ಈಗ ನನ್ನ Relationship Status ಬದಲಾಗಿದೆ Half-Shirt(ಅರ್ಧಾಂಗಿ) ಬಂದಿದಾಳೆ, ಅಂದರೆ ನಾನು ವಿವಾಹಿತನಾಗಿದ್ದೀನಿ, ಒಂತರಾ ಹೊಸತನ ಇದೆ.. ಹೊಸ ಬಾಳ ಸಂಗಾತಿ, ಬದುಕು ಸುಂದರವಾಗಿದೆ ಅನಿಸ್ತಾ ಇದೆ, ಅದರ ಜೊತೆಗೆ ಮುಂಚಿನ ಹಾಗೆ ರಾತ್ರಿಯಿಡೀ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳೋಕೆ ಆಗಲ್ಲ!!.
ಮದ್ವೆ ಆದ್ಮೇಲೆ ಬ್ಲಾಗ್ ನಲ್ಲಿ ಎಲ್ಲಿ ಬರಿತೀಯಾ ಅಂತ ಆತ್ಮೀಯ ಸ್ನೇಹಿತರು ಬಂಧುಗಳು ಸುಮ್ನೆ ತಮಾಷೆಗೆ ಹೇಳ್ತಾ ಇದ್ರು.. ಮದ್ವೆ ಆಯ್ತು ಅಂತ ಬ್ಲಾಗ್ ಬರೆಯೋದನ್ನು ಎಲ್ಲಾದರೂ ನಿಲ್ಲಿಸುವ ಅಂತ ಅಪರಾಧ ಮಾಡೋಕೆ ಸಾಧ್ಯವಾಗುತ್ತಾ ನನ್ನಿಂದ?, ಬ್ಲಾಗ್ ಲೋಕದಲ್ಲಿ ನನಗೆ ಸಿಕ್ಕ ಪ್ರೀತಿ ವರ್ಣನೆಗೆ ನಿಲುಕದ್ದು, ಅನೇಕ ಹೊಸ ಗೆಳೆಯರನ್ನು ಪರಿಚಯಿಸಿಕೊಟ್ಟಿದೆ, ಬ್ಲಾಗ್ ಇದೆ ಅಂತ ಸುಮ್ಮ ಸುಮ್ಮನೆ ಬಾಯಿಗೆ ಬಂದಿದ್ದು ಬರೆದರೆ ಅದಕ್ಕೆ ಬೆಲೆ ಇರೋಲ್ಲ ಅದೂ ಅಲ್ಲದೆ ನನ್ನ ಬ್ಲಾಗ್ ಹೆಸರು ಹಾಗೇ ಸುಮ್ಮನೆ... ಅಂತ, ನಾನು ನನ್ನ ಬ್ಲಾಗ್ ಓದುಗರಿಗೆ ಏನಾದ್ರೂ ಓದೋ ಅಂತದ್ದು ಬರೀಬೇಕು ಅನ್ಸೋ ತನಕ ನಾನು ಬರೆಯೋಕೆ ಹೋಗಲ್ಲ, ಈಗ ಬರೀಬೇಕು ಅನ್ನಿಸಿದ್ದು ನಿಮ್ಮ ಮುಂದೆ...
