ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Wednesday, October 15, 2014

ನಂಗೊತ್ತಿರೋ ಒಂದಷ್ಟು ಮಾಹಿತಿ


ಖಾಲಿ ಹಾಳೆ ಬಾಲ್ ಪೆನ್ನು ಎದುರಿಗೇ ಅನಾಥವಾಗಿ ಬಿದ್ದುಕೊಂಡಿದ್ದರೂ ಅದನ್ನೆತ್ತಿಕೊಂಡು ಒಂದಕ್ಷರ ಬರೆಯಲಾಗದ ಸೋಮಾರಿತನದಲ್ಲಿ ನನ್ನೊಳಗಿನ ಬರಹಗಾರನಿದ್ದನಲ್ಲ...

ಒಂದು ವಾರವಾಯಿತು ಗಂಟಲು ನೋವು ಶುರುವಿಟ್ಟುಕೊಂಡು, ಮಳೆಯ ಕಾರಣಕ್ಕೋ.. ಅಥವಾ ಕಾರ್ಯದ ಮನೆಗಳಲ್ಲಿ ಬಿಸಿಲರಿ ಬಾಟಲಿಯ ಯೋಚನೆ ಮಾಡದೆ (ಬಿಸ್ಲರಿ,ಬಿಸಿನೀರು ಅಥವಾ ಕಾದಾರಿದ ನೀರು ಕುಡಿದು ಅಭ್ಯಾಸವೇ ಇಲ್ಲ, ಅದು ಬೇರೆಯ ವಿಚಾರ. ಆಂಟೀಬಯಾಟಿಕ್ ತೆಗೆದುಕೊಳ್ಳೋದು  ಯಾಕೆ ಸುಮ್ಮನಿದ್ದುದೇ ಈಗ ವಿಪರೀತಕ್ಕಿಟ್ಟುಕೊಂಡಿದೆ. ಎಂಜಲು ನುಂಗುವಾಗಲೆಲ್ಲ ಕಣ್ಣು ತಾನೇ ತಾನಾಗಿ ಮುಚ್ಚಿಕೊಳ್ಳುತ್ತಿದೆ ನೋವು ತಾಳಲಾರದೇ. ಅಂದಹಾಗೆ ಗಾರ್ಗಲಿಂಗು ಅದು ಇದು ಎಲ್ಲಾ ಮಾಡಿ ಆಯ್ತು ಹೋಗುತ್ತೆ ಬಿಡಿ, ಬ್ಲಾಗ್ ನಲ್ಲಿ ಬರೆಯದೇ ಸೋಮಾರಿತನ ಮಾಡಿದ್ದಕ್ಕೆ ಇದೊಂತರ ನೆಪ ಕೊಡೋಣವಾ ಅನ್ನಿಸಿತು. ಸಕಾರಣವಲ್ಲ ಅನ್ನೋದು ನನಗೂ ಗೊತ್ತು.. ಬರೆಯದೇ ಇದ್ದುದಕ್ಕೆ ಕ್ಷಮೆ ಇರಲಿ.


ಕೇಂದ್ರ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದೆ ಅದರಲ್ಲಿ..  ಸೂರ್ಯನ ಬೆಳಕಿನಿಂದ ಉತ್ಪಾದಿಸುವ ಸೋಲಾರ್ ವಿದ್ಯುತ್ತನ್ನು ರೈತರು, ಸಂಘ, ಸಂಸ್ಥೆಗಳು ಬೇಕಾದರೂ ತಮ್ಮ ಜಾಗಗಳಲ್ಲಿ ಸೋಲಾರ್ ಪ್ಯಾನಲ್ಲುಗಳನ್ನು ಸ್ಥಾಪಿಸಿ ವಿದ್ಯುತ್ ಉತ್ಪಾದಿಸಿ ಸ್ವಂತಕ್ಕೆ ಬಳಸಿಕೊಂಡು ಉಳಿದಿರುವುದನ್ನು ಮಾರಾಟ ಮಾಡುವಂತಹ ಯೋಜನೆ.ಆದರೆ ಒಂದು ಮೆಘಾ ವ್ಯಾಟ್ ಉತ್ಪಾದನೆಗೆ ಕನಿಷ್ಟ ಐದು ಎಕರೆ ಜಾಗ,ಅರ್ಜಿಯ ಜೊತೆಗೆ ನಿಗದಿ ಮಾಡಿದ ಹಣ(ಮರುಪಾವತಿಸಲಾಗುತ್ತದೆ) ಆಮೇಲೆ ಮತ್ತೆ ಒಂದು ಲಕ್ಷ ರೂಪಾಯಿ ಕಟ್ಟಬೇಕೆಂದಿದೆ, ಒಟ್ಟು  ಯೋಜನೆಗೆ ಬಂಡವಾಳ ಏಳರಿಂದ ಎಂಟು ಕೋಟಿಯೆಂದಿದೆ, ಸರಿಯಾಗಿ ಯೋಜನೆ ಅರ್ಥವಾಗಿಲ್ಲ ನನಗೆ. ಹೆಚ್ಚಿನ ವಿವರಕ್ಕೆ ಲಾಗ್ ಇನ್ ಆಗಿ www.kredlinfo.in ಇದು ಸಾಮಾನ್ಯ ರೈತರಿಗೋ ಅಥವಾ ಹೈ ಟೆಕ್ ಕಾರ್ಪೋರೇಟ್ ಅಗ್ರಿ ಕಲ್ಚರಿಷ್ಟ್ ಗಳಿಗಾ ಅನುಮಾನ!

