ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Wednesday, December 3, 2008

ಹವ್ಯಕರ ಭಾಷೆಯ ಸೊಗಡೂ.. ಸ್ವಲ್ಪ ಪೋಲಿತನ, ರಸಿಕತೆಯೂ....

ಹವ್ಯಕ ಭಾಷೆ ಹವ್ಯಕ ಬ್ರಾಹ್ಮಣರ ಆಡು ಭಾಷೆ,ಇದು ಕನ್ನಡವೇ ಆದರೂ ಈ ಭಾಷೆಗೊಂದು ವಿಶೇಷ ಸೊಗಡಿದೆ, ನಮ್ಮ ಭಾಷೆಯಲ್ಲಿ ಬಹುವಚನ ಬಳಕೆ ಅತೀ ವಿರಳ, ನಮ್ಮ ಮನೆಯಲ್ಲಿ ಎಷ್ಟೇ ಹಿರಿಯರಿದ್ದರೂ ಅವರೊಂದಿದೆ ನಾವು ಏಕವಚನದಲ್ಲೇ ಮಾತನಾಡುತ್ತೇವೆ.. ಅಂದ ಮಾತ್ರಕ್ಕೆ ನಮ್ಮಲ್ಲಿ ಹಿರಿಯರಿಗೆ ಗೌರವವಿಲ್ಲವೆಂದಲ್ಲ ನಮ್ಮ ಭಾಷೆಯ ವಿಶೇಷತೆಯೇ ಹಾಗೆ, ಏಕವಚನದಲ್ಲಿ ಮಾತನಾಡುವುದರಿಂದ ನಮ್ಮ ಬಾಂಧವ್ಯ ಗಟ್ಟಿಯಾಗಿರುತ್ತವೆಯೇನೋ ಎಂದು ನನಗೆ ಅನಿಸುತ್ತದೆ(ಗೆಳೆಯರೊಂದಿಗೆ ನಾವು ಯಾವಾಗಲೂ ಏಕವಚನದಲ್ಲಿಯೇ ಅಲ್ಲವಾ ನಾವು ಮಾತನಾಡೋದು?) ಪರಿಚಯವಿಲ್ಲದ ಅಥವಾ ಮೊದಲ ಬಾರಿ ಮಾತನಾಡಿಸುವಾಗ ಕೆಲವರನ್ನು "ನಿಮಗೆ" ಯಾವೂರಾತು ಎಂದು ಕೇಳುತ್ತೇವೇನೋ.. ಅಥವಾ ಕೆಲವರು ಹಿರಿಯರಿಗೆ ನೀವು ಎಂದು ಬಹುವಚನ ಬಳಸಿ ಮಾತನಾಡುತ್ತಾರೇನೋ, ಆದರೆ ಮೇಲೆ ತಿಳಿಸಿದಂತೆ ಏಕವಚನ ಬಳಕೆ ಅತೀ ಹೆಚ್ಚು.
ಮಲೆನಾಡಿನ ಸೀಮೆಗಳಾದ (ಅನೇಕ ಊರುಗಳನ್ನು ಸೇರಿಸಿ ಒಂದು ಸೀಮೆ ಎಂದು ಕರೆಯುತ್ತಾರೆ) ಸಾಗರ ಸೀಮೆಗೂ, ಕ್ಯಾಸನೂರು ಸೀಮೆ, ಸಿರಸಿ, ಸಿದ್ದಾಪುರ ಹಾಗೂ ಇನ್ನೂ ಹಲವು ಸೀಮೆಯಲ್ಲಿ ಮಾತನಾಡುವ ಹವ್ಯಕ ಭಾಷೆಯಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಿದೆಯಷ್ಟೆ,ಆದರೆ ಪುತ್ತೂರಿನ ಹವ್ಯಕ ಭಾಷೆ ಮಲೆನಾಡಿಗರಾದ ನಮಗೆ ಅರ್ಥವಾಗುವುದು ಸ್ವಲ್ಪ ಕಷ್ಟಕರವಾಗಿದೆ ಅಲ್ಲಿ ತುಳು ಭಾಷೆಯ ಪ್ರಬಾವವಿರುವುದರಿಂದಲೋ ಎನೋ ಮಲೆನಾಡ ಹವ್ಯಕರಿಗೆ ಅಲ್ಲಿಯ ಭಾಷೆ ಅರ್ಥವಾಗುವುದಿಲ್ಲ. ಸಾಗರದವರು "ಹೋಗಬೇಕು" ಅನ್ನುವುದನ್ನು ಹವ್ಯಕ ಬಾಷೆಯಲ್ಲಿ "ಹೋಗಕ್ಕು" ಎಂದು ಹೇಳಿದರೆ ಕ್ಯಾಸನೂರು ಹಾಗು ಕೆಲವು ಕಡೆ "ಹೋಗವು" ಎಂದು ಹೇಳುತ್ತಾರೆ... ಹಾಗೆಯೇ ಬರಕ್ಕು, ಬರವು ಹೀಗೆ ಅಲ್ಪ ಸ್ವಲ್ಪ ವ್ಯತ್ಯಾಸಗಳಿರುತ್ತವೆ,ಇನ್ನೊಂದು ಹಾಸ್ಯಾಸ್ಪದ ವಿಷಯವೆಂದರೆ ಕ್ಯಾಸನೂರು ಸೀಮೆಯ(ಸೊರಬ ತಾಲ್ಲೂಕಿನ ಕೆಲವು ಗ್ರಾಮದ)ಲ್ಲಿ ಹೆಂಡತಿಗೆ "ಅದು" ಎಂದು ಕರೆಯುತ್ತಾರೆ, ಎಮ್ಮನೆದು ಬೈಂದನೆ ನಿಮ್ಮನಿಗೆ,ಎತ್ಲಾಗ್ ಹೋತೇನ ಅದು ಎನ್ನುವ ಮಾತುಗಳು ಕೇಳಲು ಸಿಗುತ್ತವೆ, "ಅದು" ಎಂದು ತನ್ನ ಗಂಡ ಕರೆಯುವುದಕ್ಕೆ ಹೆಂಡತಿಯಿಂದಲೂ ಯಾವುದೆ ತಕರಾರು ಇರುವುದಿಲ್ಲ, ಹೆಂಡತಿಯಾದವಳು ಮಾತ್ರ ಗಂಡನಿಗೆ "ಅವರು" ಎಂದು ಸಂಭೋದಿಸುತ್ತಾರೆ, ಇದೊಂದೆ ಇರಬೇಕು ಬಹುವಚನ ಬಳಕೆ ಹವ್ಯಕದಲ್ಲಿ!, ಈಗಿನ ಆಧುನಿಕ ಯುಗದಲ್ಲಿ ನಮ್ಮಲ್ಲೂ ಹೆಸರು ಹಿಡಿದು ಕರೆಯುವ ಮಹಿಳಾ ಮಣಿಗಳು ಇದ್ದಾರೆ ಬಿಡಿ, ಆದರೆ ಅವರು ಹಳ್ಳಿಯ ಮನೆಯಲ್ಲಿನ ಅಜ್ಜಿಯರ ಮುಂದೆ ಅಥವಾ ಅಮ್ಮನಿಗೆ ಕೇಳಿಸುವಂತೆ ಗಂಡನ ಹೆಸರಿಡಿದು ಕರೆದರೆ ಬೈಯ್ಯಿಸಿಕೊಳ್ಳುವುದು ಖಂಡಿತ, "ಎಂತದೆ ಕೂಸೆ ಗಂಡನ್ನ ಹೆಸ್ರಿಡಿದು ಕರ್ಯದು,ಎಂಗ ಎಲ್ಲಾ ಹಿಂಗೆ ಗಂಡನ ಹೆಸ್ರಿಡ್ದು ಕರಿತಿದಿದ್ವಿಲ್ಲೆ"ಎನ್ನುವ ಆಕ್ಷೇಪ ವ್ಯಕ್ತವಾಗುತ್ತದೆ.ಹವ್ಯಕರ ಮನೆಗಳಲ್ಲಿ ಮಕ್ಕಳನ್ನು ಹೆಚ್ಚಾಗಿ ಅಪ್ಪಿ ಮತ್ತು ಕೆಲವು ಸಲ ಮಾಣಿ ಎಂತಲೂ,ಅಮ್ಮಿ ಮತ್ತು ಕೂಸೆ ಎಂದು ಹುಡುಗ ಹುಡುಗಿಯರನ್ನು ಕರೆಯುವುದು ಸರ್ವೇಸಾಮನ್ಯವಾಗಿದೆ.. ಓರಗೆಯ ಹುಡುಗರು ಹುಡುಗಿಯರನ್ನು ಕೂಸೆ ಎಂದು ಸಂಭೋದಿಸಿ ಮಾತನಾಡುವುದು ಕೂಡಾ ಅಷ್ಟೇ ಸಾಮಾನ್ಯ, ಆದರೆ ಈಗಿನ ಆಧುನಿಕ ಯುಗದ, ಪಟ್ಟಣ ಸೇರಿದ ಹುಡುಗಿಯರನ್ನು ಕೂಸೆ ಎಂದು ಕರೆದರೆ ಅವರಿಗೆ ಸಿಟ್ಟು ಬಂದು ಬಿಡುತ್ತದೆಯಂತೆ, ಕೆಲವರಿಗೆ ಕೂಸೆ ಎಂದು ಕರೆದರೆ ಇಷ್ಟವಾಗುವುದು ಇದೆ, ಕಾಲದ ಮಹಿಮೆ ಸಾರ್ವಜನಿಕ ಸ್ಥಳಗಳಲ್ಲಿ ಇಬ್ಬರು ಹವ್ಯಕರಿದ್ದರು ಹವ್ಯಕ ಭಾಷೆಯಲ್ಲಿ ಮಾತನಾಡಲು ಇಷ್ಟಪಡದ, ಮಾತನಾಡಿದರೆ ಎಲ್ಲಿ ಬೇರೆಯವರು ನಗುತ್ತಾರೋ ಅಥವಾ ಬೇರೆಯ ಯಾವುದೋ ಕಾರಣಕ್ಕೋ ಹವ್ಯಕ ಮಾತನಾಡಲು ಹಿಂಜರಿಯುವ ಅನೇಕರಿದ್ದಾರೆ.. ಇನ್ನು ಕೆಲವರು ಯಾರ ಮುಲಾಜಿಲ್ಲದೆ ನಮ್ಮ ಭಾಷೆಯಲ್ಲಿಯೇ ಮಾತನಾಡುವವರಿದ್ದಾರೆ ಅಂಥವರನ್ನು ಕಂಡರೆ ನಿಜವಾಗಲೂ ಹೆಮ್ಮೆಯೆನಿಸುತ್ತದೆ,
ಹವ್ಯಕರು ಪೇಟೆ ಭಾಷೆಯಲ್ಲಿ (ನಿಮ್ಮ ಬೆಂಗಳೂರು ಕನ್ನಡ ಭಾಷೆಯಲ್ಲ ಬಿಡಿ, ಅಲ್ಲಿ ಕನ್ನಡ ಬಂದರೂ ಸ್ವಾಭಿಮಾನವೋ ಅಥವಾ ತಮ್ಮ ಪ್ರತಿಷ್ಠೆಗೆ ದಕ್ಕೆಯಾಗುತ್ತದೆ ಅಂತಲೋ ಏನೋ ಕನ್ನಡಕ್ಕಿಂತಲೂ ಇಂಗ್ಲೀಷ್, ಕಂಗ್ಲೀಷ್, ತಮಿಳು, ಮಲಯಾಳಿ ಭಾಷೆಯಲ್ಲಿ ಮಾತನಾಡುವವರೇ ಹೆಚ್ಚಿದ್ದಾರೆ ..) ಅಂದರೆ ಸಾಮಾನ್ಯವಾಗಿ ಕನ್ನಡದ ಆಡು ಭಾಷೆಯಲ್ಲಿ ಮಾತನಾಡುವಾಗಲೂ ಏಕವಚನಗಳು ಬಂದು ಬಿಡುತ್ತವೆ, ಅದನ್ನೇ ಅಪಾರ್ಥಮಾಡಿಕೊಂಡು ಆ ಭಟ್ಟ/ಹೆಗಡೆ ನನ್ನನ್ನು ನೀನು ಎಂದು ಏಕವಚನದಲ್ಲಿ ಮಾತನಾಡಿಸಿಬಿಟ್ಟ ಎಂದು ಹಿಂದಿನಿಂದ ಬೈದುಕೊಳ್ಳುವವರಿದ್ದಾರೆ, ಅನೇಕ ಬಾರಿ ನಮಗೆ ಗೊತ್ತಿಲ್ಲದಂತೆ ಏಕವಚನ ಬಂದು ಬಿಡುತ್ತದೆ.
ಹವ್ಯಕರ ವಿಚಾರ ತಿಳಿಸುವಾಗ ಹವ್ಯಕರ ಅದರಲ್ಲೂ ಮಲೆನಾಡಿನ ಹಳ್ಳಿಗಳಲ್ಲಿನ ಅತಿಥಿ ಸತ್ಕಾರದ ಬಗ್ಗೆ ಹೇಳದೆ ಹೋದರೆ ವಿಚಾರಗಳು ಪೂರ್ಣಗೊಳ್ಳುವುದೇ ಇಲ್ಲ, ನಮ್ಮ ಹಳ್ಳಿಯ ಜನ ಈಗಲೂ ಅತಿಥಿ ಸತ್ಕಾರಕ್ಕೆ ಎತ್ತಿದ ಕೈ,ಮನೆಗೆ ಯಾರೇ ಬಂದರೂ, ಅತಿ ಬಡವರ ಮನೆಗೆ ಕೂಡಾ ಯಾರೇ ಬಂದರು ಬಂದವರಿಗೆ ಅತಿಥಿ ದೇವೋ ಭವ ಎಂದು ಊಟ ಉಪಚಾರ ಮಾಡದೆ ಕಳಿಸುವುದೇ ಇಲ್ಲ. (ಈಗ ಎಲ್ಲೆಡೆಯಲ್ಲೂ ಅತಿಥಿಗಳನ್ನು ಸತ್ಕರಿಸದೆ ಕಳಿಸುವುದಿಲ್ಲ ಬಿಡಿ, ಇದು ವಾದಿಸುವ ವಿಚಾರವಲ್ಲ ಅಲ್ವ!), ನೀವು ಯಾರಾದರು ಒಮ್ಮೆ ಹವ್ಯಕರ ಮನೆಯಲ್ಲಿ ಊಟ ಮಾಡಿದ್ದರೆ ಹಲವು ವರ್ಷಗಳವರೆಗೆ ಅದರ ರುಚಿಯನ್ನು ಮರೆಯುವುದಿಲ್ಲ,ಮುಂದಿನ ಬಾರಿ ಸಿಕ್ಕಾಗ ಅಹ್ ನಿಮ್ಮನೆಯಲ್ಲಿ ಮಾಡಿದ ಅದೇನು... ಅಪ್ಪೆ ಹುಳಿನಾ? ಅದು ತುಂಬಾ ರುಚಿಯಾಗಿತ್ತು ಎಂತಲೋ, ಮಾವಿನ ಮಿಡಿ ಉಪ್ಪಿನಕಾಯಿ ತಂದು ಕೊಡಿ ಅಂತಲೋ,ಹವ್ಯಕರ ಮನೆಯಲ್ಲಿ ಮಾಡಿದ ಊಟದ ನೆನಪು ಮಾಡಿಕೊಂಡು ಹೇಳುವ ಅನೇಕ ಜನರಿದ್ದಾರೆ.ಅಂತಹ ಹೊಗಳಿಕೆಯನ್ನು ಕೇಳಿದಾಗ ತುಂಬಾ ಸಂತೋಷವಾಗುತ್ತದೆ.
ಇನ್ನು ನಮ್ಮ ಹವ್ಯಕರ ಹಳ್ಳಿ ಮನೆಗಳಲ್ಲಿ ನೆಡೆಯುವ ಮದುವೆ ಸಂಭ್ರಮಗಳಲ್ಲಿ ಭಾಗವಹಿಸಿದವರಿಗೆ ಅದರ ಗಮ್ಮತ್ತು ತಿಳಿಯುವುದು.. ಮದುವೆ ಮನೆಯಲ್ಲಿ ಮದುವೆಗೆ ಒಂದು ವಾರ ಬಾಕಿಯಿರುವಾಗಲೇ ಅಲ್ಲಿ ಸಂಭ್ರಮ ಮುಗಿಲು ಮುಟ್ಟುತ್ತದೆ, ನೆಂಟರಿಷ್ಟರು ಜಮಾಯಿಸುತ್ತಾರೆ.. (ಈಗ ಬಂದು ಹೋಗುವ ಸಂಸ್ಕೃತಿಯು ಬಂದಿದೆ ಎನ್ನಿ, ಮದುವೆಯ ಸಮಯಕ್ಕೆ ಬಂದು ಊಟವಾದ ತಕ್ಷಣವೆ ಮನೆಗೆ ಹೋಗುವ ಸಂಸ್ಕೃತಿ ಆಗಮನವಾಗುತ್ತಿದೆ ಆದರೆ ಕೆಲ ವರ್ಷಗಳ ಹಿಂದೆ ಹೀಗಿರಲಿಲ್ಲ!) ಹೆಂಗಸರಿಗಂತೂ ಅನೇಕ ದಿನದ ನಂತರ ತಮ್ಮ ಅಕ್ಕ, ತಂಗಿಯರ,ಹತ್ತಿರದವರ ಜೊತೆ ಸಿಕ್ಕಿರುವುದರಿಂದ, ಅನೇಕ ತಿಂಗಳುಗಳ ಮಾತು ಕಥೆಯಾಡಲಿಕ್ಕೆ ಇರುತ್ತದೆ, ಜೊತೆಗೆ ಮದುವೆಗೆ ತಂದಿರುವ ಜವಳಿಯನ್ನು, ಒಡವೆಯನ್ನು ನೋಡುವುದೇ ಅವರಿಗೆಲ್ಲ ತುಂಬಾ ಸಂಭ್ರಮದ ವಿಷಯ, ಇನ್ನು ಭಾವಂದಿರು ಮಾವಂದಿರೆಲ್ಲ.. ಕವಳ ತುಂಬಿಕೊಂಡು ಹರಟೆಗೆ ಕುಳಿತರೆ ಹೊತ್ತು ಹೋಗಿದ್ದೇ ಗೊತ್ತಾಗುವುದಿಲ್ಲ, "ಭಾವಾ ಮತೆಂತ ಸುದ್ದಿನ ಊರ್ ಕಡಿಗೆ, ಈ ಸರಿ ಪಸ್ಲು ಹೆಂಗಿದ್ದ" ಎನ್ನುವುದರಿಂದ ಹಿಡಿದು ಇನ್ನು ಎನೇನೋ ವಿಚಾರ ವಿನಿಮಯವಾಗುತ್ತದೆ,ಇನ್ನು ಅಳಿಯನು ಬೆಂಗಳೂರಿನವನಾಗಿದ್ದರೆ, ಮತೆ ಬೆಂಗ್ಳೂರ್ ಕಡಿಗೆ ಎಂತ ಸಮಾಚಾರ, ಪ್ಲಯ್ ಓವರ್ ಕಟ್ತಾ ಇದಿದ್ವಲ ಆನು ಹೋದ್ಸರಿ ಬಂದಾಗ ಈಗ ಆಯ್ದನೋ ಅದು.. ಎಂದು ಶುರುವಾಗುವ ಮಾತು-ಕಥೆಗೆ ಕೊನೆಯಿರುವುದೇ ಇಲ್ಲ,ಇನ್ನು ಮೆತ್ತಿನ ಮೇಲೆ ಗಂಡಸರೆಲ್ಲಾ ಸೇರಿ ಇಸ್ಪೀಟ್ ಹಚ್ಚಿದರೆ ಮುಗಿದೇ ಹೋಯಿತು.. ಅವರಿಗೆ ಹೊತ್ತು ಗೊತ್ತಿನ ಅರಿವೇ ಆಗುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತಿರುತ್ತದೆ, ಆದರೆ ಅದರ ಜೊತೆ ಜೊತೆಗೆ ಪಾತ್ರೆ ತರುವುದು, ಅಟ್ಟ ಹಾಕಿಸುವುದು, ತೋರಣ ಕಟ್ಟಿಸುವುದು ಎಲ್ಲವೂ ಸಾಂಗವಾಗಿಯೇ ನೆಡೆಯುತ್ತಿರುತ್ತದೆ, ಮದುವೆಯ ಮುಂಚಿನ ದಿನ ಬೆಳಗ್ಗೆ ತಮ್ಮ ಊರಿನ ಪ್ರತಿ ಮನೆಗೆ ಹೋಗಿ ಅಕ್ಷತೆ ಕೊಟ್ಟು ಕರೆಯುವುದು ಮದ್ವಗೆ "ಎಲ್ರೂ ಬರಕ್ಕು ಹಂಗೆ ಇವತ್ತು ಸಂಜೆ ದೊನ್ಬಾಳೆ ಇದ್ದು ಬರಕ್ಕು" ಎಂದು ಕರೆಯವಾಗುತ್ತದೆ, ದೊನ್ಬಾಳೆ ಎಂದರೆ ಊರಿನವರೆಲ್ಲಾ ಸೇರಿಕೊಂಡು ಬಾಳೆ ಎಲೆಯನ್ನು ಶುಚಿಗೊಳಿಸಿ.. ಊಟದ ಬಾಳೆ, ತಿಂಡಿಯ ಬಾಳೆ ಎಲೆ, ಎಲ್ಲವನ್ನು ವಿಂಗಡಿಸಿ ಸರಿಯಾಗಿ ಜೋಡಿಸಿಡುತ್ತಾರೆ, ಇವೆಲ್ಲಾ ಕೆಲಸವಾದ ಮೇಲೆ ದೊನ್ಬಾಳೆಗೆ ಬಂದವರಿಗೆ "ಮರ್ಯಾದೆ" ಮಾಡಲಾಗುತ್ತದೆ, ಮರ್ಯಾದೆ ಎಂದರೆ ಬೇರೇನು ಅಲ್ಲ, ಬಂದು ಕೆಲಸದಲ್ಲಿ ಸಹಕರಿಸಿದ್ದಕ್ಕಾಗಿ ಎಲ್ಲರಿಗೂ ಅಳಕಾಳು ಬೆಲ್ಲವೋ, ಅಥವಾ ಅವಲಕ್ಕಿ ಬೆಲ್ಲವನ್ನೊ ಜೊತೆಗೆ ಕುಡಿಯಲು ಕಷಾಯ ಕೊಡುತ್ತಾರೆ, ಇವೆರೆಡರ ಕಾಂಬಿನೇಷನ್ನೆ ಅಷ್ಟೊಂದು ಚಂದ..ನೆನಪಾದರೆ ಬಾಯಲ್ಲಿ ನೀರೂರುತ್ತದೆ, ಊರಿನ ಜನರು ಮಾಡಿದ ಕೆಲಸದ ಸಹಕಾರಕ್ಕೆ ಧನ್ಯವಾದ ತಿಳಿಸುವ ಪರಿ ಇದು.