ಮಲೆನಾಡಿನ ಅತಿ ಹೆಚ್ಚಿನ ಕೃಷಿಕರಿಗೆ ಅಡಿಕೆ ಬೆಳೆಯೇ ಅವರ ಜೀವನಾಧಾರವಾಗಿದೆ, ಜೀವನಾಡಿಯಾಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ, ಅಡಿಕೆಯೊಂದಿಗೆ ಅನೇಕ ಉಪ ಬೆಳೆಗಳನ್ನು ಬೆಳೆಯಬಹುದಾಗಿದ್ದು, ಬಾಳೆ( ಬಾಳೇ ಹಣ್ಣು), ಮೆಣಸು, ಕಾಫಿ, ಏಲಕ್ಕಿ, ಕೋಕೋ, ಸಾಮಾನ್ಯವಾಗಿ ಬೆಳೆಯಲಾಗುತ್ತದೆ, ಬಂಗಾರದ ಬೆಲೆ ಬಂತೆಂದು ಬೆಳೆದ ಬೆಳೆ ವೆನಿಲ್ಲಾ ಈಗ ತನ್ನ ಬೆಲೆ ಕಳೆದುಕೊಂಡಿದ್ದಲ್ಲದೆ ರೋಗ ಪೀಡಿತವಾಗಿ ಕ್ಯಾನ್ಸರ್ ನಂತೆ ಎಲ್ಲಾ ಬಳ್ಳಿಗಳಿಗೂ ಹರಡಿ ಸೊರಗಿ ಬಳ್ಳಿಗಳು ಸಾಯುತ್ತಿದೆ, ಹೀಗೆ ಇನ್ನೂ ಅನೇಕ ತರಹದ ಉಪ ಬೆಳೆಗಳನ್ನು ಅಡಿಕೆಯ ಜೊತೆ ಬೆಳೆಯಲಾಗುತ್ತದೆ, ಇವೆಲ್ಲವನ್ನು ಬೆಳೆದೂ ಯಾವುದರಲ್ಲಿಯೂ ನಿರೀಕ್ಷೆಯ ಮಟ್ಟದಲ್ಲಿ ಲಾಭ ಬಾರದಿದ್ದರೂ ಸಹ ಅಡಿಕೆಯಿಂದ ತೃಪ್ತಿದಾಯಕವಲ್ಲದಿದ್ದರೂ ಜೀವನ ಸಾಗಿಸಲು ಸಾಧ್ಯವಾಗುವಷ್ಟರ ಮಟ್ಟಿನ ಲಾಭಾಂಶ ಮಾತ್ರ ದೊರೆತೇ ದೊರೆಯುತ್ತದೆ ಎನ್ನುವುದು ಮಾತ್ರ ಸಾರ್ವಕಾಲಿಕ ಸತ್ಯ.
ಈಗಿನ ಕೃಷಿ ಕುಟುಂಬದ ಬಹುತೇಕ ಯುವ ಜನತೆ ಬೆಂಗಳೂರಿನಂತಹ ದೊಡ್ಡ ಪಟ್ಟಣಗಳಲ್ಲಿ ಉದ್ಯೋಗ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ, ಇವರಲ್ಲಿ ಹೆಚ್ಚಿನವರು ತೋಟಗಳಿಗೆ ಹಣ ವ್ಯಯಿಸುವ ಬದಲಾಗಿ ಅದೇ ಹಣವನ್ನು ಬ್ಯಾಂಕಿನಲ್ಲಿ ಇಟ್ಟರೆ ಬಡ್ಡಿ ಬರುತ್ತದೆ ಎನ್ನುವ ಆಲೋಚನೆ ಮಾಡುವವರೇ ಹೆಚ್ಚಾಗಿದ್ದಾರೆ, ಸಕಾಲಕ್ಕೆ ಸರಿಯಾಗಿ ತೋಟ ಗದ್ದೆಗಳಿಗೆ ಸರಿಯಾದ ಪ್ರಮಾಣದ ಪೋಶಕಾಂಶಗಳು, ಕೊಳೆ ಔಷದಗಳ ಸಿಂಪರಣೆ ಮಾಡಿಸದಿದ್ದಲ್ಲಿ ಬೆಳೆ ಸರಿಯಾಗಿ ಬಾರದೇ ನಷ್ಟವಾಗುವುದು ಖಚಿತ, ಹಣ ತೊಡಗಿಸಿದರೆ ಮಾತ್ರ ಉತ್ತಮ ಬೆಳೆ ತೆಗೆಯಲು ಸಾಧ್ಯ, ಕೃಷಿಯೇ ಜೀವನಾಧಾರವಾಗಿದ್ದವರು ಒಂದು ವರ್ಷದ ಆಧಾಯದಲ್ಲಿ ಸ್ವಲ್ಪ ಮಟ್ಟಿನ ಹಣವನ್ನು ಬ್ಯಾಂಕಿನಲ್ಲಿ ಬಡ್ಡಿಗಾಗಿ ತೊಡಗಿಸಿ ಉಳಿದ ಹಣವನ್ನು ಕೃಷಿಯಲ್ಲಿ ತೊಡಗಿಸುತ್ತಾರೆ, ಹಳ್ಳಿಗಳಲ್ಲಿರುವ ತಂದೆ ತಾಯಿ ಎಷ್ಟೇ ಕಷ್ಟ ಬಂದು ಕೃಷಿ ಮಾಡಲು ಸಾಧ್ಯವಾಗದಿದ್ದರೂ ಮಕ್ಕಳ ಹತ್ತಿರ ಖಂಡಿತ ಸ್ವಾಭಿಮಾನವನ್ನು ಬಿಟ್ಟು ದುಡ್ಡು ಕೇಳಲಾರರು ಎನ್ನುವುದು ನನ್ನ ಅನಿಸಿಕೆ, ರೋಗದ ಭಾದೆ ಇಲ್ಲವಾದರೆ(ಕಡಿಮೆಯಾದರೆ) ನಿರೀಕ್ಷಿತ ಲಾಭಾಂಶ ದೊರೆಯುತ್ತದೆ.