ಸೂಪರ್ ಮಾರ್ಕೇಟ್, ಶಾಪಿಂಗ್ ಬಜಾರ್ ಗಳು ಗ್ರಾಹಕನನ್ನು ಕೊಳ್ಳುಬಾಕನನ್ನಾಗಿ ಮಾಡುತ್ತಿವೆಯೋ ಅಥವಾ ಆಯ್ಕೆಯ ಸ್ವಾತಂತ್ರ್ಯವನ್ನು ಮುಕ್ತಗೊಳಿಸುತ್ತಿದೆಯೋ ಅನ್ನೋದು ಮತ್ತೆ ಗೊಂದಲಕ್ಕೀಡು ಮಾಡುತ್ತಿದೆ, ಅದರ ಜೊತೆ ಜೊತೆಗೆ ಆನ್ ಲೈನ್ ಶಾಪಿಂಗ್ ವೆಬ್ ಸೈಟುಗಳನ್ನು ನೋಡಿದರಂತೂ ಉಚಿತ ಡಿಸ್ಕೋಂಟು ಅದೂ ಇದು  ಅಂತ ಏನಾದರೂ ಖರೀದಿ ಮಾಡಿಸದೆ ಸುಮ್ಮನಿರೋಲ್ಲ ಅಂತ ತನ್ನೆದುರಿಗೆ ಕುಳಿತ ಗ್ರಾಹಕನ ಮೆದುಳಿನಾಳಕ್ಕೆ ಮುಟ್ಟುವಂತ ವರ್ಣರಂಜಿತ ಜಾಹೀರಾತು ಪ್ರಕಟಿಸಿ ಪುಟ ಬಿಟ್ಟು ಹೋಗದಂತೆ ಮಾಡುತ್ತಿದೆ. ಆನ್ ಲೈನ್ ವ್ಯವಹಾರಗಳು  ಡೀಲರ್ ನಿಂದ ನೇರವಾಗಿ ಗ್ರಾಹಕನ ಕೈ ಸೇರೋದರಿಂದ ಮಧ್ಯವರ್ತಿಗಳ ಕಮಿಷನ್ ಉಳಿಯೋದರಿಂದ ನಿಮಗೆ ಬೇಕಾದ ವಸ್ತು ಅಂಗಡಿಗಳಲ್ಲಿ ಇರುವ ಬೆಲೆಗಿಂತ ಸಾಕಷ್ಟು ಕಡಿಮೆ ಬೆಲೆಗೆ ಸಿಗುತ್ತದೆ.. ಇನ್ನು ಹಬ್ಬ ಹರಿದಿನಗಳು ಬಂತೆಂದರೆ ಉತ್ಪಾದಕರಿಗೆ ತಮ್ಮ ಉತ್ಪನ್ನವನ್ನು ಮಾರಲು ಇರುವ ಒಂದು ಸದಾವಕಾಶ. ರಿಯಾಯ್ತಿ ಅದು ಇದು ಅಂತ ಗ್ರಾಹಕನ ಮನಗೆದ್ದು ಅವರ ಮನೆ ಸೇರುವ ಶತ ಪ್ರಯತ್ನ ಮಾಡುತ್ತಿದೆ. ಆದರೇ ಅದೇ ಉತ್ಪನ್ನಗಳು ಸ್ವಲ್ಪ ಸಮಯದ ನಂತರ ಅಂಗಡಿಗಳಲ್ಲೇ ಕಡಿಮೆ ದರಕ್ಕೆ ಸಿಗುತ್ತವೆ, ಹಳೆಯದಾಗುವ ವರೆಗೆ ಕಾಯುತ್ತಾ ಕುಳಿತರೆ ಏನನ್ನೂ ಕೊಳ್ಳಲು ಸಾಧ್ಯವೇ ಆಗೋದಿಲ್ಲ. ಇದು ವಾಸ್ತವ!