ಇನ್ನು ಕೆಲವು ಮದುವೆ ಮನೆಯ ಅಡುಗೆ ಮನೆಯಲ್ಲಿ ಒಂದೇ ವಯಸ್ಸಿನ ಹುಡುಗರು ಸೇರಿಕೊಂಡರೆ ಅಲ್ಲಿ ಪೋಲಿತನಕ್ಕೆ, ರಸಿಕತನಕ್ಕೆ ಕೊರತೆಯಿರುವುದಿಲ್ಲ, ಎಲ್ಲಾ ಸಮಯದಲ್ಲೂ ಎಲ್ಲೆಡೆಯಲ್ಲೂ ಪೋಲಿತನವಿರುವುದಿಲ್ಲ ಕೆಲವು ಕಡೆಮಾತ್ರ ವಿರಳವಾಗಿ ಇಂತಹವು ನೆಡೆಯುತ್ತದೆ(ಮುಂದಿನದನ್ನು ಓದಿ ಇಶಿಶ್ಯೋ ಅನ್ನದಾರೆ ಓದಡಿ!) {ವಿ.ಸೂಚನೆ: ಮುಂದಿನ ಸಾಲುಗಳು ವಯಸ್ಕರು ಮಾತ್ರ ಓದಬಹುದು..ಅಶ್ಲೀಲತೆಯೆನಿಸುವ ಅಥವಾ ದ್ವಂದ್ವಾರ್ಥ ಸೂಚಿಸುವ ಪದಗಳಿರಬಹುದು. ಇಷ್ಟವಿಲ್ಲದವರು ಸಹ ದಯವಿಟ್ಟು ಓದಲು ಹೋಗಬೇಡಿ!.} ಮದುವೆ ಮನೆಯಲ್ಲಿ ಅನೇಕ ಪೋಲಿ ಜೋಕುಗಳು ಹುಟ್ಟಿಕೊಳ್ಳುತ್ತವೆ..ಅದೂ ಕೂಡಾ ಸೂಚ್ಯವಾಗಿ ಮಾತನಾಡುತ್ತಾರೆ.. ನಿಂಬೆ, ದೊಡ್ಲಿಕಾಯಿ ಎನ್ನುವ ಮಾತುಗಳು ಹರಿದಾಡುತ್ತಿರುತ್ತವೆ,(ಬಿಡಿಸಿ ಹೇಳದು ಬ್ಯಾಡ್ದೇನ ಅಲ್ದ!) ಮದ್ಯೆ ದೊಡ್ಡವರು ಯಾರಾದರು ಬಂದು ಬಿಟ್ಟರೆ ಗೊಳ್ಳೆಂದು ನಗುತ್ತಿದ್ದವರು ಗಂಭೀರವಾಗಿ ಬಿಡುತ್ತಾರೆ,ಕೆಲ್ಸ ಮಾಡ್ರ ಹುಡ್ರಾ ಎಂದು ಅವರವರೆ ಹೇಳಿಕೊಂಡು ಏನು ಗೊತ್ತಿಲ್ಲದವರಂತೆ ಬಡಿಸುವ ಕಾರ್ಯದಲ್ಲಿ ಮಗ್ನರಾಗುವುದು ವಿಶೇಷ, ಇನ್ನು ಊಟಕ್ಕೆ ಕುಳಿತವರು ಕೂಡಾ ರಸಿಕತನವನ್ನು ಪ್ರದರ್ಶಿಸುತ್ತಾರೆ.. ಅದು ಅವರು ಹೇಳುವ ವಿಧಾನದಲ್ಲಿ ಅಡಗಿರುತ್ತದೆ, ಉದಾಹರಣೆಗೆ, ಜಿಲೇಬಿ ಬಡಿಸುವವನ ಹತ್ತಿರ "ಎಲ್ಡ್ ಹಿಡ್ಕಂಡು ಒಂದು ಹಾಕು ಮಾರಾಯ" ಎನ್ನುವವರಿದ್ದಾರೆ, ಖೀರು ಹಕಶ್ಕ್ಯಳೋ.. ಹುಡ್ಗೇರ್-ಬೀಜ(ಹುಡಿ ಗೇರುಬೀಜ)ಹಾಕಿ ಮಂದಕ್ಕೆ ಮಾಡಿದ್ದ ಬೆಳ್ಳಗಿದ್ದು ಎಂದು ಗಂಭೀರವಾದರೆ, ಒಂದು ಕ್ಷಣದ ನಂತರ ಅರ್ಥವಾದವರೆಲ್ಲಾ ಗೊಳ್ಳನೆ ನಗುತ್ತಾರೆ,ಹೀಗೆ ನಾನ ತರದ ಜೋಕಿನ ಸರಮಾಲೆಗಳೆ ಸುರಿಯುತ್ತವೆ, ಮೋಟುಗೋಡೆಯಲ್ಲಿ ಕೂಡಾ ಇಂತಹ ಕೆಲವು ಜೋಕುಗಳಿವೆ.ಇಂತಹ ಜೋಕುಗಳ ನಡುವೆಯೇ ಅರ್ಥಗರ್ಬಿತವಾದ ಶ್ಲೋಕಗಳು ಮೊಳಗುತ್ತವೆ.. ಒಂದೆ ಉಸಿರಿನಲ್ಲಿ ಹೇಳುವ ಸಂಸ್ಕೃತ ಶ್ಲೋಕಗಳನ್ನು ಕೇಳಲು ಅಷ್ಟೇ ಹಿತಕರವಾಗಿರುತ್ತದೆ ಅದೇ ರೀತಿಯಲ್ಲಿ ಊಟಕ್ಕೆ ಕುಳಿತವರಿಗೆ ಶ್ಲೋಕ ಹೇಳಿದವನ ಸವಾಲಿಗೆ ಉತ್ತರವೆಂಬಂತೆ ಒಂದೇ ಉಸಿರಿನಲ್ಲಿ ಜೈಕಾರ ಕೂಗುವುದು ನೆಡೆಯುತ್ತದೆ, ಜೊತೆಗೆ ಒಂದೇ ಊರಿನವರು ಸ್ನೇಹಿತರು ಸೇರಿ ಊಟಕ್ಕೆ ಕುಳಿತರೆ ಅಲ್ಲಿ ಸಿಹಿ ಪದಾರ್ಥವನ್ನು ತಿನ್ನುವ ಕಂಬಳ ಏರ್ಪಡುತ್ತದೆ..ಒಬ್ಬೊಬ್ಬರು ಕಡಿಮೆಯೆಂದರೂ 20ರಿಂದ 25 ಜಿಲೇಬಿ ತಿಂದು ಸೈ ಎನಿಸಿಕೊಳ್ಳುತ್ತಾರೆ.. ಈ ಜಿಲೇಬಿ ಕಂಬಳಕ್ಕೆ ಅನೇಕ ನಿಯಮಾವಳಿಗಳಿರುತ್ತವೆ.. ಕಡಿಮೆಯೆಂದರೂ 5 ಜನರಾದರು ಸ್ಪರ್ಧಿಗಾರರಿರಬೇಕು.. ಬಡಿಸುವರು ಒಂದೊಂದೇ ಜಿಲೇಬಿಯನ್ನು ಎಲ್ಲರಿಗೂ ಹಾಕಬೇಕು.. ಒಟ್ಟಿಗೆ ಒಂದಕ್ಕಿಂತ ಹೆಚ್ಚು ಜಿಲೇಬಿಯನ್ನು ಹಾಕಬಾರದು..ಅದನ್ನು ತಿಂದಾದ ತಕ್ಷಣ ಇನ್ನೊಂದು ಜಿಲೇಬಿಯನ್ನು ಒಬ್ಬೊಬ್ಬರಿಗೆ ಹಾಕುತ್ತಾ ಹೋಗಬೇಕು, ಕಂಬಳದಲ್ಲಿ ಯಾರೊಬ್ಬರು ಜಿಲೇಬಿ ತಿನ್ನಲಾರೆ ಸಾಕು ಎಂದರೂ ಅಲ್ಲಿಗೆ ಸ್ಪರ್ಧೆ ಮುಕ್ತಾಯವಾಗುತ್ತದೆ! ಜೊತೆಗೆ ಮದುವೆಮನೆಯ ಯಜಮಾನ ನಿಟ್ಟುಸಿರುಬಿಡುತ್ತಾನೆ!, ಅಂದರೆ ಇದು ಎಲ್ಲಾ ಮದುವೆಮನೆಗಳಲ್ಲಿ ಈ ತರಹದ ಕಂಬಳಗಳು ನೆಡೆಯುವುದಿಲ್ಲ ಕೆಲವು ಆಪ್ತರ ಮನೆಯಲ್ಲಿ ಮಾತ್ರ ಈ ತರಹ ಸಿಹಿ ಪದಾರ್ಥ ತಿನ್ನುವ ಸ್ಪರ್ಧೆಗಳು ನೆಡೆಯುತ್ತದೆ, ಈ ಸಂದರ್ಭದಲ್ಲಿ ನನ್ನ ನೆನಪಿನ ಬುತ್ತಿ ಬಿಚ್ಚಿಕೊಳ್ಳುತ್ತಿದೆ.. ಜೊತೆಯಲ್ಲೇ ನನ್ನ ಪರಿಚಿತ ಸ್ನೇಹಿತರು(ಹೆಸರು ಬೇಡ)ಮೂರು ಜನರು ಸೇರಿ ಒಂದು ಬಕೇಟ್ ಕೇಸರಿಬಾತನ್ನು ಖಾಲಿಮಾಡಿದ್ದನ್ನು ಕಣ್ಣಾರೆ ಕಂಡಿದ್ದೇನೆ.. ಮುಂಚೆಯ ಅವರ ಪರಿಚಯವಿದ್ದದ್ದರಿಂದ ಇದೇನು ಆಶ್ಚರ್ಯಕರ ವಿಚಾರವಾಗಿರಲಿಲ್ಲ.. ನಾನೇ ತುಪ್ಪವನ್ನು ಸುರಿದು "ನಿದಾನ ತಿನ್ರಪಾ ಮಾತಾಡ್ತಾ" ಎಂದು ಹೇಳಿದ ನೆನಪು ಇನ್ನೂ ಇದೆ. ಮತ್ತೊಂದು ಘಟನೆಯನ್ನು ಮರೆಯಲೇ ಸಾದ್ಯವಿಲ್ಲ.. ಅನೇಕ ವರ್ಷದ ಹಿಂದೆ ಒಬ್ಬರು ಹೇಳಿದ ಮಾತು ಇನ್ನು ನೆನಪಿನಲ್ಲಿ ಉಳಿದು ಹೋಗಿದೆ, ಆತನ ರಸಿಕತೆಗೆ ತಲೆದೂಗಿದ್ದೇನೆ.. ಇಬ್ಬರು ಮಕ್ಕಳು ಅಂಗಳದಲ್ಲಿ ಚೆಂಡಾಟವಾಡುತ್ತಿದ್ದರು, ಚೆಂಡಾಟವೆಂದರೆ ಅರ್ಥವಾಯಿತೆಂದುಕೊಳ್ಳುತ್ತೇನೆ, ಅದೇ ಟಿನಿಸ್ ಬಾಲನ್ನು ಎಸೆದಾಡುವುದು.. ಒಬ್ಬನು ಎಸೆದದ್ದನ್ನು ಇನ್ನೊಬ್ಬ ಹಿಡಿಯುವುದು ಮಾಡುತ್ತಿರುವಾಗ ಅದು ಕೈ ಜಾರಿ ಹುಡುಗನ ತಂದೆಯ ಕೈಸೇರಿತು, ಅದಕ್ಕೆ ಮಗು ಕೇಳಿದ್ದಿಷ್ಟು "ಅಪ್ಪಾ ಬಾಲ್ ಎಂಗಳದ್ದು ಕೊಡಾ.." ಅದಕ್ಕೆ ಅವರಪ್ಪ ಟೆನಿಸ್ ಬಾಲನ್ನು ಹಿಚುಕುತ್ತಾ ಹೇಳಿದ್ದು ಇಷ್ಟೇ, "ನಿಂಗಳ್ಮನೆ ಬಾಲ್ ಎಂಗೆ ಬ್ಯಾಡದ್ರೋ ಮಾರಾಯ, ಎಂಗಕ್ಕೆ ಬಾಲ್ ಆಡಿ ಆಡಿ ಬೇಜಾರ್ ಬಂದೆ ನಿಂಗಕ್ ಬಿಟ್ಟು ಕೊಟಿದ್ಯ" ಅಂದರು!, ಹವ್ಯಕರ ಬಗೆಗೆ ನನಗೆ ಗೊತ್ತಿರುವ ಅಲ್ಪ ಸ್ವಲ್ಪ ಬರೆದಿದ್ದೇನೆ ಇನ್ನೂ ಅದೆಷ್ಟು ಮಹತ್ವದ ವಿಚಾರಗಳನ್ನು ಬಿಟ್ಟಿದ್ದೇನೋ ಏನೋ.. ತುಂಬಾ ದಿನದಿಂದ ನಮ್ಮ ಭಾಷೆಯ ಬಗೆಗೆ ಬರೆಯಬೇಕೆಂಬ ಆಸೆಯಿತ್ತು ಆದ್ದರಿಂದ ನನಗೆ ಗೊತ್ತಿರುವ ಅಲ್ಪ ಸ್ಪಲ್ಪ ಬರೆದಿದ್ದೇನೆ. ಇಷ್ಟ ಆಗ್ತೇನ ನಿಂಗಕ್ಕೆ ಮಾಡಿದ್ದಿ.