ಜೊತೆಗೆ ಅಡಿಕೆ, ಗದ್ದೆ ಕೃಷಿಯಲ್ಲಿನ ಸಂಕಷ್ಟಗಳಿಗೇನು ಕೊರತೆಯಿಲ್ಲ.
ಮಲೆನಾಡಿನ ಹೆಚ್ಚಿನ ಎಲ್ಲಾ ಭಾಗಗಳಲ್ಲೂ ಈಗ ಅಡಿಕೆ ಸುಗ್ಗಿ ( ಅಡಿಕೆ ಕೊಯ್ಲು) ಮುಕ್ತಾಯವಾಗಿದೆ, ಈ ಬಾರಿ ವರ್ಷದ ಎಲ್ಲಾ ತಿಂಗಳುಗಳಲ್ಲೂ ಮಳೆಯಾಗಿ ರೈತರಿಗೆ ತಲೆ ಬಿಸಿ ತಂದೊಡ್ಡಿತ್ತು, ಭತ್ತ ಹುಲ್ಲು ಮಳೆಯಲ್ಲಿ ನೆನೆದೆ ಭಾರೀ ನಷ್ಟವನ್ನುಂಟು ಮಾಡುತ್ತು, ಈ ಬಾರಿ ಅಡಿಕೆ ಮತ್ತು ಗದ್ದೆ ಕೊಯ್ಲು ಒಂದೇ ಸಮಯದಲ್ಲಿ ಕಟಾವಿಗೆ ಬಂದಿದ್ದರಿಂದ ಅಡಿಕೆ ಬೆಳೆಗಾರರು ವಿಪರೀತ ಸಂಕಷ್ಟಕ್ಕೆ ಒಳಗಾಬೇಕಾಯಿತು, ಕೆಲಸಗಾರರು ತಮ್ಮ ಗದ್ದೆ ಕೊಯ್ಲು ಮಾಡುವುದರಲ್ಲಿ ನಿರತರಾಗಿದ್ದರಿಂದ ಅಡಿಕೆ ಸುಲಿಯಲು ಜನರಿಲ್ಲದೇ ತೊಂದರೆ ಉಂಟಾಗಿತ್ತು, ಪ್ರತಿ ಬಾರಿಗಿಂತ ಈ ಬಾರಿಯ ಸುಗ್ಗಿ ತ್ರಾಸದಾಯಕವಾಗಿತ್ತು. ಮನೆಗೆ ಬಂದು ಅಡಿಕೆ ಸುಲಿಯುವವರು ಇಲ್ಲವಾಗಿದ್ದಾರೆ, ಅತಿ ಹೆಚ್ಚಿನ ಊರುಗಳಲ್ಲಿ ಅಡಿಕೆ ಸುಲಿಯುವವರ ಮನೆಯಂಗಳಕ್ಕೆ ಅಡಿಕೆಯನ್ನು ತೆಗೆದುಕೊಂಡು ಹೋಗಿ ಸುಲಿಸಿಕೊಂಡು ಅವರು ಹೇಳಿದಷ್ಟು ಬೆಲೆಯನ್ನು ತೆತ್ತು ಅಡಿಕೆ ಸುಲಿಸುವ ದುಃಸ್ತಿತಿ ಬಂದು ಒದಗಿದೆ. ಇದಕ್ಕೇನು ಪರಿಹಾರ??!
