ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Friday, May 27, 2011

ಸಾವಯವ ಕೃಷಿಯ ಬಗೆಗೆ ನಮಗೆಷ್ಟು ಗೊತ್ತು?

    ಸಂಪೂರ್ಣ ಸಾವಯವ ಕೃಷಿ ಈಗಿನ ಆಧುನಿಕ ಕೃಷಿಯಲ್ಲಿ ಸಾಧ್ಯವಾ? ರೋಗ ಭಾದೆಯಿಂದ/ ಹುಳ ಹುಪ್ಪಟೆಗಳ ಉಪಟಳದಿಂದ ಪಾರಾಗಲು ಸಾವಯವ ವಿಧಾನದಿಂದ ಸಾಧ್ಯವಿದೆಯಾ?

ರಾಸಾಯನಿಕ ಗೊಬ್ಬರ ಬಳಕೆ ಇಲ್ಲದೆ ಕೃಷಿ ಸಾಧ್ಯವಿಲ್ಲವಾ?? ಅನೇಕ ಪ್ರಶ್ನೆಗಳು ನಮ್ಮನ್ನು ಕಾಡುತ್ತದೆ, ಅದೇ ರೀತಿ ಅಡಿಕೆ ಬೆಳೆಗೆ ಎಂಡೋ ಸಲ್ಫಾನ್ ನಂತ ಅಪಾಯಕಾರಿಯಾದ ಭೂಮಿಯಲ್ಲಿ ಅನೇಕ ತಲೆಮಾರುಗಳು ಕಳೆದರೂ ನಾಶವಾಗದೆ ಮುಂದಿನ ಪೀಳಿಗೆಯನ್ನೇ ಅಂಗವಿಕಲರನ್ನಾಗಿ ಮಾಡುವ ಎಂಡೋ ಸಲ್ಫಾನ್ ಕೀಟನಾಶಕ ಬಳಕೆ ಅಷ್ಟು ಅವಶ್ಯವಾ?

     ಉತ್ತರ ಅಷ್ಟೊಂದು ಸುಲಭವಲ್ಲ. ರಾಸಾಯನಿಕ ಗೊಬ್ಬರಗಳು ಅನಿವಾರ್ಯವೇನಲ್ಲ, ಇನ್ನು ಮಲೆನಾಡಿನ ಹಲವು ಅಡಿಕೆ ಕೃಷಿಕರು ತಮ್ಮ ತೋಟಗಳಿಗೆ ಈವತ್ತಿನವರೆಗೂ ಕೊಟ್ಟಿಗೆ ಗೊಬ್ಬರವನ್ನು ಬಿಟ್ಟು ಯಾವ ರಾಸಾಯನಿಕ ಗೊಬ್ಬರವನ್ನೂ ತಮ್ಮ ತೋಟಗಳಿಗೆ ಒದಗಿಸಿಲ್ಲ, ಪೋಷಕಾಂಶದ ಕೊರತೆಯಿಂದ ಫಸಲಿನಲ್ಲಿ ಹಾನಿಮಾಡಿಕೊಂಡವರು ಕಡಿಮೆಯೇನಿಲ್ಲ. ಮಣ್ಣಿನ ಫಲವತ್ತತೆ ಮತ್ತು ಮಣ್ಣಿನಲ್ಲಿರುವ ಫೋಷಕಾಂಶಗಳ ಪರೀಕ್ಷೆಮಾಡಿ ಬೇಕಾದಷ್ಟೇ ಪ್ರಮಾಣದ ಲಘು ಫೋಷಕಾಂಶಗಳನ್ನು ಭೂಮಿಗೆ ಒದಗಿಸುವುದು ಹೆಚ್ಚೇನು ಹಾನಿಕಾರಕವಲ್ಲವೇನೋ ಅನ್ನಿಸುತ್ತದೆ.

     ಇಂದಿನ ಕೃಷಿಕರ ಪರಿಸ್ಥಿತಿಯಲ್ಲಿ ಎಲ್ಲವೂ ಸವಾಯವ ವಿಧಾನ ಅಥವಾ ಶೂನ್ಯ ಕೃಷಿ ಎಂದು ತೋಟದಲ್ಲಿ ಹುಟ್ಟಿರುವ ಕಳೆಯನ್ನೂ ತೆಗೆಸದೆ ಓಡಾಡಲೂ ಬಾರದಂತಹ ಪರಿಸ್ಥಿತಿಯ ನಿರ್ಮಾಣ ಎಷ್ಟು ಸರಿ? ಮೇಲೆ ತಿಳಿಸಿದಂತ ತೋಟಗಳನ್ನು ನೋಡಿದಾಗ ಬೇಸರವಾಗದೆ ಇರಲಾರದು, ಕೆಲಸಗಾರರ ಕೊರತೆ ಇದೆ ನಿಜ, ಆದರೆ ತೋಟ ಗದ್ದೆಗಳ ಕೆಲಸ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಖಂಡಿತಾ ಬಂದಿಲ್ಲ, ಬರುವುದೂ ಇಲ್ಲವೆನೋ.



     ಸಾವಯವ ಕೃಷಿ ಮಾಡಲು ಹೋಗಿ ಬೆಳೆಗೆ ಹಾನಿಯಾದರೆ ಸ್ವಲ್ಪ ಪ್ರಮಾಣದ ರಾಸಾಯನಿಕ ಔಷದಿ ಬಳಸಿದ್ದರೆ ಬೆಳೆಯನ್ನು ಉಳಿಸಿಕೊಳ್ಳಬಹುದಿತ್ತೇನೋ ಅನಿಸಿಬಿಡುತ್ತಲ್ಲಾ.ಕೃಷಿ ತಜ್ಞರ ಸಲಹೆ ಪಡೆದು ಸರಿಯಾದ ಪ್ರಮಾಣದ ರಾಸಾಯನಿಕ ಔಷದಗಳ ಬಳಕೆ ಸೂಕ್ತವೇನೋ ಅನ್ನಿಸುತ್ತದೆ.



     ಅಂದಹಾಗೆ ನಾವು ಅಡಿಕೆ ತೋಟಕ್ಕೆ ಕೋಲ್ಮನ್ ಹೇಳಿ ಹೋದ ಅದೇ ಅಪ್ಪ ಹಾಕಿದ ಆಲದಮರ ಎನ್ನುವ ಬೋರ್ಡೋ ಮಿಶ್ರಣ ಸಿಂಪರಣೆ ಮಾಡಿದರೂ ಅದು ಸಾವಯವ ಅನ್ನಿಸಿಕೊಳ್ಳಲಾರದು, ನಿಜ ಒಂದು ಪ್ರತಿಷತ ಪ್ರಮಾಣದಲ್ಲಿ ಬೋರ್ಡೋ ಮಿಶ್ರಣ ಸಿಂಪರಣೆ ಮಾಡಿದಲ್ಲಿ ಸಾವಯವ ಕೃಷಿಯಂತೆ ಪರಿಗಣಿಸುವ ರಿಯಾಯತಿ ಇದೆ, ಆದರೆ ಅದು ಕೂಡ ಸಂಪೂರ್ಣ ಸಾವಯವ ಅನ್ನಿಸಿಕೊಳ್ಳಲಾರದು, ನೆನಪಿರಲಿ, ಬಯೋ ಎಂದು ಬರೆದದ್ದೆಲ್ಲವೂ ಸಾವಯವ ಎಂದು ಪರಿಗಣಿಸಿದರೆ ನಮ್ಮಂತಹ ಮೂರ್ಖರು ಮತ್ತಾರು ಇರಲಾರರು. ಒಂದು ಪರ್ಸೆಂಟ್ ಪ್ರಮಾಣದಲ್ಲಿ ಬೋರ್ಡೋ ಬಳಸಿದರೆ ಕೊಳೆರೋಗ ನಿಯಂತ್ರಣ ಎಷ್ಟು ಮಟ್ಟಿಗೆ ಸಾಧ್ಯ?

    ನಾವು ಎಷ್ಟು ಜನ ಕೃಷಿಕರು ಸರಿಯಾದ ಪ್ರಮಾಣದಲ್ಲಿ ಬೋರ್ಡೋ ಮಿಶ್ರಣ ತಯಾರಿಸಿದ್ದೇವೆ? ಒಬ್ಬೊಬ್ಬರದ್ದು ಒಂದೊಂದು ರೀತಿ, ಒಬ್ಬರು ಒಂದು ಕೇಜಿ ಸುಣ್ಣ, ಎರೆಡು ಕೇಜಿ ಮೈಲು ತುತ್ತ, ಇನ್ನೊಬ್ಬರದು ಮೂರುಕೇಜಿ ಸುಣ್ಣ ಒಂದು ಕೇಜಿ ಮೈಲುತುತ್ತ, ಮಿಶ್ರಣ ಸರಿಯಾಗಿದೆಯಾ, ಪಿ ಹೆಚ್ ಎಷ್ಟು ಎಂದು ಲಿಟ್ಮಸ್ ಟೆಸ್ಟ್ ಮಾಡುವುದು ಹೇಗೆ ಎನ್ನುವುದು ನಮ್ಮಲ್ಲಿ ಅನೇಕರಿಗೆ ಗೊತ್ತಿದೆಯೊ ಇಲ್ಲವೊ ಒಂದು ವೇಳೆ ಗೊತ್ತಿದ್ದರೂ ಲಿಟ್ಮಸ್ ಪೇಪರುಗಳು ಸಿಕ್ಕೋದಿಲ್ಲ. ಮೂರು ನಾಲ್ಕು ಬಾರಿ ಬೊರ್ಡೊ ಮಿಶ್ರಣ ಸಿಂಪರಣೆ ಮಾಡಿದರೂ ಕೊಳೆರೋಗ ನಿಯಂತ್ರಣ ಸಾಧ್ಯವಾಗಿಲ್ಲ.

