ಘಟನೆಯ ಬಗ್ಗೆ ಹೇಳಲೇ ಬೇಕಾಗಿದೆ.. ನನ್ನ ಸ್ನೇಹಿತನ ಏರ್ಟೆಲ್ ನಂಬರಿನಿಂದ ಹೊರ ಹೋಗುವ ಕರೆಗಳು ಬ್ಲಾಕ್ ಆಗಿದ್ದವು, ಅದಕ್ಕೆ ನನ್ನ ಏರ್ಟೆಲ್ ನಂಬರಿನಿಂದ ಕಸ್ಟಮರ್ ಕೇರ್ ಗೆ ಕರೆ ಮಾಡಿ ಬೇರೆ ನಂಬರಿನಿಂದ ಕಂಪ್ಲೆಂಟ್ ತಗೋಳಿ ಎಂದು ನನ್ನ ಗೆಳೆಯನ ನಂಬರ್ ಹೇಳಿದ ತಕ್ಷಣ.. ಅಡ್ರೆಸ್ಸ್ ಹೇಳಿ ಸಾರ್ ಎಂದ.. ನಾನು ಅವನ ಹೆಸರು, ಅಪ್ಪನ ಹೆಸರು.. ಮನೆಯ ಹೆಸರು, ಅಂಚೆ, ಊರು, ತಾಲೂಕು ಜಿಲ್ಲೆ.. ಎಲ್ಲ ಹೇಳಿದ್ದೆ.. ಅತ್ತಲಿಂದ ಕೇಳಿದ್ದೇನು ಎಂದರೆ ಡೋರ್ ನಂಬರ್ ಹೇಳಿ ಎಂದು.. ಸಾಮನ್ಯವಾಗಿ ಹಳ್ಳಿಗಳಲ್ಲಿ ಡೋರ್ ನಂಬರ್ ನ ಬಳಕೆ ಕಡಿಮೆ.. ಅದು ಅಲ್ಲದೆ ನನ್ನ ಗೆಳೆಯ ನೀಡಿದ್ದ ಡ್ರೈವಿಂಗ್ ಲೈಸೆನ್ಸ್ ಅಡ್ರೆಸ್ಸ್ ಪ್ರೂಫ್ ನಲ್ಲಿ ಯಾವುದೇ ಡೋರ್ ನಂಬರ್ರು ನಮೂದಾಗಿರಲಿಲ್ಲ!! ನಾನು ಡೋರ್ ನಂಬರ್ ಕೊಟ್ಟಿಲ್ಲ ಎನ್ನುವ ಮೊದಲೇ... ಬಂದ ಉತ್ತರ ಡೋರ್ ನಂಬರ್ ತಿಳಿದುಕೊಂಡು ಕರೆ ಮಡಿ.. ನಿಮ್ಮ ಕಂಪ್ಲೇಂಟ್ ತೆಗೆದುಕೊಳ್ಳುತ್ತೇವೆ ಎನ್ನುವ ಉತ್ತರ ನೀಡಿ. ಕಾಟಾಚಾರಕ್ಕೆ ಶುಭದಿನವನ್ನು ಹೇಳಿ.. ಕರೆ ಮುಕ್ತಾಯ ಗೊಳಿಸಿದ! ನಂತರ ಮತ್ತೆ ಕರೆ ಮಾಡಿದಾಗ ಇನ್ನೊಬ್ಬರು ದೂರನ್ನು ದಾಖಲಿಸಿಕೊಂಡರು...


ಹೀಗೆ ಹೇಳುತ್ತಾ ಹೋದರೆ ಮೊಬೈಲ್ ರಗಳೆ ಮುಗಿಯುವುದೇ ಇಲ್ಲ !


Here is Karnataka customer care numbers for you


Bsnl - 9400024365

Hutch(Vodafone ) 111, 9886098860

Airtel 121, 9845098450 9845012345(for post paid )

Tata indicom 12524, 9243012345

Reliance *333 3033 3333
ಏರ್ಟೆಲ್ ಗ್ರಾಹಕರಿಗೆ ಒಂದು ಹೊಸ ಸುದ್ದಿ
*106# ನಿಂದ ನಿಮ್ಮ ಕರೆ ದ್ವನಿ ಸಂಗೀತ ರದ್ದು ಆಗದಿದ್ದರೆ....ಇದನ್ನು ಪ್ರಯತ್ನಿಸಿ ಕಾಲರ್ ಟ್ಯೂನ್ ಕ್ಯಾನ್ಸಲ್ ಮಾಡಲು ಉಚಿತ ಕರೆ 543211808, ಕಾಲರ್ ಟ್ಯೂನ್ ರದ್ದು ಪಡಿಸುವ ಸೇವೆಯನ್ನು ಮಾತ್ರ ಉಪಯೋಗಿಸಿ, ಬೇರೆ ಯಾವ್ಯಾವುದೋ ಆಯ್ಕೆಗಳನ್ನು ಮಾಡಿಕೊಂಡು ನನ್ನನು ಬೈಕೋ ಬೇಡಿ...!

3 comments:

Harisha - ಹರೀಶ said...

ನಿಜ, ಈ ಮೊಬೈಲ್ ಕಂಪನಿಗಳ ಜೊತೆ ಏಗುವಷ್ಟರಲ್ಲಿ ಜೀವನವೇ ಸಾಕು ಎನಿಸಿಬಿಡುತ್ತದೆ. ಈ ಹಿಂದೆ ನಾನೂ ಈ ಬಗ್ಗೆ ಬರೆದಿದ್ದೆ

Unknown said...

kavan, kathe balika varadi bareyalu shuru hachukondra ?

ಮನಸ್ವಿ said...

ಹರೀಶ ದನ್ಯವಾದಗಳು.. ನೀವು ಬರೆದ ಲೇಖನ ಓದಿದ್ದೇನೆ.. ತುಂಬಾ ಚನ್ನಾಗಿದೆ.. ನನಗೂ ಈ ಮೊಬೈಲ್ ಕಂಪೆನಿಗಳ ಜೊತೆ ಒದ್ದಾಡಿ ಒದ್ದಾಡಿ ಸುಸ್ತಾಗಿ ಬಿಟ್ಟಿದೆ...

ಜಿತೇಂದ್ರ ಅವರೇ..ಹೀಗೆ ಬರುತ್ತಾ ಇರಿ.. ಬರಿ ವರದಿ ಮಾಡಿಲ್ಲ ನನ್ನ ಅನುಭವಗಳನ್ನು ಹಂಚಿಕೊಂಡಿದ್ದೇನೆ.. ನನ್ನಂತೆ ಮೊಬೈಲ್ ಕಂಪೆನಿಗಳಿಂದ ಉಪದ್ರಕ್ಕೆ ಅದೆಷ್ಟು ಜನ ಒಳಗಗಿದಾರೋ ಗೊತ್ತಿಲ್ಲ!.. ಅಂದಹಾಗೆ ನಿಮಗೆ ಮೊಬೈಲ್ ಕಂಪನಿ ಅವ್ರು ಏನು ತೊಂದರೆ ಕೊಟ್ಟಿಲ್ಲ ಅನಿಸುತ್ತಿದೆ ಅದಕ್ಕೆ ನಿಮಗೆ ಬರಿ ವರದಿ ಅನ್ನಿಸಿದೆಯೇನೋ ! ದನ್ಯವಾದಗಳು.. ಹೀಗೆ ಬರುತ್ತಿರಿ.