ಅನೇಕ ಮಾದರಿಯ ಅಡಿಕೆ ಸುಲಿಯುವ ಯಂತ್ರಗಳು ಮಾರುಕಟ್ಟೆಗೆ ಪ್ರವೇಶ ಮಾಡುತ್ತಿದ್ದು 60% ನಷ್ಟು ಸರಿಯಾಗಿ ಅಡಿಕೆ ಸುಲಿಯುವಲ್ಲಿ ಸಫಲವಾಗಿದೆ, ಅನೇಕ ಮನೆಯಂಗಳವನ್ನು ಅಡಿಕೆ ಸುಲಿಯುವ ಯಂತ್ರಗಳು ಅಲಂಕರಿಸಿದ್ದು ಆಗಿದೆ, ಆದರೆ ಅಡಿಕೆ ಸುಲಿಯುವ ಯಂತ್ರಗಳು ಅಡಿಕೆಯನ್ನು ಒಡೆಯದಂತೆ, ಗಾಯ ಮಾಡದೆ ಸುಲಿಯುವಲ್ಲಿ ವಿಫಲವಾಗಿವೆ, ಜನರು ಸುಲಿಯುವಾಗಲೂ ಸಹ ಅಡಿಕೆಗೆ ಸ್ವಲ್ಪ ಮಟ್ಟಿನ ಗಾಯ ಆಗುತ್ತದೆ ಎನ್ನುವುದನ್ನು ಗಮನಿಸಿದರೆ ಜನರು ಸುಲಿದಾಗ ಆಗುವ ನಷ್ಟ 2% ಇದ್ದರೆ ಮಶೀನ್ ನಲ್ಲಿ ಸುಲಿದಾಗ ಆಗುವ ನಷ್ಟ 5% ನದಾಗಿರುತ್ತದೆ. ಅಡಿಕೆ ಸುಲಿಯುವ ಯಂತ್ರದ ಸುಧಾರಣೆಗೆ ಇರುವ ಬಹುದೊಡ್ಡ ಕೊರತೆಯೆಂದರೆ ವರ್ಷದ ಮೂರು ತಿಂಗಳಲ್ಲಿ ಮಾತ್ರ ಹಸಿ ಅಡಿಕೆ ಸುಲಿಯಲು ಸಿಗುವುದರಿಂದ ಯಂತ್ರದಲ್ಲಿ ಯಾವುದೇ ಸುಧಾರಣೆ ಅಥವಾ ಬದಲಾವಣೆ, ಪರೀಕ್ಷೆ ಮಾಡಲು ಸಾಧ್ಯ, ನಂತರ ಮುಂದಿನ ಅಡಿಕೆ ಬೆಳೆ ಬರುವವರೆಗೆ ಕಾಯುವುದು ಅನಿವಾರ್ಯ. ಅದೂ ಅಲ್ಲದೆ ನಮ್ಮಂತ ಅಡಿಕೆ ಬೆಳೆಗಾರರಿಗೆ ಅಡಿಕೆ ಸುಲಿಯುವ ಯಂತ್ರ ನೋಡುವ ಅಥವಾ ಕೊಳ್ಳುವ ಹಂಬಲ ಹುಟ್ಟುವುದೇ ಸುಗ್ಗಿಯ(ಕೊಯ್ಲಿನ ಸಮಯ)ದಲ್ಲಿ, ನಂತರ ಮತ್ತೆ ಮುಂದಿನ ವರ್ಷಕ್ಕೆ ಈಗಲೇ ಕೊಳ್ಳುವುದೇಕೆ ಎನ್ನುವ ಪ್ರಶ್ನೆಯೊಂದು ತಲೆಯಲ್ಲಿ ಮಿಂಚಿ ಮುಂದೂಡುತ್ತಾ ಹೋಗುತ್ತಿದ್ದೇವೆ, ಯಾರೋ ಹೇಳಿದ ಮಾತುಗಳನ್ನೇ ಸತ್ಯವೆಂದು ನಂಬುವುದು ಮತ್ತೊಂದು ವಿಪರ್ಯಾಸ, ಅದನ್ನು ಮತ್ತೆ ಬಣ್ಣ ಬಣ್ಣದ ಕತೆ ಹಣೆದು ಹೇಳುವುದು ಹಲವರಿಗೆ ಒಲಿದು ಬಂದ ಕಲೆ! ಅಡಿಕೆಯನ್ನು ಹಾಳು ಮಾಡುತ್ತದೆಯಂತೆ, ಕಚ್ಚು ಬೀಳುತ್ತದೆಯಂತೆ, ಮೂಗು ಉಳಿಯುತ್ತದೆಯಂತೆ, ಅಡಿಕೆಯೊಂದಿಗೆ ಸಿಪ್ಪೆ ಬರುತ್ತದ್ದೆ, ಸಿಪ್ಪೆ ಬೇರೆ ಕಡೆ ಬಂದರೂ ಅಡಿಕೆಯೂ ಸಿಪ್ಪೆಯ ಜೊತೆ ಹೋಗುತ್ತದೆ, ನೂರು ಅಡಿಕೆಯ ಜೊತೆ ಒಂದು ಸಿಪ್ಪೆ ಅಥವಾ ಸಿಪ್ಪೆಯ ಜೊತೆ ಒಂದೆರೆಡು ಅಡಿಕೆ ಹೋದರೇನು ಆರಿಸಲು ಸಾಧ್ಯವಿಲ್ಲವಾ?, ಮನುಷ್ಯರು ಸುಲಿಯುವಾಗ ಸ್ಪಲ್ಪ ಗಟ್ಟಿ ಬಂದ ಅಥವಾ ಬಣ್ಣ ಚೂರು ಕೆಂಪಗಾಗಿದ್ದರೂ ಅಡಿಕೆಯನ್ನು ಗೋಟಿಗೆ ಎಸೆಯುವುದು ಮುಂಚಿನಿಂದಲೂ ಬಂದಿದೆ, ಆದರೆ ಯಂತ್ರ ತನ್ನೆಲ್ಲಾ ಶಕ್ತಿಯನ್ನು ಬಳಸಿ ಆದಷ್ಟು ಸಿಪ್ಪೆ ಬೇರ್ಪಡಿಸಲು ಪ್ರಯತ್ನ ನೆಡೆಸುತ್ತದೆ, ಸಾಧ್ಯವಾಗದಿದ್ದಲ್ಲಿ ಅರ್ದ ಸಿಪ್ಪೆಯನ್ನು ಬಿಡಿಸಿ ಹೊರ ಒಗೆಯುತ್ತದೆ ಇಂತಹ ಅಡಿಕೆ ಒಣಗಿಸಿದಾಗ ಬೇಗನೆ ಒಣಗಿ ಸಿಪ್ಪೆ ಬಿಟ್ಟುಕೊಳ್ಳುತ್ತದೆ.
ಅಡಿಕೆ ಅಥವಾ ಇನ್ಯಾವುದೇ ಕೃಷಿಯಲ್ಲಿ ತೊಡಗಿರುವವರು ಯಂತ್ರಗಳ ಮೇಲೆ ಅವಲಂಭಿತವಾಗುವುದು ಅನಿವಾರ್ಯವಾಗುತ್ತಿದೆ, ಒಂದರ್ಥದಲ್ಲಿ ಯಾಂತ್ರೀಕೃತ ಕೃಷಿಯಲ್ಲಿ ಒಲವು ತೋರುತ್ತಿರುವುದು ಒಳ್ಳೆಯ ಬೆಳವಣಿಗೆ ಸಹ ಎನ್ನಬಹುದಾಗಿದೆ, ಇದಕ್ಕೆ ಪೂರಕವೆಂಬಂತೆ ಅಡಿಕೆಗೆ ಕೊಳೆ ಓಷದಿಯನ್ನು ಸಿಂಪರೆಣೆ ಮಾಡಲು ಹಾಗೂ ಗದ್ದೆಗೆ ಕೀಟನಾಶಕ ಸಿಂಪರೆಣೆ ಬಳಸುವ Power Sprayer,
ಹಾಗೂ ಕಳೆ ಕೊಚ್ಚುವ(Brush Cutter)ಯಂತ್ರ