     ಇನ್ನು ಮಳೆ ಬರುತ್ತಿರುವಾಗ ಕೊಳೆ ಔಷದಿ ಸಿಂಪಡಿಸಿದರೆ ಅದರ ಪ್ರಯೋಜನವಾಗುತ್ತಾ? ಮಳೆ ನೀರಿನಲ್ಲಿ ಔಷದಿ ಪ್ರಮಾಣ ಕಡಿಮೆಯಾಗದೆ ಉಳಿಯಲು ಸಾಧ್ಯವೇ?

      ಅಜ್ಜ ಮುತ್ತಾತನ ಕಾಲದಿಂದಲೂ ಬೋರ್ಡೋ ಮಿಶ್ರಣವನ್ನು ಮಳೆ ಸುರಿಯುತ್ತಿದ್ದಾಗ, ಕೊಳೆಯ ಲಕ್ಷಣಗಳು ಕಂಡಾಗ ಹೊಡೆಯುವ ಪರಿಪಾಠ ಅಷ್ಟು ಸುಲಭವಾಗಿ ಬಿಡಲು ಆಗುತ್ತಿಲ್ಲ, ಯಾರು ಏನೇ ಹೇಳಿದರೂ ಅಜ್ಜ ಮುತ್ತಾತನ ಕಾಲದಿಂದಲೂ ಮಾಡಿದ್ದನ್ನು ಬದಲಾಯಿಸಿಕೊಳ್ಳುವುದು ಕಷ್ಟವೇ ಅಲ್ಲವೇ?

Friday, December 31, 2010

ಗುಝಾರಿಶ್(Guzaarish) -ಇದು ಬಿಡುಗಡೆಯ ಬೇಡಿಕೆ, ಒಮ್ಮೆ ಚಿತ್ರ ನೋಡಿ ಎಂಬ ನನ್ನ ಗುಝಾರಿಶ್

ಗುಝಾರಿಶ್, ಸಂಜಯ್ ಲೀಲಾ ಬನ್ಸಾಲಿಯವರ ಮತ್ತೊಂದು ಕಲಾತ್ಮಕ ಚಿತ್ರ, ಗುಝಾರಿಶ್ ಎಂದರೆ ಬೇಡಿಕೆ ಅಥವಾ ಕೋರಿಕೆ ಎನ್ನುವ ಅರ್ಥ ಕೊಡುತ್ತದೆ ಅದು ಹೃತಿಕ್ ರೋಷನ್ ನ ಕಣ್ಣುಗಳಲ್ಲಿಯೇ ವ್ಯಕ್ತಾವಾಗಿ ಹೋಗುತ್ತೆ.

ಇದೊಂದು ಸಂಜಯ್ ಲೀಲಾ ಬನ್ಸಾಲಿಯವರ ದೃಶ್ಯಕಾವ್ಯ ಎಂದರೆ ತಪ್ಪಾಗಲಾರದು, ಇಲ್ಲಿ ಪಾತ್ರದ ಭಾವನೆಗಳಿಗೆ ಹೆಚ್ಚಿನ ಮಹತ್ವವಿದೆ, ಅದ್ಯಾಕೋ ಗೊತ್ತಿಲ್ಲ ಇಂದ್ರಜಾಲ ಅಥವಾ ಮ್ಯಾಜಿಕ್ ಶೋ ಗಳು ನನಗೆ ತುಂಬಾ ಇಷ್ಟವಾಗಿಬಿಡುತ್ತದೆ, ಕಣ್ಣು ಇಷ್ಟೆಲ್ಲಾ ಮೋಸ ಹೋಗುತ್ತಲ್ಲಾ ಅಂತಲೂ ಇರಬಹುದೇನೋ? ಅದೇನೋ ಒಂತರಾ ಖುಷಿ.

ಕಥಾನಾಯಕ ಈಥನ್ ಮಾಸ್ಕರೇನಸ್ (ಹೃತಿಕ್ ರೋಷನ್), ಒಂದು ಕಾಲದಲ್ಲಿ ಅದ್ಬುತ ಇಂದ್ರಜಾಲಿಗನಾಗಿ ಹೆಸರುಗಳಿಸುತ್ತಾನೆ, ಅದನ್ನು ಸಹಿಸದ ಆತನ ಗೆಳೆಯೆನೊಬ್ಬ ಈಥನ್ ನ ಅತಿ ಜನಪ್ರಿಯ ಕಾಂಡಲ್ ಲೈಟ್ ಟ್ರಿಕ್ ನಲ್ಲಿ ಗಾಳಿಯಲ್ಲಿ ತೇಲುತ್ತಿರುವಾಗ ಕ್ರೇನ್ ನ ತಂತಿಯನ್ನು ಕತ್ತರಿಸುವಂತೆ ಮಾಡಿ ಈಥನ್ ನ ಬೆನ್ನು ಮೂಳೆಗೆ ಪೆಟ್ಟು ಬಿದ್ದು ಪ್ಯಾರಲೈಸ್(ಪಾರ್ಶ್ವವಾಯು) ಆಗುವಂತಹ ಕ್ರೂರ ಕೃತ್ಯವನ್ನೆಸಗುತ್ತಾನೆ.ಈಥನ್ ಬೀಳುವ ದೃಶ್ಯ ಕಣ್ಣು ಮಂಜಾಗಿಸುತ್ತದೆ, ಕುತ್ತಿಗೆಯ ಮೇಲ್ಬಾಗ ಮಾತ್ರವೇ ಸ್ಪರ್ಶ ಜ್ಞಾನ ಮತ್ತು ಚಲಿಸಲು ಸಾಧ್ಯವಾಗುತ್ತದೆ, ಹೃತಿಕ್ ನ ಆಕರ್ಷಕ ಬಿಳಿ ಕಣ್ಣು ದೃಶ್ಯಕ್ಕೆ ಇನ್ನೊಂದಿಷ್ಟು ಭಾವನೆಗಳನ್ನು ತುಂಬಿದೆ ಅನ್ನಿಸುತ್ತೆ ಇಡೀ ಚಿತ್ರದ ಛಾಯಾಗ್ರಹಣ ಅದ್ಬುತ.

     ಬದುಕಿ ತೋರಿಸಬೇಕೆಂಬ ಛಲದಿಂದ ಹನ್ನೆರೆಡು ವರ್ಷಗಳನ್ನು ಕಳೆಯುವ ಈಥನ್ ಗೆ ನರ್ಸ್ ಆಗಿ ತೆರೆಯ ಮೇಲೆ ಆವರಿಸಿಕೊಳ್ಳುವುದು ಸೋಫಿಯಾ ಎನ್ನುವ ಚಲುವೆ, ಬರೀ ಚಲುವೆಯಲ್ಲ ಹಿಂದಿಚಿತ್ರರಂಗದ ಮೇರುತಾರೆ ಬಚ್ಚನ್ ಕುಟುಂಬದ ಸೊಸೆ ಐಶ್ ಬೇಬಿ, ಐಶ್ವರ್ಯ ರೈ, ನರ್ಸಗಳೆಲ್ಲಾ ಇಷ್ಟು ಸುಂದರವಾಗಿದ್ದರೆ ಅವರನ್ನು ಸಿಸ್ಟರ್ ಅಂತ ಕರೆಯೋದು ತುಂಬಾ ಕಷ್ಟಾವಾಗಿಬಿಡುತ್ತಿತ್ತೇನೋ ಅನ್ನುವಷ್ಟು ಸುಂದರವಾಗಿ ಕಾಣಿಸುತ್ತಾಳೆ. ಚಿತ್ರದ ಒಂದು ದೃಶ್ಯದಲ್ಲಿ ಹೃತಿಕ್ ಸಹ ಹೇಳುತ್ತಾನೆ ನಾನು ಈಕೆಯನ್ನು ಸಿಸ್ಟರ್ ಎಂದು ಕರೆಯಲು ಸಾದ್ಯವಾಗದಷ್ಟು ಅಂದಗಾತಿ ಎಂದು!.