ಮೊದಲಿನಂತೆ ದೊಡ್ಡ ದೊಡ್ಡ CRT ಟೀವಿಗಳು ಅಂಗಡಿಗಳಲ್ಲಿ ಸಿಗುತ್ತಿಲ್ಲ..

 ಅದರ ಬದಲಾಗಿ ಬಳುಕುವ ಬಳ್ಳಿಯಂತಿರುವ ತೆಳ್ಳನೆ ಮೈ ಹೊಂದಿದ LED TV ಗಳು ಮಾರುಕಟ್ಟೆಯಲ್ಲಿ ತನ್ನ ಸಾಮ್ರಾಜ್ಯ ಮೆರೆಯುತ್ತಿದೆ, ಹೂಂ ನಿಮ್ಮ ಮನಸ್ಸಿಗೆ ಬಂದಿದ್ದು  ಸರಿ, ಜಗತ್ತು ಬದಲಾವಣೆಯಾಗುತ್ತಿದೆ ಯಾರು ಅದೇ ಹಳೇಯ ಡೂಮ್ ಟೀವಿಗಳನ್ನು ಒಯ್ಯುತ್ತಾರೆ, ನೀವು ಅಂಗಡಿಗಳಲ್ಲಿ  CRT ಟೀವಿಗಳಲ್ಲಿ 32 ಇಂಚಿನ ಟೀವಿ ಬೇಕೆಂದು ಹುಡುಕಿದರೂ ಅದು ದೊರೆಯೋದಿಲ್ಲ,ಉತ್ಪಾದಕರು ಮಾರುಕಟ್ಟೆಯಲ್ಲಿ ಎಲ್ ಈ ಡಿ, ಎಲ್ ಸೀ ಡಿ ಟೀವಿಗಳನ್ನು  ಮಾತ್ರ ಕೊಳ್ಳುವಂತೆ ಮಾಡಿದ್ದಾರೆ.


ಇನ್ನು ಮೊಬೈಲ್ ಫೋನುಗಳ ವಿಚಾರಕ್ಕೆ ಬರೋದಾದರೆ ಈಗ ಹೆಚ್ಚಿನ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನುಗಳಿದ್ದೆ ಇರುತ್ತದೆ, ಅದಕ್ಕೆ ಅಂತರ್ಜಾಲ ಸಂಪರ್ಕ ಅನಿವಾರ್ಯ, ಇಂಟರ್ನೆಟ್ ಇಲ್ಲದೆ ಹೋದರೆ ಅದು ಮತ್ತದೇ ಸಾದಾ ಫೋನಾಗಿ ಹೋಗುತ್ತೆ!.. ನೆಟ್ ಪ್ಯಾಕ್ ಹಾಕಿಕೊಳ್ಳೋದು ಮತ್ತದೇ ಅನಿವಾರ್ಯವಾಗಿ ಬಿಡುತ್ತದೆ, ಕಂಪೆನಿಗಳು ಮೊದಲು ಕಡಿಮೆ ಬೆಲೆಗೆ ನೆಟ್ ಪ್ಯಾಕುಗಳನ್ನು ಕೊಡುತ್ತಿದ್ದವರೆಲ್ಲ ದಿನದಿಂದ ದಿನಕ್ಕೆ MBಗಳನ್ನು ಕಡಿತಗೊಳಿಸುತ್ತಾ ಪ್ಯಾಕೇಜ್ ದರಗಳನ್ನು ಹೆಚ್ಚಿಸತೊಡಗಿದ್ದಾರೆ, ಅವರಿಗೂ ಗೊತ್ತು ನಮ್ಮ ಅನಿವಾರ್ಯತೆ.ಎಷ್ಟು ಬೆಲೆ ತೆತ್ತಾದರೂ ನೆಟ್ ಪ್ಯಾಕ್ ಹಾಕಿಸಿಕೊಳ್ಳಲಿ ಅನ್ನೋ ಯೋಜನೆ. ಇದರ ವಿರುದ್ಧ ಹೋರಾಟಕ್ಕೆ ಗ್ರಾಹಕರೇ ಇಳಿಯಬೇಕಾಗಿದೆ, ವಾಟ್ಸ್ ಆಫ್ ನಲ್ಲಿ ಹರಿದಾಡುತ್ತಿರುವ ಸಂದೇಶ ನೀವು ಓದಿರಬಹುದು, ಅಕ್ಟೋಬರ್ 31ರಂದು ಮೊಬೈಲ್ ಇಂಟರ್ನೆಟ್ ಒಂದು ದಿನದ ಮಟ್ಟಿಗೆ ನಿಲ್ಲಿಸೋಣ...ನಾನು ಆ ಒಂದು ದಿನ ಖಂಡಿತಾ ಮೊಬೈಲ್ ಅಂತರ್ಜಾಲ ಬಳಸೋದಿಲ್ಲ ಅಂತ ನಿಷ್ಚಯಿಸಿಯಾಗಿದೆ, ನೀವು?