ಕೊನೆಯ ಮಾತು ಪೋಲಿತನ ರಸಿಕತೆ ಎರಡೂ ಪ್ರತಿಯೊಬ್ಬರ ಜೀವನದಲ್ಲಿ ಇದ್ದೇ ಇರುತ್ತದೆಯಲ್ಲವೇ.. ಸಾರ್ವಜನಿಕವಾಗಿ ಹೇಳಿಕೊಳ್ಳುವ ಧೈರ್ಯ ನಮ್ಮಲ್ಲಿ ಅನೇಕರಿಗಿಲ್ಲ.. ನಮ್ಮಂತ ಮಡಿವಂತ ದೇಶದಲ್ಲಿ ಪೋಲಿತನದ ಅಥವಾ ರಸಿಕತೆಯ ಮಾತುಗಳನ್ನು ಸಾರ್ವಜನಿಕವಾಗಿ ಮಾತನಾಡುವ ಸ್ವಾತಂತ್ರವಿನ್ನು ದೊರಕಿಲ್ಲ...ಆದರೂ ಇದೆಲ್ಲವನ್ನು ಬರೆದು ಬಿಟ್ಟಿದ್ದೇನೆ, ತಪ್ಪು ತಿಳಿದುಕೊಳ್ಳೊದಿಲ್ಲ ಎನ್ನುವ ವಿಶ್ವಾಸದಿಂದ, ಅನೇಕರು ನೀನು ಇಷ್ಟೊಂದು ಕೆಟ್ಟು ಹೋಗಿದ್ದೀಯ ಎಂದರೆ ನನ್ನದು ನಗುವೊಂದೆ ಉತ್ತರವಾದೀತು..ತಪ್ಪು ತಿಳ್ಕೊಳಲ್ಲ ಎಂದು ಕೊಳ್ಳಲಾ? ಅಂತೆಯೇ ಮೂಗಿರುವ ತನಕ ನೆಗಡಿ ತಪ್ಪಿದ್ದಲ್ಲ ಎನ್ನುವ ರೀತಿಯಲ್ಲೇ ಯಾವಾಗ ಅರ್ಜಿ ಫಾರಂ(application form)ಗಳಲ್ಲಿ ಜಾತಿ ಎನ್ನುವ ಕಾಲಂ ಇರುತ್ತದೆಯೋ ಅಲ್ಲಿಯವರೆ ಜಾತೀಯತೆ ಇದ್ದೇ ಇರುತ್ತದೆ. ಬರಲಾ.. ಪ್ರೀತಿ ಇರಲಿ.. ಸದಾ........... ಹೀಗೆ...