     ಹಾಸಿಗೆ ಹಿಡಿದ ಹನ್ನೆರೆಡು ವರ್ಷಗಳಲ್ಲಿ ಈಥನ್ ರೇಡಿಯೋ ಜಾಕಿಯಾಗಿ "ರೇಡಿಯೋ ಜಿಂದಗಿ" ಎನ್ನುವ ಕಾರ್ಯಕ್ರಮದ ಮೂಲಕ ಲಕ್ಷಾಂತರ ಕೇಳುಗರ ಬದುಕಿನ ಆಶಾಕಿರಣವಾಗಿ ಬದುಕುವ ನಾಯಕನಿಗೆ ಬದುಕಿದ್ದು ಸಾಕು ಎನಿಸಲು ಆರಂಭವಾಗಿಬಿಡುತ್ತದೆ, ತನ್ನ ಅಸಹಾಯಕತೆಯನ್ನು ಸೋಫಿಯಾಳೊಂದಿಕೆ ತೋಡಿಕೊಳ್ಳುತ್ತಾನೆ, ಸಿಟ್ಟುಬಂದಾಗ ತನ್ನಿಂದ ಸಿಟ್ಟನ್ನು ವ್ಯಕ್ತಪಡಿಸಲು ಅಸಾಧ್ಯವೆನಿಸುತ್ತದೆ, ಮೂಗಿನ ಮೇಲೆ ಕುಳಿತ ನೊಣವನ್ನು ಸಹ ಬೆರೆಸುವುದು ಸಾಧ್ಯವಾಗದೇ ಹೋದಾಗ ಕಣ್ಣುಗಳಲ್ಲಿ ನೋವು ಮುಖದಲ್ಲಿ ನಗು ಬರುವ ದೃಶ್ಯ ಅದ್ಬುತವಾಗಿ ಮೂಡಿಬಂದಿದೆ. ದೋ ಎಂದು ಸುರಿಯುವ ಮಳೆ ಆರಂಭವಾದಾಗ ಮಾಳಿಗೆ( ಸೂರು)ಯಿಂದ ತೊಟ್ಟಿಕ್ಕುವ ಮಳೆ ಹನಿ ಈಥನ್ ನ ಮುಖದ ಮೇಲೆ ಬೀಳಲಾರಂಬಿಸುತ್ತದೆ ಮೊದಲ ನಾಲ್ಕು ಹನಿಗಳು ಆತನಿಗೆ ಖುಷಿ ನೀಡುತ್ತದೆ, ನನ್ನೊಂದಿಗೆ ಯುದ್ದಕ್ಕೆ ಬರುತ್ತೀಯಾ ಬಾ ಎಂದು ಹೇಳುತ್ತಾನೆ ಆ ನಂತರ ಅದು ಕಿರಿಕಿರಿ ನೀಡಲು ಆರಂಭವಾಗುತ್ತದೆ, ರಾತ್ರಿ ಸಮಯವಾದ್ದರಿಂದ ಸೂಫಿಯಾ ತನ್ನ ಮನೆಗೆ ತೆರಳಿರುತ್ತಾಳೆ, ಯಾರೂ ಸಹಾಯಕ್ಕೆ ಬರದೇ ಬೆಳಗ್ಗೆ ಸೋಫಿಯಾ ಬರುವ ತನಕವೂ ಅದೇ ಕಿರಿಕಿರಿ ಅನುಭವಿಸುವ ದೃಶ್ಯಗಳು ಮನ ಕಲಕುವಂತಿದೆ, ಹದಿನಾಲ್ಕು ವರ್ಷಗಳ ಕಾಲ ಯಾವುದೇ ಬೇಸರವಿಲ್ಲದೆ ತನ್ನ ಸೇವೆಮಾಡಿದ ಚಲುವೆಗೆ ಹೂಗುಚ್ಚದ ಗಡಿಗೆಯ(Flower Pot)ನ್ನು ಗೋಡೆಗೆ ಎಸೆಯುವಂತೆ ಹೇಳುತ್ತಾನೆ, ತನಗೆ ಸಿಟ್ಟನ್ನು ವ್ಯಕ್ತ ಪಡಿಸೋಕು ಆಗದ ಪರಿಸ್ಥಿತಿ ಎಂದು ನೋವನ್ನು ಮಾತಿನ ಮೂಲಕ ವ್ಯಕ್ತಪಡಿಸುತ್ತಾನೆ.

     ರೇಡಿಯೋ ಪ್ರೊಡ್ಯೂಸರ್ ಎಂದು ಸುಳ್ಳು ಹೇಳಿ ಮ್ಯಾಜಿಕ್ ಕಲಿಯಲು ಬಂದ ಓಮರ್ ಸಿದ್ದಗಿ(ಆದಿತ್ಯ ರಾಯ್ ಕಪೂರ್) ಸಿಕ್ಕಿ ಬೀಳುತ್ತಾನೆ, ತಾನು ಚಿಕ್ಕಂದಿನಲ್ಲಿ ನಿಮ್ಮಿಂದ ಪಡೆದ ಆಟೋಗ್ರಾಫ್ ಇಟ್ಟುಕೊಂಡಿದ್ದೇನೆ, ಮೆಜಿಷಿಯನ್ ಆಗೋದು ತನ್ನ ಮಹದಾಸೆ ಎಂದಾಗ, ನಾಯಕ ತಾನು ಕಲಿತ ಇಂದ್ರಜಾಲ(ಮ್ಯಾಜಿಕ್) ತನ್ನೊಂದಿಗೆ ಮಣ್ಣಾಗಬಾರದೆನ್ನುವ ಉದ್ದೇಶದಿಂದ ತನಗೆ ಈ ಪರಿಸ್ಥಿತಿಗೆ ತಂದ ಗೆಳೆಯನ ಮಗನೆಂದು ಗೊತ್ತಿದ್ದೂ ಸಂಪೂರ್ಣವಾದ ವಿದ್ಯೆ ಧಾರೆ ಎರೆಯುತ್ತಾನೆ.

     ಕಾನೂನಿನ ಸಲಹೆಗಾರ್ತಿಯಾಗಿ, ಮನೆಯ ಒಬ್ಬ ಸದಸ್ಯೆಯಂತೆ ಇರುವ ದೇವಯಾನಿ(ಶೆಹೆನಾಝ್)ಯ ಮೂಲಕ ಇಚ್ಛಾಮರಣಕ್ಕೆ ಕೋರ್ಟಗೆ ಅರ್ಜಿ ಹಾಕಿ ವಾದಿಸಿವುಂತೆ ಕೇಳಿಕೊಳ್ಳುತ್ತಾನೆ, ಅದಕ್ಕೆ ಒಪ್ಪದೆ ನಿನಗೆ ಸಾಯುವಂತಹದ್ದೇನಾಗಿದೆ ಎಂದಾಗ ಬದುಕಿದ್ದು ಏನು ಮಾಡಲು ಸಾಧ್ಯ, ನಿನ್ನ ಸಂಬಳ ನಿನ್ನ ಕೈ ಸೇರುತ್ತೆ ವಾದ ಮಾಡು ನೀನು ನನ್ನ ಲಾಯರ್ ಮಾತ್ರ ಎಂದು ಸಿಡುಕುವ ನಾಯಕನಿಂದ ಸಿಟ್ಟೆದ್ದು ದೇವಯಾನಿ ಇನ್ನೇನಾದರೂ ಬೇಕಾ ಎಂದಾಗ ಆತ ಹೇಳುವ ಮಾತು ತನಗೆ ಸುಂದರವಾದ ಹೆಣ್ಣು ಬೇಕು ಎನ್ನುವ ಮಾತುಗಳು ಆತನ ಅಸಾಹಾಯಕತೆಯ ಬಗ್ಗೆ ಸೂಚ್ಯವಾಗಿ ಹೇಳಿಕೊಳ್ಳುವ ಅದ್ಬುತ ವಾಕ್ಚಾತುರ್ಯದ ಸೀನುಗಳು,

     ಓಮರ್ ಹಾಸಿಗೆ ಸರಿಮಾಡಲೆಂದು ಈಥನ್ ನನ್ನು ಎತ್ತಿ ಕೂರಿಸಿ ಗೊತ್ತಾಗದೆ ಕೈ ಬಿಟ್ಟಾಗ ನೆಲಕ್ಕೆ ಬಿದ್ದಾಗ ಆತನನ್ನು ಎತ್ತಲಾಗದೆ ಸೋಫಿಯಾಳನ್ನು ಕೂಗಿ ಕರೆದಾಗ ಓಡಿ ಬಂದು ಎತ್ತಿ ಮಲಗಿಸುತ್ತಾಳೆ, ಆಗ ನಾಯಕ ಅವಳಿಗೆ ಹೇಳುತ್ತಾನೆ ಎಂತಾ ದುರಂತವಾಗಿ ಹೋಯಿತು, ಎಷ್ಟೇ ಪ್ರಯತ್ನ ಪಟ್ಟರೂ ನಿನ್ನ ಕಾಲುಗಳು ಕಾಣಲೇ ಇಲ್ಲ ಎಂದು, ಐಶ್ ಬೇಬಿ ಚಿತ್ರದುದ್ದಕ್ಕೂ ಉದ್ದ ಗೌನ್ ತೊಟ್ಟೇ ಓಡಾಡುತಾಳೆ, ನೀನು ಮಿನಿ ಸ್ಕರ್ಟ್ ಹಾಕಿಕೊಂಡು ಓಡಾಡಿದಾಗ ನಿನ್ನ ಸುಂದರ ಕಾಲುಗಳನ್ನು ನಾನು ನೋಡಿದಂದು ನಾನು ಮತ್ತೆ ನೆಡೆಯಲಾರಂಭಿಸಿಬಿಡುತ್ತೇನೆ ಎಂದು ಹಾಸ್ಯದ ಚಟಾಕಿ ಹಾರಿಸುವ, ತುಸು ಹೆಚ್ಚೆನಿಸುವ ಇಂಗ್ಲೀಷ್ ಭಾಷೆ ಬಳಸಲಾಗಿದೆ ಎಂದುಕೊಳ್ಳುವಾಗಲೇ ಹೃತಿಕ್ ಮಾತಿನ ಶೈಲಿ ಇಷ್ಟಾಗಿಬಿಡುತ್ತೆ!

     ಮುಂದೆ ಈಥನ್ ನ ಡಾಕ್ಟರ್ ನಾಯಕ್(ಸುಹೇಲ್ ಸೇಟ್)ಗೆ ದೇವಯಾನಿ ಈಥನ್ ಇಚ್ಛಾಮರಣದ ಇಂಗಿತ ವ್ಯಕ್ತ ಪಡಿಸಿದ್ದಾನೆಂದು ಹೇಳುತ್ತಾಳೆ, ನಂತರ ಡಾಕ್ಟರ್ ಕೂಡಾ ಮನ ಪರಿವರ್ತನೆಗೆ ಪ್ರಯತ್ನಿಸಿದಾಗ ಈಥನ್ ಕೇಳುವ ಪ್ರಶ್ನೆಗಳಿಗೆಲ್ಲಾ ಡಾಕ್ಟರ್ ಇಲ್ಲಾ ಎನ್ನುವ ಉತ್ತರವನ್ನಷ್ಟೇ ನೀಡಬೇಕಾಗುತ್ತದೆ.