ಮತ್ತು ಆಯ್ದ ಇನ್ನೂ ಹಲವು ಯಂತ್ರಗಳಿಗೆ ಕೃಷಿ ಇಲಾಖೆ ರಿಯಾಯಿತಿಯನ್ನು ನೀಡುತ್ತಿದೆ, ಇದರ ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ, ಹತ್ತು ಸಾವಿರ ರೂಪಾಯಿ ಸಹಾಯ ಧನವನ್ನು ಕೊಡುತ್ತಿದ್ದರೂ ಸಹ ಇವೆಲ್ಲವೂ ಇವತ್ತಿನ ಕೃಷಿಕರ ಸ್ಥಿತಿಗೆ ಹೋಲಿಸಿ ನೋಡಿದರೆ ಅತೀ ದುಬಾರಿಯಾಗಿಯೇ ಉಳಿಯುತ್ತದೆ... ಉದಾಹರಣೆಗೆ Power Sprayer ನಿಂದ ಅನೇಕ ಕೆಲಸ ಮಾಡಿಕೊಳ್ಳಬಹುದು, ಬರೀ ಔಷದಿ ಸಿಂಪರಣೆಯೊಂದೇ ಅಲ್ಲದೇ ಕಾರ್ ತೊಳೆಯಲು.. ಬೈಕ್ ತೊಳೆಯಲು, ದನದ ಕೊಟ್ಟಿಗೆ ತೊಳೆಯಲು, ಸಿಮೆಂಟ್ ಅಂಗಳವನ್ನು ಸ್ವಚ್ಚಗೊಳಿಸಲು, ಜೊತೆಗೆ ಅಗತ್ಯ ಬಿದ್ದಾಗ ಇದನ್ನು ಪಂಪ್ ಸೆಟ್ ಆಗಿ ಸಹ ಬಳಸಿಕೊಳ್ಳಬಹುದು, ಅಂತೆಯೇ ಕಳೆ ಕೊಚ್ಚುವ ಯಂತ್ರದಲ್ಲಿ, ಭತ್ತದ ಕೊಯ್ಲು, ಕರಡ( ಒಣಗಿದ ಹುಲ್ಲು) ಕಡಿಯಲು, ಲಾನ್ ಕತ್ತರಿಸಲು, ಬೇರೆ ಬೇರೆ ಬ್ಲೇಡ್ ಗಳನ್ನು ಬಳಸಿ ಮರವನ್ನು ಸಹ ಕಡಿಯಲು ಬಳಸಬಹುದಾಗಿದೆ, ಯಂತ್ರದ ಬಳಕೆಯಿಂದ ಅತಿ ಕಡಿಮೆ ಸಮಯದಲ್ಲಿ ಹೆಚ್ಚಿನ ಕಳೆ ನಾಶ ಮಾಡಬಹುದು, ತೋಟ, ಮನೆಯ ಹತ್ತಿರ ಪ್ರದೇಶಗಳನ್ನು ಕಳೆ ಮುಕ್ತವಾಗಿಸಬಹುದು.
ಗದ್ದೆ ಕೊಯ್ಲು ಮಾಡಲು ಈಗ ದೊಡ್ಡ ದೊಡ್ಡ ಯಂತ್ರಗಳೇ ಬಾಡಿಗೆ ಆದಾರದಲ್ಲಿ ಸಿಗುತ್ತಿವೆ ಭತ್ತದ ಕೊಯ್ಲು ಮಾಡಿ ಭತ್ತ ಬೇರ್ಪಡಿಸುತ್ತದೆ.. ಇದು ಸಾಂಪ್ರದಾಯಿಕವಾಗಿ ಅಂದರೆ ಆಳುಗಳ ಮೂಲಕ ಗದ್ದೆ ಕೊಯ್ಲು ಮಾಡಿಸಿದಾಗ ಒಂದು ಎಕರೆ ಗದ್ದೆ ಕಟಾವಿಗೆ ಸುಮಾರು ಮೂರರಿಂದ ನಾಲಕ್ಕು ಸಾವಿರ ರೂಪಾಯಿಗಳು ತಗಲುತ್ತದೆ, ಆದರೆ ಯಂತ್ರದ ಮೂಲಕವಾದರೆ ಕೇವಲ ಒಂದು ಸಾವಿರ ರೂಪಾಯಿಗಳು ಅದೂ ಅಲ್ಲದೆ ಭತ್ತ ಬೇರ್ಪಟ್ಟು ಚೀಲದಲ್ಲಿ ಸಂಗ್ರಹವಾಗಿ ದೊರೆಯುತ್ತದೆ.