Monday, November 24, 2008

ಬ್ಲಾಗ್ ಏಕೆ ಅಪ್-ಡೇಟ್ ಮಾಡಿಲ್ಲ ಎನ್ನುವ ಪ್ರೀತಿಯ ಆಕ್ಷೇಪಣೆ..

ನಿನ್ನ ಬ್ಲಾಗ್ ಅಪ್ ಡೇಟ್ ಮಾಡದೇ ತುಂಬಾ ದಿನ ಆಯಿತು, ಬ್ಲಾಗ್ ಅಪ್ಡೇಟ್ ಮಾಡೇ ಇಲ್ಲ ಎನ್ನುವ ಪ್ರೀತಿಯ ಆಕ್ಷೇಪಣೆಯನ್ನು ಸ್ನೇಹಿತರು ಮಾಡಿದಾಗ ನಿಜವಾಗಲು ತುಂಬಾ ಸಂತೋಷವಾಗುತ್ತದೆ, ನನಗೆ ಗೊತ್ತು ನನ್ನ ಬರವಣಿಗೆಯ ಶೈಲಿ ಎಲ್ಲರನ್ನು ಓದಿಸಿಕೊಂಡು ಹೋಗುವಂತಹ, ಅಥವಾ ಎಲ್ಲರಿಗು ಇಷ್ಟವಾಗುವ ರೀತಿ ಇಲ್ಲ ಎನ್ನುವುದು, ಆದರೂ ಸ್ನೇಹಿತರು ಪ್ರೀತಿಯಿಂದ ಬ್ಲಾಗ್ ಅಪ್ ಡೇಟ್ ಮಾಡು ಎನ್ನುವ ಸಲಹೆ ಮನಸನ್ನು ದಿನವಿಡಿ ಕೊರೆಯೋಕೆ ಶುರುಮಾಡಿಬಿಡುತ್ತೆ, ಪೇಪರಿನಲ್ಲಿ ಇವತ್ತಷ್ಟೇ ಓದಿದ ಒಂದು ಸಾಲು ನೆನಪಾಗುತ್ತಿದೆ, "ಚಳಿಗಾಲದಲ್ಲಿ ಮನುಷ್ಯನ ಮೆದುಳು ಸ್ಪಲ್ಪ ಚುರುಕಾಗುತ್ತದೆಯಂತೆ",ಅದನ್ನು ಓದಿದ ನನ್ನ ಮೆದುಳು ಸ್ಪಲ್ಪ ಚುರುಕಾಗಿ ಬಿಟ್ಟಿತಾ ಎನ್ನುವ ಯೋಚನೆ ಆರಂಭವಾಗುತ್ತಿದ್ದಂತೆ ಚಳಿಯೇ ಇಲ್ಲವಲ್ಲ ಇವತ್ತು ಎನ್ನುವುದು ಅರಿವಿಗೆ ಬರುತ್ತದೆ,ಅನೇಕ ಸ್ನೇಹಿತರು "ನೀನು ಸಾಮಾಜಿಕ ಕಳಕಳಿ ವ್ಯಕ್ತಪಡಿಸುವ ಲೇಖನಗಳನ್ನು ಬರೆಯುತ್ತಿರುವುದನ್ನು ನೋಡಿದರೆ ಸಮಾಜವನ್ನು ಸರಿ ಮಾಡುವ ಅಥವಾ ಸಮಾಜವನ್ನು ತಿದ್ದುವ ಹುಚ್ಚು ಕಲ್ಪನೆಗಳನ್ನು ತಲೆಯಲ್ಲಿ ತುಂಬಿಕೊಂಡಿದ್ದೀಯ, ತುಂಬಾ ತಲೆಕೆಡಿಸಿಕೊಂಡತೆ ಕಾಣುತ್ತದೆ" ಎನ್ನುವ ಸ್ನೇಹಿತರಿಗೆ ಇಲ್ಲ ನಾನು ತಲೆಕೆಡಿಸಿಕೊಂಡಿಲ್ಲ, ನಿಮ್ಮ ತಲೆ ಕೆಡಿಸುತ್ತಿದ್ದೇನೆ! ಎಂದು ಹೇಳಿ ಸುಮ್ಮನೆ ಬೈಯ್ಯಿಸಿಕೊಂಡಿದ್ದಾಗಿದೆ, ಇನ್ನು ಕೆಲವರಿದ್ದಾರೆ ನನ್ನದೊಂದು ಬ್ಲಾಗಿದೆ ಎಂದು ಹೇಳಿ ಲಿಂಕ್ ಕೊಟ್ಟರು ಸಹ ಆಮೇಲೆ ನೋಡುತ್ತೇನೆ ಅಂತಲೋ.. ಸಮಯವೇ ಇಲ್ಲ ಅಂತಲೋ ಹೇಳುವವರಿದ್ದಾರೆ, ತುಂಬಾ ಚಾಣಾಕ್ಷತನ ತೋರುವುದೆಂದರೆ ಕನ್ನಡ ಅಕ್ಷರಗಳು ಸರಿಯಾಗಿ ಕಾಣಿಸುವುದೇ ಇಲ್ಲ ಅಂತಲೋ, ಇನ್ಯಾವುದೋ ಕಾರಣವನ್ನು ಕೊಟ್ಟವರಿದ್ದಾರೆ, ಇದರ ಜೊತೆ ಜೊತೆಗೆ, ಬ್ಲಾಗ್ ಚನ್ನಾಗಿದೆ ಎನಾದರು ಬರೆ ನಾವು ಓದುತ್ತೇವೆ ಎನ್ನುವ ಅನೇಕರಿದ್ದಾರೆ, ಅವರೆಲ್ಲರ ಪ್ರೀತಿಗೆ ನಾನು ಮೂಕನಾಗಿಬಿಡುತ್ತೇನೆ, ಗೊತ್ತಾಗದಂತೆ ಕಣ್ಣು ತುಂಬಿ ಬರುತ್ತದೆ... ಆ ಕ್ಷಣವೇ ಇವತ್ತು ಏನನ್ನಾದರು ಬರೆಯಲೇ ಬೇಕು ಎಂದು ಮನಸ್ಸು ಪಣ ತೊಡುತ್ತೆ, ಅಷ್ಟು ಹೊತ್ತಿಗೆ.. ಹೋಮಕ್ಕೆ ನೀರು ಸುರಿದಂತೆ ಕರೆಂಟ್ ಕೈಕೊಡುತ್ತೆ.. ಅಥವಾ ಇನ್ನೇನೋ ಆಗುತ್ತದೆ,ಬ್ಲಾಗ್ ಅಪ್ ಡೇಟ್ ಮತ್ತೆ ಮುಂದಕ್ಕೆ ಹೋಗುತ್ತೆ, ಅಷ್ಟರಲ್ಲಾಗಲೆ ಗೂಗಲ್ ಟಾಕ್ ನಲ್ಲಿ "ಬ್ಲಾಗ್ ಅಪ್ಡೇಟ್ ಮಾಡಲೇ ಇಲ್ಲ" ಎಂದು ಆಕ್ಷೇಪಣೆ ಮಾಡಿದವರಿಗೆಲ್ಲ ಇಲ್ಲ ಬರೆಯುತ್ತಿದ್ದೇನೆ ಎಂದು ಹೇಳಿ ಅನೇಕ ದಿನಗಳಾದರು ಹೊಸ ಲೇಖನವನ್ನು ಸೇರಿಸಲಾಗದೆ ಒದ್ದಾಡುತ್ತೇನೆ, ಈಗಲು ಅಷ್ಟೇ ಒಂದು ಅರ್ಧಂಬರ್ಧ ಬರೆದಿಟ್ಟ ಲೇಖನ ಪೂರ್ಣಗೊಳಿಸದೆ ಇದನ್ನು ಬರೆದು ಅಪ್ಲೋಡ್ ಮಾಡುತ್ತಿದ್ದೇನೆ, ಅರ್ಧಂಬರ್ಧ ಬರೆದಿಟ್ಟ ಲೇಖನವನ್ನು ಆದಷ್ಟು ಬೇಗ ಬರೆದು ಮುಗಿಸಿ ಅಪ್ಲೋಡ್ ಮಾಡಬೇಕೆಂದೆನಿಸುತ್ತಿದೆ, ಮತ್ತೆ ಕರೆಂಟ್ ಕೈಕೊಡುವ ಸಮಯ ಹತ್ತಿರವಾಗುತ್ತಿದೆ! ಮುಗಿಸುವ ಮುನ್ನ.. ಸದಾ ನಿಮ್ಮ ಪ್ರೀತಿ ಹೀಗೆ ಇರಲಿ.. ಬ್ಲಾಗಿಗೆ ಬರುತ್ತಾ ಇರಿ, ಪ್ರೋತ್ಸಾಹ ನೀಡುತ್ತಾ ಇರಿ.

Friday, October 3, 2008

ನನ್ನದು ಮತ್ತೊಂದು ಬ್ಲಾಗ್

ನನ್ನ ಇನ್ನೊಂದು ಬ್ಲಾಗ್ ಆರಂಭಿಸಿದ್ದೇನೆ, ಅದರ ಬಗ್ಗೆ ಹೇಳುವ ಮುನ್ನ.. ಕೆಲವು ವಿಚಾರಗಳನ್ನು ನಿಮ್ಮ ಮುಂದಿಡುವ ಪ್ರಯತ್ನ.