ದೇವಯಾನಿಗೆ ಈಥನ್ ನೋವಿನ ಅರಿವಾಗಿ ಯುಥನೇಶಿಯಾ( ಇಚ್ಛಾ ಮರಣ)ದ ಅರ್ಜಿಯನ್ನು ಕೋರ್ಟ್ ನಲ್ಲಿ ಹಾಕುತ್ತಾಳೆ,ರೇಡಿಯೋ ಮೂಲಕ ನಿನ್ನೆಲ್ಲಾ ಕೇಳುಗರ ಒಗ್ಗಟ್ಟು ಸಂಪಾದಿಸುವ ಮೂಲಕ ನಿನ್ನ ಕೋರಿಕೆಯನ್ನು ಜಡ್ಜ್ ನಿರಾಕರಿಸಲಾಗದಷ್ಟು ಮಾಡು ಎಂದು ಸಲಹೆ ನೀಡುತ್ತಾಳೆ, ಪ್ರೊಜೆಕ್ಟ್ ಇಥನೇಶಿಯಾ(ಯುಥನೇಶಿಯಾ) ಕಾರ್ಯಕ್ರಮದಲ್ಲಿ ಮಾತಾಡುವ ದೃಶ್ಯಗಳನ್ನು ನೋಡಿದರೇ ಚೆನ್ನ. ವಾದ ಆರಂಭವಾದಾಗ ಪ್ರತಿವಾದಿ ಲಾಯರ್ ವಿರೋಧ ವ್ಯಕ್ತಪಡಿಸುವ ದೃಶ್ಯಗಳು, ಜಡ್ಜ್ ಈಥನ್ ನ ಮನೆಗೇ ಬಂದು ವಾದ ವಿವಾದಗಳನ್ನು ಆಲಿಸುವ, ನೀವೇನು ಹೇಳಲು ಇಚ್ಚಿಸುತ್ತೀರಿ ಎಂದು ನಾಯಕನನ್ನು ಕೇಳಿದಾಗ ನಾನೊಂದು ಮ್ಯಾಜಿಕ್ ತೋರಿಸುತ್ತೇನೆ ಯುವರ್ ಆನರ್ ಎಂದು, ಪೆಟ್ಟಿಗೆಯೊಳಕ್ಕೆ ಅರವತ್ತು ಸೆಕೆಂಡು ಇರುವಂತೆ ಪ್ರತಿವಾದಿ ಲಾಯರ್ ಗೆ ಹೇಳಿದಾಗ ಅದರೊಳಗಿದ್ದ ಲಾಯರ್ ಅಲ್ಲಿರಲಾರದೆ ಪೆಟ್ಟಿಗೆಯೊಳಗಿಂದಲೇ ಬಾಗಿಲು ಬಡಿಯುವ, ನಂತರ ಇಂತ ಕಿರುದಾದ ಪೆಟ್ಟಿಗೆಯಲ್ಲಿ ಉಸಿರುಗಟ್ಟುತ್ತೆ, ಅಲುಗಾಡಲೂ ಸಾಧ್ಯವಿಲ್ಲ ಎಂದಾಗ ನೀವು ನನ್ನ ಜೀವನದ ಅರವತ್ತು ಸೆಕೆಂಡ್ ಗಳನ್ನು ಕೆಳೆಯಲು ಸಾಧ್ಯವಿಲ್ಲ ಎಂದಾಯಿತು, ಇದೇ ನನ್ನ ಪರಿಸ್ಥಿತಿ ಎಂದು ಹೇಳುವ ಸೀನುಗಳು ಇಷ್ಟವಾಗುತ್ತೆ.

ಮುಂದೆ ಏನಾಯಿತು? ಜಡ್ಜ್ ನಾಯಕನ ಪರವಾಗಿ ತೀರ್ಪು ಕೊಡುತ್ತಾರಾ? ಸೋಫಿಯಾ ಗಂಡನಿಂದ ಡೈವೋರ್ಸ್ ಪಡೆಯುತ್ತಾಳ! ಸೋಫಿಯಾಳ ಗಂಡನ ಬಗೆಗಿನ ನಾನು ಹೇಳಲೇ ಇಲ್ಲ ಬೇಕಂತಲೇ!,ನಾಯಕ ನಾಯಕಿಯ ಮಧ್ಯೆ ಅದೊಂತರಾ ಸರಿ ಬರೋಲ್ಲ ;) ಎಷ್ಟೇ ಕಥೆ ಹೇಳಿದರೂ ಕೆಲವೊಂದು ವಿಚಾರಗಳು ಬಿಟ್ಟು ಹೋಗಿರುತ್ತದೆ, ಪೂರ್ತಿ ಕಥೆಯನ್ನು ನಾನೇ ಹೇಳಿದರೆ ಚಿತ್ರ ಇಷ್ಟೇನಾ ಅನ್ನಿಸಿಬಿಡಬಹುದು. ಇಲ್ಲಿ ಬರೆದದ್ದೆಲ್ಲಾ ಸಂಕಲನಕಾರ ನೋಡಿದರೆ ಬೈಯ್ಯುವ ಸಾಧ್ಯತೆ ಇಲ್ಲದಿಲ್ಲ, ನನಗೆ ನೆನಪಾದಂತೆಲ್ಲಾ ಬರೆದಿದ್ದೇನೆ, ಒಂದು ಆರ್ಡರ್ ಅಂತ ಇರುತ್ತಲ್ಲಾ ಅದು ಇಲ್ಲಿ ಮಿಸ್ಸಾಗಿ ಹೋಗಿದೆ!

ಕೆಲವು ಚಿತ್ರಗಳನ್ನು ನೋಡಿದಾಗ ಚಿತ್ರ ಎಷ್ಟು ಚನ್ನಾಗಿದೆ ಅನ್ನಿಸಿಬಿಡುತ್ತೆ, ಆದರೆ ಮನೋರಂಜನೆಗಾಗಿ ಥಿಯೇಟರಿಗೆ ಬರುವ ಪ್ರೆಕ್ಷಕನಿಗೆ ಅದೇ ನೋವು ಕಣ್ಣಿರು ಕರುಳಿನ ಕಥೆಗಳೆಲ್ಲಾ ದಿನನಿತ್ಯ ನೋಡಿ ಇಷ್ಟಾ ಅಗೋದೆ ಕಷ್ಟ, ಇಂತಹುದೇ ಕಾರಣಕ್ಕೆ ಸಿನಿಮಾ ಗೆದ್ದಿದ್ದೆ ಸೋತಿದೆ ಎಂದು ಪಟ್ಟಿಮಾಡೋದು ಅಸಾಧ್ಯದ ಕೆಲಸವೇ ಸರಿ.ಸಂಜಯ್ ಲೀಲಾ ಬನ್ಸಾಲಿ ಚಿತ್ರ ಅಂತಲೇ ಚಿತ್ರ ನೋಡೋಕೆ ಹೋದವರಿಗೆ ಚಿತ್ರ ಅದ್ಬುತವಾಗಿದೆ ಅನ್ನಿಸದೇ ಇರಲಾರದು. ಹಾಡುಗಳು ಕೇಳಲು ನೋಡಲು ಚನ್ನಾಗಿದೆ.
ನೋಡಿ ಅನಿಸಿಕೆ ಹೇಳ್ತೀರಾ ಅಲ್ವಾ?.

ಇನ್ನೇನು ಕೆಲವೇ ಘಂಟೆಗಳಲ್ಲಿ ಹೊಸ ವರ್ಷ ಆರಂಭವಾಗಿಬಿಡುತ್ತೆ.. ಹೊಸ ವರುಷ ಹೊಸ ಹರುಷ ತರಲಿ ಎಂದು ಹಾರೈಸುತ್ತೇನೆ,ಹೊಸ ವರುಷದ ಹಾರ್ದಿಕ ಶುಭಾಶಯಗಳು.

Tuesday, October 12, 2010

ನಂಬರ್ ಪೋರ್ಟೆಬಿಲಿಟಿ (ಸೇವೆ ಬದಲಾಯಿಸಿದರೂ ಮೊಬೈಲ್ ನಂಬರ್ ಬದಲಾಗೋಲ್ಲ)

ಜಂಗಮವಾಣಿ ಅಥವಾ ಸಂಚಾರಿ ದೂರವಾಣಿ ಅರ್ತಾಥ್ ಮೊಬೈಲ್ ಇಟ್ಟುಕೊಳ್ಳದವರು ಅತಿ ವಿರಳ, ಹೆಚ್ಚಿನ ಜನರ ಜೇಬಿನಲ್ಲಿ ಬೆಚ್ಚಗೆ ಕುಳಿತಿರುವ, ಸೊಂಟದ ಪಟ್ಟಿಯಲ್ಲಿ ಅಡಗಿರುವ, ಮಹಿಳಾಮಣಿಗಳ ತರಾವರಿ ಕೈ ಚೀಲಗಳಲ್ಲಿ, ಕತ್ತಿನಲ್ಲಿ ಕತ್ತಿನಹಾರವಾಗಿ, ಕೋಮಲ ಕೈಗಳ ನಡುವೆ ಹುದುಗಿರುವ ಈ ಪುಟಾಣಿ ಯಂತ್ರದಲ್ಲಿ ಏನಿದೆ ಏನಿಲ್ಲ, ಎಲ್ಲವೂ ಇದೆ, ಕಾಸಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ಜಂಗಮವಾಣಿ ಇಲ್ಲದೇ ಜೀವನ ಸಾಗೋದೆ ಇಲ್ಲ.. ಮೊಬೈಲ್ ಇಲ್ಲದ ದಿನ ಅದೇನೋ ಕಳೆದುಕೊಂಡ ಅನುಭವ.