ಅಂದಹಾಗೆ ಕೃಷಿಗಾಗಿ ಸಾಲ ಮಾಡಿ ಬೈಕ್ ಕೊಳ್ಳುವ ಅಥವಾ ಅಗತ್ಯಕ್ಕಿಂತ ಹೆಚ್ಚಿಗೆ ಸಾಲ ಮಾಡಿ ಸಂಕಷ್ಟಕ್ಕೆ ಒಳಗಾಗುವ ರೈತ ಕುಟುಂಬಗಳು ಅನೇಕವುಗಳಿವೆ, ಕೃಷಿಗಾಗಿ ಸಾಲ ಮಾಡುತ್ತಿದ್ದರೆ ಕೃಷಿ ಸಾಮಾಗ್ರಿ/ರಸ ಗೊಬ್ಬರ/ ಮುಂತಾದವುಗಳಿಗೆ ತಗಲುವ ಅಂದಾಜು ವೆಚ್ಚವನ್ನು ಲೆಕ್ಕ ಮಾಡಿ ಸಾಲ ಮಾಡುವ ಪರಿಪಾಠ ಬೆಳೆಸಿಕೊಂಡಲ್ಲಿ ರೈತರ ಆತ್ಮ ಹತ್ಯೆ ಪ್ರಕರಣಗಳು ತಾನಾಗಿಯೇ ಕಡಿಮೆಯಾಗುತ್ತದೆ.
© Copyright Protected by www.adibedur.blogspot.com ®All Rights Reserved
Reproduction this blog posts in any manner electronic or otherwise, in whole or in part, is probhited.
9 comments:
ನಿಜ, ಇವತತು ಯಾಂತ್ರೀಕರಣದಿಂದ ಮಾತ್ರ ಕೃಷಿ ಉಳಿಸಸುವ ಪ್ರಯತ್ನ ಮಾಡಬಹುದು. ಹಾಗೂ ಮೊನ್ನೆ ಹೆಗ್ಗೋಡಿನಲ್ಲಿ ಬುದ್ದಿಜೀವಿಗಳು ಹೇಳಿದರು, ಯಂತ್ರಗಳಿಂದ ಕೃಷ ಕಾರ್ಮಿಕರು ನಿರದ್ಯೋಗಿಗಳಾಗುತ್ತಿದ್ದಾರೆಂದು..ಇಂತಹ ಆಷಾಡಭೂತಿಗಳನ್ನು ಅಟ್ಟಾಡಿಸಿಶಹರದತ್ತ ಓಡಿಸ ಬೇಕು ಇವರು ಸಮಾಜಕ್ಕೆ ಕ್ಯಾನ್ಸರ್ ಇದ್ದಂತೆ... ಇದು ನನ್ನ ಅನಿಸಿಕೆ....
ತುಂಬಾ ಉಪಯುಕ್ತ ಮಾಹಿತಿ ಎಲ್ಲ ಕ್ರಷಿಕರಿಗೆ
ಹೀಗೆಯೇ ಬರೆಯಿರಿ ಮುಂದೆಯೂ
ಮಲೆನಾಡಿನ ಕೃಷಿಕರಿಗಿರುವ ಕೂಲಿಯಾಳುಗಳ ಕೊರತೆ ನೀಗಿಸಲು ಯಂತ್ರಗಳ ಸಹಾಯ ಪಡೆಯುವುದು ಅನಿವಾರ್ಯ.
ಬಡ ಕುಟುಂಬಗಳೂ ಇವುಗಳ ಅನುಕೂಲ ಪಡೇಯುವಂತಾಗಬೇಕು .