ಅತಿ ಹೆಚ್ಚಿನ internet ಬಳಕೆದಾರರಿಗೆ ( ನನಗೂ) ಇರುವ ಕೆಟ್ಟ ಚಟವೆಂದರೆ ಇದ್ದ ಬದ್ದ ವೆಬ್ಸೈಟ್ ಗಳಲ್ಲಿ online form ತುಂಬುವುದು, ಉಪಯೋಗಕ್ಕೆ ಬಾರದೇ ಇದ್ದರು ಅನೇಕ email(ಮಿಂಚಂಚೆ) id ಮಾಡಿಡುವುದು. ಆನಂತರ ಬಳಸುವುದು ಯಾವುದೋ ಒಂದು ಮಿಂಚಂಚೆಯನ್ನು ಮಾತ್ರ.



ಈ ಸಂದರ್ಭದಲ್ಲಿ ನನಗೆ ನೆನಪಾದ ಒಂದು ಘಟನೆಯೆಂದರೆ ಚಲನಚಿತ್ರ ನಟ ಗೋಲ್ಡನ್ ಸ್ಟಾರ್ ಎಂದು ಹೆಸರು ಪಡೆದ ಗಣೇಶನ ಹೆಸರಿನಲ್ಲಿ ಯಾವುದೋ ಖದೀಮ ನಕಲಿ ಇಮೇಲ್ ಐಡಿ ರಚಿಸಿ.. ಗೋಲ್ಡನ್ ಸ್ಟಾರ್ ಗಣೇಶ್ ತಾನೆ ಎಂದು ಇಮೇಲ್ ಮಾಡುತ್ತಿದ್ದದ್ದು ನಿಮಗೆಲ್ಲ ಸುದ್ದಿ ಮಾದ್ಯಮಗಳ ಮೂಲಕ ತಿಳಿದಿರುವ ವಿಚಾರವೆ ಆಗಿದೆ. ಮತ್ತೊಬ್ಬ ವ್ಯಕ್ತಿ ಆತನೇ ಗಣೇಶ್ ಎಂದು ಗಣೇಶನ ಧ್ವನಿ ಅನುಕರಣೆ ಮಾಡಿ ಮೊಬೈಲ್ ನಲ್ಲಿ ಮಾತಾಡಿ ಮುಗ್ಧ ಹೆಣ್ಣು ಮಕ್ಕಳನ್ನು ನಂಬಿಸಿ ತಪ್ಪು ದಾರಿಗೆಳೆಯುವ ಪ್ರಯತ್ನ ಮಾಡಿದ್ದ, ಇದಕ್ಕೆಲ್ಲ.. ಗೋಲ್ಡನ್ ಸ್ಟಾರ್ ಸುದ್ದಿ ಮಾಧ್ಯಮಗಳ ಮೂಲಕ ಸ್ಪಷ್ಟವಾದ ಮಾಹಿತಿ ನೀಡಿ ಈ ಪ್ರಕರಣಕ್ಕೆ ತೆರೆ ಎಳೆದದ್ದು ನಿಮಗೂ ನೆನಪಿರಬಹುದು.
ಕಳ್ಳನೋಟಿನ ಜಾಲವಿರುವಂತೆಯೇ ನಕಲಿ ಬ್ಲಾಗುಗಳ ವಿಳಾಸ ತಯಾರಿಸಿ ಬ್ಲಾಗ್ ನೋಡಲು ಹೊರಟವರ ದಾರಿ ತಪ್ಪಿಸುವ ಕೆಲಸ ಮಾಡಿ ಆನಂದ ಪಡುವ ಅನೇಕರಿದ್ದಾರೆ, ಕೆಲವು ಬ್ಲಾಗಿನ ವಿಳಾಸಗಳನ್ನು ಒಂದಕ್ಷರ ತಿರುಚಿಯೊ ಅಥವಾ ಒಂದಕ್ಷರ ಸೇರಿಸಿ ಬ್ಲಾಗ್ ವಿಳಾಸ ತಯಾರು ಮಾಡಿ ಖಾಲಿ ಬಿಡುವ ಪ್ರವೃತ್ತಿ ಹೆಚ್ಚಾಗುತ್ತಿವೆ.ನಾನಿದನ್ನು ಗಮನಿಸಿದ್ದು.. ಒಂದು ಬ್ಲಾಗ್ ನ ಬ್ಲಾಗ್ ಕೊಂಡಿಗಳಲ್ಲಿ ಹಾಗೆ ಸುಮ್ಮನೆ ಎನ್ನುವ ವಿಳಾಸವಿತ್ತು ನಾನು ಸಂತೋಷದಿಂದ "ಅರೆ ನನ್ನ ಬ್ಲಾಗ್ ನ ವಿಳಾಸವಿದೆಯಲ್ಲಾ" ಎಂದು ಅದರ ಮೇಲೆ ಕ್ಲಿಕ್ಕಿಸಿದಾಗ ಆದದ್ದು ಮಾತ್ರಾ ನಿರಾಸೆ, ಅದು ಯಾವುದೋ ಕಾಲದಲ್ಲಿ ಯಾರೋ ಮಾಡಿಟ್ಟ ಖಾಲಿ ಪುಟಕ್ಕೆ ದಾರಿ ತೋರಿತ್ತು, ಒಮ್ಮೆ ಬೇರೆಯವರು ಆ ತರಹದ ಲಿಂಕಿನ ಮೇಲೆ ಕ್ಲಿಕ್ಕಿಸಿದ ಯಾರೇ ಆದರೂ ಇನ್ಯಾವುದೇ ಬ್ಲಾಗಿನಲ್ಲಿ ಹಾಗೇ ಸುಮ್ಮನೆ ಅನ್ನುವ ಲಿಂಕಿದ್ದರೆ ಅದರ ಮೇಲೆ ಕ್ಲಿಕ್ಕಿಸಲು ಇಷ್ಟಪಡುವುದಿಲ್ಲ.. ಸುಮ್ಮನೆ ಯಾಕೆ ಖಾಲಿ ಪುಟ ತೆರೆಯುವುದು ಅನಿಸಿಯೇ ಅನಿಸುತ್ತದೆ. ಇನ್ನೊಮ್ಮೆಯೂ ಹಾಗೇ ಆಯಿತು, ಗೆಳೆಯ ಬಾಳ ದೋಣಿಯಲ್ಲಿ ಹೊಸ ಫೋಸ್ಟ್ ಹಾಕಿದ್ದೀನಿ ನೋಡು ಎಂದ.. ಅದಕ್ಕೆ ನಾನು baala-doni ಬರೆಯುವುದರ ಬದಲಾಗಿ bala-doniಎಂದು ಬ್ರೌಸರ್ ನಲ್ಲಿ ಟೈಪಿಸಿ ಕ್ಲಿಕ್ಕಿಸಿದ್ದೆ ಅದು ನೇರವಾಗಿ ಮತ್ತೊಂದು ಖಾಲಿ ಪುಟಕ್ಕೆ ದಾರಿ ತೋರಿಸಿತು.
ಇನ್ನೊಬ್ಬರ ಬ್ಲಾಗಿನ ಹೆಸರಿನಲ್ಲೇ ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಬ್ಲಾಗ್ ತಯಾರಿಸಿದ್ದರೆ ಆ ಬ್ಲಾಗಿಗಿಂತಲು ಅತ್ಯುತ್ತಮ ಬರಹಗಳನ್ನು ಬರೆಯಿರಿ ಅದು ಬಿಟ್ಟು ಖಾಲಿ ಪುಟವಿಟ್ಟು ನಿರಾಸೆ ಮಾಡಬೇಡಿ.ಬ್ಲಾಗುಗಳನ್ನು ಬರೆಯುವ ಅಥವಾ ಅದನ್ನು ಉಪಯೋಗಿಸುವ ಯೋಚನೆಯಿದ್ದರೆ ಮಾತ್ರ ತಯಾರಿಸಿ, ಇಲ್ಲದೆ ಇದ್ದರೆ ತಯಾರಿಸಿದ ಬ್ಲಾಗನ್ನು Delete ಮಾಡಿ.. ಇದು ನನ್ನ ಕಳಕಳಿಯ ವಿನಂತಿ.
ಮೊನ್ನೆ wordpress ನಲ್ಲಿ ಬ್ಲಾಗರ್ ಹೆಚ್ಚಿನ ಸೌಲಭ್ಯಗಳಿವೆಯೇ blogger.comಗಿಂತಲು ಎಂದು ನೋಡಲು ನಾನೊಂದು ಬ್ಲಾಗನ್ನು ತಯಾರಿಸಿದ್ದೇನೆ.. ತಯಾರಿಸುವ ಮುನ್ನ ಬ್ಲಾಗ್ ವಿಳಾಸ ಇನ್ನೊಬ್ಬರಿಗೆ ತೊಂದರೆಯಾಗುವ ಅಥವಾ ಇನ್ನೊಬ್ಬರಿಗೆ ಅದೇ ಹೆಸರಿನ ಬ್ಲಾಗ್ ಮಾಡಲು ಹೋದರೆ ಈ ವಿಳಾಸ ಲಬ್ಯವಿಲ್ಲವೆಂದು ಹೇಳಬಾರದು ಎನ್ನುವ ವಿವೇಚನೆಯಿತ್ತು... ನನ್ನ ಹೆಸರಿನಲ್ಲೇ ಬ್ಲಾಗ್ ತಯಾರಿಸಿ ಹಾಗೆ ಬಿಟ್ಟಿದ್ದೆ.. ನನ್ನ ಈ ಬ್ಲಾಗಿನ ಲಿಂಕು ಕೊಟ್ಟಿದ್ದೆ, ನಿನ್ನೆಯಿಂದಲು ಅದನ್ನು ಖಾಲಿ ಬಿಡುವ ಮನಸ್ಸಾಗಲೇ ಇಲ್ಲ.. ಅದನ್ನು ಸದುಪಯೋಗ ಮಾಡಿಕೊಳ್ಳಬೇಕೆಂಬ ಆಸೆ ತುಂಬಾ ಹೆಚ್ಚಾಯಿತು.. ನನಗೆ ಮೊಬೈಲ್ ಗ್ರಾಹಕರಿಗೆ ದೂರು ಪರಿಹಾರದ ಸಂಖ್ಯೆಗಳು, ಹೊಸ ಆಫರ್ ಗಳ ಬಗ್ಗೆ, ತಿಳಿಸಲು ಏಕೆ ಪ್ರಯತ್ನ ಪಡಬಾರದು ಎಂದು ಅನಿಸಿತು.. ಅದಕ್ಕಾಗಿ ನಿಮ್ಮ ಮುಂದೆ ದೂರವಾಣಿ ಗ್ರಾಹಕರಿಗಿರುವ ಮೂರು ಹಂತದ ದೂರು ಪರಿಹಾರ ಹಂತಗಳ ವಿಳಾಸ ಒದಗಿಸುವ ಪ್ರಯತ್ನ.. ಮೊದಲನೆಯದು ಕಾಲ್ ಸೆಂಟರ್ ವ್ಯವಸ್ಥೆ, ಎರಡನೆಯದು ನೋಡಲ್ ಆಫೀಸರ್, ಹಾಗು ಮೂರನೆಯದು ಮೇಲ್ಮನವಿ ಪ್ರಾಧಿಕಾರ.. ವಿಳಾಸಕ್ಕಾಗಿ ನನ್ನ ಹೊಸ ಬ್ಲಾಗಿಗೆ ಭೇಟಿ ನೀಡಿ ಚಂದಾದಾರರು ತಮ್ಮ ದೂರುಗಳನ್ನು ಯಾರಿಗೆ ನೀಡಬೇಕೆನ್ನುವ ಮಾಹಿತಿಯನ್ನು ಪ್ರಕಟಿಸಿದ್ದೇನೆ...ಮನಸ್ವಿ ಮೊಬೈಲ್ ಟಾಕ್…ನಲ್ಲಿನ ದೂರವಾಣಿ ಗ್ರಾಹಕರ ದೂರು ಪರಿಹಾರ ವ್ಯವಸ್ಥೆ ಪೋಸ್ಟನ್ನು ನೋಡಿ