ಮೊಬೈಲ್ ಬಳಕೆದಾರರು ಆಸೆ ಕಣ್ಗಳಿಂದ ಕಾಯುತ್ತಿರುವುದು ನಂಬರ್ ಪೋರ್ಟೆಬಿಲಿಟಿ ಸೇವೆಗೋಸ್ಕರ,ಏನಿದು ನಂಬರ್ ಪೋರ್ಟೆಬಿಲಿಟಿ? ಈಗಿರುವ ಮೊಬೈಲ್ ಸಂಖ್ಯೆಯನ್ನು ಬದಲಾಯಿಸದೇ ಮತ್ತೊಂದು ಕಂಪನಿಯ ಸೇವೆ ಪಡೆಯಬಹುದಾದ ಸೇವೆಯ ಹೆಸರು ಮೊಬೈಲ್ ನಂಬರ್ ಪೋರ್ಟೆಬಿಲಿಟಿ. ಈ ಸೇವೆಯೊಂದು ಚಾಲನೆಗೆ ಈ ತನಕ ಬಾರದೇ ಇದ್ದದ್ದು ಮೊಬೈಲ್ ಬಳಕೆದಾರರ ಪಾಲಿಗೆ ಬಿಸಿ ತುಪ್ಪವಾಗಿತ್ತು, ಈಗ ಬಳಸುತ್ತಿರುವ ಮೊಬೈಲ್ ಕಂಪನಿಯ ಸೇವೆಗಿಂತ ಉತ್ತಮ ಸೇವೆ ಇದ್ದರೂ ಸಹ ನಂಬರ್ ಬದಾಲಾಗುತ್ತದೆ ಎನ್ನುವ ಕಾರಣ ಮತ್ತೊಂದು ಕಂಪನಿಯ ಉತ್ತಮ ಸೇವೆ ಪಡೆಯಲು ಸಧ್ಯವಾಗುತ್ತಿರಲಿಲ್ಲ, ನಂಬರ್ ಪೋರ್ಟೆಬಿಲಿಟಿ ಎಂದರೆ ಸೇವಾಧಾತ ಬದಲಾದರೂ ಮೊಬೈಲ್ ನಂಬರು ಬದಾಲಗುವುದಿಲ್ಲ, ನಮ್ಮ ದೇಶದಲ್ಲಿ ಅಕ್ಟೋಬರ್ ೩೧ರ ನಂತರ ನಂಬರ್ ಪೋರ್ಟೆಬಿಲಿಟಿ ಅನುಷ್ಟಾನಕ್ಕೆ ಬರುವ ಲಕ್ಷಣಗಳು ಕಾಣಿಸುತ್ತಿದೆ, ಅದೇನಾದರು ನಿಜವಾದರೆ ನೀವು ಯಾವ ಕಂಪನಿಯ ಸೇವೆಯನ್ನು ಬೇಕಾದರೂ ಪಡೆದುಕೊಳ್ಳಬಹುದು ನಂಬರ್ ಬದಲಾಗುವುದಿಲ್ಲ. ಸೇವೆಯ ಬದಲಾವಣೆಯ ಗರಿಷ್ಟ ಶುಲ್ಕ ೧೯ ರೂಪಾಯಿ ಮೀರುವಂತಿಲ್ಲ. ಕಾದು ನೋಡಬೇಕಾಗಿದೆ



ಮೊಬೈಲ್ ಇದ್ದ ಮೇಲೆ ಮೊಬೈಲ್ ಹೊಟ್ಟೆಗೆ ಹಾಕಲೇ ಬೇಕಲ್ವಾ.. ದುಡ್ಡಿಲ್ಲದೆ ಹೋದರೆ ಮೊಬೈಲ್ ಇದ್ದೂ ಇಲ್ಲದಂತೆಯೇ ಸರಿ, ನಮಗೆ ಬೇಕಾದ ಸಂದರ್ಭಗಳಲ್ಲಿ ಕೈ ಕೊಡೋದೆ ಇದರ ಜಾಯಮಾನ, ಒಮ್ಮೊಮ್ಮೆ ಉಪಕಾರಕ್ಕಿಂತ ಉಪದ್ರ ಕೊಡೋಕೆ ಇದೆಯೇನೋ ಅನ್ನಿಸದೇ ಇರದು. ನೂರಕ್ಕೆ ತೊಂಬತ್ತು ಜನರಿಗೆ ಮೊಬೈಲ್ ಸೇವೆಯಿಂದ ಕಿರಿಕಿರಿ ಇದ್ದೆ ಇರುತ್ತೆ, ಗ್ರಾಹಕ ಸೇವಾಕೇಂದ್ರಕ್ಕೆ ವಾರಕ್ಕೆ ಒಮ್ಮೆಯಾದರೂ ದೂರು ನೀಡದೇ ಹೋದರೆ ಮೊಬೈಲ್ ಬಳಸಲು ಅಸಾದ್ಯ ಎನ್ನುವ ಪರಿಸ್ಥಿತಿಯಲ್ಲಿ ಮೊಬೈಲ್ ಕಂಪನಿಗಳ ಗ್ರಾಹಕ ಸೇವಾಕೇಂದ್ರಕ್ಕೆ ಮಾಡುವ ಕರೆಯಲ್ಲಿ ಸ್ವಯಂ ಚಾಲಿತ ದ್ವನಿ ಕೇಳಲು ಯಾವುದೇ ಶುಲ್ಕವಿಲ್ಲ, ಗ್ರಾಹಕ ಸೇವಾ ಕೇಂದ್ರದ ಪ್ರತಿನಿದಿಯೊಂದಿಗೆ ಮಾತನಾಡಲು ಶುಲ್ಕ ತೆರಬೇಕಾಗಿದೆ. ಕಳಪೆ ಸೇವೆಯ ಜೊತೆ ಮಾಹಿತಿ ಕೇಳೋಣವೆಂದರೆ ಅದಕ್ಕೂ ಶುಲ್ಕ ತೆತ್ತು, ಲೈನ್ ನಲ್ಲೇ ಇರಿ ಎಂದು ಎಂಟು ಹತ್ತು ನಿಮಿಷ ಕಾಯಿಸಿ ಸರಿಯಾದ ಮಾಹಿತಿ ಸಿಗದೇ ಹೋದರೆ ಏನು ಮಾಡೋದು?, ಇನ್ನು ಕೆಲವು ದಿಗ್ಗಜ ಮೊಬೈಲ್ ಕಂಪನಿಗಳು ಎಲ್ಲವೂ ತಮ್ಮ ಮುಷ್ಟಿಯಲ್ಲೇ ಇದೆ ಎಂದು ತಮಗೆ ಬೇಕಾದಂತೆ ಆಡುತ್ತಿವೆ, ದುಡ್ಡು ಕಡಿತವಾದ ಅಥವಾ ಇನ್ಯಾವುದೇ ದುಡ್ಡು ಕಳೆದುಕೊಂಡ ಮೂರು ದಿನದ ನಂತರ ದೂರು ನೀಡಿದರೆ ನಮ್ಮಲ್ಲಿ ಮೂರು ದಿನದ ಹಿಂದಿನ ಮಾಹಿತಿ ಲಭ್ಯವಿಲ್ಲ ಎನ್ನುವ ಉತ್ತರ ದೊರೆಯುತ್ತದೆ, ಜೊತೆಗೆ ದುಡ್ಡು ಕಳೆದುಕೊಂಡ ತಕ್ಷಣವೇ ಕರೆ ಮಾಡಿದಲ್ಲಿ ನಮ್ಮಲ್ಲಿ ಮಾಹಿತಿ ಇನ್ನೂ ಅಪ್ಡೇಟ್ ಆಗಿಲ್ಲ ೨೪ ಗಂಟೆಗಳ ನಂತರ ಸಂಪರ್ಕಿಸಿ ಎನ್ನುವ ಉತ್ತರ ಸಿಗೋದು ಗ್ಯಾರಂಟಿ.



ಟ್ರಾಯ್(ಟೆಲಿಕಾಂ ಅಥಾರಿಟಿ ಆಫ್ ಇಂಡಿಯಾ) ಹಿಡಿತದಲ್ಲಿದ್ದ ಮೊಬೈಲ್ ಕಂಪನಿಗಳ ಮೂಗುದಾರವನ್ನು ಸ್ವಲ್ಪ ಸಡಿಲಿಸಿಕೊಂಡಿವೆ, ಮೂಗುದಾರವನ್ನು ಎಳೆಯುವ ಕೆಲಸವನ್ನು ಟ್ರಾಯ್ ಮಾಡಬೇಕಾಗಿದೆ.

Monday, July 19, 2010

ಏನಿದು ಎಡೆ ಶೃಂಗಾರ?

     ನಾನು ಬ್ಲಾಗ್ ಮನೆಯ ಬಾಗಿಲು ತೆರೆಯದೇ ಅನೇಕ ತಿಂಗಳುಗಳೇ ಕಳೆದು ಹೋಗಿವೆ, ಮನೆಯ/ಮನದ ಅಂಗಳದೊಳಗೆ ಧೂಳು ಕಾಲಿಗೆ ಮೆತ್ತಿಕೊಂಡ ಅನುಭವ, ಸುತ್ತಲೂ ಜೇಡ ಬಲೆ ಹೆಣೆದ ಹಾಗೆ ಭ್ರಮೆಯೋ ವಾಸ್ತವವೋ ಗೊತ್ತಾಗುತ್ತಿಲ್ಲ!, ಈಗ ನಾನು ಮನೆ/ಮನದಂಗಳವನ್ನು ಚೊಕ್ಕವಾಗಿಸಿ, ದೂಳು ಜೇಡರ ಬಲೆಯನ್ನು ತೊಲಗಿಸಿ, ಹೊಸ ಹುಮ್ಮಸ್ಸಿನಿಂದ ನನ್ನ ಬ್ಲಾಗ್ ಮನೆಯ ಅಂಗಳಕ್ಕೆ ನಿಮ್ಮನ್ನು ಆಮಂತ್ರಿಸುತ್ತಿದ್ದೇನೆ, ಎಡೆ ಶೃಂಗಾರ ಎನ್ನುವುದರ ಬಗ್ಗೆ ಬರೆದಿದ್ದೇನೆ ಇಷ್ಟವಾಗಬಹುದು ಅನಿಸುತ್ತಿದೆ, ಓದಿ ನೋಡಿ