ಮೊಬೈಲ್ ಜಗತ್ತಿನಲ್ಲಿ ಅದರಲ್ಲೂ ಆಂಡ್ರಾಯ್ಡ್ ಫ್ಲಾಟ್ ಪಾರಂನಲ್ಲಿ ಮೊನ್ನೆ ಮೊನ್ನೆ ಆದ ಅತ್ಯಂತ ಸ್ವಾಗತಾರ್ಹ ಬೆಳವಣಿಗೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು, ಆಂಡ್ರಾಯ್ಡ್ ಹೆಸರು ಹೇಳಿದಾಕ್ಷಣಕ್ಕೆ ನೆನಪಿಗೆ ಬರೋದೆ ಗೂಗಲ್ಲು... ಆಂಡ್ರಾಯ್ಡ್ ಒನ್ ಬಗ್ಗೆ ಕೇಳಿದ್ದೀರಾ..


ಇದು ಗೂಗಲ್ಲಿನವರು ಮಾಡಿದ ಅತ್ಯಂತ ಉತ್ತಮ ಕಾರ್ಯ, ಪ್ರತಿಯೊಂದು ಆಂಡ್ರಾಯ್ಡ್ ಒನ್ ಉತ್ಪನ್ನವು ಸಹ ಕನಿಷ್ಟ ಒಂದು ಜಿಬಿ ರಾಮ್, ಕ್ವಾಡ್ ಕೋರ್ ಪ್ರೊಸೆಸರ್, ಕನಿಷ್ಟ 4.5 ಇಂಚಿನ ಸ್ಕ್ರೀನ್.. ಹಾಗೂ ಕಿಟ್ ಕ್ಯಾಟ್ ಓ ಎಸ್, ಅದೆಲ್ಲಕ್ಕೂ ಮಿಗಿಲಾಗಿ ಇದರ ಬೆಲೆ ಗರಿಷ್ಟ 7000 ದ ಒಳಗೆ ಇರಬೇಕು.. ಈಗ ಸ್ಪೈಸ್, ಮೈಕ್ರೋಮಾಕ್ಸ್ ಮತ್ತು ಕಾರ್ಬನ್ ಕಂಪೆನಿಗೆ ಮಾತ್ರ ಆಂಡ್ರಾಯ್ಡ್ ಒನ್ ಆಧಾರಿತ ಮೊಬೈಲ್ ಗಳ ಮಾರಾಟಕ್ಕೆ ಸಧ್ಯಕ್ಕೆ ಅನುಮತಿ ನೀಡಿದೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಕೆಲ ಕಂಪೆನಿಗಳು ಮೇಲೆ ಹೇಳಿದ Specification ಹೊಂದಿದ ಮೊಬೈಲಿಗೆ ಏನಿಲ್ಲವೆಂದರೂ  ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿನ ಬೆಲೆಗೆ ಮಾರಲು ಯತ್ನಿಸುತ್ತಿದ್ದರು, ಈಗ ಮೊಬೈಲ್ ಮಾರುಕಟ್ಟೆಯಲ್ಲಿ ಏನಾದರೂ ಬದಲಾವಣೆಯಾಗುತ್ತ ಕಾದು ನೋಡಬೇಕಾಗಿದೆ.