ಮನಸ್ವೀಯವರೇ, ನಿಮ್ಮ ಕೃಷಿಪರ ಲೇಖನ ಕೃಷಿ-ಸಂಬಂಧಿತ ಪದವಿಪಡೆದ ನನಗೆ ಖುಷಿ ತಂದಿದೆ. ನಾನು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿದ್ದಾಗ ..ದೇಶವ್ಯಾಪಿ ಚಾಲನೆಯಲ್ಲಿದ್ದ reduction of dredgery in agriculture operations ಎನ್ನುವ ಕಾರ್ಯಕ್ರಮದಡಿ ಕೃಷಿ ಉಪಕರಣಗಳ ಸುಧಾರಣೆಗೆ ಹೆಚ್ಚು ಒತ್ತು ಕೊಡಲಾಗಿತ್ತು. ನಿಮ್ಮ ಲೇಖನ ನನಗೆ ಚುಕ್ಕಿ ಚಿತ್ತಾರ (ವಿಜಯಶ್ರೀಯವರು) ಬರೆದ ಇಂತಹುದೇ ಲೇಖನವನ್ನು ನೆನಪಿಸಿತು. ಮುಂದುವರೆಸಿ ನಿಮ್ಮ ಕೃಷಿಕ-ಪರ ಸೇವೆ
ಹೌದು, ಕೃಷಿಕ ಯಂತ್ರವನ್ನು ಅವಲಂಬಿಸೋದು ಅನಿವಾರ್ಯ. ನಮ್ಮ ಅಗತ್ಯಕ್ಕೆ ತಕ್ಕ ಹಾಗಿರೋ ಯಂತ್ರ ಈಗೀಗ ಬರ್ತಾ ಇದೇ ಅನ್ನೋದೆ ಸಮಾಧಾನದ ವಿಷಯ.ಅಟೋಕ್ಕಿಂತ ಸಣ್ಣದಾದ ಜೆ.ಸಿ.ಬಿ.ಯನ್ನು ಇಲ್ಲಿ (ಜರ್ಮನಿಯಲ್ಲಿ) ಇವತ್ತು ನೋಢಿದೆ. ಇಂಥಾದ್ದು ನಮಗೆ, ಅಡಿಕೆ ಕೃಷಿಕರಿಗೆ ಮುದ್ದಾಂ ಬೇಕು. ಯಾಕೆ ಕಂಪನಿಗಳು ಅವನ್ನು ತಯಾರಿಸ್ತ್ವಿಲ್ಯೇನೋ?
ಹೊಸ ವಸಂತದ ಕನಸ ಬೊಗಸೆಗೆ ಶುಭ ಹಾರೈಕೆಗಳು...
ಬಾಲಚಂದ್ರ ಹೆಗಡೆ, ಸಾಯಿಮನೆ
@Jithendra Hindumane
ಹ್ಮ್ ಬುದ್ದಿ ಜೀವಿಗಳಿಗೆ ರೈತರ ಸಂಕಷ್ಟ ತಿಳಿಸೋರು ಯಾರು?.. ದನ್ಯವಾದಗಳು.
@ಸಾಗರದಾಚೆಯ ಇಂಚರ,ಸುಮ, ಜಲನಯನ
ಪ್ರತಿಕ್ರಿಯಿಸಿದ್ದಕ್ಕೆ ದನ್ಯವಾದಗಳು.
@ಬಾಲು ಸಾಯಿಮನೆ
ಹೌದು ನೀವು ಹೇಳಿದ್ದು ನಿಜ, ಕಂಪನಿಗಳು ಕೃಷಿಯಂತ್ರಗಳನ್ನು ತಯಾರಿಸುವತ್ತ ಹೆಚ್ಚಿನ ಗಮನ ನೀಡಬೇಕಿದೆ. ಹೊಸ ವಸಂತದ ಕನಸ ಬೊಗಸೆ ಮೆಚ್ಚಿಕೊಂಡಿದ್ದಕ್ಕೆ ನಮ್ಮಿಬ್ಬರ ಕಡೆಯಿಂದ ದನ್ಯವಾದಗಳು
ಲೇಖನ ಚೆನ್ನಾಗಿದೆ. ಕ್ರಷಿಗೆ ಸಂಬಂಧಪತ್ತ ಕನ್ನಡದ ಇತರ ಬ್ಲಾಗ್ಗಳ ವಿವರ ನೀಡಬಹುಧೆ.ಧನ್ಯವಾದಗಳು
ಮನಸ್ವಿಯವರೇ, ಮಾಹಿತಿ ತುಂಬಾ ಉಪಯುಕ್ತವಾಗಿದೆ. ಧನ್ಯವಾದಗಳು.
Post a Comment