     ಎಡೆ ಶೃಂಗಾರ ಎನ್ನುವ ಪದ ಹಳ್ಳಿಗಳಲ್ಲಿ ಬಳಕೆಯಲ್ಲಿರುವುದು ಅದೂ ಅಲ್ಲದೆ ವಿಶೇಷವಾಗಿ ಕಾರ್ಯದ ಮನೆಯಲ್ಲಿ ಹೆಚ್ಚಿಗೆ ಬಳಕೆಯಲ್ಲಿರುವುದು ಅತ್ಯಂತ ಸಂತೋಷ ಕೊಡುವ ವಿಚಾರವಾಗಿದೆ. ಎಡೆ ಎಂದರೆ ಬಾಳೆ ಎನ್ನುವ ಅರ್ಥಕೊಡುತ್ತದೆ, ಶೃಂಗಾರ ಎಂದರೆ ಸಿಂಗರಿಸುವುದು, ಬಾಳೆ ಎಲೆಯನ್ನು ಸಿಹಿ ತಿನಿಸು ಹಾಗೂ ಪದಾರ್ಥಗಳಿಂದ ಶೃಂಗರಿಸುವುದನ್ನೇ ಎಡೆ ಶೃಂಗಾರ ಎನ್ನಬಹುದಾ? ,ಊಹೂಂ ಇಷ್ಟೇ ಹೇಳಿದರೆ ಇದೇನಿದು ಇಷ್ಟೇನಾ ಇದರಲ್ಲೇನು ವಿಶೇಷ ಅನ್ನಿಸಿಬಿಡುತ್ತದೆ, ಬಾಳೆ ಎಲೆಯಲ್ಲಿ ಉಪ್ಪು, ಉಪ್ಪಿನಕಾಯಿ ಹೀಗೆ ಒಂದೊಂದು ಪದಾರ್ಥಕ್ಕೂ ಒಂದೊಂದು ಜಾಗ ಮೀಸಲಾಗಿದೆ, (ಪದಾರ್ಥ ಎಂದರೆ ಅರ್ಥವಾಗದವರಿಗೆ ಅದೇ ಸೈಡ್ಸ್ ಕಣ್ರಿ ;)) ಅದು ಅಲ್ಲಲ್ಲಿ ಇದ್ದರೆ ಮಾತ್ರ ಎಡೆ ಶೃಂಗಾರ ಪೂರ್ಣಗೊಳ್ಳುತ್ತದೆ, ನೀವು ಬಾಳೆ ಎಲೆಯ ಮುಂದೆ ಕುಳಿತರೆ(ನಿಮ್ಮ ಮುಂದೆ ಬಾಳೆ ಎಲೆ ಇರುತ್ತದೆ!) ಬಾಳೆ ಎಲೆಯ ಮೇಲ್ತುದಿಯ ಎಡಭಾಗದಲ್ಲಿ ಮೊದಲು ಉಪ್ಪು, ಅದರ ಪಕ್ಕದಲ್ಲಿ ಉಪ್ಪಿನಕಾಯಿ, ಕೋಸಂಬರಿ, ಸಾಸಿವೆ(ಹಶಿ), ಪಲ್ಯ ಹೀಗೆ ಅಲಂಕಾರ ಮಾಡಲಾಗುತ್ತದೆ. ಚಿತ್ರಾನ್ನ ಬಾಳೆ ಎಲೆಯ ಕೆಳಗೆ ಎಡಭಾಗದಲ್ಲೇ ಹಾಕಬೇಕು ಅದರ ಮೇಲೆ ಇರುವ ಸ್ವಲ್ಪ ಖಾಲಿ ಜಾಗ ಕೇಸರಿ, ಜಿಲೀಬಿ ಮುಂತಾದ ಯಾವುದೇ ಸಿಹಿ ಪದಾರ್ಥ ಮಾಡಿದರೂ ಇದೇ ಜಾಗ ಖಾಯಂ, ಹಪ್ಪಳವನ್ನು ಚಿತ್ರಾನ್ನದ ಮೇಲೆ ಹಾಕುವುದು ವಾಡಿಕೆ, ಇನ್ನು ಪಾಯಸವನ್ನು ಮಾಡಿದ್ದರೆ ಅದಕ್ಕೆ ಈ ಜಾಗದಲ್ಲಿ ಸ್ಥಾನವಿಲ್ಲ, ಅದಕ್ಕೆ ಬಾಳೆ ಎಲೆಯ ಕೆಳ ಬಲಭಾಗದಲ್ಲಿ ತನ್ನ ಸ್ಥಾನವನ್ನು ಪಡೆದಿದೆ ಅದರ ಮೇಲ್ಭಾಗದಲ್ಲಿ ಪಂಚಕಜ್ಜಾಯ ತನ್ನ ಸ್ಥಾನವನ್ನು ಅಲಂಕರಿಸಿದೆ.


                                            (ಹೆಚ್ಚಿಗೆ ಚಿತ್ರಗಳನ್ನು ಹಾಕಲು ಸಾಧ್ಯವಾಗುತ್ತಿಲ್ಲ)

ನನಗೆ ಎಡೆ ಶೃಂಗಾರದ ಬಗ್ಗೆ ಬರೆಯುವ ವಿಚಾರ ಏಕೆ ಬಂತೆಂದರೆ ಸ್ವಲ್ಪ ದಿನದ ಹಿಂದೆ ಒಂದು ಕಾರ್ಯದ ಮನೆಗೆ ಹೋಗಿದ್ದೆ ಅಲ್ಲಿ ಎಡೆ ಶೃಂಗಾರ ಹಾಗು ಅಡಿಗೆ ಬಡಿಸಿದ ವಿಧಾನ ನೋಡಿ ಊಟ ಮುಗಿಸಿ ಎದ್ದರೆ ಸಾಕಪ್ಪಾ ಎನ್ನುವಷ್ಟರ ಮಟ್ಟಿಗೆ ಬೇಸರ ತರಿಸಿತು, ಬಡಿಸುವವರಿಗೆ ಎಲ್ಲೆಲ್ಲಿ ಯಾವ ಪದಾರ್ಥ ಹಾಕಬೇಕೆಂದು ಗೊತ್ತಿರಲಿಲ್ಲ, ಬರೀ ಅಷ್ಟೇ ಆಗಿದ್ದರೆ ಏನು ಆಗುತ್ತಿರಲ್ಲವೇನೋ.. ತಿನ್ನಲು ಸಮಯವೆಷ್ಟು ಕೊಡಬೇಕೆಂಬ ಅರಿವೆಯೇ ಇರದೇ ಒಂದಾದ ನಂತರ ಒಂದು ಪದಾರ್ಥ ತಂದು ಸುರಿಯುವುದನ್ನೇ ಬಡಿಸುವುದು ಎಂದುಕೊಂಡಿದ್ದರೇನೋ!, ಕಾರ್ಯದ ಮನೆಗಳಲ್ಲಿ ಅಡಿಗೆ ಮನೆ ಮೇಲ್ವಿಚಾರಣೆ ಮಾಡಲು ಮನೆಯ ಒಡೆಯನ ಹತ್ತಿರದ ಸಂಬಂದಿಕರಿಗೆ ವಹಿಸುವ ಪರಿಪಾಠ ಅನೇಕ ಕಡೆಗಳಲ್ಲಿದೆ, ಆ ಮೇಲ್ವಿಚಾರಣೆಗೆ ನೇಮಕವಾದ ವ್ಯಕ್ತಿಗೆ ಅನೇಕ ಜವಾಬ್ದಾರಿಗಳಿರುತ್ತವೆ, ಅನ್ನ ಎಷ್ಟು ಜನರಿಗೆ ತಯಾರಿಸಿದ್ದಾರೆ, ಎಷ್ಟು ಜನ ಬರುವ ನಿರೀಕ್ಷೆಯಿದೆ, ಏನೇನು ಅಡಿಗೆ ಭಟ್ಟರ ಬೇಡಿಕೆಗಳಿವೆಯೋ ಅವನ್ನೆಲ್ಲ(ಅಡಿಗೆ ಭಟ್ಟರು ಕೇಳಿದ್ದಕ್ಕಿಂತ ಸ್ವಲ್ಪ ಕಡಿಮೆ) ತಂದು ಕೊಡುವುದರಿಂದ ಹಿಡಿದು ಊಟ ಆರಂಭವಾದಗ ಯಾವ ಪದಾರ್ಥದ ನಂತರ ಏನು ಏನು ಬಡಿಸಲು ತೆಗೆದುಕೊಂಡು ಹೋಗಬೇಕೆಂದು ಹೇಳಬೇಕಾಗುತ್ತದೆ, ಅಂದರೆ ನಮ್ಮ ಮಲೆನಾಡಿನ ಹವ್ಯಕರ ಮನೆಗಳಲ್ಲಿ ಮೊದಲಿಗೆ ಅನ್ನ, ಸಾರು, ನಂತರ ಮತ್ತೆ ಅನ್ನ ಹುಳಿ (ಸಾಂಬಾರ) ಯನ್ನು ಬಡಿಸಿದ ನಂತರ ಹಪ್ಪಳ, ಸಂಡಿಗೆ, ಚಕ್ಕುಲಿ ಹೀಗೆ ಯಾವುದನ್ನು ಮಾಡಿರುತ್ತಾರೆ ಅದು ಬರಬೇಕು, ನಂತರ ಸಿಹಿ ತಿನಿಸುಗಳನ್ನು ಬಡಿಸುತ್ತಾರೆ, ಸಾಂಬಾರು(ಹುಳಿ) ಮುಗಿದು ಸಾಸಿವೆ ಬಂದ ಮೇಲೆ ಹಪ್ಪಳ ತಂದು ಹಾಕಿದರೆ ಅದು ಅಸಂಬದ್ಧವೆನಿಸುತ್ತದೆ, ಬಾಳೆಯಲ್ಲಿನ ಪದಾರ್ಥಗಳು ಖಾಲಿ ಆಗುತ್ತಾ ಬಂತೋ ಅಥವಾ ಇನ್ನೂ ಊಟ ಮಾಡುತ್ತಾ ಇದ್ದಾರೋ ನೋಡಿಕೊಂಡು ಬಡಿಸಬೇಕಾಗುತ್ತದೆ, ಅಂದರೆ ಸಾರು ಬಡಿಸಿದ ತಕ್ಷಣ, ಅದನ್ನು ತಿನ್ನಲೂ ಸಮಯ ಕೊಡದೆ ಮತ್ತೆ ಅನ್ನ ಸಾಂಬಾರು(ಹುಳಿ) ತಂದು ಸುರಿದರೆ ಊಟಕ್ಕೆ ಕುಳಿತವರ ಪಾಡೇನು?.