Monday, September 22, 2008

ಬ್ಲಾಗುಗಳಲ್ಲಿ ಕಮೆಂಟ್ ಬರೆಯುವ ಮುನ್ನ

ಅನೇಕ ಬ್ಲಾಗುಗಳಲ್ಲಿ ಕಮೆಂಟ್ ಗಳ ಸಮರ ನೆಡೆಯುತ್ತಿದೆ, ವ್ಯಕ್ತಿಗತ ಟೀಕೆ ಮಾಡುವುದು, ಹೆಸರಿಲ್ಲದೇ( Anonymous ಆಗಿ) ಬಂದು ಬಾಯಿಗೆ ಬಂದತೆ ಬರೆಯುವುದು ನೆಡೆಯುತ್ತಲೇ ಇದೆ, ಅದೇ ರೀತಿ ಇನ್ನೊಬ್ಬರನ್ನು ಕೂಡ ಅವಹೇಳನಾಕಾರಿಯಾಗಿ ಬರೆಯುವಂತೆ ಪ್ರಚೋದನೆ ನೀಡುವುದು ನೆಡೆಯುತ್ತಿದೆ. ಯಾವುದೇ ವ್ಯಕ್ತಿ ತನ್ನ ಬಗ್ಗೆ ಅಸಹ್ಯಕರವಾದ ಭಾಷೆ ಉಪಯೋಗಿಸಿದರೆ ಈತನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಈತನು ಕೂಡ ಅದೇ ಭಾಷೆಯಲ್ಲಿಯೇ ಪ್ರತ್ಯುತ್ತರ ನೀಡುವುದು ಅನಿವಾರ್ಯವಾಗುತ್ತದೆ. ನೀವು ಬೇರೆಯವರ ಬ್ಲಾಗುಗಳಲ್ಲಿ ನಿಮ್ಮ ಅನಿಸಿಕೆ ವ್ಯಕ್ತ ಪಡಿಸುವ ಮುನ್ನ ಹಲವು ಬಾರಿ ಯೋಚಿಸಿ ಕಮೆಂಟ್ ಬರೆಯಿರಿ, ಎಲ್ಲರ ದೃಷ್ಟಿಕೋನವು ಒಂದೇ ರೀತಿಯಲ್ಲಿರುವುದಿಲ್ಲ.. ತಮ್ಮ ಬ್ಲಾಗುಗಳಲ್ಲಿ ಯಾವುದೇ ವಿಚಾರವನ್ನು ಅವರಿಗೆ ಅನ್ನಿಸಿದ ರೀತಿ ಪ್ರಕಟಿಸುವ ಅಧಿಕಾರ ಅವರಿಗಿದೆ , ಅಂದ ಮಾತ್ರಕ್ಕೆ ಏನಾದರು ಬರೆಯುತ್ತೇನೆ, ವ್ಯಕ್ತಿಗತ ಟೀಕೆ ಮಾಡಿ ಇನ್ನೊಬ್ಬರನ್ನು ಘಾಸಿಗೊಳಿಸುವ ಪ್ರವೃತ್ತಿ ಬೆಳೆಸಿಕೊಳ್ಳುವುದು ಸರಿಯಲ್ಲ ಎನ್ನುವುದು ನನ್ನ ಅನಿಸಿಕೆ, (ಅದು ಅವರವರ ವಿವೇಚನೆಗೆ ಬಿಟ್ಟ ವಿಚಾರ!!),ಸರಿಯಿಲ್ಲದ್ದನ್ನು ಸರಿ ಇಲ್ಲ ಎಂದು, ಚನ್ನಾಗಿದ್ದರೆ ಹೊಗಳಿ ಅನಿಸಿಕೆ ಬರೆಯಿರಿ, ಅದನ್ನು ಬಿಟ್ಟು ಬ್ಲಾಗು ಬರೆದವರ ಬಗ್ಗೆಯೇ ಹೀನಾಯ ಶಬ್ಧಗಳಲ್ಲಿ ಬೈಯ್ಯುವುದು, ಅಥವಾ ಮುಜುಗರವಾಗುವ ರೀತಿಯಲ್ಲಿ ಕಮೆಂಟುಗಳನ್ನು ದಯವಿಟ್ಟು ಬರೆಯಬೇಡಿ, ಆ ರೀತಿ ಹೀನಾಯವಾಗಿ ಬೈಯ್ಯುವುದರ ಬದಲಾಗಿ ಈ ರೀತಿಯ ಅಭಿಪ್ರಾಯ ಸರಿಯಲ್ಲ, ದಯವಿಟ್ಟು ಬರೆಯುವ ಮುನ್ನ ಸತ್ಯಾಂಶ,ವಾಸ್ತವ (ನಿಮಗೂ ಸತ್ಯಾಂಶ, ವಾಸ್ತವ ಗೊತ್ತಿದ್ದರೆ) ಗೊತ್ತಿಲ್ಲದೆ ಬರೆಯಬೇಡಿ ಎಂದು ನಯವಾದ ರೀತಿಯಲ್ಲಿ ತಿಳಿಸಿದರೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬಹುದು.. ಬರವಣಿಗೆಯ ಶೈಲಿಯನ್ನು ತಿದ್ದಿಕೊಳ್ಳಲು ಒಂದು ಅವಕಾಶ ಕೊಟ್ಟ ಹಾಗು ಆಯಿತು, ಅಂತೆಯೇ ಮಹಿಳೆ(ಹೆಣ್ಣು) ಬರೆದ ಬ್ಲಾಗುಗಳಲ್ಲಿ ಅಥವಾ ಇನ್ನೆಲ್ಲಿಯೋ ಹೆಣ್ಣು ಮಗಳ ವಿರುದ್ದ ವಿಕೃತ ಮನಸ್ಸಿನಿಂದ ಕಮೆಂಟುಗಳನ್ನು ಬರೆದು ಪೂಜ್ಯ ಸ್ಥಾನದಲ್ಲಿರುವ ಹೆಣ್ಣಿನ ಕುಲಕ್ಕೆ ಮಸಿ ಬಳಿಯುವ ಕೆಲಸ ಮಾಡಬೇಡಿ, ಈಗಿನ ಮಹಿಳೆಯರು ತಾವು ಎಲ್ಲಾ ಕ್ಷೇತ್ರದಲ್ಲು ಸಾಧನೆ ಮಾಡಬಲ್ಲೆವೆಂದು ತೋರಿಸಿಕೊಟ್ಟಿದ್ದಾರೆ... ಅಂದ ಮಾತ್ರಕ್ಕೆ ಮಹಿಳೆಯರು ಯಾವ ವಿಚಾರ ಬರೆದರು ಸರಿಯೆಂದು ಹೇಳಬೇಕೆಂದು ನಾನು ಹೇಳುತ್ತಿಲ್ಲ, ಈ ವಿಚಾರವನ್ನು ನೀವು ಈ ರೀತಿ ಬರೆದದ್ದು ತಪ್ಪು ಎಂದು ಮನದಟ್ಟಾಗುವಂತೆ ಹೇಳಿ, ಅದನ್ನು ಬಿಟ್ಟು ವಿಕೃತಿಯಿಂದ ಕೂಡಿದ ಅಸಹ್ಯಕರವಾದ ಸಾಲುಗಳಲ್ಲಿ ಅನಿಸಿಕೆ ಬರೆಯುವುದು ಅಕ್ಷಮ್ಯ ಅಪರಾದವಾಗುತ್ತದೆ, ಎಲ್ಲರಿಗು ಮನಸ್ಸಿರುತ್ತದೆ ಅದಕ್ಕೂ ನೋವಾಗುತ್ತದೆ ಎಂದು ನಿಮ್ಮ ನೆನಪಿನಲ್ಲಿರಲಿ.


ಅಂತೆಯೇ ಎಲ್ಲಿಯೇ ಒಬ್ಬ ವ್ಯಕ್ತಿಯ ಅಥವಾ ಸಂಘ ಸಂಸ್ಥೆಗಳ ಬಗ್ಗೆ ದೋಷಾರೋಪಣೆ ಮಾಡಿ ಬರೆಯುವಾಗ ಸರಿಯಾದ ಮಾಹಿತಿ ಲಭ್ಯವಿದ್ದರೆ ಮಾತ್ರ ಬರೆಯುವುದು ಒಳ್ಳೆಯದೇನೋ ಎನ್ನುವುದು ನನ್ನ ಅನಿಸಿಕೆ.. ವಯ್ಯುಕ್ತಿಕ ದ್ವೇಷ ಅಥವಾ ಅಸೂಯೆಯಿಂದ ಚಾರಿತ್ರ್ಯವಧೆ ಮಾಡುವ ಕಾರ್ಯಕ್ಕಿಳಿಯಬೇಡಿ..
ಸಾಮಾನ್ಯವಾಗಿ ಎಲ್ಲಾ ಬ್ಲಾಗರ್.com ಗಳು ananymous comment Posting ನಿರ್ಭಂದಿಸುವ ಸವಲತ್ತನ್ನು ಒದಗಿಸುತ್ತಿವೆ, ಅಥವಾ ಸ್ವಯಂಚಾಲಿತ ಕಮೆಂಟುಗಳು ಪ್ರದರ್ಶನವಾಗದಂತೆ ನಿರ್ಭಂದಿಸುವ(Comment moderation) ಅವಕಾಶಗಳಿರುತ್ತವೆ.. ಅದನ್ನು ಉಪಯೋಗಿಸಿ...
ನಾನೊಂದು ಬ್ಲಾಗಿನಲ್ಲಿ ನನ್ನ ಸ್ನೇಹಿತ ಮತ್ತು ಅವನ ಸ್ನೇಹಿತರೊಬ್ಬರು ಸೇರಿ ಒಂದೊಂದು ಸಾಲು ಕವಿತೆ ಹಂಚಿಕೊಂಡು ಬರೆದಿದ್ದರು, ಅದಕ್ಕೆ ನಾನೊಂದು ಅನಿಸಿಕೆ ಬರೆದಿದ್ದೆ, ನೀವು ಮತ್ತು ನಿಮ್ಮ ಸ್ನೇಹಿತ ಬರೆದ ಸಾಲುಗಳು ಚೆನ್ನಾಗಿದೆ , ಸಂ(ದೀಪವು) ಬೆಳಗುತ್ತಿರಲಿ ಎಂದು ಬರೆದಿದ್ದೆ ಅನಿಸುತ್ತದೆ ಮರೆತು ಹೋಗಿದೆ, ಅದು ಪ್ರಕಟಗೊಳ್ಳಲೇ ಇಲ್ಲ, ಎನು ಅಪಾರ್ಥವಾಗುವಂತೆ ಬರೆದೆನೊ ಎಂದು ನನಗೆ ತುಂಬಾ ದಿನ ಕಾಡಿತ್ತು, ನಿಜವಾಗಿಯು ನಾನು ನನ್ನ ಸ್ನೇಹಿತ ಸದಾ ದೀಪದಂತೆ ಬೆಳಗುತ್ತಿರಲಿ ಎಂದು ಸೂಚ್ಯವಾಗಿ ಹೇಳಲು ಹೋಗಿದ್ದೆ! ಬರೆಯುವಾಗ ತಪ್ಪು ಮಾಡಿದ್ದೆನೇನೊ, (ಸಂ ದೀಪ)ವು ಬೆಳಗುತ್ತಿರಲಿ ಎಂದು ಬರೆಯಬೇಕಿತ್ತು ಅನಿಸಿತ್ತು ಆದರೆ ತಪ್ಪು ನನ್ನದೆ ಅರ್ಥವಾಗದಂತೆ ಬರೆದದ್ದು ಎಂದು ಸುಮ್ಮನಾದೆ, ನಾನು ಬರೆದ ಅನಿಸಿಕೆಗಳೆಲ್ಲವು ಸರಿ ಅನ್ನುವ ಭಾವನೆಯು ನನ್ನಲ್ಲಿರಲಿಲ್ಲ.
ಕೊನೆಯ ಮಾತು.. ನನಗೆ ಈ ಪೋಸ್ಟನ್ನು ಬರೆಯಬೇಕಾಗಿ ಬಂತಲ್ಲ ಎಂದು ಬೇಸರವಾಗುತ್ತಿದೆ.. ನಾನು ಎಲ್ಲರನ್ನು ಬದಲಾಯಿಸಿ ಬಿಡುತ್ತೇನೆ ಅಂತಲೋ ಅಥವಾ ಎಲ್ಲ ನನಗೊಬ್ಬನಿಗೆ ಗೊತ್ತು ಅನ್ನುವ ಅಹಂನಿಂದಲೋ ಇದನ್ನು ಖಂಡಿತಾ ಬರೆಯಲಿಲ್ಲ, ಈ ಪೋಸ್ಟಿನಿಂದ ಕೆಲವರಾದರು ಬದಲಾದರೆ ನಾನು ಬರೆದದ್ದಕ್ಕೆ ಸಾರ್ಥಕವಾದಂತಾಗುತ್ತದೆ.