ಇನ್ನು ತಂತ್ರಜ್ಞಾನ ಮುಂದುವರೆಯುತ್ತಿದ್ದಂತೆ ಅವು ನಮ್ಮನ್ನು ಸೋಮಾರಿಗಳನ್ನಾಗಿಸುತ್ತವೆಯಾ ಎಂಬ ಅನುಮಾನಕ್ಕೆ ಕುಮ್ಮಕ್ಕು ನೀಡುವಂತೆ ಸ್ಮಾರ್ಟ್ ವಾಚುಗಳು ಜನರನ್ನು ತಮ್ಮತ್ತ ಆಕರ್ಷಿಸುತ್ತಿವೆ... 5 ಇಂಚಿನ  ಸ್ಕ್ರೀನಿನ ಫೋನಿಟ್ಟುಕೊಂಡು ವಾಚಿನಲ್ಲಿ ನೋಟಿಪಿಕೇಷನ್ ನೋಡುವಂತೆ ಆದರೆ ಅದಕ್ಕೆ ಏನು ಹೇಳಲಿ, ಲೈಫ್ ಅಷ್ಟು ಫಾಸ್ಟ್ ಆಗಿದೆ ಅಂತೀರಾ.. ನಮಗೆ ವಾಚು ನೋಡೋಕು ಸಮಯ ಇಲ್ಲ ಅನ್ನೋರು ಅದರ  ಫೋಟೋ ಕ್ಲಿಕ್ಕಿಸಿ ಮಾರಿಬಿಡಿ ;) ಆ ವಾಚನ್ನು ಕಟ್ಟಿಕೊಂಡು ಓಡಾಡಿದರೂ ರಸ್ತೆಯಲ್ಲಿ ಯಾರಾದರೂ ಟೈಮೆಷ್ಟು ಅಂದರೆ ಇದು ಸ್ಮಾರ್ಟ್ ವಾಚ್ ಕಣಯ್ಯ ಅನ್ನೋಕಾಗಲ್ಲ, ಟೈಮ್ ಹೇಳಲೇ ಬೇಕಾಗುತ್ತೆ. ಬೆಲೆ ಕೂಡ ಮತ್ತೊಂದು ಸ್ಮಾರ್ಟ್ ಫೋನ್ ನಷ್ಟೇ ಇದೆ ಅನ್ನೋದು ಗಮನಿಸಬೇಕಾದ ಅಂಶ.

OUTERNET ಪ್ರತಿಯೊಬ್ಬ ವ್ಯಕ್ತಿಗೂ ಮುಕ್ತವಾಗಿ ಮಾಹಿತಿ ಅಂತರ್ಜಾಲ ಸೇವೆ ಸಿಗುವಂತೆ ಮಾಡಲು ಹೊರಟಿದೆ, ಅದರಲ್ಲಿ ಕಣ್ಣಾಡಿಸುತ್ತಿದ್ದಾಗ ಕಂಡದ್ದು Raspberry ಮಿನಿ ಪೀಸಿ, ಅದನ್ನು ಔಟರ್ ನೆಟ್ ಗೆ ರೆಕಮೆಂಡ್ ಮಾಡಲಾಗಿದೆ, ಅದರ ಬಗ್ಗೆ ಗೊತ್ತಿದ್ದರೂ ಅಷ್ಟೇನು ಯೋಚಿಸದ ನಾನು ಅದರ ಬಗ್ಗೆ ಯೋಚಿಸುವಂತಾಗಿದೆ

ಇನ್ನೂ ಹೀಗೆ ಗೀಚ್ತಾ ಹೋದ್ರೆ ನಿಮಗೆ ಬೋರ್ ಆಗಿ ಬಿಟ್ಟರೆ ಕಷ್ಟವಾಗುತ್ತೆ, ನನಗೆ ತಿಳಿದ ಅಲ್ಪ ಸ್ವಲ್ಪ ಮಾಹಿತಿ ನಿಮ್ಮೊಂದಿಗೆ ಹಂಚಿಕೊಂಡಿದ್ದೀನಿ, ನಿಮ್ಮ ಅನಿಸಿಕೆ ತಿಳಿಸುತ್ತೀರ ಅಲ್ವಾ?
2 comments:

ಚಿನ್ಮಯ ಭಟ್ said...

ಒಳ್ಳೆಯ ಮಾಹಿತಿ :) ವಂದನೆಗಳು

prashasti said...

ಮಾಹಿತಿಗಳು ಚೆನ್ನಾಗಿದ್ದು..ಆದ್ರೆ ಎಲ್ಲಾ ಮಾಹಿತಿ ಒಂತರ ಚಿತ್ರಾನ್ನವಾಗಿದ್ದಾ ಅಂತ ..