     ಇನ್ನು ಊಟ ಮಾಡುವಾಗ ಅನ್ನವನ್ನು ಎರೆಡು ಪಾಲುಗಳಾಗಿ ಮಾಡಿಕೊಂಡು ಬಲಭಾಗದ ಅನ್ನಕ್ಕೆ ಪದಾರ್ಥಗಳನ್ನು ಹಾಕಿಸಿಕೊಂಡು ಊಟ ಮಾಡುವ ಅಭ್ಯಾಸವೇ ಹವ್ಯಕರಲ್ಲಿ ಒಂದು ವಿಶೇಷವೇ ಸರಿ, ಒಂದು ಮದುವೆ ಮನೆಯಲ್ಲಿ ಬಡಿಸುವವರೊಬ್ಬರು ನಾನು ಪಾಲು ಮಾಡಿದ ಅನ್ನದ ಎಡಗಡೆಯ ಪಾಲಿಗೆ ಸಾಂಬಾರು ಸುರಿದಿದ್ದ, ನಾನು ಅವನನ್ನು ನೋಡಿ ನಕ್ಕಿದ್ದೆ, ಅವನಿಗೇನು ಅರ್ಥವಾಗಲಿಲ್ಲವೇನೋ! ನಾವು ಯಾವಾಗಲೂ ಬಲಗಡೆಯ ಅನ್ನದ ಪಾಲಿಗೆ ಪದಾರ್ಥಗಳನ್ನು ಹಾಕಿಸಿಕೊಂಡು ಊಟಮಾಡುತ್ತೇವೆ. ಕಾರಣ ಬಲಭಾಗದಲ್ಲಿರುವುದನ್ನು ಬಾಯಿಗೆ ಹಾಕಿಕೊಳ್ಳುವುದು ಬಲಗೈಗೆ ಸುಲಭ ಎನ್ನುವ ಕಾರಣವಾಗಿರಬಹುದು. ಹೀಗೆ ಹೇಳುತ್ತಾ ಹೋದರೆ ದೊಡ್ಡ ಪುರಾಣವಾದೀತು.



ಹೇಳುವುದು ತುಂಬಾ ಉಳಿದು ಹೋ.........ಗಿದೆ, ಬರೆದಿದ್ದು ಅತಿಯಾಗಿ ಹೋಯಿತಾ ಏನೂ... ತಿಳಿಯದಾಗಿದೆ, ನಿಮ್ಮ ಮನದ ದನಿಯು ಕೇಳದಾಗಿದೆ ನಿಮಗನ್ನಿಸಿದ್ದು  ಬರೆಯಬಾರದೇ? ತಿಳಿಸುತ್ತೀರಿ ಅಲ್ವಾ.. ಕಾಯುತ್ತಿದ್ದೇನೆ ನಿಮ್ಮ ಅನಿಸಿಕೆಗಾಗಿ.



ಕೊನೆಯ ಮಾತು: ಊಟದ ಸವಿಯನ್ನು ತಿಳಿಯಲು ಮಲೆನಾಡಿನ ಹಳ್ಳಿಗಳಿಗೆ ಬನ್ನಿ, ಪ್ರಕೃತಿಯ ಸೊಬಗನ್ನು ಕಣ್ದುಂಬಿಕೊಳ್ಳಿ, ಜೊತೆಗೆ ಅನೇಕ ಪ್ರವಾಸಿ ತಾಣಗಳನ್ನೂ ಸಹ ನೋಡಬಹುದಾಗಿದೆ. ಇದು ಕರ್ನಾಟಕ ಪ್ರವಾಸೋದ್ಯಮದ ಪರವಾಗಿ ನಿಮಗೆ ಕರೆಯೋಲೆ. ನಮ್ಮ ಪ್ರವಾಸೋದ್ಯಮ ಇಲಾಖೆ ಸರಿಯಾಗಿ ಕೆಲಸಮಾಡುತ್ತಿಲ್ಲ, ಪ್ರಚಾರ ಮಾಡುತ್ತಿಲ್ಲ ಎನ್ನುವ ದೂರುಗಳಿವೆ ಅದನ್ನು ಸುಳ್ಳಾಗಿಸೋಣ.

Monday, April 19, 2010

ಐಪಿಎಲ್ ಟ್ವೆಂಟಿ 20 ಆಟದ ಗುಣಮಟ್ಟದಲ್ಲಿ ಕುಸಿತವಾಗುತ್ತಿದೆಯೇ?

ಐಪಿಎಲ್ ಟ್ವೆಂಟಿ 20 ಚುಟುಕು ಕ್ರಿಕೆಟ್ ತನ್ನ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದೆಯಾ? ಹೀಗೊಂದು ಪ್ರಶ್ನೆ ಕಾಡುತ್ತಿದೆ, ಈ ವರ್ಷದ ಟ್ವೆಂಟಿ 20 ಕ್ರಿಕೆಟ್ ಸೀಸನ್ ನಲ್ಲಿ ಗಮನ ಸೆಳೆದಿದ್ದು ಕ್ಯಾಚುಗಳು, ಅತಿ ಕಷ್ಟಕರವಾದ ಹಿಡಿಯಲು ಅಸಾಧ್ಯವೆನಿಸುವಂತ ಕ್ಯಾಚುಗಳನ್ನು ಅತಿ ಸುಲಭವೇನೋ ಎಂಬಂತೆ ಚಂಡನ್ನು ಹಿಡಿದು ಸಂಭ್ರಮಿಸುವುದು ನೋಡಿದಾಗ ಅತ್ಯಂತ ಖುಷಿಯನ್ನು ನೀಡುತ್ತದೆ, ಆದರೆ ಈ ಬಾರಿಯ ಕಳಪೆ ಕ್ಷೇತ್ರ ರಕ್ಷಣೆ ಹಾಗೂ ಅತಿ ಸುಲಭದ ಕ್ಯಾಚುಗಳನ್ನು ಬಿಟ್ಟಿದ್ದು ಐಪಿಎಲ್ ನ ಗುಣಮಟ್ಟದಲ್ಲಿ ಕುಸಿತ ಕಂಡಿದೆಯೇನೋ ಎಂದು ಯೋಚಿಸುವಂತಾಗಿದೆ,




 ಅದರಲ್ಲಿಯೂ ಕ್ಯಾಚುಗಳನ್ನು ಬಿಟ್ಟವರು ಹೆಚ್ಚಿನವರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿ ಅನುಭವವಿರುವ ದಿಗ್ಗಜ ಆಟಗಾರರೆ ಆಗಿದ್ದು ಕಳಪೆ ಪ್ರದರ್ಶನ ನೀಡುತ್ತಿರುವುದು ಆತಂಕದ ವಿಚಾರ.

 ಒಂದು ಪಂದ್ಯದಲ್ಲಿ ಒಂದು ಅತ್ಯುತ್ತಮ ಕ್ಯಾಚಿನ ಜೊತೆ ಕಡಿಮೆಯೆಂದರೂ ಎರಡು ಕ್ಯಾಚನ್ನು ಬಿಡುವುದು ಸಮಾನ್ಯವಗಿದೆ, ಹಿಂದಿನಿಂದಲೂ ಕಾಮೆಂಟೇಟರುಗಳು ಚಂಡು ಆಗಸದೆತ್ತರಕ್ಕೆ ಚಿಮ್ಮಿ ಅದನ್ನು ಹಿಡಿಯಲು ಒಬ್ಬ ಆಟಗಾರ ಬಂದರೆ ಬ್ಯಾಟ್ಸ್ ಮನ್ ಔಟ್ ಎನ್ನುವ ವರದಿಬಿತ್ತರಿಸುವುದು ಅವರುಗಳಿಗೆ ಅಬ್ಯಾಸವಾಗಿತ್ತು, ಈಗ ಹಾಗೆ ಮಾಡಿದರೆ ಮತ್ತೆ ಔಟ್ ಆಗಿಲ್ಲ ಕ್ಯಾಚ್ ಬಿಟ್ಟಿದ್ದಾರೆ ಎಂದು ಹೇಳಬೇಕಾದ ಪರಿಸ್ಥಿತಿ ಬಂದೊದಗಿದೆ, ಇದರ ಜೊತೆಯಲ್ಲೇ ಬೌಲರ್ ಗಳು ಈ ಕ್ಯಾಚನ್ನಾದರೂ ಹಿಡಿಯಲಿ ಎಂದು ಕಾಯುವ ಪರಿಸ್ಥಿತಿ ಬಂದೊದಗಿದೆ, ಈಗಾಗಲೇ ಕೈಚೆಲ್ಲಿದ ಕ್ಯಾಚುಗಳ ಸಂಖ್ಯೆ ಬೆರಳೆಣಿಕೆ ಸಿಗದು, ಅದು ಎರಡಂಕಿ ದಾಟಿಹೋಗಿದೆ,

ಇದಕ್ಕೆಲ್ಲಾ ಕಾರಣಗಳು ಹೆಚ್ಚು ಹೆಚ್ಚು ಪಂದ್ಯಗಳನ್ನು ಆಯೋಜಿಸುವುದರಿಂದ ಆಟಗಾರರಿಗೆ ವಿಶ್ರಾಂತಿ ದೊರಕುತ್ತಿಲ್ಲ ಹಾಗೂ ಅನೇಕ ಗಾಯಾಳುಗಳನ್ನು ಹುಟ್ಟು ಹಾಕಿದ ಕೀರ್ತಿಯೂ ಸಹ ಐಪಿಎಲ್ ಗೆ ಸೇರುತ್ತದೆ. ಹಣದ ಹೊಳೆಯೇ ಐಪಿಎಲ್ ಗೆ ಹರಿದು ಬರುತ್ತಿರುವುದರಿಂದ ಹೆಚ್ಚು ಹೆಚ್ಚು ಪಂದ್ಯಾವಳಿಗಳನ್ನು ಆಯೋಜಿಸುವತ್ತ ಗಮನಕೊಡಲಾಗುತ್ತಿದೆಯೆ ಹೊರತು ಆಟಗಾರರ ಬಗ್ಗೆ ಅವರ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಯೋಚಿಸದೇ ಇರುವುದು ದುರಂತವೇ ಸರಿ.