Friday, September 5, 2008

Bsnl ಮೆಗಾ ಮತ್ತು ಸುಪ್ರೀಮು ! ಹಾಗು ಒಂದಿದ್ದರೆ ಒಂದಿಲ್ಲ ಸೇವೆ ನೀಡುವ ಮೊಬೈಲ್ ಕಂಪೆನಿಗಳು

ನಮ್ಮ ದೇಶದ ಅತಿದೊಡ್ಡ ಸೇವಾ ಜಾಲ ಎಂದು ಹೆಗ್ಗಳಿಕೆ ಪಡೆದ (ಬರಿ ದೊಡ್ಡ ಜಾಲ, ಸೇವೆಯ ಗುಣಮಟ್ಟದಲ್ಲಿ ಎಷ್ಟನೆಯ ಸ್ಥಾನವೋ?? ಗೊತ್ತಿಲ್ಲ!) ಬಿ.ಎಸ್.ಎನ್.ಎಲ್ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆಂದೇ ಬಿಡುಗಡೆ ಮಾಡಲಾದ ಸ್ಟುಡೆಂಟ್ ಪ್ಲಾನ್ ಮೆಗಾ ಮತ್ತು ಸುಪ್ರೀಮ್... ಹೆಸರಿಗೆ ತಕ್ಕಂತೆ ಅಮೋಘ ಸ್ಕೀಮುಗಳು ಅನ್ನಿಸದೇ ಇರಲಾರದು!

ಮೊದಲು ಸುಪ್ರೀಂ ಸ್ಟುಡೆಂಟ್ ಪ್ಲ್ಯಾನ್ ಬಗ್ಗೆ ತಿಳಿದುಕೊಳ್ಳೋಣ..
1) 30ಪೈಸೆಗೆ ನಿಮ್ಮ ಸ್ನೇಹಿತರೊಂದಿಗೆ ಮಾತನಾಡಿ*
ಯಾವುದೇ ಜಾಹೀರಾತಿನ ಸಾಲಿನ ಜೊತೆ ಸ್ಟಾರ್ (*) ಅಥವಾ (#) ಚಿಕ್ಕ ಚಿನ್ನೆ ಇತ್ತೆಂದರೆ ನೀವು ಗಮನಿಸಬೇಕಾಗಿದ್ದು ಆ ಜಾಹಿರಾತಿನ ಪುಟದ ಕೆಳಕ್ಕೆ ಅಥವಾ ಇನ್ನೆಲ್ಲೋ ಚಿಕ್ಕದಾಗಿ ಬರೆದಿರುವ ಮಾಹಿತಿ (*ಯಾವುದೇ 5 ಬಿ.ಎಸ್.ಎನ್.ಎಲ್ ಕರ್ನಾಟಕದ ಮೊಬೈಲ್ ಗೆ )
2) 2000 ಉಚಿತ ಎಸ್.ಎಂ.ಎಸ್ ಪ್ರತಿ ತಿಂಗಳು
3) ಇತರ ಮೊಬೈಲ್ ಕರೆಗಳು ಕೇವಲ 49 ಪೈಸೆ ಪ್ರತಿ ನಿಮಿಷ
4) ಯಾವುದೇ ದೈನಿಕ ಬಾಡಿಗೆ ಇಲ್ಲ


ಆಕರ್ಷಕ ಯೋಜನೆ ಎಂದಿರಾ? ಸ್ವಲ್ಪ ತಡೆಯಿರಿ, ಇಲ್ಲಿಯವರೆಗೆ ಹೇಳಿದ್ದು ಮೇಲ್ನೋಟದ ಮಾಹಿತಿ.. ಇಲ್ಲಿ ನನಗೆ ಎದುರಾದ ಪ್ರಶ್ನೆ ಎಂದರೆ ಬಿ.ಎಸ್.ಎನ್.ಎಲ್ ನ ಪ್ರಕಾರ ಸುಪ್ರೀಂ ಪ್ಲ್ಯಾನ್ ಎಲ್ಲ ವಿದ್ಯಾರ್ಥಿಗಳಿಗಾಗಿ ಮಾಡಿದ್ದೋ ಅಥವಾ ಶ್ರೀಮಂತ ವಿದ್ಯಾರ್ಥಿಗಳಿಗೆ ಮಾಡಿದ್ದೋ ಗೊತ್ತಾಗಲಿಲ್ಲ!!, ಈ ಪ್ಲ್ಯಾನ್ ನಲ್ಲಿ ಗ್ರಾಹಕ ಪ್ರತಿ ತಿಂಗಳು 112 ರೂಪಾಯಿಗಳ ರೀಚಾರ್ಜ್ ಮಾಡಿಸುವುದು ಕಡ್ಡಾಯ!! ಅದಕ್ಕೆ ದೊರೆಯುವ ಮಾತನಾಡುವ ಸಮಯ(Talk time) ಕೇವಲ 30 ರೂಪಾಯಿ!
ಅಂದರೆ ಮೂವತ್ತು ದಿನಕ್ಕೆ ಎಂಬತ್ತೆರೆದು ರುಪಾಯಿ ಶುಲ್ಕ ಕಟ್ಟಲೇ ಬೇಕಾದ್ದು ಅನಿವಾರ್ಯ! ಒಂದು ವೇಳೆ ತಿಂಗಳು ಮುಗಿಯುವುದರ ಒಳಗೆ 2000 ಎಸ್.ಎಂ.ಎಸ್ ಮುಗಿದು ಹೋದರೆ ಮುಂದಿನ ಎಲ್ಲ ಎಸ್.ಎಂ.ಎಸ್ ಗೆ ವಿದಿಸಲಾಗುವ ದರ 0.10/ಪ್ರತಿ ಸಂದೇಶಕ್ಕೆ (ಪ್ರತಿ ದಿನ ನೀವು ಸರಾ ಸರಿ 65 ಎಸ್.ಎಂ.ಎಸ್ ಕಳುಹಿಸಬಹುದು! ) ಅಂದರೆ ದಿನಕ್ಕೆ 65 ಸಂದೇಶಕ್ಕಿಂತ ಹೆಚ್ಚು ಕಳಿಸಿದರೆ ತಿಂಗಳು ಮುಗಿಯುವ ಮುನ್ನವೇ ನಿಮ್ಮ 2000 ಎಸ್.ಎಂ.ಎಸ್ ಸಂದೇಶಗಳು ಕಾಲಿಯಾದೀತು ಜೋಕೆ! )
ಇನ್ನು ಮೆಗಾ ಸ್ಟುಡೆಂಟ್ ಪ್ಲ್ಯಾನ್ ಬಗ್ಗೆ ಹೇಳುವುದಾದರೆ ಇದು ಮತ್ತೊಂದು ರೀತಿ!
ಈ ಪ್ಲಾನ್ ನ ಸಿಂ ಕಾರ್ಡ್ ಗೆ ಕೇವಲ 249ರುಪಾಯಿ ಪಾವತಿಸಿದರೆ ಒಂದು ವರ್ಷ ವಾಯಿದೆ ದೊರೆಯುತ್ತದೆ. ಒಂದು ವರ್ಷ ವಾಯಿದೆ ಮುಗಿದ ನಂತರ ನೀವು ಸ್ಟುಡೆಂಟ್ ಸ್ಟುಡೆಂಟ್ ಆಗಿ ಉಳಿಯುವುದಿಲ್ಲ ?.. ಅಲ್ಲಲ್ಲ ನಿಮ್ಮ Mega ಸ್ಟುಡೆಂಟ್ ಸಿಂ ಸಾಮನ್ಯ ಪ್ರೀಪೈಡ್ ಆಗಿ ಬದಲಾಗಿರುತ್ತದೆ!)
2)ದೈನಿಕ ಬಾಡಿಗೆ ಕೇವಲ 1ರುಪಾಯಿ
3)2000 ಉಚಿತ ಎಸ್.ಎಂ.ಎಸ್
4)Delivery report ಆನ್ ಮಾಡಿಕೊಂಡರೆ ಅದಕ್ಕೂ 10 ಪೈಸೆ ಚಾರ್ಜ್ ಮಾಡಲಾಗುತ್ತದೆ.
ಬೇರೆಲ್ಲ ಮೊಬೈಲ್ ಕಂಪೆನಿಗಳ ಸ್ಟುಡೆಂಟ್ ಪ್ಲ್ಯಾನ್ ಗಳು ಹೆಚ್ಚಾಗಿ ತಿಂಗಳಿಗೆ 3000 ಉಚಿತ ಎಸ್.ಎಂ.ಎಸ್ ಒದಗಿಸುತ್ತಿದ್ದವು, ಈಗ ಬಿ.ಎಸ್.ಎನ್ .ಎಲ್ ನ ಚಾಣಕ್ಷ ತಲೆಯನ್ನು ನೋಡಿ ಇನ್ನೆಲ್ಲಾ ಕಂಪೆನಿಗಳು 1000 ಎಸ್.ಎಂ.ಎಸ್ ಗಳನ್ನು ಕಡಿತ ಮಾಡುವ ಯೋಚನೆ ಮಾಡುವಂತೆ ಮಾಡಿದೆ !

ಪ್ರತಿ ಕರೆಗೆ ಕೇವಲ 49ಪೈಸೆ
ಎಲ್ಲ ಚನ್ನಾಗಿದೆ ಆದರೆ ದೈನಿಕೆ ಬಾಡಿಗೆ ಒಂದು ರುಪಾಯಿಯಂತೆ ಕಟ್ಟಿದರೆ ಮಾತ್ರವೇ ಉಚಿತ ಎಸ್.ಎಮ್.ಎಸ್ ಮಾಡಲು ಸಾದ್ಯ... ತಿಂಗಳಿಗೆ ಬಾಡಿಗೆ ಮೂವತ್ತು ರುಪಾಯಿ ಕಡ್ಡಾಯ ಎಂದು ಅರ್ಥ!

I FEEL INDIAN MOBILE CUSTOMERS DONT GET 80% SATISFACTORY SERVICE FROM ANY MOBILE COMPANY!

ಈವತ್ತಿನವರೆಗೂ ಭಾರತದಲ್ಲಿನ ಮೊಬೈಲ್ ಕಂಪೆನಿಗಳು ಗ್ರಾಹಕರಿಗೆ ಒಂದಿದ್ದರೆ ಒಂದಿಲ್ಲ ಎನ್ನುವ ಸೂತ್ರದ ಸೇವೆಯನ್ನೇ ಒದಗಿಸುತ್ತ ಬಂದಿವೆ.. !
ಕರೆ ದರಗಳು ಕಡಿಮೆ ಇದ್ದಲ್ಲಿ SMS ದರ ಅದಿಕವಾಗಿರುತ್ತದೆ ಉದಾಹರಣೆಗೆ ಮೊದಲಿದ್ದ Vodafone Student plan ಆಫರ್
100ಉಚಿತ ಎಸ್.ಎಂ.ಎಸ್ ಪ್ರತಿ ದಿನ ಕೇವಲ 1ಪೈಸೆ ದೈನಿಕ ಬಾಡಿಗೆ!
ಈ ಆಫರ್ ಪ್ಲ್ಯಾನ್ ನಲ್ಲಿ ಇರುವವರು ಕರೆ ಮಾಡುವಂತಿಲ್ಲ!, ಬೇರೆಲ್ಲರೂ 30ಪೈಸೆಗೋ ಅಥವಾ ಹೆಚ್ಚೆಂದರೆ 50ಪೈಸೆ ದರದಲ್ಲಿ ಕರೆ ಮಾಡಿದರೆ ಈ ಪ್ಲ್ಯಾನ್ ನಲ್ಲಿ ಇರುವವನ ಕರೆ ದರ 1ರುಪಾಯಿ ಆಗಿರುತ್ತದೆ, ಸ್ಥಿರ ದೂರವಾಣಿಗೆ 2ರುಪಾಯಿ ಶುಲ್ಕವಿರುತ್ತದೆ.. ಇನ್ನು 30ಪೈಸೆ ಕರೆ ದರದ Tariff ಹೊಂದಿದ ಗ್ರಾಹಕನ ಎಸ್ ಎಮ್.ಎಸ್ ಗೆ 1ರುಪಾಯಿ ದರ ಪ್ರತಿ ಸಂದೇಶಕ್ಕೆ ಚಾರ್ಜ್ ಮಾಡಲಾಗುತ್ತದೆ! ಅಂದರೆ ಈ ಗ್ರಾಹಕರಿಗೆ ಅತಿ ಕಡಿಮೆ ದರದಲ್ಲಿ ಕರೆ ಮಾಡಲು ಕೊಟ್ಟಿರುವುದರಿಂದ ಸಂದೇಶ ಕಳಿಸಲು ದುಬಾರಿ ಬೆಲೆ ತೆರಲೇ ಬೇಕು ಎನ್ನುವ ದೊರಣೆಯೇ??!! ಇದಿಷ್ಟೆ ಅಲ್ಲದೆ ಪ್ರತಿ ಮೊಬೈಲ್ ಕಂಪನಿಗಳು ಗ್ರಾಹಕರನ್ನು ಯಾವ ರೀತಿ ಸುಲಿಗೆ ಮಾಡಲು ಸಾದ್ಯವೋ ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಲೇ ಇರುತ್ತವೆ.

ಇನ್ನು Airtel "Aisi azadi our kahan" ಸ್ಲೋಗನ್ ಹಣೆ ಪಟ್ಟಿಯನ್ನು ಮಾತ್ರ ಹೊತ್ತಿದ್ದು , ತಮ್ಮ ಗ್ರಾಹಕರಿಗೆ ಯಾವ ರೀತಿಯ ಸ್ವಾತಂತ್ರ ನೀಡಿದ್ದಾರೋ ದೇವರಾಣೆಗೂ ಅವರಿಗೂ ಗೊತ್ತಿಲ್ಲ, ಗ್ರಾಹಕರ ಹಣ ದೋಚುವ ಎಲ್ಲ ರೀತಿಯ ಆಮಿಷಗಳನ್ನು ಒಡ್ಡುತ್ತಲೇ ಇರುವಲ್ಲಿ Airtel ಮೊದಲನೆ ಸ್ಥಾನ ಪಡೆದುಕೊಂಡಿದೆ,ಇದ್ದ ಬದ್ದ ಮೌಲ್ಯವರ್ಧಿತ ಸೇವೆಗಳನ್ನು ಗ್ರಾಹಕ ಸೇವೆಯ ಕೋರಿಕೆ ಸಲ್ಲಿಸದಿದ್ದರು Activate ಮಾಡಿ ನೀವೇ ಮಾಡಿಕೊಂಡಿದ್ದೀರಿ ಎಂದು ಉಡಾಫೆ ಉತ್ತರಗಳನ್ನು ಕೊಡುವಲ್ಲಿ ಏರ್ಟೆಲ್ ಗ್ರಾಹಕ ಸೇವಾ ಕೇಂಧ್ರದವರದ್ದು ಎತ್ತಿದ ಕೈ.

ನಿಮಗಿಲ್ಲಿ ಪ್ರಶ್ನೆ ಕಾಡುತ್ತಿರಬಹುದು?
ಹೌದು Airtel ಬಗ್ಗೆ ಇಷ್ಟು ಬರೆಯುತ್ತಿರಲ್ಲ ಬರಿ ಕತೆಯೋ? ಕೇಳಿದರೆ "ಇದು ಕತೆ ಅಲ್ಲ ನನ್ನ ಸ್ವಂತ ಅನುಭವ" !!, ಇನ್ನೊಂದು ನೀವು ನಂಬ್ತಿರೋ ಬಿಡ್ತಿರೋ ಗೊತ್ತಿಲ್ಲ.. ನನ್ನ Airtel ನಂಬರ್ ನ validity ಪ್ರತಿ ಬಾರಿ ಮುಗಿದ ನಂತರ ಕಸ್ಟಮರ್ ಕೇರ್ ಗೆ ಕರೆ ಮಾಡಲು ಹೋದರೆ.."This service not available,Please recharg your account to get this service" ಅಂತಲೇ ಬರುತ್ತದೆ..ಅಂದರೆ ಗ್ರಾಹಕ ಸೇವಾ ಕೇಂದ್ರಕ್ಕೆ(Call Center) ಕರೆ ಮಾಡಲು ಸಹ validity ಮತ್ತು ಅಕೌಂಟ್ನಲ್ಲಿ ಸಾಕಷ್ಟು ಮೊತ್ತ ಇರಲೇ ಬೇಕು ಅಂತಲೋ?!!! ನನಗಿನ್ನೂ ಅರ್ಥವಾಗಿಲ್ಲ![validity ಇದ್ದಾಗಲೂ ಕಾಲ್ ಸೆಂಟರ್ ನವರೊಂದಿಗೆ ಸಂಪರ್ಕ ಅಪರೂಪಕ್ಕೆ ಸಿಕ್ಕುತ್ತದೆ ಅದು ಬೇರೆಯ ವಿಚಾರ] ಭಾರತದಲ್ಲಿ ಯಾವಾಗ ಮೊಬೈಲ್ ಕಂಪೆನಿಗಳು ಗ್ರಾಹಕರಿಗೆ ಪೂರ್ಣ ಪ್ರಮಾಣದ ಸಂತೃಪ್ತಿದಾಯಕ ಸೇವಾ ಸೌಲಭ್ಯಗಳನ್ನು ಅತ್ಯಂತ ಕಡಿಮೆ ಅಂದರೆ ಗ್ರಾಹಕರಿಗೆ ಹೊರೆಯಾಗದ ವೆಚ್ಚದಲ್ಲಿ ಒದಗಿಸುತ್ತವೆಯೋ ಕಾದು ನೋಡಬೇಕಾಗಿದೆ!ಇದಕ್ಕೆ ಹೊಸದೊಂದು ಮೊಬೈಲ್ ಕ್ರಾಂತಿಯೇ ನಡೆಯಬೇಕೇನೋ!!!


For BSNL EXCEL PREPAID AND BSNL ANANTH USERS ONLY!
To activate BSNL free missed call sms alert" when you are out off coverage area or switched off.. get sms containing missed call number along with the time... all above service is free..
To activate go to Call divertion on your handset, in "when out of coverage or not reachable" section input 009117010 send request


ನೀವು ಬಿ.ಎಸ್.ಎನ್ .ಎಲ್ ನ ಎಕ್ಸೆಲ್ ಪ್ರೀಪೇಯ್ಡ್ ಸ್ಕೀಮಿನ ಗ್ರಾಹಕರಾಗಿದ್ದರೆ ಸ್ಥಳೀಯ 2 ನಂಬರುಗಳಿಗೆ 20ಪೈಸೆಯ# ಕರೆ ದರ ಪಡೆಯಲು ಮತ್ತು ಪ್ರೀಪೇಯ್ಡ್ ಅನಂತ್ ಸ್ಕೀಮಿನ ಗ್ರಾಹಕರಾಗಿದ್ದರೆ ಎರೆಡು ನಂಬರ್ ಗಳಿಗೆ 50ಪೈಸೆಯ ದರದಲ್ಲಿ ಕರೆ ಮಾಡಲು ರಿಜಿಸ್ಟರ್ ಮಾಡಿಕೊಳ್ಳಬೇಕಾದ ವಿಧಾನ


FFE ಎಂದು ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು ನಿಮ್ಮ ಸ್ಥಿರ ದೂರವಾಣಿಯ ಸಂಖ್ಯೆ ಎಸ್.ಟಿ.ಡಿ ಕೋಡ್ ಜೊತೆ ಟೈಪ್ ಮಾಡಿ, ಒಂದು ಸ್ಪೇಸ್ ಕೊಟ್ಟು ಮತ್ತೊಂದು ಮೊಬೈಲ್ ಸಂಖ್ಯೆ ಅಥವಾ ಇನ್ನೊಂದು ಸ್ಥಿರ ದೂರವಾಣಿಯ ಸಂಖ್ಯೆ ಎಸ್.ಟಿ.ಡಿ ಕೋಡ್ ಜೊತೆ ಟೈಪ್ ಮಾಡಿ ಅದನ್ನು 53733 ಉಚಿತ ಸೇವೆಯ ನಂಬರಿಗೆ ಕಳಿಸಿ..
Send sms in the format below
FFE landline number along with std code mobile number or another landline number along with std code
Send it to 53733 toll free number

For example: FFE 0802xxxxxxx 9xxxxxxxxx
FFE 0802xxxxxxx 081832xxxxx *
* i have shown x insted of numbers, also shown std code and number of digits of land line Varies from place to place.
ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ನೀವು ನೋಂದಣಿ ಮಾಡಿದ ಎರೆಡು ನಂಬರುಗಳನ್ನು ಮುಂದಿನ ಆರು ತಿಂಗಳವರೆಗೆ ಬದಲಾಯಿಸುವಂತಿಲ್ಲ. #ಎರಡು ನಂಬರುಗಳಿಗೆ ಕರೆ ದರ 10ಪೈಸೆ ಬದಲಾಗಿ 20ಪೈಸೆ ಆಗಿದ್ದು ಈಗ 1oಪೈಸೆ ದುಬಾರಿಯಾಗಿದೆ.
ಬಿ.ಎಸ್.ಎನ್ .ಎಲ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಉಚಿತ ಕರೆ ಮಾಡಿ 94000 24365

ಇಳೆಯ ಚುಂಬಿಸಿದ ಮಳೆ

ತಿಳಿ ನೀಲಿ ಬಾನಂಗಳದ ತುಂಬೆಲ್ಲಾ ಕಾರ್ಮೋಡ ಕವಿಯುತಲಿರಲು
ಆ ಮೋಡ ಕರಗಿ ಮಳೆ ಹನಿ ಹನಿಯುತಲಿರಲು
ಎದ್ದಿದೆ ಆವಿಯ ಉಗಿಯು...
ತಂಪನೀಯುತಿದೆ ಭೂಮಿತಾಯ ಒಡಲಿಗೆ...

ಚಿಲಿ ಪಿಲಿ ಗುಟ್ಟುತ ಅವಸರದಿ
ಗೂಡನು ತಲುಪುವ ಕಾತುರದಲಿ ಹಾರುತಿವೆ ಹಕ್ಕಿಗಳ ಗುಂಪು...
ಈ ಸುಂದರ ದೃಶ್ಯವ ನೋಡಲು ಸಾಲದು ಬರಿ ಎರೆಡು ಕಣ್ಣು !

ವರುಣನ ಕೃಪೆಗಾಗಿ ಕಾಯುತಲಿದ್ದ ರೈತರ ಮೊಗದಲಿ ಮೂಡಿದೆ ಹರ್ಷೋದ್ಗಾರ...
ನೆಟ್ಟಿಯ ಆರಂಭಿಸಿದರು ಹೇಳುತ "ಬಿತ್ತನೆಗೆ ನಮಗಿಲ್ಲವಿನ್ನು ಮಳೆಯ ಚಿಂತೆ" ಎಂದು.

ಆ ಸೂರ್ಯನು ಮರೆಯಲಿ ನಿಂತು
ಬಾನ ಅಂಗಳದಿ ಮೂಡಿಸಿದನು ಮನ ಮೋಹಕ ಕಾಮನಬಿಲ್ಲು...
ನೋಡುತ ನಿಂತೆನು ನಾ ಮೈ ಮರೆತು...