Friday, February 26, 2010

ಹೋಳಿ ಬಂತು ಹೋಳಿ

    ಭಾರತವು ಹಬ್ಬಗಳ ತವರೂರಾಗಿದೆ, ಪ್ರತಿ ವರ್ಷವೂ ಆಚರಿಸುವ ದೀಪಾವಳಿ, ಗಣೇಶ ಚತುರ್ಥಿಯಂತಹ ಭಕ್ತಿ ಹಬ್ಬದ ಜೊತೆಗೆ ಈ ಬಣ್ಣದ ಹಬ್ಬವಾದ ಹೋಳಿ ಹಬ್ಬವೂ ಒಂದು, ಇದು ಜನರಿಗೆ ಮನರಂಜನೆಯನ್ನೂ, ಪುನರುತ್ಸಾಹವನ್ನೂ ತುಂಬುವಲ್ಲಿ ಯಶಸ್ವಿಯಾಗಿದೆ.


ಹೋಳಿ ಬಂತೆಂದರೆ ಅದೇನೋ ಸಂಭ್ರಮ, ಸ್ನೇಹಿತರು, ಬಂಧು ವರ್ಗದವರೊಂದಿಗೆ ಸೇರಿಕೊಂಡು ಸಂತಸದಿಂದ ಕುಣಿದು ಒಬ್ಬರಿಂದೊಬ್ಬರಿಗೆ ಬಣ್ಣ ಹಚ್ಚಿಕೊಳ್ಳುವುದರ ಮೂಲಕ ಖುಷಿಯನ್ನು ಹಂಚಿಕೊಳ್ಳುವ ಹೋಳಿ ಯಾರಿಗೆ ತಾನೇ ಇಷ್ಟವಿಲ್ಲ? ಈ ರೀತಿಯ ವರ್ಣಮಯವಾದ ಹೋಳಿ ಹಬ್ಬಕ್ಕೆ ಪುರಾಣ ಕಥೆಯಿದೆ.

ಶಿವನ ಮೊದಲ ಪತ್ನಿಯಾದ ದಾಕ್ಷಾಯಿಣಿಯ ಸಾವಿನ ನಂತರ ಶಿವ ಸುದೀರ್ಘವಾದ ತಪಸ್ಸಿಗೆ ಕುಳಿತುಕೊಂಡಾಗ ಇತ್ತ ದಾಕ್ಷಾಯಿಣಿಯು ಪಾರ್ವತಿಯಾಗಿ ಹುಟ್ಟಿ ಶಿವನನ್ನು ವರಿಸಬೇಕೆಂದು ಆಶಿಸುತ್ತಾಳೆ, ಆದರೆ ಶಿವನಿಗೆ ಇದರ ಪರಿವೆಯೇ ಇರುವುದಿಲ್ಲ, ಆಗ ದೇವತೆಗಳು ಶಿವನ ತಪೋಭಂಗ ಮಾಡಬೇಕೆಂದು ಮನ್ಮಥನಿಗೆ ಹೇಳಿದಾಗ ಮನ್ಮಥನು ಮೋಹಕ ನೃತ್ಯ ಮಾಡಿ ಹೂ ಬಾಣವನ್ನು ಶಿವನ ಮೇಲೆ ಪ್ರಯೋಗಿಸಿದಾಗ ಶಿವನು ಕೋಪೋದ್ರಿಕ್ತನಾಗಿ ಮನ್ಮಥನನ್ನು ತನ್ನ ಮೂರನೆ ಕಣ್ಣನ್ನು ತೆರೆದು ಸುಟ್ಟು ಬಿಡುತ್ತಾನೆ. ನಂತರ ರತಿಯು ಶಿವನ ಬಳಿ "ತನ್ನ ಗಂಡನನ್ನು ಬದುಕಿಸು" ಎಂದು ಬೇಡಿಕೊಂಡಾಗ ಶಿವನು ಹೇಳುತ್ತಾನೆ " ನಿನಗೆ ನಿನ್ನ ಗಂಡನು ವರ್ಷದ ಒಂದು ದಿನ ನಿನಗೆ ಶರೀರವಾಗಿ ಸಿಗುತ್ತಾನೆ ಎಂದು ವರವನ್ನು ಕೊಡುತ್ತಾನೆ, ಆ ದಿನವನ್ನೆ ಹೋಳಿ ಹಬ್ಬದ ದಿನವಾಗಿ ಆಚರಿಸಲಾಗುತ್ತಿದೆ, ಹೋಳಿ ಹಬ್ಬದ ಹಿಂದಿನ ದಿನ ರಾತ್ರಿ ಕಾಮನ ಪ್ರತಿಕೃತಿಯನ್ನು ಮಾಡಿ ತಾವು ಮಾಡಿದ ತಪ್ಪೆಲ್ಲವೂ ಅದರ ಜೊತೆಯಲ್ಲಿ ಸುಟ್ಟು ಬೂದಿಯಾಗಲೆಂದು ದಹನ ಮಾಡುತ್ತಾರೆ.

ಹಳ್ಳಿಗಳಿಗಿಂತಲೂ ನಗರ ಪ್ರದೇಶಗಳಲ್ಲಿ ಹೋಳಿಯ ಆರ್ಭಟ ಹೆಚ್ಚುತ್ತಿದೆ, ಎಲ್ಲರೂ ಸೇರಿ ಖುಷಿಯಿಂದ ಬಣ್ಣ ಎರಚಿಕೊಳ್ಳುವ ಹಬ್ಬಕ್ಕೆ ಜಾತಕ ಪಕ್ಷಿಯಂತೆ ಕಾಯುವವರೂ ಇದ್ದಾರೆಂದರೆ ಆಶ್ಚರ್ಯವೇನಿಲ್ಲ.

ಹೋಳಿ ಬಂತೆಂದರೆ ಖುಷಿಯ ಜೊತೆಗೆ ಸ್ವಲ್ಪ ಬೇಸರ ತರಿಸುವ ಸಂಗತಿಗಳನ್ನು ಇಲ್ಲಿ ಬರೆಯದೇ ಇರಲು ಸಾಧ್ಯವಿಲ್ಲ ಗಲ್ಲಿ ಗಲ್ಲಿ, ಪ್ರತಿ ಕೇರಿಯವರು ಬೇರೆ ಬೇರೆ ಕಾಮನ ಪ್ರತಿಕೃತಿಯನ್ನು ಇಟ್ಟುಕೊಂಡು ವಾಹನ ಸವಾರರನ್ನು ಅಡ್ಡ ಗಟ್ಟಿ ಹಣ ಕೀಳುವ ದೃಶ್ಯ ಚಿಕ್ಕ ಪಟ್ಟಣ/ನಗರ ಗಳಲ್ಲಿ ನೋಡಲು ಸಿಗುತ್ತದೆ. ಕೆಲವು ಕಿಡಿಗೇಡಿಗಳು ಮಾಡುವ ಇಂತಹವುದರಿಂದ ಹೋಳಿಯ ಬಗ್ಗೆ ಕೆಲವರಿಗೆ ಬೇಸರವನ್ನು ತಂದಿದೆ.

ಹಿಂದಿನ ಕಾಲದಲ್ಲಾದರೆ ಮನೆಯಲ್ಲಿಯೇ ಬಣ್ಣಗಳನ್ನು ನೈಸರ್ಗಿಕವಾಗಿ ತಯಾರಿಸುತ್ತಿದ್ದರು, ಇದರಿಂದ ತ್ವಚೆಗೆ ಹಾನಿಯಾಗುತ್ತಿರಲಿಲ್ಲ, ಆದರೆ ಕಾಲ ಬದಲಾದಂತೆ ಬ್ರೋಮೈಡ್ ಮುಂತಾದ ರಾಸಾಯನಿಕಗಳಿಂದ ಬಣ್ಣ ತಯಾರಿಸುತ್ತಿರುವುದರಿಂದ ಅಲರ್ಜಿ, ಕಣ್ಣು ಶ್ವಾಸಕೋಶ ಮುಂತಾದವುಗಳಿಗೆ ಹಾನಿಯಾಗುತ್ತದೆ.ಆದ್ದರಿಂದ ಬಣ್ಣಗಳ ಹಬ್ಬ ಆಚರಿಸುವವರು ನಮ್ಮ ತ್ವಚೆಗೆ ಹಾನಿಯಾಗದಂತಹ ನೈಸರ್ಗಿಕ ಬಣ್ಣಗಳನ್ನೇ ಬಳಸಿ ಸುರಕ್ಷಿತ ಹಾಗೂ ಮೋಜಿನ ಹೋಳಿ ಆಚರಿಸಿ.

ನಿಮಗೆಲ್ಲರಿಗೂ ಹೋಳಿ ಹಬ್ಬದ ಹಾರ್ಧಿಕ ಶುಭಾಶಯಗಳು ಮುಂಚಿತವಾಗಿ - ಚೈತ್ರಿಕಾ ಆದಿತ್ಯ

Posted by: Chaitrika Aditya